Wednesday, January 13, 2010

ದಾರಂದ (ಕಥೆ)

ಮಂಜುನಾಥ್ ಗೀತಾ

ಕತೆಗಳಲ್ಲಿ ಕಾಣಬರುವ ಊರುಗಳಿಗೆ ಹೆಸರು ಇರಲೇಬೇಕೆಂದೇನೂ ಇಲ್ಲ. ನಮ್ಮದೇ ನಿಮ್ಮದೇ ಯಾರದೇ ಊರಾಗಬಹುದು. ಇಲ್ಲಿ ಕಂಡು ಬರುವ ಊರು ಮತ್ತು ಮುದುಕಿಯ ಹೆಸರು ಕುರಿತಾದರೂ ಹೀಗೆಯೇ. ಅವಳನ್ನು ಮುದುಕಿ ಅಂದರೆ ಸಾಕು. ಯಾಕೆಂದರೆ ಈಗ ಅವಳಲ್ಲಿ ಮುದುಕಿ ಅನ್ನಿಸಿಕೊಳ್ಳುವ ಎಲ್ಲಾ ಲಕ್ಷಣಗಳೂ ಇವೆ. ಮೊದಲಿದ್ದ ಎಲ್ಲಾ ಹಲ್ಲುಗಳ ಪ್ರಾತಿನಿಧ್ಯ ವಹಿಸಿಕೊಂಡು ಉಳಿದಿರುವ ಎರಡು ಹಲ್ಲುಗಳು ಬಾಯೊಳಗೆಲ್ಲೋ ಅಲ್ಲಾಡುತ್ತಾ ಇವೆ. ಸುಕ್ಕು ಇಡೀ ದೇಹವನ್ನು ಹಬ್ಬಿ ತಬ್ಬಿ ಸಣ್ಣಗೆ ನಡುಗು ವಂತೆ ಮಾಡಿದೆ. ಹಾಗೆಂದು ಅವಳ ತಿರು ಗಾಟಕ್ಕೋ ಇನ್ನಾವುದೇ ಆಧಾರಕ್ಕೋ ಸದ್ಯಕ್ಕೆ ಕೋಲೇನೂ ಬೇಕಾಗಿಲ್ಲ. ಬೆನ್ನು ಬಾಗಿದೆ. ಕಣ್ಣು ಇನ್ನೂ ಸಾಧ್ಯವಾದಷ್ಟು ಚೆನ್ನಾಗಿ ನೋಡಲು ಪ್ರಯತ್ನಿಸುತ್ತಿವೆ. ತಲೆಯ ಅಷ್ಟು ದಟ್ಟ ಕೂದಲು ಗಳಲ್ಲಿ ಒಂದಾದರೂ ತನ್ನ ಮೂಲವರ್ಣ ಉಳಿಸಿ ಕೊಳ್ಳಲು ಸಾಧ್ಯವಾಗಿಲ್ಲ. ಇವೆಲ್ಲವುಗಳ ಆಧಾರದ ಮೇಲೆ ಆ ಮುದುಕಿಯ ವಯಸ್ಸು ಅರವತ್ತೈದರ ಮೇಲಾಗಿರುವುದನ್ನು ಯಾರಾದರೂ ಕಂಡು ಹಿಡಿಯಬಹುದು.

ಅವಳಿಗೆ ಸದ್ಯಕ್ಕೆ ಚಿರಾಸ್ತಿ ಎಂದು ಇರುವುದು ಹಾಲಿ ಸತ್ತುಹೋಗಿರುವ ಅವಳ ಗಂಡ ಬಿಟ್ಟು ಹೋದ ಒಂದು ಮನೆ. ಅದನ್ನು ಹಟ್ಟಿ, ಗುಡಿಸಲು, ಷೆಡ್ಡು, ಗೂಡು ಅಂತ ಯಾವ ಹೆಸರಿನಿಂದಾದರೂ ಕರೆಯಿರಿ. ಅದರ ಆಕೃತಿಗೆ ಮೋಸ ಮಾಡಿದಂತಾ ಗುವುದಿಲ್ಲ. ಅದರೊಳಗೆ ಪ್ರಯಾಸಪಟ್ಟು ಮೂರು ಜನ ಮಲಗಬಹುದು. ಆದರೆ ಇರುವಷ್ಟುದ್ದದ ಕಾಲನ್ನು ಆರಾಮವಾಗಿ ಚಾಚುವಂತಿಲ್ಲ. ಹಾಗೂ ನಿಂತರೆ ಕೈಮೇಲೆತ್ತುವಂತಿಲ್ಲ. ಅವಳನ್ನೂ ಸೇರಿಸಿ ಅಲ್ಲಿರುವ ಸುತ್ತಮುತ್ತಲಿನವರಿಗೆ ತಿಳಿದು ಬಂದಂತೆ ಅವಳ ಆಸ್ತಿಯೆನ್ನುವುದು ಅದೊಂದೇ.

ಕತೆಯ ಮುಂದಿನ ಭಾಗವೆನ್ನುವುದೇನಿದೆಯೋ ಅದರಲ್ಲಿ ಸ್ವಲ್ಪ ಭಾಗವನ್ನು ಅವಳ ಹಿಂದಿನ ಕತೆಯನ್ನು ಹೇಳುವುದಕ್ಕೆ ಬಳಸಿಕೊಳ್ಳುವುದಾದರೆ ಅದು ಹೀಗೆ ಪ್ರಾರಂಭವಾಗುತ್ತದೆ.

ಮದುವೆಯಾಗಿ ಈ ಊರ ಈ ಹಟ್ಟಿಯ ಹೊಸ್ತಿಲು ತುಳಿದಂದಿನಿಂದಲೂ ಅನಾಥವಾಗಿದ್ದ ಅವಳ ಗಂಡನೆಂಬ ಪಾರ್ಟಿನ ಆಸಾಮಿ ದುಡಿದು ತಂದು ಹಾಕಿದ್ದು ಅವಳು ಬೇಯಿಸಿ ಹಾಕಿದ್ದು ಎಂಬುದೇನೂ ಹೇಳಿಕೊಳ್ಳುವಷ್ಟು ದಿನಗಳಲ್ಲಿ ನಡೆದಿಲ್ಲ. ಅವನದೊಂದು ಸಾಧನೆಯೆಂದರೆ ಬೆಳಿಗ್ಗೆಯಿಂದ ಸಂಜೆಯ ತನಕ ದಿನವೊಂದಕ್ಕೆ ಹತ್ತು ಸಾರಾಯಿ ಪಾಕೀಟಾದರೂ ಕುಡಿಯುತ್ತಿದ್ದುದ್ದು. ಯಾರಾದರೂ ಬಾಜಿ ಕಟ್ಟಿದಲ್ಲಿ ಹದಿನೈದಾದರೂ ಸೈ. ತನ್ನ ಸಂಸಾರಕ್ಕಲ್ಲದಿದ್ದರೂ ತನ್ನ ನಿತ್ಯದ ಪಾಕೀಟುಗಳಲ್ಲಿ ಎರಡು ಮೂರುಗಳಿಗಾದರೂ ಸಂಜೆ ತುಂಬುವ ತನಕ ಯಾರ ಕೈಕಾಲಾದರೂ ಹಿಡಿದು ಎಂಥದ್ದಾದರೂ ಮಾಡಿ ಸಂಪಾದಿಸಿ ಬಿಡುತ್ತಿದ್ದ. ಅವಳನ್ನು ಲಗ್ನಗೈದು ಗಂಡನೊಡನೆ ಅಟ್ಟಿದ್ದೇ ಅವಳಪ್ಪನ ಮನೆಯವರು ತಮ್ಮ ಋಣ ತೀರಿತು ಎಂದುಕೊಂಡು ಏನು ಎತ್ತ ಅನ್ನುವುದನ್ನೂ ತೀರಿಸಿ ಇತ್ತ ಮುಖ ಹಾಕಲಿಲ್ಲ.

ಇವಳೂ ತನ್ನ ಕುಡುಕ ಪರಮಾತ್ಮನಾದ ಪತಿಯು ಇಂದು ಸರಿಯಾಗಬಹುದು ನಾಳೆ ಸರಿಹೋಗ ಬಹುದು ಅಂದೆಲ್ಲ ಯೋಚಿಸಿ ಕಾದು ಏನೂ ಪ್ರಯೋಜನವಾಗದೆ ಸಾರಾಯಿಯಲ್ಲಿಯೇ ತನ್ನ ನಿತ್ಯ ಬದುಕನ್ನು ಮುಳುಗಿಸುತ್ತಿರುವ ಅವನನ್ನು ಅನೇಕ ಬಗೆಯಲ್ಲಿ ಗೋಗರೆದು, ಬೇಡಿಕೊಂಡು ಕಿಚ್ಚು ಹೆಚ್ಚಿ ಬೈದು ಉಗಿದು ಅತ್ತು ಕರೆದು ಕೊನೆಗೆ ಅವನ ಮುಂದಲೆ ಹಿಡಿದು ಎಳೆದಾಡಿದರೂ ಅವನು ತನ್ನ ವರಸೆ ಬದಲಿಸಲಿಲ್ಲ. ಇನ್ನು ಏನೇ ಹೇಗೇ ಮಾಡಿದರೂ ಇವನು ತನ್ನ ಬಾಳಿಗೆ ನೆಮ್ಮದಿ ತರಲಾರನೆಂದು ತಿಳಿದುಕೊಂಡವಳೇ ಮುಂದಕ್ಕೆ ತನ್ನ ಹೊಟ್ಟೆಪಾಡಿನ ದಾರಿಯನ್ನು ತಾನೇ ಕಂಡುಕೊಳ್ಳಲು ಯತ್ನಿಸಿದಳು.

ಆ ಸುತ್ತಲ ಜನರಲ್ಲಿ ಕೆಲವರು ತಮ್ಮ ಮನೆ ಮುಂದೆ ಹಿತ್ತಲುಗಳಲ್ಲಿ ಬದನೆ, ಬೆಂಡೆ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಇನ್ನೂ ಏನೇನೋ ಮನೆ ಬಳಕೆಯ ತರಕಾರಿ ಸೊಪ್ಪುಗಳನ್ನು ಬೆಳೆಯು ತ್ತಿದ್ದುದು ಸರಿಯಷ್ಟೆ. ಅವನ್ನು ಕೆ.ಜಿ.ಗೆ ಇಂತಿಷ್ಟು ಅಂತ ಮಾತಾಡಿ ಕುಯ್ದು ಕುಕ್ಕೆಗೆ ತುಂಬಿಕೊಂಡು ಸುತ್ತಮುತ್ತಲ ಸಣ್ಣಪುಟ್ಟ ಹಳ್ಳಿ ಊರುಗಳಲ್ಲಿ ಹೊತ್ತು ಮಧ್ಯಾಹ್ನದವರೆಗೆ ಕೂಗಿಕೊಂಡು ಮಾರಿ ಬಂದು ಮೊದಲೇ ಮಾತಾಡಿದಷ್ಟು ಅವರಿಗೆ ಕೊಟ್ಟು ಮೇಲೆ ಬಂದ ಲಾಭವಾ ಇಪ್ಪತ್ತೋ ಇಪ್ಪತ್ತೈದೋ ರೂಪಾಯಿಗಳನ್ನು ತನ್ನ ನಿತ್ಯ ಹೊಟ್ಟೆಪಾಡಿಗೆ ಮಾಡಿಕೊಳ್ಳುವುದನ್ನು ಕಂಡುಕೊಂಡಳು. ಹಗಲು ಪೂರಾ ಊರೊಳಗೆಲ್ಲೋ ಇದ್ದು ಬಿದ್ದು ಕುಡಿದು ವಾಲಾಡಿ ಸಂಜೆ ತುಂಬಿಸಿ ಬರುವ ಗಂಡನೆಂಬವ ನಿಗೂ ಒಂದು ಮುದ್ದೆ ಇಕ್ಕುತ್ತಿದ್ದಳು. ಆ ಗಂಡ ಅವಳಿಗೇನೂ ಮಾಡುವುದು ಬೇಕಿರಲಿಲ್ಲ. ತಾವಿರುವ ಗುಡಿಸಲಿಗೆ ಭದ್ರವಾದ ಮರದ ದಾರಂದವೊಂದನ್ನು ಮಾಡಿಸಿದ್ದರೆ ಸಾಕಾಗಿತ್ತು. ಆ ಗುಡಿಸಲು ಸೃಷ್ಟಿಯಾದ ಕಾಲದಿಂದಲೂ ತೆಂಗಿನ ಗರಿ ನೇಯ್ದು ಮಾಡಿಕೊಂಡ ದಾರಂದದಾಕಾರದ ನೆರಕೆಗೇ ಹಗ್ಗದ ಹುರಿ ಕಟ್ಟಿಕೊಂಡು ಬಾಗಿಲು ಅಂತನ್ನುವ ಒಳಕ್ಕೆ ಹೋಗುವ ಇಷ್ಟಗಲ ಜಾಗಕ್ಕೆ ಅದನ್ನು ಅಡ್ಡಲಾಗಿ ನಿಲ್ಲಿಸಿಕೊಂಡು ಬಹಳ ದಿನಗಳ ತನಕ ಬಾಳಿದ್ದಾಯಿತು. ಆ ನೆರಕೆ ಬದಲಾಗಲಿಲ್ಲ. ಆ ನೆರಕೆ ಕಿತ್ತು ಹಾಕಿ ಅಲ್ಲಿಗೊಂದು ದಾರಂದ ನಿಲ್ಲಿಸಬೇಕು ಅನ್ನಿಸುವಷ್ಟು ಗಂಡನೂ ಬದಲಾಗಲಿಲ್ಲ.

ಯಥಾ ಪ್ರಕಾರವಾಗಿ ಅವಳ ಗಂಡ ಕುಡಿದು ಕುಡಿದು ಸತ್ತ ಅನ್ನುವಾಗ ಅವಳು ಏಳು ತಿಂಗಳ ಬಸುರಿ. ಅಪ್ಪನ ಮನೆಯ ಜನ ಬಂದು ಮನೆ ತುಂಬಿಸಲು ಕರೆದುಕೊಂಡು ಹೋಗುತ್ತಾರೆನ್ನುವ ಅವಳ ಆಸೆ ಆಸೆಯಾಗಿಯೇ ಸತ್ತು ಹೋಯಿತು. ಅವಳಿಗೂ ಗೊತ್ತು ಅಪ್ಪನ ಮನೆಯಲ್ಲಿ ಮೈನೆರೆದು ಮದುವೆಯಾಗದೆ ನಿಂತ ಮೂರು ಜನ ತಂಗಿಯರು ಲಕ್ವಾ ಹೊಡೆದು ತೆವಳುವ ಅವ್ವ ನಾಕು ದಿನ ಕೂಲಿ ಇದ್ದರೆ ಮೂರು ದಿನ ಇಲ್ಲದೆ ಹಟ್ಟಿಯ ಮುಂದೆ ಆಕಾಶ ನೋಡುತ್ತಾ ಕೂರುವ ಅಪ್ಪ. ಬಾಣಂತಿಯೆಂದು ಅವಳು ಹಟ್ಟಿಯೊಳಗೆ ಕುಂತಿದ್ದು ಒಂದೇ ತಿಂಗಳು.

ಹುಟ್ಟಿದ ಮಗನಾದರೂ ಬೆಳೆ ಬೆಳೆಯುತ್ತಾ ಒಳ್ಳೆ ಬುದ್ದಿ ಕಲಿಯುತ್ತಾನೆಂದುಕೊಂಡರೆ ಅವನೂ ನೆಟ್ಟಗಾಗಲಿಲ್ಲ. ಅಪ್ಪನೇ ಮೇಲೆ ಬಂದು ಮೈದುಂಬಿ ಕೊಂಡವನಂತೆ ಹದಿನಾರು ವರ್ಷಕ್ಕೇ ಅಪ್ಪ ಕಲಿತಿದ್ದ ಎಲ್ಲಾ ಕಲೆಗಳನ್ನೂ ಅಪ್ಪನಿಗಿಂತ ಚೆನ್ನಾಗಿಯೇ ಕಲಿತುಕೊಂಡಿದ್ದ. ಬೀದಿಯ ಹೈಕಳೊಂದಿಗೆ ಸೇರಿ ಶಾಲೆಯ ಮೆಟ್ಟಿಲು ಹತ್ತಿದಷ್ಟೇ ಸರಾಗವಾಗಿ ಇಳಿದುಬಂದ. ಅವನು ಪ್ರಾಯಕ್ಕೆ ಬಂದು ದುಡಿದು ತಂದು ಕೈಗೆ ಹಾಕುವುದಿರಲಿ ತಾನು ಅಷ್ಟು ಇಷ್ಟು ಉಳಿಸಿದ ಪುಡಿಗಾಸನ್ನಾದರೂ ಅದರ ಪಾಡಿಗೆ ಇಟ್ಟಿದ್ದರೆ ಚೆನ್ನಾಗಿತ್ತು ಅಂತ ಅವಳಿಗೆ ಅನಿಸುವಷ್ಟರ ಮಟ್ಟಿಗೆ ಆದ.

ಮಗನಿಗೆ ಪ್ರಾಯ ತುಂಬುತ್ತಾ ಬಂತು ಅನ್ನುವಾಗ ಅವನ ಕುಡಿತ ಜೂಜಿನ ಖಯಾಲಿಗಳು ಹೆಚ್ಚುತ್ತಾ ಹೋದಂತೆ ಅವನಿಗೊಂದು ಹೆಣ್ಣು ತಂದು ಮದುವೆ ಮಾಡಿದರೆ ಆತ ದಾರಿ ಹತ್ತಬಹುದು ಅಂತ ನಾಕಾರು ಜನಗಳ ಮೇಲೆ ಅಂದಾಜಿಸಿ ಕಂಡು ಕೇಳಿದ ಜನರ ಕೋರಿಕೊಂಡು ಅವರ ಜೊತೆ ಮಾಡಿಕೊಂಡು ಊರು ಕೇರಿ ಸುತ್ತಾಡಿ ಹೆಣ್ಣು ಪತ್ತೆ ಮಾಡಿ ತಾನು ಗಂಟು ಮಾಡಿ ಮಡಗಿದ್ದ ಕ್ಕೊಂದಷ್ಟು ಸಾಲ ಮಾಡಿ ಲಗ್ನ ಮಾಡಿದಳು. ಆ ಮೂದೇವಿ ಮಗ ಮದುವೆಯಾದ ಸಂಭ್ರಮಕ್ಕೋ ಏನೋ ಅನ್ನುವಂತೆ ಇಷ್ಟು ದಿನಗಳಿಗಿಂತ ಇನ್ನೂ ಮೂರು ಪಾಕೀಟು ಜಾಸ್ತಿ ಸೇರಿಸಿ ಏರಿಸಿ ಹಟ್ಟಿ ಮುಂದಿನ ಅಂಗಳದಲ್ಲಿ ಕಾಲು ಚಾಚಿಕುಂತು ವಾಂತಿ ಶುರು ಮಾಡಿದಾಗ ತನ್ನ ಮಗನಿನ್ನೂ ಯಾವ ವಿಧವಾದ ವಿಧಾನ ಬಳಸಿದರೂ ನೆಟ್ಟಗಾಗುವದಿಲ್ಲ ವೆನ್ನುವುದು ಅವಳಿಗೆ ಖಾತರಿಯಾಯಿತು. ಅವನ ಹೆಂಡತಿ ಎನ್ನುವ ಆ ಹೆಣ್ಣು ಅವನ ಗಬ್ಬು ಬಾಯಿಗೆ ವಾಕರಿಕೆ ಉಮ್ಮಳಿಸಿ ಅವನ ಮಗ್ಗುಲನ್ನೇ ತೊರೆ ಯಿತು. ಹೆಣ್ಣ ಮಗ್ಗುಲ ಚಿಂತೆಯೇನೂ ಅವನಿಗೆ ಅಷ್ಟಾಗಿ ಬಾಧಿಸದೆ ಪಾಕೀಟು ಚೀಪುವುದರಲ್ಲಿಯೇ ಸ್ವರ್ಗಸುಖ ಕಾಣುತ್ತಿದ್ದ ಅವನ ಸ್ಥಿತಿ ಇಂದು ನಾಳೆ ನಾಳಿದ್ದು ಸುಧಾರಿಸುವುದೆಂದೂ ನೀನು ಒಂದಷ್ಟು ದಿನ ಸೈರಿಸಿಕೊಂಡು ಹೋಗಬೇಕೆಂದೂ ನಾಳೆಗಳ ಮೇಲೆ ನಾಳೆಗಳ ಕಳೆದೂ ಕಳಿಕೊಳ್ಳುತ್ತಿದ್ದ ಅತ್ತೆಯ ಯಾವ ಗೋಗರೆತವನ್ನೂ ಕಿವಿಗೆ ಇಟ್ಟುಕೊಳ್ಳದೆ ಸೊಸೆ ತನ್ನೆಲ್ಲ ಬಟ್ಟೆಗಳ ಬ್ಯಾಗು ಹಿಡಿದು ಅಪ್ಪನ ಹಾದಿ ಹಿಡಿದು ಹೋದಳು.

ತನ್ನ ಗಂಡನ ಆಸೆ ಅವ ಸತ್ತಾಗಲೇ ಸಾಯಿತು. ಮಗನ ಆಸೆ ಇವ ಬದುಕಿರುವಾಗಲೇ ಸತ್ತು ಗಾಳಿಯಾಗಿ ಕಾಡುತ್ತಿದೆ. ಇವನ ಮೇಲೆ ಅವಳಿಗೆ ಇನ್ನಾವ ಆಸೆಯೂ ಉಳಿದಿಲ್ಲ. ಅವಳಿಗೆ ತನ್ನೊಳಗೆ ಈಗ ಉಳಿದುಕೊಂಡಿರುವ ಆಸೆಯೊಂದೇ. ಅದು ತಾನು ಬಾಳಿದ ಈ ಹಟ್ಟಿಗೆ ಒಂದು ಮರದ ದಾರಂದ ಮಾಡಿಸಿ ನಿಲ್ಲಿಸುವುದು. ಗಂಡನ ಮನೆಗೆ ಮೊದಲ ದಿನ ಕಾಲಿಟ್ಟಾಗಲೇ ಅವಳು ಆ ದಾರಂದದ ಬಗ್ಗೆಯೇ ಯೋಚಿಸಿದ್ದಳು. ಈಗ ಅದೊಂದು ಪೂರೈಸಿದರೆ ತನಗೆ ಈ ಹಟ್ಟಿ ಋಣ ಇಳಿದಂತೆ. ಆಮೇಲೆ ಈ ಪಾಪಿ ಮುಂಡೆ ಮಗ ಏನಾದರೂ ಮಾಡಿಕೊಂಡು ಹೋಗಲಿ ತಾನು ನೋಡುವುದಕ್ಕೆ ತನಗೆ ಇನ್ನೆಷ್ಟು ಕಾಲವಿದೆ?

ಹಾಗೆ ಆ ಕಾಲದಿಂದಲೂ ಅಂದಂದುಕೊಂಡೇ ಈಗ ಕತೆಯ ಮೊದಲಿಗೆ ಕಾಣಿಸಿದ ಸ್ಥಿತಿಗೆ ಬಂದು ನಿಂತಿದ್ದಾಳೆ. ಮಗ ಕುಡಿದು ಕುಡಿದು ಅವನ ಅಪ್ಪ ಸಾಯುವ ಕ್ಷಣಗಳಲ್ಲಿದ್ದ ಅವತಾರವನ್ನು ತಲುಪಿದ್ದಾನೆ. ಅವನನ್ನು ನೋಡಿದರ ಅವಳ ಕರುಳಿಗೆ ಕೊಳ್ಳಿ ತಿವಿದಂತಾಗುತ್ತದೆ. ಏನೇ ಆದರೂ ತನ್ನ ಹೊಟ್ಟೆ ಯಿಂದ ಬಿದ್ದವನು. ಎಷ್ಟೋ ಸಲ ಬೆಳಗ್ಗೆಯಿಂದಲೂ ಹೊಟ್ಟೆಗಿಲ್ಲದ ಬರಿ ಸಾರಾಯಿ ಕುಡಿದೇ ಬಚ್ಚಲ ಬದಿ, ಬೀದಿ, ಗಲ್ಲಿ ಸಂದಿಯಲ್ಲೆಲ್ಲ ಬಿದ್ದಿದ್ದವನನ್ನು ಅವರಿವರ ಸಹಾಯದಿಂದ ಹಟ್ಟಿಗಳೆದುಕೊಂಡು ಬಂದು ಮೈ ತೊಳೆದು ಉಣ್ಣಲಿಕ್ಕೆ ಕೊಟ್ಟು ಕಣ್ಣೀರು ತೊಟ್ಟಿಸುತ್ತ ಶೋಕಾಡಿದೆ ಮುದುಕಿ. ತಾನು ವ್ಯಾಪಾರಕ್ಕೆ ಹೋದಾಗ ಹಟ್ಟಿಯ ನೆರಕೆ ಬಿಚ್ಚಿ ಹಟ್ಟಿಯ ಮೂಲೆ ಸಂದಿಗೊಂದಿ, ಗೂಡು ಮಾಡುಗಳನ್ನೆಲ್ಲ ಸೋಸಿ ಕೊಂಡು ಹೋಗಿ ಕುಡಿದು ಬಂದು ಬೀದಿಯಲ್ಲಿ ವಾಲಾಡುವಾಗ ಅವನ ಬುರುಡೆ ಒಡೆದು ಸಾಯಿ ಸುವಷ್ಟು ಸಿಟ್ಟು ಬಂದು ನೆಟಿಕೆ ಮುರಿದು ಬಗೆ ಬಗೆಯಾಗಿ ಶಪಿಸಿ ಸಾಕಾಗಿದೆ ಅದಕೆ. ಅವನ ಕಳ್ಳತನ ಕಂಡುಕೊಂಡ ಮೇಲೆ ತನ್ನ ಹಣವನ್ನು ಅವಳು ತನ್ನ ಹಟ್ಟಿಯಲ್ಲಿ ಇಟ್ಟಿಲ್ಲ. ಪಕ್ಕದ ಮನೆ ಕೆಂಪೀರಿಗೆ ಕೊಟ್ಟು ಮಡಗಿಸಿದ್ದಾಳೆ. ಅದು ಮುನ್ನೂರು ರೂಪಾಯಿಯೇನೋ ಇರಬಹುದು. ತನ್ನೊಬ್ಬಳ ದಿನ ನಿತ್ಯದ ಹೊಟ್ಟೆಪಾಡಿನ ಖರ್ಚಿನ ಬಾಬ್ತು ಚಿಲ್ಲರೆಯಲ್ಲ ಅವಳ ಸೀರೆ ನೆರಿಗೆಯಲ್ಲಿ ತುರುಕಿಕೊಂಡು ಅಡಿಕೆ ಎಲೆ ಚೀಲದಲ್ಲಿದೆ.

ಇಷ್ಟು ವಯಸ್ಸಾಗಿದ್ದರೂ ತನ್ನ ವ್ಯಾಪಾರ ನಿಲ್ಲಿಸಲು ಅವಳಿಂದ ಆಗಿಲ್ಲ. ಆದರೆ ಮೊದಲಿನಂತೆ ಊರೂರು ತಿರುಗುವುದೂ ಆಗುವುದಿಲ್ಲ. ತನ್ನ ಹಟ್ಟಿಯ ಮುಂದೆಯೇ ಚಿಕ್ಕದೊಂದು ಹಾಳೆ ಸೋಗಿನ ನೆರಳು ಮಾಡಿಕೊಂಡು ಕೆಳಗೆರಡು ಗೋಣಿಚೀಲ ಹಾಸಿ ಗುಡ್ಡೆ ಹಾಕಿಕೊಂಡು ತರಕಾರಿ ಮಾರುತ್ತಾಳೆ. ಸೀಬೆಹಣ್ಣು, ಬೇರಿಕಾಯಿ, ಎಲಚಿ ಹಣ್ಣು ಅಂತ ಆಯಾಯ ಋತುಮಾನಗಳಿಗೆ ತಕ್ಕ ಎಲ್ಲವೂ ಅವಳ ಮಿನಿ ಹಣ್ಣು ಮತ್ತು ತರಕಾರಿ ಅಂಗಡಿಯಲ್ಲಿ ಲಭ್ಯ.

ಇನ್ನು ಅವಳಿಂದ ತಡಮಾಡುವುದು ಸಾಧ್ಯವಾಗುತ್ತಿಲ್ಲ. ಈಗೀಗ ಹಟ್ಟಿಯಲ್ಲಿ ಕಾಸು ಸಿಕ್ಕುವುದಿಲ್ಲವೆನ್ನುವುದು ಗೊತ್ತಾದ ಮೇಲೆ ಒಳಗೆ ಇಟ್ಟ ಬೋಸಿ, ತಪ್ಪಲೆ, ತಣಿಗೆಗಳನ್ನೇ ಎತ್ತಿಕೊಂಡು ಮಾರಲು ಶುರುಮಾಡಿದ್ದಾನೆ. ಮೊನ್ನೆ ಹಳೆಕಾಲದ್ದೊಂದು ಕಂಚಿನ ತಪ್ಪಲೆಯನ್ನು ಪಂಚೆಯೊಳಗೆ ಮರೆಮಾಡಿಕೊಂಡು ಹಟ್ಟಿಯಿಂದ ಈಚೆಗೆ ಮೆಲ್ಲಗೆ ಬರುವಾಗ ಅವಳು ಬಂದು ಬಿಟ್ಟಿದ್ದಳು. ‘ನಿನ್ ಕೈ ಸೇದ್ವಾಗ! ಇನ್ನೂ ನನ್ ಹೊಟ್ಟ ಉರಿಸ್ತಿದ್ದಯಲ್ಲ ನಿನಗ್ ಸಾವು ಬರವ್ನ!’ ಅಂತ ಕೆನ್ನೆಗೆ ತಿವಿದು ತಪ್ಪಲೆ ಕಿತ್ತುಕೊಳ್ಲು ಬಂದವಳನ್ನು ತಳ್ಳಿ ಕೆಳಕ್ಕೆ ಬೀಳಿಸಿ ‘ನನ್ ತಂಟುಗ್ ಬಂದ್ರ ಮೆಟ್ರ ಚಿಮುಕ್ ಬುಡ್ತಿನಿ’ ಅಂದುಬಿದ್ದು ಗೋಳಾಡುತ್ತಿದ್ದವಳನು ತಿರುಗಿಯೂ ನೋಡದೆ ವಾಲಾಡುತ್ತ ಹೋಗಿಬಿಟ್ಟಿದ್ದ. ತನ್ನ ಹಟ್ಟಿಗೊಂದು ಭದ್ರವಾದ ದಾರಂದ ಮಾಡಿಸಿ ಬಂದೋಬಸ್ತು ಮಾಡಿಕೊಳ್ಳಬೇಕೆಂದು ಅವಳು ಬಯಸುತ್ತಿರುವುದಕ್ಕೆ ಮಗನ ಈ ಬಗೆಯ ಪ್ರಕರಣಗಳೂ ಕಾರಣವಿರಬಹುದೆಂದು ಊಹಿಸಬಹುದು.

ತಾನು ಬದುಕಿರುವ ತನಕವಾದರೂ ಹಿಟ್ಟುಸೊಪ್ಪು ಬೇಯಿಸಿಕೊಂಡು ಬದುಕುವುದಕ್ಕಾದರೂ ಈಗ ಏನಾದರೂ ಸರಿ ದಾರಂದವೊಂದನ್ನು ಮಾಡಿಸಿ ಬೀಗ ಹಾಕಿಕೊಂಡರೆ ಅವನ ಕೋಟಲೆ ನಿಲ್ಲಬಹುದು ಅಂತ ಚಿಂತಿಸತೊಡಗಿದಳು. ತಾನು ಬದುಕುವ ಕಾಲದ ಯೋಚನೆ ತಲೆಗೆ ಬಂದುದೇ ತಡ ತಾನು ಈ ದಾರಂದ ‘ಮಾಡಿಸಬೇಕು ಮಾಡಿಸಬೇಕು’ ಅನ್ನುವ ಚಿಂತೆಯಲ್ಲಿಯೇ ಸತ್ತರೆ ಸ್ವರ್ಗಕ್ಕೂ ಹೋಗದೆ ನರಕಕ್ಕೂ ಹೋಗದೆ ಅಂತರ ಪಿಶಾಚಿಯಾಗಿ ಈ ಹಟ್ಟಿಯ ಸುತ್ತಲೇ ಸುತ್ತಬೇಕಾಗುವುದೆಂದು ಅನಿಸಿ ಅಂಜಿಕೆ ಶುರುವಾಗಿ ಏನಾದರಾಗಲೀ ದಾರಂದದ ಕೆಲಸವೊಂದು ಆಗಿಯೇ ಹೋಗಲಿ ಅಂತ ತೀರ್ಮಾನಿಸಿಕೊಂಡು ಆಚಾರಿ ಲಾಲಿಂಗಪ್ಪನ ಮನೆಗೆ ಹೊರಟು ನಿಂತಳು.

‘ಮರದ ದುಡ್ಡು ಕೂಲಿ ಎಲ್ಲಾ ಸೇರಿ ಏಳ್ನೂರ್ ರೂಪಾಯಿ ಆಯ್ತದಕಾ ಮುದ್ಕಿ’ ಅಂತ ಲಾಲಿಂಗಪ್ಪ ಅಂದಾಗ ಅವಳ ದೊಡ್ಡ ಉಸಿರು ಹೊದಂತಾ ಯಿತು. ಅಷ್ಟು ದುಡ್ಡನ್ನು ಸೇರಿಸಬೇಕೆಂದರೆ ಸುಮಾರು ವರ್ಷಗಳೇ ಆಗಬಹುದು. ಅಲ್ಲಿತನಕ ತಾನು ಬದುಕುವುದುಂಟಾ? ಅಂತ ಉಸಿರುಯ್ದುಕೊಂಡು ‘ಅದಿಕಿಂತ ಕಮ್ಮಿ ಆಗಲ್ವ ಅಳಿ’ ಅಂದಳು ಆಸೆಯಿಂದ.

‘ಅಗಲ್ಲಕಮ್ಮ ಅಗಕ್ಕಮ್ಮಿ ಆಗಲ್ಲ’

‘ಯಾವ್ದಾದ್ರೂ ಹಳೆಮರ ಹಲ್ಗ ಇದ್ರ ನೋಡಿ ಮಾಡ್ಕೊಡಿ..ನಂತಾವು ಇರೋದಿನ್ನೂರು ರೂಪಾಯಿ..ನಾನೂ ಬಡವಿ ಯೆಂಗೇಯೋ ಬದಿಕತ್ತಿನಿ ನಿಮ್ ದಮ್ಮಯ್ಯ...’

‘ಅಷ್ಟುಕ ಯಾವ್ ಮರವೂ ಬರಲ್ಲಕಾ ಮುದ್ಕಿ ಸುಮ್ನ ನಿಂಗೂ ಚಪ್ಲ! ಅದೇ ದುಡ್ಗ ಬಿದಿರ್ ತಡ್ಕ ಬತ್ತದ ತಂದ್ ನಿಲ್ಲುಸ್ಕ’ ಅಂತ ಲಾಲಿಂಗಪ್ಪನು ಸುಲಭವಾದ ಮಾರ್ಗವೊಂದನ್ನು ಹೇಳಿಕೊಟ್ಟನು.

ಆ ಬಿದಿರು ತಡಿಕೆಗೂ ಚಿಲಕ ಮಾಡಿಸಿ ಬೀಗ ಹಾಕಿಟ್ಟುಕೊಳ್ಳಬಹುದೆಂಬುದ್ನು ಲಾಲಿಂಗಪ್ಪನವರಿಂದ ಎರಡು ಸಲ ಕೇಳಿ ಖಾತರಿಪಡಿಸಿಕೊಂಡು ‘ಮರದ ದಾರಂದನಂತೂ ಮಾಡ್ಸಕ ನನ್ನ ಹಣೇಲಿ ಬರ‍್ದಿಲ್ಲ ಇದನ್ನಾದ್ರೂ ಮಾಡ್ಸಂವು’ ಅಂತ ಮುದುಕಿ ನಿಟ್ಟುಸಿರೊಂದಿಗೆ ತೀರ್ಮಾನಿಸಿಕೊಂಡು ಮೆತ್ತ ಮೆತ್ತಗೆ ಹಟ್ಟಿ ಸೇರಿಕೊಂಡಳು.

ಮೂರು ದಿನ ಕಳೆದರೆ ಗೋನಳ್ಳಿ ಸಂತೆ. ಬಿದಿರು ತಡಿಕೆ ತರಲು ಹೋಗುವುದು ತನ್ನಿಂದಾಗದು. ಮಗನ ಕೈಗೆ ದುಡ್ಡು ಹಾಕಿ ತರುತ್ತಾನೆಂದುಕೊಂಡು ಕುಂತರೆ ತಾನು ಸತ್ತಾಗಲೇ ಅವ ಬರುವುದು.

ಕೊನೆಗೆ ಕೆಂಪೀರಿಯ ಮಗ ಮಾರನ ಕೈಲಿ ತಡಿಕೆಗೆ ಮತ್ತು ಅದಕ್ಕೊಂದು ಬೀಗಕ್ಕೆ ಹಣಕೊಟ್ಟು ಕಳಿಸಿದಳು. ಅಂತಹವುಗಳಲ್ಲೆಲ್ಲ ಮಾರ ಚೆನ್ನಾಗಿ ಪಳಗಿದವನು. ದಾರ ತಂದು ಬಾಗಿಲ ಅಳತೆ ಹಿಡಿದುಕೊಂಡು ಹೋದ.

ಮಾರ ಸಂಜೆ ಐದು ಗಂಟೆಯ ಬಸ್ಸಿಗೆ ತಡಿಕೆ ಹಾಕಿಕೊಂಡು ಬಂದು ಇಳಿಸಿ ತಾನೇ ಹೊತ್ತು ಹಟ್ಟಿ ಮುಂದೆ ಬಿದಿರ ತಡಿಕೆಯನ್ನು ಇಳಿಸಿದಾಗ ಮುದುಕಿ ರಾತ್ರಿ ಏನಾದರೂ ಮಾಡುವ ಅಂತ ತಯಾರಾಗುತ್ತಿತ್ತು. ಬಿಗಿಭದ್ರವಾಗಿದ್ದ ತಡಿಕೆ ಬಂದದ್ದು ಮುದುಕಿಗೆ ಬಹಳ ಸಂತೋಷವಾಗಿ ಚೀಲದಿಂದ ಇಪ್ಪತ್ತು ರೂಪಾಯಿ ತೆಗೆದು ಮಾರನ ಕೈಗಿತ್ತು “ಖರ್ಚಿಗ ಮಡಿಕಾ...ಹಾಗೇ ಇದನ್ನ ನಿಲ್ಸಕ ಬಿಗಿಯಾದ್ದೊಂದು ಕಂಬ ತರ‍್ಕ ಬಾ ನಾಳಕ..ನೀನೇ ನಿಲ್ಲುಸ್ಕೊಟ್ಟುಡಯಿ” ಅಂತು.

ಮೇಲೆ ಒಂದಾಳು ಕುಂತರೂ ತಡಿಕೆ ಅಲ್ಲಾಡುತ್ತಿರಲಿಲ್ಲ. ಅಷ್ಟು ಬಿಗಿಯಾಗಿದ್ದ ತಡಿಕೆಯನ್ನು ಮೆಚ್ಚಿಕೊಂಡು ಕಬ್ಬಿಣದ ಚಿಲಕವನ್ನು ಅದಕ್ಕೆ, ಬೆಳಿಗ್ಗೆ ಜೋಡಿಸಿಕೊಂಡರಾಯಿತು ಅಂತಂದುಕೊಂಡು ಅದನ್ನು ತಂದು ಒಳಕ್ಕೆ ನಿಲ್ಲಿಸಿಕೊಂಡು ಆ ರಾತ್ರಿ ಕಣ್ತುಂಬ ನಿದ್ದೆ ಮಾಡಿತು.

ನಾಳೆ ಆಗಿ ಮಾರ ಕಂಬ ತಂದು ನೆರಕೆ ಬಿಚ್ಚಿ ಹಾಕಿ ಗುಳಿ ತೋಡಿ ಕಂಬ ನೆಟ್ಟು ತಂತಿಗಳನ್ನು ಕಂಬಕ್ಕೆ ಕಟ್ಟಿ ತಡಿಕೆಗೆ ಸೇರಿಸಿ ಬಿಗಿದು ನಿಲ್ಲಿಸಲು ಸಿದ್ಧವಾಗುವಾಗಲೇ ಏನನ್ನೋ ನೆನಪಿಸಿಕೊಂಡಂತೆ ಮುದುಕಿ ‘ಇವತ್ತು ನಿಲ್ಸದ್ ಬ್ಯಾಡ... ಸ್ಯಾನಿ ವರ್ಷಗಳ ಮ್ಯಾಲ ಈ ಹಟ್ಟಿ ದಾರಂದ ಬದಲಾಯಿಸ್ತ ಅವ್ನಿ...ನಾಳಕ ಮನ ತೊಳ್ದು ಅಚ್ಕಟ್ಟು ಮಾಡಿ ತಡ್ಕನೂ ತಾರ‍್ಸಿ ಪಂಚಾಮೃತ ಮಾಡಿ ಪೂಜ ಮಾಡ್ಸಿ ಎಲ್ರಗೂ ಪ್ರಸಾದ ಹಂಚಿ ಆಮ್ಯಾಲ ನಿಲ್ಸಂವು’ ಅಂತ ಸಡಗರದಿಂದ ಹೇಳಿ ಮಾರನಿಗೆ ನಾಳೆ ಬರುವಂತೆ ಹೇಳಿ ಕೈಗೆ ಇನ್ನೂ ಹತ್ತುಕೊಟ್ಟು ಕಳಿಸಿತು.

ಎಲ್ಲೆಲ್ಲಿಂದಲೋ ಹಳೆ ಕಾಗದಗಳನ್ನೆಲ್ಲ ತಂದು ಮೆಂತ್ಯೆದೊಂದಿಗೆ ನೆನೆಹಾಕಿ ಒರಳುಕಲ್ಲಿನಲ್ಲಿ ರುಬ್ಬಿ ತೆಳ್ಳಗೆ ಮಾಡಿಕೊಂಡು ತಡಿಕೆಯನ್ನು ನಾಕಾರು ಸಲ ಅದರಿಂದ ಹಿಂದೆ ಮುಂದೆ ನುಣುಪಾಗಿ ಸಾರಿಸಿ ಗೋಡೆಗೊರಗಿಸಿ ಒಣಗಲು ನಿಲ್ಲಿಸಿ ತನ್ನ ಗುಡಿಸಲಿನೊಳಗೆಲ್ಲ ತೊಪ್ಪೆ ಸಾರಿಸಿ ಗೋಡೆಗಳಿಗೆ ಸುಣ್ಣ ತುಂಬಿ ಹಬ್ಬದ ಸಂಭ್ರಮವನ್ನು ತರುವಲ್ಲಿಗೆ ಸಂಜೆ ನಾಕು ತಲುಪಿತ್ತು. ಆವತ್ತು ಮಾತ್ರ ಆ ಮುದುಕಿಗೆ ಇಷ್ಟೂ ದಿನವೂ ಹಿಂಸಿಸುತ್ತಿದ್ದ ಮಂಡಿ, ಸೊಂಟನೋವು ಏನೊಂದೂ ತೋರಲಿಲ್ಲ. ಇದ್ದ ನೋಟುಗಳೆಲ್ಲ ಖರ್ಚಾಗಿ ನಾಳೆಯ ಸಣ್ಣಪುಟ್ಟ ಖರ್ಚುಗಳಿಗೆ ಚಿಲ್ಲರೆ ಬಿಟ್ಟರೆ ಬೇರೇನೂ ಚೀಲದಲ್ಲಿ ಉಳಿದಿರಲಿಲ್ಲ. ನಾಕಾರು ಸಲ ಸಾರಿಸಿದ್ದರಿಂದ ಸಂಜೆಯಾಗಿದ್ದರೂ ತಡಿಕೆ ಒಣಗಿರಲಿಲ್ಲ. ಅದನ್ನು ಒಳಗೆ ಇಡಲು ಸ್ಥಳಾವಕಾಶ ಕಡಿಮೆ ಇದ್ದ ಕಾರಣ ಈಚೆ ಗೋಡೆಗೆ ಹಾಗೆಯೇ ಅದನ್ನು ಒರಗಿಸಿ ಯಾರಾದರೂ ಕದ್ದಾರು ಅಂದುಕೊಂಡು ಮುದುಕಿ ಹೊಸ್ತಿಲಿಗೇ ದಿಂಬು ಹಾಕಿಕೊಂಡು ಬಾಗಿಲಲ್ಲೇ ಮಲಗಿತು. ಬೆಳಗ್ಗೆಯಿಂದಲೂ ಓಡಾಡಿ ಕೆಲಸ ಮಾಡಿ ದಣಿದಿದ್ದ ಮುದುಕಿಯ ಜೀವವನ್ನು ಮಾಯದ ನಿದ್ದೆ ಕ್ಷಣಾರ್ಧದಲ್ಲಿ ಕಬಳಿಸಿತ್ತು.
ಮುಂಜಾನೆ ಇನ್ನೂ ಬಳಕು ಅರೆಬರೆಯಾಗಿ ಶುರುವಾಗುತ್ತಿದ್ದಾಗ ಎಚ್ಚರವಾದ ಮುದುಕಿ ಎದ್ದು ನೋಡಿತು. ತಡಿಕೆಯೂ ಇಲ್ಲ! ಅದು ಇದ್ದ ಗುರುತೂ ಇಲ್ಲ! ಚಿಲಕ ಮತ್ತು ಬೀಗಗಳು ಮಾತ್ರ ತನ್ನ ಕಾಲದೆಸೆಯಲ್ಲಿಯೇ ಬಿದ್ದಿವೆ. ಮುದಿ ಉಸಿರು ಧಸಕ್ಕೆಂದಿತ್ತು. ತತ್ತರ ಬಿತ್ತರನೆ ಎದ್ದು ಹಿಂದೆ ಮುಂದೆ ಅವರ ಹಿತ್ತಲು ಇವರ ಅಂಗಳ ಎಲ್ಲಾ ಹುಡುಕಿ ಹುಡುಕಿ ತೊಡೆಗಳಿಗೆ ನೋವು ಬಂದು ‘ಹೋಯ್ತಲ್ಲವೋ ನನ್ನ ತಡ್ಕಾ... ನನ್ನ ದಾರಂದ!’ ಅಳು ಅರಚುತ್ತಾ ಮುದುಕಿ ತನಗೆ ಗೊತ್ತಿರುವ ಬೈಗುಳಗಳನ್ನೆಲ್ಲ ಉಗುಳುತ್ತಾ ಶಾಪಗಳನ್ನೆಸೆಯುತ್ತ ದಿಕ್ಕು ದಿಕ್ಕುಗಳಿಗೆ ಧೂತ್ತ್ತಿ ತೂರುತ್ತ ಸುಸ್ತಾಗುತ್ತಿತ್ತು. ಮುದುಕಿಗೆ ತನ್ನ ಮಗ ನೆನಪಾಗಲಿಲ್ಲ.

ತಡಿಕೆ ಮಾರಿ ನೆನ್ನೆಯಿಂದಲೂ ಕುಡಿದು ತಿಂದು ಹೇತು ಉಚ್ಚೆ ಹುಯ್ದು ಖಾಲಿಯಾಗಿ ಇನ್ನೂ ಸರಾಪಿನ ಗಮಲಿನಲ್ಲೇ ಇದ್ದ ಮಗ ಊರ ದಾರಿ ಹಿಡಿದು ತಲುಪಿ ಹಟ್ಟಿಯ ದಿಕ್ಕಿಗೆ ಮುಖ ಹಾಕಿದವನ ದೃಷ್ಟಿಗೆ ಹಟ್ಟಿಯ ಮುಂದೆ ಮುದುಕಿಯ ಅದೇ ವ್ಯಾಪಾರದ ನೆರಳಾಗಿದ್ದ ಹಾಳೆ ಸೋಗಿನ ಚಿಕ್ಕ ಚಪ್ಪರದ ನೆರಳಿನಲ್ಲಿ ಮುದುಕಿಯ ಹೆಣ ಮಡಗಿಕೊಂಡು ಅಂಗಳದಲ್ಲಿ ಸೌದೆ ಕೊಂಟಿಗೆ ಬೆಂಕಿ ಹಾಕಿ ಉರಿಸುತ್ತ ಇವನ ಹಾದಿಯನ್ನೇ ಕಾಯುತ್ತ ಕುಂತಿದ್ದ ಅಕ್ಕಪಕ್ಕದ ಒಂದಷ್ಟು ಜನ ಕಾಣಿಸಿದರು.