Sunday, November 14, 2010

ಸಾವಯವದಲ್ಲಿ ಬಂಪರ್ ಶುಂಠಿ (prajavani-november-4-2010)

ಡಾ. ವಿನಯ್.ಬಿ. ರಾಘವೇಂದ್ರ



ಶುಂಠಿ ಬೆಳೆಯುವ ರೈತರು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಹೇರಳವಾಗಿ ಬಳಸುತ್ತಾರೆ. ಕುಶಾಲನಗರ ತಾಲ್ಲೂಕಿನ ರೈತರೊಬ್ಬರು ಸಾವಯವ ಬೇಸಾಯ ಪದ್ಧತಿಯಲ್ಲಿ ಅರ್ಧ ಎಕರೆಯಲ್ಲಿ ಸುಮಾರು 220 ಚೀಲ ಶುಂಠಿ ಬೆಳೆದಿದ್ದಾರೆ. ಈ ಶುಂಠಿಗೆ ಹೆಚ್ಚು ಬೆಲೆ ಸಿಕ್ಕಿದೆ!


ಇತ್ತೀಚೆಗೆ ಕುಶಾಲನಗರದಿಂದ ಕೊಣನೂರು ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ ಶಿರಂಗಾಲ ಗ್ರಾಮದ ಬಳಿ ಶುಂಠಿಯ ಪರಿಮಳ ಮೂಗಿಗೆ ಬಂತು. ವಾಹನ ನಿಲ್ಲಿಸಿ ನೋಡಿದರೆ ಸ್ವಲ್ಪ ದೂರದಲ್ಲಿ ಕೆಲವರು ಗುಂಪಾಗಿ ನಿಂತು ಮಾತುಕತೆಯಲ್ಲಿ ತೊಡಗಿದ್ದರು. ಹತ್ತಿರ ಹೋದೆ. ಆಗ ತಾನೆ ಕೊಯ್ಲು ಮಾಡಿದ ಶುಂಠಿಯನ್ನು ಆಳುಗಳು ಚೀಲಗಳಿಗೆ ತುಂಬುತ್ತಿದ್ದರು. ಇನ್ನು ಕೆಲವರು (ಅವರು ದಲ್ಲಾಳಿಗಳು) ಪೈಪೋಟಿಯಲ್ಲಿ ಶುಂಠಿಯ ಬೆಲೆ ನಿಗದಿ ಮಾಡಲು ಮುಂದಾಗಿದ್ದರು.

ಶುಂಠಿ ಹೊಲದಲ್ಲಿ ಸಂತೋಷದ ಭಾವದಲ್ಲಿದ್ದ ರೈತರ ಹೆಸರು ಸಂಜೀವ್‌ಕುಮಾರ್.ವೃತ್ತಿಯಲ್ಲಿ ಅವರು ಶಿಕ್ಷಕರು. ಕಳೆದ ಐದು ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲೇ ಬೇಸಾಯವನ್ನೂ ಮಾಡುತ್ತ ಬಂದಿದ್ದಾರೆ. ಬೇಸಾಯ ಅವರ ಮನೆತನದ ವೃತ್ತಿ. ಸಂಜೀವ್ ಅನೇಕ ವರ್ಷಗಳಿಂದ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಬೇಸಾಯ ಮಾಡುತ್ತಿದ್ದರು. ಒಮ್ಮೆ ಶುಂಠಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂಬ ಮಾಹಿತಿಯನ್ನು ಪತ್ರಿಕೆಗಳಲ್ಲಿ ಓದಿದ್ದರಂತೆ.

ನಂತರ ಅವರಿಗೆ ತಾವೂ ಶುಂಠಿ ಬೆಳೆಯಬಾರದೇಕೆ ಅನ್ನಿಸಿತಂತೆ. ಶುಂಠಿ ಬೆಳೆಯುವ ನಿರ್ಧಾರ ಮಾಡಿದರು. ಶುಂಠಿಯಲ್ಲಿ ವೈದ್ಯಕೀಯ ಗುಣಗಳು ಹೆಚ್ಚಾಗಿರುವುದರಿಂದ ರಾಸಾಯನಿಕ ಗೊಬ್ಬರ,ಕೀಟನಾಶಕ ಹಾಕಿ ಬೆಳೆಯುವ ಬದಲು ಸಾವಯವದಲ್ಲಿ ಬೆಳೆಯಲು ನಿರ್ಧರಿಸಿದರು.
ಮೊದಲ ಹಂತದಲ್ಲಿ ಅರ್ಧ ಎಕರೆಯಲ್ಲಿ ಶುಂಠಿ ಬೆಳೆಯಲು ನಿರ್ಧರಿಸಿದರು. ಭೂಮಿಯನ್ನು ಹದಮಾಡಿ ಹೇರಳವಾಗಿ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಹಾಕಿದರು. ಪ್ರಾಯೋಗಿಕವಾಗಿ 40ರಿಂದ 50 ಸೆಂ.ಮೀ ಅಂತರದಲ್ಲಿ ಸಾಲುಗಳನ್ನು ಮಾಡಿ ಮೊಳಕೆಯೊಡೆದ ಶುಂಠಿಯನ್ನು ಮೇಲ್ಮುಖವಾಗಿ ತಗ್ಗು ಸಾಲುಗಳಲ್ಲಿ 15-20 ಸೆಂ.ಮೀ ಅಂತರದಲ್ಲಿ ನಾಟಿ ಮಾಡಿದರು. ಸಾಲುಗಳ ಮೇಲೆ 10 ಸೆಂ.ಮೀ ಎತ್ತರದ ದಿಂಡುಗಳನ್ನು ಮಾಡಿ ಅದರ ಮೇಲೆ ಒಣಹುಲ್ಲು ಮುಚ್ಚಿದರು.


ಹೀಗೆ ಮಾಡುವುದರಿಂದ ಶುಂಠಿಯಲ್ಲಿ ಕಳೆ ಬಂದಾಗ ಕುಂಟೆ ಅಥವಾ ನೇಗಿಲ ಸಹಾಯದಿಂದ ನಿಯಂತ್ರಿಸಬಹುದು. ಆಳುಗಳಿಗೆ ತಗುಲುವ ಖರ್ಚು ಉಳಿಸಬಹುದು ಎನ್ನುತ್ತಾರೆ ಸಂಜೀವ್‌ಕುಮಾರ್.

ನಲವತ್ತೈದು ದಿನಗಳಲ್ಲಿ ಶುಂಠಿ ಬೀಜ ಮೊಳಕೆಯೊಡೆದು ಗಿಡವಾಗುತ್ತದೆ. ಆನಂತರ 15 ದಿನಗಳಿಗೊಮ್ಮೆ ಮೂರು ಸಲ ಸಮುದ್ರ ಕಳೆಯಲ್ಲಿ ತಯಾರಿಸಿದ ‘ಜಿಂಜರ್ ಗೋಲ್ಡ್’ ಎಂಬ ಸಸ್ಯವರ್ಧಕ ಟಾನಿಕ್ಕನ್ನು ಸಿಂಪಡಿಸಿದರು. ಇದರಲ್ಲಿ ಹೇರಳವಾಗಿ ನೈಸರ್ಗಿಕ ಪೊಟ್ಯಾಷ್ ಇರುವುದರಿಂದ ರಾಸಾಯನಿಕ ಪೊಟ್ಯಾಷ್ ಬಳಸಲಿಲ್ಲ. ನೈಸರ್ಗಿಕ ಪೊಟ್ಯಾಷ್‌ನಿಂದ ಗಿಡಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ಹೆಚ್ಚು ಕವಲುಗಳು ಒಡೆಯಲು ಸಹಾಯವಾಯಿತು. ಕೊಳೆ ರೋಗ ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ಸುಣ್ಣ ಮತ್ತು ಮೈಲು ತುತ್ತದ ದ್ರಾವಣ ಸಿಂಪಡಿಸಿದರು.

ಈ ಕ್ರಮಗಳನ್ನು ಅನುಸರಿಸಿದ್ದರಿಂದ ಗಿಡಗಳು ಹೆಚ್ಚು ಕವಲೊಡೆದು ಬೆಳೆದವು.ಇದರಿಂದ ಇಳುವರಿ ಹೆಚ್ಚಾಯಿತು. ಅರ್ಧಎಕರೆ ಪ್ರದೇಶಕ್ಕೆ ಅವರು ಎಂಟು ಚೀಲ (ಚೀಲಕ್ಕೆ 60 ಕೇಜಿ) ಬಿತ್ತನೆ ಬೀಜ ಬಳಸಿದ್ದರು. ಕೊಯ್ಲು ಮಾಡಿದಾಗ 220 ಚೀಲ ಶುಂಠಿ ಇಳುವರಿ ಬಂತು. ಸಾವಯವದಲ್ಲಿ ಬೆಳೆದ ಶುಂಠಿಯ ಪರಿಮಳಕ್ಕೆ ದಲ್ಲಾಳಿಗಳು ಮಾರುಹೋದರು. ಮಾರುಕಟ್ಟೆಯಲ್ಲಿ 60 ಕೇಜಿಯ ಒಂದು ಚೀಲಕ್ಕೆ 950 ರೂ ಬೆಲೆ ಇದ್ದರೆ ಸಂಜೀವ್ ಬೆಳೆದ ಶುಂಠಿಯನ್ನು 1100 ರೂ.ಗಳಿಗೆ ಖರೀದಿಸಿದರು. ಶುಂಠಿಯಿಂದ ಬಂದ ಆದಾಯ ಸಂಜೀವ್ ಅವರಲ್ಲಿ ಮಂದಹಾಸ ಮೂಡಿಸಿತು.
ಇನ್ನು ಮುಂದೆಯೂ ಸಾವಯವ ಪದ್ಧತಿ ಅನುಸರಿಸಿ ಶುಂಠಿ ಮತ್ತಿತರ ಬೆಳೆಗಳನ್ನು ಬೆಳೆಯುತ್ತೇನೆ ಎನ್ನುವ ಸಂಜೀವ್ ಈ ಪದ್ಧತಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು ಎನ್ನುತ್ತಾರೆ. ಆಸಕ್ತ ರೈತರು ಸಂಜೀವ್‌ಕುಮಾರ್ ಅವರನ್ನು ಸಂಪರ್ಕಿಸಬಹುದು ಅವರ ಮೊಬೈಲ್ ನಂಬರ್-98867 21387