Saturday, October 31, 2009

ಬ್ಲಾಗ್ ತೆರೆಯುವುದು ಹೇಗೆ?

ಕಳೆದ ವಾರ ಬ್ಲಾಗ್‌ಗಳ ಉಪಯೋಗದ ಬಗ್ಗೆ ಕೆಲವು ಮೂಲಭೂತ ವಿಚಾರಗಳನ್ನು ಪರಿಚಯ ಮಾಡಿಕೊಂಡಿದ್ದೆವು. ಈ ವಾರ ಅದೇ ವಿಚಾರವನ್ನು ಮುಂದುವರಿಸಿ ಅಂತರ್ಜಾಲ ತಾಣಗಳಲ್ಲಿ ನಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ನಮ್ಮದೇ ಆದ ಬ್ಲಾಗ್ ರಚಿಸಿಕೊಳ್ಳುವುದು ಎಂದರೆ ಹೆಚ್ಚೂ ಕಡಿಮೆ ನಮ್ಮದೇ ಅಂತರ್ಜಾಲ ತಾಣವೊಂದನ್ನು ರಚಿಸಿಕೊಳ್ಳುವುದು ಎಂದರ್ಥ. ದೊಡ್ಡ ದೊಡ್ಡ ಕಂಪೆನಿ, ಸಂಘಸಂಸ್ಥೆ, ಶಿಕ್ಷಣ ಸಂಸ್ಥೆ ಮುಂತಾದವುಗಳಿಗಾದರೆ ತಮ್ಮದೇ ಆದ ಅಂತ ರ್ಜಾಲ ತಾಣ (ವೆಬ್‌ಸೈಟ್) ರೂಪಿಸುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಆನ್‌ಲೈನ್ ಸ್ಥಳ ಬೇಕಾಗು ತ್ತದೆ. ಹಾಗಾಗಿ, ಆ ಸ್ಥಳವನ್ನು ಮಾರಾಟ ಮಾಡುವ ಇಂಟರ್‌ನೆಟ್ ಸಂಸ್ಥೆಗಳಿಂದ ಅವುಗಳನ್ನು ಅವರು ಕೊಂಡುಕೊಳ್ಳುತ್ತಾರೆ. ನಮಗೆ ನಮ್ಮದೇ ಬ್ಲಾಗ್ ರಚಿಸಿಕೊಳ್ಳುವುದಕ್ಕೆ ಅಷ್ಟೊಂದು ಆನ್‌ಲೈನ್ ಸ್ಥಳಾವ ಕಾಶದ ಅವಶ್ಯಕತೆಯಿಲ್ಲವಾದ್ದರಿಂದ ಕೆಲವು ಇಂಟರ್ ನೆಟ್ ಕಂಪೆನಿಗಳು ಉಚಿತ ಸ್ಥಳಾವಕಾಶ ಕೊಡುತ್ತವೆ. ಅದನ್ನೇ ಉಪಯೋಗಿಸಿಕೊಂಡು ನಮ್ಮದೇ ಆದ ಬ್ಲಾಗ್ ಅನ್ನು ನಾವು ರೂಪಿಸಿಕೊಳ್ಳಬಹುದು. ನಮ್ಮದೇ ಸ್ವಂತ ಅಂತರ್ಜಾಲ ಸ್ಥಳವನ್ನು ಖರೀದಿಸಿ ರೂಪಿಸುವ ವೆಬ್‌ಸೈಟುಗಳಿಗೂ ಹಾಗೂ ವಿವಿಧ ಕಂಪೆನಿಗಳು ಉಚಿತವಾಗಿ ಒದಗಿಸುವ ಸ್ಥಳದಲ್ಲಿ ರೂಪಿಸುವ ಉಚಿತ ಬ್ಲಾಗ್‌ಗಳಿಗೂ ಒಂದು ವ್ಯತ್ಯಾಸವಿದೆ. ಸ್ವಂತ ವೆಬ್‌ಸೈಟ್‌ಗೆ ತಮಗಿಷ್ಟ ಬಂದ, ಆದರೆ ಲಭ್ಯವಿರುವ ವೆಬ್ ವಿಳಾಸವನ್ನು ಕೊಡಬಹುದು (ಉದಾಹರಣೆಗೆ www. infosys.com). ಆದರೆ ಉಚಿತ ಬ್ಲಾಗ್ ಆದರೆ ಅದರ ಅಂತರ್ಜಾಲ ತಾಣದ ವಿಳಾಸದಲ್ಲಿ ಆನ್‌ಲೈನ್ ಸ್ಥಳವನ್ನು ಉಚಿತವಾಗಿ ಕೊಟ್ಟಿರುವ ಕಂಪೆನಿಯ ಹೆಸರೂ ಸೇರಿಕೊಂಡಿರುತ್ತದೆ (ಉದಾಹ ರಣೆಗೆ www.salman.blogspot. com). ಮೊದಲನೇ ಉದಾಹರಣೆಯಲ್ಲಿ ಇನ್ಫೋ ಸಿಸ್ ಕಂಪೆನಿ ನೇರವಾಗಿ ತನ್ನದೇ ಹೆಸರಿನಲ್ಲಿ ವೆಬ್‌ಸೈಟ್ ತೆರೆದಿದ್ದರೆ ಎರಡನೇ ಉದಾಹರಣೆ ಯಲ್ಲಿ ಸಲ್ಮಾನ್ ಎಂಬ ವ್ಯಕ್ತಿ ಬ್ಲಾಗ್ ಸ್ಪಾಟ್ ಡಾಟ್ ಕಾಮ್ ಎಂಬ ಕಂಪೆನಿಯ ವೆಬ್ ಸೈಟಿನಲ್ಲಿ ಉಚಿತ ವಾಗಿ ಬ್ಲಾಗ್ ತೆರೆದಿದ್ದಾರೆ ಎಂದರ್ಥ.

ಅಂತರ್ಜಾಲ ಲೋಕದಲ್ಲಿ ನಮ್ಮದೇ ಆದ ಬ್ಲಾಗ್ ಗಳನ್ನು ರೂಪಿಸಿಕೊಳ್ಳುವುದಕ್ಕೆ ಹಲವಾರು ಕಂಪೆನಿಗಳು ಉಚಿತ ಆನ್‌ಲೈನ್ ಸ್ಥಳಾವಕಾಶಗಳನ್ನು ಒದಗಿಸು ತ್ತಿವೆ. ಅವುಗಳಲ್ಲಿ ಸದ್ಯಕ್ಕೆ ಭಾರತದಲ್ಲಿ ಜನಪ್ರಿಯವಾಗಿ ರುವವುಗಳೆಂದರೆ www.blogspot.com ಅಥವ www.blogger.com ಮತ್ತು www.wordpress.com. ಇವುಗಳಲ್ಲಿ ಯಾವುದರಲ್ಲಿ ಬೇಕಾದರೂ ನಾವು ಉಚಿತವಾಗಿ ನಮ್ಮದೇ ಬ್ಲಾಗ್ ರಚಿಸಿಕೊಳ್ಳಬಹುದು.

ಮೊದಲನೆಯದಾಗಿ blogspot.com (www.blogger.com) ಅನ್ನೇ ಪ್ರಾಯೋ ಗಿಕವಾಗಿ ತೆಗೆದುಕೊಂಡು ಅದರಲ್ಲಿ ನಮ್ಮ ಬ್ಲಾಗ್ ರಚಿಸುವುದು ಹೇಗೆಂಬುದನ್ನು ನೋಡೋಣ. ಮೂಲತಃ ಪ್ಯಾರಾ ಲ್ಯಾಬ್ಸ್ ಎಂಬ ಕಂಪೆನಿ ರೂಪಿ ಸಿದ್ದ ಈ ಅಂತರ್ಜಾಲ ಬ್ಲಾಗ್ ಪ್ರಕಟಣಾ ವ್ಯವಸ್ಥೆಯನ್ನು ೨೦೦೩ರಲ್ಲಿ ಗೂಗಲ್ ಸಂಸ್ಥೆ ಕೊಳ್ಳು ವುದರೊಂದಿಗೆ ಅದೂ ಕೂಡ ಗೂಗಲ್ ಅಂತ ರ್ಜಾಲ ಸೇವಾ ಸಾಮ್ರಾಜ್ಯದ ಭಾಗವಾಗಿ ಹೋ ಯಿತು. ಅಲ್ಲಿಂದಾಚೆಗೆ ಗೂಗಲ್ ಸಂಸ್ಥೆಯ ಪ್ರಯೋಗಶೀಲ ಮತ್ತು ನನ ಸೌಕರ್ಯ ಗಳೊಂದಿಗೆ ಇಂದು ಅದು ವಿಶ್ವದ ಅತ್ಯಂತ ಪ್ರಮುಖ ಬ್ಲಾಗ್ ಸೇವೆಗಳಲ್ಲಿ ಒಂದೆಂಬ ಶ್ರೇಯಸ್ಸಿಗೆ ಪಾತ್ರವಾಗಿದೆ.

ಈಗ ನೇರವಾಗಿ ಈ www.blogger. comನಲ್ಲಿ ನಮ್ಮದೇ ಆದ ಬ್ಲಾಗ್ ತೆರೆದುಕೊಳ್ಳು ವುದು ಹೇಗೆಂಬ ವಿಚಾರಕ್ಕೆ ಬರೋಣ. ಇಲ್ಲಿ ಬ್ಲಾಗ್ ತೆರೆಯಬೇಕೆಂದರೆ ಮೊದಲು ಗೂಗಲ್ ಸಂಸ್ಥೆಯ ವೆಬ್‌ಮೇಲ್ ಸೇವೆಯಾದ ಜಿ-ಮೇಲ್‌ನಲ್ಲಿ ನಾವು ಒಂದು ಇ-ಮೇಲ್ ಅಕೌಂಟ್ ಹೊಂದಿರಬೇಕು. (ಇ-ಮೇಲ್ ಹೇಗೆ ತೆರೆಯಬೇಕೆಂಬುದನ್ನು ಈ ಹಿಂದಿನ ಸಂಚಿಕೆಗಳಲ್ಲಿ ವಿವರವಾಗಿ ತಿಳಿಸಲಾಗಿದೆ). ನಿಮ್ಮ ವೆಬ್‌ಬ್ರೌಸರ್ (ಉದಾಹರಣೆಗೆ, ಇಂಟರ್ ನೆಟ್ ಎಕ್ಸ್‌ಪ್ರೋ ಅಥವ ಮೊಜಿಲ್ಲಾ ಫೈರ್‌ಫಾಕ್ಸ್) ಬಳಸಿ ಬ್ಲಾಗರ್ ಡಾಟ್ ಕಾಮ್‌ನ ಮುಖಪುಟಕ್ಕೆ ಬನ್ನಿ. ಅದರ ವೆಬ್‌ಸೈಟ್ ವಿಳಾಸ: www. blogger.com. ಅದರ ಮುಖಪುಟದಲ್ಲೇ ಬಲಭಾಗದಲ್ಲಿ CREAT A BLOG ಎಂಬ ಒಂದು ಬಟನ್ ಇದ್ದು ಅದರ ಮೇಲೆ ಕ್ಲಿಕ್ ಮಾಡಿ. ಈಗ ತೆರೆದುಕೊಳ್ಳುವ ಫಾರ್ಮ್ ರೂಪದ ಪುಟದಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ. ಮೊದಲು ಮತ್ತು ಎರಡನೇ ಕಾಲಂಗಳಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನೂ, ಆ ನಂತರದ ಎರಡು ಕಾಲಂಗಳಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನೂ ಟೈಪ್ ಮಾಡಿ. ಆಮೇಲೆ ಡಿಸ್‌ಪ್ಲೇ ನೇಮ್ ಎಂಬ ಕಾಲಂನಲ್ಲಿ ನಿಮ್ಮ ಹೆಸರನ್ನು ಟೈಪ್ ಮಾಡಿ. ನಂತರ ಬ್ಲಾಗ್‌ಗೆ ಸಂಬಂಧಪಟ್ಟಂತೆ ಭವಿಷ್ಯದಲ್ಲಿ ನಡೆಯುವ ಬೆಳವಣಿಗೆಗಳನ್ನು ಇ-ಮೇಲ್ ಮೂಲಕ ಸ್ವೀಕರಿ ಸಲು ಇಚ್ಛಿಸುತ್ತೀರಾದರೆ ಇ-ಮೇಲ್ ನೋಟಿಫಿ ಕೇಶನ್ಸ್ ಎಂಬ ಆಯ್ಕೆಯ ಮುಂದಿನ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಆಯ್ದುಕೊಳ್ಳಿ. ನಂತರ ಕೆಳಗಡೆ Word Verification ಎದುರಿಗೆ ಕಾಣುವ ಸಂಕೇತ ರೂಪದ ಇಂಗ್ಲೀಷ್ ಅಕ್ಷರಗಳನ್ನು ಸರಿಯಾಗಿ ಗುರುತಿಸಿ ಅದರಡಿ ಯಲ್ಲಿರುವ ಬಾಕ್ಸ್‌ನಲ್ಲಿ ಟೈಪ್ ಮಾಡಿ. ಆಮೇಲೆ I accept the Terms of Service ಎಂಬ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಆಯ್ದು ಕೊಳ್ಳಿ. ಎಲ್ಲ ಮುಗಿಸಿದ ಮೇಲೆ ಪುಟದ ಕೊನೆ ಯಲ್ಲಿರುವ Continue ಎಂಬ ಬಟನ್ ಮೇಲೆ ಕ್ಲಿಕ್ಕಿಸಿ. ಅಲ್ಲಿಗೆ ಮೊದಲ ಹಂತದ ಕೆಲಸ ಮುಗಿಯುತ್ತದೆ.

Continue ಎಂಬ ಬಟನ್ ಮೇಲೆ ಕ್ಲಿಕ್ಕಿಸು ತ್ತಿದ್ದಂತೆಯೇ ಎರಡನೇ ಹಂತದ ಕೆಲಸಕ್ಕಾಗಿ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಈ ಪುಟದಲ್ಲಿ ಪ್ರಧಾನವಾಗಿ ಎರಡು ವಿಚಾರಗಳನ್ನು ಭರ್ತಿ ಮಾಡಬೇಕು. ಮೊದಲನೆಯದು Blog title ಎಂಬ ಕಾಲಂನಲ್ಲಿ ನಿಮ್ಮ ಬ್ಲಾಗ್‌ಗೆ ಒಂದು ಶೀರ್ಷಿಕೆಯನ್ನು ಕೊಡಬೇಕು. ಉದಾಹರಣೆಗೆ, ನಿಮ್ಮ ಅಪ್ರಕಟಿತ ಕವನಗಳನ್ನು, ಚಿಂತನಗೆಳನ್ನು, ಬರಹಗಳನ್ನು ಪ್ರಕಟಿಸುವ ಉದ್ದೇಶದಿಂದ ಬ್ಲಾಗ್ ತೆರೆಯುತ್ತಿದ್ದೀರಾದರೆ My Unpublished Thoughts ಎಂದು ಹೆಸರಿಡಬಹುದೇನೋ. ಇದೊಂದು ಉದಾಹರಣೆಯಷ್ಟೆ. ನಿಮಗೆ ಬೇಕಾದ ಶೀರ್ಷಿಕೆಯನ್ನು ಇಟ್ಟುಕೊಳ್ಳಬಹುದು. ಇನ್ನು ಎರಡನೆಯದೆಂದರೆ ವಿಶಾಲವಾಗಿರುವ ಅಂತ ರ್ಜಾಲ ಲೋಕದಲ್ಲಿ ನಿಮ್ಮ ಬ್ಲಾಗ್ ತಲುಪುವುದಕ್ಕೆ ಅವಶ್ಯವಾಗಿ ಬೇಕಿರುವ ಬ್ಲಾಗ್ ವಿಳಾಸವನ್ನು ಭರ್ತಿ ಮಾಡಬೇಕು. ಇದನ್ನು ಇಂಟರ್‌ನೆಟ್ ಪರಿಭಾಷೆ ಯಲ್ಲಿ URL (Uniform Resource Locator) ಎಂದು ಕರೆಯಲಾಗುತ್ತದೆ. ನಿಮ್ಮ ಹೆಸರನ್ನು, ನಿಮ್ಮ ಬ್ಲಾಗ್‌ಗೆ ಕೊಟ್ಟಿರುವ ಶೀರ್ಷಿಕೆ ಯನ್ನು - ಏನನ್ನು ಬೇಕಾದರೂ ಕೊಡಬಹುದು. ಶಬ್ದಗಳ ನಡುವೆ, ಅಕ್ಷರಗಳ ನಡುವೆ ಸ್ಪೇಸ್ ಬಿಡಬಾರದು. ಅಂತೆಯೇ ಎಲ್ಲವೂ ಇಂಗ್ಲೀಷಿನ ಚಿಕ್ಕ ಅಕ್ಷರಗಳಲ್ಲಿ ಇರಬೇಕು. ಉದಾಹರಣೆಗೆ, mythoughts ಎಂಬುದನ್ನೇ URL ಆಗಿ ಬಳಸುತ್ತೀರಾದರೆ ಆಗ ನಿಮ್ಮ ಬ್ಲಾಗ್‌ನ ಸಂಪೂರ್ಣ ವಿಳಾಸ www.mythoughts.blogspot. com ಎಂದಾಗುತ್ತದೆ. ಕೆಲವೊಮ್ಮೆ ನೀವು ಕೊಡುವ ಯು‌ಆರ್‌ಎಲ್ ಅನ್ನು ಈಗಾಗಲೇ ಯಾರಾದರೂ ಬಳಸಿಬಿಟ್ಟಿದ್ದರೆ ಅದು ನಿಮಗೆ ಲಭ್ಯವಾಗುವುದಿಲ್ಲ. ಹಾಗಾಗಿ ಲಭ್ಯವಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅದನ್ನು ಟೈಪ್ ಮಾಡಿ ಕೆಳಗಡೆಯಿರುವ Check Availability ಎಂಬ ಲಿಂಕಿನ ಮೇಲೆ ಕ್ಲಿಕ್ ಮಾಡಿ. ಲಭ್ಯವಿದ್ದರೆ ಮುಂದುವರಿಯಬಹುದು, ಇಲ್ಲದಿದ್ದರೆ ಬೇರೆ ಹೆಸರನ್ನು ಕೊಡಬೇಕಾಗುತ್ತದೆ. ಲಭ್ಯವಿರುವ ಯು‌ಆರ್‌ಎಲ್ ಸಿಕ್ಕ ಮೇಲೆ ಕೆಳಗಡೆಯಿರುವ Continue ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

ಈಗ ಬ್ಲಾಗ್ ರಚನೆಯ ಮೂರನೇ ಹಂತಕ್ಕೆ ಬರುತ್ತೀರಿ. ಇಲ್ಲಿ ನಿಮ್ಮ ಬ್ಲಾಗ್ ಹೇಗೆ ಕಾಣಿಸಬೇಕು ಎಂಬುದನ್ನು ನಿರ್ಧರಿಸುವುದಕ್ಕಾಗಿ ಹಲವು ರೀತಿಯ ಬ್ಲಾಗ್ ವಿನ್ಯಾಸಗಳು ಇರುತ್ತವೆ. ಅವುಗಳಲ್ಲಿ ಯಾವುದು ಇಷ್ಟವೋ ಅದರ ಕೆಳಗಿರುವ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಆಯ್ದುಕೊಂಡು ನಂತರ ಮತ್ತೆ ಕೆಳಗಡೆಯಿರುವ Continue ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿಗೆ ನಿಮ್ಮ ಬ್ಲಾಗ್ ಸೃಷ್ಟಿಯಾಗುತ್ತದೆ. ಅದನ್ನು ಖಚಿತಪಡಿಸುವ ಪುಟವೊಂದು ತೆರೆದುಕೊಳ್ಳುತ್ತದೆ. ಈ ಪುಟದಲ್ಲಿರುವ Start Blogging ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದರೆ ನೇರವಾಗಿ ನಿಮ್ಮ ಬ್ಲಾಗ್‌ಗೆ ಹೋಗುತ್ತೀರಿ.

ಬ್ಲಾಗ್‌ನಲ್ಲಿ ಬರೆಯುವುದು ಹೇಗೆ, ಬರೆದ ವಿಚಾರಗಳನ್ನು ಪ್ರಕಟಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಬ್ಲಾಗುಗಳು -ಒಂದು ಪರಿಚಯ

ಕಳೆದ ಕೆಲವು ವಾರಗಳಿಂದ ಉಚಿತ ಆನ್‌ಲೈನ್ ಸ್ಟೋರೇಜ್ ವ್ಯವಸ್ಥೆಯ ಬಗ್ಗೆ ಮೂಲಭೂತ ಅಂಶ ಗಳನ್ನು ತಿಳಿದುಕೊಂಡಿದ್ದೇವೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಮೂಲಭೂತ ಅಂಶಗಳನ್ನಷ್ಟೇ ವಿವರಿಸಲಾ ಗಿದ್ದು ಉಳಿದಂತೆ ನೀವೇ ಪ್ರಾಕ್ಟೀಸ್ ಮಾಡುತ್ತಾ ಹೋದಂತೆ ಇನ್ನೂ ಹಲವು ವಿಚಾರಗಳನ್ನು ಸ್ವಂತ ವಾಗಿ ತಿಳಿದುಕೊಳ್ಳುತ್ತಾ ಹೋಗಬಹುದು. ಅಲ್ಲದೇ, ಎಡ್ರೈವ್ ಮಾತ್ರವಲ್ಲದೇ ಉಚಿತ ಸ್ಟೋರೇಜ್ ಸ್ಥಳಾವಕಾಶ ಕೊಡುವ ಇನ್ನಿತರ ವೆಬ್‌ಸೈಟುಗಳನ್ನೂ ಗೂಗಲ್ ಹುಡುಕಾಟದ ಮೂಲಕ ಕಂಡುಕೊಳ್ಳ ಬಹುದು. ಹೀಗಾಗಿ, ಸದ್ಯಕ್ಕೆ ಆನ್‌ಲೈನ್ ಸ್ಟೋರೇಜ್ ವಿಚಾರವನ್ನು ಮುಗಿಸಿ ಈ ವಾರದಿಂದ ಇಂಟರ್ ನೆಟ್ ಲೋಕದ ಮತ್ತೊಂದು ಬಹುಮುಖ್ಯ ವಿಚಾರ ವಾಗಿರುವ ಬ್ಲಾಗ್ ಬಗ್ಗೆ ತಿಳಿದುಕೊಳ್ಳೋಣ.

ಈಗಾಗಲೇ ಇಂಟರ್‌ನೆಟ್ ಬಳಸುತ್ತಿ ರುವ ಜನರು ಆಗಾಗ ಬ್ಲಾಗ್ ಬಗ್ಗೆ ಮಾತ ನಾಡುತ್ತಿರುತ್ತಾರೆ. ನನ್ನದೂ ಒಂದು ಬ್ಲಾಗ್ ಇದೆ, ಅದರಲ್ಲಿ ನನ್ನ ಕವಿತೆ ಹಾಕಿದ್ದೇನೆ, ಫೋಟೊ ಹಾಕಿದ್ದೇನೆ, ಒಂದು ಲೇಖನ ಬರೆದಿದ್ದೇನೆ, ಒಂದು ವರದಿ ಪ್ರಕಟಿಸಿದ್ದೇನೆ ಎಂದೆಲ್ಲಾ ಹೇಳುತ್ತಿರುತ್ತಾರೆ. ಆದರೆ, ಅವರು ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ, ಬ್ಲಾಗ್ ಎಂದರೇನು ಎಂಬಿತ್ಯಾದಿ ವಿಚಾರ ಗಳು ಈಗತಾನೆ ಇಂಟರ್‌ನೆಟ್ ಲೋಕಕ್ಕೆ ಕಾಲಿಡು ತ್ತಿರುವ ಹೊಸಬರಿಗೆ ಅರ್ಥವೇ ಆಗುವುದಿಲ್ಲ. ಇತ್ತೀಚೆಗಂತೂ ಬ್ಲಾಗ್ ಬಳಕೆ ಹಿಂದೆಂದಿಗಿಂತಲೂ ಹೆಚ್ಚಾಗುತ್ತಿರುವುದರಿಂದ ಅದು ಇಂಟರ್‌ನೆಟ್ ಲೋಕದ ಮಹತ್ವಪೂರ್ಣ ಅಭಿವ್ಯಕ್ತಿ ಮಾಧ್ಯಮ ವಾಗಿ ಹೊರಹೊಮ್ಮುತ್ತಿದೆ. ಹೀಗಾಗಿ, ಈ ವಾರ ಬ್ಲಾಗ್‌ನ ಸ್ಥೂಲ ಪರಿಚಯ ಮಾಡಿಕೊಳ್ಳೋಣ.

ನಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಗೊಳಿಸು ವುದಕ್ಕೆ ಹತ್ತು ಹಲವು ರೀತಿಯ ದಾರಿಗಳನ್ನು ಕಂಡು ಕೊಳ್ಳುತ್ತೇವೆ. ಕೆಲವರು ಕಥೆ-ಕವನಗಳನ್ನು ಬರೆಯು ತ್ತಾರೆ. ಕೆಲವರು ಸುಮ್ಮನೇ ತಮಗನ್ನಿಸಿದ್ದನ್ನು ಒಂದು ಬರಹದ ರೂಪಕ್ಕಿಳಿಸುತ್ತಾರೆ. ಇನ್ನು ಕೆಲವರು ತಾವು ಭೇಟಿ ಕೊಟ್ಟ ಅಪರೂಪದ ಪ್ರದೇಶ, ಪ್ರವಾಸಿ ತಾಣ, ಚಾರಿತ್ರಿಕ ಸ್ಥಳಗಳ ಬಗ್ಗೆ ಬರೆಯುತ್ತಾರೆ. ಕೆಲವರು ತಮ್ಮ ಜೀವನದಲ್ಲಿ ಅಪರೂಪಕ್ಕೆ ಭೇಟಿಯಾದ ಮಹತ್ವಪೂರ್ಣ ವ್ಯಕ್ತಿಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಬರೆಯುತ್ತಾರೆ. ಕೆಲವರಿಗೆ ತಮ್ಮ ಜೀವನದಲ್ಲಿ ಘಟಿ ಸಿದ ಬಹಳ ಮುಖ್ಯವಾದ ತಿರುವು ಘಟನೆಗಳ ಬಗ್ಗೆ ಬರೆದು ದಾಖಲಿಸಿಟ್ಟುಕೊಳುತ್ತಾರೆ. ಕೆಲವರು ತಮ್ಮ ಜೀವನದ ಅತ್ಯಮೂಲ್ಯ ಅನುಭವಗಳನ್ನು ಬರೆದಿಡು ತ್ತಾರೆ. ಚಿತ್ರಕಲಾಕಾರರಾದರೆ ತಮ್ಮ ಭಾವನೆಗಳನ್ನು ಕಾರ್ಟೂನ್ ರೂಪದಲ್ಲೋ, ರೇಖಾಚಿತ್ರಗಳ ರೂಪ ದಲ್ಲೋ ಅಥವಾ ಪೆಯಿಂಟಿಂಗ್ ರೂಪದಲ್ಲೋ ಅಭಿವ್ಯಕ್ತಿಗೊಳಿಸಿ ಇಟ್ಟುಕೊಂಡಿರುತ್ತಾರೆ. ಹೀಗೆ ಹಲವು ರೀತಿಯ ಜನ ಹಲವು ಕಲಾ ಪ್ರಕಾರಗಳನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಕಂಡುಕೊಂಡಿರು ತ್ತಾರೆ. ಅವರಲ್ಲಿ ಬಹುತೇಕರು ತಾವು ಅಭಿವ್ಯಕ್ತಿ ಗೊಳಿಸಿದ ಈ ಕಲಾಕೃತಿಗಳು ಯಾವುದಾದರೂ ಪತ್ರಿಕೆಗಳಲ್ಲೋ, ಮ್ಯಾಗಜಿನ್‌ಗಳಲ್ಲೋ, ಅಥವ ಪುಸ್ತಕ ರೂಪದಲ್ಲೋ ಪ್ರಕಟವಾಗಬೇಕೆಂದು ಹಂಬಲಿಸುಮದೂ ಉಂಟು. ಆ ಮೂಲಕ ತನ ಗಾದ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳು ವುದಕ್ಕೆ ಇಷ್ಟಪಡುತ್ತಾರೆ. ಅವು ಪ್ರಕಟವಾದರೆ ಏನೋ ತನ್ನ ಕಲಾಕೃತಿಯನ್ನು, ಅನುಭವಗಳನ್ನು ಇತರರೊಂದಿಗೆ ಹಂಚಿಕೊಂಡ ತೃಪ್ತ ಭಾವ ಹೊಂದುತ್ತಾರೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ ಹಲವಾರು ಕಾರಣಗಳಿಗಾಗಿ ಎಲ್ಲರ ಕಲಾಕೃತಿಗಳು, ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗುವುದಿಲ್ಲ. ನೀವು ಸೃಷ್ಟಿಸಿದ ಕೃತಿ ಪತ್ರಿಕೆ ಸಂಪಾದಕರಿಗೆ ಇಷ್ಟವಾಗದೇ ಹೋಗಬಹುದು, ಪತ್ರಿಕೆಗಳಲ್ಲಿ ಜಾಗವಿರದಿರಬಹುದು- ಹೀಗೆ ಹಲವು ಕಾರಣಗಳಿಂದಾಗಿ ನಿಮ್ಮ ಕಲಾಕೃತಿ ಪತ್ರಿಕೆಗಳಲ್ಲಿ ಅಥವಾ ಇನ್ನಿತರ ಮಾಧ್ಯಮಗಳಲ್ಲಿ ಅಥವಾ ಪುಸ್ತಕ ರೂಪದಲ್ಲಿ ಪ್ರಕಟವಾಗದೇ ಕೇವಲ ನಿಮ್ಮ ಮನೆ ಮತ್ತು ಸೀಮಿತ ಸ್ನೇಹಿತರ ವಲಯಕ್ಕಷ್ಟೇ ಸೀಮಿತವಾಗಿಬಿಡುತ್ತವೆ. ಅಂಥ ಸಂದರ್ಭದಲ್ಲಿ ಬ್ಲಾಗ್‌ಗಳು ನಿಮ್ಮ ಸಹಾಯಕ್ಕೆ ಬರುತ್ತವೆ.

ಅಲ್ಲದೇ, ಸಣ್ಣಪುಟ್ಟ ಸಂಘ ಸಂಸ್ಥೆಗಳನ್ನು ನಡೆಸು ವವರು ಅಥವಾ ಸಂಘಟನೆಗಳನ್ನು ಕಟ್ಟಿಕೊಂಡು ಸಾಮಾಜಿಕ ಸುಧಾರಣೆಗಾಗಿ ಹೋರಾಟ ಮಾಡುವವರು ತಮ್ಮ ಸಂಘ ಸಂಸ್ಥೆಯ ಧ್ಯೇಯೋ ದ್ದೇಶಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಹತ್ತು ಹಲವು ವಿಧಾನಗಳನ್ನು ಬಳಸುತ್ತಾರೆ. ಅವುಗಳಲ್ಲಿ ಪತ್ರಿಕೆ, ಟೀವಿ, ಪುಸ್ತಕ, ಕರಪತ್ರ-ಮುಂತಾದವು ಗಳೂ ಉಂಟು. ಅದರ ಜೊತೆಗೆ ಇತ್ತೀಚೆಗೆ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಲೋಕ ವಿಸ್ತಾರವಾಗುತ್ತಾ ಹೋದಂತೆ ಈ ಉದ್ದೇಶಗಳಿ ಗಾಗಿ ಬ್ಲಾಗ್‌ಗಳನ್ನೂ ಬಳಸಿಕೊಳ್ಳುವ ಪರಿಪಾಠ ಬೆಳೆಯುತ್ತಿದೆ. ಒಂದೊಂದು ಸಂಘಸಂಸ್ಥೆಯೂ ತನ್ನದೇ ಆದ ಬ್ಲಾಗ್ ರೂಪಿಸಿಕೊಂಡು ಅದರಲ್ಲಿ ತನ್ನ ಧ್ಯೇಯೋದ್ದೇಶಗಳನ್ನು, ತಾನು ನಡೆಸಿರುವ ಸಾಮಾಜಿಕ ಚಟುವಟಿಕೆಗಳ ವರದಿಗಳನ್ನು, ಅಪ ರೂಪದ ಫೋಟೊಗಳನ್ನು, ವಿವಿಧ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ವಿಚಾರಗಳಿಗೆ ಸಂಬಂಧಪಟ್ಟ ಲೇಖನಗಳನ್ನು ಪ್ರಕಟಿಸುತ್ತಾರೆ.

ಹಾಗಾದರೆ ಬ್ಲಾಗ್ ಎಂದರೇನು? ಬಹಳ ಸಿಂಪಲ್ಲಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಬ್ಲಾಗ್ ಕೂಡ ಒಂದು ರೀತಿಯಲ್ಲಿ ವೆಬ್‌ಸೈಟ್. ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳು, ಮಾಧ್ಯಮ ಸಂಸ್ಥೆಗಳು, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು, ಸರಕಾರಿ ಇಲಾಖೆಗಳು- ಮುಂತಾದ ಸಂಘಟಿತ ಸಂಸ್ಥೆಗಳು ತಮ್ಮ ಧ್ಯೇಯೋದ್ದೇಶ, ಉತ್ಫನ್ನ, ಸೇವೆಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ತಮ್ಮದೇ ಆದ ವೆಬ್‌ಸೈಟುಗಳನ್ನು ಹೊಂದಿರುತ್ತಾರೆ. ಅದಕ್ಕಾಗಿ ಬಹಳಷ್ಟು ಆನ್‌ಲೈನ್ ಸ್ಥಳಾವಕಾಶ ಬೇಕಾಗಿರುವುದರಿಂದ ಅದನ್ನು ವರ್ಷಕ್ಕೆ ಇಂತಿಷ್ಟು ಅಂತ ದುಡ್ಡು ಕೊಟ್ಟು ಕೊಂಡುಕೊಂಡಿರುತ್ತಾರೆ. ಆದರೆ, ಬ್ಲಾಗ್ ಗಳಿಗೆ ಅಷ್ಟೊಂದು ಸ್ಥಳಾವಕಾಶದ ಅವಶ್ಯಕತೆಯಿಲ್ಲ ವಾದ್ದರಿಂದ ಹಲವಾರು ಕಂಪೆನಿಗಳು ಉಚಿತವಾಗಿ ಆನ್‌ಲೈನ್ ಸ್ಥಳಾವಕಾಶವನ್ನು ನೀಡುತ್ತಿವೆ. ಯಾರು ಬೇಕಾದರೂ ಅಂಥ ಅವಕಾಶವನ್ನು ಬಳಸಿ ಕೊಂಡು ತಮ್ಮದೇ ಆದ ಬ್ಲಾಗ್ ತೆರೆದು ಕೊಂಡು ಅದರಲ್ಲಿ ತಮ್ಮ ಕಲಾಕೃತಿಗಳನ್ನು, ಸಾಹಿತ್ಯ ಸೃಷ್ಟಿಗಳನ್ನು, ಫೋಟೊಗಳನ್ನು, ಅನುಭವಗಳನ್ನು, ಅಭಿಪ್ರಾಯಗಳನ್ನು, ಬರಹ ಗಳನ್ನು ಪ್ರಕಟಿಸಬಹುದು. ಇದನ್ನು ವೈಯುಕ್ತಿಕ ಆನ್‌ಲೈನ್ ಡೈರಿ ಎಂತಲೂ ಬೇಕಾದರೆ ಕರೆಯಬಹುದು, ನಿಮ್ಮ ವೈಯುಕ್ತಿಕ ವೆಬ್ ಸೈಟ್ ಅಂತ ಬೇಕಾದರೆ ಕರೆಯಬಹುದು. ಪುಸ್ತಕ ರೂಪದಲ್ಲಿರುವ ಪಾರಂಪರಿಕ ಡೈರಿಯಾದರೆ ಅದರಲ್ಲಿ ನಾವು ಬರೆದಿರುವ ವಿಚಾರಗಳು ಕೇವಲ ನಮಗೆ ಅಥವಾ ನಮಗೆ ತೀರಾ ಹತ್ತಿರದ ಸೀಮಿತ ಜನರಿಗೆ ಮಾತ್ರವೇ ಓದುವುದಕ್ಕೆ ಲಭ್ಯವಿರುತ್ತವೆ. ಬ್ಲಾಗ್ ಎಂಬುದು ಓಪನ್ ಆನ್‌ಲೈನ್ ಡೈರಿ. ಅದನ್ನು ವಿಶ್ವದ ಯಾವುದೇ ಮೂಲೆಯಲ್ಲಿರುವ ಯಾವುದೇ ವ್ಯಕ್ತಿ ಬೇಕಾದರೂ ಓದಬಹುದು. ಹೀಗಾಗಿ, ಬ್ಲಾಗ್‌ನಲ್ಲಿ ಎಂಥ ವಿಚಾರಗಳನ್ನು ಬರೆದು ಪ್ರಕಟಿಸಬೇಕು ಎಂಬುದನ್ನು ಬಹು ಎಚ್ಚರಿಕೆಯಿಂದ ನಿರ್ಧರಿಸಬೇಕು. ನಿಮ್ಮ ಜೀವನದ ತೀರಾ ಖಾಸU ಮತ್ತು ಗೌಪ್ಯ ವಿಚಾರಗಳನ್ನು ಬರೆಯುವುದನ್ನು ಆದಷ್ಟು ತಪ್ಪಿಸ ಬೇಕು. ಪರಿಚಿತರಿರಲಿ ಅಥವ ಅಪರಿಚಿತರಿರಲಿ, ಸ್ನೇಹಿತರಿರಲಿ ಅಥವ ಶತ್ರುಗಳಿರಲಿ - ಯಾರು ಬೇಕಾದರೂ ಓದಿಕೊಂಡರೂ ಏನೂ ತೊಂದರೆಯಿಲ್ಲ ಅನ್ನುವಂಥ ವಿಚಾರಗಳನ್ನು ಮಾತ್ರವೇ ಬ್ಲಾಗ್‌ನಲ್ಲಿ ಪ್ರಕಟಿಸುವುದು ಉತ್ತಮ.

ಬ್ಲಾಗ್ ರಚನೆಗಾಗಿ ಉಚಿತ ಆನ್‌ಲೈನ್ ಸ್ಥಳಾವಕಾಶ ಒದಗಿಸುವ ಕಂಪೆನಿಗಳು ಯಾವುದು ಹಾಗೂ ಬ್ಲಾಗ್‌ಗಳನ್ನು ತೆರೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

Thursday, October 8, 2009

ಲಾಟರಿ

-ಟಿ. ಎಸ್. ಗೊರವರ

ಗೌಡರ ಮನೆಯ ಪಡಸಾಲೆಯಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದ ರಂಗಜ್ಜ ಕನಸುಗಳ ಲೋಕದಲ್ಲಿ ವಿಹರಿಸತೊಡಗಿದ್ದ. ಟಿ.ವಿ.ಯಲ್ಲಿ ಮೂಡಿಬರುತ್ತಿದ್ದ ಜಾಹೀರಾತು ಅವನನ್ನು ವಾಸ್ತವ ಲೋಕದಿಂದ ಕನಸುಗಳ ಜಗತ್ತಿಗೆ ಕೈ ಹಿಡಿದು ಕರೆದುಕೊಂಡು ಹೋಗಿತ್ತು.
ಆ ಜಾಹೀರಾತಿನಲ್ಲಿ ಗುಡಿಸಲ ಮನೆಯ ಬಡವನಿಗೆ ಕೋಟಿ ರೂಪಾಯಿಯ ಬಂಪರ್ ಲಾಟರಿ ಹೊಡೆದು, ಅವ ಮಹಡಿ ಮನೆ ಕಟ್ಟಿಸುತ್ತಾನೆ. ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಾನೆ. ಈ ರಂಜನೀಯ ಜಾಹೀರಾತನ್ನು ಕಣ್ಣ ತುಂಬಾ ತುಂಬಿಕೊಂಡು ರಂಗಜ್ಜ ಮನೆ ಕಡೆ ಮುಖ ಮಾಡುತ್ತಾನೆ.

ರಂಗಜ್ಜ ಗುಡಿಸಲಿಗೆ ಬಂದಾಗ ಆಗಲೇ ರಾತ್ರಿ ಒಂಬತ್ತಾಗಿತ್ತು. ಅಡ್ಡಗೋಡೆಯ ಮೇಲಿಟ್ಟಿದ್ದ ಬುಡ್ಡಿ ಚಿಮಣಿ ಹೊಗೆಯಿಂದ ಅಲುಗಾಡತೊಡಗಿತ್ತು. ಮಗಳು ಹನುಮಿ ಒಲೆ ಊದುತ್ತಿರುವ ಸದ್ದು ಕೇಳಿ, ‘ಕಟ್ಟಿಗೆ ಹಸಿ ಅದಾವನು. ಗುಡಿಸಲ ತುಂಬಾ ಹೊಗಿ ಅಡರಿ ಕುಂದ್ರುಸ್ಯ ಕೊಡಾವಲ್ದು. ಸ್ವಲ್ಪ ಚಿಮಣಿ ಎಣ್ಣಿ ಹಾಕಿ ಒಲಿ ಹಚ್ಚು’ ಅಂದ.

ಹನುಮಿ ಒಲಿಯೊಳಗ ಕಟ್ಟಿಗೆ ತುರುಕುತ್ತಾ, ಹೆಂಚಿನಲ್ಲಿ ಬೇಯಿಸುತ್ತಿದ್ದ ರೊಟ್ಟಿಯನ್ನು ತಿರುವಿ ಹಾಕಿ, ಗುಡಿಸಲ ತುಂಬಾ ದಟ್ಟವಾಗಿ ಕವಿದಿದ್ದ ಹೊಗೆಯಿಂದಾಗ ಕಣ್ಣಲ್ಲಿ ತೆಳ್ಳಗೆ ಆಡುತ್ತಿದ್ದ ನೀರನ್ನು ಸೆರಗಿನ ಚುಂಗಿನಿಂದ ಒರೆಸಿಕೊಳ್ಳುತ್ತಾ, ‘ಚಿಮಣಿ ಎಣ್ಣೆ ಆಗೈತಿ. ಕಟಗಿ ನೋಡಿದರ ಹಸಿ ಆದಾವು. ರೊಟ್ಟಿ ಮಾಡೋದರಾಗ ಜೀವ ಸಣ್ಣ ಆಕ್ಕೆತಿ. ನಾಳೆ ಎಮ್ಮಿ ಮೇಸಿಕೊಂಡು ನೀನು ಬರುವಾಗ ಅಲ್ಲೇ ಗೌಡರ ಹೊಲದಾಗ ಒಂದು ಹೊರಿ ಒಣ ಕಟಗಿ ತಗೊಂಡು ಬಾ...’ ಅಂತ ಹನುಮಿ ಒಂದು ಕೇಳಿದರ ಒಂಬತ್ತು ಹೇಳಿದಳು.

“ಇನ್ನೊಂದು ವರ್ಷವೊಪ್ಪತ್ತು ಹ್ಯಾಂಗರ ಮಾಡು, ಕೊಟ್ಟ ಮನಿಗೆ ಹೋಗಿ ಅಂತ. ದೇವರು ನಮ್ಮ ಪಾಲಿಗೆ ಅದಾನು.”
“ಅಲ್ಲೋ ಎಪ್ಪಾ. ಒಂದು ಹೊತ್ತಿಗೇ ತಿನ್ನಾಕ ಸರಿಯಾಗಿ ಕೂಳಿಲ್ಲ. ಇನ್ನ ಮದುವಿ ಹ್ಯಾಂಗ ಮಾಡುಸ್ತೀ.”

“ಮಗಳ ನೀನೇನು ಹೆದರಬೇಡವ. ನಿನ್ನೆ ಗೌಡರ ಮನಿಗೆ ಹೋಗಿದ್ನಲ ಅಲ್ಲಿ ಟಿ.ವಿ. ನೋಡಿದೆ. ಅದರಾಗ ಲಾಟರಿ ಲಕ್ಷ್ಮಿ ಒಲಿದು ಬಡುವ ಮನುಷ್ಯ ಮಹಡಿ ಕಟ್ಟಿಸಿದ. ನಾನೂ ನಾಳೆ ಲಾಟರಿ ತಗೊಂತಿನಿ. ಆ ಲಾಟರಿ ಲಕ್ಷ್ಮಿ ನನಗೂ ಒಲಿದ ಒಲಿತಾಳ. ಅದರಾಗ ನಿನ್ನ ಮದುವಿ ಮಾಡುತಿನಿ”. ಅಂತ ರಂಗಜ್ಜ ಲಾಟರಿ ಹೊಡೆದವನಂತೆ ಬಹು ಹಿಗ್ಗಿನಿಂದ ನುಡಿದ.

“ಅಪ್ಪ, ನಾವು ದುಡಿದಿದ್ದ ನಮಗೆ ಇಲ್ಲ. ಇನ್ನು ಲಾಟರಿ ಹೊಡೆಯುತ್ತ ಅನ್ನೋದು ಕನಸಿನ ಮಾತು. ಎಮ್ಮೆ ಹೈನ ಸರಿಯಾಗಿ ಮಾಡಿಕೊಂಡು ಹಾಲು, ಮೊಸರು ಮಾರಿ ನಾಲ್ಕು ಕಾಸು ಉಳಿಸೋಣಂತ” ಹೀಗೆ ಹನುಮಿ ತನ್ನ ಎದೆಯಾಗಿನ ತಳಮಳವನ್ನು ರಂಗಜ್ಜನ ಮುಂದೆ ಇಡಿಯಾಗಿ ಸುರುವಿದಳು.

“ನಿನಗೆ ತಿಳಿಯಾಕಿಲ್ಲ. ಮಳ್ಳ ಪಡಿಸೆಂಟು ನೀನು. ಸುಮ್ನೆ ರೊಟ್ಟಿ ತಾ. ಹಸಿ ಮೆಣಸಿನಕಾಯಿ ಹಿಂಡಿ ಇದ್ರ ತಟಗು ಹಚ್ಚು” ಎಂದು ಹನುಮಿಯ ಮಾತಿಗೆ ಕ್ಯಾರೆ ಅನ್ನದೆ ಗಾಳಿಗೆ ತೂರಿದ. ಆಕೆ ಬುಡ್ಡಿ ಚಿಮಣಿಯ ಬತ್ತಿ ಏರಿಸ ರಂಗಜ್ಜನಿಗೆ ರೊಟ್ಟಿ ಹಚ್ಚಿ ಕೊಟ್ಟಳು.

ರಂಗಜ್ಜ ರೊಟ್ಟಿ ತಿಂದು, ಎಮ್ಮೆಗೆ ಮೇವು ಹಾಕಿ ಅಂಗಳದಲ್ಲಿ ಚಾಪೆ ಹಾಸಿ ಮುಗಿಲ ಕಡೆ ಮುಖ ಮಾಡಿ ಮಲಗಿದ. ಆಕಾಶದಲ್ಲಿ ಚುಕ್ಕಿ ಚಂದ್ರಮರ ರಾಸಲೀಲೆ ನಡೆದಿತ್ತು. ತಣ್ಣಗೆ ಗಾಳಿ ಚಾಮರ ಬೀಸತೊಡಗಿತ್ತು. ರಂಗಜ್ಜನ ಕಣ್ಣ ತುಂಬಾ ಕನಸುಗಳ ಮೆರವಣಿಗೆ ನಡೆದಿತ್ತು.

ಗುಡಿಸಲ ಒಳಗೆ ಮಲಗಿದ್ದ ಹನುಮಿ ಪದೆ ಪದೆ ಮಗ್ಗುಲ ಬದಲಿಸತೊಡಗಿದ್ದಳು. ಅದು ಹರೆಯದ ಹೆಣ್ಣೆಂಗಸು. ಅವಳ ವಾರಿಗೆಯ ಗೆಳತಿಯರು ಆಗಲೇ ಮದುವೆಯಾಗಿ ಮಕ್ಕಳನ್ನೂ ಕಂಡಿದ್ದಾರೆ. ಅವರು ಯುಗಾದಿ ಹಬ್ಬಕ್ಕೋ, ಪಂಚಮಿ ಹಬ್ಬಕ್ಕೊ ಊರಿಗೆ ಬಂದಾಗ ಅವರನ್ನು ನೋಡಿದ ಹನುಮಿಯ ಹೊಕ್ಕುಳದಾಳದಲ್ಲಿ ಚಿಟಮುಳ್ಳು ಆಡಿಸಿದಂತಾಗುತ್ತದೆ. ‘ನನ್ನ ಹಣೆಬರಹದಾಗ ಲಗ್ನ ಆಗೋದು ಬರದಿದ್ದಂಗಿಲ್ಲ..’ ಅಂತ ಅದೆಷ್ಟೋ ಸಲ ಪೇಚಾಡಿದ್ದಾಳೆ.

ಈ ಕಡೆ ರಂಗಜ್ಜನಿಗೆ ಕನಸಿನಲ್ಲಿ ಲಾಟರಿ ದೇವತೆ ಒಲಿದು ಹರ್ಷದ ಶಿಖರದ ತುತ್ತ ತುದಿಯಲ್ಲಿ ನಿಂತಿದ್ದಾನೆ. ಗುಡಿಸಲು ಮಾಯವಾಗಿ ಅಲ್ಲಿ ಬಣ್ಣದ ಮನೆ ತಲೆಯೆತ್ತಿ ನಿಂತಿದೆ. ಮಗಳ ಮದುವೆಯಲ್ಲಿ ಹೊಸ ಮಲ್ಲು ದೋತಿ ಉಟ್ಟು ಸಂಭ್ರಮದಿಂದ ಓಡಾಡುತ್ತಿದ್ದಾನೆ. ಇನ್ನೇನು ಮಗಳಿಗೆ ಅಕ್ಕಿ ಕಾಳು ಹಾಕಬೇಕು ಅನ್ನುವಷ್ಟರಲ್ಲಿ ನಿದ್ರಾದೇವತೆ ರಂಗಜ್ಜನೊಂದಿಗೆ ಮುನಿಸಿಕೊಂಡವಳಂತೆ ಓಟ ಕೀಳುತ್ತಾಳೆ.

ಮಂದಹಾಸ ಬೀರುತ್ತಾ ಎದ್ದ ರಂಗಜ್ಜ ಮಗಳಿಗೆ ಎಮ್ಮೆ ಹಾಲು ಹಿಂಡಲು ಅವಸರಿಸಿದ. ಆಕೆ ಚಮತು ಮಾಡಿ ಎಲ್ಡು ಸಿಲವಾರ ತಂಬಿಗೆ ತುಂಬಾ ಹಾಲು ಕರೆದಳು. ಹಾಲು ತೆಗೆದುಕೊಂಡು ನಿತ್ಯವೂ ಕೊಡುವ ಮನೆಗಳಿಗೆ ಹಾಲು ಹಾಕಿ,“ಈ ವಾರ ಮುಂಗಾಡನ ರೊಕ್ಕ ಕೊಡ್ರೀ. ಮನಾಗ ಮುಕ್ಕು ಜ್ವಾಳದ ಕಾಳಿಲ್ಲ. ಸಂತಿ ಮಾಡಬೇಕು. ಕಿರಾಣಿ ಅಂಗಡಿ ಬಾಕಿ ಹರೀಬೇಕು” ಅಂತ ಬುರುಡಿ ಬಿಟ್ಟ. ಅವರು ಹಾಲು ತೆಗೆದುಕೊಂಡು ರಂಗಜ್ಜನ ಆಣತಿಯಂತೆ ದುಡ್ಡು ಕೊಟ್ಟರು.

ರಂಗಜ್ಜ ಖುಷಿಯಿಂದ ಊರಗಲ ಮುಖ ಮಾಡಿಕೊಂಡು ಮನೆಗೆ ಬಂದ. ಹನುಮಿ ಯಾರದೊ ಹೊಲದಲ್ಲಿ ಕಳೆ ತೆಗೆಯಲು ಹೋಗಲು ಬುತ್ತಿ ಕಟ್ಟತೊಡಗಿದ್ದಳು. “ನೀನು ಹೊಲಕ್ಕ ಹೋಗು. ನಾನು ಪಟ್ಟಣಕ್ಕೆ ಹೋಗಿ ಲಾಟರಿ ತಗೊಂಡು ಬರ‍್ತೀನಿ. ಇಳಿ ಹೊತ್ತಿನ್ಯಾಗ ಒಂದೆರಡು ತಾಸು ಎಮ್ಮಿ ಮೇಸ್ತಿನಂತ. ಅಲ್ಲೇ ಬರುವಾಗ ತಲಿಮ್ಯಾಗ ಒಂದು ಹೊರಿ ಹಸೆ ಮೇವು ಹೊತುಗೊಂಡು ಬಾ” ಅಂದ.

‘ಅಪ್ಪ ನಿನಗ ತಿಳಿಯಾಕಿಲ್ಲ. ಆ ಲಾಟರಿ ಗಿಟರಿ ನಂಬಬ್ಯಾಡ. ಅವು ಮೋಸದಾಟ. ಕುಡಗೋಲು ಕುಂಬಳಕಾಯಿ ಎರಡು ನಿನ್ನ ಕೈಯಾಗ ಅದಾವು. ಹ್ಯಾಂಗ ಮಾಡ್ತಿಯೋ ಏನೋ. ನಿನ್ನ ಚಿತ್ತಕ್ಕ ಬಿಟ್ಟಿದ್ದು’ ಎಂದು ಆಕಿ ಹೊಲದ ಕಡೆ ಹೆಜ್ಜೆ ಬೆಳೆಸಿದಳು.

ಅವಳ ಮಾತಿಗೆ ಕ್ಯಾರೆ ಅನ್ನದ ರಂಗಜ್ಜ ಪಟ್ಟಣಕ್ಕೆ ಹೋಗಲು ಚಹಾದ ಅಂಗಡಿ ಮುಂದ ನಿಂತಿದ್ದ ಕೆಂಪು ಬಸ್ಸು ಹತ್ತಿದ. ಇಂವ ಪಟ್ಟಣಕ್ಕೆ ಹೋಗುವುದು ಕೆಲವರಿಗೆ ಅಚ್ಚರಿಯೆನಿಸಿತು. ಮನಬಿಚ್ಚಿ ಕೇಳಿಯೂ ಬಿಟ್ಟರು. ಸಂತೆ ಮಾಡಲು ಎಂದು ಹೇಳಿ ಗುಟ್ಟನ್ನು ಬಿಟ್ಟು ಕೊಡಲಿಲ್ಲ.

ರಂಗಜ್ಜ ಪಟ್ಟಣಕ್ಕೆ ಬಂದಾಗ ಬಿಸಿಲಿನ ಜಳ ರಣರಣ ಹೊಡೆಯತೊಡಗಿತ್ತು. ಪಟ್ಟಣದ ಬಜಾರು ಟಾರು ರಸ್ತೆಯ ತುಂಬಾ ಜನವೋ ಜನ. ಇವರೆಲ್ಲರೂ ಲಾಟರಿಕೊಳ್ಳಲು ಬಂದಿರಬೇಕೆಂದು ಊಹಿಸಿದ. ಲಾಟರಿ ಟಿಕೇಟು ಆಗಿ ಬಿಟ್ಟಾವು ಎಂಬ ಭಯದಿಂದ ಲಾಟರಿ ಅಂಗಡಿ ಹುಡುಕಲು ಸನ್ನದ್ಧಗೊಂಡ.

ಲಾಟರಿ ಮಾರುವ ಟ್ಯಾಕ್ಸಿ ಗಾಡಿಯೊಂದು ಮೈಕಿನಲ್ಲಿ ಅನೌನ್ಸು ಮಾಡುತ್ತ ರಂಗಜ್ಜನ ಕಡೆಗೇ ಬಂತು. ‘ಬಂಪರ್ ಲಾಟರಿ. ಇಂದೇ ಡ್ರಾ. ಹತ್ತು ರೂಪಾಯಿ ಟಿಕೇಟಿಗೆ ಒಂದು ಲಕ್ಷ. ಐವತ್ತು ರೂಪಾಯಿಗೆ ಒಂದು ಕೋಟಿ ರೂಪಾಯಿ ಡ್ರಾ ಇದೆ. ಅದೃಷ್ಟದ ಲಕ್ಷ್ಮೀ ನಿಮಗೆ ಒಲಿಯಲಿದ್ದಾಳೆ. ಖರೀದಿಸಿ. ಮರೆಯದೆ ಟಿಕೇಟಿನ ಜೊತೆಗೆ ಶ್ಯಾಂಪೂ ಪಡೆಯಿರಿ.’ ಎಂದು ಆ ಮೈಕು ಪಟ್ಟಣದ ಕಿವಿಯಲ್ಲಿ ಕೂಗತೊಡಗಿತ್ತು.

ರಂಗಜ್ಜ ಉತ್ತೇಜನಗೊಂಡ. ಲಾಟರಿ ಹೊಡೆದವನಂತೆ ಖುಷಿಗೊಂಡ. ಒಳ ಜೇಬಿನಿಂದ ಅರವತ್ತು ರೂಪಾಯಿ ತೆಗೆದು ಹತ್ತು ಮತ್ತು ಐವತ್ತು ರೂಪಾಯಿಯ ತಲಾ ಒಂದೊಂದು ಟಿಕೇಟು, ಎರಡು ಶ್ಯಾಂಪೂ ಪಾಕೇಟ್ ಪಡೆದುಕೊಂಡು ಹಿಗ್ಗಿನಿಂದ ಊರ ಕಡೆ ನಡೆದ.

ರಾತ್ರಿ ಗುಡಿಸಲದಲ್ಲಿ ಹನುಮಿ ಸೆಟಗೊಂಡು, ಆ ಎಲ್ಲ ಸಿಟ್ಟನ್ನು ಅರೆಯುತ್ತಿದ್ದ ಹಿಂಡಿಯ ಮೇಲೆ ತೀರಿಸಿಕೊಳ್ಳತೊಡಗಿದ್ದಳು. ‘ಹನುಮವ್ವ ನೋಡಿಲ್ಲಿ. ಟಿಕೇಟಿನ ಸಂಗಡ ಶ್ಯಾಂಪೂ ಕೊಟ್ಟಾರ. ಇವು ಮಲ್ಲಗಿ ಹೂವಿನಂಗ ಘಮ ಘಮ ಅಂತಾವಂತೆ. ಇನ್ನ ಲಾಟರಿಯಂತೂ ನನಗ ಹೊಡೆದ ಹೊಡೆಯುತ್ತಾ...’ಅಂತ ರಂಗಜ್ಜ ಅವಳ ಕೋಪವನ್ನು ಆರಿಸಲು ನೋಡಿದ.

ಹನುಮಿ ಖುಷಿಯಾಗಿ ಚೆಂಡು ಹೂವಿನಂತೆ ಮುಖ ಅರಳಿಸಿದಳು. ಅವಳು ಟಿ.ವಿ.ಯಲ್ಲಿ ಶ್ಯಾಂಪೂ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದ ಉದ್ದ ಕೇಶರಾಶಿಯ ಚೆಲುವೆಯರನ್ನು ಕಂಡು ಮತ್ಸರ ಪಟ್ಟಿದ್ದಳು. ಸಕ್ಕರಿ, ಚಾಪುಡಿ ತರಲು ಶೆಟ್ಟರ ಕಿರಾಣಿ ಅಂಗಡಿಗೆ ಹೋದಾಗ ಅಲ್ಲಿ ಇಳಿಬಿಟ್ಟಿದ್ದ ಶ್ಯಾಂಪೂ ಚೀಟುಗಳನ್ನು ನೋಡಿದ್ದಳು. ಆದರೆ ತರಲು ಅದ್ಯಾಕೋ ಹಿಂಜರಿಕೆ ಅನಿಸಿ ಶ್ಯಾಂಪೂ ತರುವುದಕ್ಕೆ ಎಳ್ಳುನೀರು ಬಿಟ್ಟಿದ್ದಳು. ಈಗ ತಾನು ಶ್ಯಾಂಪೂ ಹಚ್ಚಿಕೊಳ್ಳುವ ಭಾಗ್ಯವನ್ನು ಈ ಲಾಟರಿ ಕರುಣಿಸುತ್ತಿರುವುದನ್ನು ಸ್ವಾಗತಿಸಿದಳು. ಶ್ಯಾಂಪೂವಿನ ಘಮಕ್ಕೆ ಮನಸೋತ ಅವಳ ಮನಸಿನ ಹೊಲದ ತುಂಬಾ ಕನಸಿನ ಸಸಿಗಳು ಮೊಳಯತೊಡಗಿದ್ದವು.

ಇವತ್ತು ಎಂದಿಗಿಂತ ಬೇಗನೆ ಎದ್ದು ಕಸ ಮುಸುರೆ ಮಾಡಿದ ಹನುಮಿ ಜಳಕ ಮಾಡಲು ಒಲೆಯ ಮೇಲೆ ಗಡಗಿಯಲ್ಲಿ ನೀರು ಕಾಯಿಸಲು ಇಟ್ಟಳು. ಅವಳಿಗೆ ಶ್ಯಾಂಪೂ ಹಚ್ಚಿಕೊಳ್ಳುವ, ಅದರ ಘಮ ಸವಿಯುವ ಕುತೂಹಲ ಒಳಗೊಳಗೆ ಹೆಡೆಯಾಡತೊಡಗಿತ್ತು.
ನಿನ್ನೆ ಕೊಂಡಿರುವ ಲಾಟರಿ ಕತೆ ಏನಾಗಿದೆ ಅನ್ನುವುದನ್ನು ಮನಗಾಣಲು ರಂಗಜ್ಜ ಪತ್ರಿಕೆ ನೋಡಲು ಚಹಾದಂಗಡಿ ಕಡೆ ಹೋಗಲು ಮುಂದಾದ. ಹನುಮಿ ತಲೆಗೆ ನೀರು ಹನಿಸಿಕೊಂಡು ಅಂಗೈಯಲ್ಲಿ ಶ್ಯಾಂಪೂ ಹಾಕಿಕೊಂಡು ಕೂದಲಿಗೆ ಸವರಿದಾಗ ಏಳುವ ನೊರೆಯಾದ ಬುರುಗು ಅವಳನ್ನು ಆಹ್ಲಾದಗೊಳಿಸಿತ್ತು. ಅದ್ಯಾಕೊ ಎದುರು ಮನೆಯ ದನ ಕಾಯುವ ಸುಬ್ಬ ನೆನಪಾದ. ಅವಳು ಮೈ ತುಂಬಾ ಮಾದಕತೆ ತುಂಬಿಕೊಂಡು ಮಧುರ ಯಾತನೆಯಿಂದ ನರಳತೊಡಗಿದಳು. ಮೊದಲ ಮಳೆಗೆ ಸಿಕ್ಕ ಮಣ್ಣಿನ ಹೆಂಟೆಯಂತೆ ಅರಳತೊಡಗಿದಳು. ‘ಆ’ ಭಾಗ್ಯ ತನಗೆ ಅದ್ಯಾವಗ ಒಲಿಯುವುದೊ ಎಂದು ಮನಸಲ್ಲಿ ಮಂಡಿಗೆ ತಿನ್ನುತ್ತಾ ವಿರಹ ವೇದನೆಯಿಂದ ಬಳಲತೊಡಗಿದಳು.

ರಂಗಜ್ಜ, ಪಂಚಾಯಿತಿ ಸಿಪಾಯಿ ಸಂಗನಿಗೆ ಲಾಟರಿಕೊಟ್ಟು ಪತ್ರಿಕೆಯಲ್ಲಿ ತನ್ನ ನಂಬರು ಹತ್ತಿರುವುದನ್ನು ಖಾತ್ರಿ ಮಾಡಿಕೊಳ್ಳಲು ನೋಡಿದ. ಚಹಾದಂಗಡಿಯಲ್ಲಿ ನೆರೆದಿದ್ದ ಜನರೆಲ್ಲರೂ ಕುತೂಹಲದಿಂದ ಅದನ್ನೆ ದಿಟ್ಟಿಸತೊಡಗಿದ್ದರು. ಸಂಗ ಹುಡುಕಿ ನೋಡಿದ. ಆ ನಂಬರ್ ಎಲ್ಲೂ ಕಾಣುತ್ತಿಲ್ಲ. ರಂಗಜ್ಜ ಪೇಚು ಮಾರಿ ಹಾಕಿಕೊಂಡು ಗುಡಿಸಲು ಕಡೆ ಹೆಜ್ಜೆ ಕಿತ್ತ.

ರಂಗಜ್ಜ ಹಾಲು ಮಾರಿದ ಹಣವನ್ನು ನೀರಿನಂತೆ ಲಾಟರಿಗೆ ಖರ್ಚು ಮಾಡತೊಡಗಿದ. ಲಾಟರಿ ಲಕ್ಷ್ಮೀ ಇನ್ನೂ ಇವನಿಗೆ ಒಲಿದಿಲ್ಲ. ರಂಗಜ್ಜ ಮಾತ್ರ ನಿತ್ಯವೂ ಪ್ಯಾಟೆಗೆ ಹೋಗಿ ಲಾಟರಿ ತರುವುದನ್ನು ವ್ರತದಂತೆ ಪಾಲಿಸತೊಡಗಿದ. ಹನುಮಿ ತಪ್ಪದೆ ದಿನವೂ ಶ್ಯಾಂಪೂ ಹಚ್ಚಿಕೊಂಡು ಜಳಕ ಮಾಡುತ್ತಾಳೆ. ತಲೆಗೆ ಹನಿಸಿಕೊಂಡಾಗ ಬೀಳುತ್ತಿದ್ದ ನೀರಲ್ಲಿ ಸಣ್ಣಗೆ ಜಿನುಗುತ್ತಿದ್ದ ಅವಳ ಕಣ್ಣೀರು ಯಾರಿಗೂ ಕಾಣದೆ ಹೋದವು.