Sunday, September 6, 2009

ಉಡುಪಿ: ಆಡು ಸಾಕಣೆಗೊಂದು ಮಾದರಿ: ‘ನಡೂರು ಆಡು ಸಾಕಾಣಿಕಾ ಕೇಂದ್ರ’

ಚಿತ್ರ-ವರದಿ: ಬಿ.ಬಿ.ಶೆಟ್ಟಿಗಾರ್‌, ಉಡುಪಿನಾಡಿನ ಮಾಂಸಾಹಾರ ಪ್ರಿಯರ ಬೇಡಿಕೆಗಳನ್ನು ಪೂರೈಸಲು ಇಂದು ಗ್ರಾಮ ಗ್ರಾಮಗಳ ಲ್ಲೊಂದರಂತೆ ‘ಕೋಳಿ ಫಾರ್ಮ್’ಗಳು ಕಂಡು ಬಂದರೂ ಬಹುಬೇಡಿಕೆಯಲ್ಲಿರುವ ಅಡಿನ ಮಾಂಸಗಳಿಗಾಗಿ ಉತ್ತಮ ಗುಣಮಟ್ಟದ ಆರೋಗ್ಯಕರ ಆಡುಗಳು ಲಭಿಸುವುದು ದುರ್ಲಭ. ಇವುಗಳನ್ನು ಸಾಂಪ್ರದಾಯಿಕವಾಗಿ ನೊಂದಾಯಿಸಿಕೊಳ್ಳದ ಮೂಲಗಳಿಂದಲೇ ಪಡೆಯ ಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಆಡು ಸಾಕಾಣಿಕ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಮೂಡಿಸುವಲ್ಲಿ ‘ನಡೂರು ಆಡು ಸಾಕಾಣಿಕಾ ಕೇಂದ್ರ’ (ನಡೂರು ಗೋಟ್ ಫಾರ್ಮ್) ಕಳೆದ ಐದು ವರ್ಷಗಳಿಂದ ಸದ್ದಿಲ್ಲದೇ ಶ್ರಮಿಸುತ್ತಿದೆ.ಉಡುಪಿಯಿಂದ ಉತ್ತರಕ್ಕೆ 29 ಕಿ.ಮೀ. ದೂರದಲ್ಲಿ ಹಾಗೂ ಬ್ರಹ್ಮಾವರದಿಂದ 12 ಕಿ.ಮೀ. ದೂರದಲ್ಲಿ ಬಾರಕೂರು-ಕೂರಾಡಿ ರಸ್ತೆಯಲ್ಲಿರುವ ಅತ್ಯಂತ ಗ್ರಾಮೀಣ ಪ್ರದೇಶವಾದ ನಡೂರಿನ 65 ಎಕರೆ ವಿಶಾಲ ಪ್ರದೇಶದಲ್ಲಿ ಈ ಆಡು ಸಾಕಾಣಿಕಾ ಕೇಂದ್ರವಿದೆ. ಸುಮಾರು ಒಂದು ಲಕ್ಷ ಚದರ ಅಡಿ ವಿಶಾಲ ಸ್ಥಳಾವಕಾಶವಿರುವ ನಾಲ್ಕು ಬೃಹತ್ ಕೊಟ್ಟಿಗೆಗಳಲ್ಲಿ ಧಾರಾಳವಾಗಿ ಬರುವ ಶುದ್ಧ ಗಾಳಿ-ಬೆಳಕಿನ ಪರಿಸರದಲ್ಲಿ ಸದ್ಯಕ್ಕೆ ೨,೫೦೦ಕ್ಕೂ ಅಧಿಕ ಆಡುಗಳನ್ನು ವೈಜ್ಞಾನಿಕ ರೀತಿಯಲ್ಲಿ ಇಲ್ಲಿ ಬೆಳೆಸಲಾಗುತ್ತಿದೆ.೨೦೦೨ರ ಸುಮಾರಿಗೆ ಆಡುಗಳನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಬೆಳೆಸುವ ಕನಸುಗಳೊಂದಿಗೆ ಮುಂಬಯಿಯಿಂದ ನಡೂರಿಗೆ ಬಂದ ಜಯಕರ ಕೈರನ್ನ (೬೯) ಇಂದು ಕನಸುಗಳೆಲ್ಲಾ ನನಸಾದ ತೃಪ್ತಿಯನ್ನು ಹೊಂದಿದ್ದಾರೆ. ೧೯೫೮ರಿಂದ ಮುಂಬಯಿಯಲ್ಲಿದ್ದ ಮೂಲತ: ಕಾಪುವಿನವರಾದ ಜಯಕರ ಕೈರನ್ನ, ೨೦೦೪ರಲ್ಲಿ ಮುಂಬಯಿ ತೊರೆದು ಪೂರ್ಣ ಪ್ರಮಾಣದಲ್ಲಿ ಇದರಲ್ಲಿ ತೊಡಗಿಸಿಕೊಂಡರು. ೧೨೦ ಆಡುಗಳೊಂದಿಗೆ ಆರಂಭಗೊಂಡ ಈ ಫಾರ್ಮ್ ಇಂದು ಕೋಟ್ಯಾಂತರ ರೂ.ವಹಿವಾಟಿನ ಕೇಂದ್ರವಾಗಿ ಬೆಳೆದು ನಿಂತಿದೆ. ಇಂದು ಅವರ ಇಬ್ಬರು ಮಕ್ಕಳಾದ ಸ್ಟಿಫನ್ ಕೈರನ್ನ ಹಾಗೂ ಸಿಡ್ನಿ ಕೈರನ್ನ ಉದ್ದಮಿಯಲ್ಲಿ ಅವರಿಗೆ ಸಹಕರಿಸುತ್ತಿದ್ದಾರೆ.ನಡೂರು ಫಾರ್ಮ್‌ನಲ್ಲಿ ಆಡುಗಳನ್ನು ಕ್ರಾಂತಿಕಾರಿ ಮಾದರಿಯಲ್ಲಿ ಕೊಟ್ಟಿಗೆಯಲ್ಲಿ ಮೇಯಿಸಿ ಇವುಗಳನ್ನು ಸಾಕಲಾಗುತ್ತಿದೆ. ಇಂದು ಆಡು ಸಾಕಾಣಿಕೆಯನ್ನು ಒಂದು ಉದ್ದಿಮೆಯಾಗಿ ಪರಿಗಣಿಸಲಾಗುತಿದ್ದು, ಈ ಮಾದರಿಯ ಸಾಕಾಣಿಕೆಗೆ ಅನೇಕ ಪಶುಪಾಲಕರ ಪ್ರೋತ್ಸಾ ಹವೂ ದೊರೆತಿದೆ ಎಂದವರು ಹೇಳುತ್ತಾರೆ.ನಡೂರು ಫಾರ್ಮ್‌ನಲ್ಲಿ ಇಂದು ದೇಶ-ವಿದೇಶಗಳ ೨೦ಕ್ಕೂ ಅಧಿಕ ತಳಿಗಳಿವೆ. ಅವುಗಳನ್ನು ವಂಶಾಭಿವೃದ್ಧಿಗೆ ಹಾಗೂ ಮಾಂಸಕ್ಕಾಗಿ ಉಪಯೋಗಿಸಲಾಗುತ್ತಿದೆ. ಇಲ್ಲಿನ ಆಡುಗಳಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಾತ್ರವಲ್ಲದೇ, ಜರ್ಮನಿ ಹಾಗೂ ಕೊಲ್ಲಿ ರಾಷ್ಟ್ರಗಳಿಂದಲೂ ಬೇಡಿಕೆಗಳು ಬರುತ್ತಿವೆ. ಮುಂದಿನ ಬಕ್ರೀದ್ ಹಬ್ಬಕ್ಕಾಗಿ ೫೦೦ ಆಡುಗಳನ್ನು ಪೂರೈಸಲು ಈಗಾಗಲೇ ಬೇಡಿಕೆ ಬಂದಿದೆ ಎಂದು ಜಯಕರ ಕೈರನ್ನ ಹೇಳುತ್ತಾರೆ.ಕರ್ನಾಟಕದ ಜನರಿಗಾಗಿ ಇಲ್ಲೇ ಆಡುಗಳನ್ನು ಬೆಳೆಸುವುದು ಈ ಕೇಂದ್ರದ ವೈಶಿಷ್ಯವಾಗಿದೆ. ರಾಜ್ಯದ ಎಲ್ಲಾ ೨೯ ಜಿಲ್ಲೆಗಳಲ್ಲೂ ಸಣ್ಣ ಪ್ರಮಾಣದ ಆಡು ಸಾಕಾಣಿಕಾ ಕೇಂದ್ರಗಳನ್ನು ಸ್ಥಾಪಿಸಲು ಸಹಕರಿಸುವುದು ಈ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಸ್ಟಿಫನ್ ಮತ್ತು ಸಿಡ್ನಿ ಕೈರನ್ನ ಹೇಳುತ್ತಾರೆ.ಈ ಕೇಂದ್ರದಲ್ಲಿ ಆಡುಗಳನ್ನು ಕ್ರಮಬದ್ಧವಾಗಿ ಹಾಗೂ ಶುಚಿಕರ ವಾತಾವರಣದಲ್ಲಿ ಸಾಕಲಾಗುತ್ತದೆ. ನಿಯತಕಾಲಿಕ ಆರೋಗ್ಯ ತಪಾಸಣೆ ಹಾಗೂ ಮುಂಜಾಗ್ರತಾ ಲಸಿಕೆಗಳಿಂದ ಆಡುಗಳನ್ನು ಆರೋಗ್ಯಕರ ಹಾಗೂ ರೋಗರಹಿತ ಸ್ಥಿತಿಯಲ್ಲಿ ಕಾಪಾಡಲಾಗುತ್ತದೆ. ಆಡುಗಳಿಗೆ ಬೇಕಾಗುವ ಮೇವನ್ನು ಕೇಂದ್ರದಲ್ಲೇ ಬೆಳೆದು ಒದಗಿಸಲಾಗುತ್ತದೆ. ಆಡುಗಳಿಗೆ ಪ್ರೋಟೀನುಯುಕ್ತ ಹಾಗೂ ಪೌಷ್ಠಿಕಾಂಶಗಳನ್ನು ನಿಗದಿತ ಪ್ರಮಾಣದಲ್ಲಿ ನೀಡಲಾಗುತ್ತದೆ ಎಂದು ಜಯಕರ ಕೈರನ್ನ ವಿವರಿಸುತ್ತಾರೆ.ಆಡುಗಳಲ್ಲಿ ಗಂಡು ಆಡು -ಹೋತ-ಗಳಿಗೆ ಬೇಡಿಕೆ ಹೆಚ್ಚು. ಇಲ್ಲಿನ ಹೋತಗಳಲ್ಲಿ ಕೆಲವು ೮೦ರಿಂದ ೧೦೫ ಕೆ.ಜಿಯವರೆಗೂ ತೂಗುತ್ತಿವೆ ಎಂದು ಕೈರನ್ನ ಹೆಮ್ಮೆಯಿಂದ ಹೇಳುತ್ತಾರೆ. ಹೆಣ್ಣು ಆಡೊಂದಕ್ಕೆ ಕನಿಷ್ಠ ನಾಲ್ಕು ಸಾವಿರ ರೂ. ದರವಿದ್ದರೆ, ಗಂಡು ಆಡಿನ ಕನಿಷ್ಠ ಬೆಲೆ ಹತ್ತು ಸಾವಿರ ರೂ. ಎಂದು ತಿಳಿಸಿದರು.ಆಡು ಸಾಕಾಣಿಕೆಯಲ್ಲಿ ಆಸಕ್ತಿ ಇರುವ ದೊಡ್ಡ, ಸಣ್ಣ ಹಾಗೂ ಅತೀಸಣ್ಣ ರೈತರಿಗೆ ಉತ್ತಮ ಗುಣಮಟ್ಟದ ಆಡುಗಳನ್ನು ಕೊಳ್ಳಲು ನಡೂರು ಆಡು ಸಾಕಾಣಿಕಾ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಯಕರ ಹೇಳುತ್ತಾರೆ. ಆಡು ಸಾಕಾಣಿಕೆಗೆ ಬೇಕಾದ ಸಲಹೆ-ತರಬೇತಿಯನ್ನು ಸ್ವಾನುಭವದಿಂದ ನಾವು ನೀಡುತ್ತೇವೆ ಎಂದರು. ಆಡು ಸಾಕಾಣಿಕೆಯ ಇತರ ಉತ್ಪನ್ನಗಳಾದ ಮಾಂಸ, ಹಾಲು, ಗೊಬ್ಬರ ಹಾಗೂ ಚೀಸ್ ಇವುಗಳ ಸಂಸ್ಕರಣೆಗೆ ಸಂಬಂಧಿತ ಘಟಕಗಳ ಸ್ಥಾಪನೆಗೆ ಸಹ ಅವಕಾಶಗಳಿವೆ ಎಂದವರು ವಿವರಿಸುತ್ತಾರೆ. ಆಡಿನ ಹಾಲು ಅತ್ಯುತ್ತಮ ಪೌಷ್ಠಿಕ ಆಹಾರ. ಇದು ಗಾಂಧೀಜಿಯವರ ಆಹಾರ ಕೂಡಾ ಆಗಿತ್ತು. ಸದ್ಯಕ್ಕೆ ಆರೋಗ್ಯಕರವಾದ ಆಡಿನ ಹಾಲನ್ನು ಈ ಫಾರ್ಮಿನಲ್ಲಿ ಬಳಸುತ್ತಿಲ್ಲ. ಅದನ್ನು ಸಂಪೂರ್ಣವಾಗಿ ಮರಿಗಳಿಗೆ ಕುಡಿಯಲು ಬಿಡಲಾಗುತ್ತಿದೆ. ಮುಂದೆ ಆಡಿನ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಸ್ಥಾಪಿಸಿ ಜನರಿಗೆ ಅವುಗಳನ್ನು ಪರಿಚಯಿಸುವ ಯೋಜನೆಯೂ ಇದೆ ಎಂದು ಸ್ಟಿಫನ್ ಮತ್ತು ಸಿಡ್ನಿ ಹೇಳುತ್ತಾರೆ. ಈ ಫಾರ್ಮ್‌ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ -www.nadurgoatfarm.com- ಹಾಗೂ ಈಮೈಲ್- nadurgoatfarm@gmail.com- ಅನ್ನು ಸಂಪರ್ಕಿಸಬಹುದು.