Tuesday, December 8, 2009

ಒಲವಿನ ಮಾಲೆಗೆ ನನ್ನೆರಡು ಮಲ್ಲಿಗೆ

ರಾಜೀವ ನಾರಾಯಣ ನಾಯಕ

ಇದನ್ನೆಲ್ಲ ಎಲ್ಲಿಂದ ನೆನೆಯಲಿ? ಮನೆ ಮುಂದಿನ ಗುಲ್ ಮೊಹರ್ ವರ್ಷದಿಂದ ಹೃದಯದಲ್ಲಿಟ್ಟು ಕೊಂಡಿದ್ದ ಹೂವನ್ನು ನೀಲಾಕಾಶದತ್ತ ಚಿಮ್ಮಿಸ ತೊಡಗಿದ್ದೆ ಪ್ರಾರಂಭವಿರಬಹುದೇ? ಅಥವಾ ಹಳದಿ ಬಣ್ಣದ ಕೊರಳ ಸುತ್ತ ಕಂದು ಪಟ್ಟಿಯ ಪುಟ್ಟ ಹಕ್ಕಿ ಗುಲ್‌ಮೊಹರ್‌ನಿಂದ ಬಿಟ್ಟ ಬಾಣದಂತೆ ಪಕ್ಕದ ಹೂದೋಟಕ್ಕೆ ಹಾರದಿದ್ದರೆ ಅಲ್ಲಿ ಗುಲಾಬಿ ಗಿಡಗಳಿಗೆಲ್ಲ ನೀರುಣಿಸುತ್ತ ನಿಂತಿರುತ್ತಿದ್ದ ನಿನ್ನನ್ನು ದಿನಾ ಗಮನಿಸುವ ಪ್ರಸಂಗ ಬರುತ್ತಿತ್ತೆ? ಯಾವು ದೋ ಧ್ಯಾನದಲ್ಲಿದ್ದಂತೆ ಕಾಣುತ್ತಿದ್ದ, ಸದಾ ಏನಾ ದರೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಿದ್ದ ನೀನೂ ಹೆತ್ತವರಿಂದ ನೂರಾರು ಮೈಲಿ ದೂರದಲ್ಲಿದ್ದ ನನ್ನ ಒಬ್ಬಂಟಿತನದ ಮನಕ್ಕೆ ತುಸು ಮುದ ನೀಡುತ್ತಿದ್ದ ಗುಲ್ ಮೊಹರ್ ಮತ್ತು ಬಣ್ಣದ ಹಕ್ಕಿಯ ಜತೆ ಸೇರಿಬಿಟ್ಟೆ ಸ್ವಾತಿ.

ಗುಲ್‌ಮೊಹರೊ ಗುಬ್ಬಚ್ಚಿಯೊ ಆ ಕ್ಷಣವನ್ನು ಮಾತ್ರ ಹೇಗೆ ಮರೆಯಲು ಸಾಧ್ಯ? ಬೆಳಗ್ಗೆ ಸ್ನಾನ ಮುಗಿಸಿ ತಲೆ ಒರೆಸುತ್ತ ಬಾಗಿಲಿಗೆ ಬಂದರೆ ಸೂರ್ಯನ ಎಳೆಯ ಕಿರಣಗಳು ಎಲ್ಲೆಡೆ ಬೀರಿವೆ. ಮುಂಜಾನೆಯ ಮಂಜಿನ್ನೂ ಪೂರ್ತಿ ಕರಗಿಲ್ಲ. ಪಕ್ಕದ ಮನೆಯಿಂದ ನಿತ್ಯದಂತೆ ಮಂತ್ರ ಪಠನ ಕೇಳಿಸುತ್ತಿದೆ. ಆಗಷ್ಟೇ ಮಿಂದು ಬಂದಂತಿದ್ದ ನೀನು ಹೂಗಿಡಗಳಿ ಗೆಲ್ಲ ನೀರೆರೆಯುತ್ತಿದ್ದೆ. ಭುಜದ ತುಂಬ ಹರಡಿ ಕೊಂಡ ದಟ್ಟನೆಯ ಕಪ್ಪು ಕೂದಲು. ಹೊಂಬಣ್ಣದ ಸೂರ್ಯ ಕಿರಣಗಳಲ್ಲಿ ಇಡೀ ದೃಶ್ಯವೇ ಮನೋಹರವಾಗಿದೆ. ಅಪರೂಪಕ್ಕೆ ಈ ಕಡೆ ಹಾದು ಬಂದ ಆ ನೋಟ ನನ್ನೆದೆಯಲ್ಲಿ ಮಿಂಚು ಮೂಡಿ ಸಿತು. ಮುಗುಳುನಗೆ ತುಂಬಿದ ಮೊಗ. ನೀನು ನನ್ನೊಡನೆಯೆ ನಕ್ಕಿದ್ದು? ನಾನು ಕನಸು ಕಾಣುತ್ತಿ ರುವೆನೆ? ಎಂಥ ಮೋಹಕ ನಗು ಅದು! ಆ ಮುಗುಳ್ನಗುವೇ ಇಳಿಯಿತೆ ನನ್ನಲಿ ಬೀಜವಾಗಿ?
ಆ ದಿನವಿಡೀ ಮುಗುಳ್ನಗುವಿನದೇ ಮೆಲುಕು. ವಿಚಿತ್ರ ಖುಷಿಯಲ್ಲಿದ್ದ ನನಗೆ ಅದನ್ನು ನಾನು ಕೆಲಸ ಮಾಡುತ್ತಿದ್ದ ಲ್ಯಾಬ್‌ನಲ್ಲಿ ಇತರರಿಗೆ ತಿಳಿಯದಂತೆ ನಿಯಂತ್ರಿಸಬೇಕಾದರೆ ಬಹಳ ಶ್ರಮ ಪಡಬೇಕಾ ಯಿತು. ಅಂತೂ ಕೊಂಚ ತಡವಾಗಿಯೇ ಏಳುತ್ತಿದ್ದ ನನಗೆ ನಸುಕಿನಲ್ಲಿಯೇ ನೆನಪಾಗತೊಡಗಿತು. ನಾನೂ ಮನೆ ಮುಂದೆ ಪುಟ್ಟ ತೋಟ ಬೆಳೆಸುವ ಬಗ್ಗೆ ಯೋಚಿಸಿದೆ. ಎಲ್ಲಿಂದಲೋ ಕೆತ್ತನೆಯಿದ್ದ ಕುಂಡವನ್ನು ತಂದು ಅದರಲ್ಲಿ ಮಣ್ಣು ತುಂಬಿ ಗುಲಾಬಿ ಕುಡಿಯೊಂದನ್ನು ಊರಿ ಮನೆ ಮುಂದೆ ಇಟ್ಟೆ. ದಿನಾ ನೀರುಣಿಸುತ್ತ ಅದು ಚಿಗುರೊಡೆವ ಪರಿಗೆ ಪುಳಕಗೊಳ್ಳ ತೊಡಗಿದೆ. ಹೀಗೆ ಅದೆಷ್ಟೋ ದಿನಗಳು.

ಅಂದು ಯಾವುದೋ ಹಬ್ಬವಾದ್ದರಿಂದ ನಮಗೆ ರಜೆ ಇತ್ತು. ನೀನು ಸಂಭ್ರಮದಿಂದ ಇದ್ದೆ. ಕಡು ನೀಲಿ ಬಣ್ಣದ ಡ್ರೆಸ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದೆ. ಹಾಗೆಂದು ನಿನಗೆ ಕೈ ಮಾಡಿದೆ. ಖುಷಿಯಾಗಿ ನಕ್ಕೆ ನೀನು. ನಾನು ಬೆರಳುಗಳನ್ನು ಹೆಣೆದು ಕಿಂಡಿ ಮಾಡಿ ಕಣ್ಣ ಹತ್ತಿರ ಇಟ್ಟು ಫೋಟೊ ತೆಗೆಯುವವನಂತೆ ನಟಿಸಿದೆ. ನೀನು ನಡೆದಾಡುತ್ತಿದ್ದೆಯೋ ನೃತ್ಯವಾ ಡುತ್ತಿದ್ದೆಯೋ ನನಗೆ ತಿಳಿಯದಾಯಿತು. ನಿನ್ನನ್ನು ನೋಡುತ್ತಿರುವುದೇ ನನಗೆ ಹಬ್ಬವಾಯಿತು.

ಹಬ್ಬದ ನಿಮಿತ್ತ ಬಂದ ನಿನ್ನ ಅಕ್ಕನ ಮಗನನ್ನು ತೋರಿಸಿ ಅವನ ಕೈಯಲ್ಲಿ ಏನೋ ಕೊಡುತ್ತ ಅದನ್ನು ನಾನು ದರ್ಗಾದ ಹಿಂದೆ ಹೋಗಿ ಪಡೆಯಬೇಕೆಂದು ನೀನು ಸನ್ನೆ ಮಾಡಿದೆ. ನಾವಿಷ್ಟರಲ್ಲೇ ಸನ್ನೆಗಳ ಮೂಲಕ ಸಂಭಾಷಿಸುವುದನ್ನು ಕಲಿತಿದ್ದೆವು. ಮನೆಯವರ, ಅಕ್ಕಪಕ್ಕದವರ ಕಣ್ತಪ್ಪಿಸಿ ಹೀಗೆ ಮಾಡುವುದರಲ್ಲಿ ನೀನು ತುಂಬಾ ಜಾಣೆ ಸ್ವಾತಿ.

ಹುಡುಗ ನನಗಾಗಿ ದರ್ಗಾದ ಹಿಂದೆ ಕಾದಿದ್ದ. ನನ್ನ ಕೈಯಲ್ಲಿ ಪುಟ್ಟ ಪೊಟ್ಟಣವೊಂದನ್ನು ಇಟ್ಟು ಓಡಿ ಹೋದ. ನೋಡಿದರೆ ಏನೋ ಸಿಹಿ ತಿಂಡಿ, ಜತೆಯಲ್ಲಿ ಒಂದು ಪತ್ರ! ನನಗೊ ರೋಮಾಂಚನ. ನನ್ನ ಜೀವಮಾನದಲ್ಲೇ ಪಡೆದ ಇಂಥ ಪ್ರಥಮ ಪತ್ರ! ಕೈ ಬರಹ ಅಷ್ಟೇನೋ ಚೆನ್ನಾಗಿರಲಿಲ್ಲ. ನಿನ್ನ ಅಂಕುಡೊಂಕು ಅಕ್ಷರಗಳೆ ನನ್ನ ಹೃದಯದ ತಂತಿ ಮೀಟಿ ಸಂUತ ನುಡಿಸತೊಡಗಿದವು. ಓದಿದೆ. ಪುನಃ ಪುನಃ ಓದಿದೆ. ನನ್ನೆದೆಯ ಭಾವನೆಗಳಿಗೂ ಶಬ್ದ ರೂಪು ಕೊಡಲು ಅನುವಾದೆ. ಪ್ರೇಮದ ದಾರಿಗೆ ಎಷ್ಟೊಂದು ಮೆಟ್ಟಿಲುಗಳು!
ಮತ್ತೆ ನಿನ್ನ ಅಕ್ಕನ ಮಗ, ಅವನ ಹೆಸರು ಸಮರ್ಥ ಅಂತೆ, ಭೆಟ್ಟಿಯಾದ. ಈ ಸಲ ಅವನನ್ನು ತುಸು ದೂರ ಕರೆದೊಯ್ದು ಐಸ್‌ಕ್ರೀಮ್ ಕೊಡಿಸಿದೆ. ನಿನ್ನ ಬಗ್ಗೆ ಕೇಳಿದೆ. ಸ್ವಾತಿ ಯಾವಾಗಲೂ ನನ್ನನ್ನೇ ನೆನೆಯುತ್ತಾಳೆಂದು ಹೇಳಿದ. ‘ಎಷ್ಟು ಚೆನ್ನಾಗಿದ್ದಾನಲ್ಲ’ ಎಂದು ನನ್ನನ್ನು ತೋರಿಸಿ ಕೇಳುತ್ತೀಯಂತೆ. ನನ್ನ ರೂಪಿನ ಬಗ್ಗೆ ಕಂಡಾಪಟ್ಟೆ ಕೀಳರಿಮೆ ಇದ್ದ ನನಗೆ ನೀನು ಹೀಗನ್ನುವುದು ಕೇಳಿ ಖುಷಿಯೋ ಸಂಶಯವೋ ತಿಳಿಯದ ಭಾವನೆಗಳು. ಆ ದಿನವಿಡೀ ಕನ್ನಡಿಯೆದುರು ನಾನು ಚೆಲುವನೆಂದು ನಂಬಿಸಿಕೊಳ್ಳಲು ಪ್ರಯತ್ನಿಸಿದ್ದೇ ಪ್ರಯತ್ನಿಸಿದ್ದು!

ನಿನ್ನನ್ನು ಹತ್ತಿರದಿಂದ ಕಾಣಬೇಕು, ನಿನ್ನೊಡನೆ ಮನಬಿಚ್ಚಿ ಮಾತಾಡಬೇಕು ಎಂದು ಎಷ್ಟೋ ದಿನಗಳಿಂದ ಕಾತರಿಸುತ್ತಿದ್ದೆ. ಆ ದಿನವೂ ಬಂತು. ದರ್ಗಾದ ಹಿಂದಿನ ಗುಡ್ಡದ ಮರುಕಲಲ್ಲಿ ಜನ ರ‍್ಯಾರೂ ಅಷ್ಟಾಗಿ ಇರುತ್ತಿರಲಿಲ್ಲ. ನಿನ್ನನ್ನು ಅಲ್ಲಿಗೆ ಬರಲು ಒಪ್ಪಿಸಿದೆ. ನಾನೂ ಲ್ಯಾಬ್‌ನಲ್ಲಿ ಏನೋ ಹೇಳಿ ರಜೆ ಪಡೆದೆ. ಕಾಲುದಾರಿಗುಂಟ ನಡೆಯುತ್ತ ಗುಡ್ಡದ ತುದಿ ತಲುಪಿದೆ. ಇನ್ನೊಂದು ಮರುಕಲಲ್ಲಿ ಸಮುದ್ರದ ಮೊರೆತ. ಮೋಡವಿಲ್ಲದ ನೀಲಾಕಾಶ. ನನಗೆ ಸಂಕೋಚ, ಭಯ, ಉನ್ಮಾದ ಎಲ್ಲ ಕಲಸಿ ಕೊಂಡ ಸ್ಥಿತಿ. ಎದೆ ಜೋರಾಗಿ ಬಡಿದುಕೊಳ್ಳುತ್ತಿದೆ. ಇಡೀ ದೇಹವೇ ಜ್ವರ ಬಂದಂತಾಗಿತ್ತು. ಬಹುಶಃ ನಿನ್ನ ಸ್ಥಿತಿಯೂ ಹೀಗೆ ಆಗಿರಬೇಕು. ನಿನ್ನ ಹಣೆಯ ಮೇಲೆಲ್ಲ ಬೆವರ ಹನಿಗಳ ಸಾಲು. ನಿನ್ನನ್ನು ಅಷ್ಟು ಹತ್ತಿರದಿಂದ ಕಂಡದ್ದು ಅದೇ ಮೊದಲ ಸಲ. ಸುಂದರ ತುಟಿಗಳು. ಹೊಳಪಿನ ಕಣ್ಣುಗಳು. ಮಾತು ಯಾರು ಹೇಗೆ ಪ್ರಾರಂಭಿಸಬೇಕೆಂದು ತಿಳಿಯದಾ ಯಿತು. ನಾನು ಏನೋ ಕೇಳಿದೆ. ನೀನು ಏನೋ ಅಂದೆ. ಪ್ರಯತ್ನಿಸಿ ಪ್ರಯತ್ನಿಸಿ ನಿನ್ನ ಕೋಮಲ ಬೆರಳುಗಳನ್ನು ನನ್ನವುಗಳಲ್ಲಿ ಹೆಣೆದುಕೊಂಡೆ. ಇಳಿ ಬಿಸಿಲ ಕಿರಣಗಳಲ್ಲಿ ನೀನು ಮಂದವಾಗಿ ಉರಿ ಯುವ ದೀಪದಂತೆ ಕಾಣುತ್ತಿದ್ದೆ. ಬಹುಶ ನಿನ್ನನ್ನು ಕಣ್ಣಲ್ಲೇ ಕುಡಿಯುವವನಂತೆ ನೋಡುತ್ತಿದ್ದೆ. ನೀನು ನನ್ನಿಂದ ಬಿಡಿಸಿಕೊಂಡು ‘ಹೊತ್ತಾಯ್ತು’ ಎಂದು ಎದ್ದು ನಿಂತೆ. ‘ಇಲ್ಲ, ಇರು’ ಎಂದರೂ ನೀನು ಓಡಿಯೇ ಬಿಟ್ಟೆ, ನನ್ನಲ್ಲಿ ಬೆಂಕಿಯನ್ನು ಹೊತ್ತಿಸಿ. ತಿರುವಲ್ಲಿ ನಿಂತು ಕೈ ಬೀಸಿ ಮಾಯವಾದೆ. ನಾನೋ ಕಾಲೆಳೆಯುತ್ತ ಇಳಿದು ಬಂದೆ.

ಇಂಥ ಸ್ನೇಹಕ್ಕಾಗಿ ಎಷ್ಟು ವರ್ಷಗಳಿಂದ ಕಾದಿದ್ದೆ! ಹೃದಯದಲ್ಲಿ ಮಡುಗಟ್ಟಿದ ಹರೆಯದ ಭಾವನೆಗಳು ಹರಿವ ದಿಕ್ಕು ಕಾಣದೆ ಏನೋ ಕಾತರ. ಏನೋ ಕಳಚಿಕೊಂಡಂತೆ. ಕಾಲೇಜಿನಲ್ಲಿ ಕೋಗಿಲೆ ಕಂಠದ ಲಾಲಿತ್ಯಳನ್ನು ಮನದಲ್ಲಿ ಆರಾಧಿಸುತ್ತ ಅವಳ ಅಗಲ ಕಣ್ಣುಗಳಲ್ಲಿ ಪ್ರೀತಿಯನ್ನರಸುತ್ತ ಸವೆದ ದಿನಗಳು. ಮನದಾಸೆಯನ್ನು ಮಾತಾಗಿಸಬೇಕೆಂದರೆ ಎದುರು ಬಂದಾಗ ಗಂಟಲ ಪಸೆಯೇ ಆರಿ ಹೋದಂತೆ ಕೈ ಕಾಲುಗಳಲ್ಲಿ ನಡುಕ ಶುರವಾದಂತೆ ಇತ್ಯಾದಿ.ಆದರೆ ಲಾಲಿತ್ಯಳಾಗಲಿ, ಮೋಹಕ ಕೆನ್ನೆಗಳ ಸಿಂಚನಳಾಗಲಿ ಅಥವಾ ಮಾದಕ ನಗುವಿನ ಸುಮನಳಾಗಲಿ ಯಾರೂ ನಿನ್ನಷ್ಟು ಆಳಕ್ಕೆ ನನ್ನೊಳಗೆ ಇಳಿಯಲಿಲ್ಲ ಅನಿಸುತ್ತದೆ. ಸ್ವಾತಿಯಲ್ಲಿ ನನಗೆ ಪ್ರೇಮವೇ? ಅವಳೊಡನೆ ಏನೀ ಅನು ಬಂಧ? ಅಥವಾ ಇವೆಲ್ಲ ಹುಚ್ಚು ಭಾವನೆಗಳೇ? ಛೇ ಇವೆಲ್ಲ ತಾಪತ್ರಯ ಬೇಡ. ಮನೆಯಿಂದ ನೂರಾರು ಮೈಲಿ ದೂರದಲ್ಲಿದ್ದೇನೆ. ಏನಾದರೂ ಹೆಚ್ಚು ಕಮ್ಮಿ ಆದರೆ ಕೇಳುವವರಿಲ್ಲ. ಸ್ವಾತಿಯ ಅಪ್ಪ ಬೇರೆ ಕಠೋರವಾಗಿ ಕಾಣುತ್ತಿದ್ದಾನೆ. ಅವನಿಗೇನಾ ದರೂ ಹೀಗೆ ಎಂದು ಗೊತ್ತಾದರೆ ಕಥೆ ಮುಗಿದಂತೆಯೇ. ಇನ್ನು ಇದೆಲ್ಲ ಸಾಕು. ಆ ಕಡೆ ಮತ್ತೆ ನೋಡಲೇಬಾರದು. ಸ್ವಾತಿಗೂ ಹೇಳಿಬಿಡುತ್ತೇನೆ ಎಂದು ಎಷ್ಟು ಸಲ ನಿರ್ಧಾರ ಕೈಗೊಂಡೆನೋ. ಅದೆಲ್ಲ ನಿನ್ನನ್ನು ಕಂಡ ಗಳಿಗೆಯಲ್ಲಿ ಎಲ್ಲೋ ತೂರಿ ಹೋಗು ತ್ತಿದ್ದವು. ಮತ್ತೆ ಯಥಾಪ್ರಕಾರ ಮನಸ್ಸು ಅತ್ತ ಒಲಿಯುತ್ತಿತ್ತು.

ರಸ್ತೆ ತಿರುವಲ್ಲಿ ಮನೆಯಿಂದ ನನ್ನದೇ ವಯಸ್ಸಿನ ವಿಕಾಸ್ ಆಗಾಗ ನನ್ನಲ್ಲಿಗೆ ಬರು ತ್ತಿದ್ದ. ಮಂಗಳೂರ ಕಡೆಯ ಅವರ ಕುಟುಂಬ ಸಾಕಷ್ಟು ವರ್ಷದಿಂದಲೇ ಅಲ್ಲಿ ತೆಂದು ಕಾಣುತ್ತದೆ. ಸುತ್ತಮುತ್ತಲಿನವರೆಲ್ಲ ಬಹಳ ಪರಿಚಯ. ನಿನ್ನೊಡನೆ ವಿಕಾಸ್ ಒಂದೆರಡು ಬಾರಿ ಮಾತಾಡುತ್ತಿದ್ದುದನ್ನು ಎಂದೋ ನೋಡಿದ್ದೆ. ನನ್ನ ಪರಿಚಯವಾ ದೊಡನೆ ಸಮಯ ಕಳೆಯಲು ಬರುತ್ತಿದ್ದ. ಬಂದಾಗಲೆಲ್ಲ ಗೋಡೆಗೆ ತೂಗು ಹಾಕಿರು ತ್ತಿದ್ದ ಗಿಟಾರ್ ಎತ್ತಿಕೊಂಡು ಸಂUತ ನುಡಿಸುವವನಂತೆ ಫೋಸ್ ಕೊಡುತ್ತ ಆಗಾಗ ನಿಮ್ಮ ಮನೆಯತ್ತ ಕಣ್ಣು ಹಾಯಿಸುತ್ತ ಹೀರೋ ಆಗಲು ಪ್ರಯತ್ನಿಸುತ್ತಿದ್ದುದು ನನಗೆ ಕೋಪವನ್ನು ತರಿಸುತ್ತಿತ್ತು. ಸೌಜನ್ಯಕ್ಕಾಗಿ ಅದನ್ನು ಸಹಿಸಿದ್ದೆ.

ಒಮ್ಮೆ ಈತ ಇದ್ದಾಗ ನೀನು ಕಿಟಕಿಯಲ್ಲಿ ಮಿಂಚಿ ಮಾಯವಾದೆ. ನಿನ್ನನ್ನು ತೋರಿಸುತ್ತ ಆತ ‘ಅವ ಳುಂಟಲ್ಲ, ನನ್ನ ಕಂಡ್ರೆ ಪ್ರಾಣ ಬಿಡ್ತಾಳೆ’ ಎಂದ. ನನಗೆ ಶಾಕ್ ಆಯಿತು. ಸುಧಾರಿಸಿಕೊಳ್ಳುತ್ತಿರು ವಾಗಲೇ ‘ಅವಳಪ್ಪ ಉಂಟಲ್ಲ. ಅದೊಂದು ಮಾರಾಯ ಮಂಡೆಬಿಸಿ. ಅದು ಇಲ್ಲಾಂದ್ರೆ ಇಷ್ಟೊತ್ತಿಗೆ..’ ಎಂದು ಕಣ್ಣು ಪಡಚಿದ. ನಾನು ಬೆವರತೊಡಗಿದ್ದೆ. ಬಾಯಿ ಒಣಗಿಹೋಗಿತ್ತು. ನೀನು ಅವನೊಡನೆ ಮಾತಾಡುತ್ತ ನಿಂತಿದ್ದ ದೃಶ್ಯಗಳು ನೆನಪಾಗಿ ಅಲ್ಲಿ ಹೊಸ ಅರ್ಥಗಳೇ ಕಾಣತೊಡಗಿದವು. ಹಾಗಾದರೆ ನಾನು ಸ್ವಾತಿಯ ಬಗ್ಗೆ ಕನಸಿದ್ದು ಮೂರ್ಖತನವೇ? ಸ್ವಾತಿ ಎಂಥ ಹೆಣ್ಣು? ನನ್ನನ್ನು ಗಾಳಕ್ಕೆ ಸಿಲುಕಿಸಿ ಆಟ ಆಡುತ್ತಿರು ವಳೆ? ಹೃದಯ ಯಾರಿಗೊ ಕೊಟ್ಟು ನನ್ನಲಿ ನಾಟ ಕವೆ? ಥತ್! ಈ ಹುಡುಗಿಯರನ್ನೇ ನಂಬಬಾರದು. ಮತ್ತೆ ನಿನ್ನತ್ತ ನೋಡಿದರೆ ಹೇಳು ಸ್ವಾತಿ!
‘ಯಾಕೆ, ಮೈಯಲ್ಲಿ ಸೌಖ್ಯವಿಲ್ಲವೆ?’ ಎಂದು ವಿಕಾಸ್ ಕೇಳಿದ. ‘ಹಾಗೇನಿಲ್ಲ, ಸ್ವಲ್ಪ ತಲೆನೋವು’ ಎಂದು ನಗಲು ಪ್ರಯತ್ನಿಸಿದೆ. ನಗಲಾಗಲಿಲ್ಲ. ನನ್ನ ನಿರಾಸಕ್ತಿ ನೋಡಿ ಎದ್ದು ಹೋದ. ಆತ ಹೋದರೆ ಸಾಕಾಯಿತು.

ಬಾಗಿಲು ಹಾಕಿ ಹೊರ ಹೋಗುವಾಗ ನೀನು ನಗುತ್ತ ನಿಂತಿರುವುದು ಕಂಡಿತು. ನಿನ್ನ ನಗು ಕೂಡ ಕಪಟವೆನಿಸಿ ಮುಖ ತಿರುಗಿಸಿ ನಡೆದೆ, ಎಲ್ಲಿಗೆಂದು ಗೊತ್ತಿಲ್ಲದೆ.

ಬಸ್‌ಸ್ಟಾಪಿಗೆ ಬಂದಾಗ ಯಾವುದೋ ಬಸ್ಸು ಹೊರಡುವುದರಲ್ಲಿತ್ತು. ಬಸ್ ಹತ್ತಿ ಮಾರುತಿ ಮಂದಿರ ಸ್ಟಾಪ್‌ನಲ್ಲಿಳಿದು ಸಮುದ್ರ ತೀರದತ್ತ ನಡೆಯತೊಡಗಿದೆ. ಮರಳ ಮೇಲೆ ಅಲ್ಲಷ್ಟು ಇಲ್ಲಷ್ಟು ಜನ. ಅಲ್ಲೆಲ್ಲೋ ಕಣ್ಣು ಮುಚ್ಚಿ ಕೂತೆ. ಹೃದಯ ಭಾರವಾಗಿತ್ತು. ಬೀಸುವ ತಂಗಾಳಿ ಕೂಡ ಮನದ ಬಿಸಿಯನ್ನು ತಂಪು ಮಾಡಲಾರದು. ಸೂರ್ಯ ಮುಳುಗಲು ಹೊರಟಿದ್ದ. ಸೂರ್ಯಾಸ್ತದ ಸೊಬ ಗನ್ನು ಸವಿಯಲು ಮನಸ್ಸು ಎಂದಿನಂತಿರಲಿಲ್ಲ. ಯಾಕೋ ಊರ ಕಡೆ ನೆನಪಾಯಿತು. ಅವ್ವ ಕಣ್ಣ ಮುಂದೆ ಬಂದಳು. ಮುಂದಿನ ತಿಂಗಳು ರಜೆ ಪಡೆದು ಊರಿಗೆ ಹೋಗಬೇಕೆಂದುಕೊಂಡೆ. ಸಾವಕಾಶವಾಗಿ ದಡಕ್ಕೆ ಬರುತ್ತಿದ್ದ ತೆರೆಗಳು ಮುಳುಗುವ ಸೂರ್ಯನ ಕೆಂಪನ್ನು ಕಲಸಿಕೊಂಡು ಬರುತ್ತಿದ್ದವು. ನೋಡ ನೋಡುತ್ತಿದ್ದಂತೆ ಸೂರ್ಯ ಸಮುದ್ರದಲ್ಲಿ ಇಳಿದು ಹೋದ, ಇನ್ನೆಂದೂ ಬರ ಲಾರದವನಂತೆ. ನನ್ನ ಕಣ್ಣುಗಳು ಹನಿಗೂಡಿದವು.

ರಾತ್ರಿ ಮರಳಿ ಬಂದಾಗ ಎಲ್ಲರೂ ದೀಪ ಆರಿಸಿ ಮಲಗಿದ್ದರು. ಬಾಗಿಲು ತೆರೆಯುವಾಗ ಊಟ ತರುವ ಹುಡುಗ ರಾತ್ರಿಯೂಟವನ್ನು ಅಲ್ಲೆ ಇಟ್ಟು ಹೋಗಿರುವುದು ಕಂಡಿತು. ಉಣ್ಣುವ ಮನಸ್ಸಾ ಗಲಿಲ್ಲ. ಬಟ್ಟೆ ಕೂಡ ಕಳಚದೆ ಹಾಗೇ ಮಲಗಿ ಕೊಂಡೆ.

ಮರುದಿನ ಮುಂಜಾನೆ ಎಂದಿನಂತಿರಲಿಲ್ಲ. ನಿನ್ನನ್ನು ಕಣ್ಣೆತ್ತಿ ಕೂಡ ನೋಡಬಾರದಂದು ಕೊಂಡಿದ್ದೆನಾದರೂ ಅಪ್ರಯತ್ನಪೂರ್ವಕವಾಗಿ ದೃಷ್ಟಿ ಅತ್ತ ಹರಿಯುತ್ತಿತ್ತು. ನಿನ್ನ ಮುಖ ಬಾಡಿರುವುದನ್ನೂ ಎಂದಿನ ಲವಲವಿಕೆ ಇಲ್ಲದಿರುವುದನ್ನೂ ಗುರುತಿಸಿದ್ದೆ. ನಿನ್ನನ್ನು ಮತ್ತೆ ಮಾತಾಡಿಸಬಾರದಂಬ ನಿರ್ಧಾರ ಮಾತ್ರ ಸಡಿಲಗೊಂಡಿರಲಿಲ್ಲ. ಆದರೆ ಅದೂ ಆಗಲು ಬಹಳ ದಿನ ಹಿಡಿಯಲಿಲ್ಲ.

ಆ ರಾತ್ರಿ ಬಹಳ ಹೊತ್ತಿನವರೆಗೆ ಓದುತ್ತ ಎಚ್ಚರವಿದ್ದೆ. ಕಾಲನಿಯಲ್ಲಿ ಎಲ್ಲರೂ ಮಲಗುವ ಹೊತ್ತು. ರಸ್ತೆಯಲ್ಲಿ ಜನ ಸಂಚಾರ ನಿಂತು ಹೋಗಿದೆ. ತುಸುವೇ ತೆರೆದ ಕಿಟಕಿಯಿಂದ (ಈಚೆಗೆ ಕಿಟಕಿಯನ್ನು ಮುಚ್ಚಿರುತ್ತಿದ್ದೆ) ನಿಮ್ಮ ಮನೆಯತ್ತ ನೋಡಿದೆ. ಹೂ ಗಿಡದ ಪಕ್ಕ ಏನೋ ಚಲಿಸಿದಂತಾಗಲು ದಿಟ್ಟಿಸಿದರೆ ನೀನು ಅಲ್ಲಿದ್ದೆ. ಮನೆಯಲ್ಲಿ ದೀಪ ಆರಿಸಿದ್ದರೂ ಹುಣ್ಣಿಮೆ ಚಂದ್ರನ ಮಂದ ಬೆಳಕಲ್ಲಿ ನಿನ್ನ ಮುಖ ಬಾಡಿರುವುದನ್ನು ಕಂಡೆ. ಒಡಲಲ್ಲಿ ಅವ್ಯಕ್ತ ಸಂಕಟ. ಸದಾ ಉಲ್ಲಾಸವನ್ನು ಸೂಸುತ್ತಿದ್ದ ನಿನ್ನನ್ನು ನೆನಪಿಸಿ ಕೊಂಡು ಕರುಳು ಹಿಂಡಿದಂತಾಯಿತು. ಏನು ಮಾಡು ತ್ತಿರುವೆನೆಂಬುದರ ಅರಿವು ಇಲ್ಲದೆ ಹೊರ ಬಂದು ಕೈ ಬೀಸಿದೆ. ತುಸು ತಡೆದು ನೀನೂ ಮೆಲ್ಲಗೆ ಕೈ ಮಾಡಿದೆ. ನೀನು ಅಳುತ್ತಿರುವಂತೆ ನನಗೆ ಅನಿಸಿತು. ಚಂದ್ರನ ಬೆಳಕಲ್ಲಿ ಎಷ್ಟೊ ಹೊತ್ತು ಹಾಗೆ ನಿಂತಿದ್ದೆವು.

ಮತ್ತೆ ನಿತ್ಯದ ಗುಲ್‌ಮೊಹರು, ಗುಲಾಬಿ ಮತ್ತು ನೀನು. ‘ನೀನ್ಯಾಕೆ ಕೋಪ ಮಾಡಿಕೊಂಡೆ? ಹೀಗೆ ಮಾಡಿದರೆ ನಿನ್ನ ಹತ್ತಿರ ಮಾತಾಡುವುದಿಲ್ಲ’ ಎಂದು ಸಣ್ಣ ಮಕ್ಕಳ ಹಾಗೆ ‘ಟೂಟು’ ಅಂದೆ ನೀನು. ನಾನು ‘ತಪ್ಪಾಯ್ತು. ಇನ್ನು ಹೀಗೆ ಮಾಡುವುದಿಲ್ಲ’ ಎಂದು ಕೈ ಮಾಡಿ ತಿಳಿಸಿದೆ. ಸಮಾಧಾನವಾಗಲಿಲ್ಲ. ಮುನಿಸಿ ಕೊಂಡಂತೆ ನಟಿಸಿದೆ ನೀನು. ನಾನು ಕಿವಿ ಹಿಡಿದು ಒಂದೆರಡು ಊಠ್‌ಬೈಸ್ ಹೊಡೆದೆ. ನಿನ್ನ ಕೋಪ ಕರಗಿ ನಗು ಅರಳಿತು. ಇಂಥ ಹುಚ್ಚಾಟಗಳಿಗೆ ಕೊನೆ ಎಲ್ಲಿ?

ಎಂದಿನಂತೆ ನಿನ್ನ ದರುಶನ ಪಡೆದು ಲ್ಯಾಬ್‌ಗೆ ಬಂದರೆ ಡೆಪ್ಯೂಟಿ ಡೈರೆಕ್ಟರ್ ಡಾ. ರಂದ್ರ ಗುಪ್ತ ಯಾರ ಮೇಲೋ ಕೂಗಾಡುತ್ತಿದ್ದರು. ಈಚೆಗೆ ಸಣ್ಣ ಕಾರಣಕ್ಕೂ ಅವರು ಹೀಗೆ ಮಾಡುತ್ತಿದ್ದರು. ತಿಂಗಳ ಹಿಂದಷ್ಟೇ ನನ್ನ ಮೇಲೂ ಸಿಡಿಮಿಡಿಗೊಂಡಿದ್ದರು. ಸಾರ್ವಜನಿಕ ಪೂರೈಕೆಯ ಮೊದಲು ಕೆಲವು ಆಹಾರ ವಸ್ತುಗಳನ್ನು ನಮ್ಮ ಪ್ರಯೋಗಾಲಯದಲ್ಲಿ ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿ ಅವು ನಿಗದಿತ ಗುಣಮಟ್ಟ ಹೊಂದಿವೆಯೇ ಎಂದು ಪರೀಕ್ಷಿಸಲಾಗುತ್ತಿತ್ತು. ಹಾಗೇ ನಾದರೂ ನಿಗದಿತ ಮಟ್ಟಕ್ಕೆ ಬರದಿದ್ದರೆ ಅದನ್ನು ಮಾರಾಟದಿಂದ ನಿಷೇಧಿಸಲಾಗುತ್ತಿತ್ತು. ಹಾಗೇನಾದರೂ ನಿಗದಿತ ಮಟ್ಟಕ್ಕೆ ಬರದಿದ್ದರೆ ಅದನ್ನು ಮಾರಾಟದಿಂದ ನಿಷೇಧಿಸಲಾಗುತ್ತಿತ್ತು. ಹಾಗಾಗುವ ಮೊದಲೆ ಕೆಲವು ಉತ್ಪಾದಕರು ಡಾ. ಗುಪ್ತರನ್ನು ಸಂಪರ್ಕಿಸಿ ತಮ್ಮ ವಸ್ತುಗಳು ನಿಷೇಧಗೊಳ್ಳದಂತೆ ನೋಡಿಕೊಳ್ಳುತ್ತಾರೆಂದು ಸುದ್ದಿ ಕೂಡ ಇತ್ತು. ತಿಂಗಳ ಹಿಂದೆ ಸ್ಯಾಂಪಲ್ಲೊಂದನ್ನು ಪರೀಕ್ಷಿಸಿ ಸೂಚಿತ ಗುಣಮಟ್ಟ ಇಲ್ಲ ಎಂದು ರಿಪೋರ್ಟ್ ತಯಾರಿಸಿದ್ದೆ. ಆ ದಿನ ಸಂಜೆ ಡಾ. ಗುಪ್ತ ನನ್ನನ್ನು ಕರೆಸಿ ಸುತ್ತು ಬಳಸಿ ಮಾತಾಡುತ್ತ ಅದನ್ನು ತಿದ್ದುವಂತೆ ಹೇಳಿದರು. ‘ನಾನು ಹಾಗೆ ಮಾಡಲಾರೆ ಸರ್’ ಎಂದಿದ್ದೆ.

ಲ್ಯಾಬ್‌ನಲ್ಲಿ ಕೆಲವರು ಡಾ. ಗುಪ್ತರ ವಿರುದ್ಧವಾಗಿ ಹೋಗಬೇಡವೆಂದೂ ಅವರು ತುಂಬಾ ಪ್ರಭಾವಶಾಲಿ ಯೆಂದೂ ಮನಸ್ಸು ಮಾಡಿದರೆ ಕೆಲಸದಿಂದ ಕಿತ್ತು ಹಾಕಬಹುದೆಂದೂ ಹೆದರಿಸಿದ್ದರು. ನನಗೆ ಆಶ್ಚರ್ಯ ವಾಗಿತ್ತು. ನೋವು ಕೂಡ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಕೆಲಸ ಏಕೆ ಕಳಕೊಳ್ಳಬೇಕು? ಇದೆಲ್ಲಿಯ ನ್ಯಾಯ? ಮನಸ್ಸು ಖಿನ್ನವಾಯಿತು. ಆದರೆ ಕೆಲಸ ಉಳಿಸಿಕೊಳ್ಳುವುದಕ್ಕಾಗಿ ಡಾ. ಗುಪ್ತರ ಇಚ್ಛೆಯಂತೆ ಸುಳ್ಳು ರಿಪೋರ್ಟ್‌ಗಳನ್ನು ನೀಡಲೆ? ನಾನು ನಂಬಿದ ಮೌಲ್ಯಗಳನ್ನು ಮಾರಿಬಿಡಲೇ? ಇಲ್ಲ ಅದನ್ನೆಂದೂ ಮಾಡಲಾರೆ. ಅದು ನಾನು ಇಲ್ಲಿವರೆಗೆ ಕಲಿತದ್ದಕ್ಕೆ ಅಪಚಾರ ಎಸಗಿದಂತೆ.

ಲ್ಯಾಬ್‌ಗೆ ಬಂದವನೆ ಸ್ಯಾಂಪಲ್ಲೊಂದರ ವಿಶ್ಲೇಷಣೆ ಗಾಗಿ ರಾಸಾಯನಿಕಗಳನ್ನು ತಯಾರಿಸುತ್ತಿರ ಬೇಕಾದರೆ ಡಾ. ಗುಪ್ತ ನನಗೆ ಬರ ಹೇಳಿದರು. ನಾನು ಅವರ ಕೋಣೆ ಪ್ರವೇಶಿಸಿ ಅವರಿಗೆ ನಮಸ್ಕರಿಸಿ ಅವರು ತೋರಿದ ಕುರ್ಚಿಯಲ್ಲಿ ಕೂತೆ. ಅವರು ಏನನ್ನೋ ಹೇಳಲು ಅಂಜುವಂತಿದ್ದರು.

ಪ್ರಯತ್ನಿಸಿ ಕೊನೆಗೆ ‘ಮಿ. ನಾಯಕ್ ನಿಮಗೆ ಇಲ್ಲಿಂದ ವರ್ಗವಾಗಿದೆ. ಈಗಷ್ಟೇ ಡೈರೆಕ್ಟರ್ ಆಫಿಸಿನಿಂದ ಆರ್ಡರ್ ಬಂತು’ ಎಂದರು. ನನಗೆ ಒಂದು ಕ್ಷಣ ಏನೂ ತೋಚಲಿಲ್ಲ. ‘ನಿಮ್ಮಂತೆ ಡೈನಮಿಕ್ ಆಗಿ ಕೆಲಸ ಮಾಡುವವರು ನಮ್ಮ ಲ್ಯಾಬ್‌ನಲ್ಲಿ ಇರಬೇಕಿತ್ತು’ ಎಂದೂ ಇನ್ನೂ ಏನೇನೋ ಹೇಳುತ್ತಿದ್ದರು. ನಾನು ಮೌನವಾಗಿ ಹೊರಗೆ ಬಂದೆ. ನನಗೆ ಕಲ್ಕತ್ತಾಗೆ ವರ್ಗವಾಗಿತ್ತು.

ಹೊರಗೆ ಬರುತ್ತಿದ್ದಂತೆ ಎಲ್ಲರೂ ನನ್ನನ್ನು ಮುತ್ತಿಕೊಂಡರು. ಕೈಲಿದ್ದ ಟ್ರಾನ್ಸ್‌ಫರ್ ಆರ್ಡರ್ ನೋಡಿ ಆತ್ಮೀಯರು ಕೆಲವರು ಬೇಜಾರು ಪಟ್ಟರು. ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಿದ್ದರು. ನನಗೆ ಮಾತ್ರ ತಲೆ ತುಂಬ ನೀನು. ಸ್ವಾತಿಗೆ ಏನೆಂದು ಹೇಳಲಿ? ಅವಳಿಗೆ ಹೇಗೆ ಮುಖ ತೋರಿಸಲಿ?

ನೀನು ಪ್ರಯತ್ನಿಸಿ ಸೋತೆ. ನನ್ನನ್ನು ನಗಿಸಬೇಕೆನ್ನುವ ನಿನ್ನ ಪ್ರಯತ್ನಗಳೆಲ್ಲ ಇಂಗಿ ಹೋದವು. ನಾನು ನಗುವ ಸ್ಥಿತಿಯಲ್ಲಿರಲಿಲ್ಲ. ನಿನಗೆ ಇನ್ನೂ ಸುದ್ದಿ ತಿಳಿದಿಲ್ಲ. ನಿನ್ನನ್ನೇ ನೋಡುತ್ತ ಕೂತುಬಿಟ್ಟೆ.

ಸಂಜೆ ಲ್ಯಾಬ್‌ನ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಾವಂತ ಮನೆಗೆ ಬಂದು ಮೊಸಳೆ ಕಣ್ಣೀರು ಸುರಿಸತೊಡಗಿದ. ನಾನು ಅಷ್ಟೆಲ್ಲ ದೂರಕ್ಕೆ ವರ್ಗವಾಗಿ ಹೋಗಬೇಕಾದುದಿಲ್ಲವೆಂದೂ, ತಾನು ಡಾ. ಗುಪ್ತರ ಮನವೊಲಿಸಿ ಟ್ರಾನ್ಸ್‌ಫರ್ ಆರ್ಡರನ್ನು ಹಿಂದೆಗೆದುಕೊಳ್ಳುವಂತೆ ಮಾಡುತ್ತೇ ನೆಂದೂ ಹೇಳಿದ. ಮತ್ತೆ ನಾನು ಡಾ. ಗುಪ್ತರ ಇಚ್ಛೆಯಂತೆ ನಡೆಯಬೇಕೆಂದೂ ಅದರಿಂದ ನನಗೂ ಲಾಭವಿದೆ ಎಂದೂ ಸೇರಿಸಿದ. ನನಗೆ ತಲೆ ಸಿಡಿಯತೊಡಗಿತು. ಇದೆಲ್ಲ ಈತ ಮತ್ತು ಡಾ. ಗುಪ್ತ ಕೂಡಿ ಮಾಡುತ್ತಿರುವ ನಾಟಕ ಅನಿಸಿತು, ಇವರ ಹುನ್ನಾರಕ್ಕೆ ಸಿಕ್ಕಬಾರದು ಎಂದುಕೊಂಡೆ. ಯಾವುದೋ ದುರ್ಬಲ ಗಳಿಗೆಯಲ್ಲಿ ಕೂಡ ಇಂಥದಕ್ಕೆ ಮನಸ್ಸು ಸೋಲದಿರಲು ಅವನನ್ನು ಹೊರಗೆ ಹೋಗುವಂತೆ ಕಠೋರವಾಗಿ ನುಡಿದೆ. ‘ನಾನೀಗಾಗಲೇ ಹೊಸ ಜಾಗಕ್ಕೆ ಹಾಜರಾಗಲು ನಿರ್ಧರಿಸಿದ್ದೇನೆ’ ಎಂದು ಕೂಗಿದೆ. ನನ್ನ ಧ್ವನಿಯಲ್ಲಿಯ ನಿಷ್ಠುರತೆ ನನಗೇ ಆಶ್ಚರ್ಯವುಂಟು ಮಾಡಿತು.

ಅಷ್ಟರಲ್ಲೇ ನೀನು ಹೇಗೋ ಸುದ್ದಿ ಸಂಗ್ರಹಿಸಿದ್ದೆ. ಪೂರ್ತಿ ಭೂಮಿಗೇ ಇಳಿದು ಹೋಗಿದ್ದೆ. ನಗುವಿಲ್ಲ. ನಲಿವಿಲ್ಲ. ಎಷ್ಟೋ ದಿನಗಳಿಂದ ನೇಯುತ್ತಿದ್ದ ಕಸೂತಿ ಮುಂದುವರಿಸುವ ನೆಪದಲ್ಲಿ ಕಿಟಕಿಯಲ್ಲಿ ಕಾಣುವೆ. ಒಡಲಲ್ಲಿ ಎಂಥ ತಳಮಳ! ನಿನ್ನೊಡನೆ ಕಳೆದ ದಿನಗಳು ಕನಸಿನಂತೆ ಕಾಣುತ್ತಿದೆ. ಈ ನವಿರು ಸಂಬಂಧಕ್ಕೆ ಏನರ್ಥ? ನಮ್ಮ ಪ್ರೇಮ ಪರಿಪೂರ್ಣ ಗೊಳ್ಳುವ ಮೊದಲೆ...? ಅಥವಾ ಇದು ಸತ್ವ ಪರೀಕ್ಷೆಯೇ? ಪ್ರೇಮದ ತೀವ್ರತೆ ನಮ್ಮನ್ನು ಪುನಃ ಒಂದುಗೂಡಿಸಬಲ್ಲದೆ? ಉತ್ತರ ಎಲ್ಲಿ ಹುಡುಕಲಿ?

ನಾನು ನಿನ್ನನ್ನು ಭೇಟಿಯಾಗಲು ಮಾಡಿದ ಪ್ರಯತ್ನಗಳೆಲ್ಲ ವಿಫಲಗೊಂಡವು. ನಿಮ್ಮ ತಂದೆ ನಾಲ್ಕು ದಿನಗಳಿಂದ ಮನೆಯಲ್ಲೆ ಇದ್ದರು. ನೀನೂ ಮನೆಯಿಂದಾಚೆಗೆ ಸುಳಿವೇ ಇಲ್ಲ. ಹೊಸ ಜಾಗಕ್ಕೆ ಹಾಜರಾಗುವ ಮೊದಲು ಒಂದು ವಾರದ ಮಟ್ಟಿಗೆ ಊರಿಗೆ ಹೋಗಲು ತೀರ್ಮಾನಿಸಿದ್ದೆ. ನಾಳೆಯೇ ಹೊರಡುವುದು. ಎಲ್ಲಾ ಪ್ಯಾಕ್ ಮಾಡತೊಡಗಿದೆ. ಒಯ್ಯಲು ಬೇಸರವಾಗಿ ಹಲವಾರು ವಸ್ತುಗಳನ್ನು ಲ್ಯಾಬ್‌ನಲ್ಲಿಯ ನನ್ನ ಸಹಾಯಕರಿಗೆ ಕೊಟ್ಟುಬಿಟ್ಟೆ. ತಲೆ ತುಂಬ ಸ್ವಾತಿ, ಸ್ವಾತಿ, ಸ್ವಾತಿ. ರಾತ್ರಿಯಿಡೀ ಚಿತ್ರ ವಿಚಿತ್ರ ಕನಸುಗಳು.
ರಾತ್ರಿ ಸರಿ ನಿದ್ದೆಯಿಲ್ಲದ್ದರಿಂದ ಏಳಲು ತಡವೇ ಆಯಿತು. ಗಡಿಬಿಡಿಯಿಂದ ಸ್ನಾನ ಮುಗಿಸಿ ಬರುವಷ್ಟರಲ್ಲಿ ಗುಬ್ಬಚ್ಚಿ ಕೂಡ ಹೊರಟು ಹೋಗಿತ್ತು. ನೀನು ಗುಲಾಬಿಗೆ ನೀರು ಹಾಕುತ್ತಿದ್ದೆ ಎಂದಿನಂತೆ. ಆದರೆ ನಿನ್ನ ನಗು, ಗೆಲುವನ್ನೆಲ್ಲ ಗುಲಾಬಿ ಹೂಗಳೆ ನುಂಗಿದ್ದವು. ನಿಮ್ಮ ತಂದೆ ಅಲ್ಲೇ ತಿರುಗಾಡಿಕೊಂಡಿದ್ದರು.

ಕೊನೆಗೂ ನಿನ್ನನ್ನು ಭೇಟಿಯಾಗಲೇ ಬೇಕೆಂದು ತೀರ್ಮಾನಿಸಿದೆ. ನನಗೇನು ಮೈಯಲ್ಲಿ ಆವೇಶ ಹೊಕ್ಕಿತ್ತೊ ಏನೋ. ಕುಂಡದಲ್ಲಿಯ ಗುಲಾಬಿ ಗಿಡವನ್ನು ಎರಡೂ ಕೈಗಳಲ್ಲಿ ಹಿಡಿದು ನಡೆದೆ, ನನ್ನ ಹೃದಯ ಹಿಡಿದುಕೊಂಡಂತೆ. ಇಡೀ ಜಗತ್ತೇ ಸ್ತಬ್ಧವಾಗಿದೆ. ನನಗೆ ಬೇರೇನೂ ಕಾಣದು. ಅಲ್ಲಿ ಸ್ವಾತಿ ಮಾತ್ರ ಪ್ರಜ್ವಲಿಸುತ್ತಿದ್ದಾಳೆ. ಭಾರವಾದ ಹೃದಯದಿಂದ ನಿನ್ನ ಹೂದೋಟವನ್ನು ದಾಟಿ ಮನೆ ಮೆಟ್ಟಲೇರಿ ಬಾಗಿಲ ಬಳಿ ನಿಂತೆ. ನನ್ನನ್ನು ನೋಡಿ ನೀನು ಓಡಿ ಬಂದೆ. ನಿನ್ನ ಕೈಗಳಲ್ಲಿ ಇನ್ನೂ ಪೂರ್ತಿ ಗೊಳ್ಳಬೇಕಾಗಿರುವ ಕಸೂತಿ ಕಲೆ. ಗುಲಾಬಿಯನ್ನು ನಿನ್ನ ಎರಡೂ ಕರಗಳಲ್ಲಿಟ್ಟೆ, ಹಗುರ ನನ್ನ ಹೃದಯ ಇಟ್ಟ ಹಾಗೆ. ನಿನ್ನ ಅಗಲ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬಕ್ಕಾಗಿ ಇಣುಕಿದೆ. ಅದೆಲ್ಲ ಒಂದೆರಡೇ ಕ್ಷಣ. ವಿಗ್ರಹ ಗಳಂತೆ ನಿಂತಿದ್ದ ನಿನ್ನ ಅಪ್ಪ ಅಮ್ಮರಿಗೆ ಏನಾಗುತ್ತಿದೆ ಎಂದು ಅರಿವಾಗುವ ಮೊದಲೆ ನಾನು ಮೆಟ್ಟಲಿಳಿಯ ತೊಡಗಿದ್ದೆ, ಖಾಲಿ ದೇಹದೊಂದಿಗೆ.

***
ಅವ್ವನ ಸಂಭ್ರಮ ಹೇಳತೀರದು. ಬೆಳಗಾಗುವಷ್ಟರಲ್ಲಿ ಹಿರಿಯಣ್ಣನಿಗೆ ಯಾವುದೋ ನಂಟಸ್ತಿಕೆ ಬಂದಿರೋದನ್ನೂ, ಎರಡನೆ ಅಕ್ಕ ಅಮಾಸಿಪಾಡ್ಯಕ್ಕೆ ಮೂರನೆ ಬಾಣಂತನಕ್ಕಾಗಿ ಬರಲಿರುವುದನ್ನೂ ಅಪ್ಪನ ಬಗ್ಗೆ ಒಂದಿಷ್ಟು ಹೊಸ ಪುಕಾರುಗಳನ್ನೂ, ಅಮ್ಮನೋರ ದೇವರಿಗೆ ಅಷ್ಟಬಂಧ ಆದದ್ದನ್ನೂ ವರದಿ ಒಪ್ಪಿಸಿ ಹಗುರಾದ ಮೇಲೆ ಹೋಗ್ ಹೋಗ ಮಿಂದಕಾ ಬಾ ಎನ್ನುತ್ತಾ ಹಂಡೆಗೆ ಬೆಂಕಿ ಮಾಡಲು ಹೋದಳು. ನಾನು ಅಟ್ಟದ ಮೇಲಿರುವಾಗ ಪಕ್ಕದ ಮನೆಯ ಗಂಗಕ್ಕನೊಡನೆ ನನಗೆ ಊಟ ಸೇರದೇ ಇದ್ದದ್ದು, ಪೂರ್ತಿ ಸೊರಗಿ ಹೋದದ್ದು ಎಲ್ಲವನ್ನು ಬಣ್ಣಿಸುತ್ತಿದ್ದಳು. ನಾನು ಕೆಲ ವಸ್ತುಗಳನ್ನು ತರದೇ ಇದ್ದದ್ದು ಕಂಡು ‘ಎಲ್ಲ ಕೊಟ್ಟ ಬಂದ್ಯ’ ಎಂದು ಅರ್ಧ ದುಃಖದಿಂದ ಇನ್ನರ್ಧ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ಕೇಳಿ ನನಗೆ ನಗು ಬಂತು. ‘ಹೌದು, ಎಲ್ಲ ಎಲ್ಲವನ್ನೂ ಕೊಟ್ಟು ಬಂದಿದ್ದೇನೆ, ಈ ಹೃದಯವನ್ನೂ ಕೂಡ’ ಎಂದು ಕೂಗಿ ಹೇಳಬೇಕೆನಿಸಿತು. ಎದ್ದು ಹೊರಗೆ ಬಂದೆ.

ಹಿತ್ತಲಲ್ಲಿ ಅಪ್ಪ ಏನೋ ನಡೆಸಿದ್ದ. ಅಡಿಕೆ ಸಸಿ ಗಳಿಗೆ ಯಾವುದೋ ರಾಸಾಯನಿಕ ಸಿಂಪಡಿಸು ತ್ತಿದ್ದ. ಅಪ್ಪನ ಪ್ರಯೋಗಶೀಲತೆಗೆ ಮೆಚ್ಚಬೇಕು. ಏನಾದರೊಂದು ಹೊಸತನ್ನ ಮಾಡುತ್ತ ಕ್ರಿಯಾಶೀಲನಾಗಿರುತ್ತಾನೆ. ಹಿತ್ತಲ ಮುಂದೆ ಹರಿವ ಹಳ್ಳ. ಇನ್ನೂ ಮಂಡಿಸರಿ ನೀರಿತ್ತು. ನೀರಿನಲ್ಲಿ ಹಾದು ಆಚೆ ಬಂದರೆ ಗದ್ದೆ ಬಯಲು. ಗೇಣುದ್ದ ಬಂದ ಕಾರ್ ಬತ್ತದ ಸಸಿಗಳು. ಬೇಲಿಯಾಚೆ ಬೆಳಗಿನ ಚಳಿಗೆ ಮೈಕಾಸಿಕೊಳ್ಳುತ್ತಿದ್ದ ದನಕರುಗಳು. ದಣಪೆ ದಾಟಿ ದಿಬ್ಬದತ್ತ ನಡೆದವನು ಕಟ್ಟಕಡೆ ಬಂದವನೇ ತಿರುಗಿದೆ. ಇಡೀ ಬಯಲು ಹಸಿರೋ ಹಸಿರು. ಅಂಚಲ್ಲಿ ತೂಗಾಡುವ ಅಡಿಕೆ, ತೆಂಗು. ಕೆರೆಯಲ್ಲಿ ಅರಳಿದ ಕಮಲಗಳು. ಹಸಿರು ಗದ್ದೆ ತುಂಬಾ ಬೆಳ್ಳಕ್ಕಿಗಳು, ಬೀರಿದ ಮಲ್ಲಿಗೆ ಹಾಗೆ. ನೋಡುತ್ತಿದ್ದಂತೆ ಮನಸು ತುಂಬಿ ಬಂದಂತಾ ಯಿತು. ಬೆಳ್ಳಕ್ಕಿಗಳ ನಡುವೆ ರೇಖೆಯನ್ನೆಳೆಯುತ್ತ ವಿವಿಧ ಆಕಾರಗಳನ್ನು ಕಲ್ಪಿಸುತ್ತಾ ನಿಂತೆ. ಇನ್ನೂ ಹಾಗೇ ನಿಂತಿದ್ದೇನೆ.