Monday, October 11, 2010

ಒಂದು ತುಂಡು ಗೋಡೆ

ನನ್ನ ಕೈಯಾರೆ ಮನೆ ಸುಟ್ಟು
ಬೂದಿ ಹೊತ್ತು ಹೊರಟಿರುವೆ,
ಸುಡಬಯಸುವಿರಾದರೆ ನಿಮ್ಮ ಮನೆ
ನನ್ನ ಜತೆಯಲ್ಲಿ ಬರಬಹುದು-
-ಸಂತ ಕಬೀರ
ಒಂದು
ಬಸ್ ಸ್ಟಾಂಡ್ ಬಳಿಯಲ್ಲಿ ಮೂರು, ಮಸೀದಿ ಗುಡ್ಡೆಯಲ್ಲಿ ಎರಡು-ಹೀಗೆ ಐದು ಮಿಲಿಟರಿ ಹೊಟೇಲುಗಳಿಗೆ ಅಕ್ಕಿ ರೊಟ್ಟಿ ತಟ್ಟಿ ಕೊಟ್ಟು ಜೀವನ ಸಾಗಿಸುವ ‘ರೊಟ್ಟಿ ಪಾತುಮ್ಮ’ಳ ಕನಸಿನಲ್ಲಿ ಕಾಣಿಸಿಕೊಂಡ ದೇವರಾಜ ಅರಸು ಅವರು, “ಏನು ಪಾತುಮ್ಮ ನಿನ್ನ ವಿಚಾರ? ನಿನಗೆ ದರ್ಕಾಸ್ತು ಜಾಗ ಕೊಟ್ಟು ವರ್ಷ ಎಂಟು ದಾಟಿದರೂ ನೀನು ಮನೆ ಕಟ್ಟಿಸಿಕೊಳ್ಳುವ ಯೋಚನೆಯಲ್ಲಿಯೇ ಇದ್ದ ಹಾಗಿಲ್ಲವಲ್ಲಾ? ನಿನ್ನ ಜತೆಯಲ್ಲೇ ಹಕ್ಕು ಪತ್ರ ಪಡೆದುಕೊಂಡಿದ್ದ, ಕಮಲಕ್ಕ, ಹಾಲು ಮಾರುವ ಕರ್ಮಿನ ಬಾಯಿ, ಮೀನಿನಂಗಡಿಯ ಪೊಡಿಯಬ್ಬ- ಎಲ್ಲರೂ ಮನೆ ಕಟ್ಟಿಸಿಕೊಂಡು ವರ್ಷವೆಷ್ಟಾಯಿತು ಹೇಳು? ನೀನು ಇನ್ನು ಕೂಡಾ ಇದೇ ರೀತಿ ಉದಾಸೀನ ಮಾಡಿದರೆ, ಆ ಜಾಗವನ್ನು ಬೇರೆಯವರ ಹೆಸರಿನಲ್ಲಿ ಬರೆದುಬಿಟ್ಟೇನು ಹಾಂ!” ಎಂದು ವಾರ್ನಿಂಗ್ ಕೊಟ್ಟು ಬಿಟ್ಟಾಗ ಅವಳಿಗೆ ಎಚ್ಚರವಾಗಿ, ದಿಗ್ಗನೆ ಎದ್ದು ಕುಳಿತಳು.

ಮುತ್ತುಪ್ಪಾಡಿ ಮಸೀದಿಗುಡ್ಡೆಯ ಬಲಭಾಗದ ಇಳಿಜಾರಿನಲ್ಲಿ ಐದುಸೆಂಟ್ಸ್ ಮನೆ ನಿವೇಶನದ ಹಕ್ಕು ಪತ್ರವನ್ನು, ಎಂಟು ವರ್ಷಗಳಷ್ಟು ಹಿಂದೆ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದಿದ್ದ ಭವ್ಯ ಸಮಾರಂಭವೊಂದರಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಅಮೃತ ಹಸ್ತದಿಂದಲೇ ಸ್ವೀಕರಿಸಿದ್ದ ರೊಟ್ಟಿ ಪಾತುಮ್ಮಳನ್ನು ಮನೆ ಕಟ್ಟಿಸಿ ಕೊಳ್ಳುವಂತೆ ಒತ್ತಾಯಿಸುತ್ತಿರುವವರು ಹಲವಾರು ಮಂದಿ. ವಿಲೇಜ್ ಅಕೌಂಟೆಂಟ್ ಸೀತಾರಾಮ ಬೈಪಡಿತ್ತಾಯರಂತೂ ಒಮ್ಮೆ ಖಡಕ್ ಆಗಿಯೇ ಹೇಳಿಬಿಟ್ಟಿದ್ದರು, “ನೀನು ಡೀನೋಟೀಸು ಕೈಯಲ್ಲಿ ಉಂಟು ಅಂತ ಸುಮ್ಮನೆ ಕೂತುಬಿಟ್ರೆ, ನಾಳೆಯ ದಿನ ಮಾಂಕುವೋ, ಮಮ್ಮುಟ್ಟಿಯೋ ರಾತ್ರೋ ರಾತ್ರಿ ನಿನ್ನ ಜಾಗದಲ್ಲಿ ನಾಲ್ಕು ಕೋಲು ಊರಿ, ಆರು ಸೋಗೆ ಏರಿಸಿ, ಮೂರು ಕಲ್ಲು ಜೋಡಿಸಿ, ಒಂದು ಒಲೆ ಉರಿಸಿಬಿಟ್ರೆ ನಿನ್ನ ಡೀನೋಟೀಸನ್ನು ಅದೇ ಬೆಂಕಿಗೆ ಬಿಸಾಡಬೇಕಾಗಿ ಬರಬಹುದು. ಇನ್ನಾದ್ರೂ ನೀನು ಮನೆ ಕಟ್ಟಿಸುವ ಕೆಲಸ ಸುರು ಮಾಡದಿದ್ದರೆ ನಾನು ಡೀಸೀಗೆ ರಿಪೋರ್ಟು ಬರೆದು ಬಿಡುತ್ತೇನೆ. ಆ ಬಳಿಕ ನಿನ್ನ ಜಾಗ ಹೋಯಿತು ಅಂತ ಈ ಸೀತಾರಾಮನನ್ನು ದೂರುವುದು ಬೇಡ, ಗೊತ್ತಾಯ್ತಲ್ಲಾ?”

ಹಿಂದಾಗಲೀ ಮುಂದಾಗಲೀ ಯಾರದೇ ಬಲವಿಲ್ಲದ ನಲುವತ್ತರ ಆಸುಪಾಸಿನ ವಿಧವೆ ಪಾತುಮ್ಮ, ತನ್ನ ಬಲುದೂರದ ಸಂಬಂಧಿ ಕಾಸಿಂ ಬ್ಯಾರಿಯ ಮನೆ ಹಿಂಭಾಗದ ಅರೆವಾಸಿ ಮಾಡನ್ನು ಇಳಿಸಿ ನಿರ್ಮಿಸಲಾದ ಅಕ್ಕಿ ರೊಟ್ಟಿ ಸುಡುವ ಫ್ಯಾಕ್ಟರಿಗೆ ತಿಂಗಳೊಂದರ ಹದಿನೈದು ರೂಪಾಯಿ ಬಾಡಿಗೆ ನೀಡುತ್ತಿದ್ದಳು. ಕಳೆದ ಆರು ತಿಂಗಳಿನಿಂದ ಬಾಲ ಕಾರ್ಮಿಕನಾಗಿ ಸೇರಿಕೊಂಡ ಕಾಸಿಂ ಬ್ಯಾರಿಯ ತಂಗಿ ಸಾರಮ್ಮಳ ಮಗ ಸಮದ್‌ನಿಗೆ ವಾರವೊಂದಕ್ಕೆ ಏಳು ರೂಪಾಯಿ ಸಂಬಳ ಕೊಡುತ್ತಿದ್ದಳು. ದಿನವೊಂದರ ಐದು ಅಥವಾ ಆರು ಸೇರು ಅಕ್ಕಿಯನ್ನು ರುಬ್ಬಿ, ಮರದ ಮಣೆಯ ಮೇಲೆ ಹಾಸಿದ ತೆಳುಬಟ್ಟೆಯ ಮೇಲಿಟ್ಟು ತಟ್ಟಿ ನಿಗಿನಿಗಿ ಸುಡುವ ಕೆಂಡದ ನಡುವಿರಿಸಿ ಸುಟ್ಟು ಹೊಟೇಲುಗಳಿಗೆ ಸಂಜೆಯ ಹೊತ್ತಲ್ಲಿ ತಲುಪಿಸಿಬಿಟ್ಟರೆ ಸಿಗುವ ಸಂಪಾದನೆಯಲ್ಲಿ ಹೊಟ್ಟೆ ಬಟ್ಟೆಗೇನೂ ತೊಂದರೆಯಿಲ್ಲ. ಊರೊಳಗೆ ಮದುವೆ, ಮುಂಜಿ, ಬೀಗರ ಔತಣ ಹೀಗೆ ಏನಾದರೊಂದು ನಡೆಯುವುದಿದ್ದರೆ ಇವಳಿಗೆ ಕರೆ ಬರುತ್ತದೆ. ಈಕೆಯ ಕೈಯಲ್ಲಿ ತಟ್ಟಿಸಿಕೊಂಡು ಕೆಂಡದ ನಡುವೆ ಬೆಂದು ಉಬ್ಬುವ ರೊಟ್ಟಿಗಳು ಹೂವಿನ ಎಸಳಿನಂತೆ ಮೃದು ಮತ್ತು ಬೆಲ್ಲದ ತುಂಡಿನಂತೆ ರುಚಿ. ಆದ್ದರಿಂದಲೇ ಜನರು ಅವಳನ್ನು ಗುರುತಿಸುವುದು ‘ರೊಟ್ಟಿ ಪಾತುಮ್ಮ’ ಎಂದು; ಪದ್ಮಶ್ರೀ ಪಾತುಮ್ಮ ತರಹ.

ಹೀಗೆ ಹಲವರು ಅನುಕಂಪದಿಂದ ಕೆಲವರು ಅಸೂಯೆಯಿಂದ ಆಗಿಂದಾಗ್ಗೆ ಎಚ್ಚರಿಸುತ್ತಾ ಬರುತ್ತಿದ್ದರೂ ತಲೆ ಕೆಡಿಸಿಕೊಳ್ಳದಿದ್ದ ರೊಟ್ಟಿ ಪಾತುಮ್ಮ, ಸ್ವತಃ ದೇವರಾಜ ಅರಸು ಅವರೇ ಕನಸಿನಲ್ಲಿ ಕಾಣಿಸಿಕೊಂಡು ವಾರ್ನಿಂಗ್ ಕೊಟ್ಟ ಬಳಿಕ ಮೈ ಕೊಡವಿಕೊಂಡು ಎದ್ದಳು.
ಎದ್ದವಳೇ ‘ವಲು’ ಮಾಡಿಕೊಂಡು ಬಂದು ಮುಂಜಾನೆಯ ನಮಾಜು ಮಾಡಿದಳು. ಬಳಿಕ ಗೋಡೆಯಲ್ಲಿ ಕೊರೆದು ನಿರ್ಮಿಸಲಾಗಿದ್ದ ‘ಪೊಟರೆ ಕಪಾಟಿ’ನಿಂದ ಕುರಾನು ಗ್ರಂಥವನ್ನು ಹೊರತೆಗೆದು, ತಲೆದಿಂಬಿನ ಒಳಗೆ ಅಡಗಿಸಿಟ್ಟಿದ್ದ ಹತ್ತು ರೂಪಾಯಿಗಳ ಎರಡು ನೋಟುಗಳನ್ನು ಹೊರಗೆಳೆದು, ಕುರಾನು ಗ್ರಂಥದ ‘ಯಾಸೀನ್’ಸೂರಾ ಆರಂಭವಾಗುವ ಪುಟಗಳ ನಡುವೆ ನೋಟುಗಳನ್ನಿಟ್ಟು, ಗ್ರಂಥವನ್ನು ಮಡಚಿ ತೊಡೆಯ ಮೇಲಿರಿಸಿಕೊಂಡು ಇಡಿಯ ‘ಯಾಸೀನ್’ ಸೂರಾವನ್ನು ಕಂಠಪಾಠ ಪಠಿಸಿದಳು. ಆ ಬಳಿಕ ‘ದುವಾ’ ಮಾಡಿ ಗ್ರಂಥವನ್ನು ಬಿಡಿಸದೆಯೇ ಹಾಗೇ ಎತ್ತಿಕೊಂಡು ‘ಪೊಟರೆ ಕಪಾಟಿ’ನೊಳಗಿಟ್ಟು ತನ್ನ ಕೆಲಸ ಆರಂಭಿಸಿದಳು.

ಸಂಜೆ ಹೊಟೇಲುಗಳಿಗೆ ರೊಟ್ಟಿಗಳನ್ನು ವಿತರಿಸಿ ಮರಳುವ ದಾರಿಯಲ್ಲಿ ಏಳು ರೂಪಾಯಿ ತೆತ್ತು ಉಪ್ಪಿನಕಾಯಿ ಹಾಕಲು ಬಳಸುವಂತಹ ಪಿಂಗಾಣಿಯ ಭರಣಿಯೊಂದನ್ನು ಖರೀದಿಸಿ ತಂದಳು.

ರಾತ್ರಿಯ ಹೊತ್ತು ಪಕ್ಕದ ಮನೆಯವರೆಲ್ಲರೂ ನಿದ್ರೆ ಹೋಗಿದ್ದಾರೆಂಬುದನ್ನು ಖಾತರಿಸಿಕೊಂಡ ಬಳಿಕ, ತನ್ನ ಚಾಪೆಯ ಅಡಿಯಲ್ಲಿ ಬರುವಂತೆ ನೆಲದೊಳಗೆ ಎರಡು ಗೇಣು ಆಳ ಹಾಗೂ ಒಂದೂವರೆ ಗೇಣಿನಷ್ಟು ಅಗಲದ ಒಂದು ಗುಣಿ ತೋಡಿದಳು. ಉಪ್ಪಿನಕಾಯಿ ಭರಣಿಯನ್ನು ಗುಣಿಯೊಳಗಿರಿಸಿ ಮಟ್ಟ ನೋಡಿ ಸಮಾಧಾನ ಪಟ್ಟುಕೊಂಡ ಬಳಿಕ ಕೈ ತೊಳೆದುಕೊಂಡು, ಕುರಾನು ಗ್ರಂಥದೊಳಗಿರಿಸಿದ್ದ ಎರಡೂ ನೋಟುಗಳನ್ನು ಹೊರತೆಗೆದಳು.

ಎರಡೂ ನೋಟುಗಳನ್ನು ಕಣ್ಣಿಗೊತ್ತಿಕೊಂಡು ‘ದಯಾಮಯನಾದ ಅಲ್ಲಾಹುವೇ, ಈ ಇಪ್ಪತ್ತು ರೂಪಾಯಿಗಳು ಎರಡು ಸಾವಿರವಾಗುವಂತೆ ನನಗೆ ಪ್ರತಿವಾರವೂ ದುಡ್ಡು ಉಳಿಸಲು ಸಾಧ್ಯವಾಗುವಂತೆ ಮಾಡು’ ಎಂದು ಪ್ರಾರ್ಥಿಸಿ, ನೋಟುಗಳನ್ನು ಭರಣಿಯೊಳಕ್ಕೆ ಇಳಿಬಿಟ್ಟಳು. ಭರಣಿಯ ಮುಚ್ಚಳವನ್ನು ಮುಚ್ಚಿ, ಮುಂಜಾನೆಯೇ ಹುಡುಕಾಡಿ ತೆಗೆದು ಇರಿಸಿಕೊಂಡಿದ್ದ ತಗಡಿನ ಚೌಕವೊಂದನ್ನು ಕುಣಿಗೆ ಅಡ್ಡವಾಗಿಟ್ಟು ಚಾಪೆ ಬಿಡಿಸಿದಳು. ಆ ರಾತ್ರಿಯ ಕನಸಿನಲ್ಲಿ ಜಿನಸು ಅಂಗಡಿಯ ಅಣ್ಣುಗೌಡ ಕಟ್ಟಿಸಿದಂತಹದೇ ಆದ ಚಂದದ ಒಂದು ಮನೆ ಅವಳ ನಿವೇಶನದಲ್ಲಿ ಕಾಣಿಸಿಕೊಂಡಿತು.

ಆ ಬಳಿಕದ ಪ್ರತಿಯೊಂದು ಸೋಮವಾರವೂ ತನ್ನ ವಾರದ ಸಂಪಾದನೆಯಲ್ಲಿ ಹತ್ತೋ, ಹನ್ನೆರಡೋ ಉಳಿಸುತ್ತಾ ಉಪ್ಪಿನಕಾಯಿ ಭರಣಿ ತುಂಬತೊಡಗಿದ ರೊಟ್ಟಿ ಪಾತುಮ್ಮ, ‘ನೂರು ಸಾವಿರ ವರ್ಷವಾದರೂ ಸರಿಯೇ, ಅಲ್ಲಾಹುವಿನ ದಯೆಯಿಂದ ಸ್ವಂತಕ್ಕೊಂದು ಮನೆ ಕಟ್ಟಿಸಿಕೊಂಡೇ ಬಿಡುವುದು ’ ಎಂದು ಪ್ರಮಾಣ ಮಾಡಿದ ಬಳಿಕ, ಅಕ್ಕಿ ರೊಟ್ಟಿಯ ವ್ಯಾಸವನ್ನು ಒಂದು ಬೆರಳಿನಷ್ಟೂ, ದಪ್ಪವನ್ನು ಒಂದು ಉಗುರಿನಷ್ಟು ಕಿರಿದುಗೊಳಿಸಿದ್ದಲ್ಲದೆ, ದಿನಕ್ಕೆ ಎರಡು ಕಾಸು ಹೆಚ್ಚು ದುಡಿಯುತ್ತಾ, ಒಂದು ಮುಷ್ಟಿಯಷ್ಟು ಅನ್ನ ಕಡಿಮೆ ಉಣತೊಡಗಿದಳು.

ಈ ಎಲ್ಲ ಬದಲಾವಣೆಗಳ ಪರಿಣಾಮವಾಗಿ ಮುಂದಿನ ರಮಝಾನ್ ಹಬ್ಬದ ವೇಳೆಗೆ ಉಪ್ಪಿನಕಾಯಿ ಭರಣಿಯೊಳಗೆ ಅವಿತು ಕೂತ ನೋಟುಗಳ ಮೊತ್ತವು ಮುನ್ನೂರ ಐವತ್ತು ರೂಪಾಯಿಗಳ ಗಡಿ ದಾಟಿ ಬಿಟ್ಟು ರೊಟ್ಟಿ ಪಾತುಮ್ಮಳ ಎದೆ ನಡುಗಿಸಿಬಿಟ್ಟವು.

ಒಂದು ಮತ್ತು ಎರಡು ರೂಪಾಯಿಗಳ ಸಂಖ್ಯೆಯೇ ಐದು ಅಥವಾ ಹತ್ತು ರೂಪಾಯಿ ನೋಟುಗಳ ಸಂಖ್ಯೆಗಿಂತ ಹತ್ತಾರುಪಟ್ಟು ಹೆಚ್ಚು ಇದ್ದುದರಿಂದಾಗಿ ಭರಣಿಯ ಅರೆವಾಸಿಗಿಂತಲೂ ಹೆಚ್ಚು ಭಾಗ ಸಂಪದ್ಭರಿತವಾಗಿ ಬಿಟ್ಟಿತ್ತು. ಸಕಾಲಿಕವಾಗಿ ಹೊಳೆದ ಪ್ರಥಮ ಚಿಕಿತ್ಸೆ ಎಂಬಂತೆ, ಮೂರು ಬೇರೆ ಬೇರೆ ಅಂಗಡಿಗಳಲ್ಲಿ ಹಂಚಿ ಬದಲಾಯಿಸಿಕೊಂಡು ಪಡೆದ ನೂರು ರೂಪಾಯಿಯ ಮೂರು, ಐವತ್ತು ರೂಪಾಯಿಯ ಒಂದು ನೋಟನ್ನು ಇತರೆ ಚಿಲ್ಲರೆ ನೋಟುಗಳ ಜತೆಯಲ್ಲಿಟ್ಟು ಉರುಟಾಗಿ ಮಡಚಿ ನೂಲಿನಿಂದ ಗಂಟು ಹಾಕಿ ಭರಣಿಯೊಳಗೆ ಹಾಕಿದಾಗ, ವರುಷವೊಂದರ ಸಮಗ್ರ ಸಂಪಾದನೆಯೆಲ್ಲವೂ ಭರಣಿಯ ತಳಕ್ಕೆ ಅಂಟಿಕೊಂಡು ಸುಲಭ ಗೋಚರವಾಗದೆ ಹೋದಾಗ, ಬರಬಾರದಿದ್ದ ಭಯಾನಕ ಯೋಚನೆಗಳೆಲ್ಲವೂ ಸಾಲುಗಟ್ಟಿ ಬಂದು ಬಿಟ್ಟವು.

ಯಾರಾದರೊಬ್ಬರು ತಾನಿಲ್ಲದಾಗ ಮನೆ ನುಗ್ಗಿ ಭರಣಿಯನ್ನು ಕದ್ದೊಯ್ಯುವುದರಲ್ಲಿ ಯಾವುದೇ ಅನುಮಾನ ಉಳಿಯದಾದಾಗ, ಹೊಸ್ತಿಲು ದಾಟುವಾಗಲೆಲ್ಲ ಕಾಲುಗಳು ನಡುಗಲಾರಂಭಿಸಿದ್ದುವು. ಈ ಎಲ್ಲಕ್ಕಿಂತಲೂ ಮುಖ್ಯವಾಗಿ, ಹಗಲು ಹೊತ್ತಿನಲ್ಲಿ ಸಹಾಯಕ್ಕೆಂದು ಬರುತ್ತಿರುವ ಹುಡುಗ ಸಮದ್‌ನ ವರ್ತನೆಗಳಲ್ಲಿ ಅನುಮಾನಕ್ಕೆ ಕಾರಣವಾಗುವ ಎಲ್ಲ ಅಂಶಗಳೂ ಒಂದೊಂದಾಗಿಯೇ ಪ್ರಕಟವಾಗತೊಡಗಿದವು.

ಇಂತಹಾ ಬಿಕ್ಕಟ್ಟಿನ ಸಮಯದಲ್ಲಿ ರೊಟ್ಟಿ ಪಾತುಮ್ಮಳಿಗೆ ಹೊಳೆದ ಅದ್ಭುತ ಉಪಾಯವೇನೆಂದರೆ- ಈಗಾಗಲೇ ಉಳಿಸಲಾಗಿರುವ ಒಟ್ಟು ಸಂಪತ್ತನ್ನು ಬಂಗಾರದ ಆಭರಣವನ್ನಾಗಿ ರೂಪಾಂತರಿಸಿ ತನ್ನ ದೇಹಕ್ಕೆ ಅಂಟಿಸಿಕೊಂಡು ಬಿಡುವುದೆಂದು.

ಎರಡು

ಥೇಟ್ ಬಿ. ಸರೋಜಾದೇವಿಯ ತರಹವೇ ನಗು ಚೆಲ್ಲುತ್ತಿರುವ ‘ಪರಿಮಳ ಅಗರಬತ್ತಿ’ಯವರ ‘ಧನಲಕ್ಷ್ಮಿ’ಗೆ ಊದುಕಡ್ಡಿ ಹಚ್ಚಿ ಕೈಮುಗಿದು. ಎರಡೂ ಕೈಗಳಿಂದ ತಿಜೋರಿಯ ತಲೆ ಸವರಿ ಕಣ್ಣಿಗೊತ್ತಿಕೊಂಡು. ಕಣ್ಣು ತೆರೆದ ಶ್ರೀನಿವಾಸ ಆಚಾರ್ಯರ ಕಣ್ಣಿಗೆ ಮೊದಲು ಬಿದ್ದವಳು ರೊಟ್ಟಿ ಪಾತುಮ್ಮ.

ರೊಟ್ಟಿಪಾತುಮ್ಮ ಆಚಾರ್ಯರಿಗೆ ತೀರಾ ಅಪರಿಚಿತಳೇನೂ ಅಲ್ಲ. ಅವಳ ಎರಡೂ ಕಿವಿಗಳನ್ನು ಅಲಂಕರಿಸಿರುವ ಐದೂ ಅಲಿಖತ್‌ಗಳನ್ನು ಸುಮಾರು ಇಪ್ಪತ್ತು ವರ್ಷಗಳಷ್ಟು ಹಿಂದೆ ತಯಾರಿಸಿಕೊಟ್ಟಿದ್ದು ತಾನೆಂಬುದು ಅವರಿಗಿನ್ನೂ ನೆನಪಿದೆ. ಮರದ ಮಿಲ್ಲಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅವಳ ಗಂಡ, ಮರದ ದಿಮ್ಮಿಗಳ ನಡುವೆಯೇ ಸಿಕ್ಕಿ ಹಾಕಿಕೊಂಡು ಸತ್ತು ಹೋದ ಸಂದರ್ಭದಲ್ಲಿ, ಇದೇ ಅಲಿಖತ್‌ಗಳನ್ನು ಗಿರವಿ ಇಟ್ಟು ಐವತ್ತು ರೂಪಾಯಿ ಸಾಲ ಪಡೆದುಕೊಂಡು ವಾಯಿದೆಗೆ ಮುನ್ನವೇ ಸಾಲ ತೀರಿಸಿ ಅಡವು ಬಿಡಿಸಿಕೊಂಡ ಆಕೆಯನ್ನು ಸುಲಭವಾಗಿ ಮರೆಯುವುದಾದರೂ ಹೇಗೆ?

ಮಹಾರಾಜರಾಗಿದ್ದಿರಲಿ ಅಥವಾ ಬಿಕಾರಿಯೇ ಆಗಿದ್ದಿರಲಿ ‘ಮುತ್ತುಪ್ಪಾಡಿ ಆಚಾರ್ರಕಟ್ಟೆ’ಯಲ್ಲಿ ಎಲ್ಲರಿಗೂ ಒಂದೇ ಮಣೆ. ಅಂಗಡಿಗೆ ಯಾರೇ ಬರಲಿ, ಯಾವ ಕೆಲಸವೇ ಇರಲಿ, ಜಗಲಿಯ ಬದಿಯಲ್ಲಿ ಗೋಡೆಗೊರಗಿಸಿ ಇಟ್ಟಿರುವ ಮರದ ಬೆಂಚಿನ ಮೇಲೆ ಕುಳಿತ ಬಳಿಕವೇ ಮಾತು. ಮುಸ್ಸಂಜೆಯ ಹೊತ್ತಲ್ಲಿ ದೀಪ ಉರಿಸಿದ ಬಳಿಕ ಅಂಗಡಿಗೆ ಬಂದ ಮೊದಲ ಗಿರಾಕಿ ರೊಟ್ಟಿ ಪಾತುಮ್ಮ. ‘ಕುಳಿತುಕೋ’ ಎಂದು ಬೆಂಚಿನತ್ತ ಬೆರಳು ತೋರಿಸಿದ ಆಚಾರ್ರು ಮಂಡದ ಮೇಲೆ ಆಸೀನರಾದರು. ಅವಳು ನಿಂತೇ ಇದ್ದಳು. ಆಚಾರ್ರು ತನ್ನ ಕೆಲಸದಲ್ಲಿ ಮುಳುಗಿಬಿಟ್ಟರು.

‘ಆಚಾರ್ರ ಕಟ್ಟೆ’ ಬರಿಯ ಮುತ್ತುಪ್ಪಾಡಿಯಲ್ಲಿ ಮಾತ್ರವಲ್ಲ; ಆಸುಪಾಸಿನ ಐವತ್ತು ಅರುವತ್ತು ಮೈಲು ಪಾಸಲೆಯಲ್ಲೂ ಫೇಮಸ್ಸು. ಬಂಗಾರದ ವ್ಯವಹಾರದಲ್ಲಿ ನಿಯತ್ತು ಅಂತ ಏನಾದರೂ ಉಂಟು ಅಂಥಾದರೆ ಅದಿರುವುದು ‘ಆಚಾರ್ರ ಕಟ್ಟೆ’ಯಲ್ಲಿ. ಲಾಭವಿಲ್ಲದೆ ಆಚಾರ್ರು ವ್ಯಾಪಾರ ಮಾಡುವುದಿಲ್ಲ ನಿಜ; ಮಜೂರಿ ಒಂದು ಎಂಟಾಣೆ ಜಾಸ್ತಿಯೇ ಹೇಳಿಯಾರು; ಆದರೆ ತೂಕದಲ್ಲಿ ಗುಲಗಂಜಿಯಷ್ಟೂ ಮೋಸವಿಲ್ಲ. ಚರ್ಚೆ, ಕಿರಿಕಿರಿ ಅವರಿಗಾಗುವುದಿಲ್ಲ. ಗಿರಾಕಿಗಳು ಅನಗತ್ಯ ಮಾತು ಆಡಿದರೆ ಸಾಕು, ‘ನಿಮಗೆ ನಮ್ಮ ಕಟ್ಟೆಯ ಮಾಲು ಆಗಲಿಕ್ಕಿಲ್ಲ. ಬೇರೆ ಕಟ್ಟೆ ನೋಡಿ’ ಎಂದು ಖಡಕ್ ಆಗಿಯೇ ಹೇಳಿಯಾರು. ಊರೊಳಗೆ ಮದುವೆ ಮಾತುಕತೆ ನಡುವೆ ಆಚಾರ್ರ ಕಟ್ಟೆ’ಯ ಪ್ರಸ್ತಾಪ ನುಸುಳಿ ಬರಲೇಬೇಕು. ಅಲ್ಲಿ ಒಡವೆ ಮಾಡಿಸುವ ಮಾತು ವಧುವಿನ ಅಪ್ಪನ ಬಾಯಿಯಿಂದ ಹೊರಬಿದ್ದರೆ ಸಾಕು; ಹುಡುಗಿಯ ಜಾತಕ ಕೂಡಿ ಬರುತ್ತದೆ.

ರೊಟ್ಟಿ ಪಾತುಮ್ಮ ಮೆತ್ತಗೆ ಕೆಮ್ಮಿದಳು. ಆಚಾರ್ರು ತಲೆಯೆತ್ತದೇ ಹೇಳಿದರು, “ಕುಳಿತುಕೋ.”

ಬೆಂಚಿನ ಅಂಚಿನಲ್ಲಿ ಅಳುಕುತ್ತಲೇ ಕುಂಡಿಯೂರಿದ ಅವಳು ತನ್ನ ಸೊಂಟದ ಚೀಲದಿಂದ ಹೊರತೆಗೆದ ನೋಟುಗಳ ಮಡಿಕೆಯನ್ನು, ಆಚಾರ್ರ ಎದುರಿದ್ದ ಗಾಜಿನ ಕಪಾಟಿನ ಮೇಲಿರಿಸಿ, ‘ಈ ದುಡ್ಡಿಗೆ ಏನಾದ್ರೂ ಒಂದು ಸಾಮಾನು ಕೊಡಿ’ ಎಂದಳು.

‘ಸಾಮಾನು!’ ಆಚಾರ್ರ ಹುಬ್ಬು ಮೇಲೇರಿತು. ಅವರ ನಲವತ್ತು ವರ್ಷಗಳ ಸರ್ವಿಸ್‌ನಲ್ಲಿ, ಕಟ್ಟೆಗೆ ಬಂದ ಯಾವಾತನೂ ಇಷ್ಟೊಂದು ಸದರವಾಗಿ ಮಾತನಾಡಿ ದೊಡ್ಡಸ್ತಿಕೆ ಪ್ರದರ್ಶಿಸಿದ್ದಿಲ್ಲ. ಆದರೆ ಈ ರೊಟ್ಟಿ ಮಾರುವ ಹೆಂಗಸು!

ಆಚಾರ್ರು ರೊಟ್ಟಿ ಪಾತುಮ್ಮಳನ್ನು ಅಳೆಯುವಂತೆ ದಿಟ್ಟಿಸಿದರು. ಕಪ್ಪು ಬುರ್ಕಾದೊಳಗಿನಿಂದ ಕಾಣಿಸುತ್ತಿದ್ದದ್ದು, ಕೆಂಡದ ನಡುವೆ ಸುಟ್ಟು ಕರಕಲಾಗಿದ್ದ ಕಪ್ಪು ಬೆರಳುಗಳು ಮತ್ತೆ ಅಷ್ಟೇ ಕಪ್ಪಾಗಿ ಕಾಣುವ ಕೋಲು ಮುಖ- ಎಲೆ- ಅಡಿಕೆ ಜಗಿದು ಕೆಂಪಾದ ಹಲ್ಲುಗಳು, ಯಾವುದೇ ಬಗೆಯ ಕಪಟ ಕಾಣದ ಕಣ್ಣುಗಳು. ಅಯ್ಯೋ ಪಾಪವೇ ಅನ್ನಿಸಿತು.

ಅವಳು ಎದುರು ಇರಿಸಿದ್ದ ನೋಟುಗಳನ್ನು ಎತ್ತಿಕೊಂಡು ಎಣಿಸಿದರು. ನಾಲ್ಕುನೂರ ಹತ್ತು ರೂಪಾಯಿಗಳಿದ್ದವು. ಎಡ ಭಾಗದ ಕಪಾಟಿನಿಂದ ಕಾಲಿಗೆ ತೊಡಬಹುದಾದ ಬೆಳ್ಳಿಯ “ಪೈಜಣಿಗೆ”ಯೊಂದನ್ನು ಹೊರತೆಗೆದು, ಅತ್ತಿತ್ತ ತಿರುಗಿಸಿ ಪರೀಕ್ಷಿಸಿದ ಬಳಿಕ ಅಸಮಾಧಾನಗೊಂಡವರಂತೆ ಮುಖ ಮುದುಡಿಸಿ, ಅದನ್ನು ಹಾಗೆಯೇ ಸ್ವಸ್ಥಾನ ಸೇರಿಸಿ, ‘ಮಕ್ಕಳಿಗೆ ಆಗುವ ಉಂಗುರವಾದರೆ ಬಂಗಾರದ್ದೇ ಸಿಕ್ಕೀತು’ ಎಂದವರೇ ಎಚ್ಚೆತ್ತುಕೊಂಡವರಂತೆ, ರೊಟ್ಟಿ ಪಾತುಮ್ಮಳತ್ತ ತಿರುಗಿ, ‘ಇದು ಯಾರಿಗೆ?’ ಎಂದು ಪ್ರಶ್ನಿಸಿದರು.

“ನನಗೇ” ಉತ್ತರ ಸಿದ್ಧವಿತ್ತು; “ನನಗೆ ಉಂಗುರ ಬೇಡ, ನನ್ನ ಕೈಯಲ್ಲಿ ಅದು ಕಪ್ಪಾಗುತ್ತದೆ. ಬೇರೆ ಏನಾದರೂ ಕೊಡಿ” ಎಂದಳು.
“ಒಂದು ಹತ್ತಿಪ್ಪತ್ತು ರೂಪಾಯಿ ಹೆಚ್ಚಾದರೂ ಆಗಬಹುದಲ್ಲವೇ”ಎಂದು ತನಗೆ ತಾನೇ ಪ್ರಶ್ನಿಸಿಕೊಂಡು ಅವಳ ಉತ್ತರಕ್ಕೆ ಕಾಯದೆ, ತನ್ನ ಬಲಭಾಗದಲ್ಲಿದ್ದ ತಿಜೋರಿಯ ಬಾಗಿಲು ತೆರೆದ ಆಚಾರ್ರು, ಎರಡೆಳೆಯ ಬೆಳ್ಳಿಯ ಸೊಂಟಪಟ್ಟಿಯೊಂದನ್ನು ಹೊರತೆಗೆದು ತೋರಿಸುತ್ತಾ. “ಇದು ಆಗಬಹುದಾ?” ಎಂದು ಪ್ರಶ್ನಿಸಿದರು.

ರೊಟ್ಟಿ ಪಾತುಮ್ಮಳ ಕಣ್ಣುಗಳು ಅರಳಿದವು. ಸೊಂಟ ಪಟ್ಟಿಯಾದರೆ ಅನುಕೂಲವೇ. ಸೊಂಟಕ್ಕೆ ಬಿಗಿದುಕೊಂಡು ಮೇಲ್ಗಡೆ ಸೀರೆಯಿಂದ ಕವರ್ ಮಾಡಿಕೊಂಡರೆ ಯಾರಿಗೂ ಗೊತ್ತಾಗುವುದಿಲ್ಲ. ಅಥವಾ ಕಂಡೀತು ಅಂತಲೇ ಇಟ್ಟುಕೊಳ್ಳುವ, ಕದ್ದದ್ದು ಅಲ್ವಲ್ಲಾ? ಈ ವರ್ಷ ಇದನ್ನೇ ಕೊಂಡು ಇಟ್ಟುಕೊಳ್ಳುವುದು; ಮುಂದಿನ ವರ್ಷ ಇನ್ನೇನಾದರೂ ಅಥವಾ ಆಗ ಇದನ್ನು ಇಲ್ಲಿಯೇ ವಾಪಾಸು ಕೊಟ್ಟು, ಒಟ್ಟೂ ಹಣದಿಂದ ಬಂಗಾರದ ಸರವನ್ನೇ ಕೊಂಡರಾಯಿತು, ಎಂದು ಲೆಕ್ಕಾಚಾರ ಮಾಡಿದ ಬಳಿಕ ಅನುಮಾನದಿಂದಲೇ ಪ್ರಶ್ನಿಸಿದಳು.

“ಒಂದು ವರ್ಷದ ನಂತರ ಇದನ್ನು ನಿಮಗೇ ಕೊಟ್ಟರೆ ನಾನು ಈಗ ಕೊಟ್ಟ ಹಣ ಎಲ್ಲ ವಾಪಾಸು ಸಿಗ್ತದಾ?”

‘ಅದು ಹೇಗೆ ಸಿಗುವುದು? ಇದು ಬೆಳ್ಳಿಯದಾಗಿರುವುದರಿಂದ ಪುನಃ ಮಾರಿದರೆ ಅರ್ಧಕರ್ಧ ಕಡಿಮೆ ಸಿಗುತ್ತದೆ.’ ಆಚಾರ್ರು ಸಹಜ ಸ್ವರದಲ್ಲೇ ಉತ್ತರಿಸಿದ್ದರು.

ಇದ್ದಕ್ಕಿದ್ದಂತೆ ತನ್ನ ರೂಪ ಬದಲಾಯಿಸಿಕೊಂಡ ಬೆಳ್ಳಿಯ ಸೊಂಟಪಟ್ಟಿ, ರೊಟ್ಟಿ ಪಾತುಮ್ಮಳನ್ನು ನುಂಗಲು ಸಿದ್ಧವಾಗಿ ನಿಂತ ಹೆಬ್ಬಾವಿನಂತೆ ಕಾಣಿಸಿತು.

“ಹಾಗಾದರೆ ಇದು ಬೇಡ. ವಾಪಾಸು ಮಾಡುವಾಗ ಹೆಚ್ಚು ನಷ್ಟವಾಗದಂತಹ ಬೇರೇನಾದರೂ ಸಾಮಾನು ಕೊಡಿ” ಎಂದಳು.

“ಯಾಕೆ? ಮುಂದಿನ ವರ್ಷ ಮಾರಲಿಕ್ಕಾ? ಆಚಾರ್ರ ಪ್ರಶ್ನೆಯಲ್ಲಿ ತೆಳ್ಳನೆಯ ವ್ಯಂಗ್ಯ ಬೆರೆತಿತ್ತು. ರೊಟ್ಟಿ ಪಾತುಮ್ಮಳ ಮುಖ ಬಾಡಿಹೋಯಿತು. ಆಚಾರ್ರಿಗೆ ನುಂಗಲೂ ಆಗದ ಉಗುಳಲೂ ಆಗದ ಸಂಕಟ. ದೀಪ ಉರಿಸಿದ ಬಳಿಕ ಬಂದಿರುವ ಮೊದಲ ಗಿರಾಕಿ . ರೂಪಾಯಿ ನೋಟುಗಳನ್ನು ಎಣಿಸಿ ಆಗಿದೆ; ಲಕ್ಷ್ಮಿಯನ್ನು ಮರಳಿಸಬಾರದು.

“ನೋಡು ಇವಳೇ. ಯಾವುದನ್ನು ನೀನು ಖರೀದಿಸಿದರೂ, ಅದನ್ನು ನಾಳೆಯ ದಿನವೇ ಮಾರುವುದಾದರೂ ನೀನು ಖರೀದಿಸಿದ ರೇಟು ಸಿಗುವುದಿಲ್ಲ. ಮಜೂರಿ, ತ್ಯಾಮಾನ ಅಂತ ನಷ್ಟ ಆಗಿಯೇ ತೀರುತ್ತದೆ. ಕೊಟ್ಟಿರುವ ದುಡ್ಡೆಲ್ಲ ವಾಪಾಸು ಬೇಕೂಂತ ಆದ್ರೆ ಈ ಹಣವನ್ನು ಒಂದು ಕರಡಿಗೆಯೊಳಗೆ ಹಾಕಿಟ್ಟು ಇಂತಹ ತಿಜೋರಿಯಲ್ಲಿಡಬೇಕಾದೀತು ಅಷ್ಟೇ...” ಎನ್ನುತ್ತಾ ತನ್ನ ಬಲಗಡೆಯಲ್ಲಿದ್ದ ತಿಜೋರಿಯತ್ತ ಬೊಟ್ಟು ಮಾಡಿ ನಕ್ಕರು ಆಚಾರ್ರು.

ರೊಟ್ಟಿ ಪಾತುಮ್ಮಳ ಕಣ್ಣುಗಳು ಒಮ್ಮೆಲೆ ಅರಳಿದವು. ತನ್ನ ಸಮಸ್ಯೆಗಳನ್ನೆಲ್ಲಾ ಪರಿಹರಿಸಬಲ್ಲ ತಿಜೋರಿಯತ್ತ ಆಸೆಯ ನೋಟ ಹರಿಸುತ್ತಾ ಹೇಳಿದಳು. “ನೀವು ಹಾಗೆಯೇ ಮಾಡಿರಿ. ಆ ಹಣವನ್ನು ಅದರೊಳಗೆ ಇಟ್ಟುಕೊಳ್ಳಿರಿ. ನನಗೇನೂ ಸಾಮಾನು ಈಗ ಬೇಡ. ಬೇಕಾದಾಗ ಬಂದು ಕೇಳುತ್ತೇನೆ. ಆಗ ಹಣವನ್ನೇ ವಾಪಾಸು ಕೊಟ್ಟರೆ ಸಾಕು” ಎಂದುಬಿಟ್ಟಳು.

“ಓಹೋ ಇದಾ ಸಂಗತಿ?!” ಆಚಾರ್ರು ನಿಟ್ಟುಸಿರು ಬಿಟ್ಟರು. ಎಲ್ಲವನ್ನೂ ಗ್ರಹಿಸಿಕೊಂಡವರಂತೆ ತಲೆಯಾಡಿಸಿದರು. ಊರೊಳಗಿನ ಯಾರಾದರೊಬ್ಬರು ಕೆಲವೊಮ್ಮೆ ಹೀಗೆ ದುಡ್ಡು ತಂದುಕೊಟ್ಟು ತಿಜೋರಿಯಲ್ಲಿ ಭದ್ರವಾಗಿಡಲು ಹೇಳುತ್ತಿರುವುದು ಹೊಸತೇನೂ ಅಲ್ಲ.

ಆದರೆ, ದೇವರಾಜ ಅರಸರು ಹಕ್ಕುಪತ್ರ ನೀಡಲಾಗಾಯ್ತು ಸಮದ್‌ನ ಅನುಮಾನಾಸ್ಪದ ನಡವಳಿಕೆಯವರೆಗಿನ ಎಲ್ಲ ಕತೆಯನ್ನು ರೊಟ್ಟಿಪಾತುಮ್ಮ ವಿವರಿಸಿದ ಬಳಿಕ ಆಚಾರ್ರು ಕೈಯ್ಯಾಡಿಸಿಬಿಟ್ಟರು.

“ಅದೆಲ್ಲ ಆಗಲಿಕ್ಕಿಲ್ಲ ಇವಳೇ. ಹಾಗೆಲ್ಲ ಬೇರೆಯವರ ಹಣವನ್ನು ವರ್ಷಗಟ್ಟಲೆ ಇಟ್ಟುಕೊಳ್ಳುವುದಕ್ಕೆ ಈಗೆಲ್ಲ ಅವಕಾಶವಿಲ್ಲ. ಅದಕ್ಕೆಲ್ಲ ಬೇರೆಯೇ ಲೈಸನ್ಸ್ ಬೇಕು ಅಂತ ಕಾನೂನು ಬಂದಿದೆ. ಈಗ ಇಂಥದಕ್ಕೆಲ್ಲ ಬ್ಯಾಂಕು ಉಂಟಲ್ಲ ಅಲ್ಲಿ ಹೋಗಿ ನಿನ್ನ ಹೆಸರಿನಲ್ಲಿ ಪಾಸುಪುಸ್ತಕ ತೆಗೆದುಕೊಳ್ಳು. ನಿನ್ನ ಹಣಕ್ಕವರು ಬಡ್ಡಿ ಕೂಡಾ ಕೊಡುತ್ತಾರೆ” ಎಂದರು.

ರೊಟ್ಟಿ ಪಾತುಮ್ಮ ಅದಷ್ಟರಲ್ಲೇ ತೀರ್ಮಾನ ತೆಗೆದುಕೊಂಡು ಆಗಿತ್ತು. ತನ್ನ ನಿರ್ಧಾರವನ್ನು ಆಚಾರ್ರಿಗೆ ಖಡಕ್ ಆಗಿಯೇ ಹೇಳಿಬಿಟ್ಟಳು. ತನಗೆ ತನ್ನ ಜಾತಿ ಬಾಂಧವರಿಗಿಂತಲೂ ಆಚಾರ್ರಕಟ್ಟೆಯ ತಿಜೋರಿಯ ಬಗ್ಗೆಯೇ ಹೆಚ್ಚು ವಿಶ್ವಾಸ ಎಂಬುದನ್ನು ಮತ್ತೆ ಮತ್ತೆ ಹೇಳುತ್ತಾ, ವಿಧವೆಯೂ ಆಗಿರುವ ತನಗೆ ತಂದೆಯ ಸ್ಥಾನದಲ್ಲಿ ನಿಂತು ಸಹಾಯ ಮಾಡಬೇಕಾಗಿರುವುದು ಆಚಾರ್ರ ಕರ್ತವ್ಯ ಎಂಬಿತ್ಯಾದಿ ಅರ್ಥ ಬರುವ ಎಲ್ಲ ಮಾತುಗಳನ್ನೂ ಚಟಪಟನೆ ಉದುರಿಸಿ, ಆಚಾರ್ರ ಬಾಯಿ ಕಟ್ಟಿ ಬಿಟ್ಟಳು.

“ಆಯಿತು ಇವಳೇ. ನನ್ನಿಂದಾಗಿ ನಿನಗೆ ಸಹಾಯವಾಗುವುದು ಅಂತ ಆದ್ರೆ ನಿನ್ನ ಈ ಹಣವನ್ನು ಇಟ್ಟುಕೊಳ್ಳುವುದಕ್ಕೆ ನನ್ನ ಅಡ್ಡಿ ಇಲ್ಲ.” ಎಂದು ನೋಟುಗಳನ್ನು ಮತ್ತೊಮ್ಮೆ ಎಣಿಸಿ ತಿಜೋರಿಯ ಒಳಗಿಟ್ಟು ತನ್ನ ಸ್ವಂತ ಖಾತೆ ಪುಸ್ತಕದಲ್ಲಿ ಬರೆದುಕೊಂಡರು.

ಹೀಗೆ ತನ್ನ ಚಿಂತೆಗಳ ಕಂತೆಯನ್ನು ‘ಆಚಾರ್ರ ಕಟ್ಟೆ’ಯ ತಿಜೋರಿಯೊಳಗೆ ಹುದುಗಿಸಿಟ್ಟು ಸಮಾಧಾನದಿಂದ ಮರಳಿದ ರೊಟ್ಟಿಪಾತುಮ್ಮ ಮುಂದಿನ ಸೋಮವಾರ ಸಂಜೆ ಹೊತ್ತಲ್ಲಿ ಪುನಃ ಹತ್ತು ರೂಪಾಯಿಯ ನೋಟೊಂದನ್ನು ತಂದು ‘ಇದನ್ನೂ ಅದರ ಜತೆಗಿಡಿ’ ಎಂದಾಗ ಆಚಾರ್ರ ಹುಬ್ಬು ಮೇಲೆ ಹೋದರೂ, ‘ಇದು ಒಳ್ಳೆಯ ಪಿಕಲಾಟ’ವೆಂಬುದನ್ನು ತನಗೆ ತಾನೇ ಹೇಳಿಕೊಂಡು ಸುಮ್ಮನಾದರು.

ಆನಂತರದ್ದು ಎಲ್ಲ ಮಾಮೂಲು. ಪ್ರತಿ ಸೋಮವಾರ ಸಂಜೆಯೂ ರೊಟ್ಟಿ ಪಾತುಮ್ಮ ಆಚಾರ್ರಕಟ್ಟೆಯ ಜಗಲಿಯೇರಿ ಬಂದು ಮೃದುವಾಗಿ ಕೆಮ್ಮುತ್ತಾಳೆ. ಆಚಾರ್ರು ಇದ್ದರೆ ಆಚಾರ್ರು, ಇಲ್ಲದೇ ಹೋದರೆ ಹಿರಿಮಗ ಕೇಶವ, ಅವನೂ ಬಿಜಿಯಾಗಿದ್ದರೆ ಕಿರಿಮಗ ಚಂದ್ರಣ್ಣ, ಎದ್ದು ಬಂದು ಅವಳು ನೀಡುವ ಹತ್ತೋ, ಹದಿನೈದೋ ರೂಪಾಯಿಗಳನ್ನು ತೆಗೆದುಕೊಂಡು, ಖಾಸಗಿ ಖಾತೆಪುಸ್ತಕದಲ್ಲಿ ದಾಖಲಿಸಿಡುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿತು.

ಕೆಲವೊಂದು ಸಾರಿ, ಅಂಗಡಿಯಲ್ಲಿ ಬೇರೆ ಯಾರೂ ಗಿರಾಕಿಗಳಿಲ್ಲದಿದ್ದರೆ ಆಚಾರ್ರು ಪ್ರಶ್ನಿಸುವುದುಂಟು, ‘ಹೌದಾ ಹೆಂಗಸೇ. ಕಳೆದ ಎರಡು ಎರಡೂವರೆ ವರ್ಷದ ಲಾಗಾಯ್ತು ಹಣ ತಂದು ಕೊಡ್ತಾ ಇದ್ದೀಯಲ್ಲಾ? ಒಮ್ಮೆಯಾದರೂ ಒಟ್ಟು ಹಣ ಎಷ್ಟಾಗಿದೆ ಅಂತ ಕೇಳಲೇ ಇಲ್ವಲ್ಲಾ? ಈವತ್ತು ಮಾತ್ರ ನಾನು ನಿನಗೆ ಪೂರ್ತಿ ಲೆಖ್ಖ ಒಪ್ಪಿಸುವವನೇ.ನಾಳೆ ಈ ಮುದುಕ ಗೋವಿಂದ ಆಗಿಬಿಟ್ರೆ ನಿನ್ನ ದುಡ್ಡು ಕೂಡಾ ಗೋವಿಂದಾ ಆಗಬಾರದಲ್ವಾ?’

ರೊಟ್ಟಿ ಪಾತುಮ್ಮಳ ನಾಲಗೆಯ ತುದಿಯಿಂದಲೇ ಉತ್ತರ ಜಿಗಿದು ಬಿಡುತ್ತಿತ್ತು, “ನಾನು, ನನ್ನದು ಅಂತ ಒಂದು ಮನೆ ಕಟ್ಟಿಸಿಕೊಳ್ಳುವ ತನಕ ನಿಮ್ಮ ಆಯುಷ್ಯದ ಸುದ್ದಿಗೆ ಯಾವ ದೇವರೂ ಬರುವುದಿಲ್ಲ. ಅದಕ್ಕೇ ಅಲ್ವಾ? ನಾನು ದುಡ್ಡನ್ನು ಇಲ್ಲಿಗೆ ತರುವ ಮೊದಲು ಕುರಾನು ಪುಸ್ತಕದ ಒಳಗೆ ಇರಿಸಿ ‘ದುವಾ’ ಮಾಡಿಯೇ ತರುವುದು?”

ಮುಂದೆ ‘ಆಚಾರ್ರ ಕಟ್ಟೆ’ ತನ್ನ ರೂಪವನ್ನು ಬದಲಾಯಿಸಿಕೊಂಡು ‘ಶ್ರೀನಿವಾಸ ಆಂಡ್ ಸನ್ಸ್’ ಆದ ಬಳಿಕವೂ ರೊಟ್ಟಿ ಪಾತುಮ್ಮಳ ಸೋಮವಾರದ ದಿನಚರಿ ಬದಲಾಗಲಿಲ್ಲ.

ಹಿರಿಮಗ ಕೇಶವಾಚಾರ್ಯ ತಂದೆಯಂತೆಯೇ ಕುಶಲ ಕೆಲಸಗಾರ. ಕರಿಮಣಿ ಬಳೆ ಡಿಸೈನ್‌ನಲ್ಲಿ ಈಗಾಗಲೇ ಹೆಸರು ಮಾಡಿದವನು. ಆದರೆ ಕಿರಿಯಾತ ಚಂದ್ರಣ್ಣನ ಬೆರಳುಗಳಿಗಿಂತಲೂ ನಾಲಿಗೆಯೇ ಹೆಚ್ಚು ಚುರುಕು. ಆದ್ದರಿಂದಲೇ ಪಿ.ಯು.ಸಿ. ಪರೀಕ್ಷೆ ಬರೆದು ಬಂದ ಸಂಜೆಯೇ ಅಂಗಡಿಯಲ್ಲಿ ಕುಳಿತುಕೊಳ್ಳಲಾರಂಭಿಸಿದವನು ತನ್ನ ನಾಲಗೆ ಮತ್ತು ನಗುವಿನಿಂದಾಗಿ ವರ್ಷದೊಳಗೆ ಊರವರಿಗೆಲ್ಲ ಚಂದ್ರಣ್ಣ ಆಗಿಬಿಟ್ಟಿದ್ದ.

ಮುಂದಿನ ಅಂಗಡಿ ಪೂಜೆಯ ಹೊತ್ತಿಗೆ ಅಂಗಡಿಯ ಶೇಪು ಬದಲಾಯಿಸಿದ ಚಂದ್ರಣ್ಣ, ಅಂಗಡಿಯ ನೆತ್ತಿಗೆ “ಶ್ರೀನಿವಾಸ ಆಂಡ್ ಸನ್ಸ್ ಜ್ಯುವೆಲ್ಲರ‍್ಸ್” ಎಂಬ ಬೋರ್ಡು ತೂಗಹಾಕಿದ್ದ. ಅಪ್ಪನ ಕಾಲದಲ್ಲಿ ಐವತ್ತು ಮೈಲು ಹೆಸರು ಮಾಡಿದ್ದ ‘ಆಚಾರ್ರಕಟ್ಟೆ’ ಇದೀಗ ಕೊಯಂಬತ್ತೂರು ತನಕ ಸುದ್ದಿ ಮಾಡತೊಡಗಿತ್ತು. ಪರಿಣಾಮವೆಂಬಂತೆ ಅಣ್ಣ ಕೇಶವನಿಗೆ ಕೊಯಂಬತ್ತೂರಿನ ಪ್ರಸಿದ್ಧ ಗೋಲ್ಡ್‌ಸ್ಮಿತ್ ಫ್ಯಾಮಿಲಿಯಿಂದಲೇ ಹೆಣ್ಣು ಬಂತು. ಒಟ್ಟಿನಲ್ಲಿ ಆಚಾರ್ರ ಕಟ್ಟೆಯಲ್ಲೀಗ ಶ್ರೀನಿವಾಸ ಆಚಾರ್ರಿಗೆ ಕೆಲಸವಿಲ್ಲ. ದಿನಕ್ಕೊಂದೆರಡು ತಾಸು ಶುಭ್ರ ಬಟ್ಟೆ ಧರಿಸಿ ಅಂಗಡಿಯ ಮಂಡದ ಮೇಲೆ ಕುಳಿತು ‘ಜ್ಯುವೆಲ್ಲರ್ ಶಾಪ್’ಗೆ ಶೋಭೆ ತಂದರೆ ಸಾಕು.

ಶ್ರೀನಿವಾಸಾಚಾರ್ರು ವಿಧವೆಯೊಬ್ಬಳಿಗೆ ಸಹಾಯ ಮಾಡುವ ದೃಷ್ಟಿಯಿಂದ ರೊಟ್ಟಿ ಪಾತುಮ್ಮಳ ಅನಧಿಕೃತ ಬ್ಯಾಂಕ್ ಆಗಲು ಸಮ್ಮತಿಸಿದ್ದರೆ, ನೂರಕ್ಕೆ ನೂರರಷ್ಟು ವ್ಯಾಪಾರಿ ಚಂದ್ರಣ್ಣ ‘ಬಡ್ಡಿಯಿಲ್ಲದೆ ಬರುವ ಪ್ರತಿಯೊಂದು ರೂಪಾಯಿಯೂ ಅತ್ಯಂತ ಬೆಲೆಯುಳ್ಳದ್ದು’ ಎಂಬ ವ್ಯವಹಾರೀ ಸೂತ್ರಕ್ಕೆ ಅಂಟಿಕೊಂಡು, ಅವಳನ್ನು ಓರ್ವ ಗೌರವಾನ್ವಿತ ಗಿರಾಕಿಯಂತೆಯೇ ಸ್ವಾಗತಿಸುತ್ತಿದ್ದ. ಅವಳು ಹಣ ನೀಡಲು ಬಂದಾಗಲೆಲ್ಲ, “ಏನು ಈವತ್ತು ತಡವಾಯಿತಲ್ಲ” ಎಂದೋ ಅಥವಾ “ನಿಮಗೆ ದುಡ್ಡು ಯಾವಾಗ ಬೇಕಾದರೂ ಹೇಳಿ ಬಿಡಿ. ಲೆಖ್ಖ ಮಾಡಿಕೊಟ್ಟು ಬಿಡ್ತೇನೆ. ಯಾವುದೇ ಚಿಂತೆ ಬೇಡ. ಒಂದು ದಿನ ಮೊದಲೇ ತಿಳಿಸಿದರೆ ಹೆಚ್ಚು ಅನುಕೂಲ” ಎಂದೇನಾದರೂ ಮಾತು ಆಡಿಯೇ ಬೀಳ್ಕೊಡುತ್ತಿದ್ದ. ಅಂತೆಯೇ ಆಕೆ ನೀಡುತ್ತಿರುವ ರೂಪಾಯಿಗಳನ್ನು ಲೆಖ್ಖ ಮಾಡಿ ಅವಳ ಹೆಸರಿನ ಮುಂದೆ ಖಾತೆ ಬರೆಯುತ್ತಿದ್ದ.

ರೊಟ್ಟಿ ಪಾತುಮ್ಮಳೂ ಅಷ್ಟೇ; ಪ್ರತಿ ಸೋಮವಾರ ಸಂಜೆ, ಹಿಂದಿನ ವಾರದ ಗಳಿಕೆಯಲ್ಲಿ ಉಳಿಸಲು ಸಾಧ್ಯವಾದ ರೂಪಾಯಿಗಳನ್ನು ತಂದು ಆಚಾರ್ರ ಕಟ್ಟೆಯಲ್ಲಿ ಕೊಟ್ಟು ನಿಶ್ಚಿಂತೆಯಿಂದ ಮರಳುತ್ತಿದ್ದಳಲ್ಲದೆ ಒಂದು ಸಲವಾದರೂ, ತನ್ನ ಉಳಿತಾಯದ ಮೊತ್ತ ಎಷ್ಟಾಗಿರಬಹುದೆಂದು ಕುತೂಹಲ ಕೂಡಾ ವ್ಯಕ್ತಪಡಿಸಿದವಳಲ್ಲ.

ಮೂರು

ಶ್ರೀರಾಮಚಂದ್ರನ ಮೇಲೆ ಆಣೆ ಹಾಕಿ ಹೇಳಬಹುದು; ಚಂದ್ರಣ್ಣ ಹಟ ಹಿಡಿದು ಕರಸೇವೆಗೆಂದು ಅಯೋಧ್ಯೆಗೆ ಹೋದವನಲ್ಲ. ರಾಮದಾಸ ಕಿಣಿಯವರು ಪ್ರಸ್ತಾಪಿಸಿದ್ದಾಗ, “ನನಗೆ ಅಂಥದಕ್ಕೆಲ್ಲ ಪುರುಸೊತ್ತು ಇಲ್ಲ ಮಾರಾಯ್ರೆ” ಎಂದು ನಯವಾಗಿಯೇ ನಿರಾಕರಿಸಿದ್ದನು. ಅಪ್ಪ ಶ್ರೀನಿವಾಸ ಆಚಾರ್ರಂತೂ ಖಂಡ ತುಂಡವಾಗಿಯೇ ಹೇಳಿಬಿಟ್ಟಿದ್ದರು, “ನೋಡು ಚಂದ್ರು. ಇದೆಲ್ಲ ನಮ್ಮಂಥ ವ್ಯಾಪಾರಸ್ಥರಿಗೆ ಹೇಳಿಸಿದ್ದಲ್ಲ. ನಮಗೆ ನಮ್ಮ ವ್ಯಾಪಾರದಲ್ಲಿ ಅವರು, ಇವರು ಅಂತ ವ್ಯತ್ಯಾಸ ಇರುವುದಿಲ್ಲ. ಇರಬಾರದು. ನಿಜ ಹೇಳಬೇಕೂಂತ ಆದ್ರೆ ನಮ್ಮ ಅಂಗಡಿಗೆ ನಾಲ್ಕು ಆಣೆ ಹೆಚ್ಚು ಫಾಯಿದೆ ಆಗುವುದು ಅವರ ಮನೆಯ ಹೆಂಗಸರಿಂದಲೇ. ನೀನು ಕೂಡಾ ಇಂಥದ್ದರಲ್ಲಿ ಇದ್ದಿ ಅಂತ ಅವರಿಗೆ ಗೊತ್ತಾಗಿ ಬಿಟ್ರೆ ನಷ್ಟ ಯಾರಿಗೆ ಹೇಳು?”

ಆದರೆ ದೈವೇಚ್ಛೆ ಬೇರೆಯೇ ಇದ್ದಿತ್ತು. ಮುತ್ತುಪ್ಪಾಡಿಯಿಂದ ಆಯ್ಕೆಯಾಗಿದ್ದ ಮೂರು ಮಂದಿಯ ತಂಡ ಹೊರಡಲು ಇನ್ನೇನು ನಾಲ್ಕು ದಿನ ಇದೆ ಎಂದಾದಾಗ, ತಂಡದ ಸದಸ್ಯರಲ್ಲೊಬ್ಬ ಕೈಕೊಟ್ಟುಬಿಟ್ಟ. ಬಿ.ಕಾಂ. ಸೆಕೆಂಡ್ ಕ್ಲಾಸ್ ಪಾಸಾಗಿಯೂ ಎರಡು- ಎರಡೂವರೆ ವರ್ಷದಿಂದ, ಭಗವತೀ ಕಲ್ಯಾಣ ಮಂಟಪದ ಮೆನೇಜರ್ ಅಂತ ಮುನ್ನೂರ ಐವತ್ತು ರೂಪಾಯಿಗಳಲ್ಲಿ ಮೆನೇಜ್ ಮಾಡಿಕೊಳ್ಳುತ್ತಿದ್ದ ಅನ್ ಅಂಪ್ಲಾಯಿಡ್ ಗ್ರಾಜುವೆಟ್ ಆರ್. ಸದಾಶಿವನಿಗೆ ಸಾಕ್ಷಾತ್ ಭಗವತಿಯೇ ಅನುಗ್ರಹಿಸಿದಂತೆ ಮಸ್ಕತ್‌ನಿಂದ ಹದಿನೆಂಟು ಸಾವಿರ ಸಂಬಳದ ಕರೆ ಬಂದಾಗ ನಿರಾಕರಿಸುವುದಾದರೂ ಹೇಗೆ? ಮಸ್ಕತ್‌ನ ‘ಅಲ್ ಮುಸ್ತಫಾ ಹೈಟೆಕ್ ನರ‍್ಸಿಂಗ್ ಹೋಂ’ನ ಜ್ಯೂನಿಯರ್ ಅಕೌಂಟೆಂಟ್ ಆಗಿ ನೇಮಕಗೊಂಡ ಬಗೆಗಿನ ಅಫಿಶಿಯಲ್ ಡಾಕ್ಯುಮೆಂಟಿನ ನೆರಳಚ್ಚು ಪ್ರತಿ ಹಾಗೂ ಒರಿಜಿನಲ್ ಸಾ ಸಹಿತ, ಕಾಸರಗೋಡಿನಿಂದ ಮುತ್ತುಪ್ಪಾಡಿವರೆಗೆ ಟ್ಯಾಕ್ಸಿ ಮಾಡಿಕೊಂಡೇ ಬಂದಿದ್ದ ‘ಮುಬಾರಕ್ ಟೂರ್ ಆಂಡ್ ಟ್ರಾವೆಲ್ಸ್’ನ ಕಾಸಿಂ ಬಾವಾ, ತಾನು ಸದಾಶಿವನಿಂದ ಪಡೆದಿದ್ದ ಮುಂಗಡ ನಲುವತ್ತೆರಡು ಸಾವಿರ ರೂಪಾಯಿಗಳಿಗೆ ನ್ಯಾಯವೊದಗಿಸಿದ್ದಲ್ಲದೆ, ಇನ್ನೂ ಆರು ದಿನಗಳ ಒಳಗೆ ಆರು ಸಾವಿರ ರೂಪಾಯಿಗಳ ಕಮೀಷನ್ ಹಣ ತೆತ್ತು, ಬೊಂಬಾಯಿ ತಲುಪಿ ‘ಮೆಡಿಕಲ್’ ಮುಗಿಸಿಕೊಂಡು ಮತ್ತೆರಡು ದಿನಗಳೊಳಗೇ ವಿಮಾನ ಏರಬೇಕು; ತಪ್ಪಿದಲ್ಲಿ ಕೊಟ್ಟಿರುವ ಮುಂಗಡಕ್ಕೆ ಕಾಸಿಂ ಜವಾಬ್ದಾರನಲ್ಲ ಎಂದು ಎಚ್ಚರಿಕೆ ನೀಡಿಯೇ ಹೋಗಿದ್ದ.

ರಾಮದಾಸ ಕಿಣಿಯವರ ತಲೆ ಹನ್ನೆರಡಾಣೆಯಾಗಿತ್ತು. ನುಂಗಲೂ ಅಲ್ಲ,ಉಗುಳಲೂ ಅಲ್ಲ. ಮೂರು ಮಂದಿಯ ಲಿಸ್ಟ್ ಕಳಿಸಿ ಆಗಿದೆ. ಯಾರ‍್ಯಾರು ಹೇಗ್ಹೇಗೆ ಅಂತ ಡಿಟ್ಟೇಲ್ಡ್ ರಿಪೋರ್ಟ್ ರವಾನಿಸಿ ಆಗಿದೆ. ಈಗ ಲಾಸ್ಟ್ ಮಿನಿಟ್‌ನಲ್ಲಿ ಮುತ್ತುಪ್ಪಾಡಿಯಿಂದ ಮೂರಿಲ್ಲ, ಬರೀ ಎರಡು ಅಂತ ಯಾವ ಮುಖದಲ್ಲಿ ಹೇಳುವುದು? ತನ್ನ ಆರ‍್ಗನೈಸಿಂಗ್ ಕೆಪೇಸಿಟಿಗೇ ಇದೊಂದು ಬ್ಲಾಕ್‌ಸ್ಪಾಟು. ಏನು ಮಾಡುವುದು?

ಚಂದ್ರಣ್ಣನಿಗೆ ಮತ್ತೊಮ್ಮೆ ಬುಲಾವು ಬಂತು. ಭಗವತೀ ಕಲ್ಯಾಣ ಮಂಟಪದ ಆಫಿಸು ಕೋಣೆಯಲ್ಲಿ-ಮೆನೇಜರನ ಅನುಪಸ್ಥಿತಿಯಲ್ಲಿ-ರಾತ್ರಿ ಒಂದೂವರೆ ತನಕವೂ ಚಂದ್ರಣ್ಣನಿಗೆ ತಿಳಿಯ ಹೇಳಲಾಯಿತು. ಇಂತಹ ಗಂಡಾಂತರದ ಸಂದರ್ಭಗಳಲ್ಲಿ ಊರಿನ ಘನತೆ- ಗೌರವಗಳನ್ನು ಕಾಪಾಡುವುದು ಚಂದ್ರಣ್ಣನಂತಹ ಬಿಸಿ ರಕ್ತದ ಹುಡುಗರ ಪರಮ ಕರ್ತವ್ಯ ಎಂಬುದನ್ನು ಮನದಟ್ಟು ಮಾಡಲಾಯಿತು. ಸ್ವತಃ ತನ್ನ ಆರನೇ ಮಗ ಪಿ.ಯು.ಸಿ. ಸೆಕೆಂಡ್ ಇಯರ್‌ನ ಕ್ರುಶಿಯಲ್ ಸ್ಟೇಜ್‌ನಲ್ಲಿ ಇದ್ದಿಲ್ಲವಾಗಿರುತ್ತಿದ್ದಲ್ಲಿ ತಾನು ಯಾರಿಗೂ ದಮ್ಮಯ್ಯ ಹಾಕುತ್ತಿರಲಿಲ್ಲ ಎಂಬುದನ್ನು ಪದೇ ಪದೇ ಒತ್ತಿ ಹೇಳಿದ ರಾಮದಾಸ ಕಿಣಿಯವರು, ಶ್ರೀನಿವಾಸ ಆಚಾರ್ರಲ್ಲಿ ಮಾತನಾಡಿ ಒಪ್ಪಿಗೆ ಪಡೆಯುವ ಹೊಣೆಯನ್ನು ದೇವಸ್ಥಾನದ ಅರ್ಚಕ ಸುಬ್ರಾಯ ತಂತ್ರಿಯವರಿಗೆ ಒಪ್ಪಿಸಿದ ಬಳಿಕ ಚಂದ್ರಣ್ಣನಿಗೆ ಹೇಳುವುದೇನೂ ಉಳಿದಿರಲಿಲ್ಲ.

ಚಂದ್ರಣ್ಣ ಹೊರಡುವ ದಿನ ಅಪ್ಪ ಏನನ್ನೂ ಹೇಳಲಿಲ್ಲ. ಸಂಜೆ ಹೊರಡುವ ಮುನ್ನ ಚಂದ್ರಣ್ಣನನ್ನು ಗುಟ್ಟಾಗಿ ಕರೆದು ಮಾತನಾಡಿಸಿದ್ದ ಅತ್ತಿಗೆ, ಒಂದು ಸಾವಿರ ರೂಪಾಯಿ ಎಣಿಸಿ ಕೊಟ್ಟು, ‘ಹೇಗೋ ನೀವೆಲ್ಲ ಮೊದಲು ಕಾಶಿಗೆ ಹೋಗುತ್ತೀರಂತೆ. ಅಲ್ಲಿ ಬೆನಾರಸ್ ಸಾರಿಗಳು ತುಂಬಾ ಚೀಪಲ್ಲಿ ಸಿಗುತ್ತದೆ, ಎರಡು ಅಥವಾ ಮೂರು ಸೀರೆ ತಂದು ಬಿಡು ಆಯ್ತಾ?’ ಎಂದು ಬೀಳ್ಕೊಟ್ಟರು.

ಮುತ್ತುಪ್ಪಾಡಿಯ ತಂಡ ಮಂಗಳೂರು ರೈಲು ನಿಲ್ದಾಣ ತಲುಪಿದಾಗ ಅಲ್ಲಿ ಶಿವಮೊಗ್ಗದಿಂದ ಬಂದಿದ್ದ ಏಳು ಜನರ ತಂಡ ಜತೆಯಾಯಿತು. ಇವರೆಲ್ಲರನ್ನೂ ರೈಲು ಹತ್ತಿಸಿದ ರಾಮದಾಸ ಕಿಣಿಯವರು ಧನ್ಯಭಾವದಿಂದ ಊರಿಗೆ ಮರಳಿ ತನ್ನ ಅಂಗಡಿಯೆದುರು ‘ಕ್ರಿಸ್‌ಮಸ್ ಇಳಿತದ ಮಾರಾಟ’ ಎಂಬ ಬೋರ್ಡ್ ಪ್ರದರ್ಶಿಸಿ, ಜವುಳಿ ವ್ಯಾಪಾರದಲ್ಲಿ ಮುಳುಗಿಬಿಟ್ಟರು.

ಬಳಸು ದಾರಿಯಿಂದ ರೈಲು ಬದಲಿಸುತ್ತಾ ಕಾಶಿ ತಲುಪುವಾಗ ಆರು ದಿನಗಳು ಸತ್ತವು. ಮುಂದಿನ ಆರು ದಿನ ಹೆಡ್‌ಕ್ವಾರ್ಟರ್‌ನ ಆದೇಶ ನಿರೀಕ್ಷಣೆಯಲ್ಲೇ ಕಳೆದು ಹೋಯಿತು. ಬಿರ್ಲಾ ಮಂದಿರದ ರಸ್ತೆಯಲ್ಲೇ ಇದ್ದ ಶಂಭುನಾಥ ಪಂಡಾರವರ ಎರಡಂತಸ್ತಿನ ಭವ್ಯ ‘ಕೋಠಿ’ಯಲ್ಲಿ, ಇವರಿಗಿಂತಲೂ ಮೊದಲು ಬಂದು ಸೇರಿದ್ದ ಪೂನಾದ ತಂಡದ ಸದಸ್ಯರ ಜತೆ ಅರ್ಧ ಹಿಂದಿ ಅರ್ಧ ಕನ್ನಡಲ್ಲಿ ಪೌರುಷದ ಮಾತು ಬದಲಿಸಿಕೊಳ್ಳುತ್ತಾ ಮೇಲಿನ ಆದೇಶಕ್ಕಾಗಿ ಕಾಯುವುದೇ ಕೆಲಸವಾಯಿತು.

ಅಲ್ಲಿಂದ ಫೈಜಾಬಾದಿಗೆ ಬಹಳ ದೂರವೇನೂ ಇಲ್ಲ. ಇವರ ಸಾಗಾಟಕ್ಕೆಂದು ‘ಕೋಠಿ’ಯ ಹಿಂದುಗಡೆ ಚಳಿಗೆ ಮುದುಡಿ ನಿಂತಿದ್ದ ಎರಡು ಮೆಟಡಾರ್ ವಾಹನಗಳಿಗೆ ಕೇವಲ ಮೂರು ತಾಸಿನ ಹಾದಿ. ಆದರೆ ಇವರಿಗೆ ಹೊಸ್ತಿಲು ದಾಟಿ ಅಂಗಳಕ್ಕಿಳಿಯಲೂ ಅನುಮತಿಯಿಲ್ಲ. ಟೀವಿ ನೋಡುತ್ತಾ ಪುಳಕಗೊಳ್ಳುವುದಷ್ಟೇ ಇವರ ದಿನಚರಿ. ಡಿಸೆಂಬರ್ ತಿಂಗಳ ಚಳಿ ಬೇರೆ.

ಕೊನೆಗೊಮ್ಮೆ ಆದೇಶ ಬಂತು. ‘ಎಲ್ಲರಿಗೂ ಅಭಿನಂದನೆಗಳು. ನಿಮ್ಮ ಕೆಲಸ ಪೂರೈಸಿದೆ. ನೀವು ನಾಳೆಯೇ ದೆಹಲಿಗೆ ಹೊರಡುವುದು.’

ಚಂದ್ರಣ್ಣನಿಗೆ ಕೋಪದಿಂದ ಅಳುವೇ ಬಂದುಬಿಟ್ಟಿತ್ತು. ರಾಮದಾಸ ಕಿಣಿಯವರು ಎದುರಿಗೇನಾದರೂ ಇದ್ದಿದ್ದರೆ ದೊಡ್ಡ ರಾದ್ದಾಂತವೇ ಆಗಿಬಿಡುತ್ತಿತ್ತು. ವೆಂಕು ಪಣಂಬೂರಿಗೆ ಹೋಗಿ ಬಂದ ಕತೆಯಂತಾಯಿತಲ್ಲಾ ಎಂದು ಪರಿತಪಿಸಿದ ಚಂದ್ರಣ್ಣನಿಗೆ, ಅತ್ತಿಗೆಗಾಗಿ ಒಂದು ಸೀರೆ ಕೊಳ್ಳಲೂ ಅವಕಾಶವಾಗಲಿಲ್ಲ.

ದೆಹಲಿಗೆ ತಲುಪಿದ ಬಳಿಕ ತಿಲಕ್‌ನಗರದಲ್ಲಿ ಶ್ರೀ ರಾಜಿಂದರ್‌ಸಿಂಗ್ ಹೆಸರಲ್ಲಿದ್ದ ಡಿ.ಡಿ.ಎ. ಫ್ಲಾಟ್‌ನಲ್ಲಿ ಎರಡು ದಿನ-ರಾತ್ರಿ ಚಳಿಗೆ ನಡುಗುವ ಶಿಕ್ಷೆ. ನಾಳೆ ಬೆಳಗ್ಗೆ ಮಂಗಳೂರಿಗೆ ಹೊರಡುವುದು ಎಂದು ನಿಶ್ಚಯವಾದಾಗ ರಾತ್ರಿಯ ಹೊತ್ತಲ್ಲಿ ಒಂದು ಸಂಗತಿ ನಡೆಯಿತು.

ಚಂದ್ರಣ್ಣನ ಅಸಹನೆಯನ್ನು ಕಳೆದ ಎರಡೂ ದಿನಗಳಿಂದ ಗಮನಿಸಿದ್ದ, ಪೂನಾದ ತಂಡದ ಸದಸ್ಯರಲ್ಲೊಬ್ಬ, ರಾತ್ರಿಯ ಊಟದ ಬಳಿಕ ಚಂದ್ರಣ್ಣನನ್ನು ಮನೆಯ ಟೇರೇಸಿಗೆ ಕರೆದುಕೊಂಡು ಹೋದ. ದೇಹವೆಲ್ಲ ಮರಗಟ್ಟುವಂತಹ ಚಳಿಯಲ್ಲಿ ಹೊಸಬನ ಬೆನ್ನು ಹಿಡಿದು ಮೇಲೇರಿದ ಚಂದ್ರಣ್ಣನಿಗೆ ನೂರೆಂಟು ಪ್ರಶ್ನೆಗಳು.

ಟೇರೇಸಿನಲ್ಲಿ ನಸುಗತ್ತಲು. ತನ್ನ ಬಗಲಚೀಲದಿಂದ ಸುಮಾರು ಅರ್ಧ ಕಿಲೋದಷ್ಟು ತೂಗಬಲ್ಲ ಮಣ್ಣಿನ ಹೆಂಟೆಯೊಂದನ್ನು ಹೊರತೆಗೆದು ಚಂದ್ರಣ್ಣನ ಕೈಗಿತ್ತು, “ನೀವು ಬೇಸರಪಡಬಾರದು. ಯಾರ‍್ಯಾರಿಂದ ಯಾವ್ಯಾವ ಕೆಲಸಗಳನ್ನು ನಿರೀಕ್ಷಿಸಲಾಗಿತ್ತೋ ಅವರೆಲ್ಲರೂ ಅವರವರ ಕೆಲಸಗಳನ್ನು ಸಂಪೂರ್ಣವಾಗಿ ನೆರವೇರಿಸಿದ್ದಾರೆ. ನಿಮ್ಮಿಂದ ನಿರೀಕ್ಷಿಸಲಾಗಿದ್ದ ಕೆಲಸವನ್ನು ನೀವು ಕೂಡಾ ಯಶಸ್ವಿಯಾಗಿ ಪೂರೈಸಿದ್ದೀರಿ. ಈ ಕಲ್ಲಿನ ತುಂಡು ನಿಮಗೆ. ಇದು ನಮ್ಮ ವಿಜಯದ ಸಂಕೇತವೆಂದು ತಿಳಿಯಿರಿ” ಎಂದು ಹೇಳಿ ಭುಜತಟ್ಟಿದ; ಚಂದ್ರಣ್ಣನಿಗೆ ರೋಮಾಂಚನವಾಯಿತು. ಮೆಟ್ಟಲಿಳಿಯುವಾಗ ಪೂನಾದ ಗೆಳೆಯ ಪಿಸುದನಿಯಲ್ಲಿ ಎಚ್ಚರಿಸಿದ್ದ, “ಕೆಲವು ದಿವಸಗಳ ಕಾಲ ಇದು ಗುಟ್ಟಾಗಿರಲಿ; ಯಾರಿಗೂ ಹೇಳುವುದು ಬೇಡ.”

ರೈಲಿನ ಎರಡನೆ ದಿನದ ಪ್ರಯಾಣದವರೆಗೂ ಗಂಟಲೊಳಗೇ ಅವಿತಿಟ್ಟುಕೊಂಡಿದ್ದ ಗುಟ್ಟನ್ನು ಚಂದ್ರಣ್ಣ ಉಳಿದಿಬ್ಬರಿಗೆ ತಿಳಿಸಿಬಿಟ್ಟ. ತಾನು ಅದನ್ನು ‘ಸೂಟ್‌ಕೇಸ್’ನಲ್ಲಿ ಭದ್ರವಾಗಿರಿಸಿರುವುದಾಗಿಯೂ, ಊರಿಗೆ ತಲುಪಿದ ಬಳಿಕ ಮೂರು ತುಂಡು ಮಾಡಿ ಉಳಿದಿಬ್ಬರಿಗೂ ಖಂಡಿತಾ ಹಂಚುವುದಾಗಿಯೂ ಭಾಷೆಯಿತ್ತ.

ಮಂಗಳೂರು ರೈಲು ನಿಲ್ದಾಣಕ್ಕೆ ತಲುಪುವಾಗ ರಾಮದಾಸ ಕಿಣಿಯವರ ಕಾರು ತಯಾರಾಗಿ ನಿಂತಿತ್ತು. ಅಂದೇ ರಾತ್ರಿ ಭಗವತೀ ಕಲ್ಯಾಣ ಮಂಟಪದಲ್ಲಿ ಆರಿಸಿದ ಗಣ್ಯನಾಗರಿಕರ ಉಪಸ್ಥಿತಿಯಲ್ಲಿ ಮೂವರನ್ನು ಹಾರ ಹಾಕಿ ಸನ್ಮಾನಿಸಲಾಯಿತು.

ಅಪ್ಪ ಹೆಚ್ಚು ವಿಚಾರಣೆ ಮಾಡಲಿಲ್ಲ. ಆದರೆ ಅತ್ತಿಗೆ ಮಾತ್ರ ಅಸಹನೆಯಿಂದ ಹಂಗಿಸಿದ್ದಳು. “ಆಯಿತಪ್ಪ, ನಿಮಗೆಲ್ಲ ಅಲ್ಲಿಗೆ ಹೋಗಲು ಬಿಡಲಿಲ್ಲ ಸರಿ. ಆದರೆ ಕಾಶಿಯಲ್ಲಿ ಒಂದು ವಾರ ನೀವೇನು ಭಜನೆ ಮಾಡಿದ್ದಾ? ಒಂದು ಸೀರೆ ಕೊಳ್ಳುವಷ್ಟು ಪುರುಸೊತ್ತು ಸಿಗಲಿಲ್ವ ನಿನಗೆ?”

ಚಂದ್ರಣ್ಣ ಪೆಚ್ಚು ಪೆಚ್ಚಾಗಿ ನಕ್ಕ.

ನಾಲ್ಕು

ಮಾತು ಕೊಟ್ಟಿದ್ದಂತೆ ಚಂದ್ರಣ್ಣ ವಾರವೊಂದರ ಬಳಿಕ, ತನ್ನ ಸೂಟ್‌ಕೇಸ್‌ನೊಳಗೆ ಬಚ್ಚಿಟ್ಟಿದ್ದ ಗೋಡೆಯ ತುಂಡನ್ನು ನಾಲ್ಕು ತುಂಡುಗಳನ್ನಾಗಿ ಮಾಡಿ, ತನ್ನ ಜತೆ ಬಂದಿದ್ದ ಇಬ್ಬರಿಗೂ ಒಂದೊಂದು ತುಂಡು ಕೊಟ್ಟ. ಒಂದು ತುಂಡನ್ನು ರಾಮದಾಸ ಕಿಣಿಯವರಿಗೆ ಕೊಟ್ಟು ಅದು ಸಿಕ್ಕ ಬಗೆಯನ್ನೂ ವಿವರಿಸಿದ.

ರಾಮದಾಸ ಕಿಣಿಯವರು ಅನುಮಾನಿಸುತ್ತಾ, “ಇದು ಸ್ವಲ್ಪ ಡೇಂಜರ್ರೇ. ಸ್ವಲ್ಪ ದಿನ ಈ ತುಂಡಿನ ಬಗ್ಗೆ ಯಾರಿಗೂ ಹೇಳಬೇಡ. ನನಗೆ ಕೊಟ್ಟಿದ್ದನ್ನೂ ಹೇಳಬೇಡ. ಪೇಪರ್‌ಗಳಲ್ಲಿ ಏನೇನೆಲ್ಲ ನ್ಯೂಸ್ ಬರ‍್ತಾ ಉಂಟು. ಈ ತುಂಡನ್ನು ಮೆಟೀರಿಯಲ್ ಎವಿಡೆನ್ಸ್ ಅಂತ ಟ್ರೀಟ್ ಮಾಡಿದರೆ ನಾವು ಹೋದ ಹಾಗೆಯೇ. ಏನಂತಿ?” ಎಂದು ಪ್ರಶ್ನಿಸಿದಾಗ ಚಂದ್ರಣ್ಣ ಅವರತ್ತ ಅಸಹ್ಯದ ನೋಟ ಚೆಲ್ಲಿ, ‘ಇಷ್ಟೆಲ್ಲ ಹೆದರಿಕೆ ಪಡುವವರು ನಮ್ಮನ್ನು ಕಳಿಸಿದ್ದು ಯಾಕೆ?’ ಎಂದು ನೇರವಾಗಿಯೇ ಪ್ರಶ್ನಿಸಿಬಿಟ್ಟ. ಮುಖ ಮುದುಡಿಸಿಕೊಂಡ ಕಿಣಿಯವರು, “ಹಾಗಲ್ಲ ಚಂದ್ರು? ತಲೆ ಗಟ್ಟಿ ಉಂಟು ಅಂತ ಬಂಡೆಕಲ್ಲಿಗೆ ಹೊಡೆದುಕೊಳ್ಳುವುದಾ?” ಎಂದು ಗಾದೆ ಉದುರಿಸಿ ಮಾತು ತೇಲಿಸಿಬಿಟ್ಟರು.

“ನನಗೇನೂ ಹೆದರಿಕೆ ಇಲ್ಲ. ನಾನು ಯಾಕೆ ಹೆದರಬೇಕು? ನಾನು ಅಲ್ಲಿ ತನಕ ಹೋಗಲೇ ಇಲ್ವಲ್ಲಾ?” ಚಂದ್ರಣ್ಣ ಪ್ರಶ್ನಿಸಿದಾಗ ಕಿಣಿಯವರು ಹೌಹಾರಿದ್ದರು, “ಓಹ್ ಮಾರಾಯಾ? ಹಾಗೆಲ್ಲ ನೀವು ಅಲ್ಲಿತನಕ ತಲುಪಲೇ ಇಲ್ಲ ಅಂತ ಹೇಳಬೇಡ ಮಾರಾಯ; ನಮ್ಮ ಊರಿನಿಂದಲೂ ಹೋಗಿ ಬಂದಿದ್ದಾರೆ ಅಂತ ಇಂಪ್ರೆಷನ್ ಕ್ರಿಯೇಟ್ ಮಾಡಿ ಆಗಿದೆ. ಈಗ ಇಲ್ಲ, ಇಲ್ಲ, ನಮ್ಮ ಹುಡುಗರಿಗೂ ಅದಕ್ಕೂ ಯಾವ ಕನೆಕ್ಷನೂ ಇಲ್ಲ ಅಂತ ಹೇಳಿ ಬಿಟ್ರೆ ನಮ್ಮ ಪ್ರೆಸ್ಟೀಜ್ ಏನಾದೀತು? ಒಂದು ವೇಳೆ ಅಂಥಾ ಸಂದರ್ಭ ಬಂದು; ಆ ರೀತಿ ಸ್ಟೇಟ್‌ಮೆಂಟ್ ಕೊಡದೆ ಬೇರೆ ದಾರಿಯೇ ಇಲ್ಲ ಅಂತ ಆಗಿಬಿಟ್ರೆ, ಆಗ ಬೇಕಾದ್ರೆ ನಿಜ ಹೇಳಿದ್ರೆ ಆಯ್ತಪ್ಪ. ಏನಂತಿ?ಎಂದು ಪ್ರಶ್ನಿಸಿದಾಗ ಚಂದ್ರಣ್ಣ ಪೆಚ್ಚು ನಗುಚೆಲ್ಲಿ, “ನನಗೊಂದೂ ಗೊತ್ತಾಗುವುದಿಲ್ಲ” ಎಂದು ಹೇಳಿ ಮರಳಿದ್ದ.

ತನ್ನ ಹಾಗೆಯೇ ತಂಡದಲ್ಲಿದ್ದ ಇನ್ನಿಬ್ಬರು ಕೂಡಾ, ಗೋಡೆಯ ತುಂಡನ್ನು ಸಂಭ್ರಮದಿಂದಲೇ ಪಡೆದುಕೊಂಡದ್ದು ಹೌದಾದರೂ, ‘ಹೇಳುವುದಾ-ಹೇಳದಿರುವುದಾ? ತೋರಿಸುವುದಾ? ಅಡಗಿಸಿಡುವುದಾ?’ ಎಂಬುದನ್ನು ನಿರ್ಧರಿಸಲಾಗದೆ ಒದ್ದಾಡುತ್ತಿರುವುದು ಚಂದ್ರಣ್ಣನ ಗಮನಕ್ಕೆ ಬಂದಿತ್ತು. “ಯಾರಿಗೂ ಹೇಳದೆ, ಯಾರಿಗೂ ತೋರಿಸದೆ ಕಳ್ಳ ಬಸಿರಿನಂತೆ ಅಡಗಿಸಿಡುವುದರಲ್ಲಿ ಯಾವ ಮಜವೂ ಇಲ್ಲ ಚಂದ್ರು.” ಎಂದು ಒಬ್ಬಾತ ಪರಿತಪಿಸಿದ್ದರೆ, ಮತ್ತೊಬ್ಬನಂತೂ ಬೇಸರದಿಂದ, ‘ಅಷ್ಟೆಲ್ಲ ದೂರ ಹೋಗಿ, ಆ ಚಳಿಗೆ ಸಂಕಟಪಟ್ಟದ್ದು ಯಾವ ಕರ್ಮಕ್ಕೆ ಅಂತ ನನಗಿನ್ನೂ ಅರ್ಥವಾಗಲಿಲ್ಲ. ಕೆಲವರ ಹತ್ರ ಹೋಗಿದ್ದೇನೆ ಅಂತಲೂ, ಇನ್ನೂ ಕೆಲವರ ಹತ್ರ ಇಲ್ಲ ಮಾರಾಯ್ರೆ, ಅರ್ಧದಲ್ಲೇ ಬಂದೆವು ಅಂತ ಹೇಳುವುದರಲ್ಲೇ ಮಂಡೆ ಬೆಚ್ಚ ಆಗುತ್ತದೆ’ ಎಂದು ಸಿಡುಕಿದ್ದ.

ಚಂದ್ರಣ್ಣನನ್ನು ಮೆಚ್ಚಿ ಅಭಿನಂದಿಸಲು ಬರುವವರ ಜತೆ ಕೆಲವೊಮ್ಮೆ ಚಂದ್ರಣ್ಣನೇ ಹೇಳುವುದುಂಟು. ‘ಇಲ್ಲ ಮಾರಾಯ್ರೇ, ನೀವು ನಂಬಿದಷ್ಟು ಧೈರ್ಯ ನನಗುಂಟಾ? ಏನೋ ಒಂದು ಆಗಿ ಹೋಯ್ತು. ಆ ಬಗ್ಗೆ ನಾವಿನ್ನು ಹೆಚ್ಚು ಮಾತನಾಡದಿರುವುದೇ ಕ್ಷೇಮ’ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದಾಗ ಕೇಳುವವರಿಗೆಲ್ಲ ಚಂದ್ರಣ್ಣನ ಸೌಜನ್ಯದ ಬಗ್ಗೆ ಅಭಿಮಾನ ಉಕ್ಕುತ್ತಿತ್ತು. “ನಮ್ಮ ಹತ್ತಿರ ನಿನ್ನ ನಾಟಕ ಬೇಡ ಚಂದ್ರಣ್ಣ. ನೀನು ಅಲ್ಲಿ ಹೋಗಿ ಏನು ಮಾಡಿದ್ದಿ, ಅಲ್ಲಿಂದ ಏನು ತಂದಿದ್ದಿ, ಎಲ್ಲ ಜಾತಕ ನಮಗೆ ತಲುಪಿದೆ; ಹ್ಹ...ಹ್ಹಾ...” ಎಂದು ನಕ್ಕಾಗ ಚಂದ್ರಣ್ಣನೂ ಅವರೆಲ್ಲರ ಅಭಿನಂದನೆಗಳನ್ನು ಸ್ವೀಕರಿಸುವವನಂತೆ ವಿನಯ ನಟಿಸುತ್ತಿದ್ದ.

ದಿನಗಳುರುಳಿದಂತೆ ಚಂದ್ರಣ್ಣನ ಉತ್ಸಾಹವೂ ಇಳಿಯತೊಡಗಿತ್ತು. ವ್ಯವಹಾರದ ಗಡಿಬಿಡಿಯ ನಡುವೆ ಪೇಪರುಗಳ ಮೇಲೆ ಕಣ್ಣಾಡಿಸಿದಾಗ, ಪ್ರಧಾನ ಮಂತ್ರಿಗಳ- ವಿರೋಧ ಪಕ್ಷ ನಾಯಕರುಗಳ ಹೇಳಿಕೆಗಳನ್ನು ಓದುವಾಗ, ಒಂದಿಷ್ಟು ಉದ್ವೇಗ ಮೂಡುತ್ತಿದ್ದರೂ, ಮರುಕ್ಷಣದಲ್ಲೇ ಮರೆತು ಹೋಗುತ್ತಿತ್ತು. ಈ ನಡುವೆ ರೊಟ್ಟಿಪಾತುಮ್ಮ ತನ್ನ ಅಭ್ಯಾಸ ಬಲದಿಂದೆಂಬಂತೆ ಪ್ರತಿಯೊಂದು ಸೋಮವಾರ ಸಂಜೆ ಹದಿನಾಲ್ಕೋ, ಇಪ್ಪತ್ತಾರೋ ರೂಪಾಯಿಗಳನ್ನು ತಂದುಕೊಟ್ಟು ನಿಶ್ಚಿಂತೆಯಿಂದ ಮರಳುತ್ತಿರುವುದನ್ನು ಗಮನಿಸುವಾಗ ‘ಈ ಮುದುಕಿಗೆ ತಾನು ಕರಸೇವೆಗೆ ಹೋಗಿ ಬಂದದ್ದು ಇನ್ನೂ ಗೊತ್ತಿರಲಿಕ್ಕಿಲ್ಲವೇ?’ ಎಂಬ ಅನುಮಾನ ಹುಟ್ಟುತ್ತಿತ್ತು. “ಪಾಪದ ಹೆಂಗಸು; ದುಡ್ಡು ಮರಳಿ ಕೊಡುವ ಸಂದರ್ಭದಲ್ಲಿ ಒಂದು ನೂರೋ, ಇನ್ನೂರೋ ಜಾಸ್ತಿ ಕೊಡಬೇಕು”, ಎಂದು ಯೋಚಿಸಿ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದ.

ಒಂದು ಸೋಮವಾರ ಸಂಜೆ ಚಂದ್ರಣ್ಣ ಅಂಗಡಿಗೆ ಬಂದಿದ್ದ ಹಿರಿಯರೊಬ್ಬರಿಗೆ ತನ್ನ ಯಾತ್ರೆಯ ಕತೆ ವಿವರಿಸುತ್ತಾ ಡ್ರಾವರಿನೊಳಗೆ ಕಾಗದದಲ್ಲಿ ಸುತ್ತಿ ಇರಿಸಿದ್ದ ಗೋಡೆಯ ತುಂಡನ್ನು ಹೊರತೆಗೆದು, ಇನ್ನೇನು ಪ್ರದರ್ಶಿಸಬೇಕು ಎಂದು ಯೋಚಿಸುತ್ತಿರುವಷ್ಟರಲ್ಲಿ, ಮೆಟ್ಟಲೇರಿ ಬಂದ ರೊಟ್ಟಿಪಾತುಮ್ಮಳನ್ನು ಗಮನಿಸಿ ಹಾವು ತುಳಿದವನಂತೆ ಬೆಚ್ಚಿ ಬಿದ್ದಿದ್ದ! ಆಕೆಯ ಆಗಮನ ಸೋಮವಾರದಂದು ಅನಿರೀಕ್ಷಿತವೇನೂ ಅಲ್ಲ. ಆದರೆ ಆಕೆಯ ಮುಖದಲ್ಲಿ ಎಂದಿನ ನಗು ಕಾಣಿಸದಾದಾಗ ಚಂದ್ರಣ್ಣ ಗಲಿಬಿಲಿಗೊಂಡಿದ್ದ.

ಸಾಮಾನ್ಯವಾಗಿ ಆಕೆ ಅಂಗಡಿಯ ಮೆಟ್ಟಲ ಬಳಿಗೆ ತಲುಪಿದವಳೇ ಮೃದುವಾದ ಸ್ವರವೆಬ್ಬಿಸಿ ಕೆಮ್ಮಿ ಗಮನ ಸೆಳೆಯುವವಳು. ಆದರೆ ಇಂದು ಮಾತ್ರ ಅಂಗಡಿಯ ಮಂಡದ ಬಳಿಗೇ ತಲುಪಿದ್ದಾಳೆ; ಅಂದ ಮೇಲೆ ತಾನು ಆಡಿದ್ದ ಮಾತೆಲ್ಲ ಅವಳಿಗೂ ಕೇಳಿಸಿದ್ದಿರಬಹುದು. ತನ್ನ ಬಳಿ ‘ಗೋಡೆಯ ತುಂಡು’ ಇರುವುದೂ ಅವಳಿಗೆ ಗೊತ್ತಾಗಿದ್ದಿರಬಹುದು. ಅನುಮಾನದಿಂದಲೇ ಅವಳ ಕಣ್ಣುಗಳನ್ನೆದುರಿಸಿದ.

“ಈ ವಾರ ದುಡ್ಡು ಉಳಿಸಲಾಗಲಿಲ್ಲ. ರೊಟ್ಟಿ ಮಾಡುವ ಮಣೆ ತುಂಡಾಗಿ ಹೋಗಿದೆ. ಅದನ್ನು ರಿಪೇರಿ ಮಾಡಿಸಬೇಕು. ಹಾಗಾಗಿ ನೀವು ನನ್ನನ್ನು ಕಾಯುವುದು ಬೇಡ ಅಂತ ಹೇಳಿ ಹೋಗಲು ಬಂದೆ. ಮುಂದಿನ ಸೋಮವಾರ ಬರುತ್ತೇನೆ” ಎಂದು ಸೋತ ಸ್ವರದಲ್ಲಿ ಹೇಳಿದ ರೊಟ್ಟಿ ಪಾತುಮ್ಮ ಹೊರಟು ಹೋದಾಗ ಚಂದ್ರಣ್ಣ ಅವಕ್ಕಾಗಿದ್ದ. ತನ್ನ ಅನುಮಾನದ ಬಗ್ಗೆ ತಾನೇ ನಾಚಿಕೊಂಡ.
ತನ್ನ ಸಾಹಸದ ಕತೆಯ ಅಂತಿಮ ಹಂತವನ್ನು ಕಣ್ಣಾರೆ ಕಾಣಲು ಕಾತರಿಸಿ ಕುಳಿತಿದ್ದ ಹಿರಿಯರತ್ತ ತಿರುಗಿದ ಚಂದ್ರಣ್ಣ, ಡ್ರಾವರ್ ಹುಡುಕಿದಂತೆ ನಟಿಸಿ, “ಓಹ್! ನಾನು ಮರೆತೇ ಬಿಟ್ಟಿದ್ದೆ. ಈಗ ಆ ತುಂಡು ಮನೆಯಲ್ಲಿದೆ. ಕಳೆದ ವಾರ ಒಬ್ಬರಿಗೆ ತೋರಿಸಲೆಂದು ಕೊಂಡು ಹೋದದ್ದನ್ನು ವಾಪಾಸು ತಂದೇ ಇಲ್ಲ. ನಿಮಗೆ ಇನ್ನೊಮ್ಮೆ ತೋರಿಸುತ್ತೇನೆ” ಎಂದು ಹೇಳಿದವನು ಬಂದವರನ್ನು ಸಾಗ ಹಾಕಿದ.

ಅವರು ಹೊರಟು ಹೋಗುವುದನ್ನೇ ಕಾಯುತ್ತಿದ್ದವನಂತೆ, ಪಕ್ಕದಲ್ಲಿ ಕೂತಿದ್ದ ಕೇಶವಾಚಾರ್ಯ ‘ಪಕಪಕ’ನೆ ಸ್ವರವೆಬ್ಬಿಸಿ ನಕ್ಕ. ಅಣ್ಣನ ನಗುವಿನ ಕಾರಣ ಚಂದ್ರಣ್ಣನಿಗೂ ಅರ್ಥವಾಗಿ ಅವನಿಗೂ ನಗು ಉಕ್ಕಿತು. ಗೋಡೆಯ ತುಂಡನ್ನು ಮನೆಯಲ್ಲಿ ಇಟ್ಟುಕೊಳ್ಳಲಾಗದಂತಹ ಒಂದು ಘಟನೆ ನಡೆದದ್ದು ಅವರಿಬ್ಬರ ನಗುವಿಗೆ ಕಾರಣವಾಗಿತ್ತು.

ರಾಮದಾಸ ಕಿಣಿಯವರಿಗೆ ಗೋಡೆಯ ತುಂಡೊಂದನ್ನು ಉಡುಗೊರೆಯಾಗಿ ಕೊಟ್ಟ ದಿನ-ಅಂದು ಭಾನುವಾರದ ರಜ-ಮಧ್ಯಾಹ್ನ ಚಂದ್ರಣ್ಣ ತನ್ನ ಪಾಲಿನ ಗೋಡೆಯ ತುಂಡನ್ನು ಎಲ್ಲಿಡುವುದೆಂಬುದನ್ನು ನಿಖರವಾಗಿ ನಿರ್ಧರಿಸಲಾಗದೆ ದೇವರ ಕೋಣೆಯಲ್ಲಿದ್ದ ಊದುಗಡ್ಡಿ ಸ್ಟೂಲ್‌ನ ಮೇಲೆ ಇಟ್ಟುಬಿಟ್ಟಿದ್ದೇ ಅನಾಹುತಕ್ಕೆ ಹೇತುವಾಗಿತ್ತು.

ಸಂಜೆಯ ಹೊತ್ತಿಗೆ ದೇವರ ಕೋಣೆಗೆ ಹೋಗಿದ್ದ ಅತ್ತೆ- ತಂದೆಯ ಅಕ್ಕ- ದೇವರಿಗೆ ಊದುಗಡ್ಡಿ ಹಚ್ಚುವಾಗ ಸ್ಟೂಲಿನ ಮೇಲಿದ್ದ ಕಲ್ಲನ್ನು ಕಂಡು ಕುತೂಹಲದಿಂದ ಅದನ್ನೆತ್ತಿ ಕೊಂಡೇ ಹೊರಗೆ ಬಂದವರು, ಬಾಗಿಲ ಬಳಿಯೇ ಎದುರಾದ ಕೇಶವಾಚಾರ್ಯನಿಗೆ ಅದನ್ನು ತೋರಿಸುತ್ತಾ “ಇದೆಂಥದ್ದೋ ಕಲ್ಲು? ಅಥವಾ ಇದು ಲೋಬಾನದ ಗಟ್ಟಿಯೋ?” ಎಂದು ಪ್ರಶ್ನಿಸಿದ್ದರು.

“ಇದು ನಮ್ಮ ಚಂದ್ರಣ್ಣನಿಗೆ ಡೆಲ್ಲಿಯಲ್ಲಿ ಸಿಕ್ಕ ಮೆಡಲು” ಎಂದು ನಕ್ಕ ಕೇಶವಾಚಾರ್ಯ ಹೊರಗೆ ಚಾವಡಿಯಲ್ಲಿ ಟೇಪ್‌ರೆಕಾರ್ಡ್ ಆಲಿಸುತ್ತಿದ್ದ ಚಂದ್ರಣ್ಣನನ್ನು ಕೂಗಿ ಕರೆದು, “ನೋಡು ಚಂದ್ರು, ನಿನ್ನ ಅತ್ತೆಗೆ ನಿನ್ನ ಕಲ್ಲಿನ ಮಹಾತ್ಮೆ ವಿವರಿಸಬೇಕಂತೆ” ಎಂದ.

ಆದಷ್ಟೂ ಹೊತ್ತು ಕಲ್ಲಿನ ತುಂಡನ್ನು ಅತ್ತಿತ್ತ ತಿರುಗಿಸಿ ಪರೀಕ್ಷಿಸುತ್ತಿದ್ದ ಅತ್ತೆ, ಚಂದ್ರಣ್ಣ ಹತ್ತಿರ ಬಂದ ಕೂಡಲೇ, “ಎಂಥಾ ಕಲ್ಲು ಇದು?” “ದೇವರ ಕೋಣೆಯಲ್ಲಿ ಯಾಕೆ ಇಟ್ಟದ್ದು?” ಎಂದು ಪ್ರಶ್ನಿಸಿದ್ದರು.

ಒಂದು ಕ್ಷಣ ಗಲಿಬಿಲಿಗೊಂಡರೂ, ಕೂಡಲೇ ಸಾವರಿಸಿಕೊಂಡು, ಅದೇನೂ ಅಂತಹಾ ವಿಶೇಷ ಸಂಗತಿಯಲ್ಲ ಎನ್ನುವ ಸ್ವರದಲ್ಲಿ, “ಓ...ಅದಾ? ಅದು ನಾನವತ್ತು ಹೋಗಿ ಬಂದೆ ನೋಡು. ಅಲ್ಲಿಂದ ತಂದದ್ದು. ಗೋಡೆ ಒಡೆದದ್ದರ ನೆನಪಿಗೆ ಇರಲಿ ಅಂತ” ಎಂದು ಉತ್ತರಿಸಿದ.

ಅತ್ತೆಯವರ ಮುಖ ಹೇಲು ತುಳಿದವರಂತೆ ಕಿವಿಚಿಕೊಂಡಿತು. “ಅಯ್ಯೋ ರಾಮ, ರಾಮಾ..,ಅವರ ಮಸೀದಿಯ ಕಲ್ಲಿನ ತುಂಡನ್ನು ದೇವರ ಕೋಣೆಯಲ್ಲಿ ಯಾರಾದರೂ ಇಡುತ್ತಾರಾ? ನಿನಗೆ ತಲೆ ಸರಿ ಉಂಟಾ ಇಲ್ವಾ?” ಎಂದು ಕೀರಲು ಧ್ವನಿಯಲ್ಲಿ ಆಕ್ಷೇಪಿಸುತ್ತಾ ಗೋಡೆಯ ತುಂಡನ್ನು ಚಂದ್ರಣ್ಣನ ಕೈಗೆ ಹಾಕಿ “ಈ ಅನಿಷ್ಟದ ಕಲ್ಲನ್ನು ಎಲ್ಲಾದ್ರೂ ದೂರ ಬಾವಿಗೆ ಬಿಸಾಡಿ ಸ್ನಾನ ಮಾಡ್ಕೊಂಡು ಒಳಗೆ ಬಾ” ಎಂದು ಆದೇಶವಿತ್ತರು.

ಚಂದ್ರಣ್ಣನ ಮುಖ ಇಂಗು ತಿಂದ ಮಂಗನ ಹಾಗಾಯಿತು. ಸಾಹಸಯಾತ್ರೆಯ ಉತ್ಸಾಹವೆಲ್ಲವು ನೀರಾಗಿ ಬಿಟ್ಟಿತ್ತು. ಆದರೂ ಅತ್ತೆಯವರನ್ನು ಸಮಾಧಾನ ಪಡಿಸುವ ಆಸೆಯಿಂದ, ‘ಹಾಗಲ್ಲ ಅತ್ತೆ, ಇದು ನಿಜವಾಗಿಯೂ ನಮ್ಮ ಹಳೆಯ ದೇವಸ್ಥಾನದ ತುಂಡು’ ಎಂದುಬಿಟ್ಟ.

ಅತ್ತೆ ಮುಖ ಇದ್ದಕ್ಕಿದ್ದಂತೆ ಬಿಳುಚಿಕೊಂಡಿತು. ಆಕಾಶವೇ ಮೈಮೇಲೆ ಬಿದ್ದವರಂತೆ ಹಣೆಗೆ ಬಡಿದುಕೊಳ್ಳುತ್ತಾ, “ಅಯ್ಯಯ್ಯೋ! ಈ ಚಂದ್ರು ಎಂಥದ್ದು ಹೇಳ್ತಾ ಇರುವುದು?! ಹಾಗಾದರೆ ಅಷ್ಟೆಲ್ಲ ಸಂಭ್ರಮದಿಂದ ನೀವೆಲ್ಲ ಹೊರಟು ಹೋಗಿ ಕೊನೆಗೆ ಒಡೆದು ಹಾಕಿದ್ದು ನಮ್ಮದೇ ದೇವಸ್ಥಾನವನ್ನು ?” ಅತ್ತೆಯವರು ಎದುರಿಟ್ಟ ಹೊಸಬಗೆಯ ಪ್ರಶ್ನೆಯಿಂದ ಗಾಬರಿಗೊಂಡ ಚಂದ್ರಣ್ಣ, ಸಹಾಯಕ್ಕಾಗಿ ಅಣ್ಣನತ್ತ ಕಣ್ಣು ಹಾಯಿಸಿದರೆ, ಕೇಶವಾಚಾರ್ಯ ಬಾಯಿಗಡ್ಡ ಕೈ ಹಿಡಿದುಕೊಂಡು ನಗುತ್ತಿದ್ದ.

ಐದು

‘ಅಹ್ಮದ್ ಬಾವಾ ಬೆಹರಿನ್‌ನಿಂದ ಬಂದಿದ್ದಾನಂತೆ, ಗೊತ್ತುಂಟಾ?’ ಬಳೆಯೊಂದಕ್ಕೆ ಅರದಿಂದ ತಿಕ್ಕಿ ಪಾಲೀಶು ಮಾಡುತ್ತಿದ್ದ ಕೇಶವಚಾರ್ಯ ತನ್ನ ತಮ್ಮನ ಪ್ರಶ್ನೆಯಿಂದ ಅಚ್ಚರಿಗೊಂಡು, ‘ಹೌದಾ! ಯಾವಾಗ ಬಂದದ್ದಂತೆ?’ ಎಂದು ಮರುಪ್ರಶ್ನೆ ಹಾಕಿದ.
‘ನನಗವನು ಮಾತಾಡಲು ಸಿಗಲಿಲ್ಲ. ಕಳೆದ ವಾರ ಬಸ್‌ಸ್ಟಾಂಡ್ ಹತ್ರ ರಿಕ್ಷಾ ಹತ್ತುವುದನ್ನು ನೋಡಿದೆ’ ಎಂದ ಚಂದ್ರಣ್ಣ.

‘ಹೌದಾ! ಒಂದು ವಾರದ ಹಿಂದೆಯಾ!’ ಎಂದು ಉದ್ಗರಿಸಿದ ಕೇಶವಾಚಾರ್ಯ ಬಳಿಕ ಅನುಮಾನಿಸುವವನಂತೆ, ‘ಹಾಗಾದರೆ ಅಂಗಡಿಗೆ ಯಾಕೆ ಬರಲಿಲ್ಲ?’ ಎಂದು ಪ್ರಶ್ನಿಸಿದ.

‘ನಾನೂ ಅದನ್ನೇ ಕೇಳಬೇಕೆಂದಿದ್ದೆ. ಈ ಹಿಂದೆಯೆಲ್ಲ ವರ್ಷ ವರ್ಷ ಊರಿಗೆ ಬರುತ್ತಿದ್ದವನು, ಬಂದಾಗಲೆಲ್ಲ ಮರುದಿನವೇ ಅಂಗಡಿಗೆ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದನಲ್ಲಾ? ಈ ಸಲ ಯಾಕೆ ತಪ್ಪಿಸಿದಾ?’ ಎಂದ ಚಂದ್ರಣ್ಣ, ಬೇರೇನೋ ಮಾತು ಜೋಡಿಸಬೇಕೆಂದು ಬಾಯಿ ತೆರೆದವನು ಸುಮ್ಮನಾದ.

‘ಏನೋ ಅರ್ಜೆಂಟ್ ಕೆಲಸವಿದ್ದಿರಬಹುದು. ಅದಕ್ಕೇ ಬರಲಾಗಿದ್ದಿರಲಿಕ್ಕಿಲ್ಲ. ಕೇಶವಾಚಾರ್ಯ ತನಗೆ ತಾನೇ ಸಮಾಧಾನ ಮಾಡಿಕೊಳ್ಳುವವನಂತೆ ಹೇಳಿದ.’

ಚಂದ್ರಣ್ಣ ಮೌನ ಮುರಿಯಲಿಲ್ಲ.

ಕೇಶವಾಚಾರ್ಯನೇ ಮಾತು ಮುಂದುವರಿಸಿದ, ‘ಪುನಃ ಬೆಹರೀನ್‌ಗೆ ಹೋಗುವ ಮೊದಲು ಬರಲಿಕ್ಕೆ ಸಾಕು.’

‘ನನಗೇನೋ ಅವನು ಬಂದು ನಿನ್ನನ್ನು ಕಾಣುತ್ತಾನೆಂಬ ನಂಬಿಕೆಯಿಲ್ಲ. ಬರುವವನಾಗಿರುತ್ತಿದ್ದರೆ ಇದಕ್ಕೆ ಮೊದಲೇ ಬರುತ್ತಿದ್ದ.’ ಚಂದ್ರಣ್ಣ ಎಲ್ಲ ತಿಳಿದವನಂತೆ ಗಂಭಿರವಾಗಿ ಹೇಳಿದ್ದ.

‘ಯಾಕೆ ಹಾಗಂತೀಯಾ? ಕಳೆದ ಸುಮಾರು ಮೂವತ್ತು ವರ್ಷಗಳಿಂದ ನನಗವನು ಗೊತ್ತುಂಟು. ಒಟ್ಟಿಗೆ ಆಡಿ ಬೆಳೆದವರು ನಾವು. ನಾನು ಕಟ್ಟಿಕೊಂಡಿರುವ ಈ ವಾಚು ಕೂಡಾ ಅವನೇ ತಂದುಕೊಟ್ಟಿದ್ದು. ನಾನೇನು ಅವನಿಗೆ ದುಡ್ಡು ಕೊಟ್ಟಿದ್ದೇನಾ? ಏನೋ ಕೆಲಸ ಇದ್ದಿರಬಹುದು. ಹಾಗಾಗಿ ಬರಲಿಕ್ಕೆ ಪುರುಸೊತ್ತು ಸಿಕ್ಕಿದ್ದಿರಲಿಕ್ಕಿಲ್ಲ.’ ಕೇಶವಾಚಾರ್ಯ ಚಂದ್ರಣ್ಣನ ಮುಖದತ್ತ ಕಣ್ಣುನೆಟ್ಟು ಹೇಳಿದ.
‘ನನಗೇಕೋ ಅನುಮಾನವೇ’ ಚಂದ್ರಣ್ಣ ಚುಟುಕಾಗಿ ಹೇಳಿದ.

‘ಅನುಮಾನ ಏಕೆ?! ನೀನೊಬ್ಬ ಕರಸೇವೆಗೆ ಹೋಗಿಬಂದ ಅಂತ ಅವ್ನು ನನ್ನ ಸ್ನೇಹ ಬಿಟ್ಟುಬಿಡ್ತಾನಾ? ಅವನು ಅಂಥವನಲ್ಲ. ನಿನUಗ ಪ್ರತಿಯೊಂದರಲ್ಲೂ ಅನುಮಾನ ಸುರುವಾಗಿದೆ. ಅಂಗಡಿಗೆ ಅವರ ಪೈಕಿ ಯಾರಾದರೂ ಬಂದರೆ ಅಗತ್ಯಕ್ಕಿಂತ ಹೆಚ್ಚೇ ಉಪಚಾರ ಮಾಡ್ತೀಯ. ಮಜೂರಿ ಹೇಳುವಾಗ ಒಂದೆರಡು ರೂಪಾಯಿ ಕಡಿಮೆಯೇ ಹೇಳ್ತೀಯ. ಯಾಕೆ? ಏನಾಗಿದೆ ನಿನ್ಗೆ?! ಏನೋ ಮಹಾ ಅಪರಾಧ ಮಾಡಿದವರ ಹಾಗೆ ಒದ್ದಾಡ್ತಿದ್ದೀಯಲ್ಲಾ? ಇಷ್ಟೆಲ್ಲ ಯೋಚನೆ ಮಾಡುವವನು ಅವತ್ತು ಹೋದದ್ದು ಯಾಕೆ? ಈಗ ಹೋಗಿ ಬಂದು ಆಗಿದೆ. ಈಗ ಆ ಬಗ್ಗೆ ಮಂಡೆ ಬಿಸಿ ಮಾಡುವುದು ಯಾಕೆ? ಒಂದು ವೇಳೆ ನೀನು ಹೇಳಿದ್ದೇ ನಿಜವಾಗಿ, ಅವನು ನಮ್ಮ ಅಂಗಡಿ ಕಡೆಗೆ ತಲೆ ಹಾಕಲಿಲ್ಲ ಅಂತಲೇ ಇಟ್ಕೋ; ಏನಾಯ್ತು ಅದರಿಂದ? ಏನು ನಷ್ಟವಾಗ್ತದೆ? ಇಷ್ಟೆಲ್ಲ ಅನುಮಾನಿಸುವ ನೀನು ಈ ಕಲ್ಲಿನ ತುಂಡನ್ನು ಇಟ್ಟುಕೊಂಡು ಬಂದ ಬಂದವರಲ್ಲೆಲ್ಲ ಜಂಭ ಕೊಚ್ಚುವುದು ಯಾಕೆ? ಅತ್ತೆಯವರು ಹೇಳಿದ ಹಾಗೆ ಅದನ್ನು ಎತ್ತಿಕೊಂಡು ಹೋಗಿ ಯಾವುದಾದರೂ ಒಂದು ಬಾವಿಗೆ ಬಿಸಾಡಿ ಬರಬಾರದಾ?’ ಕೇಶವಾಚಾರ್ಯ ಪ್ರಶ್ನೆಗಳ ಗೊಂಚಲನ್ನೇ ಚಂದ್ರಣ್ಣನತ್ತ ಎಸೆದಿದ್ದ.

ಚಂದ್ರಣ್ಣ ಉತ್ತರಿಸಲೂ ಪ್ರಯತ್ನಿಸಲಿಲ್ಲ.

ಸ್ವಲಹೊತ್ತು ಇಬ್ಬರೂ ಮೌನವಾಗಿ ತಮ್ಮ ಕೆಲಸ ಮುಂದುವರಿಸಿದರು.

‘ಈವತ್ತು ಮಧ್ಯಾಹ್ನ ನೀನು ಊಟಕ್ಕೆ ಹೋಗಿದ್ದಾಗ ರೊಟ್ಟಿ ಪಾತುಮ್ಮ ಬಂದಿದ್ದಳು.’ ಚಂದ್ರಣ್ಣ ಹೊಸ ವಿಷಯ ಪ್ರಸ್ತಾಪಿಸಿದ್ದ!’
‘ಈವತ್ತು ಬಂದಿದ್ಳಾ?!’ ಈವತ್ತು ಸೋಮವಾರ ಅಲ್ವಲ್ಲಾ? ಎಷ್ಟು ಕೊಟ್ಟಳು ಈವತ್ತು?’ ಕೇಶವಾಚಾರ್ಯ ಕುತೂಹಲ ವ್ಯಕ್ತಪಡಿಸಿದ.
‘ಹಣ ಕೊಡಲು ಬಂದದ್ದಲ್ಲ ಅವಳು; ಹಣ ವಾಪಾಸು ಕೇಳಲು ಬಂದದ್ದು. ನಾಳದು ಶುಕ್ರವಾರದ ಮೊದಲು ಹಣ ಬೇಕಂತೆ. ಶುಕ್ರವಾರ ಮನೆ ಕೆಲಸ ಆರಂಭಿಸ್ತಾಳಂತೆ.’ ಚಂದ್ರಣ್ಣ ಉತ್ತರಿಸಿದ.

‘ಹೌದಾ!’ ಎಂದು ಉದ್ಗರಿಸಿದ ಕೇಶವಾಚಾರ್ಯ, ‘ಒಳ್ಳೆಯದೇ ಆಯ್ತು ಬಿಡು. ನಮಗೂ ಒಂದು ರಗಳೆ ತಪ್ಪಿದ ಹಾಗಾಯಿತು.’ ಎಂದು ಹೇಳಿದ.

‘ಅವಳು ನಿಜವಾಗಿಯೂ ಶುಕ್ರವಾರದಂದು ಮನೆ ಕೆಲಸ ಸುರು ಮಾಡ್ತಾಳಾ?’ ಚಂದ್ರಣ್ಣ ಅನುಮಾನಿಸುತ್ತಲೇ ಪ್ರಶ್ನಿಸಿದ್ದ.

‘ಸುರುವಾಯಿತಲ್ಲ ನಿನ್ನದು?’ ಕೇಶವಾಚಾರ್ಯ ಅಸಹನೆಯಿಂದ ಪ್ರಶ್ನಿಸಿ, ‘ಅವಳು ಮನೆ ಕಟ್ತಾಳೋ ಬಾವಿಗೆ ಬಿಸಾಡ್ತಾಳೋ; ಅದರಿಂದ ನಿನಗೇನು ನಷ್ಟ? ಅವಳ ಹಣ ಅವಳಿಗೆ ಬೇಕಾಗಿದೆ. ಇಷ್ಟು ದಿವಸ ನಮ್ಮ ಮೇಲೆ ನಂಬಿಕೆ ಇಟ್ಟು ಕೊಟ್ಟಿದ್ದಾಳೆ. ಈಗ ವಾಪಾಸು ಬೇಕು ಅಂತ ಕೇಳ್ತಿದ್ದಾಳೆ. ಲೆಖ್ಖ ಮಾಡಿ ಕೊಟ್ಟರಾಯಿತು. ಎಷ್ಟಾಯಿತು ಅಂತ ಟೋಟಲ್ ನೋಡಿದ್ಯಾ?’ ಎಂದು ಚಂದ್ರಣ್ಣನ ಮುಖ ದಿಟ್ಟಿಸಿದ್ದ.

‘ಹೌದು. ನಾಲ್ಕು ಸಾವಿರದ ಇನ್ನೂರ ಎಂಭತ್ತೆರಡು ರೂಪಾಯಿ ಆಗಿದೆ. ನಾಳೆ ಸಂಜೆಗೆ ಬರಲಿಕ್ಕೆ ಹೇಳಿದ್ದೇನೆ. ನಾಳೆ ಬೆಳಗ್ಗೆ ಬ್ಯಾಂಕ್‌ನಿಂದ ಕ್ಯಾಷ್ ತರಬೇಕಾದೀತು’ ಚಂದ್ರಣ್ಣ ಉತ್ತರಿಸಿದ.

‘ಸರಿ, ಹಾಗೇ ಮಾಡು. ಹಣ ಕೊಡುವಾಗ ಒಂದು ಇನ್ನೂರು ರೂಪಾಯಿ ನಮ್ಮ ಪಾಲಿನದ್ದು ಅಂತ ಸೇರಿಸಿ ಕೊಡು. ಆಗಲಿಕ್ಕಿಲ್ವಾ?’ ಕೇಶವಾಚಾರ್ಯ ಪ್ರಶ್ನಿಸಿದಾಗ ಚಂದ್ರಣ್ಣ, ‘ನಾನೂ ಹಾಗೇ ಯೋಚನೆ ಮಾಡಿದ್ದೇನೆ. ಬಡ್ಡಿ ಹಣ ಅಂತ ಲೆಖ್ಖ ಮಾಡಿದ್ರೂ ಐನೂರು ಆರುನೂರು ರೂಪಾಯಿ ಆಗಬಹುದು’ಎಂದು ಹೇಳಿದ.

ಕೇಶವಾಚಾರ್ಯ ತನ್ನ ಕೆಲಸದಲ್ಲಿ ಮುಳುಗಿದ.

ಸ್ವಲ್ಪ ಹೊತ್ತು ಬಿಟ್ಟು ಚಂದ್ರಣ್ಣ ಪುನಃ ಪ್ರಶ್ನಿಸಿದ, ‘ನಾಳೆ ಅವಳು ದುಡ್ಡುಕೊಂಡು ಹೋಗಲು ಬಂದಾಗ, ಅವಳಿಗೆ ನಾನು ಕರಸೇವೆಗೆ ಹೋಗಿ ಬಂದದ್ದು ಗೊತ್ತುಂಟಾ ಅಂತ ವಿಚಾರಿಸಿದರೆ ಹೇಗೆ?’

‘ಅವಳು, ಹೌದು ಗೊತ್ತುಂಟು, ಎಂದರೆ ಏನು ಮಾಡ್ತಿ?’ ಚಾಟಿಯಿಂದ ಹೊಡೆದಂತೆ ಕೇಶವಾಚಾರ್ಯ ಪ್ರಶ್ನಿಸಿದ್ದ.

ರೊಟ್ಟಿ ಪಾತುಮ್ಮ ಹಣ ಮರಳಿ ಬಯಸಿದ್ದ ಸಂಗತಿಯನ್ನು ರಾತ್ರಿ ಊಟದ ನಡುವೆ ಚಂದ್ರಣ್ಣ ತಂದೆಗೆ ತಿಳಿಸಿದಾಗ ಅವರು, ‘ಅಯ್ಯೋ ಪಾಪ. ಇಷ್ಟು ವರ್ಷ ನಮ್ಮ ಅಂಗಡಿ ಮೇಲೆ ನಂಬಿಕೆ ಇಟ್ಟು ಹಣ ಉಳಿಸಿದಳಲ್ಲ! ಒಂದು ದಿನವಾದರೂ ಒಟ್ಟು ಹಣ ಎಷ್ಟಾಗಿದೆಯೆಂಬುದನ್ನೂ ವಿಚಾರಿಸಲಿಲ್ಲ’ ಎಂದು ರೊಟ್ಟಿ ಪಾತುಮ್ಮಳನ್ನು ಮೆಚ್ಚಿಕೊಂಡು, ಬಳಿಕ ಏನನ್ನೋ ನಿರ್ಧರಿಸಿದವರಂತೆ, ‘ಚಂದ್ರು, ಒಂದು ಕೆಲಸ ಮಾಡು. ನಾಳೆ ಅವಳ ಲೆಕ್ಖಾಚಾರ ಸೆಟಲ್ ಮಾಡಿದ ಬಳಿಕ ನಮ್ಮ ಲೆಖ್ಖದ್ದು ಅಂತ ಒಂದು ಐನೂರು ರೂಪಾಯಿ ಬೇರೆಯೇ ಕೊಟ್ಟುಬಿಡು. ಅಂದ ಹಾಗೆ ಬಡ್ಡಿ ಹಣ, ಹಾಗೆ-ಹೀಗೆ ಅಂತ ಹೇಳಲು ಹೋಗಬೇಡ. ಆ ಜಾತಿ ಮಂದಿ ಬಡ್ಡಿ ಹಣ ತೆಗೆದುಕೊಳ್ಳಬಾರದಂತೆ. ಮನೆ ಕಟ್ಟಿಸುವವಳಿಗೆ ನಮ್ಮದೂ ಒಂದು ಸಹಾಯ ಅಂತ ಇರಲಿ’ ಎಂದರು.

‘ತಾನೂ ಹಾಗೆಯೇ ಮಾಡಲು ನಿರ್ಧರಿಸಿದ್ದೆ’ ಎಂಬ ಮಾತು ತುಟಿಯವರೆಗೆ ಬಂದರೂ ಚಂದ್ರಣ್ಣ ಮೌನವಾಗಿ ತಲೆಯಾಡಿಸಿದ. ತಾನು ಕರಸೇವೆಗೆ ಹೋಗಿ ಬಂದದ್ದನ್ನು ತಿಳಿದು, ಬೇಸರವಾಗಿ ಆಕೆ ದುಡ್ಡು ಮರಳಿ ಕೇಳಿರಬಹುದೇ? ಎಂಬ ಪ್ರಶ್ನೆಯನ್ನು ತಂದೆಯವರಲ್ಲಿ ಕೇಳುವುದೇ ಬೇಡವೇ ಎಂಬುದನ್ನು ನಿರ್ಧರಿಸಲಾಗದೆ ಚಡಪಡಿಸುತ್ತಾ ಅಣ್ಣ ಕೇಶವಾಚಾರ್ಯನತ್ತ ಕಣ್ಣು ಹಾಯಿಸಿದಾಗ, ಆತ ‘ಸುಮ್ಮನಿರು’ ಎಂದು ಕಣ್ಣಲ್ಲೇ ಸೂಚನೆ ದಾಟಿಸಿದ್ದ.

ಮರುದಿನ ಮುಂಜಾನೆಯೇ ಬಂಟ್ವಾಳದ ಪಾರ್ಟಿಯೊಂದು ಏಳೆಂಟು ಸಾವಿರದ ಕ್ಯಾಷ್ ವ್ಯವಹಾರ ಮಾಡಿ ಹೋದುದರಿಂದಾಗಿ ಬ್ಯಾಂಕಿನಿಂದ ಹಣ ಡ್ರಾ ಮಾಡಿ ತರುವ ಅಗತ್ಯ ಬೀಳಲಿಲ್ಲ.

ಮಧ್ಯಾಹ್ನದ ಊಟದ ಬಳಿಕ ಚಂದ್ರಣ್ಣ ಖಾತೆ ಪುಸ್ತಕ ಹೊರತೆಗೆದು ರೊಟ್ಟಿ ಪಾತುಮ್ಮಳ ಒಟ್ಟು ಉಳಿತಾಯವನ್ನು ಮತ್ತೊಮ್ಮೆ ಟೋಟಲ್ ಮಾಡಿದ. ನಿನ್ನೆ ಮಾಡಿದ ಟೋಟಲ್‌ಗಿಂತ ಹದಿನೇಳು ರೂಪಾಯಿ ಕಡಿಮೆ ಟೋಟಲ್ ಬಂತು. ಮತ್ತೊಮ್ಮೆ ‘ಟೋಟಲ್’ ಮಾಡತೊಡಗಿದ; ಅರ್ಧ ‘ಟೋಟಲ್’ ಮಾಡುವಷ್ಟರಲ್ಲಿ ಬೇಸರವಾಗಿ ಖಾತೆ ಪುಸ್ತಕ ಮಡಚಿಟ್ಟ. ನಿನ್ನೆ ಕೂಡುವಾಗ ಬಂದ ಮೊತ್ತವನ್ನೇ ‘ಫೈನಲ್ ಟೋಟಲ್’ ಅಂತ ಕಾಗದದ ಚೂರೊಂದರಲ್ಲಿ ಬರೆದು ತಿಜೋರಿಯಿಂದ ಹಣ ತೆಗೆದು ಎಣಿಸಿ ರಬ್ಬರ್ ಬ್ಯಾಂಡ್ ಹಾಕಿಟ್ಟ. ಬೇರೆಯೇ ಆಗಿ ಐನೂರು ರೂಪಾಯಿಗಳನ್ನು ಎಣಿಸಿ ಮತ್ತೊಂದು ರಬ್ಬರ್ ಬ್ಯಾಂಡ್ ಹಾಕಿದ. ರೂಪಾಯಿ ನೋಟುಗಳ ಎರಡೂ ಕಂತೆಗಳನ್ನು ಲಕೋಟೆಯೊಂದರೊಳಗೆ ಸೇರಿಸಿ ಇನ್ನೊಂದು ರಬ್ಬರ್ ಬ್ಯಾಂಡ್ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಕುಳಿತ.

ಯಾವುದೇ ಕೆಲಸದಲ್ಲಿ ಆಸಕ್ತಿಯಿಲ್ಲದವನಂತೆ ರಸ್ತೆ ನೋಡುತ್ತಾ ಕುಳಿತ ಚಂದ್ರಣ್ಣನತ್ತ ಅನುಕಂಪದ ನೋಟ ಬೀರಿದ ಕೇಶವಾಚಾರ್ಯ, ‘ಸಂಜೆ ತಂದೆಯವರು ಬರ‍್ತಾರಂತೆ. ಆ ಹೆಂಗಸು ಬಂದಾಗ ಅವರಿದ್ದು, ಅವರ ಕೈಯಿಂದಲೇ ದುಡ್ಡು ಕೊಟ್ಟರೆ ಒಳ್ಳೆಯದಲ್ವಾ?’ ಎಂದು ಪ್ರಶ್ನಿಸಿದ.

ಚಂದ್ರಣ್ಣ ಹೌದು ಎಂಬಂತೆ ತಲೆಯಾಡಿಸಿದ. ಅಣ್ಣನತ್ತ ತಿರುಗಿಯೂ ನೋಡಲಿಲ್ಲ.

ಅರ್ಧ ತಾಸು ಕಳೆಯಿತು. ತಮ್ಮನತ್ತ ಕಡೆಗಣ್ಣ ನೋಟ ಇಟ್ಟುಕೊಂಡೇ ತನ್ನ ಕೆಲಸ ಮುಂದುವರಿಸಿದ್ದ ಕೇಶವಾಚಾರ್ಯ, ಡ್ರಾವರಿನ ಒಳಗೆ ಇರಿಸಿದ್ದ ಗೋಡೆಯ ತುಂಡನ್ನು ಹೊರತೆಗೆದು ಪ್ಯಾಂಟಿನ ಜೇಬಿನೊಳಗೆ ಸೇರಿಸಿಕೊಂಡು ಚಂದ್ರಣ್ಣ ಎದ್ದು ನಿಂತಾಗ ಗಾಬರಿಗೊಂಡು, ‘ಯಾಕೆ?!’ ಎಲ್ಲಿ ಹೊರಟೆ?’ ಎಂದು ಪ್ರಶ್ನಿಸಿದ.

‘ಆ ಮುದುಕಿಯ ಹಣ ಮತ್ತು ತಂದೆಯವರು ಕೊಡಲು ಹೇಳಿದ್ದ ಪ್ರತ್ಯೇಕ ಐನೂರು ರೂಪಾಯಿ- ಎರಡನ್ನೂ ಬೇರೆ ಬೇರೆ ಕಟ್ಟಿ ಕವರ್‌ನಲ್ಲಿ ಹಾಕಿಟ್ಟಿದ್ದೇನೆ. ಒಂದು ವೇಳೆ ನಾನಿಲ್ಲದಾಗ ಅವಳು ಬಂದ್ರೆ ಕೊಟ್ಟುಬಿಡು. ಒಂದು ವೇಳೆ ತಂದೆಯವರೇ ಅಂಗಡಿಗೆ ಬಂದ್ರೆ ಒಳ್ಳೆಯದೇ ಆಯ್ತಲ್ವಾ?’ ಎನ್ನುತ್ತಾ ಹೊರಟ.

‘ನೀನೀಗ ಎಲ್ಲಿಗೆ ಹೋಗ್ತಾ ಇದ್ದೀಯಾ?’ ಕೇಶವಾಚಾರ್ಯನ ಪ್ರಶ್ನೆಯಲ್ಲಿ ಬರಿಯ ವಿಚಾರಣೆಯಿದ್ದಿರಲಿಲ್ಲ; ಹೋಗಬೇಡ ಎಂಬ ಸೂಚನೆಯಿತ್ತು.

ಹೇಳುವುದೇ, ಹೇಳದಿರುವುದೇ ಎಂಬುದನ್ನು ನಿರ್ಧರಿಸುವವನಂತೆ ಅರೆಕ್ಷಣ ತಡೆದು, ‘ಒಮ್ಮೆ ರಾಮದಾಸ ಕಿಣಿಯವರನ್ನು ಕಂಡು ಅವರ ಲೆಖ್ಖಾಚಾರವನ್ನೂ ಚುಕ್ತಾ ಮಾಡಬೇಕಿತ್ತು.’ ಎಂದಷ್ಟೇ ಹೇಳಿದ ಚಂದ್ರಣ್ಣ, ಅಣ್ಣ ಮತ್ತೊಂದು ಪ್ರಶ್ನೆಯನ್ನು ಎಸೆಯುವ ಮುನ್ನವೇ ಮೆಟ್ಟಲಿಳಿದು, ಸೈಕಲೇರಿದ್ದ.

‘ಕಲ್ಪನಾ ಸಾರಿ ಸೆಂಟರ್’ನ ಹೊರಗೆ ಸೈಕಲ್ ನಿಲ್ಲಿಸಿದ ಚಂದ್ರಣ್ಣ ಮೆಟ್ಟಲೇರುತ್ತಿರುವಂತೆಯೇ ಸ್ವಾಗತಿಸಿದ ಸೇಲ್ಸ್‌ಮನ್ ಗೋಪಾಲಣ್ಣ. ‘ಊಟಕ್ಕೆಂದು ಮನೆಗೆ ಹೋದವರು ಇನ್ನೂ ಬಂದಿಲ್ಲ. ಹೋಗುವಾಗ್ಲೇ ಸ್ವಲ್ಪ ಜ್ವರ ಬರ‍್ತಾ ಉಂಟು ಹೇಳ್ತಾ ಇದ್ರು, ಇನ್ನು ಈವತ್ತು ಬರುವುದಿಲ್ವೋ ಏನೋ.’ ಎಂದು ಅನುಮಾನ ವ್ಯಕ್ತಪಡಿಸಿದ.

ಚಂದ್ರಣ್ಣ ಸೈಕಲೇರಿ ರಾಮದಾಸ ಕಣಿಯವರ ಮನೆಯ ದಾರಿಯಲ್ಲಿ ತುಳಿದ.
ಗುಡ್ಡೆ ಶಾಲೆಯ ತಿರುವಿನಲ್ಲಿದ್ದ ಸರಕಾರಿ ಬಾವಿ ಬಳಿ ತಲುಪಿದಾಗ ಒಮ್ಮಿಂದೊಮ್ಮೆಗೆ ಬಾಲ್ಯ ನೆನಪಾಯಿತು.

ಬಾವಿಯ ಪಕ್ಕದ ಗುಡ್ಡದ ಮೇಲಿರುವ ಶಾಲೆಯ ಆಟದ ಬಯಲಲ್ಲಿ ಕ್ರಿಕೆಟ್ ಆಡುತ್ತಿರುವಾಗಲೆಲ್ಲ ಚೆಂಡು ಪುಟಿಯುತ್ತಾ ಬಂದು ಬಾವಿಗೆ ಬಿದ್ದರೆ ಅರ್ಧ ತಾಸು ಆಟಕ್ಕೆ ವಿರಾಮ. ಪಕ್ಕದಲ್ಲೇ ಇರುವ ಅದ್ರಾಮ ಬ್ಯಾರಿಯ ಮನೆಯಿಂದ ಹಗ್ಗ-ಬಕೇಟು ತಂದು ಕೊಡುತ್ತಾನೆಂಬ ಏಕೈಕ ಕಾರಣದಿಂದಾಗಿ ಅದ್ರಾಮ ಬ್ಯಾರಿ ಮೊದಲ ಬಾರಿಗೆ ಔಟಾಗುವ ಆಟಗಾರನಾದರೂ ಕ್ಯಾಪ್‌ಟನ್‌ಶಿಪ್ ಗಿಟ್ಟಿಸಿಕೊಳ್ಳುವುದನ್ನು ನೆನಪಿಸಿಕೊಂಡಾಗ ನಗು ಬಂತು. ಆದರೆ ಅದೇ ಅದ್ರಾಮ ಬ್ಯಾರಿ, ಅಪ್ಪ ಹೊಡೆದ ಎಂಬ ಸಿಟ್ಟಿನಿಂದಲೇ ಬಾವಿಗೆ ಹಾರಿ ಸತ್ತು ಹೋದಾಗ ಚಂದ್ರಣ್ಣ ಎಂಟನೇ ಕ್ಲಾಸಿನ ವಿದ್ಯಾರ್ಥಿ. ಕೆಲವು ದಿವಸ ಸಂಜೆಯ ಬಳಿಕ ಸರಕಾರಿ ಬಾವಿಯ ಬಳಿಗೆ ಗೆಳಯರಾರೂ ಹೋಗುತ್ತಿರಲಿಲ್ಲ. ಅದ್ರಾಮ ಬ್ಯಾರಿಯ ಜಾತಿಯವರು ಆತ್ಮಹತ್ಯೆ ಮಾಡಿಕೊಂಡರೂ ಪ್ರೇತವಾಗುವುದಿಲ್ಲ ಎಂಬುದು ಗೊತ್ತಿದ್ದರೂ, ಬಾವಿ ಬಳಿ ಸುಳಿದಾಡಲು ಅಳುಕು. ಈಗ ಅದ್ರಾಮ ಬ್ಯಾರಿ ಬದುಕಿದ್ದರೆ ತನ್ನಷ್ಟೇ ದೊಡ್ಡವನಾಗಿರುತ್ತಿದ್ದ. ತಾನು ಕರಸೇವೆಗೆ ಹೋದ ಬಗ್ಗೆ ಅವನು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದ? ಸ್ನೇಹ ಬಿಡುತ್ತಿದ್ದನೆ?

ಚಂದ್ರಣ್ಣ ಸೈಕಲು ನಿಲ್ಲಿಸಿ ಸ್ಟಾಂಡು ಹಾಕಿದ. ಅಕ್ಟೋಬರದ ದಸರಾ ರಜವಿದ್ದುದರಿಂದ ಶಾಲೆ ಮೌನವಾಗಿ ಮುಚ್ಚಿಕೊಂಡು ಕೂತಿತ್ತು. ಬಾವಿ ಬಳಿ ಬಂದ ಚಂದ್ರಣ್ಣ ಇಣಕಿ ನೋಡಿ. ಹತ್ತಾಳು ಆಳದಲ್ಲಿ ನೀರು ಕಪ್ಪಗೆ ಕಾಣಿಸಿತು. ಚಿಕ್ಕವನಿದ್ದಾಗ ಬಾವಿಗೆ ಕಲ್ಲು ಬಿಸಾಡಿ ಅದು ‘ಗುಳುಂ’ ಎಂದು ಸದ್ದು ಮಾಡುವುದನ್ನು ಆಲಿಸುವುದರಲ್ಲೇ ಒಂದು ಬಗೆಯ ಮಜ. ಚಂದ್ರಣ್ಣ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಪುಟ್ಟ ಕಲ್ಲೊಂದನ್ನು ಆರಿಸಿ ಬಾವಿಗೆ ಎಸೆದ. ಸದ್ದು ಸ್ಪಷ್ಟವಾಗಿ ಕೇಳಿಸದಾಗ ನಿರಾಸೆಯಾಯಿತು. ಸ್ವಲ್ಪ ದೊಡ್ಡ ಕಲ್ಲು ಎಸೆದರೆ ಸದ್ದು ಕೇಳಿಸಬಹುದು. ಅಕ್ಕಪಕ್ಕ ನೋಡಿದ; ಇದ್ದಕ್ಕಿದ್ದಂತೆ ಜೇಬಿನೊಳಗಿನಿಂದ ‘ಗೋಡೆಯ ತುಂಡನ್ನು’ ಹೊರತೆಗೆದು ಬಾವಿಯೊಳಕ್ಕೆ ಎಸೆದು ಬಿಟ್ಟ! ‘ಗುಳುಂ’ ಎಂಬ ಸದ್ದು ಕೇಳಿಸಿದಾಗ ಮನಸ್ಸು ನಿರಾಳವಾಯಿತು. ಸಮಾಧಾನ ಗೊಂಡವನಂತೆ ಅಲ್ಲೇ ಪಕ್ಕದಲ್ಲಿ ಇದ್ದ ಬಟ್ಟೆ ತೊಳೆಯುವ ಕಲ್ಲಿನ ಮೇಲೆ ಕುಳಿತು. ಶಾಲಾ ಬಯಲಿನ ಇಳಿಜಾರಲ್ಲಿ ಆಟವಾಡುತ್ತಿದ್ದ ಪುಟ್ಟ ಮಕ್ಕಳನ್ನು ನೋಡತೊಡಗಿದ.

ಆರು

ಚಂದ್ರಣ್ಣ ಅಂಗಡಿಗೆ ಮರಳಿ ಬಂದಾಗ ಸೂರ್ಯ ಮುಳುಗಿದ್ದ.

ಅಣ್ಣ ತನ್ನ ಮಾಮೂಲು ಜಾಗದಲ್ಲಿ ಕುಳಿತು ಕೆಲಸದಲ್ಲಿ ಮುಳುಗಿದ್ದ. ಅಪ್ಪ ಕಾಣಿಸಲಿಲ್ಲ. ‘ಕಿಣಿ ಸಿಕ್ಕಿದ್ರಾ?’ ‘ಇಲ್ಲ ನಾನು ಅಲ್ಲಿಗೆ ಹೋಗಲಿಲ್ಲ’ ಎಂದು ಶುಷ್ಕವಾಗಿ ಉತ್ತರಿಸಿದ ಚಂದ್ರಣ್ಣ ಮಂಚದಲ್ಲಿ ಕುಳಿತುಕೊಳ್ಳುತ್ತಾ, ‘ತಂದೆಯವರು ಬರಲಿಲ್ವಾ?’ ಎಂದು ಪ್ರಶ್ನಿಸಿದ.

‘ತಂದೆಯವರೂ ಬಂದಿದ್ರು. ಆ ಹೆಂಗಸೂ ಬಂದಿತ್ತು. ಹಣ ತೆಗೆದುಕೊಂಡು ಹೋದಳು. ನಮ್ಮ ಲೆಖ್ಖದ ಐನೂರು ರೂಪಾಯಿ ತೆಗೆದುಕೊಳ್ಳುವಾಗ ಕಣ್ಣೀರು ಹಾಕಿಬಿಟ್ಳು ಪಾಪ’ ಎಂದ ಕೇಶವಾಚಾರ್ಯ. ಚಂದ್ರಣ್ಣ ಏನೂ ಹೇಳಲಿಲ್ಲ.

ಕೇಶವಾಚಾರ್ಯನೇ ಮಾತು ಮುಂದುವರಿಸಿದ, ‘ನಮ್ಮ ಅಹ್ಮದ್ ಬಾವಾನ ಕತೆ ಗೊತ್ತುಂಟಾ ನಿನ್ಗೇ? ರೊಟ್ಟಿ ಪಾತುಮ್ಮಳೇ ಹೇಳಿದ್ದು. ಇವಳು ಮನೆ ಕಟ್ಟಿಸುವ ಸಮಯದಲ್ಲಿ ಏನಾದರೂ ಸ್ವಲ್ಪ ಸಹಾಯ ಮಾಡ್ತೇನೆ ಅಂತ ಕಳೆದ ಸಲ ಬಂದಾಗ ಹೇಳಿದ್ದನಂತೆ. ಆದ್ರೆ ಈ ಸಲ ಊರಿಗೆ ಬಂದಿದ್ದವನು ಒಂದು ದಿನವೂ ಮನೆಯಲ್ಲಿ ನಿಲ್ಲಲಿಲ್ಲವಂತೆ. ಕಾಸರಗೋಡಿಗೆ ಕೊಟ್ಟಿದ್ದ ಅವನ ತಂಗಿ ಹೆರಿಗೆಗೆಂದು ಅಲ್ಲೇ ನರ‍್ಸಿಂಗ್ ಹೋಮ್ ಸೇರಿದವಳ ಕಂಡೀಷನ್ ಸೀರಿಯೆಸ್ ಆಯಿತಂತೆ. ಇವನು ಬಂದ ದಿನವೇ ಪೋನ್ ಬಂದಿತ್ತಂತೆ. ಹಾಗೆ ಕಾಸರಗೋಡಿಗೆ ಹೋದ ಇವನು ಇನ್ನೂ ಮರಳಿ ಬಂದಿಲ್ಲವಂತೆ. ಮಗ ಹುಟ್ಟುವಾಗಲೇ ಸತ್ತು ಹೋಗಿ ತಾಯಿ ಸ್ಥಿತಿ ಬಹಳ ಹೋಪ್ಲೆಸ್ ಆಯಿತಂತೆ. ಈಗ ಮಂಗಳೂರಿಗೆ ಶಿಫ್ಟ್ ಮಾಡಿದ್ದಾರಂತೆ.’

ಕೇಶವಾಚಾರ್ಯ ಅನಗತ್ಯವಾಗಿ ವಿವರ ನೀಡುವ ಮೂಲಕ ಅಹ್ಮದ್ ಬಾವಾನ ಗೈರುಹಾಜರಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾನೆ ಎಂದರಿತ ಚಂದ್ರಣ್ಣ, ಅಣ್ಣನಿಗೆ ಬೇಸರವಾಗಬಾರದೆಂಬ ಕಾರಣದಿಂದ, ‘ಹೌದಾ? ಛೇ, ಛೇ’ ಎಂದು ಲೊಚಗುಟ್ಟಿ, ‘ನಾನು ಸುಮ್ಮನೆ ಅವನ ಬಗ್ಗೆ ತಪ್ಪು ಯೋಚನೆ ಮಾಡಿಬಿಟ್ಟೆ.’ ಎಂಬ ಮಾತೂ ಜೋಡಿಸಿದ.

‘ನಿನಗೆ ಇನ್ನೊಂದು ಸಂಗತಿ ಗೊತ್ತುಂಟಾ?’ ಎಂದು ಪ್ರಶ್ನಿಸಿದ ಕೇಶವಾಚಾರ್ಯ ಚಂದ್ರಣ್ಣನ ಗಮನವನ್ನು ಸೆಳೆಯುವವನಂತೆ ಸ್ವಲ್ಪ ಹೊತ್ತು ಸುಮ್ಮನಿದ್ದು, ಬಳಿಕ ಹೇಳಿದ. ‘ನಿನ್ನ ಆ ಮುದುಕಿ, ನಾಳೆ ಸಂಜೆ ಮತ್ತೆ ಬರ‍್ತಾಳಂತೆ. ನೀನು ಎಲ್ಲಿಗೂ ಹೋಗದೆ ಅಂಗಡಿಯಲ್ಲೇ ಇರಬೇಕಂತೆ’

‘ಯಾಕೆ! ಮತ್ಯಾಕೆ ಬರುವುದು? ನನ್ನ ಲೆಖ್ಖಾಚಾರದಲ್ಲಿ ಹೆಚ್ಚು ಕಡಿಮೆ ಆಗಿದೆಯಂತೆಯಾ ? ಹಾಗೆ ಹೇಳುವುದಾದರೆ ಒಂದು ಹತ್ತು ಹದಿನೈದು ರೂಪಾಯಿ ಜಾಸ್ತಿಯೇ ಆಗಿದೆ ನಾನು ಕೂಡಿಸಿದ್ದು.’ ಚಂದ್ರಣ್ಣ ಅಸಹನೆಯಿಂದಲೇ ಹೇಳಿದ್ದ.

ಕೇಶವಾಚಾರ್ಯ ವಿಷಾದದಿಂದೆಂಬಂತೆ ಉತ್ತರಿಸಿದ

‘ನಿನ್ನ ಲೆಖ್ಖಾಚಾರ ಹೆಚ್ಚು ಕಮ್ಮಿಯಾಗಿರುತ್ತಿದ್ದರೇ ಚೆನ್ನಾಗಿತ್ತು ಚಂದ್ರು, ಆದರೆ ಅವಳು ನಿನ್ನನ್ನು ಕಾಣಲು ಬರುವುದು ಬೇರೆಯೇ ಕಾರಣಕ್ಕೆ. ಹೇಳಿದ್ರೆ ನೀನು ನಂಬಲಿಕ್ಕಿಲ್ಲ’ ಎಂದವನು ಸ್ವಲ್ಪ ತಡೆದು ಒಂದೇ ಉಸಿರಿನಲ್ಲಿ ಹೇಳಿದ, ‘ನಾಳದು ಶುಕ್ರವಾರ ಬೆಳಗ್ಗೆ ಅವಳು ಗೋಡೆ ಕೆಲಸ ಆರಂಭಿಸುತ್ತಾಳಂತೆ. ನಿನ್ನ ಹತ್ರ ಇರುವ ಆ ‘ಗೋಡೆಯ ತುಂಡಿ’ನ ಒಂದು ಸಣ್ಣ ಚೂರಾದರೂ ನೀನು ಅವಳಿಗೆ ಕೊಡಬೇಕಂತೆ. ಅದನ್ನು ಸೇರಿಸಿಯೇ ಮನೆ ಗೋಡೆ ಕಟ್ಟಿಸಬೇಕೆಂದು ಅವಳಿಗೆ ಕಳೆದ ಒಂದು ವರ್ಷದಿಂದಲೂ ಆಸೆಯಿತ್ತಂತೆ.’

ಸರಕಾರಿ ಬಾವಿಯೊಳಗಿದ್ದ ಅದ್ರಾಮಬ್ಯಾರಿ ಗಹಗಹಿಸಿ ನಕ್ಕ.

ಬೊಳುವಾರು ಮಹಮದ್ ಕುಂಞಿ

ಸಗಣಿ ಮತ್ತು ಮೇಲು ಗೊಬ್ಬರ

ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ತಿರುಗಿದರು ಎಂಬಂತಿದೆ ನಮ್ಮ ರೈತರ ಪರಿಸ್ಥಿತಿ. ತಮ್ಮ ಪರಿಸರದಲ್ಲಿಯೇ ಲಭ್ಯವಿರುವ ಅತ್ಯುತ್ತಮ ಸ್ಯ ಪೋಶಕಾಂಶಗಳನ್ನು ಸಮರ್ಪಕವಾಗಿ ಬಳಸುವ ರೀತಿಯೇ ಬಹುತೇಕ ರೈತರಿಗೆ ಅಪರಿಚಿತವಾಗಿಯೇ ಉಳಿದಿದೆ ಎಂದರೆ ಉತ್ಪ್ರೇಕ್ಷೆಯಲ್ಲ.

ಕೃಷಿಭೂಮಿ ಇದ್ದ ಮೇಲೆ ಜಾನುವಾರುಗಳು ಇರಲೇಬೇಕು ಎನ್ನುವ ಸತ್ಯವನ್ನು ನಮ್ಮ ಬಹುತೇಕ ರೈತರು ಮರೆತಿದ್ದಾರೆ. ಇದರ ಫಲವಾಗಿಯೇ ರಸಗೊಬ್ಬರಗಳ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ರಸಗೊಬ್ಬರಗಳ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಸಾಗಿದರೂ ಅವಲಂಬನೆ ಬಿಟ್ಟಿಲ್ಲದಿರುವುದು ಆಶ್ಚರ್ಯಕರ ಸಂಗತಿ. ಜಾನುವಾರುಗಳು ಇದ್ದ ಸಂದರ್ಭದಲ್ಲಿ ಗೊಬ್ಬರಗಳಿಗಾಗಿ ಮಾರುಕಟ್ಟೆ ನೋಡಬೇಕಾದ ಸಂದರ್ಭಗಳು ಅತಿ ಕಡಿಮೆ. ಕನಿಷ್ಠ ಒಂದು ಎಕರೆ ಜಮೀನಿದ್ದರೂ ಒಂದು ಜೊತೆ ಎತ್ತು, ಹಸು ಒಂದೆರಡಾದರೂ ಕುರಿ, ಮೇಕೆ ಅವಶ್ಯಕ. ಈ ಜಾನುವಾರುಗಳ ಸಾಕಣಿಕೆ ರೈತರಿಗೆ ಆರ್ಥಿಕವಾಗಿಯೂ ಲಾಭದಾಯಕ. ಜೊತೆಗೆ ಗೊಬ್ಬರಗಳಿಗಾಗಿ ಮಾಡುವ ಖರ್ಚನ್ನು ಇವು ಸಾಕಷ್ಟು ತಗ್ಗಿಸುತ್ತದೆ. ಆದ್ದರಿಂದ ಇವುಗಳ ಸಗಣಿಯನ್ನೇ ಬಳಸಿಕೊಂಡು ಸತ್ವಯುತ ಗೊಬ್ಬರ ತಯಾರಿಕೆ ಸಾಧ್ಯ.

ತಯಾರಿಸುವ ವಿಧಾನ

ಹಸು, ಕುರಿ, ಮೇಕೆ ಇತ್ಯಾದಿ ಜಾನುವಾರುಗಳ ಹಸಿ ಸಗಣಿ ಸಂಗ್ರಹಿಸಿಕೊಳ್ಳಬೇಕು. ಇದರ ಒಟ್ಟು ಪ್ರಮಾಣ ೨೫ರಿಂದ ೩೦ ಕೆಜಿ ಇರಲಿ. ಸಗಣಿಯಲ್ಲಿರುವ ಕಸ ಕಡ್ಡಿಯನ್ನು ತೆಗೆಯಬೇಕು. ಒಂದು ಗೋಣಿಚೀಲದಲ್ಲಿ ಈ ಸಗಣಿಯನ್ನು ತುಂಬಿ ಅದರ ಬಾಯಿಯನ್ನು ಬಿಗಿಯಾಗಿ ಕಟ್ಟಬೇಕು. ಇದನ್ನು ೨೦೦ ಲೀಟರ್ ನೀರು ತುಂಬಿದ ಡ್ರಮ್ಮಿನ ಮೇಲ್ಬಾಗದಲ್ಲಿ ಇಟ್ಟ ದೊಣ್ಣೆಗೆ ಅಡ್ಡವಾಗಿ ಕಟ್ಟಿ ಇಳಿಬಿಡಬೇಕು. ಮರು ದಿನಕ್ಕೊಮ್ಮೆ ಚೀಲವನ್ನು ನೀರಿನಿಂದ ಎತ್ತಿ ಇಳಿಸಬೇಕು. ಎರಡು ವಾರಗಳಲ್ಲಿ ಚೀಲದಲ್ಲಿರುವ ಪೋಷಕಾಂಶವು ತನ್ನ ಗುಣವನ್ನು ಬಿಟ್ಟುಕೊಡುತ್ತದೆ. ಮೊದಲ ಕೆಲವು ದಿನಗಳಲ್ಲಿ ಅಮೋನಿಯಾದ ಕಟ್ಟು ವಾಸನೆಯಿರುತ್ತದೆ. ಎರಡು ವಾರದೊಳಗೆ ಇದರ ಕಟ್ಟುವಾಸನೆ ಕಡಿವೆಯಾಗುತ್ತದೆ. ಡ್ರಮ್ಮ್‌ನಲ್ಲಿನ ದ್ರಾವಣವು ಕಂದು ಬಣ್ಣಕ್ಕೆ ತಿರುಗಿದಾಗ ಸಿಂಪಡಣೆಗೆ ಬಳಸಬಹುದು.

ಬಳಸವ ವಿಧಾನ

ಯಾವುದೇ ಬೆಳೆಗೆ ಈ ದ್ರಾವಣವನ್ನು ಮೇಲು ಗೊಬ್ಬರವಾಗಿ ಬಳಸಬಹುದು. ಇದು ಭಾರಿ ಪರಿಣಾಮಕಾರಿ. ಒಂದು ಲೀಟರ್ ನೀರು ಸೇರಿಸಿ ಬಳಸಬೇಕು. ಒಂದು ಡ್ರಮ್ ದ್ರಾವಣಕ್ಕೆ ಸ್ಪಲ್ಪ ಅರಿಶಿನ ಪುಡಿ ಮತ್ತು ಅರ್ಧ ಲೀಟರ್‌ನಷ್ಟು ಜೇನು ತುಪ್ಪ ಸೇರಿಸಿ ಚೆನ್ನಾಗಿ ತಿರುಗಿಸಿ ಒಂದು ದಿನ ಕಳಿಸಿ ಸಿಂಪಡಿಸಿದರೆ ಹೆಚ್ಚಿನ ಪರಿಣಾಮವುಂಟಾಗುತ್ತದೆ. ಗೋಣಿ ಚೀಲದಲ್ಲಿ ಉಳಿದಿರುವ ಸಗಣಿಯನ್ನು ತೋಟದ ಬೆಳೆಗಳ ಬುಡಕ್ಕೆ ಹಾಕಬಹುದು ಅಥವಾ ಕಾಂಪೋಸ್ಟ್ ಗುಂಡಿಗೆ ಹಾಕಬೇಕು.

ಲಾಭ: ಕೀನ್ಯಾ ದೇಶದ ಅನೇಕ ರೈತರು ಈ ವಿಧಾನ ಅನುಸರಿಸಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಶ್‌ಗಳಲ್ಲದೇ ಇತರೆ ಲಘು ಪೋಷಕಾಂಶಗಳು,ಬೆಳೆವರ್ಧಕಗಳು ಸಸ್ಯಗಳಿಗೆ ದೊರೆಯುತ್ತವೆ. ಇದು ಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ದ್ರವಗೊಬ್ಬರವನ್ನು ತಯಾರಿಸುವ ಖರ್ಚು ಕಡಿಮೆ. ಬಳಸುವ ಪದ್ದತಿಯೂ ಸರಳ. ಇದರಿಂದ ರಾಸಾಯನಿಕ ಗೊಬ್ಬರದ ಮೇಲಿನ ಅವಶ್ಯಕತೆಯಿರುವುದಿಲ್ಲ.

ಗೋಣಿಚೀಲದಲ್ಲಿ ಹಳೆಯ ಸಗಣಿ ಹಾಕಿದರೆ ಎರಡು ವಾರಗಳಲ್ಲಿ ಅದು ತೂತಾಗಬಹುದು. ಗೋಣಿಚೀಲವನ್ನು ಬಳಸುವ ಉದ್ದೇಶವೇನೆಂದರೆ ಎರಡು ವಾರದ ಬಳಿಕ ದ್ರಾವಣವನ್ನು ಸೋಸುವ ಅಗತ್ಯವಿರುವುದಿಲ್ಲ. ನೀರು ತುಂಬಿದ ಡ್ರಮ್ಮಿಗೆ ನೇರವಾಗಿ ಸಗಣಿ ಹಾಕಿ ಎರಡು ವಾರವದವರೆಗೆ ಆಗಾಗ ಕಲಕುತ್ತಿದ್ದು ಬಳಿಕ ಸೋಸಿ ಬಳಸಬಹುದು. ಕಾಫಿ ಗಿಡಗಳಿಗೂ ಇದನ್ನು ಬಳಸಬಹುದು. ಈ ದ್ರವಗೊಬ್ಬರ ಬಳಸುವುದರಿಂದ ಕ್ರಿಮಿ ಕೀಟಗಳ ಬಾಧೆ ಕಡಿಮೆಯಾಗುತ್ತದೆ.

Saturday, September 18, 2010

ಶಕ್ತಿವರ್ಧಕ ಶುಂಠಿ

-ಡಾ. ಟಿ. ವೆಂಕಟಶಾಮಯ್ಯ

ಪ್ರಮುಖವಾದ ಸಾಂಬಾರ ಪದಾರ್ಥಗಳಲ್ಲಿ ಶುಂಟಿ ಕೂಡ ಒಂದು. ಶುಂಠಿಯಲ್ಲಿ ಉಪಯೋಗ ಮಾಡುವ ಭಾಗ, ಭೂಮಿಯ ಒಳಭಾಗದಲ್ಲಿ ಬೆಳೆಯುವ ಗುಪ್ತ ಕಾಂಡ. ಚಟ್ನಿ, ಉಪ್ಪಿನಕಾಯಿ ಮುಂತಾದ ವ್ಯಂಜನಗಳಲ್ಲಿ ಮತ್ತು ಮಾಂಸಾಹಾರದ ಅಡುಗೆಗಳಲ್ಲಿ ವಿಶೇಷವಾಗಿ ಶುಂಠಿಯನ್ನು ಉಪಯೋಗಿಸುತ್ತಾರೆ. ಇದಲ್ಲದೆ ಬೇಕರಿ ಪದಾಥಗಳು ಹಾಗೂ ವಿವಿಧ ಪಾನೀಯಗಳನ್ನು ತಯಾರಿಸಲು ಶುಂಠಿಯನ್ನು ಉಪಯೋ ಮಾಡುತ್ತಾರೆ. ಒಣಗಿದ ಹಾಗೂ ಹಸಿಶುಂಟಿಗಳೆರಡನ್ನೂ ಸಾಂಬಾರ ಪದಾರ್ಥವಾಗಿ ಬಳಸುತ್ತಾರೆ. ನಮ್ಮ ದೇಹದಲ್ಲಿ ಪಚನಶಕ್ತಿಯನ್ನು ಹೆಚ್ಚಿಸುವ ಇದನ್ನು ಆಯುರ್ವೆದ ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ.

ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಶುಂಟಿಯನ್ನು ನಾಗರ, ವಿಶ್ವೌಷಧ ವಿಶ್ವಭೇಷಜ. ಮಹೌಷಧ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸಂಸ್ಕೃತದ ಈ ಹೆಸರುಗಳೇ ಸೂಚಿಸುವಂತೆ ಇದು ಒಂದು ಅಪೂರ್ವ ಔಷಧ ದ್ಯವ್ಯ, ಕಟು(ಖಾರ) ರಸವನ್ನು ಹೊಂದಿರುವ ಇದು ಜೀರ್ಣರಸದೊಂದಿಗೆ ಸೇರಿ ಪಚನವಾದಾಗ ಮಧುರ(ಸಿಹಿ)ಭಾವವನ್ನು ಪಡೆಯುವುದರಿಂದ ಇದು ಒಂದು ಶಕ್ತಿವರ್ಧಕವಾಗಿದೆ. ಗುಣದಲ್ಲಿ ಸ್ನಿಗ್ಧ ಮತ್ತು ಉಷ್ಣ ರ್ಯವುಳ್ಳದ್ದಾಗಿದ್ದು ಕಫ ಮತ್ತು ವಾತ ದೋಷಗಳನ್ನು ನಾಶ ಮಾಡುತ್ತದೆ.

ಶ್ವಾಸಕೋಶ, ಅರುಚಿ, ಪಾಂಡು(ರಕ್ತಹೀನತೆ), ಅತಿಸಾರ, ಜ್ವರ, ಕೆಮ್ಮು ಮುಂತಾದ ರೋಗಗಳಲ್ಲಿ ಉಪಯೋಗಿಸಲ್ಟಡುವ ಇದು ಒಂದು ಶ್ರೇಷ್ಠ ದೀಪನ ಹಾಗೂ ಪಾಚನ ಔಷಧವಾಗಿದೆ. ಇದಲ್ಲದೆ ಅಮವಾತ(ಕೀಲುನೋವು) ಗ್ರಹಣಿ, ಗುಲ್ಮ, ಹೃದ್ರೋಗ, ಅಮಾತಿಸಾರ ಮುಂತಾದ ಅನೇಕ ರೋಗಗಳಲ್ಲಿ ಶುಂಟಿ ಒಂದು ಉತ್ತಮ ಔಷಧಿ. ಹಸಿ ಶುಂಠಿಯನ್ನು ಅದ್ರಕ್ ಎಂದು ಕರೆಯುತ್ತಾರೆ. ಅಡುಗೆ ಮತ್ತು ಔಷಧಿಗಳಲ್ಲಿ ಒಣಶುಂಟಿ ಹಾಗೂ ಹಸಿ ಶುಂಠಿಗಳೆರಡೂ ಉಪಯೋಗಕ್ಕೆ ಬರುತ್ತವೆ.

ಅಮವಾತದಲ್ಲಿ ಉಪಯೋಗ: ವಾಯುವಿನಿಂದ ಕೈಕಾಲುಗಳ ಕೀಲುಗಳಲ್ಲಿ ಬಾವು ಮತ್ತು ನೋವುಗಳು ಇದ್ದರೆ ಅದಕ್ಕೆ ಅಮವಾತ ಅಥವಾ ವಾಯುನೋವು ಎನ್ನುತ್ತಾರೆ. ಇದು ದೇಹದಲ್ಲಿ ಜೀರ್ಣಶಕ್ತಿ ಕುಂದಿದಾಗ, ಉಂಟಾದ ಅಮದೋಷದಿಂದ ಬರುವ ರೋಗ, ಒಳ್ಳೆಯ ಪಚನಕಾರಿಯಾದ ಶುಂಟಿ ಈ ಅಮವಾತ ರೋಗಕ್ಕೆ ಒಂದು ದಿವ್ಯೌಷಧ.

ಹಸಿ ಶುಂಠಿಯನ್ನು ತೆಗೆದುಕೊಂಡು ಕುಟ್ಟಿ ರಸವನ್ನು ತೆಗೆದು ಒಂದು ಚಮಚ ರಸಕ್ಕೆ ಒಂದು ಚಮಚ ಜೇನುತುಪವಪ್ನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ತೆಗೆದುಕೊಂಡರೆ ಪಚನಶಕ್ತಿ ಹೆಚ್ಚಾಗಿ ಅಮದೋಷ ನಿವಾರಣೆಯಾಗಿ ಅಮವಾತ ಅಂದರೆ, ಕೀಲು ನೋವಿನಲ್ಲಿ ಉತ್ತಮ ಲಾಭ ಸಿಗುತ್ತದೆ. ಇದಲ್ಲದೆ ಶುಂಟಿ ರಸ ಮತ್ತು ಜೇನುತಪ್ಪಗಳನ್ನು ತೆಗೆದುಕೊಳ್ಳುವುದರಿಂದ ಶೀತ ನೆಗಡಿ ಅಜೀರ್ಣಗಳು ದೂರಾಗುತ್ತವೆ. ಸಕ್ಕರೆ ರೋಗವುಳ್ಳವರು ಜೇನುತುಪ್ಪಕ್ಕೆ ಬದಲಾಗಿ ಸೈಂಧವ ಲವಣವನ್ನು ಉಪಯೋಗಿಸಬಹುದು. ಒಣಶುಂಟಿ, ಅಮೃತಬಳ್ಳ ಮತ್ತು ಜೇಷ್ಠ ಮಧು ಇವುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ವಿಧಿವತ್ತಾಗಿ ಕಷಾಯ ಮಾಡಿ. ಅಂದರೆ ಮೇಲ ಹೇಲೀರುವ ಮೂರು ಔಷಧಿಗಳ ಹದಿನಾರರಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ. ಅದರಲ್ಲಿ ಕಾಲುಭಾಗ ಉಳಿಯುವಂತೆ ಕಷಾಯ ಮಾಡಿಕೊಳ್ಳಬೇಕು. ಇದಕ್ಕೆ ಬೆಲ್ಲ ಅಥವಾ ಜೇನುತಪ್ಪ ಸೇರಿಸಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬರಿಯ ಹೊಟ್ಟೆಯಲ್ಲಿ ತೆಗೆದುಕೊಂಡು ಪಥ್ಯ ಮಾಡಿದರೆ ಅಮವಾತ ಗುಣವಾಗುತ್ತದೆ. ಇದು ಅಮವಾತಕ್ಕೆ ಸುಲಭ ಹಾಗೂ ಪರಿಣಾಮಕಾರಿ ಔಷಧವಾಗಿದೆ. ಇದಲ್ಲದೆ ಕೆಲವರು ಒಣಶುಂಟಿ ಚೂರ್ಣವನ್ನು ಜೇನುತುಪ್ಪದಲ್ಲಿ ಬೆರೆಸಿ ಸೇವಿಸಲು ಹೇಳುತ್ತಾರೆ. ಆಯುರ್ವೇದ ವೈದ್ಯರು, ನಾಗರಾಧಿಕ್ಷಾಥ, ನಾಗರಾದಿಚೂರ್ಣ ಮುಂತಾದ ಔಷಧಿಗಳನ್ನು ತಯಾರಿಸಿ ಅಮವಾತದಲ್ಲಿ ಉಪಯೋಗಿಸುತ್ತಾರೆ.

ಅಜೀರ್ಣ ಮತ್ತು ಅಮಾತಿಸಾರಗಳಲ್ಲಿ: ಅಜೀರ್ಣ ಮತ್ತು ಅಜೀರ್ಣದಿಂದ ಉಂಟಾಗುವ ಅತಿಸಾರದಲ್ಲಿ ೨೫೦ರಿಂದ ೩೦೦ ಮಿ. ಗ್ರಾಂ. ಒಣ ಶುಂಟಿ ಚೂರ್ಣವನ್ನು ಸಕ್ಕರೆ ಮತ್ತು ತುಪ್ಪ ಬೆರೆಸಿ ತೆಗೆದುಕೊಂಡರೆ ಒಳ್ಳೆಯ ಲಾಭ ಸಿಗುತ್ತದೆ.

ಶುಂಠಿಯ ಕ್ಷೀರಪಾಕ: ಒಂದು ಚಮಚ ಒಣಶುಂಟಿ ಪುಡಿಗೆ ಒಂದು ಲೋಟ ನೀರು, ಒಂದು ಲೋಟ ಹಾಲು ಕೂಡಿಸಿ ಚೆನ್ನಾಗಿ ಕಾಯಿಸಬೇಕು. ನೀರನ ಭಾಗವೆಲ್ಲಾ ಅವಿಯಾತಿ ಹೋಗಿ ಹಾಲು ಮಾತ್ರ ಉಳಿದಾಗ (ಒಂದು ಲೋಟ ಹಾಲು ಮಾತ್ರ ಉಳಿಯಬೇಕು)ನದನ್ನು ಒಲೆಯ ಮೇಲಿಂದ ತೆಗೆದು ಶೋಧಿಸಿಕೊಂಡು ಅದಕ್ಕೆ ಬೆಲ್ಲ ಅಥವಾ ಜೇನುತಪ್ಪುವನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ತೆಗೆದುಕೊಂಡರೆ ದೇಹದಲ್ಲಿ ಪಚನ ಶಕ್ತಿ ಹೆಚ್ಚಾಗುತ್ತದೆ. ಶೀಥ ಕೆಮ್ಮುಗಳು ಬಾಧಿಸುವುದಿಲ್ಲ. ಮಳೆಗಾಲಕ್ಕೆ ಇದು ಒಂದು ಉತ್ತಮ ಪಾನೀಯ, ಕೆಲವರಿಗೆ ಹಾಲು ಕುಡಿದರೆ ಜೀರ್ಣವಾಗುವುದಿಲ್ಲ. ಅಂತಹವರು ಮೇಲೆ ಹೇಳಿರುವ ಕ್ಷೀರ ಪಾಕ ಮಾಡಿ ತೆಗೆದುಕೊಳ್ಳಬಹುದು.

ಮಕ್ಕಳ ಶೀತಕ್ಕೆ: ಮಕ್ಕಳಿಗೆ ನೆಗಡಿ ಶೀತವಾಗಿ ಜ್ವರ ಬಂದು, ಮೂಗು ಕಟ್ಟಿ, ಉಸಿರಾಡಲು ತೊಂದರೆಯಾದಾಗ ೩-೬ ಹನಿ ಹಸಿ ಶುಂಠಿ ರಸ ಒಂದು ಚಮಚ ಜೇನುತಪ್ಪ ಮತ್ತು ೨-೩ ಹನಿ ತುಳಸಿ ರಸ ಸೇರಿಸಿಕೊಟ್ಟರೆ ಬಹು ಬೇಗ ಶೀತ ನೆಗಡಿಗಳನ್ನು ಕಡಿಮೆಯಾಗಿ ಮಗುವಿಗೆ ಆರಾಮವೆನಿಸುತ್ತದೆ.

ದೇಹದ ತೂಕ ಕಡಿಮೆ ಮಾಡಲು: ಒಂದು ದೊಡ್ಡ ಲೋಟ ಕಡೆದ ಮಜ್ಜಿಗೆಗೆ ಎರಡು ಚಮಚ ಹಸಿ ಶುಂಠಿ ರಸ ಮತ್ತು ಸ್ವಲ್ಪ ಸೈಂಧವ ಲವಣವನ್ನು ನೀರಿನಲ್ಲಿ ಪ್ರತಿ ದಿನ ತೆಗೆದುಕೊಂಡು ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳನ್ನು ಬಿಟ್ಟು ಪಥ್ಯ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಇದಲ್ಲದೆ ಪಚನ ಶಕ್ತಿ ಹೆಚ್ಚಾಗುತ್ತದೆ. ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಣೆಯಾಗುತ್ತದೆ. ಶುಂಠಿಯನ್ನು ಪ್ರತಿ ದಿನ ಊಟದಲ್ಲಿ ಸಾಕಷ್ಟು ಬಳಸಿದರೆ, ಅದು ಊಟಕ್ಕೆ ರುಚಿಯನ್ನು ಕೊಡುವುದೇ ಅಲ್ಲದೆ, ಪಚನ ಕ್ರಿಯೆಯನ್ನು ವೃದ್ಧಿಗೊಳಿಸಿ, ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ದೇಹಕ್ಕೆ ಪೋಷಣೆ ಕೊಟ್ಟು ಆರೋಗ್ಯವನ್ನು ಕಾಪಾಡುತ್ತದೆ.

ಎಷ್ಟು ಸಮಯ ಈ ಮುನಿಸು?

ಉದಯವಾಣಿ, ಮಹಿಳಾ ಸಂಪದ, ಶುಕ್ರವಾರ ೩-೯-೨೦೧೦

ಎಷ್ಟು ಸಮಯ ಈ ಮುನಿಸು?

ಪ್ರೀತಿಯ
ನನಗೆ ನಿಜವಾಗ್ಲೂ ಆಶ್ಚರ್ಯವಾಗುತ್ತಿದೆ. ನೀನು ಯಾಕೆ ಹೀಗೆ ಬದಲಾಗಿದ್ದಿ ಎಂಬ ಒಂದು ಪ್ರಶ್ನೆಗೆ ಉತ್ತರ ಸಿಗದೆ ಮನಸ್ಸು ತಳಮಳಗೊಂಡಿದೆ. ಕೆಲವು ವರ್ಷಗಳಿಮದ ಜತೆಯಾಗಿಯೇ ಸುತ್ತಾಡುತ್ತಿದ್ದ ಅವಳಿ ಸೋದರರಂತಿದ್ದ ನಾವು ಇಂದು ಮುಖವೊಡ್ಡಿ ಮಾತಾಡದೆ ಸ್ಥಿತಿ ಬರಲು ಏನು ಕಾರಣ?

ನನ್ನ ಆತ್ಮಸಾಕ್ಷಿ ಪ್ರಕಾರ ಹೇಳುವುದಾದರೆ ನಾನೇನೂ ತಪ್ಪು ಮಾಡಿಲ್ಲ. ಆದರೆ ನೀನು ನನ್ನಲ್ಲಿ ಏನೊ ತಪ್ಪು ಕಂಡಿದ್ದಿ. ಅದೇನೆಂದು ಕೆಲವು ಸಲ ಕೇಳಿದರೂ ನೀನು ಉತ್ತರಿಸಲು ಮನಸ್ಸು ಮಾಡಿಲ್ಲ. ನನ್ನ ಗೆಳೆತನ ಸಾಕಾದರೆ ಹೇಳು, ಜತೆಯಾಗಿಯೇ ಒಂದು ಗ್ಲಾಸ್ ಜ್ಯೂಸನ್ನು ಫಿಪ್ಟಿ ಫಿಪ್ಟಿ ಮಾಡಿ ಕುಡಿದು ಮಾತು ಕಡಿಮೆ ಮಾಡೋಣ. ನಿನ್ನೆ ಸಮಾಧಾನಕ್ಕೆ ಅದು ಅನಿವಾರ್ಯವಾದರೆ ನಾನು ಅದಕ್ಕೂ ಸಿದ್ದ. ಆದರೆ ನೀನು ಏಕಾ‌ಏಕಿ ಮೌನವಾದೆಯಲ್ಲಾ, ಅದು ಯಾಕೆ?

ಒಂದು ಫಂಕ್ಷನ್‌ಗೆ ಹೋಗುವುದೋ, ಶಾಪಿಂಗ್‌ಗೆ ಹೋಗುವುದೋ, ಹೊಟೇಲ್‌ಗೆ ಹೋಗುವುದೋ.. ಹೀಗೆ ಎಲ್ಲದರಲ್ಲೂ ನಾವು ಜತೆಯಾಗಿಯೇ ಇರುತ್ತಿದ್ದೆವಲ್ಲಾ. ನಿನ್ನ ಬಗ್ಗೆ ಏನಾದರೂ ತಿಳಿಯಬೇಕಿದ್ದರೆ ಸಹೋದ್ಯೋಗಿಗಳು ಮೊದಲು ಕೇಳುವುದೇ ನನ್ನಲ್ಲಾಗಿತ್ತು. ಈಗ ಯಾರಾದರೂ ಹಾಗೆ ಕೇಳಿದರೆ ನಾನು ಏನೆಂದು ಉತ್ತರಿಸಲಿ? ನಾವಿಬ್ಬರು ಸಿಟ್ಟುಮಾಡಿಕೊಂಡು ಮಾತು ಬಿಟ್ಟಿದ್ದೇವೆ ಎನ್ನಲೇ? ಹೇಳು, ನೀನೇ ಉತ್ತರ ಹೇಳು.

ನೀನು ಏಕಾ‌ಏಕಿ ಮೌನಿಯಾಗುವುದು ಇದೇನು ಹೊಸತಲ್ಲ. ಆದರೆ ನನ್ನಲ್ಲಿ ಮಾತು ಬಿಟ್ಟದ್ದು ಇದೇ ಮೊದಲು. ಮಾತು ಬಿಡುವುದು, ಕೋಪಿಸುವುದು.. ಇತ್ಯಾದಿ ನಮ್ಮಂಥವರಿಗೆ ಹೇಳಿದ್ದೇ? ಅದು ಅನಾಗರಿಕತೆ ಎಂದು ಭಾವಿಸಿದವ ನಾನು. ಅಪ್ತ ಸಂಬಂಧ ಬೇಡವಾದರೂ ಮುಖಮುಖ ನೋಡುವಾಗ ಒಂದುನಗು ಸೂಸಲು ಏನಾಗಬೇಕು ಹೇಳು. ಅದರಲ್ಲಿ ನೀನು ಕಳಕೊಳ್ಳುವುದಾದರೂ ಏನು?

ಕೋಪ ಮಾಡಿಕೊಳ್ಳುವುದು ಹೆಂಗಸರ ಕೆಲಸ, ಅವಿದ್ಯಾವಂತರ ಲಕ್ಷಣ ಎಂದೆಲ್ಲಾ ಭಾವಿಸಿದ್ದ ನಾನು, ಈಗ ಅದರ ಬಗ್ಗೆ ಮರಚುಚಿಂತನೆ ಮಾಡಬೇಕಾದ ಕಾಲ ಸನ್ನಿಹಿತವಾದಂತಿದೆ. ಅದಕ್ಕೆ ವೇದಿಕೆ ಒದಗಿಸಿಕೊಟ್ಟವನು ನೀನೇ. ಮೌನದಿಂದ ನೆಮ್ಮದಿ ಸಿಕ್ಕೋಲ್ಲ, ಸಮಸ್ಯೆ ಬಗೆಹರಿಯೋಲ್ಲ, ಆಫ್ತ ವಲಯ ಎಲ್ಲರಿಗೂ ಅಗತ್ಯ. ಆ ವಲಯದೊಂದಿಗೆ ನಗುತ್ತಾ ನಾಲ್ಕು ಮಾತಾಡಿದಾಗ ಮನಸ್ಸಿನ ಭಾರ ಇಳಿಯುತ್ತದೆ.

ಗೆಳೆಯಾ, ನೀನು ನನ್ನಲ್ಲಿ ಹೇಗೂ ಕೋಪಿಸಿಕೊಂಡಿದ್ದೀ. ಆದರೂ ನಾನು ನಿನ್ನಲ್ಲಿ ಕೋಪಿಸಿಕೊಂಡಿಲ್ಲ. ಯಾಕೆಂದರೆ ನಿನ್ನ ಬಗ್ಗೆ ನಾನು ಇದುವರೆಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ನಿನ್ನ ಮನಸ್ಸನ್ನು ಓದುವುದೂ ನನಗೆ ಸಾಧ್ಯವಾಗಿದೆ. ಈ ಓದಿನಲ್ಲಿ ಸಿಕ್ಕಿರುವ ಒಂದು ವಿಷಯವನ್ನು ನಿನಗೆ ಈ ಹೊತ್ತಿನಲ್ಲಿ ನಾನು ಹೇಳಬಹುಸತ್ತೆನೆ. ಸಂಕುಚಿತ ಮನಸ್ಸು ಸಂಶಯ ಪ್ರವೃತ್ತಿ ಯಾವತ್ತೂ ಒಳ್ಳೆಯದಲ್ಲ.

ಇದು ನಮಗೆ ಹಾನಿ ಮಾಡುವುದೇ ಹೆಚ್ಚು. ಒಂದು ವಿಷಯದ ಬಗ್ಗೆ ನಿರ್ದಾರ ಕೈಗೊಳ್ಳುವ ಮೊದಲು, ಇತರರ ಬಗ್ಗೆ ಸಂಶಯಿಸಲು ಆರಂಭಿಸುವ ಮೊದಲು ತುಂಬ ಚಿಂತಿಸಬೇಕು. ಒಂದು ಗಟ್ಟಿ ಸಾಕ್ಷ ಸಿಗದ ಹೊರತು ಹತ್ತಿರವಿದ್ದವರನ್ನು, ಆತ್ಮೀಯರನ್ನು ದೂರು ಮಾಡುವುದು ಒಳ್ಳೆಯದಲ್ಲ. ಆದರಲ್ಲೂ ಸಣ್ಣಪುಟ್ಟ ಕಾರಣಗಳಿಗಾಗಿ ದೀರ್ಘ ಕಾಲದ ಗೆಳೆತನವನ್ನು ಮುರಿಯುವುದು ಸರ್ವಥಾ ಸರಿಯಲ್ಲ. ಪರಸ್ಪರ ಹೊಂದಾನಿಕೆಯೂ ಬೇಕು. ಕ್ಷಮಿಸುವ ಗುಣವೂ ಬೇಕು. ವಿಶ್ವಾಸವಿಲ್ಲದಿದ್ದರೆ ಸ್ನೇಹ ಉಳಿಯುವುದಾದರೂ ಹೇಗೆ?

ಸಂಶಯ ಪ್ರವೃತ್ತಿಯೇ ನಿನಗೆ ಕೇಡು ಬಗೆಯುತ್ತಿದ.ಎ ನಿನ್ನ ವ್ಯಕ್ತಿತ್ವವನ್ನು ವಿರೂಪಗೊಳಿಸುತ್ತಿದೆ. ಜೊತೆಗೆ ಅತಿಯಾದ ಸಿಡುಕುತನವೂ ನಿನಗೆ ಹಾನಿ ಮಾಡುತ್ತಿದೆ. ಆಫ್ತನಾಗಿ, ಹಿತೈಷಿಯಾಗಿರುವ ಯಾರಾದರೂ ಹೇಳುವ ಮಾತನ್ನೂ ಸಂಶಯದಿಂದ ನೋಡುವುದನ್ನು ಬಿಟ್ಟು ಬಿಡು ಗೆಳೆಯಾ. ನಿನಗೆ ಯಾರಾದರೂ ಒಬ್ಬ ಹೊಸ ಗೆಳೆಯ ಸಿಕ್ಕಿದರೆ ನಿನ್ನಲ್ಲಿ ಈಗ ಇರುವ ಕೆಲವು ಹುಳುಕುಗಳನ್ನು ಬಿಟ್ಟು ಅವನೊಂದಿಗೆ ಸ್ನೇಹ ಬೆಳೆಸು, ಬೆಳೆಸಿದ ಸ್ನೇಹವನ್ನು ದೀರ್ಘಕಾಲ ಉಳಿಸು ಎಂದು ನಿನ್ನ ಓರ್ವ ಆಫ್ತನಾಗಿ ಹೇಳುತ್ತಿದ್ದೆನೆ. ನಾನು ನಿನಗೆ ಆಫ್ತನಲ್ಲದಿದ್ದರೂ, ನನ್ನ ಮನಸ್ಸಲ್ಲಿ ಈಗಲೂ ನಿನಗೆ ಆಫ್ತನ ಸ್ಥಾನಮಾನ ಇದ್ದೇ ಇದೆ. ಆದ್ದರಿಂದಲೇ ಈ ಮಾತು.

ಒಂದೇ ಕಚೇರಿಯಲ್ಲಿ ದುಡಿಯುವ ನಾವೂ ಈ ರೀತಿ ಮುಖ ಗಂಟಿಕ್ಕಿಕೊಳ್ಲುವ ಅಗತ್ಯವಾದರೂ ಏನಿದೆ ಹೇಳು? ಸಾಮಾನ್ಯವಾಗಿ ಅವಿದ್ಯಾವಂತರಲ್ಲಿ, ಯುವತಿಯರಲ್ಲಿ ಕಾಣ ಸಿಗುವ ಇಂಥ ವರ್ತನೆ ನಿನ್ನಲ್ಲಿ ಯಾಕೆ ಬೆಳೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ನಾವು ಪರಸ್ಪರ ಆಫ್ತರಾಗಿದ್ದುದರಿಂದ ಕಳಕೊಂಡುದಾದರೂ ಏನು? ಈಗ ಕೋಪಿಸಿ ಮಾತು ಬಿಟ್ಟ ಬಳಿಕ ನಿನಗೆ ಸಿಕ್ಕಿರುವ ಲಾಭವಾದರೂ ಏನು? ನೀನು ಕೋಪಿಸಿಕೊಂಡಿರುವ ಕಾರಣವಾದರೂ ಯಾವುದು? ಆ ಕಾರಣದಲ್ಲಿರುವ ನಿಜಾಂಶದ ಪ್ರಮಾಣವಾದರೂ ಎಷ್ಟಿದೆ.. ಇತ್ಯಾದಿಗಳ ಬಗ್ಗೆ ನೀನು ಒಮ್ಮೆ ಚಿಂತಿಸಿ ನೋಡು.

ಆಡ್ವಾಣಿ ಮತ್ತು ವಾಜಪೇಯಿ ಅವರ ಸ್ನೇಹ ಸುಮಾರು ಆರೇಳು ದಶಕದ್ದು ಎಂದು ಹೇಳಲಾಗುತ್ತಿದ.ಎ ಅವರು ರಾಜಕೀಯದಲ್ಲಿ ಆ ಗೆಳೆತವನ್ನು ಅದೂ ಕೂಡ ಒಂದೇ ಪಕ್ಷದಲ್ಲಿಕೊಂಡು ಉಳಿಸಿಕೊಂಡು ಬರುವುದು ಸಾಧ್ಯವಾಗಿದ್ದರೆ, ಯಾವುದೇ ಅಧಿಕರ ಲಾಭವಿಲ್ಲದೆ, ಅಂಥ ನಿರೀಕ್ಷೆಯೂ ಇರದ ನಮಗೆ ಕೇವಲ ಒಂದು ಶುದ್ಧಸ್ನೇಹವನ್ನು ಯಾಕೆ ಉಳಿಸಿಕೊಂಡು ಹೋಗಲಾತುತ್ತಿಲ್ಲ ಎಂಬ ಪ್ರಶ್ನೆಗೆ ತ್ಠ್ತುರ ಸಿಕ್ಕೀತೇ ಗೆಳೆಯಾ?

ಮನೆಯ ಸಮಸ್ಯೆಯಿರಬಹುದು, ಕೆಲಸದ ಒತ್ತಡರವಿರಬಹುದು. ಹಾಗೆಂದು ಮಾತು ಬಿಟ್ಟು ಏಕಾಂಗಿಯಾಗಿ ಮೌನಿಯಾದ ಮಾತ್ರಕ್ಕೆ ನಿನಗೆ ಆಯೆಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಕ್ಕೀತೆ? ಒಂದೊಮ್ಮೆ ಸಿಕ್ಕಿದ್ದರೆ ನಾನು ಪ್ರೀತಿಯಿಂದ ನಿನ್ನ ಈ ವರ್ತನೆಯನ್ನು ಸ್ವಾಗತಿಸುತ್ತೆನೆ.

ಹಿರಿಯ ಒಂದು ಮಾತಿದೆ ಗೆಳೆಯಾ. ಚೆಲ್ಲುವುದನ್ನೂ ಅಳೆದು ಚೆಲ್ಲಬೇಕು ಎಂದು. ಹಾಗೆ ನೀನು ಕೋಪಿಸುವ ಮೊದಲು ಅದಕ್ಕೆ ಕಾರಣವಾದ ಘಟನೆಯ ಬಗ್ಗೆ ಒಂದು ಮಾತು ಹೇಳಿದ್ದರೆ ಚೆನ್ನಿತ್ತು. ಅಂಥ ಒಂದು ಕೊನೆ ಮಾತು ಹೇಳಿದ್ದರೆ ನೀನು ಕೋಪಿಸುವ ಅಗತ್ಯವೇ ಇರುತ್ತಿರಲಿಲ್ಲ. ಆದ್ದರಿಂದಲೆ ಹೇಳುತ್ತೇನೆ-ಸಂಶಯ ಸ್ವಭಾವ ಬಿಡು, ಮುಕ್ತವಾಗಿ ಮಾತಾಡು. ದೇವರು ನಮಗೆ ಮಾತಿನ ಶಕ್ತಿ ಕೊಟ್ಟದ್ದೇ ಅಭಿಪ್ರಾಯ ಹಂಚಿಕೊಳ್ಳುವುದಕ್ಕಲ್ಲಾ? ಅದನ್ನು ಬಳಸದಿದ್ದರೆ ಅದಿದ್ದು ಏನು ಪ್ರಯೋಜನ ಹೇಳು?

ಮಾತಿಗೆ ಸಿಕ್ಕದ ನಿನಗೆ ಇದೊಂದು ಪತ್ರದ ರೂಪದಲ್ಲಿ ನಾಲ್ಕು ಮಾತು ಹೇಳಿದ್ದೇನೆ. ಓದಿ ನಿನ್ನಲ್ಲಿ ಏನಾದರೂ ಬದಲಾವಣೆಯಾದರೆ ನನಗೆ ಖುಷಿಯಾದೀತು. ಅದಿಲ್ಲ, ನಿನ್ನದೇ ಸರಿ ಎಂದು ವಾದಿಸುವುದಾದರೆ ನಾನು ಏನೂ ಮಾಡಲಾಗದ ಅಸಹಾಯಕ.

ನನ್ನೊಂದಿಗೆ ಮಾತು ಬಿಟ್ಟುದಕ್ಕೆ ನನಗೆ ಬೇಸರವಾಗಿಲ್ಲ. ಅದರಿಂದ ನಿನಗೆ ನೆಮ್ಮದಿ ಸಿಗುವುದಾದರೆ ನನಗೆ ಅದರಲ್ಲಿ ಖುಷಿಯೇ. ಆದರೆ ನನ್ನಲ್ಲಿ ತೋರಿಸಿದ ಇಂಥ ವರ್ತನೆಯನ್ನು ಬೇರೊಬ್ಬ ಗೆಳೆಯನಲ್ಲಿ ತೋರಿಸಬೇಡ ಎಂದು ಹೇಳುತ್ತಾ ಈ ಪುಟ್ಟ ಪತ್ರಬರಹಕ್ಕೆ ಪೂರ್ಣವಿರಾಮ ಹಾಕುತ್ತೇನೆ.
-ಪದ್ಮಾ

ಬೊಳುವಾರು ದಾರಿಯಲ್ಲೊಂದು ಇಣುಕು...

ಬಿ.ಎಂ.ಬಶೀರ್

ಬೊಳುವಾರು!
ಅದು ಎಂಬತ್ತರ ದಶಕದ ದಿನಗಳು.

ಪುತ್ತೂರು, ಉಪ್ಪಿನಂಗಡಿ ಆಸುಪಾಸಿನಲ್ಲಿ ಮಾತ್ರವಲ್ಲ, ದಕ್ಷಿಣ ಕನ್ನಡಾದ್ಯಂತ ಬೊಳುವಾರು ಎನ್ನುವ ಪುಟ್ಟ ಊರಿನ ಕುಖ್ಯಾತಿ ಹರಡಿತ್ತು. ದಕ್ಷಿಣಕನ್ನಡದ ಸಂಘಪರಿವಾರದ ಬೀಜ ಮೊಳಕೆ ಯೊಡೆದು ಹಬ್ಬಿದ್ದು ಇದೇ ಬೊಳುವಾರಿನಲ್ಲಿ. ಪುತ್ತೂರು ಆಗ ಸಂಪೂರ್ಣ ಬಿಜೆಪಿ ಮತ್ತು ಆರೆಸ್ಸೆಸ್ ಕೈ ವಶವಾಗಿತ್ತು. ಉರಿಮಜಲು ರಾಮಭಟ್ಟರು ಪುತ್ತೂರಿನ ಶಾಸಕರಾಗಿದ್ದ ಕಾಲ ಅದು. ಬೊಳುವಾರಿನ ಸಂಘಪರಿವಾರದ ಹುಡು ಗರ ‘ಗ್ಯಾಂಗ್‌ವಾರ್’ಗಳು ಸುತ್ತಲಿನ ಪರಿಸರದಲ್ಲಿ ಕುಖ್ಯಾತಿಯನ್ನು ಪಡೆದಿದ್ದವು.

ಉಪ್ಪಿನಂಗಡಿ ಆಸುಪಾಸಿನ ಮುಸ್ಲಿಮರು ಪುತ್ತೂರಿಗೆ ಕಾಲಿಡಲು ಅಂಜುತ್ತಿದ ದಿನಗಳದು. ಇಂತಹ ಸಂದರ್ಭದಲ್ಲೇ ಮುತ್ತಪ್ಪ ರೈ ಮತ್ತು ಆತನ ಹುಡುಗರ ಪ್ರವೇಶ ವಾಯಿತು. ವಿನಯಕುಮಾರ್ ಸೊರಕೆ ಎಂಬ ಯುವ ತರುಣ ರಾಜಕೀಯಕ್ಕೆ ಕಾಲಿಟ್ಟರು. ಉರಿಮಜಲು ರಾಮಭಟ್ಟರಿಂದ ಪುತ್ತೂರು ತಾಲೂಕಿನ ಜನ ಅದೆಷ್ಟು ಬೇಸತ್ತು ಹೋಗಿದ್ದ ರೆಂದರೆ, ಸೊರಕೆ ಹೆಸರು ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಂಚಿನ ಸಂಚಾರವನ್ನೇ ಮಾಡಿತು. ಆ ಚುನಾವಣೆಯಲ್ಲಿ ಭಾರೀ ಬಹು ಮತದಿಂದ ವಿನಯಕುಮಾರ್ ಎನ್ನುವ ಅಮುಲ್ ಬೇಬಿ ಆಯ್ಕೆಯಾದರು. ಈ ಗೆಲುವು ಪುತ್ತೂರಿನ ಮೇಲೆ ಅದೆಷ್ಟು ಪರಿಣಾಮ ಬೀರಿ ತೆಂದರೆ, ನಿಧಾನಕ್ಕೆ ಕೋಮುಗಲಭೆ, ಗ್ಯಾಂಗ್ ವಾರ್‌ಗಳ ಸದ್ದಡಗಿತು. ಆರೆಸ್ಸೆಸ್‌ನ ಅಧಿನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರ ಬಾವ ಉರಿಮಜಲು ರಾಮಭಟ್ಟರು ಶಾಶ್ವತ ಮೂಲೆ ಸೇರಿದರು. ನಿಧಾನಕ್ಕೆ ‘ಬೊಳವಾರ’ನ್ನು ಜನ ಮರೆಯತೊಡಗಿ ದರು.

ಇದೇ ಹೊತ್ತಲ್ಲಿ, ಇನ್ನೊಂದು ಭಿನ್ನ ಕಾರಣಕ್ಕಾಗಿ ಬೊಳುವಾರು ನನ್ನಲ್ಲಿ ಕುತೂಹಲವನ್ನು ಹುಟ್ಟಿ ಸಿತ್ತು. ಅಪರೂಪಕ್ಕೆಂದು ಪುತ್ತೂರು ಬಸ್ಸು ಹತ್ತಿದರೆ, ಇನ್ನೇನು ಪುತ್ತೂರು ತಲು ಪಬೇಕು ಎನ್ನುವಷ್ಟರಲ್ಲಿ ಕಂಡಕ್ಟರ್ “ಯಾರ್ರೀ... ಬೊಳುವಾರು...ಇಳೀರಿ...” ಎನ್ನುತ್ತಿದ್ದ. ನಾನು ತಡೆಯ ಲಾರದ ಕುತೂಹಲ ದಿಂದ, ಕಿಟಕಿಯ ಮೂಲಕ ಬೊಳುವಾರನ್ನು ನೋಡಲೆಂದು ಇಣುಕು ತ್ತಿದ್ದೆ. ಯಾರೋ ನನ್ನ ಪರಿಚಿತರನ್ನು ಹುಡುಕು ವವನಂತೆ ಕಣ್ಣಾಡಿಸು ತ್ತಿದ್ದೆ. ಅಲ್ಲೇ ಎಲ್ಲೋ ಮುತ್ತುಪ್ಪಾಡಿ ಎನ್ನುವ ಹಳ್ಳಿ ಇರಬೇಕೆಂದು...ಜನ್ನತ್ ಕತೆಯಲ್ಲಿ ಬರುವ ಮೂಸಾ ಮುಸ್ಲಿಯಾರರು ಅಲ್ಲೇ ಎಲ್ಲೋ ಬಸ್‌ಗಾಗಿ ಕಾಯುತ್ತಿರಬಹುದೆಂದು...ಅಥವಾ ಆ ರಿಕ್ಷಾ ಸ್ಟಾಂಡ್‌ನಲ್ಲಿ ಕಾಯುತ್ತಿರುವ ಹಲವು ಗಡ್ಡಧಾರಿಗಳಲ್ಲಿ ಒಬ್ಬರು ಬೊಳುವಾರು ಮುಹಮ್ಮದ್ ಕುಂಞಿ ಎನ್ನುವ ನನ್ನ ಮೆಚ್ಚಿನ ಕತೆಗಾರರಾಗಿರಬಹುದೆಂದು ನನಗೆ ನಾನೇ ಕಲ್ಪಿಸಿಕೊಳ್ಳುತ್ತಿದ್ದೆ. ಕಂಡಕ್ಟರ್ ‘ರೈಟ್’ ಎಂದು ಹೇಳುವವರೆಗೂ ಆ ಬೊಳುವಾರನ್ನು ಅದೇನೋ ಅದ್ಭುತವನ್ನು ನೋಡುವಂತೆ ನೋಡುತ್ತಿದ್ದೆ. ಯಾರೋ ಕೆತ್ತಿಟ್ಟ ಚಿತ್ರದಂತೆ ಒಂದು ಕಾಲ್ಪನಿಕ ಬೊಳುವಾರು ನನ್ನಲ್ಲಿ ಗಟ್ಟಿಯಾಗಿ ನಿಂತಿತ್ತು.

ಬೊಳುವಾರಿನ ಹುಡುಗರ ‘ಗ್ಯಾಂಗ್‌ವಾರ್’ನ ಕಾಲದಲ್ಲೇ ಬೊಳುವಾರು ಮುಹಮ್ಮದ್ ಕುಂಞಿ ಯವರ ಕತೆಗಳು ತರಂಗ, ಉದಯವಾಣಿ ಯಲ್ಲಿ ಪ್ರಕಟವಾಗಲಾ ರಂಭಿಸಿದವು. ಆಗ ನಾನು ಬಹುಶಃ ಎಂಟನೆ ತರಗತಿಯಲ್ಲಿ ದ್ದಿರಬೇಕು. ಮನೆಗೆ ಅಣ್ಣ ತರಂಗ ತರುತ್ತಿದ್ದ. ಬಳಿಕ ಗೊತ್ತಾಯಿತು. ಅವನು ತರಂಗ ತರುತ್ತಿದ್ದದ್ದೇ ಅದರಲ್ಲಿರುವ ‘ಜಿಹಾದ್’ ಧಾರಾ ವಾಹಿಯನ್ನು ಓದುವು ದಕ್ಕಾಗಿ. ಬೊಳುವಾರರ ಕತೆಗಳನ್ನು, ಕಾದಂಬರಿ ಯನ್ನು ಓದುತ್ತಿದ್ದ ಹಾಗೆ ನನಗೊಂದು ಅಚ್ಚರಿ. ಅರೆ...ಇಲ್ಲಿರುವ ಹೆಸರುಗಳೆಲ್ಲ ನಮ್ಮದೇ. ಮೂಸಾ ಮುಸ್ಲಿಯಾರ್, ಖೈಜಮ್ಮ, ಸುಲೇಮಾನ್ ಹಾಜಿ, ಮುತ್ತುಪ್ಪಾಡಿ...ಇವನ್ನೆಲ್ಲ ಕತೆ ಮಾಡ್ಲಿಕ್ಕೆ ಆಗ್ತದಾ...! ಎಲ್ಲಕ್ಕಿಂತ ಅವರು ಬಳಸುವ ಕನ್ನಡ ಭಾಷೆ. ನಾವು ಬ್ಯಾರಿ ಭಾಷೆ ಮಾತನಾಡಿ ದಂತೆಯೇ ಕೇಳುತ್ತದೆ. ನನ್ನ ಸುತ್ತಮುತ್ತ ನಾನು ಕಾಣುತ್ತಿರುವ, ಹೆಚ್ಚೇಕೆ ನನ್ನ ಮನೆಯೊಳಗಿನ ಮಾತುಕತೆಗಳೆಲ್ಲ ಅವರ ಕತೆ ಯೊಳಗೆ ಸೇರಿತ್ತು. ಅಣ್ಣನಂತೂ ಬೊಳುವಾರಿನ ಕತೆಗಳ ಮೋಡಿಗೆ ಸಿಲುಕಿ ಸಂಪೂರ್ಣ ಕಳೆದು ಹೋದದ್ದನ್ನು, ನಾನೂ ಬಾಲ್ಯದಲ್ಲಿ ತಂದೆ ತಾಯಿಗಳ ಪಾಲಿಗೆ ‘ದಾರಿತಪ್ಪಿ’ದ್ದನ್ನು ಈಗ ನೆನೆದರೆ ನಗು, ನಿಟ್ಟುಸಿರು!

ಜಿಹಾದ್ ಕಾದಂಬರಿ ಪುಸ್ತಕವಾಗಿ ಬಂದಾಗ ಅಣ್ಣ ಅದರ ಪ್ರತಿಯನ್ನು ತಂದಿದ್ದ. ಬಹುಶಃ ಆ ಕಾದಂಬರಿಯನ್ನು ಅವನು ತನಗೆ ತಾನೇ ಆವಾ ಹಿಸಿಕೊಂಡಿದ್ದನೇನೋ ಅನ್ನಿಸು ತ್ತದೆ. ಅದಕ್ಕೊಂದು ಕಾರಣ ವಿತ್ತು. ಅದರಲ್ಲಿ ಬರುವ ಕತಾ ನಾಯಕನ ಪಾತ್ರದ ಹೆಸರೂ, ಇವನ ಹೆಸರೂ ಒಂದೇ ಆಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಆ ಕಾದಂಬರಿಯಲ್ಲಿ ಬರುವ ಕ್ರಿಶ್ಚಿಯನ್ ಹೆಣ್ಣು ಪಾತ್ರಗಳಾದ ಸಲೀನಾ, ರೋಸಿಯಂತಹ ಒಳ್ಳೆಯ ಕ್ರಿಶ್ಚಿಯನ್ ಸ್ನೇಹಿತೆಯರು ಅವನಿಗೂ ಸ್ಕೂಲಲ್ಲಿದ್ದರು. ಅವನಾಗ ಪಿಯುಸಿ ಕಲಿಯುತ್ತಿದ್ದ. ಕಾಲೇಜಲ್ಲಿ ಅವನೊಂದು ಕೈಬರಹ ಪತ್ರಿಕೆ ಯನ್ನು ಸಂಪಾದಿಸುತ್ತಿದ್ದ (ಅವನೇ ಅದರ ಕಲಾವಿದನೂ ಆಗಿದ್ದ). ‘ಸ್ಪಂದನ’ ಅದರ ಹೆಸರು.

ಅದರಲ್ಲಿ ಏನೇನೋ ಬರೆದು ಯಾರ‍್ಯಾರದೋ ನಿಷ್ಠುರ ಕಟ್ಟಿಕೊಂಡು, ಮೇಷ್ಟ್ರ ಕೈಯಲ್ಲಿ ಬೆನ್ನು ತಟ್ಟಿಸಿಕೊಂಡು ತನ್ನದೇ ಒಂದು ಬಳಗದ ಜೊತೆಗೆ ಓಡಾಡುತ್ತಿದ್ದ. ಅಲ್ಲೆಲ್ಲಾ ನಾನು ಬೊಳುವಾರು ಮುಹಮ್ಮದ್ ಕುಂಞಿ ‘ಫಿತ್ನ’ಗಳನ್ನು ಕಾಣು ತ್ತಿದ್ದೆ. ತನ್ನ ಪಿಯುಸಿ ಕಾಲದಲ್ಲಿ ಬೊಳುವಾರರ ತರಹ ಕತೆ ಗಳನ್ನು ಬರೆಯಲು ಪ್ರಯತ್ನಿಸು ತ್ತಿದ್ದ. ಆದರೆ ಬಳಿಕ, ಬೊಳು ವಾರು, ಫಕೀರರ ಪ್ರಭಾವ ದಿಂದ ಸಂಪೂರ್ಣ ಹೊರ ಬಂದು ಅವನದೇ ಭಾಷೆ, ಶೈಲಿ, ಸ್ವಂತಿಕೆಯುಳ್ಳ ಕೆಲವೇ ಕೆಲವು ಕತೆಗಳನ್ನು ಬರೆದು ಹೊರಟು ಹೋದ ಎನ್ನುವುದು ಬೇರೆ ವಿಷಯ. ಆದರೆ ನಾನು ಬೊಳು ವಾರರ ಕತೆಗಳಿಗೆ ಹತ್ತಿರವಾಗು ವುದಕ್ಕೆ ಅಣ್ಣನೇ ಕಾರಣ. ಅವನ ಪುಸ್ತಕಗಳ ಕಾಪಾಟು ನನ್ನ ಪಾಲಿಗೆ ಆಗ ಚಂದಮಾಮ ಕತೆಗಳಲ್ಲಿ ಬರುವ ಅಮೂಲ್ಯ ವಜ್ರ ವೈಢೂರ‍್ಯಗಳಿರುವ ತಿಜೋರಿ ಯಾಗಿತ್ತು. ಅದನ್ನು ಯಾವಾಗಲೂ ಅಣ್ಣ ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದ.

ಒಂದು ರೀತಿಯಲ್ಲಿ ಬೊಳುವಾರು ನನ್ನಲ್ಲಿ ಮಾತ್ರವಲ್ಲ, ನನ್ನ ಮನೆಯೊಳಗೇ ಒಂದು ಅರಾಜಕತೆಯನ್ನು ಸೃಷ್ಟಿ ಮಾಡಿ ಹಾಕಿದರೋ ಅನ್ನಿಸುತ್ತದೆ. ಅಣ್ಣನಲ್ಲಾದ ಬದಲಾವಣೆ ಮನೆ ಯೊಳಗೆ ಸಣ್ಣ ಪುಟ್ಟ ಗದ್ದಲಗಳನ್ನು ಸೃಷ್ಟಿಸತೊಡ ಗಿತು. “ಅಷ್ಟು ಚೆನ್ನಾಗಿ ನಮಾಜು ಮಾಡುತ್ತಿದ್ದ ಹುಡುಗನಿಗೆ ಇದೇನಾಯಿತು...?” ಎಂಬ ಅಣ್ಣನ ಮೇಲಿನ ಸಿಟ್ಟನ್ನು ತಾಯಿ ನನ್ನ ಮೇಲೆ ತೀರಿಸುತ್ತಿದ್ದರು. ಸೊಗಸಾಗಿ ಕಿರಾ‌ಅತ್‌ಗಳನ್ನು ಓದುತ್ತಾ, ಮೀಲಾದುನ್ನೆಬಿಯ ಸಮಯದಲ್ಲಿ ಹತ್ತು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುತ್ತಾ ಇದ್ದ ನಾನು ಕೆಲವೊಮ್ಮೆ ‘ಅಧಿಕ ಪ್ರಸಂಗ’ ಮಾತನಾಡುವುದು ತಾಯಿಗೆ ಸಿಟ್ಟು ತರಿಸುತ್ತಿತ್ತು. ಬೊಳುವಾರು ತಮ್ಮ ಕತೆಗಳಲ್ಲಿ ಎತ್ತಿದ ಪ್ರಶ್ನೆಗಳನ್ನು ನಾನು ಸಮಾಜದೊಳಗೆ ಎತ್ತಬೇಕು ಎನ್ನುವ ತುಡಿತ. ಒಂದು ರೀತಿ ಹುಚ್ಚು ಅನುಕರಣೆ. ಆ ಕಾಲ, ವಯಸ್ಸು ಅದಕ್ಕೆ ಕಾರಣ ಇರಬಹುದು. ಆದರೆ ನಿಧಾನಕ್ಕೆ ಬೊಳುವಾರು ತಮ್ಮ ಕತೆಗಳಲ್ಲಿ ಇನ್ನಷ್ಟು ಬೆಳೆಯುತ್ತಾ ಹೋದರು. ನಾವೂ ಬೆಳೆಯುತ್ತಾ ಹೋದೆವು.

ಆರಂಭದ ಬೊಳುವಾರರ ಕತೆಗಳಲ್ಲಿ ಅಸಾಧಾ ರಣ ಸಿಟ್ಟಿತ್ತು. ಬೆಂಕಿಯಿತ್ತು. ಆಗಷ್ಟೇ ಬೆಂಕಿಯ ಕುಲುಮೆಯಿಂದ ಹೊರ ತೆಗೆದ ಸಲಾಖೆಯಂತೆ ಧಗ ಧಗ ಹೊಳೆಯುತ್ತಿತ್ತು. ಬಹುಶಃ ನಮ್ಮ ಹದಿ ಹರೆಯಕ್ಕೆ ಆ ಕಾರಣದಿಂದಲೇ ಅದು ತುಂಬಾ ಇಷ್ಟವಾಗಿರಬೇಕು. ‘ದೇವರುಗಳ ರಾಜ್ಯದಲ್ಲಿ’ ಕಥಾಸಂಕಲನದಲ್ಲಿ ಇಂತಹ ಕತೆಗಳನ್ನು ಗುರುತಿಸಬಹುದು. ವ್ಯವಸ್ಥೆಯ ವಿರುದ್ಧ ಕಥಾನಾಯಕನ ಹಸಿ ಹಸಿ ಬಂಡಾಯ. ಬೊಳುವಾರರ ಆರಂಭದ ಎಲ್ಲ ಕತೆಗಳಲ್ಲೂ ಇದನ್ನು ಕಾಣಬಹುದು. ಆದರೆ, ‘ಆಕಾಶಕ್ಕೆ ನೀಲಿ ಪರದೆ’ಯ ಕತೆಗಳು ಅವರ ಕತಾ ಬದುಕಿನ ಎರಡನೆ ಹಂತ. ಇಲ್ಲಿ ಬೊಳುವಾರು ಮಹಮ್ಮದ್ ಕುಂಞಿವರ ಅದ್ಭುತ ಕಲೆಗಾರಿಕೆಯನ್ನು ಗುರುತಿಸಬಹುದು. ಬೊಳುವಾರರನ್ನು ಆರಂಭದಿಂದಲೇ ಓದಿಕೊಂಡು ಬಂದವರಿಗೆ ಈ ಬದಲಾವಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ತನ್ನ ಕತೆಯನ್ನು ಹೇಳಲು ಅದ್ಭುತವಾದ ರೂಪಕಗಳನ್ನು ಬಳಸುತ್ತಾರೆ. ವ್ಯಂಗ್ಯ, ತಮಾಷೆಗಳ ಕುಸುರಿಗಾರಿಕೆಯಿಂದ ಕತೆಯನ್ನು ಇನ್ನಷ್ಟು ಚಂದ ಕಾಣಿಸುತ್ತಾರೆ. ಅಂತಹದೊಂದು ಅದ್ಭುತ ಕತೆಗಳಲ್ಲಿ ‘ಇಬಾದತ್’ ಕೂಡ ಒಂದು.

‘ಪವಾಡ ಪುರುಷ’ರೆಂಬ ಜನರ ಮುಗ್ಧ ನಂಬಿಕೆಯ ನಡುವೆಯೇ ಮಿಠಾಯಿ ಅವುಲಿಯಾ ಆ ಊರಿನಲ್ಲಿ ಮಾಡುವ ಸಾಮಾಜಿಕ ಕ್ರಾಂತಿ, ದೇವರನ್ನು ತಲುಪುವ ಮನುಷ್ಯನ ಪ್ರಯತ್ನಕ್ಕೆ ಅವರು ತೋರಿಸುವ ಹೊಸ ದಾರಿ, ಜವುಳಿ ಹಾಜಿಯವರನ್ನು ‘ಯಾ ಸಿದ್ದೀಕ್’ ಎಂದು ಹಾಜಿಯವರೊಳಗಿನ ಭಕ್ತನನ್ನು ಕಂಡು ಮೂಕ ವಿಸ್ಮಿತ ರಾಗುವ ರೀತಿ ಎಲ್ಲವೂ ಕನ್ನಡಕ್ಕೆ ಹೊಸತು. ‘ಆಕಾಶಕ್ಕೆ ನೀಲಿ ಪರದೆ’ಯಲ್ಲಿ ಕತೆಗಾರನ ಸಿಟ್ಟು ತಣ್ಣಗಾಗಿದೆ. ವಿವೇಕ ಜಾಗೃತವಾಗಿದೆ. ಕುಲುಮೆಯಿಂದ ಹೊರ ತೆಗೆದ ಸಲಾಖೆಯನ್ನು ಬಡಿದು, ತಣ್ಣಗೆ ನೀರಿಗಿಳಿಸಲಾಗಿದೆ.

೯೦ರ ದಶಕದ ನಂತರ ಬೊಳುವಾರರದು ಇನ್ನೊಂದು ಹಂತ. ಇದು ಅವರ ಮೂರನೆಯ ಹಂತ. ಬಾಬರಿ ಮಸೀದಿ ವಿವಾದ ತುತ್ತ ತುದಿಗೇರಿದ ಸಂದರ್ಭದಲ್ಲಿ ಅವರ ಕತೆಗಳು ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುವುದನ್ನು ನಾವು ಕಾಣಬಹುದು. ಈ ಸಂದರ್ಭದಲ್ಲೇ ಅವರು ಬರೆದ ಸ್ವಾತಂತ್ರದ ಓಟ, ಒಂದು ತುಂಡು ಗೋಡೆ ಕತೆಗಳು ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗುಳಿವ ಕತೆಗಳು. ದೇಶದಲ್ಲಿ ಹೆಡೆಯೆತ್ತಿರುವ ಕೋಮುವಾದ, ಇಂತಹ ಸಂದರ್ಭದಲ್ಲಿ ಮುಸ್ಲಿಮನೊಬ್ಬ ಎದುರಿಸಬೇಕಾದ ದೇಶಪ್ರೇಮದ ಸವಾಲುಗಳನ್ನು ತಮ್ಮ ಕತೆಗಳಲ್ಲಿ ಅದ್ಭುತವಾಗಿ ಕಟ್ಟತೊಡಗಿದರು. ಬಾಬರಿ ಮಸೀದಿ ಧ್ವಂಸಗೊಂಡ ಸಂದರ್ಭದಲ್ಲಿ ಬರೆದ ಒಂದು ತುಂಡು ಗೋಡೆ, ಕೋಮುವಾದ ಹೇಗೆ ಹಳ್ಳಿ ಹಳ್ಳಿಗೂ ಕಾಲಿಟ್ಟು ಅಲ್ಲಿನ ಮುಗ್ಧ ಬದುಕಿಗೆ ಸವಾಲನ್ನು ಒಡ್ಡ ತೊಡಗಿವೆ ಎನ್ನುವುದನ್ನು ಹೇಳುತ್ತದೆ.

ಬೊಳುವಾರರು ಬರೆದ ‘ಸ್ವಾತಂತ್ರದ ಓಟ’ ನೀಳ್ಗತೆಯ ಓಟ ಇನ್ನೂ ನಿಂತಿಲ್ಲ. ಅದೀಗ ತನ್ನ ಓಟವನ್ನು ಮುಂದುವರಿಸಿದೆ. ನೀಳ್ಗತೆ ಸಾವಿರಾರು ಪುಟಗಳ ಕಾದಂಬರಿಯಾಗುತ್ತಿದೆ ಎನ್ನುವ ‘ಗುಟ್ಟ’ನ್ನು ಬೊಳುವಾರರು ಬಹಿರಂಗಪಡಿಸಿದ್ದಾರೆ. ಬೊಳುವಾರರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಿಕ್ಕಿದ್ದಕ್ಕಿಂತಲೂ ದೊಡ್ಡ ಸಿಹಿ ಸುದ್ದಿ ಕನ್ನಡಿಗರಿಗೆ ಸಿಕ್ಕಿದೆ. ಬೊಳುವಾರರು ಏನು ಬರೆದರೂ ಅದು ಹೃದಯ ತಟ್ಟುವಂತೆಯೇ ಇರುತ್ತದೆ ಎನ್ನುವುದು ಕನ್ನಡಿಗರಿಗೆ ಗೊತ್ತಿದ್ದದ್ದ್ದೇ. ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಎನ್ನುವ ಮಕ್ಕಳ ಪದ್ಯಗಳ ಸಂಪಾದನೆಯನ್ನು ಹೊರತಂದರು. ಮಕ್ಕಳ ಪಾಲಿಗೆ ಅದೊಂದು ನಿಧಿಯೇ ಆಯಿತು. ಮಕ್ಕಳು ಮಾತ್ರವಲ್ಲ, ಹಿರಿಯರೂ ಅದನ್ನು ಚಪ್ಪಾಳೆ ತಟ್ಟುತ್ತಾ ಸ್ವಾಗತಿಸಿದರು. ಗಾಂಧೀಜಿ ಯನ್ನು ಮತ್ತೆ ಹೊಸದಾಗಿ, ಮುಗ್ಧವಾಗಿ ಕಟ್ಟಿಕೊಟ್ಟರು. ‘ಈ ಪಾಪು ಯಾರು?’ ಎಂದು ನಾವು ಕೆನ್ನೆ ಹಿಂಡಿ ನೋಡಿದರೆ, ಇದು ನಮ್ಮ ನಿಮ್ಮ ಬಾಪು!

ಇತ್ತೀಚೆಗೆ ಬೊಳುವಾರರು ಕತೆ ಬರೆಯುವುದನ್ನು ನಿಲ್ಲಿಸಿಯೇ ಬಿಟ್ಟರಲ್ಲ ಎಂಬ ಕೊರಗು ಕಾಡುತ್ತಿತ್ತು. ನಾನಂತೂ ಪ್ರತಿ ದೀಪಾವಳಿಯನ್ನು ಕಣ್ಣಲ್ಲಿ ಹಣತೆ ಹಚ್ಚಿ ಕಾಯುತ್ತಿದ್ದೆ. ಯಾಕೆಂದರೆ ಬೊಳುವಾರು ದೀಪಾವಳಿ ವಿಶೇಷಾಂಕಕ್ಕೆ ಮಾತ್ರ ಬರೆಯುತ್ತಿದ್ದರು. ಆದರೆ ಕೆಲವರ್ಷಗಳಿಂದ ಅದೂ ಇಲ್ಲ. ಇಂತಹ ಸಂದರ್ಭದಲ್ಲಿ, ತಾನು ಈವರೆಗೆ ಬರೆಯದೇ ಇದ್ದುದಕ್ಕೆ ಪಶ್ಚಾ ತ್ತಾಪವೋ ಎಂಬಂತೆ, ನಮ್ಮೆಲ್ಲರ ಆಸೆಯನ್ನು ಈಡೇರಿಸುವುದಕ್ಕೆ ‘ಬೃಹತ್ ಕಾದಂಬರಿ’ಯನ್ನು ನೀಡುವುದಾಗಿ ಹೇಳಿದ್ದಾರೆ.

ಅಕ್ಟೋಬರ್ ೩೦ರಂದು ಅದು ಬಿಡುಗಡೆಯಾಗುತ್ತದೆ ಎಂದೂ ಘೋಷಿಸಿದ್ದಾರೆ. ಅಂದೇ ಏಕೆ ಬಿಡುಗಡೆ ಎಂದು ಕೇಳಿದರೆ ಅವರು ತಣ್ಣಗೆ, ಆ ದಿನ ನಾನು ವೃತ್ತಿಯಿಂದ ನಿವೃತ್ತನಾಗುತ್ತೇನೆ ಎನ್ನುತ್ತಾರೆ. ಬೊಳುವಾರು ವೃತ್ತಿಯಿಂದ ನಿವೃತ್ತರಾಗಲಿ. ಆದರೆ ಪ್ರವೃತ್ತಿಯಿಂದ ದೂರ ಸರಿಯದಿರಲಿ. ಬದಲಿಗೆ ಇನ್ನಷ್ಟು ಹತ್ತಿರವಾಗಲಿ. ಅವರಿಂದ ಇನ್ನೂ ಕತೆ, ಕಾದಂಬ ರಿಗಳು ಹುಟ್ಟಿ ಬರಲಿ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗಾಗಿ, ಹೊಸ ಕಾದಂಬರಿಯನ್ನು ಬರೆಯುತ್ತಿರುವುದಕ್ಕಾಗಿ ಅವರಿಗೆ ವಾರ್ತಾಭಾರತಿ ಪತ್ರಿಕೆಯ ಹಾರ್ದಿಕ ಅಭಿನಂದನೆಗಳು.

ಅದ್ದುವಿನ ‘ನೋಂಬು’ ಹಾರೈಸುವ ಒಳಿತಿನ ಬೆಳಕು

-ಜ್ಯೋತಿ ಗುರುಪ್ರಸಾದ್

‘ನೋಂಬು’ ಎಂಬ ಪಕೀರ್ ಮುಹಮ್ಮದ್ ಕಟಪಾಡಿಯವರು ಬರೆದಿರುವ ಕಥೆ ನನ್ನ ಇಷ್ಟದ ಕಥೆಗಳಲ್ಲಿ ಒಂದು. ಈ ಕಥೆ ಅದ್ದು ಎಂಬ ಹುಡುಗನ ಮುಗ್ಧ ಮನಸ್ಸಿನ ಮೂಲಕ ಲೋಕವನ್ನು ನೋಡುವ ಸತ್ಯ-ಧರ್ಮದ ನಿಜ ಎಳೆಗಳನ್ನು ಸರಳವಾಗಿ ಬೆಸೆಯುವ ಮಹತ್ವದ ಸಾಂಸ್ಕೃತಿಕ ಕೊಂಡಿಯಾಗಿ ಕಾಣುತ್ತದೆ.

‘ನೋಂಬು’ ಎಂದರೆ ಉಪವಾಸ ವ್ರತ. ಮುಖ್ಯವಾಗಿ ‘ರಮಝಾನ್’ ತಿಂಗಳಲ್ಲಿ ಇರುವ ಉಪವಾಸ ವ್ರತದ ಆಚರಣೆ. ಮುಂಜಾನೆ ಹಾಗೂ ಕತ್ತಲಾದ ನಂತರ ತೆಗೆದುಕೊಳ್ಳುವ ಉಪಹಾರ ಬಿಟ್ಟರೆ ಈ ನಡುವೆ ಮತ್ತೇನನ್ನೂ ಆಹಾರವಾಗಿ ಸ್ವೀಕರಿಸದೆ ಅಲ್ಲಾಹನ ಧ್ಯಾನದಲ್ಲಿ ಕಟ್ಟು ನಿಟ್ಟಾಗಿ ಆಚರಿಸುವ ಮನಃಶುದ್ಧಿಯ ಉಪವಾಸ ವ್ರತ. ಈ ಉಪವಾಸ ವ್ರತದ ಉದ್ದೇಶ ಒಳಿತಿನ ಹಾರೈಕೆ. ಈ ಒಳಿತಿನ ಕಲ್ಪನೆ ಹೇಗಿದೆ ಎಂದರೆ ಹಸಿವಿನ ಕಷ್ಟ ಅರ್ಥ ಮಾಡಿಕೊಂಡು ಉಳ್ಳವರು ಇಲ್ಲದವರಿಗೆ (ಬಡವರಿಗೆ) ಕೈಲಾದಷ್ಟು ದಾನ ಮಾಡುವ ಅಭ್ಯಾಸ ಬೆಳೆಸಿಕೊಂಡು ವ್ರತವನ್ನು ಆಚರಿಸಿದರೆ ಅವರ ಇಷ್ಟಾರ್ಥ ಫಲಿಸುವ ಸ್ವರ್ಗ ಸುಖ ಅವರಿಗೆ ಲಭಿಸುತ್ತದೆ ಎಂಬ ಸಂತಸದ ಸಂದೇಶವನ್ನು ರವಾನಿಸುವ ರೂಪಕ.

ಈ ರೂಪಕವನ್ನು ‘ನೋಂಬು’ ಕಥೆಯ ಅದ್ದು ಎಂಬ ಬಡವರ ಮನೆಯ ಹುಡುಗ ನಮಗೆ ಎಷ್ಟು ಚೆನ್ನಾಗಿ ಕಣ್ಮುಂದೆ ಬರಿಸುತ್ತಾ ನೆಂದರೆ ಧ್ಯಾನದಲ್ಲಿ ಓದುವ ನಾವು ಕೂಡ ‘ನೋಂಬು’ ಆಚರಿಸಿದ ಸಂಭ್ರಮಕ್ಕೆ ಒಳಗಾಗು ತ್ತೇವೆ. ಕಥೆ ಇಬ್ಬರು ಎಳೆಯ ಗೆಳೆಯರ ಮನೆಗಳ ನಡುವೆ ನಡೆಯುತ್ತದೆ. ಅದ್ದು ಮತ್ತು ಕಾಸಿಂ ಎಂಬ ಹೆಸರಿನ ಪುಟ್ಟ ಮಕ್ಕಳು ಅವರು. ಅದ್ದು ಬೀಡಿ ಕಟ್ಟಿ ಜೀವನ ಸಾಗಿಸುವ ಅನಿವಾರ್ಯತೆ ಇರುವ ಬಡ ಅಪ್ಪ ಅಮ್ಮನ ಮಗನಾದರೆ, ಕಾಸಿಂ ತನ್ನ ಮನೆಯಲ್ಲಿ ಐಹಿಕವಾದ ಎಲ್ಲಾ ಸುಖ ಸಂಪತ್ತು ಉಳ್ಳ ಶ್ರೀಮಂತರ ಮನೆಯ ಹುಡುಗ. ಅದ್ದುವಿಗೆ ‘ನೋಂಬು’ ಹೇಗಿರುತ್ತದೆ ಎಂದು ತಿಳಿದು ಕೊಳ್ಳುವ ಅದಮ್ಯ ಹಂಬಲ. ಅವನ ಮನೆಯಲ್ಲಿ ಅವನ ಅಪ್ಪ-ಅಮ್ಮ ನೋಂಬನ್ನು ಕೈಗೊಂಡಿದ್ದಾರೆ. ತನ್ನ ಗೆಳೆಯ ಕಾಸಿಂನನ್ನು ‘ನೋಂಬು ಹೇಗಿರುತ್ತದೋ?’ ಎಂದು ಕೇಳುತ್ತಾನೆ. ಅವನಿಗೂ ನೋಂಬಿನ ಅನುಭವವಿರುವುದಿಲ್ಲ! ಮಕ್ಕಳಿಗೆ-ಕೈಲಾಗದ ದುರ್ಬಲರಿಗೆ ನೋಂಬಿನ ಕಡ್ಡಾಯವಿರುವು ದಿಲ್ಲ. ತನಗೆ ತನ್ನ ಅಮ್ಮನಿಂದ ತಿಳಿದಷ್ಟನ್ನು ಮಾತ್ರ ಹೇಳುತ್ತಾನೆ. ‘ಈ ರಮಝಾನ್ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದಂತೆ. ಈ ರಮಾಝಾನ್ ತಿಂಗಳಲ್ಲಿ ಖುರಾನ್ ಇದೆಯಲ್ಲ, ಅದು ಭೂಮಿಗೆ ಬಂದಿತ್ತಂತೆ ನೋಂಬು ಮಾಡಿದವರೆಲ್ಲ ಸ್ವರ್ಗಕ್ಕೆ ಹೋಗುತ್ತಾ ರಂತೆ’. ‘ಈ ಸ್ವರ್ಗ ಅನ್ನೋದು ಸತ್ತ ನಂತರ ಸಿಗೋದು ಅಲ್ವಾ ಕಾಸಿಂ? ಬದುಕಿರೋವಾಗ ನಮಗೆ ಸಿಕ್ಕಿದ್ರೆ ಎಂಥ ಗಮ್ಮತ್ತು ಆಗ್ತಿತ್ತಲ್ವಾ?’ ಎನ್ನುತ್ತಾನೆ ಅದ್ದು. ‘ಭೂಮಿಯಲ್ಲಿ ಹರಾಮ್ ಆದದ್ದು ಕೂಡ ಸ್ವರ್ಗದಲ್ಲಿ ಹಲಾಲ್ ಆಗಿರುತ್ತ ದಂತೆ’ ಎನ್ನುತ್ತಾನೆ ಕಾಸಿಂ. ‘ಹೌದು ಅಲ್ಲಿ ಸುಖ ಸಂಪತ್ತು ಎಲ್ಲ ಇರ‍್ತದಂತೆ, ಹೊಟ್ಟೆ ತುಂಬ ಊಟ ಇರ‍್ತದಂತೆ, ಮೂಸಂಬಿ, ಸೇಬು, ದ್ರಾಕ್ಷಿ ಹಣ್ಣುಗಳಿರ‍್ತವಂತೆ. ದಿನವೂ ಮಾಂಸದ ಅಡುಗೆ, ತುಪ್ಪದ ಅನ್ನ, ಗರಿ ಗರಿ ಇಸ್ತ್ರೀ ಮಾಡಿದ ಸಿಲ್ಕ್ ಅಂಗಿ, ಜರಿಯ ಟೊಪ್ಪಿ ಎಲ್ಲ ಇರ‍್ತದಂತೆ’ ಎಂದು ಅದ್ದು ತನ್ನ ಜ್ಞಾನದ ಬಗ್ಗೆ ಹೇಳುತ್ತಾನೆ. ‘ಅಯ್ಯೋ ಇದೆಲ್ಲ ಬೇಕಾದ್ರೆ ಸ್ವರ್ಗಕ್ಕೆ ಹೋಗ್ಬೇಕಾ? ನಮ್ಮ ಮನೆಯಲ್ಲಿ ಅದೆಲ್ಲಾ ಇರ‍್ತದೆ’ ಎಂದು ಕಾಸಿಂ ನಗುತ್ತಾನೆ. ತನ್ನ ಬಡ ಅಪ್ಪ ಅಮ್ಮನ ಬೀಡಿ ಕಟ್ಟುವ ಕಷ್ಟ-ಅವರ ಕೆಮ್ಮು-ಹೊಟ್ಟೆಗಿಲ್ಲದ ಉಪವಾಸದ ದಿನಗಳು ಇವೆಲ್ಲದರ ಅನುಭವ ವಿದ್ದ ಅದ್ದು ಕಾಸಿಂನ ಈ ಮಾತನ್ನು ಕೇಳಿ ಪೆಚ್ಚಾ ಗುತ್ತಾನೆ. ‘ಹಾಗಾದ್ರೆ ಕಾಸಿಂನ ಮನೆಯೆಂದರೆ ಸ್ವರ್ಗವೇ ಇರಬೇಕು’ ಎಂದುಕೊಂಡು ಅದ್ದು ಕುತೂಹಲದಿಂದ ಗೆಳೆಯ ಕಾಸಿಂನ ಮನೆಗೆ ಕಾಲಿಡುತ್ತಾನೆ. ಅಲ್ಲಿ ಅವನಿಗೆ ಕಾಸಿಂನ ಶ್ರೀಮಂತ ಮನೆಯ ಸುಖ-ಸುಪ್ಪತ್ತಿಗೆಯ ಜೊತೆಗೆ ಕಾಸಿಂನ ಅಪ್ಪ ಅಮ್ಮ ಅಕ್ಕ ಭಾವ ಎಲ್ಲರ ಪರಿಚಯದ ಅನುಭವನೂ ಆಗ ತೊಡಗುತ್ತದೆ. ಕಾಸಿಂನೊಡನೆ ಅದ್ದುವಿಗೂ ಪ್ರೀತಿಯಿಂದ ರೊಟ್ಟಿ ಮಾಡಿ ಕೊಡುವ ಕಾಸಿಂನ ಅಮ್ಮನ ಮೂಲಕ ‘ನೋಂಬಿ’ನ ಬಗೆಗಿನ ಕಥೆಯೊಂದು ಅದ್ದುವಿನ ಮನೋಭೂಮಿಕೆಯಲ್ಲಿ ಅಚ್ಚಳಿಯದೆ ಕಾಡುತ್ತಾ ಉಳಿದು ಬಿಡುತ್ತದೆ.

ಆ ಕಥೆ ಹೀಗಿದೆ-‘ಒಂದೂರಿನಲ್ಲಿ ಒಬ್ಬ ಏಳು ವರ್ಷದ ಹುಡುಗನಿದ್ದ ನಿಮ್ಮ ಹಾಗೆ...’ ಎನ್ನುತ್ತಾ ರೊಟ್ಟಿ ಸುಡುವ ಜೊತೆಗೆ ಕಾಸಿಂನ ಅಮ್ಮ ಕಥೆ ಹೇಳತೊಡಗುತ್ತಾಳೆ. ಹುಡುಗ ತಾಯಿಯೊಂದಿಗೆ ಹಠ ಹಿಡಿದು ಉಪವಾಸ ಮಾಡಿದ್ದು, ಸಂಜೆಯಾಗುತ್ತಲೇ ಮುಖ ಬಾಡಿ, ಮೈ ಒಣಗುತ್ತಾ ಬಂದು ಅವನು ಸತ್ತು ಹೋದದ್ದು, ಆಗ ಅಲ್ಲಾಹನ ಧೂತನೊಬ್ಬ ಪಕೀರನ ವೇಷದಲ್ಲಿ ಬಂದು ಅಲ್ಲಾಹನ ದಯೆಯಿಂದ ಬದುಕಿಸಿದ್ದು, ಮತ್ತೇ ಅವನು ತನ್ನ ತಂದೆ-ತಾಯಿಗಳ ಜೊತೆಗೆ ಸುಖವಾಗಿ ಬಾಳಿದ್ದು. ಕಥೆ ಕೇಳುತ್ತಾ ರೋಮಾಂಚನಗೊಂಡ ಅದ್ದು ತಾನೂ ಅಮ್ಮನೊಂದಿಗೆ ಹಠ ಹಿಡಿದು ಮಾರನೆ ದಿನ ನೋಂಬನ್ನು ಆರಂಭಿಸುತ್ತಾನೆ. ‘ತಾನು ಸತ್ತರೆ ಅಲ್ಲಾಹನ ಧೂತ ಬಂದು ಬದುಕಿಸುತ್ತಾನೆ ಉಪವಾಸ ಮಾಡಿದಾಗ ದುವಾ ಮಾಡಿದರೆ ಅಲ್ಲಾಹ್ ಕೇಳಿದ್ದೆಲ್ಲ ಕೊಡುತ್ತಾನಂತೆ. ನಮ್ಮ ಅಪ್ಪ ಅಮ್ಮನಿಗೆ ಕಷ್ಟ ಕೊಡಬೇಡ ಅಂತ ಅಲ್ಲಾಹನಲ್ಲಿ ಬೇಡಿಕೊಳ್ಳಬೇಕು. ನಮಗೆ ಕೂಡ ಕಾಸಿಂನವರಿಗಿರುವಂತಹ ‘ಜನ್ನತುಲ್ ಫಿರ್ದೌಸು’ ನಂತಹ ಮನೆ, ಚೆಂದದ ಬಟ್ಟೆ ಬರೆ ಕೊಡು’ ಎಂದು ಅಲ್ಲಾಹನಲ್ಲಿ ಕೇಳಬೇಕೆಂಬುದು ಅದ್ದುವಿನ ನೋಂಬಿನ ಉದ್ದೇಶ.

ನೋಂಬಿನಲ್ಲಿರುವವರು ಸುಳ್ಳು ಹೇಳಬಾರದು, ಮೋಸ ಮಾಡಬಾರದು, ದುಶ್ಚಟಗಳಲ್ಲಿ ಬೀಳಬಾರದು ಎಂಬುದು ಅದ್ದುವಿಗಿದ್ದ ನಂಬಿಕೆ. ಅದು ಅವನಿಗೆ ಅವನ ಮನೆಯ ವಾತಾವರಣದಿಂದಲೂ ಲಭಿಸಿರುತ್ತದೆ. ಆದರೆ ಕಾಸಿಂ ಮನೆಯಲ್ಲಿ ಅವನ ನಂಬಿಕೆಗೆ ತದ್ವಿರುದ್ದವಾದ ಘಟನೆಗಳೇ ನಡೆಯುತ್ತಾ ದೊಡ್ಡವರ ಕಪಟ ಆಚರಣೆಯ ಬಗ್ಗೆ ಅದ್ದುವಿನ ಕೋಮಲವಾದ ಮನಸ್ಸು ಘಾಸಿಗೊಳ್ಳುವ ಪ್ರಸಂಗಗಳು ಎದುರಾಗುತ್ತದೆ. ಮದುವೆಯಾಗಿ ವರ್ಷದ ಮೊದಲ ಹಬ್ಬಕ್ಕಾಗಿ ಮಾವನ ಮನೆಗೆ ಬಂದಿರುವ ಕಾಸಿಂನ ಭಾವ ನೋಂಬಿನಲ್ಲಿರುವ ಅದ್ದುವನ್ನು ಯಾರಿಗೂ ತಿಳಿಯದಂತೆ ತನಗೆ ಸಿಗರೇಟು ತಂದುಕೊಡಬೇಕೆಂದು ಹೇಳುತ್ತಾನೆ. ನೋಂಬಿನ ಬಗೆಗೆ ಪ್ರಶ್ನೆ ಆಗಲಿಂದ ಅದ್ದುವಿನ ಪುಟ್ಟ ತಲೆಯಲ್ಲಿ ಆರಂಭವಾಗುತ್ತದೆ. ‘ಸಿಗರೇಟು ಸೇದಿದ್ರೆ ನೋಂಬು ಹೋಗುತ್ತದೆ..’ ಎನ್ನುತ್ತಾನೆ ಅದ್ದು. ‘ನನಗೇ ಬುದ್ದಿ ಹೇಳ್ತಿಯೇನೋ ಹುಡುಗ’ ಎಂದು ಕಾಸಿಂನ ಭಾವ ಗದರಿದ ತಕ್ಷಣ ಅದ್ದು ಅಲ್ಲಿಂದ ಕಂಬಿಕೀಳುತ್ತಾನೆ. ಸೂರಪ್ಪನ ಅಂಗಡಿಯಿಂದ ಸಿಗರೇಟು ತರುವಾಗ ಅದ್ದುವಿಗೆ ಸಿಗುವ ಇಸ್ಮಾಲಿ ಹಾಜಿಯವರು ಮಾತಾಡಲೇ ಬಿಡದಂತೆ ಆ ಸಿಗರೇಟು ಅದ್ದುವಿನ ಅಪ್ಪನಿಗೆ ಇರಬೇಕೆಂದು ತಪ್ಪು ಊಹೆ ಮಾಡಿ ‘ಅದಕ್ಕೆ ನೀವು ಬಡವರಾಗಿರೋದು’ ಎಂದು ಚುಚ್ಚು ಮಾತನ್ನಾಡಿ ಅದ್ದುವನ್ನು ನೋಯಿಸುತ್ತಾರೆ. ‘ಅಪ್ಪ-ಅಮ್ಮ ನೋಂಬು-ನಮಾಝ್ ಎರಡನ್ನೂ ಎಂದೂ ತಪ್ಪಿಸಿದವರಲ್ಲ ಆದರೂ ನಾವು ಯಾಕೆ ಬಡವರಾಗಿಯೇ ಉಳಿದಿದ್ದೇವೆ?’ ಎಂಬ ಪ್ರಶ್ನೆ ಅದ್ದುವಿಗೆ ಏಳುತ್ತದೆ. ನಂತರ ಕಾಸಿಂನ ಒಳ್ಳೆಯ ಅಕ್ಕ ಜಮೀಲಾಳ ಮೇಲೆ ಕಾಸಿಂನ ಭಾವ ಹಣಕ್ಕಾಗಿ ದಬ್ಬಾಳಿಕೆ ಮಾಡುವುದನ್ನು ನೋಡಿ ಅಲ್ಲಿಂದ ಓಡೋಣವೆನಿಸುತ್ತದೆ. ‘ನಾನು ಹೇಳಿದ ಹಾಗೆ ಕೇಳ್ಬೇಕು. ತಪ್ಪು ಎದುರು ಮಾತಾಡಿದ್ರೆ ಸೊಡ್ಡಿಗೆ ಜಪ್ಪುತ್ತೇನೆ’ ಎನ್ನುತ್ತಾ ಹೆಂಡತಿ ಜಮೀಲಾಳಿಗೆ ಕಾಸಿಂನ ಭಾವ ಜೋರು ಮಾಡುತ್ತಾನೆ. ‘ಅದೆಷ್ಟು ಹಣ ನಿಮ್ಗೆ ಅಪ್ಪನಿಂದ ಕೊಡ್ಸೋದು? ನೀವೇನಾದ್ರು ಸಂಪಾದನೆ ಮಾಡದಿದ್ರೆ ಹೇಗೆ? ಅಪ್ಪ ಎಷ್ಟೂಂತ ಕೊಟ್ಟಾರು?’ ಇದು ಜಮೀಲಕ್ಕನ ಸ್ವರ. ಪಟಾರನೆ ಅವಳ ಕೆನ್ನೆಗೆ ಕಾಸಿಂನ ಭಾವ ಹೊಡೆವ ಪೆಟ್ಟು. ಆಗ ಅದ್ದು ಗಡಗಡನೆ ನಡುಗುತ್ತಾನೆ. ನಂತರ ಮನೆಯ ಹೊರಗೆ ಅಲ್ಲೇ ನಿದ್ದೆಯಿಂದೆದ್ದ ಕಾಸಿಂನ ತಂದೆ ಬೇಡಲು ಬಂದಿದ್ದ ಒಬ್ಬ ಹುಚ್ಚನನ್ನು ಗಟ್ಟಿಯಾಗಿ ಗದರುವುದು ಕೇಳುತ್ತದೆ. ಮಸೀದಿಯ ಮುಂದೆ ಹರಕು ಬಟ್ಟೆ ತೊಟ್ಟು ಯಾವಾಗಲೂ ಬೇಡುತ್ತಾ ನಿಲ್ಲುವ ಹುಚ್ಚನನ್ನು ‘ ನಿಂಗೆ ನೋಂಬಿನ ದಿನ ಗೊತ್ತುಂಟ ಇಲ್ವಾ? ಊಟ ಹಾಕಿ ಅಂತಾ ಕೇಳ್ತಿಯಲ್ವಾ ನಾಚಿಕೆ ಇಲ್ಲದವನೆ! ಅದಕ್ಕಾಗೇ ಅಲ್ಲಾಹ್ ನಿನಗೆ ಹೀಗೆ ಹುಚ್ಚನನ್ನಾಗಿ ಮಾಡಿಟ್ಟಿದ್ದಾನೆ ನಡಿಯಾಚೆ...’ ಎಂದು ಕಾಸಿಂನ ಅಪ್ಪ ಗದರಿಸಿದಾಗ ಆ ಹುಚ್ಚ ಒಂಥರಾ ನಕ್ಕು ಅಲ್ಲಿಂದ ಓಡಿರುತ್ತಾನೆ. ಕಾಸಿಂನ ತಂದೆಯ ಮುಖದ ಮೇಲೆ ಹುಚ್ಚನಿಗೆ ಜೋರು ಮಾಡಿದ ಸಿಟ್ಟನ್ನು ಅದ್ದು ಗಮನಿಸುತ್ತಾನೆ. ಸರಿದು ನಿಲ್ಲುತ್ತಾನೆ.‘ಇರ‍್ಲಿ ಈ ಹುಚ್ಚನಿಗೂ ಹೀಗೆ ಒಂದು ದಿನ ನೋಂಬು’ಎಂದು ಒಳಗೊಳಗೆ ಅದ್ದು ನಗುತ್ತಾನೆ. ಮುಂದೆ ಕಾಸಿಂ ಅಕ್ಕ ಜಮೀಲಾ ಯಾರಿಗೂ ಹೇಳದಂತೆ ತನಗೆ ಹೊಳೆಯ ಬದಿಯಿಂದ ಎರಡು ತೆಂಬೆ ಕಾಯಿ ಕೊಯ್ದು ತಂದು ಕೊಡ್ತಿಯಾ ಎಂದು ಅದ್ದುವನ್ನು ಕೇಳುತ್ತಾಳೆ. ಅದೆಷ್ಟು ಸುಲಭದ ಕೆಲಸವೆನಿಸಿ ಆ ಮರವನ್ನು ಹತ್ತಿ ಆ ಕಾಯಿಯನ್ನು ಅದ್ದು ಜಮೀಲಕ್ಕನಿಗೆ ತಂದು ಕೊಡುತ್ತಾನೆ. ಆದರೆ ನಂತರ ಅದು ವಿಷದ ಕಾಯಿ ಎಂದು ತಾಯಿಯಿಂದ ತಿಳಿದ ತಕ್ಷಣ ಯಾರಿಗೂ ಹೇಳುವುದಿಲ್ಲವೆಂದು ಜಮೀಲಕ್ಕಳಿಗೆ ಮಾಡಿದ ಆಣೆಯನ್ನು ಮುರಿದು ತಾಯಿಗೆ ಸತ್ಯ ಹೇಳುತ್ತಾನೆ. ತಕ್ಷಣ ಅದ್ದುವಿನ ತಾಯಿ ಕಾಸಿಂ ಮನೆಗೆ ಸುದ್ದಿ ಮುಟ್ಟಿಸಲು ಓಡುವವರೆಗೆ ಜಮೀಲ ವಿಷದ ಕಾಯಿಯನ್ನು ತಿಂದು ನಿಸ್ತೇಜವಾಗಿ ಇನ್ನೂ ಉಳಿದಿರುವ ಪ್ರಾಣದಿಂದ ನರಳುತ್ತಿರುತ್ತಾಳೆ. ಜಮೀಲಳ ತಾಯಿ ಅಂತಹ ಕೆಟ್ಟ ಗಂಡನಿಗೆ ತನ್ನ ಮುತ್ತಿನಂತಹ ಮಗಳನ್ನು ಮದುವೆ ಮಾಡಿಕೊಟ್ಟಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾ ಅಳುತ್ತಿರುತ್ತಾಳೆ.

ಆ ನಂತರ ಸಂಜೆಯಾಗುತ್ತಾ ಬಂದಂತೆ ಕಾಸಿಂನ ಮನೆಯ ಹತ್ತಿರವಿದ್ದ ಹುಚ್ಚ ಅದ್ದುವಿನ ಮನೆಗೆ ಬೇಡಲು ಬರುತ್ತಾನೆ. ಅದ್ದುವಿನ ಮನೆಯಲ್ಲಿ ಅವನಿಗೆ ಅದ್ದುವಿನ ಪಾಲಿಗಿಟ್ಟಿದ್ದ ಮಮತೆಯಿಂದ ಕೊಡುವ ಅನ್ನ ಸಿಗುತ್ತದೆ. ಹುಚ್ಚ ಅದನ್ನು ಗಬಗಬನೆ ತಿನ್ನುತ್ತಾನೆ. ‘ಇವನೇ ಆ ಕಥೆಯಲ್ಲಿ ಬಂದ ದೇವಧೂತನ?’ ಎಂದು ಅದ್ದುವಿಗೆ ಪ್ರಶ್ನೆ ಬರುತ್ತದೆ. ಆದರೆ ಹುಚ್ಚ ತಲೆಯೆತ್ತಿ ಅದ್ದುವಿನತ್ತ ನೋಡಿ ಗೇಲಿ ಮಾಡುವವನಂತೆ ಪುಸ ಪುಸನೆ ನಗುತ್ತಾನೆ. ಇದರಿಂದ ಪೆಚ್ಚಾದ ಅದ್ದು ‘ನೋಂಬಿದಲ್ಲವ ಇವ ದೇವಧೂತ ಹೇಗಾದನು?’ ಎಂದುಕೊಳ್ಳುತ್ತಾನೆ. ಕೊನೆಗೆ ಕಾಸಿಂನ ಅಮ್ಮ ಹೇಳಿದ ಕಥೆಯಲ್ಲಿ ಬರುವ ಹುಡುಗ ಒಂದೇ ದಿನದ ನೋಂಬಿನಲ್ಲಿ ಹೇಗೆ ಸತ್ತ? ನಾನ್ಯಾಕೆ ಸಾಯಲಿಲ್ಲ ಎಂಬ ಪ್ರಶ್ನೆಗಳು ಅದ್ದುವನ್ನು ಕಾಡ ತೊಡಗುತ್ತದೆ. ಸೂರ್ಯ ಮುಳುಗಿದ ನಂತರ ಮಸೀದಿಯಿಂದ ಮಗ್ರಿಬ್ ನಮಾಝಿನ ಬಾಂಗ್ ಕೇಳಿ ಬರುವ ಹೊತ್ತು ಅದ್ದು ಮೌನವಾಗಿರುವುದನ್ನು ನೋಡಿ ಅವರಮ್ಮ ಕೇಳುತ್ತಾಳೆ- ‘ಹೇಗಾಯ್ತು ಮಗು ನೋಂಬು?’ ಎನ್ನುತ್ತಾಳೆ. ‘ಅರೆ! ನೋಂಬಂದ್ರೆ ಇದೇಯೇನಮ್ಮಾ? ಹೀಗೆ ನಾವು ತುಂಬಾ ಸಲ ಇದ್ದೇವಲ್ಲಾ..! ಆ ದಿನ ನೋಡು, ಅಪ್ಪ ಆಸ್ಪತ್ರೆಯಲ್ಲಿ ಇದ್ದಾಗ ನೀನು ಬೀಡಿ ಕಟ್ಟುವ ದಿನ.. ಅನ್ನ ಮಾಡದೆ ಹೀಗೆಯೇ ನೋಂಬಿನಂತೆಯೇ ಇತ್ತಲ್ಲ..?’ ಎನ್ನುತ್ತಾನೆ ಅದ್ದು . ಅಮ್ಮ ಅಪ್ಪನ ಮುಖ ನೋಡುತ್ತಾಳೆ. ‘ನಮ್ಮ ಮಗ ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತಾನೆ’ ಎಂದು ಅದ್ದುವಿನ ತಂದೆ ಹೇಳುವುದರೊಂದಿಗೆ ಕಥೆ ಮುಗಿಯುತ್ತದೆ.

ಆದರೆ ‘ನೋಂಬು’ವಿನ ನಿಜವಾದ ಅರ್ಥ ನಮ್ಮ ಎದೆಯೊಳಗೆ ಸಂಚರಿಸಲಾರಂಭಿಸುತ್ತದೆ-ಸಮಾನತೆ-ಶಾಂತಿ ಎಲ್ಲದರ ನಿಷ್ಕಪಟ ಆಚರಣೆಯಾಗಿ. ಅಲ್ಲಿ ರಮಝಾನ್‌ಚಂದ್ರ-ಚೌತಿಚಂದ್ರ ಒಟ್ಟಾಗಿ ಕಾಣಲಾರಂಭಿಸುತ್ತಾರೆ. ಅದ್ದುವಿನೊಳಗೆ ಸಮೂಹ ಹಿತವನ್ನು ಬಯಸುವ ಗಣೇಶ ಚತುರ್ಥಿಯ ಮೂರ್ತಿಯಾದ ಗಣೇಶನೂ ಇರುವನೆಂದು ಹೇಳಿದರೆ ನನ್ನ ಮಾತು ಸುಳ್ಳಲ್ಲ ಅಲ್ಲವೇ?
ಇಂಥಹ ಕಥೆಯನ್ನು ಬರೆದು ನಮ್ಮೊಳಗೆ ನಿಜವಾದ ‘ನೋಂಬ’ನ್ನು ತಂದ ಕಟಪಾಡಿಯವರಿಗೆ ನಮಸ್ಕಾರಗಳು.

Friday, June 4, 2010

ಗೆದ್ದಲು ಕಟ್ಟಿದ ಗೂಡು

ಕಾತ ಚಿಕ್ಕಣ್ಣ

ಪರದೆ ಕಿರಕಿರನೆ ಮೇಲೆದ್ದಾಗ, ಆ ಕಣ್ಣುಗಳೆಲ್ಲ ಈ ಲೈಟು ಬೆಳಕಿಗೆ ಪಳಪಳನೆ ಹೊಳೆಯ ತೊಡಗಿದಾಗ, ಈ ತುದಿಯಿಂದ ಆ ತುದಿಯವರೆಗೂ ಬರಿ ಕರಿತಲೆಗಳು, ಪಿಳಿಗರಿಯೊ ಕಣ್ಣುಗಳೇ ಕಾಣತೊಡಗಿದವು.

ಎಲ್ಲೆಲ್ಲೂ ಜನವೆ ಜನ. ಲಯಬದ್ಧವಾಗಿ ಬೀಳುತ್ತಿದ್ದ ತಾಳ ಮೇಳಕ್ಕೆ, ಹೊತ್ತಿ- ಆರಿ; ಹೊತ್ತಿ- ಆರುತ್ತಿದ್ದ ಬಣ್ಣಗರಿಯೊ ಬೆಳಕಿಗೆ ಎತ್ತಿ ಕುಕ್ಕರಿಸಿದಂತಾಗುತ್ತಿತ್ತು. ಆಗ ಉತ್ಸಾಹ, ಹುಮ್ಮಸ್ಸು, ಆವೇಶ, ದರ್ಪ, ಕೊಬ್ಬಿನಿಂತ ಅಭಿಮಾನ. ಹೇಳಿದ್ದೇ ಹೇಳಿದ್ದು. ಹಾಡಿದ್ದೇ ಹಾಡಿದ್ದು; ಚಪ್ಪರ ಹಾರಿಹೋಗುವಂತೆ. ಜೊತೆ ಜೊತೆಗೇ ಚಪ್ಪಾಳೆ, ಒನ್ಸ್‌ಮೋರ್, ಶಿಳ್ಳೆ-ಕಾಕು-, ಹೂವ್ನಾರ.. ನಾಟಕದಲ್ಲಿ ಪಾರ್ಟುಮಾಡೇ ಅನುಭೌವಿಸಬೇಕು ಇಂಥ ಮಜ!

ಹಾಡಿದ. ಮೂರನೆ ಕಾಲದಲ್ಲೇ; ಮೇಷ್ಟರು ಬಾರಿಸಿದಲ್ಲೇ ಹಾಡಿದ. ಸಿಂಹಾಸನದಿಂದ ಎರಡು ಮೆಟ್ಟಿಲಿಳಿದು ಬಂದು ಹಾಡಿದ. ಕೃಷ್ಣನ Justify Fullಮೀರಿಸಿ ಹಾಡಿದ. ಸೈ ಅನ್ನೋವರೆಗೂ ಹಾಡಿದ.

ಐದು ಗ್ರಾಮವಲ್ಲ- ಐದು ಮುಳ್ಳು ಮೊನೆ ಮುರಿಯೋವಷ್ಟು ಜಾಗಾನೂಸೈತ ಕೊಡೋದಿಲ್ಲವೆಂದು ಮೀಸೆ ತಿರುವಿ, ಒರೆಯಿಂದ ಕತ್ತಿ ಹಿರಿದೆಳೆದು ಮತ್ತೆ ಸ್ವರಕ್ಕನೆ ನೂಕಿ, ತೊಡೆತಟ್ಟಿ, ಕಾಸೆ ಮೇಲೆತ್ತಿ, ಮತ್ತೆ ಪೀಠಕ್ಕೇರಿ ಕೂತು ಅಟ್ಟಹಾಸದಿಂದ ನಕ್ಕು, ಉಸಿರುಕಟ್ಟಿ ಹೇಳಿದ. ದುಶ್ಯಾಸನ ಕರ್ಣನಾದಿಯಾಗಿ ಎಲ್ರೂ ಎತ್ತರಿಸಿ ದನಿಗೂಡಿಸಿದರು. ಪ್ರೇಕ್ಷಕರೆಲ್ಲ ಕೇಕೆ ಹಾಕಿ, ಪ್ರತಿ ಮಾತು ಮಾತಿಗೂ ಪದಪದಗಳಿಗೂ ಚಪ್ಪಾಳೆ ಹಾಕಿದರು. ಇಡೀ ಚಪ್ಪರವೇ ಮೊಳಗುಟ್ಟಿ ಮಾರ್ದನಿಗೊಂಡಿತು.

ಆ ಘಟ್ಟದಲ್ಲಿ ಕಿರಿಚಿದಂತೆನಿಸಿ ಆತರಿಸಿದಂತೆ ಎದ್ದು ಕೂತ. ಮೈ ಬೆವತು, ರೋಮ ನಿಂತು, ನರಗಳು ಬಿಗಿದುಕೊಂಡಿದ್ದವು. ತಲೆ ದಿಂಬು ಒಂದ್ಕಡೆ, ರಗ್ಗು ಇನ್ನೊಂದ್ಕಡೆ ಬಿದ್ದಿದ್ದವು.

ಕುಳ್ಳಪ್ಪ ನಿಧಾನವಾಗಿ ಇಳಿಯತೊಡಗಿದ. ಕನಸು ಪೂರ್ಣವಾಗಿ ಕರಗಿತ್ತು. ಅತ್ತೆ ಒಳಗೆ ಗೊರಕೆ ಹೊಡೀತಿದ್ದು ಒಂದೇ ಸಮೆ ಕೇಳಿಸುತ್ತಿತ್ತು. ಕೆಂದ ಕಾಲ್ದಸಿ ಮಲಗಿತ್ತು. ಮುತ್ತಜ್ಜಿಯ ಬೆನ್ನಿನಂತಿದ್ದ ಬೀದಿ, ಅಡ್ಡವಡ್ಡವಾಗಿ ಸೊರಗಿ ನಿಂತಿದ್ದ ಮನೆ. ಎಲ್ಲೆಲ್ಲೂ ಕತ್ತಲೆ ತನ್ನ ಬಿಗಿ ಮುಷ್ಟಿಯಲ್ಲಿ ಅದುಮಿಕೊಂಡಂತೆ ಕಾಣುತ್ತಿತ್ತು. ಉಳಿದೆಲ್ಲ ನಿಶ್ಯಬ್ದ; ನಿರ್ಜನ. ಅವನಿಗೆ ಆಳವಾಗಿ ನಿದ್ರೆ ಹತ್ತಿರಲಿಲ್ಲ. ಬಹು ಹೊತ್ತು ಒದ್ದಾಡಿ ಒದ್ದಾಡಿ ಆಗತಾನೆ ಮಂಕುನಿದ್ದೆ ಹತ್ತಿರಬೌದು. ಅಷ್ಟರಲ್ಲೇ ಕನಸು ಕಂಡ, ಆ ಕನಸಿಗೆ ಕಾರಣವೂ ಇತ್ತು.

ಅಂದು ನರಸಪ್ಪ ಲಕ್ಕಿಕುಪ್ಪೆಯಿಂದ ಹೊಸಮೇಷ್ಟರನ್ನು ಕರೆತಂದಿದ್ದ. ಅವನನ್ನು ತಡೆದುಕೊಳ್ಳೋದೇ ಕಷ್ಟ ಅಂತ ಎಲ್ಲರಿಗೂ ಗೊತ್ತಿದ್ರೂ ಹೊಸ ನಾಟಕ, ಹೊಸ ಮೇಸ್ಟರು ಬೇಕಾದ್ದರಿಂದ, ಮಡಿವಾಳ್ರ ರಾಮಯ್ಯನ ಹಳೇಕಥೆ, ಹಾಡಿದ್ದೇ ರಾಗ ವಾಕರಿಕೆ ಬಂದಿದ್ದರಿಂದ ಊರಲ್ಲಿ ಎಲ್ಲರೂ ಒಪ್ಪಿ ಮೊದಲಿಗೆ ಈ ಪ್ರಯತ್ನ ನಡೆದಿತ್ತು. ಎರಡು ಖಂಡುಗ ರಾಗಿ, ಕೈಗೆ ನೂರೈವತ್ತು ರೂಪಾಯಿ, ಒಂಜೊತೆ ಅಂಗಿ ಪಂಚೆ ಎಂದು ಮಿಟ್ಟವಾಗಿತ್ತು. ಇದಲ್ಲದೆ ಸರದಿಯಂತೆ ದಿನಕ್ಕೆ ಎರಡೂಟ, ಒಂತಿಂಡಿ, ಎರಡೊತ್ತು ಕಾಫಿ, ಕೈಗೆ ಬೀಡಿ ಬೆಂಕಿ ಪಟ್ಣಕ್ಕೇ ಅಂತ ಕೈಗೊಂದ್ರೂಪಾಯಿ.

ನಾಟಕ ಈ ಸುತ್ತಮುತ್ತ ಇಲ್ಲಿಗಂಟ ಯಾರು ಅಡದಿದ್ದಂಥ ಸಂಕ್ಷೇಪ ಮಹಾಭಾರತ. ಅಪಾರ ಜನ ಬೇಕಿತ್ತು. ಆರಂಭಕ್ಕೆ ಬಂದ್ರೆ ಬೆಳಕರಿಯೋ ಗಂಟ ನಿಲ್ಲಬೇಕಿದ್ದ ಎಲ್ಲ ಕಟ್ಟುಪಾರ್ಟುಗಳು.

ಕುಲದ ಹಟ್ಟಿ ತುಂಬೋಗಿತ್ತು. ಮ್ಯಾಳ ಮಿಟ್ಟ ಮಾಡಲು ಯಜಮಾನ್ರು ಅವ್ರು ಇವ್ರು ಅಂತ ಎಲ್ರೂ ಸೇರಿಸಿಕೊಂಡಿದ್ರು. ಇದಕ್ಕೆ ಏರ್ಪಾಟು ಮಾಡಿದ್ದ ನರಸಪ್ಪ ಮ್ಯಾಳದ ಹುಡುಗರ ದೃಷ್ಟೀಲಿ ಬಲು ಎತ್ತರಕ್ಕೆ ಕಾಣಿಸಿದ್ದ. ಅವರೆಲ್ರಿಗಂತು ಉತ್ಸಾಹ- ಹುಮ್ಮಸ್ಸೇ ಎದ್ದು ಬಂದಂಗೆ. ಅಂಥ ಸಮಯ ಕೌರವನ ಪಾರ್ಟಿಗೆ ನೀನೇ ಸರಿ ಅಂತ ಒಮ್ಮತದ ತೀರ್ಮಾನವಾಗಬೇಕಿದ್ರೆ ಪಡಕೊಂಡು ಬಂದಿರಬೇಕು ಆದರೆ..

ಸುಮ್ಮನೆ ಒಲ್ಲೆ- ಎಲ್ಲೇಂದ್ರೂ ಮೇಸ್ಟರು ಎರಡು ಮಟ್ಟ ಹೇಳಿಸಿದ್ರು. ಒತ್ತಾಯ ಮಾಡಿದಂಗೆಲ್ಲ ಉತ್ಸಾಹ ಏರ್ತಿತ್ತು. ಕೃಷ್ಣ- ಕೌರವನ ಸಂಧಿಗೆ ಬಂದ ಸಮಯದ ಯುಗಳ ಕಂದವನ್ನೂ ತನ್ನ ಮತ್ತು ನರಸಪ್ಪನಿಂದ ಅನ್ನಿಸಿದ್ರು. ತನ್ನ ಕಂಚಿನ ರಾಗಕ್ಕೆ ಮಾತಿನ ಕಡುಪಿಗೆ ಎಲ್ರೂ ಸೈ ಅಂದ್ರು -ಮಾವೊಬ್ಬನ ಹೊರ್ತಾಗಿ.

ಯಾವ ಪಾರ್ಟಿಗೆ ಯಾರಾರು ಸರಿಯೆಂದು, ಅಂಥವರೆಲ್ರಿಂದ ಒಂದೊಂದು ಮಟ್ಟು, ಮಾತನ್ನೂ ಹೇಳಿಸಿದ್ರು. ಅದರಂತೆಯೇ ಪಾರ್ಟು ಹಂಚುತ್ತ ಬಂದ್ರು. ಕುಳ್ಳಪ್ಪನ ಸರದಿಯೂ ಬಂತು. ಒಳಗೆ ಒತ್ತಾಸೆಯಿದ್ರೂ ಬೇಕಂತ್ಲೇ ಬಾಯಿ ಮಾತಿಗೆ ‘ನಂಗೆಲ್ಲಾಯ್ತದೆ’ ಅಂದ. ಸೂರಪ್ಪ ‘ಇದ್ಯಾವ್ ತಿರಕ್ ಬಡಾಯ ಅದೇನು ಸರ‍್ಯಾಗಿ ಹೇಳ್ಲಾ’ ಅಂದಾಗ ‘ನಂ ಮಾವ ಹೂಂ ಅಂದೆ ನಾನೆಂಗೇಳ್ಳಿ ನೀವೇ ಒಂದ್ಮಾತು ಕೇಳಿ’ಎಂದು ಸೇರಿಸಿದ.

ಮಾವನ ಕೂಗಿದಾಗ ಅವನು ಯಾವಾಗ ಎದ್ದು ಹೋಗಿದ್ನೋ ಯಾರಿಗೂ ತಿಳಿಯದು. ಆದರೆ ಅವನು ಎದ್ದು ಹೋಗಿದ್ದು ತಾನು ಕೊನೆ ಪದ ಹೇಳುತ್ತಿದ್ದಾಗೆಂದು ಕುಳ್ಳಪ್ಪ ಕಂಡಿದ್ದ. ಮಾವ ಮ್ಯಾಳದ ಮನೆಗೆ ಬರೋದು ಅಪರೂಪ. ಅಂಥಾದ್ರಲ್ಲಿ ಈಗ ಬಂದದ್ದು ಕಂಡು, ಈ ಸಲ ತನ್ನ ನಾಟಕಕ್ಕೆ ಸೇರಿಸೆಯೇ ಸೇರುಸ್ತಾನೇನೋ ಅಂದ್ಕೊಂಡೇ ಮೈಯೆಲ್ಲಾ ಕಣ್ಣಾಗಿಸ್ಕೊಂಡು ನಿರುಕಿಸ್ತಿದ್ದ. ಆದ್ರೆ ಎಂದು ಮೆಲ್ಲ ಎದ್ದನೋ ಆಗಲೇ ತನ್ನ ಎದೆ ಎಂದಿನಂತೆ ಕಲ್ಲಾಗತೊಡಗಿತು. ಆದ್ರೂ ಆಸೆಯೊಂದು ಬೇಸಿಗೆಯಲ್ಲೂ ಬದುಕುವ ಗರಿಕೆಯಂತೆ ಇರುತ್ತಲ್ಲ-ಅದಕ್ಕಾಗಿ ಕಾದು ಕೂತ.

‘ಅಪ್ಪ ಅವ್ವ ಮಾವUವ ಯಾರ‍್ನೂ ಹುಡಿಕ್ಕೊಂಡೋಗಿ ಪರ್ಸಾದ ಕೇಳೋದು ಬ್ಯಾಡ. ಯಾರಾರಿಗೆ ಇಷ್ಟ ಅದೊ ಅಂಥೋರು ಹೂಂ ಅನ್ಲಿ. ಅಪ್ಪ ಅವ್ವದೀರ ಹತ್ರ ಹೋಗಿ ನಿನ್ ಮಗನ್ನ ಸೇರ್ಸು ನಿನ್ನ ಅಳೀನ್ನ ಸೇರ್ಸು ಅಂಥ ಹೊಸೆಯೊ ಹಜಾಂಗಿರಿ ಕೆಲ್ಸ ನಂಗ್ಯಾಕೆ?’ಎಂದು ಮಾವನ ಕಂಡ್ರೆ ಮೊದಲಿಂದ್ಲೂ ಆಗದಿದ್ದ ಕೆಂಪೇಗೌಡ್ರು ಕೊಸಾರನೆ ಅಂದ ಮಾತು ಹೆಂಗಾದ್ರು ಒತ್ತಾಯ ಮಾಡಿ ಮಾವನಿಗೆ ಹೇಳಿ ಸೇರುಸ್ತಾರೆ ಅಂದ್ಕೊಂಡಿದ್ದ ತನ್ನ ಎದೆಯಾಸೆಯ ಮೇಲೆ ಚಪ್ಪಡಿ ಎಳೆದಂತೆಯೇ ಬಂದೆರ್ಗಿತು.

ಮೇಸ್ಟರೂ ಕೂಡ ‘ನೋಡ್ರೀ ನೀಂ ಮಾವನ್ನ ಇಲ್ಲೇ ಕರ‍್ಕೊಂಡು ಬಲ್ರಿ ಹೇಳಾನೆ-ನೀವು ಸೇರ‍್ಕೊಳ್ರಿ ಪರ‍್ವಾಗಿಲ್ಲ’ ಎಂದು ವಿಶೇಷವಾಗಿ ಆಹ್ವಾನಿಸ್ದಾಗ ತನ್ನ ಪಾಲಿಗೆ ಇಲ್ಲೇ ಈ ಭೂಮಿ ಇಬ್ಭ್ಬಾಗವಾಗಬಾರದ ಅನ್ನಿಸಿತು.

‘ಹುಂ! ಅವುನ ಮಾವ್ನೋ ಸೇರ್ಸೋನು.. ಹೇಲ್ನಲ್ಲಿ ಬಿದ್ದ ಕಾಸ್ನೂ ಎತ್ತಿ ಗಂಟಾಕೋನು.. ಎಲ್ಲಾದ್ರೂ ಹೊಲ ಮನೆ ಸಿಕ್ತಾವೋ, ಯಾರಾದ್ರೂ ಅಡವಿ ಗಿಡವಿ ಇಡ್ತಾರೋ ಅಂತ ಎಣ್ಕೆ ಹಾಕೋದ್ಬುಟ್ಟು ಇಂಥದ್ಕೆಲ್ಲ ಸೇರುಸ್ತಾನಾ? ಅದೇನೊ ಹಿಂದ್ಕೇಳಿದಂಗಾಯ್ತು.. ಏನಪ್ಪ- ಇದ್ರಮ್ಯಾಲೆ ಇವನಿಷ್ಟ...’ ಅಂದ ಗೊರವ ಸಣ್ಣಗೆ. ಅಲ್ಲಿಗೆ ತನ್ನ ಅಧ್ಯಾಯ ಮುಗ್ದಂತಾಗಿತ್ತು.

ಕುಳ್ಳಪ್ಪನಿಗೆ ಆ ನಿರಾಸೆಯ ಹೆಂಗೆ ಶಮನ ಮಾಡ್ಕೋಬೇಕೆಂಬುದೇ ತಿಳೀದೆ ಮೂಗು ಬಾಯಿ ಮುಚ್ಚಿ ಹಿಡಿದಂತಾಗಿತ್ತು. ಒಂದ್ಸಲ ಆದ್ರೂ ಹೆಂಗಾದ್ರು ಮಾಡಿ ನಾಟ್ಕಕ್ಕೆ ಸೇರೆ ಸೇರ್ಬೆಕು ಅನ್ನೋ ಆಸ ಸದಾ ಕೊರೀತಿತ್ತು. ಇವತ್ತೇನೋ ಅವಕಾಶ್ವೇ ಹುಡಿಕೊಂಡು ಬಂದಂತಾಗಿತ್ತು. ಆದ್ರೆ ಅಷ್ಟೇ ಅನಾಯಾಸ್ವಾಗಿ ಕಳಚಿಹೋಗಿದ್ನ ತಡೆಯೋದಾದ್ರೂ ಹೆಂಗೆ?

ಸಿಡಿ ಸಿಡಿ ಹೆಚ್ಚಾಯ್ತು. ಬೀಡಿ ತಡಕಿ ನೋಡಿದ. ಅದೂ ಮುಗಿದು ಹೋಗಿತ್ತು. ಮ್ಯಾಳದ ಮನೇಲೇ ಒಂದು ಬೀಡಿ ಕೇಳಿ ಅಣ್ಣಯ್ಯನಿಂದ ಬೈಸಿಕೊಂಡಾಗಿತ್ತು. ತೂಪರದೆಲೆಯೇನೊ ಇದ್ದೋ, ಆದ್ರೆ ತುಂಬಿ ಸೇದಲು ಹೊಗೆಸೊಪ್ಪು ಮುಗ್ದೋಗಿತ್ತು. ಅದೂ ಮಾವ್ನಿಂದ್ಲೇ. ತಾನು ಜೋಡಿಸ್ಕೊಂಡಿಟ್ಟಿದ್ದ ಹೊಗೆ ಸೊಪ್ನೆಲ್ಲಾ ಅವನೇ ತುಂಬ್ಕೊಂಡು ಸೇದಿ ಸೇದಿ ಮುಗಿಸಿದ್ದ. ಗಂಟುಕಳ್ಳ. ಆದದ್ದಾಯ್ತು ಮುಗ್ದೋಗದೆ ಎಲ್ಲಿಂದ ತಂದಾನು ಅಂತ ತಿಳ್ದಾದ್ರೂ ಸಂತಿಂದ ತಂದ್ಕೊಡ್ತಾನ? ಗುಳ್ಳೆಲಕ್ಕನ ಜಾತೋನು.. ಅದಿಕ್ಕೇ ನರಸಪ್ಪ ಹೇಳೋದು- ನಾಯಿ ಮೊಲೇಲಿ ಹಾಲಿರೋದು ನಿಂಮಾವನ ಪೆಟ್ಗೇಲಿ ಕಾಸಿರೋದು ಒಂದೇ ಅಂತ.

ಹುಂ! ನೋಡು ನರಸಪು ಹೆಂಗವನೆ. ಇದ್ರೆ ಅವನಂಗೇ ಇರಬೇಕು. ಅದೇನವನ ಜಾಯಾಮಾನ. ನನ್ನಂಗೆ ಅವನ್ಗೂ ಮನೆ ಮಠ ಇಲ್ಲ. ತಂದು ಅಂತ ಹೇಳ್ಕೊಳ್ಳಾಕೆ ಒಂಚೂರು ಭೂಮಿಯಿಲ್ಲ. ಆ ಸಂತೆ ಈ ಸಂತೇಲಿ ಬರೀ ದಲ್ಲಾಳಿ ಯಾಪಾರ ಮಾಡ್ಕೊಂಡು ಯಾರದೊ ಜಗಲಿ ಮೇಲೆ ನೆರಕೆ ಕಟ್ಕೊಂಡು, ಹೆಂಗೆ ಜೀವನ ನಡುಸ್ತಾ ಅವನೆ. ಉಳ್ಳೋರೆಲ್ರೂನ್ನೂ ಅವನ್ಮುಂದೆ ನೀವಾಳ್ಸಿ ಹಾಕಬೇಕು. ಅಂಥ ಪಟೇಲ್ರ ಬಸಪ್ಪನೋರ ಮನೇಲೇ ದಿನಾ ಅನ್ನ ಮಾಡ್ತಾರೋ ಇಲ್ವೋ ಕಾಣೆ. ಅಂಥಾದ್ರಲ್ಲಿ ಇವನು ನಂಗೆ ಅನ್ನಯಿಲ್ದೆ ಹೋದ್ರೆ ಉಂಡಂಗೇ ಆಗಾಕಿಲ್ಲ ದಿನಾ ಹಿಟ್ಟಿನ ಮ್ಯಾಲೊಂಚೂರು ಬಿಳೀದು ಆಗೇ ತೀರಬೇಕು ಅಂಥೇಳಿ ಹಂಗೆ ಅನ್ನ ಮಾಡ್ಸಿ ಉಣ್ಣಾಕ್ಕೂ ಉಣ್ತಾನೆ. ಯಾವಾಗ್ಲೂ ತುಂಬ ತೋಳಿನ ಅಂಗಿ ಇಕ್ಕೊಂಡು ಉಡ್ಗೆ ಹಾಕೊಂಡೇ ತಿರುಗ್ತಾನೆ. ಊರೋರೆಲ್ರೂ ತನ್ನ ಸಂಸಾರದ ಕಡೆಗೆ ಕೈ ತೋರ್ಸಿ ಕೆರೆದಾಡಿಕೊಳ್ಳಂಗೇ ಬಾಳ್ತಾನೆ.

ಅವನೇ ಹೋಗಿ ಈ ಮೇಸ್ಟ್ರು ಕರ‍್ಕೊಂಡು ಬಂದ. ನಾಟಕ ಎತ್ತಿದ. ತಾನೆ ಕೃಷ್ಣನ ಪಾರ್ಟು ವೈಸ್ಕೊಂಡ.

ಅವನ ಸದಿರೀಗೆ ನಿಲ್ಸಿ ನೀನು ಕೌರವನ ಪಾರ್ಟು ವೈಸ್ಕೊ ಅಂದ್ರು. ಇಬ್ರೂ ಕೈಲೂ ಅವೆರಡು ಪಾರ್ಟುಗಳ ವಷ್ಟೊಷ್ಟು ಪದ ಹೇಳಿಸಿ ನೋಡಿದ್ರು. ತನ್ನ ಹಾಡುಗಾರಿಕೆಗೆ ಎಲ್ರೂ ತಲೆ ತೂಗಿದ್ರು. ಕೊಟ್ರೆ ಕೌರವನ ಪಾರ್ಟು ಇವುಂಗೆ ಕೊಡಬೇಕು ಅಂದ್ರು. ಯಾರಿಗೂ ಹಿಂಗೆ ಹೇಳಿರ‍್ಲಿಲ್ಲ. ಅಂಥೋದ್ರಲ್ಲಿ ನಂಗೆ ಒಮ್ಮತವಾಗಿ ಹೇಳಿದ್ರು. ಆದ್ರೆ ತಾನು ಏಕ್‌ದಂ ಹೂ ಅಂದ್‌ಬಿಡಾಕೆ ಆಯ್ತಾ? ಮಾವಾ ಮಳ್ಳಿಯಂಗೆ ಮೆಲ್ಲಗೆ ಎದ್ದು ಬಂದುಬುಟ್ನಲ್ಲ ಸೇರಿಸ್ಬೇಕಾಯ್ತದೆ ಅಂತ. ಇವನ್ ಈ ಜೀನ ಬುದ್ಧಿಗೆ...

ಹೋಗ್ಲಿ ಅವನ ಹಠದ ಮ್ಯಾಲೆ ನಾನಾದ್ರೂ ಆಗ್ಲಿ ಅಂದ್ ಬುಡಾನೆ ಅಂದ್ರೆ ಅಷ್ಟು ಎಲ್ಲಿದ್‌ತರ‍್ಲಿ? ಪುಟಗೋಸಿ ಒಂದ್ ನಾಟಿ ಬೀಡಿ ತಕ್ಕೋಳ್ಳಾಕೆ ಕಾಸಿಲ್ಲ. ಅಂಥೋದ್ರಲ್ಲಿ ಅದೇನು ಸುಮ್ನೆ ಆಯ್ತ?... ನಾಟಕದ ಖಯಾಲಿ ಭಾಳ ಅದೆ ಅಂತ ಗೊತ್ತಿದ್ರೂ ಸೇರುಸ್ದೆ ಹೋದ್ನಲ್ಲ? ಮತ್ಯಾಕೆ ಹಿಂಗೆಲ್ಲ ದುಡಿಯೋದು ಒಳ್ಳೆ ಕತ್ತೆ ದುಡಿಯಂಗೆ?

ಕುಳ್ಳಪ್ಪನ ತಲೆಯೊಳಗೆ ಕುರುಕ್ಷೇತ್ರವೇ ನಡೆಯತೊಡಗಿತು. ಚಾಪೆ ಮೇಲೆ ಹಂಗೆ ಕೂತಿದ್ದ ಅವನಿಗೆ ಸೇದೋ ಗುಂಡಿತ್ತಾವು ಯಾವುದೋ ಒಂದು ನಾಯಿ ಬೊಗಳುತ್ತಿದ್ದ ಕಂಡು ಇಲ್ಲಿಂದಲೇ ಶುರು ಮಾಡ್ದ ಕೆಂದನ ಒದರಾಟಕ್ಕೆ ತಲೆ ಸಿಡಿದು ಹೋಗುವಂತಾಯ್ತು. ಸುಮ್ಮನಾಗುವಂತೆ ಅದಕ್ಕೆ ಹೇಳಿ-ಲೊಚ್ಚಗರಿದು ಸಾಕಾದ. ಅದು ಮಣಿಯೋ ಹಂಗೆ ಕಾಣಲಿಲ್ಲ. ದಿಕ್ಕಂತ ಒದ್ದ. ಕುಯ್‌ಗರೀತ ಜಗಲಿಯಿಂದ ಕೆಳಗೆ ಬಿದ್ದು, ಎದ್ದು ಇವನ ಕಡೆ ಒಮ್ಮೆ ನೋಡಿ ಮತ್ತೆ ಹಿಡಿದಿಡಿದು ಬೊಗಳುತ್ತ ಮುಂದೆ ಹೋಯ್ತು.

ಅಳಿಮೈತನಕ್ಕೆ ಸೇರಿ, ಮದ್ವೆಯಾಗಿ ಇಲ್ಲಿಗೆ ಆರೇಳು ವರ್ಷ ಕಳೆದ್ರೂ ಮಾವ ಮನೆ ಮಗಾಂತ ಭಾವುಣಿಸ್ಲಿಲ್ಲ. ಅವರಿವ್ರ ಸುದ್ದೋಗ್ಲಿ ಖಾಸ ಅಳಿಯಂಗೇ ಕೊಡೋದು ಬುಡೋದಂದ್ರೆ ಸುತ್ರಾಂ ಹಿಡೀನಿಲ್ಲ. ತನಗೆ ಅನ್ನಿಸಿದ್ನ ತಂಗೆ ಮಾಡೋಕ್ಕುಂಟಾ?... ಒಂದು ಕೂಟವೇ? ಒಂದು ಆಟವೇ? ಒಂದು ಸಂತೆಗೆ ಗಾಡಿ ಬಾಡಿಗ್ಗೇ ಒಪ್ಪಂದ್ವೆ? ಒಂದು ಖಯಾಸದ ಅಂಗಿ-ಅರ‍್ವೆಯೇ? ಒಂದೂರೆ ಒಂದು ಕೇರಿಯೇ? ಅವತ್ತು ಭಾರಿ ಕೇಳ್ಕೊಂಡ ಅಂತ ಸಣ್ಣ ಮಲ್ಲನಿಗೆ ತಂಗಳದ ಹೊತ್ಗಂಟ ಉಳೋಕ್ಕೆಲ್ಲೊ ಆರು ಕೊಟ್ಟೆ ಅಂತ ಎಷ್ಟು ಹಾರಾಡಿದ ? ಅಲ್ಲಾ ಹಿಂಗಾಗ್‌ಬುಟ್ರೆ ಹೆಂಗೆ? ಥೂ! ಇವುನ ಕೊರುಂ ಬುದ್ಧಿಗೆ ನನ್ ಶಪ್ಪ ಬಿಸಾಕ...

ಒಳಗಿಂದ ಯಾರೊ ಅಗಣಿ ತೆಗೆದ ಸದ್ದಾಯ್ತು. ಅವನ ವಿಚಾರ ಸರಣಿ ಅಲ್ಲಿಗೇ ನಿಂತಂತಾಯ್ತು. ಅತ್ತೆ-ಗಿತ್ತೆ ಇರಬೌದೆಂದು, ಈ ಪುಣ್ಯಾತ್ಗಿತ್ತಿ ಒಬ್ಬಳ ಈ ಹೊತ್ನಲ್ಲಿ ಹೇಳು ಎಂದು ತನ್ನಲ್ಲೇ ಅಂದ್ಕೊಂಡು, ಮೈ ನೀರು ಹುಯ್ಯಕ್ಕಿರಬೌದೇನೋ ಹಿಂಗೆ ಕೂರೋದು ಬ್ಯಾಡ ಅನಿಸಿ ಉರುಳಿ ರಗ್ಗೆಳೆದುಕೊಂಡ. ಬೀದಿಗಿಳಿದು ಚರಂಡಿ ಹತ್ರ ಕೂತು ಚ್ವರ್ ಅಂತ ಹುಯ್ಯತೊಡಗಿದಾಗ ಮೆತ್ತಗೆ ಈ ಕಡೆಗೆ ತಿರುಗಿ ನೋಡಿ ಓ! ಇವಳೋ ಅಪ್ನ ಮಗಳು ಅಂದ್ಕೊಂಡ.

ಈಗ ಅವನ ಆಲೋಚನೆ ಈ ಕಡೆ ತಿರುಗಿತು. ಹತಾಸೆಗೊಂಡ ಮನಸ್ಸು ಯಾಕೋ ಉಚ್ಚೆ ಸದ್ದಿಗೆ ವಿಕಾರವಾಗತೊಡಗಿತು. ಎಷ್ಟು ದಿನ ಆಯ್ತು? ಹೋಗಿ ಮUನಂಗೆ ಮಲಿಕೊತ್ತಾಳೆ ಗರ್ತಿ-ತಾಳು ಇವತ್ತು ಅಂದ್ಕೊಂಡ.ಮೈಯಲ್ಲಿ ಕಾವೇರತೊಡಗಿತು. ಮಂತಾನಸ್ಥನ ಮಗಳು- ಗಂಡ ಅನ್ನೋನ ನಿಗಾನೇಯಿಲ್ಲ. ನಾನಾಗೇ ಕರೀಬೇಕು- ಅಂದ್ಕೊಂಡ. ಆದ್ರೆ ಆಚೆ ಜಗ್ಲೀಲಿ ಅವಳಪ್ಪ ಮಲಗಿದ್ದು ನೆನಪಾಯ್ತು. ಮುದಿಯ ಕೊಂಟಿನಂಗೆ ಬಿದ್ದಿದ್ದ. ಹಂಗೇ ಬಿದ್ದಿರ‍್ಲಿ ಆ ಗುಂಮ್ಟ. ನನಗಂತು ಅವನಿಂದ ಪಾರಿಲ್ಲ ತಲೆ ಚಿಟ್ಟು ಹಿಡ್ದೋಗೈತೆ ಎಂದು ಹಲ್ಲುಮುರಿ ಕಚ್ಚುತ್ತ ರಗ್ಗಿನೊಳಗೆ ಸೇರಿಕೊಂಡ್ರೆ ಹೆಂಗೆ ಗೊತ್ತಾಯ್ತದೆ ಮಣ್ಣು- ಆ ಹಿಂಜಿನ್ಗೆ? ಎಂದ್ಕೊಂಡು ಧೈರ್ಯ ಮಾಡಿ ಕೇಳಿಸ್ತೊ ಇಲ್ವೋ ಅನ್ನೋ ಹಂಗೆ ಸಣ್ಣಗೆ ಕೆಮ್ಮಿದ. ಕತ್ತೆತ್ತಿ ಸೂಚ್ನೆಯಂತೆ ಹೆಂಡ್ತಿಯ ಕಡೆಯೂ ನೋಡಿದ. ಆದ್ರೆ ಅದರ ಪರಿವೆಯೇ ಇಲ್ಲದಂತೆ ಅವಳು ಒಳ ನಡೆದು ಬಾಗಿಲು ಹಾಕಿ ಅಗಣಿ ಜಡಿದಳು.

ಅವನ ಬಾಯನ್ನೂ ಸೇರಿಸಿ ಅಗಣಿ ಜಡಿದಂತಾಯ್ತು. ಆದ್ರೆ ಮನಸ್ಸು ಎತ್ತಿಬಿಟ್ಟ ಕೋಡಿಯಂತೆ ತೆರೆದುಕೊಂಡಿತ್ತು. ಅವನಿಗೆ ತಡೀಲಾಗಲಿಲ್ಲ. ಗೌಜಲಕ್ಕಿ ಗೂಡಿಗಿಟ್ಟು ಬಾಜಿಗಾಗಿ ಬೆಳೆಸೋ ಹಂಗೆ ಭೂಮಿ ಗೈಯೋದಿಕ್ಕೆ ಮಾತ್ರ ಈ ದೇಹ ಬೆಳಿಸ್ತಾರೆ. ಈ ... ಮತ್ತೆ ಬಂದ ಬೈಗುಳವನ್ನು ಬಾಯಲ್ಲೇ ತಕ್ಕೊಂಡು ಕೈ ಕೈ ಹೋಸಿಕೊಂಡ.

ಇವರ ನಡವಳಿಕೇನೆ ಸರಿಕಾಣಲಿಲ್ಲ. ಎದೆಯೊಳಗೆ ಬತ್ತ ಕುಟ್ಟಿದಂಗೆ ಆಗ್ತಯಿತ್ತು. ಇಂಥ ಬಾಳು ಗುಲಾಂ ನನ್ನ ಮಗ್ನ ಬಾಳು ಅನ್ನಿಸ್ತು. ಆಗ ನರಸಪ್ಪನ ಬಾಳು ಸಾಕಾರಗೊಂಡ್ತು. ಎದ್ದ ಮೊಲಾನ ಹಿಂಬಾಲಿಸೊ ಕೆಂದನಂಗೆ ಮನಸ್ಸು ನರಸಪ್ಪನ ಹಿಂಬಾಲಿಸ್ತು.

ಅವನಂಗೇ ತಾನೂ ಇದ್ದಿದ್ರೆ.. ಅವನಂಗೇ ತಂದೇ ಒಂದು ನೆರಳು ಮಾಡ್ಕೊಂಡು ತನ್ನ ಕಾಲ್ಮೇಲೆ ತಾನು ನಿಂತಿದ್ರೆ.. ಹಿಂಗೆಲ್ಲ ಆಯ್ತಿತ್ತ? ಇವನಿಂದಾಗಿ ಎಲ್ರಿಂದ ತಲೆಗೊಂದು ಮಾತು ಕೇಳೋದು ತಪ್ತಿತ್ತು. ನನ್ನ ಹಣ್ಪಾಡು ನಾನೋಡ್ಕೋಬೌದಾಗಿತ್ತು.
ಅವನ ಮನಸ್ಸು ತೋಡಿದ ಹಿಕ್ಕಲಲ್ಲಿ ಓಡೋ ನೀರಂತೆ ಇಳಿಗಣ್ಣ ಕಡೆ ಓಡತೊಡಗಿತು.

ಇಲ್ಲೀಗಂಟಾಯ್ತು. ಇನ್ಮೇಲೆ ಸಾಕು. ನರಸಪ್ಪನಂಗೇ ಇದ್ದು ಬಿಡೋದೇ ಸರಿ. ಇವಳೇನಾದ್ರು ಇನ್ನು ಅಪ್ಪ ಅವ್ವ ಅಂತ್ಲೇ ಹೇಳ್ಕೊಂಡು ಕೂತ್ರೆ ಅವಳ ಹಣ್ಪಾಡು. ನಂಗಂತು ಸಾಕಾಯ್ತು. ಇನ್ಮೇಲೆ ಇವರ ಹಂಗೇ ಬ್ಯಾಡ. ಅತ್ತೆ ಅತ್ರೂ ಅತ್ಕೊಳ್ಳಿ ಅದ್ಕೆ ನಾನೇನು ಮಾಡ್ಲಿ? ಅಂಥೋಳು ಗಂಡ್ನಿಗೆ ಹೇಳ್ಕೊಳ್ಳಿ- ಅಂದ್ಕೊಂಡ. ಒಂದು ತೀರ್ಮಾನಕ್ಕೇ ಬಂದೆ ಅನಿಸಿದಾಗ ಯಾರೋ ಹಿಡಿದಿದ್ದ ಮೂಗನ್ನು ಬಿಟ್ಟಂತಾಯಿತು.

ತಾನು ಮನೆಬಿಟ್ರೆ ಮಾವನ ಈ ಹಾರಾಟೆಲ್ಲ ನಿಂತೋಗುತ್ತೆ. ಗೈಯೋರಿಲ್ದೆ ಹೊಲೆಲ್ಲ ಪಾಳು ಬೀಳ್ತವೆ. ಆಗ ತನ್ನ ಜೀನ ಬುದ್ಧಿ ಗೊತ್ತಾಗಿ, ಬಂದು ನನ್ನ ಕಾಲ್ನೇ ಕಟ್ಟಬೇಕು. ನೀನೇ ಗತಿ ಅನ್ನಬೇಕು. ಆಗ ತಾನು ಏನೂಂಥ ಗೊತ್ತಾಯ್ತದೆ.

ನೀನೇನೇಳ್ತಿಯೋ ಹಂಗೇ ಆಯ್ತು ಬಾಪ್ಪ ಅಂತ ಹಲ್‌ಗಿರಿತಾನೆ. ಆಮ್ಯಾಲೆ ನೋಡ್ ಬೇಕು- ಎಂಬ ಚಿತ್ರ ಅವನ ಕಣ್ಮುಂದೆ ಬಂತು.
ತೀರ ಸರಳವಾಗೇ ಭಾಳ ಕ್ಲಿಷ್ಟವೆಂದಿದ್ದ ಗಂಟೊಂದು ಬಿಚ್ಚಿ ಹೋದಂತೆನಿಸಿ, ಒಂಥರ ನಕ್ಕ. ನಾಟಕದಲ್ಲಿ ನಕ್ಕಂತೆ, ಕೃಷ್ಣನ ಹಿಡಿದು ಸಭೆಯೊಳಗೆ ಕಟ್ಟಿ ಹಾಕ್ಸೋವಾಗ ನಗುವಂತೆ, ನಾಟಕ ಅಂದ್ರೆ ತೀರ್ತು-

ದೂರ ಬಲು ದೂರ್ದಿಂದ ನಾಟಕ ನೋಡಕ್ಕೆ ಜನ ಚಿಕ್ಕೂರಿಗೆ ಅಲೆ ಅಲೆಯಂಗೆ ಬಂದು ಎಲ್ಲೆಲ್ಲೂ ಬರಿ ಜನವೇ ಕಾಣ್ತಿತ್ತು. ಊರೆಲ್ಲ ನಂಟಿಷ್ಟ್ರಿಂದ ಸಡಗರದಿಂದ ಗಿಟಗರಿಯುತ್ತ ಗುಡೀ ಮುಂದೆ ದೊಡ್ಡ ಚಪ್ಪರ ಎದ್ದು ನಿಂತು, ಮೈಕು ಊರ‍್ನೇ ಮೊಳಗುಸ್ತಿತ್ತು. ಇದನ್ನೆಲ್ಲ ಕಂಡ ಜೀವ, ನಿಲ್ಲಲಾದ್ರೆ ಒತ್ತೊತ್ತಿ ಬರ‍್ತಿದ್ದ ಹೆಮ್ಮೆ ತವಕದಿಂದ ಕುಣೀತಿತ್ತು. ಆ ಮೇಲೆ ನಾಟಕವೂ ಸುರು ಆಯ್ತು. ಭಜನೆ ಹಾಡಿಯೂ ಮುUತು. ಬರೋ ತನ್ನ ಶೀನುನ್ನೆ ಎಲ್ರೂ ಕಾಯ್ತ ಕೂತಿದ್ರು. ತಾನು ಎತ್ರದ ಸಿಂಹಾಸ್ನದಲ್ಲಿ ಏರಿ ಕೂತಿದ್ದೆ. ಇಡೀ ಊರೇ ನಾಟಕ ನೋಡಕ್ಕೆ ಬಂದಿದ್ರೂ ತನ್ನ ಹೆಂಡ್ತಿ ಬಂದಿರಲಿಲ್ಲ. ಮಾವ ಮಾಮೂಲಿಯಂಗೇ ವಟಗರಿತ ತುಂಡು ಗೋಡೆ ಮೇಲೆ ತುಂಡು ಬೀಡಿನೆ ಊಪಿ ಎಳೀತ ಕೂತಿದ್ದ.

ಪರದೆ ಏಳ್ತು. ಲೈಟು ಝಗ್‌ಢಗಿಸ್ತೋ! ಎಲ್ರೂ ಶಿಳ್ಳೆ ಹೊಡೀತಿದ್ರು. ಮೇಸ್ಟ್ರು ತಲೆ ತೂಗ್ತ ಬಾರಿಸ್ತಿದ್ರು. ತಾನು ಸಿಂಹಾಸನದಿಂದೆದ್ದು ಕೃಷ್ಣನ (ಮಾವನ್ನ) ಹಿಡಿದು ರಾಜಸಭೆ ಮುಂದೆಲ್ಲ ಅಟ್ಟಾಡಿ ‘ಕಟ್ಟಿ ಹಾಕಿರಿ ಈ ದುಷ್ಟನನ್ನು’ ಎಂದು ಅಪ್ಪಣೆ ಮಾಡಿದ್ದೇ ತಡ ಸೇವಕ್ರು ಬಂದು ಅವುನ್ನ ದರದರನೆ ಎಳ್ದಾಡತೊಡಗಿದ್ರು. ಅವನು (ಕೃಷ್ಣ-ಮಾವ) ‘ಬ್ಯಾಡ ಬ್ಯಾಡ’ ಎಂದು ಹಲ್ಲುಗಿರೀತ ತನ್ನ್ಕಡೆ ನೋಡ್ತಿದ್ದ. ಮುಂದೆಯೇ ಕೂತ ಅತ್ತೆ ಒಳ್ಗೊಳ್ಗೆ ನಗ್ತಿದ್ದಳು. ಹಂಗೇ ಆಗಬೇಕೂಂತ ಕರ್ಣ ದುಶ್ಯಾಸನ್ರೆಲ್ಲ (ಕೆಂಪೇಗೌಡ್ರು, ಗೊರವ, ನರಸಪ್ಪ) ಛೇಡಿಸ್ತಿದ್ರು. ತಾನು ಗೆದ್ದ ಖುಶೀಲಿ ನಗತೊಡಗಿದ್ದೆ. ಜೊತೆ ಜೊತೆಗೇ ಜನಗಳ ಶಿಳ್ಳೆ, ಕಾಕು, ಚಪ್ಪಾಳೆ, ಒನ್ಸ್‌ಮೋರುಗಳು ನೆರೆ ಥರ ಉಕ್ಕುಕ್ಕಿ ಬರುತ್ತಿರೊ ಹಂಗೆ...

ತಣ್ಣಗಾದಂತೆನಿಸಿತು. ರಗ್ಗು ಕಿತ್ತಾಕಿದ್ಕೂಡಲೇ ಮೂಡ್ಲು ದಿಕ್ಕಿನ ಬೆಳಕು ಕುಕ್ಕಿದಂತಾಯ್ತು. ಅವಳು ‘ಏನೀ ಸುಖ್ನಿದ್ದೆ? ಏನ್‌ಕನ್ಸದು? ಅದೇನು ಹಂಗಂಗೆ ಮಾತಾಡ್ಕೊಂಡು ನಗ್ತಿದ್ದೆ? ನೋಡು ಯಾಲೆ ಏಟೊತ್ತಾಗೈತೆ ಅಪ್ಪ ಕೆರೆಕಡಿಂದ ಬಂದ್ರೆ ನಿನ್ನ ಸುಮ್ಕೆ ಬುಟ್ಟಾನಾ..?’ ಅಂದಳು.

‘ಅಪ್ಪ’ ಎಂದ ಮಾತು ಎಂದಿನಂಗೆ ಕೆಲಸಕ್ಕೆ ಎಚ್ಚರಿಸೊ ಸೂಚ್ನೆ ಅನ್ನಿಸ್ಲಿಲ್ಲ. ಬದಲಾಗಿ ಮೈ ಉರಿ ಹೆಚ್ಚಿಸ್ತು.

ಅವಳ ಮೇಲಿನ ರಾತ್ರಿ ಸಿಟ್ಟು ಇನ್ನೂ ಆರಿರ‍್ಲಿಲ್ಲ. ಅಪ್ಪ...ಅಪ್ಪ.. ಅಪ್ಪಾ.. ಅಪ್ನೆ ಹೆಚ್ಚು ಇವಳಿಗೆ ಗಂಡಗಿಂಡಯೇನೂ ಬ್ಯಾಡ... ಪಟಾರಂತ ಬಾರಿಸಿ ಬಿಡಬೇಕೆನಿಸಿತು. ಅದೇ ಸಿಟ್ನಲ್ಲಿ ಪಟಕ್ಕನೆ ಎದ್ದು ರಗ್ಗು ಚಾಪೆ ಸುತ್ತಿ ತೊಲೆ ಮೇಲೆಸೆದ.

‘ಅಪ್ಪ ಅಂದ್ರೆ ಅಂದ್ಯಾಕಂಗಾಡ್ತಿ? ಅದೇನೂ ಹೇಳ್ತಾರಲ್ಲ-ಬೈಯೋನ್ಯಾವಾಗ್ಲೂ ಬದ್ಕಾಕೆ ಹೇಳ್ದ ನಗೋನ್ಯಾವಾಗ್ಲೂ ಕೆಡಾಕೇಳ್ದಾ ಅಂತ. ಕಾಸಿಗೆ ಕಾಸು ಕೂಡಾಕಿ ಯಾವ ಗಂಡ್ಮಕ್ಕಳು ಅವೆ ಅಂತ ಹಂಗೆಲ್ಲ ಮಾಡ್ತಾನೇಳು? ಅಲ್ಲಾ...’ ಅಂತ ಅಂತಿದ್ದವಳು ಅಪ್ಪ ಬರುತ್ತಿದ್ದ ಕಂಡು ಅಷ್ಟಕ್ಕೇ ನಿಲ್ಲಿಸಿದಳು. ಮಾವ ಬಂದವನು.

‘ಆ ಹಳ್ಳದೊತ್ತಿ ಆಲದ ಮರದಲ್ಲಿ ಯಾರು ಹಂಗೆ ಅಡಿಗೆ ಅಷ್ಟಷ್ಟು ದಪ್ಪ ಕಡ್ಡಿ ಸೊಪ್ಪು ಕಡ್ದೋರು? ಹೋದದ್ದು-ಬಂದದ್ದನ್ನೆಲ್ಲ ನೋಡ್ಕೊಳ್ದೇ ಹೋದ್ರೆ ಹೆಂಗೆ? ಹೋಗು ಆ ಬಿದ್ದಿರೋ ಕೊನೆನಾದ್ರು ಎಳ್ಕೊಂಡು ಬಂದು ಹಿತ್ಲಿಗೆ ಹಾಕು. ಈ ಬ್ಯಾಸ್ಗೆಲ್ಲೇ ಒಂದಿಷ್ಟು ಸೌದೆ ಸೊಪ್ಪು ಜೊತ್ಮಾಡ್ಕೊಳ್ದೆ ಹೋದ್ರೆ ಮಳೆಗಾಲ್ದಲ್ಲಿ ಏನ್ಮಾಡೋದು? ಆಂ..ಅಂದ.’

ಹೆಂಡ್ತಿ ‘ಬಾ ಇನ್ನೊಂದ್ಸಲ ಏನು ಈಗ್ಲೇ ಮುಖ ತೊಳ್ಕೊಂಡು ತಂಗಳ ಉಂಡೋಗಿವಿಯಂತೆ ಒಟ್ಗೇ’ ಅಂದಳು.

ಪಾತ್ರೆ ತೊಳೆದು ಬಚ್ಲಿಗೆ ನೀರು ಹಾಕ್ತಿದ್ದ ಅತ್ತೆ- ಮುಂದೆ ನಾದ್ನಿ: ರಾತ್ರಿ ಹಂಗೆ ಭಾವನೆ ಗಳು ಈಗ ಗೂಡು ಕಟ್ಟಕ್ಕೆ ಅವಕಾಶ ಇರ‍್ಲಿಲ್ಲ. ಅವನೀಗ ಯಥಾ ಸ್ಥಿತಿಗೆ ಬಂದಿದ್ದ. ಮನಸ್ಸೊ ಳಗೆ ನಿಂತು ಪ್ರೇರಣೆ ಕೊಡುತ್ತಿದ್ದ ನರಸಪ್ಪ ನಾಗ್ಲೀ ಬಣ್ಣ ಬಣ್ಣದ ಬೆಳಕಲ್ಲಿ ಕುಣೀತಿದ್ದ ಪಾರ್ಟುಗಳಾಗ್ಲೀ ಯಾವೊಂದೂ ಬೆಂಗಾವ್ಲಿಗೆ ನಿಲ್ಲಿಲ್ಲ ಕಾವೂನು ಕೊಡ್ಲಿಲ್ಲ. ಬದಲಾಗಿ ಎಂದಿನಂತೆ ಇಂದಿನ ಕಾರ್ಯಭಾರದ ‘ಹೊಣೆ’ ನುಸುಳಿ ಈಗಿತ್ತ ಮುಖ ಮಾಡಿತು: ಅದು ಹಿತ್ಲಿಗೆ ಮರದ ಕೊನೆ ಸಾಗ್ಸೋದಾಗಿತ್ತು.

ಕುಳ್ಳಪ್ಪ ನಾದಿನಿ ಕೊಟ್ಟ ಚೊಂಬು ಕೈಗೆತ್ತಿ ಕೊಂಡು ನರ ಉಬ್ಬಿಕೊಂಡಿದ್ದ ಮುಖಕ್ಕೆ ರಭ- ರಭಸವಾಗಿ ನೀರೆರ್ಚಿಕೊಳ್ಳತೊಡಗಿದ. ಅದನ್ನು ನೋಡಿದ ಆ ಹುಡುಗಿ ಭಾವನ ಸಿಟ್ಟು ಇಳೀ ಬೇಕಾದ್ರೆ ಈ ಚೊಂಬು ನೀರು ಸಾಕಾಗೋ ದಿಲ್ಲ ಅಂದ್ಕೊಂಡು ಇನ್ನೊಂದು ಚೊಂಬು ನೀರು ತರಲು ಒಳ ನಡೆಯಿತು. ಮನಸ್ನಲ್ಲೆ ನಗ್ತ.