Monday, March 8, 2010

ಕಾಡ ನಡುವಿನ ಮಳೆ

-ರಘುನಾಥ ಚ.ಹ.

ಸಂಜಿ ಸೂರ್ಯನ ಕುಡುದ ಕೆರೆ ಕೆಂಪಾಗಿತ್ತು. ಲಕಲಕಾಂತ ಹೊಯ್ದಾಡುತಿರೋ ಅಲೆಗಳು ಎದೆಗೆ ಬಡುದಂಗನ್ನಿಸಿ ಕಣ್ಣನೋಟ ಮೀರಿ ನಿಂತ ನೀರುನ ನೋಡುತ ನಿಂತವರು, ತಲೆ ಭೂಚಕ್ರದಂತಾಗಿ ದಿಗಿಲು ಬೀಳುತ್ತಿದ್ದರು. ಊರ ಜನರೆಲ್ಲರ ಸಾರ ಸತುವ ಬಸಕೊಂಡು ದಿವಿನಾಗಿ ಬೆಳೆದು ನಿಂತಿದ್ದ ಜಾಲಿ ಗಿಡಗಳ ಇರುವೂ ಇರದಂಗೆ ತುಂಬಿ ಕೊಂಡಿದ್ದ ಗಂಗಮ್ಮ ಮಾತಾಯೀನ, ಎದೆಯಾಗೆ ಕಣ್ಣಾಗೆ ತುಂಬು ಕಂಡವರು ದಣಿವು ಅನ್ನಿಸಿದಾಗ ಸೋತ ಕಣ್ಣುಗಳನು ತೆಪ್ಪ ಕಟ್ಟುವ ಜನಗಳತ್ತ ಕದುಲಸಿ ಮತ್ತೆ ಜೀವ ತುಂಬುಕೋತಿದ್ದರು. ಸಂಜೀ ಜೊತೆ ಗಂಗಮ್ಮನ ಬಳುಕು ವಯ್ಯಾರಗಳನ್ನು ನೋಡೋಕೆ ಬರೋ ಗುಂಪೂ ಬೆಳೀತಿತ್ತು.

ರತಿದೇವಿ ಜೊತೆಯಾಗೆ ಜಲಕ್ರೀಡೆಗೆ ಹೊರಟ ಕಾಮಣ್ಣನ ತೇರುನಂಗೆ ತೆಪ್ಪ ಚಲುವಾಗಿತ್ತು. ಬಿದುರು ಬೊಂಬುಗಳ ಬಿಗಿದು ಕಟ್ಟಿದ್ದ ತೆಪ್ಪದ ಪ್ರತಿ ಗಳವೂ ಸುಣ್ಣಬಣ್ಣ ಸಿಂಗಾರ ಮಾಡಿಕೊಂಡಿತ್ತು. ಕೆಲವರು ಕಟ್ಟುಗಳ ಲಗುಬಿಗು ಪರೀಕ್ಷೆ ಮಾಡುತ ಇದ್ದರೆ, ಕೆಲವರು ತೆಪ್ಪದ ನಡುಭಾಗದಾಗೆ ಊರದೇವುರ ಕೂರಿಸೋಕೆ ಪೀಠವ ಕಟ್ಟುತ್ತಿದ್ದರು. ತೆಪ್ಪ ಚಲುವಾಗೋ ಸೊಗಸು ನೋಡುತ ಮೈಮರತವರು, ಭಾರೀ ಗಾತ್ರದ ತೆಪ್ಪ ನೀರಮ್ಯಾಗೆ ಹೂವಾಗೋದಾದ್ರೂ ಎಂಗೆ ಅಂತ ಅಂದಾಜು ಮಾಡಿ ಸೋಲುತ್ತಿದ್ದರು.

ಕಣ್ಣುಗಳ ಮೊಕದುದ್ದಕ್ಕೂ ಅರಳಿಸಿಕೊಂಡ ಚಿಳ್ಳೆಪಿಳ್ಳೆಗಳು ತೆಪ್ಪ ಕಟ್ಟುವವರಿಗೆ ಉಸುರು ತಾಗೂವಷ್ಟು ಹತ್ತುರವಾಗಿ, ಅವರು ಬಾಯಿ ಮಾಡುದಾಗ ಹಿಂದಕ್ಕೂ, ಸುಮ್ಮಗಾದಾಗ ಮುಂದಕ್ಕೂ ಜೋಕಲಾಡುತ್ತಿದ್ದವು. ಜನ ಮುಸುರಿ ಕೊಂಡಿದ್ದ ಕಂಡ ಏನೋ ಇಶೇಷ ಇರಬೋದೆಂದು ಸೇರಿದ್ದ ನಾಕಾರು ನಾಯಿಗಳು ಕುಂಯ್‌ಕುಂಯ್ ರಾಗವ ಪಾಡುತ್ತಿದ್ದವು.

ಇವತ್ತಿನ ರಾತ್ರಿ ಎಂಬೋದೊಂದು ಕಳದು, ನಾಳಿನ ಹಗಲೂ ಇರಳೂ ಉರುಳುದ ನಂತರ ಬರೋ ನಾಳಿದ್ದಿನ ಹಗಲೇ ತೆಪ್ಪೋತ್ಸವ. ಒಂದು ಹುಣ್ಣುಮೆ ಅಮಾಸೆಯಿಂದ ಊರುಗೇ ಊರೇ ಕನಸು ಕಂಡಿದ್ದ ದಿನ ಹತ್ತುರ ಹತ್ತುರಾದಂಗೆ, ಜವಾಬುದಾರಿಯ ಕತ್ತಾಗೆ ಕಟ್ಟುಕೊಂಡ ದೊಡ್ಡವರು ಒಂತಾವ ನಿಲ್ಲದೆ ಒಂತಾವ ಕೂರದೆ ತಟವಟ ಗುಟ್ಟುತ್ತಿದ್ದರು. ಕೆರೆ ಅಂಗಳದಾಗೆ ತೆಪ್ಪದ ಸಿಂಗಾರ ನಡೀತಿದ್ದರೆ, ಊರು ಮುಂದಲ ನಡೂ ಬಯಲು ನಾಗೆ ಹತ್ತು ಕುರುಕ್ಷೇತ್ರ ನಾಟಕಗಳನ್ನು ಒಂದೇ ಕಿತ ಆಡುದರೂ ಮಿಗುವಷ್ಟು ದೊಡ್ಡದಾದ ಸ್ಟೇಜು ಎದ್ದು ನಿಂತಿರೋದ ನೋಡಿ ಬೆಟ್ಟು ಕಡೀತ ದುರ್ಯೋ ಧನನ ದರ್ಬಾರು ಸೀನುಗಿಂತ ಸಕತ್ತಾಗೈತೆ ಅಂತ ಸ್ಟೇಜುನ ಕುರುತು ಜನ ಮಾತಾಡುತ್ತಿದ್ದರು.

ಹೊಟ್ಟೆ ಕೆಟ್ಟ ಹಸುಮಗು ಪದೇ ಪದೇ ಕಿರ್ರಂದಂಗೆ ನಾಕೈದು ದಿನಗಳಿಂದ ರಚ್ಚೆ ಹಿಡಿದಿದ್ದ ಜಿಗುಟು ಮಳೆಯಿಂದ ಮೋಡ ಕವುದಿದ್ದ ಊರ ಜನರ ಮೊಕಗಳು, ಬೆಳಗ್ಗೆ ಆಕಾಶ ಬೆಳ್ಳಗಾಗಿ ಮಧ್ಯಾಹ್ನ ಸೂರ್ಯ ಪರಮಾತ್ಮ ಧಗಧಗ ಉರು ದಾಗ ಕಳೆಯಾಗಿ ‘ಹಬ್ಬ ಒಂದು ಮುUವರೆಗೂ ಮನೆಯಾಗಿರಪ್ಪ ಮಳರಾಯ’ ಅಂತ ಬೇಡುತ್ತಿದ್ದವು.

ಹದಿನಾಲ್ಕು ವರುಷಗಳ ಶಾಪ ಕಳುದಂಗೆ ಮಾಯದಂಥ ಮಳೆ ಸುರುದು ಕೆರೆ ತುಂಬಿದ್ದು ಊರು ಜನುಗಳ ಪಾರವಿಲ್ಲದ ಹರುಷಕ್ಕೆ ಕಾರಣ ವಾಗಿತ್ತು. ತುಂಬಿನಿಂತ ಗಂಗವ್ವನ ಉಡಿಯಾಗಿ ನಿಂದ ಹುಟ್ಟಿಬಂದ ಗದ್ದೆ-ಮುಂಜಿ- ಮದುವೆಯಂಥ ಕನಸುಗಳು, ಬರದಿಂದ ಕಮರಿಹೋಗಿದ್ದ ಊರ ಜನುಗಳ ಎದಿಯಾಗೆ ಸಂಭ್ರಮ ಬಿತ್ತುತ್ತಿದ್ದರೆ, ಆ ಸಂಭ್ರಮದಾಗೆ ಹುಟ್ಟಿಕೊಂಡದ್ದು ಊರಹಬ್ಬ. ಹಿಂದೆ ಕಂಡಿಲ್ಲ, ಮುಂದೆ ನಡಯಾಕಿಲ್ಲ ಅನ್ನೂವಂಗೆ ಈ ಸಲದ ಊರಹಬ್ಬವ ಮಾಡುತೀನಿ ಅಂತ ಮುಂದಾಳಾದವನು ಅಣ್ಣಪ್ಪ ಗೌಡ. ಮೈ ತುಂಬಿ ಕೊಂಡಿರೊ ಗಂಗವ್ವಗೆ ಬಾಗಿನ, ತೆಪ್ಪೋತ್ಸವ, ಊರು ದೇವುರ ಉತ್ಸವ, ಅನ್ನಸಂತರ್ಪಣೆ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡ ಕ್ಷೇತ್ರದ ಶಾಸಕನೂ ಗ್ರಾಮ ಸ್ಥನೂ ಆದ ಅಣ್ಣಪ್ಪಗೌಡನ ಇಚ್ಛಾ ಪೂರೈಸೋಕೆ ನೂರಾರು ಜನ ಸೊಂಟ ಕಟ್ಟಿ ನಿಂತಿದ್ದರು.

ಇದೇ ಹೊತ್ತುನಾಗೆ ಊರುನ ಆತ್ಮದಂತಿದ್ದ ಗೌರ್ಮೆಂಟು ಹೈಸ್ಕೂಲುನ ಮಕ್ಕಳು ಇನ್ನೊಂದಿಷ್ಟು ಬುದ್ಧುವಂತರಾಗಲಿ ಅಂಬೋ ಉದ್ದೇಶದಿಂದ ರಾಜ್ಯದ ಘನ ಸರಕಾರ ಶಾಲೆಗೆ ಕಂಪ್ಯೂಟರು ಮಂಜೂರು ಮಾಡಿರುವುದಾಗಿಯೂ, ಇಡೀ ರಾಜ್ಯ ದಾಗಿ ಕಂಪ್ಯೂಟರು ಪಡೀತಿರೊ ಫಸ್ಟು ಗೌರ‍್ಮೆಂಟು ಸ್ಕೂಲು ಇದೆಂಬೋ ವಿಷಯವು ಊರಹಬ್ಬುದಷ್ಟೇ ಮಹತ್ವಪಡಕೊಂತು. ಉತ್ಸವದ ಜೊತೆಯಾಗೆ ಸ್ಕೂಲುನಾಗೆ ಕಂಪ್ಯೂಟರು ಕೇಂದ್ರವೂ ಶುರುವಾಗಲಿ ಅಂತ ಅಣ್ಣಪ್ಪಗೌಡರು ವಿಧಾನಸೌಧದ ಮೆಟ್ಟುಲನ ಹತ್ತೂ ಇಳುದು ಖುದ್ದು ಮುಖ್ಯಮಂತ್ರಿ ಗಳೇ ಬಂದು ಕಂಪ್ಯೂಟರು ಕೇಂದ್ರ ಉದ್ಘಾಟನೆ ಮಾಡೂವಂಗೆ ಒಪ್ಪುಸುದರು.

***
‘ತುಂಬ್ತು’ ಎಂದು ಕೂಗು ಹಾಕಿದಳು ಸಾವಿತ್ರಿ. ಸುತ್ತಲ ಗೋಡೆಗಳಿಂದೆಲ್ಲ ತನ್ನ ಮಾತೆ ಪ್ರತಿಧ್ವನಿಸಿ ದಂತೆನಿಸಿ ಬೆಚ್ಚಿದ ಸಾವಿತ್ರಿ, ತನ್ನನ್ನೇ ನೋಡುತ್ತಿದ್ದ ಅವ್ವ, ಅಕ್ಕನ ಕಣ್ಣುಗಳಾಗೆ ಇರೋದು ಕೋಪವೋ ತಾಪವೋ ಅನ್ನೂದರೀದೆ ಮಾತು ಮರತಳು. ಟಪ ಟಪ ಪಟಾಂತ ಸೂರಿನಿಂದ ಇಳೀತಿದ್ದ ಮಳೆ ತೊಟ್ಟು ಗಳಿಗೆ ಮಯ್ಯೊಡ್ಡಿ ತುಂಬಿದ್ದ ಸಿಲುವರು ದಬರಿಗೆಯ ನೀರುನ ಅಂಗಳಕ್ಕೆ ಚೆಲ್ಲುವ ಭಾUರಥಿ, ದಬರಿಗೆಯ ಮತ್ತೆ ನೀರುಗೆ ನೆಲೆಯಾಗಿಸಿ ಯಥಾ ಸ್ಥಾನದಾಗೆ ಕುಂತಳು.

ಮುಂದು ಮಾಡಿದ್ದ ಬಾಗಿಲು ಸಂದಿಯಾಗಿನಿಂದ ತೂರಿಬರೊ ಗಾಳಿಗೆ ಮಿಕ ಮಿಕ ಮಿಣಗುಡುತ್ತಿದ್ದ ಬುಡ್ಡಿ ದೀಪದ ಬೆಳಕುನಾಗೆ ಆತುಕೊಂಡು ಕೂತಿದ್ದ ತಾಯಿ ಮಕ್ಕಳು ಆಗಾಗ ಒಬ್ಬರ ಮೊಕ ಒಬ್ಬುರು ನೋಡುತ್ತಿದ್ದರು. ಮಾತೊಂಬೊ ಮಾಯ ಮರೆತು ಹೋದಂತಾಗಿ ಸೂರಿಂದ ಸಿಲುವರು ತಪ್ಪಲೆಗಳಿಗೆ ಇಳೀತಿದ್ದ ನೀರುನ ಟಪಟಪ್ಪ ಸಪ್ಪಳದ ಹೊರತು, ಮನೆಯಾಗೆ ಕೇಳುತ್ತಿದ್ದುದು ಮೂರು ಜೀವಗಳ ಉಸುರಾಟ ಮಾತ್ರ. ಮನೆಯಾಗೆಲ್ಲ ಮಳರಾಯ ಮೆರುದಾಡಿ, ತ್ಯಾವ ಕಾಣದೆ ಉಳುದ ಒಂದು ಪಟ್ಟೆಯಾಗೆ ಜೀವುಗಳು ಅಂಟಿಕೊಂಡಿದ್ದವು.

ಕೂತಲ್ಲೇ ತೂಗುತ್ತಿದ್ದ ಸಾವಿತ್ರಿಯ ತೊಡೆಯ ಮ್ಯಾಲೆ ಎಳಕೊಂಡ ಗೌರವ್ವ, ಸ್ಕೂಲುಬುಕ್ಕುನ ಮರಾಳೆಯಿಂದ ಮಾಡಿದ್ದ ದೋಣಿಯ ಸಾವಿತ್ರಿ ಕೈನಿಂದ ಬಿಡುಸಿ ಪಕ್ಕಕ್ಕಿಟ್ಟಳು. ಭಾUರಥಿ ಕೂಡ ಗೋಡೆಗೊರಗಿ ಕಣ್ಣು ಮುಚ್ಚಿದಳು. ಗೌರವ್ವನ ಕಣ್ಣುಗಳಾಗೆ ರಂಗಪ್ಪ ಭದ್ರವಾಗಿ ಕುಂತದ್ದರಿಂದ, ನಿದುರಾದೇವಿ ಕಣ್ಣುಗಳ ತೊರದು ಮೂರು ಹಣ್ಣುಮೆಗಳು ಕಳೆದು ಹೋಗಿದ್ದವು.

‘ಹೊಲದ ಕಡೀಕ್ಕೆ ಹೋಗಿ ಬತ್ತೀನಿ’ ಅಂತ ಗಂಜೀವೂ ಕುಡೀದೆ ವಂಟ ರಂಗಪ್ಪನಿಗೆ ಬೈಗಿನ ಮುದ್ದೆ ಮುರುಕವೇ ಕಡೆ ತುತ್ತಾಗಿತ್ತು. ‘ಯಾಕೋ ಗಂಟಲಾಗೆ ತುತ್ತೇ ಇಳೀದು’ ಅಂತ ಅರ್ಧಕ್ಕೆ ಕೈ ತೊಳೆದು, ಹೊಲಕ್ಕೆ ಹೋದವನು ಬದುವಿನ ಪಕ್ಕ ಹೆಣವಾಗಿದ್ದ. ಮಿರಿ ಮಿರಿ ಮಿಂಚುತ ಮೈ ಮ್ಯಾಗೆಲ್ಲ ಕೂದಲಿರೊ ಎರಡು ಹೆಡೆ ಸರ್ಪ ಬದುವಿನ ಪಕ್ಕದಾಗೆ ಸರಸರ ಹರುದು ಹೋದದ್ದನ್ನು ಕಂಡೆ ಎಂದ, ರಂಗಪ್ಪನ ಸಾವನ್ನು ಮೊದಲಿಗೆ ಕಂಡ ಮಾರಣ್ಣ. ರಂಗಪ್ಪನ ತುಟಿಗಲಾಗೆ ಸ್ವಲುಪ ನೊರೆ ಮೆತ್ತುಕಂಡಿದ್ದರೂ, ಮೈ ಬಣ್ಣ ನೀಲಿಗೆ ಮಾಸಿರಲಿಲ್ಲ. ಹೆಣದ ಸ್ವಲ್ಪ ದೂರದಾಗೆ ಮಕಾಡೆಯಾಗಿದ್ದ ಪಾಲಿಡಾಲು ಬಾಟಲಿಗೆ ಹುಮಕ್ಕನ ಕಣ್ಣಿಗೆಬಿತ್ತು. ರಂಗಪ್ಪನ ಪ್ರಾಣವ ಕೊಂಡುಹೋದದ್ದು ಸರ್ಪವೋ, ಪಾಲಿಡಾಲೋ ಅಂಬೋದು ಇತ್ಯರ್ಥವಾಗುವ ಮುನ್ನವೇ ರಂಗಪ್ಪ ಭೂಮ್ತಾಯಿ ಮಡಿಲಾಗೆ ಮೈ ಮರುಸುಕೊಂಡ. ತನ್ನ ಗಂಡನಿಗೆ ಚಿತೆಯಾದದ್ದು ಪಾಲಿಡಾಲೂ ಅಲ್ಲ, ಸರ್ಪವೂ ಅಲ್ಲ, ಸಾವುಕಾರ ಅಣ್ಣಪ್ಪಗೌಡನ ಋಣ ಅಂಬೋದು ಗೌರವ್ವನ ಮನಸ್ಸಿಗೆ ಗಟ್ಟಿಯಾಗಿತ್ತು. ಗೌಡನ ಹೊಲದಾಗೆ ಸುರುಸುದ ಬೆವ ರುಗೂ ಲೆಕ್ಕಪತ್ರದ ಬಾಕಿಗೂ ಯಾವತ್ತೂ ತಾಳೆಯಾಗದೆ ರಂಗಪ್ಪ ಚಿಂತೆಗೆ ಬಿದ್ದಿದ್ದ. ಬೆಳೆದು ನಿಂತಿದ್ದ ಹಿರೀ ಮಗಳು ಭಾUರಥಿಗೆ ಕಂಕಣವೂ ಕೂಡಿಬಂದು, ಕೈನಾಗೆ ಕಿಲುಬು ಕಾಸಿಲ್ಲದಿದ್ದರೂ, ಹುಡುಗನಿಗೆ ಹತ್ತು ಸಾಮರ ವರದಕ್ಷಿಣೆ ಮಡಗಿ ಸುಗ್ಗಿ ಮುಗುದ ಮ್ಯಾಲೆ ತಕ್ಕಮಟ್ಟಿಗೆ ಚೆನ್ನಾಗಿ ಲಕ್ನ ಮಾಡಿಕೊಡುತೀನಿ ಅಂತ ಮಾತು ಕೊಟ್ಟಿದ್ದ ಸಾವುಕಾರ ಪಂಚರಂಗಿ ರಾಗವ ಹಾಡತೊಡಗಿ ರಂಗಪ್ಪ ದಿಕ್ಕೆಟ್ಟಿದ್ದ. ಕಲ್ಲು ಕರಗೋ ಸರಿ ರಾತ್ರಿನಾಗೆ ಎದ್ದುಕುಂತು ಬೀಡಿ ಸುಡುತ, ಬೆಳ್ಳುಗಳ ಸುಟ್ಟುಕೋತ ಸೂರು ನೋಡುತ್ತಿದ್ದ ಗಂಡನ್ನ ಕಂಡು ಗೌರವ್ವ ದಿಂಬುನ ವದ್ದೆ ಮಾಡುತ ಮಗ್ಗುಲು ವಳ್ಳುತ್ತಿದ್ದಳು. ಹೆಂಡತಿಯ ಬಿಕ್ಕು ಕೇಳುದ ರಂಗಪ್ಪ ‘ದೇವುರವ್ನೆ ಗೌರಾ’ ಅಂತ ಸುಟ್ಟ ಬೆಟ್ಟನಾಗೆ ಕೆನ್ನೆ ಮ್ಯಾಗಲ ಹನಿ ವರಸುತ ಧೈರ್ಯ ತುಂಬುತ್ತಿ ದ್ದವನು. ತಾನೇ ಧೈರ್ಯ ಕಳಕೊಂಡು ಶಿವನ ಪಾದ ಸೇರ‍್ಕೊಂಡು, ತನ್ನ ಭಾರಾನೆಲ್ಲ ತಾಳಿ ಇಳುದ ಗೌರವ್ವನ ಕೊಳ್ಳುಗೆ ಕಟ್ಟಿದ್ದ.
***
ಮಳೆ ಎಂಬೋದು ಎಕ್ಕುಟ್ಟೋಗಿ ಬಿತ್ತುದ ಬೀಜ ಕಣ್ಣು ಬಿಡೋಕೆ ಮುಂಚೇನೆ ಸೀಕಲಾದ್ದರಿಂದ ರಂಗಪ್ಪ ಪಾಲಿಡಲು ಕುಡುದು ಸುತ್ತುವುನೆ ಅಂಬೊ ಮಾತು ಜನುಗಳ ಬಾಯಾಗೆ ಹೊರಳಿ ಹೊರಳಿ ಗಟ್ಟಿಯಾಗಿ, ಅದಕ್ಕೆ ಅಣ್ಣಪ್ಪಗೌಡನೂ, ತಾಲೂಕು ದೊರೆಗಳೂ ಹೂಂಗುಟ್ಟಿದರು. ಬೆಂಗಳೂರಿನಿಂದ ಟೀವಿನೋರು, ಪೇಪರುನೋರು ಬಂದು, ಗೌರವ್ವನ, ಭಾUರಥಿ, ಸಾವಿತ್ರೀನೂ ಮಾತಾಡುಸು ಕೊಂಡು ಹೋದರು. ಜೀವಕಳಕೊಂಡ ರೈತನ ಕುಟುಂಬಕ್ಕೆ ಸರಕಾರ ಲಕ್ಷ ರೂಪಾಯಿ ಪರಿಹಾರ ಕೊಡ್ತದೆಂದು ಮುಖ್ಯಮಂತ್ರಿಗಳು ಪೇಪರುನಾಗೆ ಭರವಸೆ ನೀಡಿದರು.

ಲಕ್ಷ ರೂಪಾಯಿ ವಿಷಯ ಕೇಳುದ ಕೆಲವರು ‘ರಂಗಪ್ಪನ ಪುಣ್ಯ ದೊಡ್ಡದು. ತಾನು ಸತ್ತರೂ ಹೆಂಡ್ರು ಮಕ್ಕಳಿಗೊಂದು ದಿಕ್ಕು ಮಾಡ್ದ’ ಅಂತ ಮಾತಾಡು ಕೋತಿದ್ದರು. ‘ಬಂಗಾರದಂಥ ಯಜ ಮಾನನ ಹೋದಮ್ಯಾಕೆ ಲಕ್ಷ ಕಟ್ಟುಕೊಂಡು ಏನ್ಮಾಡ್ಲಿ ಶಿವುನೆ’ ಅಂತ ಒಳಗೊಳಗೆ ನವೆಯುತ್ತಿದ್ದ ಗೌರವ್ವಗೆ, ತನ್ನನ್ನು ಸಾವುಕಾರ್ತಿಯಾಗೆ ನೋಡೋಕೆ ಸುರು ಮಾಡುದ ಜನಗಳ ಮಾತುಗಳು ಸಂಕಟ ತರುತ್ತಿದ್ದವು. ಇದೇ ಹೊತ್ತುನಾಗೆ ಭಾUರಥೀನ ಮನೆ ತುಂಬಸು ಕೊಳ್ಳಾಕೆ ಒಪ್ಪಿಕೊಂಡಿದ್ದ ಬೀಗರು- ‘ಕಂಡೋರ ಮಾತುಗೆ ಕಿವಿಕೊಟ್ಟು ದುಡ್ಡುನ ಪಾಪಿ ಪರದೇಶಿಗಳ ಪಾಲು ಮಾಡೀಯೆ. ಮಗಳು ಅಳೀ ಮಯ್ಯಗೊಂದು ನೆಳ್ಳು ಮಾಡ್ಕೊಡು. ನಿಂಗೂ ಚಿಕ್ಕೋಳುಗೂ ಅವರೇ ದಿಕ್ಕಾ ಯ್ತಾರೆ’ ಎಂದು ಉಪದೇಶ ಮಾಡಿದರು. ಗೌರವ್ವನ ಬಾಯಾಗೆ ತಟ್ಟನೆ ಮಾತುಗಳು ಹುಟ್ಟುದಿ ದ್ದುದ ನೋಡಿ- ‘ನಿಂಗೆ ಇಷ್ಟಯಿಲ್ಲದುದ್ರೆ ಒತ್ತಾಯಿಲ್ಲ ಬಿಡು. ನಮ್ಗೇನು ಹೆಣ್ಣುಗಳಿಗೆ ಬರವೇ?’ಅಂಬೊ ಬಾಣವನ್ನೂ ಬಿಟ್ಟರು.

ಬಣ್ಣ ಬದಲಿಸುವ ಬೀಗರ ದೆಸೆಯಿಂದ ದಿಕ್ಕು ತೋಚದೆ ಕೂತಿದ್ದ ಗೌರವ್ವ, ಅಣ್ಣಪ್ಪ ಗೌಡ ಹೇಳುದ ಕಾಗುದ ಪತ್ರಗಳ ಲೆಕ್ಕವ ಹೇಳಿ ಪೂರಾ ನೆಲ ಕಚ್ಚು ದಳು. ಯಾವತ್ತೂ ಜಮೆಯನ್ನೇ ಕಾಣದ ಲೆಕ್ಕದ ಪುಸ್ತಕದಾಗಿನ ರಂಗಪ್ಪನ ಸಾಲ ಬಡ್ಡಿ ಜೊತೆ ಹನು ಮಂತನ ಬಾಲದಂಗೆ ಬೆಳೆದು ಲಕ್ಷರೂಪಾಯಿ ದಾಟಿತ್ತು. ‘ಮೂಕೆತ್ತುನಂಗೆ ತನ್ನ ತ್ವಾಟದಾಗೆ ಗೇದ ರಂಗಪ್ಪನ ಮ್ಯಾಲಿನ ವಿಶ್ವಾಸದಿಂದ ಲಕ್ಷದ ಮ್ಯಾಲಿ ರೋದನ್ನು ಬಿಟ್ಟರೆ ಬಿಟ್ಟೇನು, ಉಳುದುದ ಮಾತ್ರ ಕೊಟ್ಟೇ ಕೊಡಬೇಕು. ಮುಖ್ಯಮಂತ್ರಿಗಳು ಚೆಕ್ಕು ಕೊಟ್ಟ ತಕ್ಷಣ ಜಮಾ ಮಾಡಬೇಕು’ ಅಂತ ಗೌರವ್ವಗೆ ಅಣ್ಣಪ್ಪಗೌಡ ಅಪ್ಪಣೆ ಮಾಡುದ.

‘ನೀವಿಂಗೆ ಪಟ್ಟು ಮಾಡುದರೆ ಬಡುವುರು ಕೆಟ್ಟೋಗ್ತೀವಿ’ ಅಂತ ಪಾದುಗಳ ಕಣ್ಣೀರಾಗೆ ತೊಳು ದರೂ ಅಣ್ಣಪ್ಪಗೌಡಗೆ ಗೌರವ್ವನ ಮ್ಯಾಗೆ ಕರುಣ ಹುಟ್ಟಲಿಲ್ಲ. ‘ಬಾಕೀನ ತೀರುಸದೆ ಹೋದುರೆ ರಂಗಪ್ಪನ ಅತುಮ ತ್ರಿಶಂಕು ಸ್ವರುಗದಾಗೆ ವಿಲ ವಿಲ ಒದ್ದಾಡ್ತದೆ. ನಂಗೂ ಕಷ್ಟನಷ್ಟ ಅಂತ ಇರ‍್ತದೆ. ಬ್ಯಾಂಕುನ ಸಾಲ ಮನೆ ಹೊಸಲುಗೆ ಬಂದದೆ, ಇಲ್ಲಾಂದ್ರೆ ಕೊಟ್ಟಾಗ ಕೊಡಿ ಅಂತ ಸುಮ್ಕಿರ‍್ತಿದ್ದೆ’ ಎಂದು ನಾಜೂಕಿನ ಮಾತಾಡಿದ ಗೌಡ, ‘ಖಾಲಿ ಬಿದ್ದಿರೊ ತ್ವಾಟದ ಮನೆಯಾಗೆ ಇದ್ದುಕೊಂಡು ತ್ವಾಟದ ಕೆಲಸ ಬೊಗಸೆ ನೋಡ್ಕಂಡಿರಿ.’ ಭಾUರಥಿಗೆ ಬ್ಯಾರೆ ಸಂಬಂಧ ಹುಡುಕುವ ಅಂತ ಗೌಡಕೆಯ ಮಾತೂ ಆಡುದ.

ಎಲ್ಲೆಲ್ಲೂ ಹಬ್ಬುಂಡಿದ್ದ ಕಳ್ಳು ಬಳ್ಳಿಗಳೆಲ್ಲ ತವರುಗೆ ಬಂದು, ಎತ್ತ ನೋಡುದರೂ ಸಂಭ್ರಮದ ಮುಖ ಗಳೇ ಕಾಣುತ್ತಿರಲಾಗಿ, ಇಂಥ ಜನ ಯಾವತ್ತೂ ಊರು ಕಂಡಿರಲಿಲ್ಲ ಅಂಬೊ ಮಾತುಗಳು ಊರು ಮುಂದಲ ಕಟ್ಟಮ್ಯಾಗೆ ಹುಟ್ಟುಕೋತಿದ್ದವು. ಕಣ್ಣುಗೆ ಹಬ್ಬದಂಗೆ ಸಿಂಗಾರ ಮಾಡ್ಕೊಂಡ ತೆಪ್ಪ ಪ್ರಯಾ ಣಕ್ಕೆ ತಯಾರಾಗಿ ನಿಂತಿದ್ದರೆ, ಇನ್ನೊಂದು ಕಡೆ ಬೆಂಡು ಬತ್ತಾಸು ಕಳ್ಳಪುರಿ ಆಟದ ಸಾಮಾನುಗಳ ಅಂಗಡಿಗಳ ಪರುಸೆ ಜೋರಾಗಿತ್ತು. ‘ಅವ್ವಾ ಬಳೆ, ಅಪ್ಪೋ ಟೇಪು, ನಂಗೆ ಪೀಪಿ’ ಅಂತ ಅಪ್ಪ ಅಮ್ಮುಗಳಿಗೆ ಜೋತು ಬೀಳುತ್ತಿದ್ದ ಚಿಳ್ಳೆ ಪಿಳ್ಳೆಗಳು ಪಾಡುತ್ತಿದ್ದ ಕಿರ್ರೋ ಅಂಬೊ ರಾಗವು, ಆಕಾಶನೂ ಭೂಮೀನೂ ಅಳೀತಾ ತಿರುಗುತ್ತಿದ್ದ ರಂಕಲುರಾಟೆ ಸಬುದದಾಗೆ ಸೇರಿಕೋತಿತ್ತು.

ಹಬ್ಬದ ಸಡುಗರ ಊರಾಗಿನ ಎಲ್ಲ ಮನೆಗಳು ಮೋರೆಗಳಾಗೆ ಚಿಲುಮೆಯಾಗಿ ಚಿಮ್ಮುತ್ತಿದ್ದರೆ, ಗೌರವ್ವನ ಮನೆಯಾಗಿ ಎಂಥ ಸಂಭ್ರಮಕ್ಕೂ ಬಗ್ಗದ ಸೂತಕದ ಕಳೆಯಿತ್ತು. ಕೆರೆಯಾಗೆ ಗಂಗಮ್ಮ ಮೈ ತುಂಬಕಂಡಿದ್ದರೆ ಗೌರವ್ವನ ಕಣ್ಣುಬಾವಿಗಳ ತಳ ಬತ್ತಿ ಹೋಗಿತ್ತು.

ಅವ್ವ ಅಕ್ಕ ಕಣ್ಣೀರಾಗೆ ಕೈ ತೊಳಿತಾ ಹಗಲುಗಳ ರಾತ್ರಿಯಾಗಿಸುತ ರಾತ್ರಿಗಳ ಹಗಲು ಮಾಡು ತ್ತಿದ್ದರೆ, ಒಂದು ಕೆನ್ನೆಯಾಗೆ ಹಾಲು ಇನ್ನೊಂದು ಕೆನ್ನೆಯಾಗೆ ನೀರು ಅನ್ನೂವಂಗಿದ್ದ ಸಾವಿತ್ರಿ, ಸ್ಕೂಲು ಬುಕ್ಕುನ ಮರಾಳೆಯಾಗಿ ಮಾಡಿದ್ದ ದೋಣಿಯ ತೆಪ್ಪದ ಜೊತೆಯಾಗೆ ತೇಲಿಬಿಡಬೇಕು ಅಂತ ಕನಸು ಕಾಣುತ್ತಿದ್ದಳು. ಅಪ್ಪ ಹೋದಮ್ಯಾಗೆ ಸ್ಕೂಲು ಕಡೆ ಮೊಕ ಹಾಕಿ ಮಲಗದ ಸಾವಿತ್ರಿ, ಆ ಮನೆ ಯಾಗೊಂದು ಮುರು, ಈ ಮನೆಯಾಗೊಂದು ಮುರು ಉಂಡು ಬೆಳೆಯುತ್ತಿದ್ದರೆ, ಗೌರವ್ವನೂ ಭಾUರಥಿಯೂ ಯಾವ ಹೊತ್ತುನಾಗೆ ಒಲೆಗೆ ಬೆಂಕಿ ಕಾಣಿಸುತ್ತಾರೆ, ಯಾವಾಗ ಮುಸುರೆ ಬಳೀತಾರೆ ಅಂಬೋದು ನೆರೆಹೊರೆಯೋರಿಗೆ ಸೋಜಿಗದ ಸಂಗತಿಯಾಗಿ, ತಾವು ಕಲಿತ ಬುದ್ಧಿ ಮಾತುಗಳೆಲ್ಲ ಖರ್ಚಾದ ನಂತರ ಅವ್ವ ಮಗಳ ಅವುರ ಪಾಲಿಗೆ ಅಂತ ಬುಟ್ಟರು.

‘ಅವ್ವ ವತ್ತಾರೆ ಕೆರೆ ಅಂಗಳಕ್ಕೆ ರಾಜಿ ಜೊತೆ ಯಾಗೇ ಹೋತೀನಿ’ ಅಂತ ಗಿಳಿಯಂಗೆ ಸಾವಿತ್ರಿ ಪದೇ ಪದೇ ಉಲೀತಿದ್ದರೆ, ಅವ್ವ ಕಕಮಿಕ ಅನ್ನದಿ ರೋದ ನೋಡುವ ಭಾUರಥಿ ‘ಹೋಗುವಂತೆ ಸುಮ್ಕಿರು’ ಅಂತ ಸಾವಿತ್ರಿಯ ವರಾತವ ನಿಲ್ಲುಸು ದಳು. ಅವ್ವನ ಮೊಕ ನೋಡುದಾಗೆಲ್ಲ ಕಳ್ಳು ಕೊಳ್ಳುಗೆ ಬಂದಂಗನ್ನಿಸಿ ಭಾUರಥಿ ಬಾಯಾಗೆ ಸೆರಗಿಟ್ಕೊಂಡು ಬಿಕ್ಕುತ್ತಿದ್ದಳು.

ದೀಪ ಹಚ್ಚೊ ಹೊತ್ತುನಾಗೆ ಪ್ರತ್ಯಕ್ಷನಾಗಿದ್ದ ಅಣ್ಣಪ್ಪಗೌಡ, ಬಾಕಿ ವಿಷಯವ ನೆಪ್ಪು ಮಾಡಿದರೂ, ಗೌರವ್ವ ಉಭಶುಭ ಅನ್ನದ್ದು ನೋಡಿ, ‘ನಿಮ್ಮವ್ವಂಗೆ ಎಲ್ಲ ಸರಿಯಾಗಿ ಹೇಳು. ಬೆಳಗ್ಗೆ ಎಲ್ಲರೂ ಸ್ಟೇಜುತಾಕೆ ಬಂದು ಮುಂದೆಯೇ ಜಾಗ ಮಾಡ್ಕೊಂಡು ಕುಂತ್ಕಂಡಿರಿ’ ಎಂದು ವಾರೆಗಣ್ಣಾಗೆ ಭಾUರಥೀನ ನೋಡುತ ವಾಪಸ್ಸಾಗಿದ್ದ. ಮೈಮ್ಯಾಗೆಲ್ಲ ಚೇಳುಗಳ ಹರುದಂಗನ್ನಿಸಿ ಭಾUರಥಿ ದಾವಣಿಯ ಮೈ ತುಂಬ ಹೊದ್ದುಕೊಂಡಳು. ಗೌರವ್ವಂಗೆ ಆ ಮ್ಯಾಲೂ ಮಾತು ಹುಟ್ಟಿರಲಿಲ್ಲ.
***
ಸಾವಿತ್ರಿ ಸ್ಕೂಲುಗೆ, ಅಪ್ಪ ಅವ್ವ ಇಬ್ಬರೂ ಹೊಲಕ್ಕೋದ ಮ್ಯಾಗೆ ಭಾUರಥಿ ಕಸಮುಸುರೆ ಬಳೀತಿರುವಾಗ ಸಂಜೀವ ಬಂದಿದ್ದ ಅಪ್ಪ ಅವ್ವ ಇಲ್ಲದ ಹೊತ್ತುನಾಗೆ ಇವನ್ಯಾಕೆ ಬಂದ ಅಂಬೊ ಪ್ರಶ್ನೆ ಭಾUರಥಿಗೆ ಹುಟ್ಟುದರೂ ಅದು ದನಿಯಾಗಲಿಲ್ಲ. ಲಗ್ನ ಗೊತ್ತಾದ ದಿನದಿಂದ್ಲೂ ಆವಾಗವಾಗ ಬಂದು ಮೊಕ ತೋರುಸಿ ಹೋಗುತ್ತಿದ್ದ. ಸಂಜೀವ, ಯಾರೂ ಇಲ್ಲದ ಹೊತ್ತುನಾಗೆ ಬಂದುದ್ದು ಇವತ್ತೇ ಮೊದಲು ಅಂತ ಯೋಚಿಸುತ್ತ, ನೀರುಳ್ಳಿ ಉತ್ತರುಸುದ ನೀರು ಮಜ್ಜುಗೆಯ ತಂದ ಭಾUರಥಿ ಕೈನ ಸಂಜೀವ ಹಿಡಕೊಂಡು ನಕ್ಕ. ಭಾUರಥಿ ಎಷ್ಟು ಕೊಸರಾಡುದರೂ ಪಟ್ಟುಬಿಡದ ಸಂಜೀವ ‘ನಿಂಗೆ ನಾನೂಂದ್ರೆ ಇಷ್ಟವಿಲ್ಲವಾ?’ ಅಂದವನು, ಉತ್ತರ ಬರದುದ ನೋಡಿ ಹಿಡುತ ಬಿಗಿ ಮಾಡ್ದ.

‘ಅಪ್ಪ ಅವ್ವಂಗೆ ತಿಳುದರೆ ಸಿಗುದಾಕುತಾರೆ. ಇದು ತಪ್ಪು’ ಅಂತ ಭಾUರಥಿ ಎಷ್ಟು ಬೇಡಕಂಡರೂ ಸಂಜೀವ ಹಟ ಬಿಡಲಿಲ್ಲ. ‘ನಿನ್ನ ಮದುವೆಯಾಗೋ ಗಂಡು ನಾನು. ನನ್ನ ಪ್ರೇಮಕ್ಕೆ ಅವಮಾನ ಮಾಡ್ಬೇಡ’ ಅಂತ ನಾಜೂಕು ಮಾತುಗಳಾಡಿದ ಸಂಜೀವ, ಏನು ನಡೀತದೆ ಅನ್ನೋದು ಭಾUರಥಿ ಅರಿವಿಗೆ ಬರೋ ಮೊದುಲೇ ಅವುಳ ಆಕ್ರಮಿಸಿಕೊಂಡ. ಅವುನು ಹೋದ ತುಂಬಾ ಹೊತ್ತಿನವರೆಗೆ ಭಾUರಥಿ ಅಳುತ್ತಿದ್ದಳು. ಸಂಜೀವ ಮತ್ತೆ ಮೊಕ ತೋರುಸಿರಲಿಲ್ಲ. ವ್ಯವಹಾರದ ಮಾತುಗಳೊಂದಿಗೆ ಅವುನಪ್ಪ ಬಂದಿದ್ದ. ಆಮ್ಯಾಲೆ ಗೌಡನೂ ಬಂದಿದ್ದ.

ಅಪ್ಪ ಶಿವುನ ಪಾದ ಸೇರ‍್ಕೊಂಡ ಮ್ಯಾಲೆ ನರ ಮನುಷ್ಯರುಗೆಲ್ಲ ಮುಖವಾಡಗಳವೆ ಅಂಬೊ ಸತ್ಯ ಅರುತ ಕೊಂಡಿದ್ದ ಭಾUರಥಿಗೆ, ತನ್ನ ಲಗ್ನಕ್ಕೂ ಅಪ್ಪನ ಸಾವುನಿಂದ ಬರೊ ದುಡ್ಡುಗೂ, ಅಪ್ಪನ ಸ್ಥಾನದಾಗಿರೊ ಮುಂದೆ ಮಾವನಾಗೊ ಮನುಷ್ಯ ಸಂಬಂಧ ಕಲ್ಪುಸುದಾಗ ಇಷ್ಟೇನಾ ಮನುಷ್ಯ ಅನ್ನುಸಿತ್ತು. ‘ತ್ವಾಟದಾಗೆ ಬಂದು ಇರ್ರಿ’ ಅಂತ ಗೌಡ ಕರೆಯೊ ಹೊತ್ತುಗೆ ಅವುಗಳ ಮನಸನಾಗಿನ ತ್ಯಾವ ಪೂರಾ ಇಂಗಿ ಹೋಗಿತ್ತು. ತ್ವಾಟದ ಮನೆಯಾಗೆ ಗೌಡ ನಡಸುತ್ತಿದ್ದ ರಾಸಲೀಲೆಗಳ ಕುರುತು ಊರಿನ ನಾಲಗೆಗಳಾಗೆ ಹರದಾಡುತ್ತಿದ್ದ ಕಥೆಗಳು ಭಾUರಥಿಗೂ ಗೊತ್ತಿದ್ದವು. ಆದರೆ, ಬೀಗರು, ಗೌಡರು ಏನು ಮಾತಾಡುದರೂ ಅವ್ವ ಮಾತು ಮರತದ್ದು ಭಾU ರಥಿ ದುಃಖಕ್ಕೆ ಕಾರಣ ವಾಗಿತ್ತು.

‘ಅವ್ವ ಮಾತಾಡವ್ವ. ಏನಾದ್ರೂ ಹೇಳವ್ವ. ಅತ್ತಾದ್ರೂ ಹಗುರಾಗವ್ವ’ ಗರ ಬಡುದಂಗೆ ಕುಂತ ಗೌರವ್ವನ ಅಲ್ಲಾಡುಸುತ ಅಲವತು ಕೊಂಡರೂ, ರೆಪ್ಪೆ ಬಂಡಿ ದಂಗೆ ತನ್ನನ್ನೇ ನೋಡುತಿರೊ ಅವ್ವನ ಕಂಡು ಅಳು ಹೆಚ್ಚಾಗಿ ‘ಮಾತಾಡವ್ವ..’ ಅಂತ ಭಾUರಥಿ ಬೇಡತೊಡಗಿದಳು. ಕೆರೆ ಕೋಡಿ ಹೋದದ್ದೇ ಆಗ. ತೆಕ್ಕೆಗೆ ಬಿದ್ದ ಅವ್ವ ಅಕ್ಕ ದೊಡ್ಡ ದನಿಯಾಗೆ ಅಳುತಿರೋದ ನೋಡಿ, ಅಳೂನಾಗೆ ಸಾವಿತ್ರಿಯೂ ಸೇರಿಕೊಂಡಳು.
***
ಮಳ್ಳು ಕಣ ನೆಲಕ್ಕೆ ಬೀಳಾಕೆ ತಾವಿಲ್ಲದಂಗೆ ಜನ ಸೇರಿತ್ತು. ಮೊದಲು ಹದ್ದಂಗೆ ಕಾಣುಸಕಂಡು ಆಮ್ಯಾಲೆ ದೊಡ್ಡದಾಗುತ ಬಂದ ಹೆಲಿಕ್ಯಾಪ್ಟರು ಡಗಡಗ ಸದ್ದು ಮಾಡುತ ಹಸನು ಮಾಡುದ ನೆಲದ ಮ್ಯಾಕೆ ಇಳೀತಿದ್ದಂಗೆ ‘ಮುಖ್ಯಮಂತ್ರಿಗಳಿಗೆ ಜೈ’ ಎಂಬೋ ಜೈಕಾರ ಮುಗಿಲು ಮುಟ್ಟಿತು. ಎರಡೂ ಕೈಗಳನ್ನು ಜೋಡುಸುಕಂಡೆ ಕೆಳಗಿಳಿದ ಮುಖ್ಯಮಂತ್ರಿಗಳಿಗೆ ಮೊದಲು ಹಾರ ಹಾಕುದವನು ಅಣ್ಣಪ್ಪಗೌಡ. ಕಾದುಕಂಡು ನಿಂತಿದ್ದ ಕಾರುನಾಗೆ ಮುಖ್ಯಮಂತ್ರಿಗಳು ಕುತೊಡನೆ, ಹಿಂದಾರು ಮುಂದಾರು ಕಾರುಗಳ ಬಿಟ್ಟುಕೊಂಡು ಕಾರು ಭರ್ರೋ ಅಂತ ಧೂಳೆಬ್ಬಿಸುತ ಓಡತೊಡಗಿತು.

ಸಾಲು ಕಾರುಗಳು ಕಣ್ಣಿಂದ ಮರೆಯಾಗೋವರೆಗೂ ಸುಮ್ಮಗಿದ್ದ ಜನಗಳು, ಕಾರು ಮರೆಯಾದ ಮ್ಯಾಕೆ ಹೆಲಿಕ್ಯಾಪ್ಟರು ಸುತ್ತ ಮುಕರಿಕೊಂಡರು. ಹಣ್ಣು ಹಸುರುನಿಂದ ತುಂಬಿ ಕೊಂಡಿದ್ದ ಹತ್ತಾರು ಮರಗಳಿಗೆ ಮೋಕ್ಷ ಕಾಣುಸಿ, ಸಪಾಟಾಗಿದ್ದ ಬಯಲುನಾಗೆ ನಿಂತುಕೊಂಡಿದ್ದ ಹೆಲಿಕ್ಟಾಪ್ಟರುಗೆ ಕಾವಲು ನಿಂತಿದ್ದ ಪೋಲಿಸಪ್ಪನೋರು ಜನುಗಳು ಹತ್ತುರ ಬರದಂಗೆ ಕೈಲಿ ಹಿಡುದ ಕೋಲುಗಳ ಠಳಾಯಿಸುತ್ತಿದ್ದರೂ, ಕೆಲುವರು ಚಂಗನೆ ಹಾರಿಹೆಲಿಕ್ಯಾಪ್ಟರು ಮುಟ್ಟಿ ಕಣ್ಣು ಮಿಟುಕಿಸೋದರೊಳಗೆ ಗುಂಪಾಗೆ ಸೇರುಕೊಂಡು ರೋಮಾಂಚನ ಪಡುತ್ತಿದ್ದರು. ಇದೇ ಪ್ರಯತ್ನದಾಗೆ ಪೊಲೀಸು ಮಾವಂದಿರ ಬೆತ್ತದ ರುಚಿನೂ ಕಂಡ ಕೆಲವರು ಹೆಲಿಕ್ಯಾಪ್ಟರೂ ಬ್ಯಾಡ, ಪೊಲಿಸ್ನೋರ ಸವಾಸವೂ ಬ್ಯಾಡ ಅಂತ ಊರ ಮುಂದರ ಸ್ಟೇಜು ಕಡೆ ಕಾಲು ಹಾಕುತ್ತಿದ್ದರು. ಕೆಲವರು ಬೇಯುತ್ತಿದ್ದೂಟ, ಪಾಯಸದ ಘಮಕ್ಕೆ ಹೊಳ್ಳೆ ಅಗಲ ಮಾಡುತ ಸೂರ್ಯ ಪರಮಾತ್ಮ ನೆತ್ತಿ ಮೇಲೆ ಬರೋಕೆ ಕಾಯುತ್ತಿದ್ದರು.

ಟೀವಿ ಪೆಟ್ಟಿಗೆಗಳಂಥ ಎರಡು ಪೆಟ್ಟಿಗೆಗಳ ಹೊದುಕೆ ಸರುಸಿದ ಮುಖ್ಯಮಂತ್ರಿಗಳು, ಸ್ವಿಚ್ಚು ಅಮುಕಿದ್ದೇ ತಡ ಚಪ್ಪಾಳೆಗಳು ಒಂದೇ ಸಮ ಬೀಳತೊಡಗಿದವು. ಸ್ಟೇಜುನ ಮ್ಯಾಲಿಂದ ಪುಷ್ಪ ವೃಷ್ಟಿಯಾಗುತ್ತಿದ್ದರೆ, ತಮ್ಮ ಘನಕಾರ್ಯದ ದೇವತೆಗಳೂ ಆಶೀರ್ವದಿಸುತ್ತಾರೆ ಅಂತ ಭಾವುಸದ ಜನುಗಳ ಚಪ್ಪಾಳೆ ಮತ್ತೂ ಜೋರಾಗಿ ಮುಖ್ಯಮಂತ್ರಿಗಲು ಖುಷಿಯಾದರು. ಅದೇ ಖುಷಿಯಾಗೆ ಅವರು ಮೈಕು ಮುಂದೆ ನಿಂತರು.

‘ಇವತ್ತು ನಿಮ್ಮೂರು ಸ್ಕೂಲುನಾಗೆ ಕಂಪ್ಯೂಟರು ಕೇಂದ್ರ ಶುರುವಾಗೊ ಮೂಲಕ, ಮಾಹಿತಿ ತಂತ್ರಜ್ಞಾನದ ಸವಲತ್ತು ಪ್ರತಿಯೊಂದು ಗ್ರಾಮಕ್ಕೂ ತಲುಪಿಸಬೇಕೆಂಬೊ ಸರಕಾರದ ಕನಸು ನನಸಾಗೈತೆ. ರಾಮರಾಜ್ಯದ ಕನಸು ನನಸಾಗೊ ಹಾದಿಯಾಗೆ ಇದೊಂದು ಮೈಲಿಗಲ್ಲು. ನಮ್ಮ ರೈತರುಗೆಲ್ಲ ತಂತ್ರಜ್ಞಾನದ ಫಲ ದಕ್ಕಬೇಕು. ನಾವೆಲ್ಲ ಸೇರಿ ಹೊಸ ಇತಿಹಾಸ ಬರೆಯಬೇಕು.

ಅಣ್ಣಪ್ಪಗೌಡನಂಥ ಯುವ ನಾಯಕರ ಮಾರ್ಗದರ್ಶನದಾಗೆ ರಾಜ್ಯದಾಗೇನೆ ನಿಮ್ಮೂರು ಆದರ್ಶ ಗ್ರಾಮವಾಗಬೇಕು. ನಮ್ಮ ಸರಕಾರ ನಿಮ್ಮ ಬೆಂಬಲಕ್ಕಿದ್ದು, ಯಾವ ರೈತರೂ ಆತ್ಮಹತ್ಯೆ ಮಾಡ್ಕೊಬೇಕಿಲ್ಲ. ಈ ಊರಾಗೆ ಆತ್ಮಹತ್ಯೆ ಮಾಡ್ಕೊಂಡ ಕೊನೆಯ ರೈತ ರಂಗಪ್ಪನೇ ಆಗಬೇಕು. ಅವುನ ಕುಟುಂಬಕ್ಕೆ ನಮ್ಮೆಲ್ಲರ ಸಾಂತ್ವನವಿದೆ..’

ಮಾತು ಮಾತಿಗೂ ಚಪ್ಪಾಳೆ-ಸಿಳ್ಳೆ ಗಿಟ್ಟಿಸಿದ ಮುಖ್ಯಮಂತ್ರಿಗಳ ಭಾಷಣದ ನಂತರ ಮೈಕುತಾಗೆ ಬಂದ ಅಣ್ಣಪ್ಪಗೌಡ, ‘ಆತ್ಮಹತ್ಯೆ ಮಾಡುಕಂಡ ರೈತನ ಕುಟುಂಬಕ್ಕೆ ಮುಖ್ಯಮಂತ್ರಿಗಳ ಸ್ವಹಸ್ತದಿಂದ ಪರಿಹಾರ ವಿತರಣೆ ರಂಗಪ್ಪನ ಹೆಂಡ್ರು ಮಕ್ಕಳು ವೇದಿಕೆಗೆ ಬರಬೇಕು’ ಅಂತ ಘೋಷಿಸಿದ. ಭಾಷಣ ಮಾಡಿ ದಣಿದಿದ್ದ ಮುಖ್ಯಮಂತ್ರಿಗಳು ಬಾಟಲಿ ನೀರು ಕುಡುದು, ಜರಿ ಶಾಲು ಸರಿ ಮಾಡ್ಕೊತಾ ಎದ್ದುನಿಂತರೂ, ಯಾರೂ ಸ್ಟೇಜುಗೆ ಬರಲಿಲ್ಲ. ಇತ್ತ ಸ್ಟೇಜುನ ಪಕ್ಕಕ್ಕೆ ಬಂದ ಅಣ್ಣಪ್ಪಗೌಡ ಅಲ್ಲಿದ್ದ ತಲೆಗಳ ಕೂಡ ಏನೋ ಕೂಗಾಡುದ. ಜನುಗಳು ಓ ಅನ್ನೋಕೆ ಶುರು ಮಾಡಿದ್ದನ್ನು ನೋಡುದ ಮುಖ್ಯಮಂತ್ರಿಗಳು, ಪರಿಹಾರದ ಚೆಕ್ಕನ್ನು ಅಣ್ಣಪ್ಪಗೌಡನ ಕೈಗೆ ಕೊಟ್ಟು ಅದನ್ನು ರಂಗಪ್ಪನ ಕುಟುಂಬದೋರಿಗ ತಲುಪಿಸುವಂತೆ ಹೇಳಿ ತಮ್ಮ ಸಿಂಹಾಸನದಾಗೆ ಮತ್ತೆ ವಿರಾಜಮಾನವಾದರು.

ಇದೇ ಹೊತ್ತುನಾಗೆ ಶ್ರೀಗಂಧ, ರೇಷುಮೆ, ಮಲ್ಲಿಗೆ ಹಾರಗಳ ಹಿಡುಕೊಂಡ ಏಳೆಂಟು ಮಂದಿಯ ಗುಂಪು ಸ್ಟೇಜುಗೆ ಬಂದು, ಹಾರದೊಂದಿಗೆ ಮನವಿ ಪತ್ರವೊಂದನ್ನು ಮುಖ್ಯಮಂತ್ರಿಗಳಿಗೆ ಅರ್ಪಿಸಿತು. ಮೈಕು ಹತ್ತುರಕ್ಕೆ ಬಂದ ಗುಂಪುನ ಮುಂದಾಳು, ‘ಜನಗಳಿಗಾಗಿ ಪ್ರಾಣಾನೆ ಕೊಡೋದಕ್ಕೆ ತಯಾರಾಗಿರೊ ಕಲಿಯುಗದ ದಾನರ ಶೂರ ಕರ್ಣನೂ, ಕ್ಷೇತ್ರದ ಶಾಸಕರೂ ಆದ ಅಣ್ಣಪ್ಪಗೌಡರುಗೆ ಮಂತ್ರಿಸ್ಥಾನ ಕೊಡಬೇಕುಂತ ಸಾವುರಾರು ಜನರ ಪರವಾಗಿ ಈ ನಿಯೋಗ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತದೆ. ನಮ್ಮ ಮನವಿಯ ಈಡೇರುಸೊ ಮೂಲಕ, ಈ ಭಾಗದ ಜನುಗಳ ಭಾವನೆಗೆ ಮುಖ್ಯಮಂತ್ರಿಗಳು ಗೌರವ ಕೊಡಬೇಕು’ ಅಂತ ಹೇಳಿ, ‘ಅಣ್ಣಪ್ಪಗೌಡರಿಗೆ ಜೈ’ ಮುಖ್ಯಮಂತ್ರಿಗಳಿಗೆ ಜೈ, ಎಂದು ಜೈಕಾರ ಕೂಗಿದ. ತಕ್ಷಣವೇ ಸಾವುರಾರು ಜೈಕಾರಗಳು ಒಟ್ಟಿಗೆ ದನಿಯಾಗತೊಡಗಿ, ಚಪ್ಪಾಳೆ-ಶಿಳ್ಳೆಗಳೂ ಜೈಕಾರಗಳೊಂದಿಗೆ ಕಲಿತುಕೊಂಡವು. ಮತ್ತೆ ಎರಡೂ ಕೈ ಎತ್ತಿಕೊಂಡು ಎದ್ದುನಿಂತ ಮುಖ್ಯಮಂತ್ರಿಗಳು, ಜನುಗಳ ಸದ್ದಡಗಿದ ನಂತರ, ‘ಈ ಬಾರಿಯ ಸಂಪುಟ ವಿಸ್ತರಣೆ ಸಂದರ್ಭದಾಗೆ ಗೌಡರ ಹೆಸರುನ ಪರಿಶೀಲಿಸುವುದಾಗಿ’ ಭರವಸೆ ನೀಡುದರು. ಮತ್ತೆ ಚಪ್ಪಾಳೆ.

ತೆಪ್ಪೋತ್ಸವಕ್ಕೆ ಶುಭ ಹಾರೈಸಿದ ಮುಖ್ಯಮಂತ್ರಿಗಳು ಹೆಲಿಕ್ಯಾಪ್ಟರುನಾಗೆ ಹಾರಿ ಹೋದರು. ಹೆಲಿಕ್ಯಾಪ್ಟರು ಮೇಲೆ ಹಾರುದಂಗೆ ಏಳುತ್ತಿದ್ದ ಧೂಳು ಮೋಡವ ಕೆಳಗಿದ್ದ ಜನ ಅಚ್ಚರಿಯಿಂದ ನೋಡುತ್ತಿದ್ದರು.
***
ಪುಷ್ಟ ವೃಷ್ಟಿಯಂಗೆ ಮಲೆ ಸಣ್ಣದಾಗಿ ಹನೀತಿತ್ತು.

ಕಣ್ಣುಗಳ ಪಾಪ ತೊಳೆಯುವಷ್ಟು ಚಲುವಾಗಿದ್ದ ಊರದೇವರುನ ಹೊತ್ತಿದ್ದ ತೆಪ್ಪಕ್ಕೆ ಪೂಜೆ ಸಲ್ಲಿಸಿದ ಅಣ್ಣಪ್ಪಗೌಡರು, ಸಂಜೆ ಸೂರ್ಯನ ಕೆಂಪುನಾಗೆ ನಿಗನಿಗಿ ಅಂತಿದ್ದ ಗಂಗವ್ವ ಮತಾಯೀಗೂ ಸಪತ್ನೀ ಕರಾಗಿ ಪೂಜೆ ಸಲ್ಲುಸಿ ಬಾಗಿನ ಒಪ್ಪುಸುದರು. ತೆಪ್ಪ ಕೆರೆಯಾಗೆ ಹೋಗಲು ಶುರು ಮಾಡಿದಂತೆ, ಅದರ ಹಿಂದೆ ಹತ್ತಾರು ದೋಣಿಗಳಾಗೆ ನೂರಾರು ಮಂದಿ ಕೆರೆಗಿಳಿದರು. ಕೆಲವರು ತೆಪ್ಪಕ್ಕಿಂತ ಮುಂದಾಗಿ ಹೋದರು. ದೇವಲೋಕದಿಂದ ಇಳದು ಬಂದೈತೇ ನೋ ಎಂಬಂಗೆ ದೀಪಗಳ ಬೆಳಕುನಾಗೆ ಜಗಮಗಿ ಸುತಿರೊ ತೆಪ್ಪವ ನೋಡಿ, ತೆಪ್ಪದ ಮಧ್ಯದಾಗೆ ವಿರಾಜ ಮಾನನಾಗಿರೊ ಊರ ದೇವುರ ಕಣ್ತುಂಬಿಸಿಕೊಂಡು ಕಟ್ಟೆಯ ಮ್ಯಾಲಿನ ಜನ ತಮ್ಮ ಪಾಪಿ ಜನುಮ ಪಾವನವಾಯ್ತು ಅಂತ ರೋಮಾಂಚನ ಪಟ್ಟುಕೋತಿ ದ್ದರು. ಊರ ದೇವರು ಜೊತೆಯಾಗೆ ಅಣ್ಣಪ್ಪಗೌಡನ ಸಮೇತ ಏಳೆಂಟು ಜನುಗಳ ಹೊತ್ತ ತೆಪ್ಪ, ನೀರುನ ಸೀಳುಕಂಡು ಮುಂದೆ ಮುಂದೆ ಹೋದಂಗೆ, ತೆಪ್ಪದಾಗಿ ದ್ದವರು ದೀಪಗಳನ್ನು ನೀರಾಗೆ ತೇಲಿಬಿಡ ತೊಡಗಿ ದೀವಳಿಗೆ ಸಂಭ್ರಮ ಸೃಷ್ಟಿಸತೊಡಗಿದರು. ಸಣ್ಣ ಸಣ್ಣ ದೋಣಿಗಳಾಗೆ ತೆಪ್ಪವ ಬೆನ್ನಟ್ಟಿದವರೂ ದೀಪಗಳ ತೇಲಿಬಿಡೊ ಸಂಭ್ರಮದಾಗೆ ಕೂಡಿಕೊಂಡು ನರಕಾಸು ರನ ಭೂಮಿಗೆ ಕರೆಯತೊಡಗಿದರು.

ಎಣ್ಣೆ ತುಂಬುದ ದೀಪವ ನಾಜೂಕಾಗಿ ನೀರಿಗೆ ಬಿಡಲು ಹೊರಟ ಅಣ್ಣಪ್ಪಗೌಡನ ಕೈಗೆ ಏನೋ ತಗುಲಿದಂಗನ್ನಿಸ್ತು. ದೀಪವ ಹರಿಬಿಟ್ಟು ಮೇಲೆತ್ತಿ ಕೊಂಡ ಅಣ್ಣಪ್ಪಗೌಡನ ಕೈನಾಗೆ ಬಟ್ಟೆಯೊಂದು ಸುತ್ತಿಕೊಂಡಿತ್ತು. ಕೈಗೆ ಸುತ್ತುಕಂಡ ದಾವಣಿ ಬಟ್ಟೆಯ ನೋಡುತ ನೋಡುತ, ಅದರೊಳಗಿನಿಂದ ಹೆಣ್ಣು ಮಗಳೊಬ್ಬಳು ಎದ್ದು ಬಂದಂತೆನಿಸಿ ಅಣ್ಣಪ್ಪಗೌಡ ನಡುಗತೊಡಗಿದ. ಅವುನ ಕಣ್ಣುಗಳು ನೀರುನ ಜಾಲಿಸತೊಡಗಿದವು.

ತನಗೆ ಸಲ್ಲಬೇಕಾದ್ದು ಸಂದವಳಂತೆ ಯಾವತ್ತೂ ಇಲ್ಲದ ನಿರುಮ್ಮಳತೆಯಿಂದ ಗಂಗವ್ವ ಕಲಕಲ ಅಂತಿದ್ದಳು.