Thursday, October 8, 2009

ಲಾಟರಿ

-ಟಿ. ಎಸ್. ಗೊರವರ

ಗೌಡರ ಮನೆಯ ಪಡಸಾಲೆಯಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದ ರಂಗಜ್ಜ ಕನಸುಗಳ ಲೋಕದಲ್ಲಿ ವಿಹರಿಸತೊಡಗಿದ್ದ. ಟಿ.ವಿ.ಯಲ್ಲಿ ಮೂಡಿಬರುತ್ತಿದ್ದ ಜಾಹೀರಾತು ಅವನನ್ನು ವಾಸ್ತವ ಲೋಕದಿಂದ ಕನಸುಗಳ ಜಗತ್ತಿಗೆ ಕೈ ಹಿಡಿದು ಕರೆದುಕೊಂಡು ಹೋಗಿತ್ತು.
ಆ ಜಾಹೀರಾತಿನಲ್ಲಿ ಗುಡಿಸಲ ಮನೆಯ ಬಡವನಿಗೆ ಕೋಟಿ ರೂಪಾಯಿಯ ಬಂಪರ್ ಲಾಟರಿ ಹೊಡೆದು, ಅವ ಮಹಡಿ ಮನೆ ಕಟ್ಟಿಸುತ್ತಾನೆ. ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಾನೆ. ಈ ರಂಜನೀಯ ಜಾಹೀರಾತನ್ನು ಕಣ್ಣ ತುಂಬಾ ತುಂಬಿಕೊಂಡು ರಂಗಜ್ಜ ಮನೆ ಕಡೆ ಮುಖ ಮಾಡುತ್ತಾನೆ.

ರಂಗಜ್ಜ ಗುಡಿಸಲಿಗೆ ಬಂದಾಗ ಆಗಲೇ ರಾತ್ರಿ ಒಂಬತ್ತಾಗಿತ್ತು. ಅಡ್ಡಗೋಡೆಯ ಮೇಲಿಟ್ಟಿದ್ದ ಬುಡ್ಡಿ ಚಿಮಣಿ ಹೊಗೆಯಿಂದ ಅಲುಗಾಡತೊಡಗಿತ್ತು. ಮಗಳು ಹನುಮಿ ಒಲೆ ಊದುತ್ತಿರುವ ಸದ್ದು ಕೇಳಿ, ‘ಕಟ್ಟಿಗೆ ಹಸಿ ಅದಾವನು. ಗುಡಿಸಲ ತುಂಬಾ ಹೊಗಿ ಅಡರಿ ಕುಂದ್ರುಸ್ಯ ಕೊಡಾವಲ್ದು. ಸ್ವಲ್ಪ ಚಿಮಣಿ ಎಣ್ಣಿ ಹಾಕಿ ಒಲಿ ಹಚ್ಚು’ ಅಂದ.

ಹನುಮಿ ಒಲಿಯೊಳಗ ಕಟ್ಟಿಗೆ ತುರುಕುತ್ತಾ, ಹೆಂಚಿನಲ್ಲಿ ಬೇಯಿಸುತ್ತಿದ್ದ ರೊಟ್ಟಿಯನ್ನು ತಿರುವಿ ಹಾಕಿ, ಗುಡಿಸಲ ತುಂಬಾ ದಟ್ಟವಾಗಿ ಕವಿದಿದ್ದ ಹೊಗೆಯಿಂದಾಗ ಕಣ್ಣಲ್ಲಿ ತೆಳ್ಳಗೆ ಆಡುತ್ತಿದ್ದ ನೀರನ್ನು ಸೆರಗಿನ ಚುಂಗಿನಿಂದ ಒರೆಸಿಕೊಳ್ಳುತ್ತಾ, ‘ಚಿಮಣಿ ಎಣ್ಣೆ ಆಗೈತಿ. ಕಟಗಿ ನೋಡಿದರ ಹಸಿ ಆದಾವು. ರೊಟ್ಟಿ ಮಾಡೋದರಾಗ ಜೀವ ಸಣ್ಣ ಆಕ್ಕೆತಿ. ನಾಳೆ ಎಮ್ಮಿ ಮೇಸಿಕೊಂಡು ನೀನು ಬರುವಾಗ ಅಲ್ಲೇ ಗೌಡರ ಹೊಲದಾಗ ಒಂದು ಹೊರಿ ಒಣ ಕಟಗಿ ತಗೊಂಡು ಬಾ...’ ಅಂತ ಹನುಮಿ ಒಂದು ಕೇಳಿದರ ಒಂಬತ್ತು ಹೇಳಿದಳು.

“ಇನ್ನೊಂದು ವರ್ಷವೊಪ್ಪತ್ತು ಹ್ಯಾಂಗರ ಮಾಡು, ಕೊಟ್ಟ ಮನಿಗೆ ಹೋಗಿ ಅಂತ. ದೇವರು ನಮ್ಮ ಪಾಲಿಗೆ ಅದಾನು.”
“ಅಲ್ಲೋ ಎಪ್ಪಾ. ಒಂದು ಹೊತ್ತಿಗೇ ತಿನ್ನಾಕ ಸರಿಯಾಗಿ ಕೂಳಿಲ್ಲ. ಇನ್ನ ಮದುವಿ ಹ್ಯಾಂಗ ಮಾಡುಸ್ತೀ.”

“ಮಗಳ ನೀನೇನು ಹೆದರಬೇಡವ. ನಿನ್ನೆ ಗೌಡರ ಮನಿಗೆ ಹೋಗಿದ್ನಲ ಅಲ್ಲಿ ಟಿ.ವಿ. ನೋಡಿದೆ. ಅದರಾಗ ಲಾಟರಿ ಲಕ್ಷ್ಮಿ ಒಲಿದು ಬಡುವ ಮನುಷ್ಯ ಮಹಡಿ ಕಟ್ಟಿಸಿದ. ನಾನೂ ನಾಳೆ ಲಾಟರಿ ತಗೊಂತಿನಿ. ಆ ಲಾಟರಿ ಲಕ್ಷ್ಮಿ ನನಗೂ ಒಲಿದ ಒಲಿತಾಳ. ಅದರಾಗ ನಿನ್ನ ಮದುವಿ ಮಾಡುತಿನಿ”. ಅಂತ ರಂಗಜ್ಜ ಲಾಟರಿ ಹೊಡೆದವನಂತೆ ಬಹು ಹಿಗ್ಗಿನಿಂದ ನುಡಿದ.

“ಅಪ್ಪ, ನಾವು ದುಡಿದಿದ್ದ ನಮಗೆ ಇಲ್ಲ. ಇನ್ನು ಲಾಟರಿ ಹೊಡೆಯುತ್ತ ಅನ್ನೋದು ಕನಸಿನ ಮಾತು. ಎಮ್ಮೆ ಹೈನ ಸರಿಯಾಗಿ ಮಾಡಿಕೊಂಡು ಹಾಲು, ಮೊಸರು ಮಾರಿ ನಾಲ್ಕು ಕಾಸು ಉಳಿಸೋಣಂತ” ಹೀಗೆ ಹನುಮಿ ತನ್ನ ಎದೆಯಾಗಿನ ತಳಮಳವನ್ನು ರಂಗಜ್ಜನ ಮುಂದೆ ಇಡಿಯಾಗಿ ಸುರುವಿದಳು.

“ನಿನಗೆ ತಿಳಿಯಾಕಿಲ್ಲ. ಮಳ್ಳ ಪಡಿಸೆಂಟು ನೀನು. ಸುಮ್ನೆ ರೊಟ್ಟಿ ತಾ. ಹಸಿ ಮೆಣಸಿನಕಾಯಿ ಹಿಂಡಿ ಇದ್ರ ತಟಗು ಹಚ್ಚು” ಎಂದು ಹನುಮಿಯ ಮಾತಿಗೆ ಕ್ಯಾರೆ ಅನ್ನದೆ ಗಾಳಿಗೆ ತೂರಿದ. ಆಕೆ ಬುಡ್ಡಿ ಚಿಮಣಿಯ ಬತ್ತಿ ಏರಿಸ ರಂಗಜ್ಜನಿಗೆ ರೊಟ್ಟಿ ಹಚ್ಚಿ ಕೊಟ್ಟಳು.

ರಂಗಜ್ಜ ರೊಟ್ಟಿ ತಿಂದು, ಎಮ್ಮೆಗೆ ಮೇವು ಹಾಕಿ ಅಂಗಳದಲ್ಲಿ ಚಾಪೆ ಹಾಸಿ ಮುಗಿಲ ಕಡೆ ಮುಖ ಮಾಡಿ ಮಲಗಿದ. ಆಕಾಶದಲ್ಲಿ ಚುಕ್ಕಿ ಚಂದ್ರಮರ ರಾಸಲೀಲೆ ನಡೆದಿತ್ತು. ತಣ್ಣಗೆ ಗಾಳಿ ಚಾಮರ ಬೀಸತೊಡಗಿತ್ತು. ರಂಗಜ್ಜನ ಕಣ್ಣ ತುಂಬಾ ಕನಸುಗಳ ಮೆರವಣಿಗೆ ನಡೆದಿತ್ತು.

ಗುಡಿಸಲ ಒಳಗೆ ಮಲಗಿದ್ದ ಹನುಮಿ ಪದೆ ಪದೆ ಮಗ್ಗುಲ ಬದಲಿಸತೊಡಗಿದ್ದಳು. ಅದು ಹರೆಯದ ಹೆಣ್ಣೆಂಗಸು. ಅವಳ ವಾರಿಗೆಯ ಗೆಳತಿಯರು ಆಗಲೇ ಮದುವೆಯಾಗಿ ಮಕ್ಕಳನ್ನೂ ಕಂಡಿದ್ದಾರೆ. ಅವರು ಯುಗಾದಿ ಹಬ್ಬಕ್ಕೋ, ಪಂಚಮಿ ಹಬ್ಬಕ್ಕೊ ಊರಿಗೆ ಬಂದಾಗ ಅವರನ್ನು ನೋಡಿದ ಹನುಮಿಯ ಹೊಕ್ಕುಳದಾಳದಲ್ಲಿ ಚಿಟಮುಳ್ಳು ಆಡಿಸಿದಂತಾಗುತ್ತದೆ. ‘ನನ್ನ ಹಣೆಬರಹದಾಗ ಲಗ್ನ ಆಗೋದು ಬರದಿದ್ದಂಗಿಲ್ಲ..’ ಅಂತ ಅದೆಷ್ಟೋ ಸಲ ಪೇಚಾಡಿದ್ದಾಳೆ.

ಈ ಕಡೆ ರಂಗಜ್ಜನಿಗೆ ಕನಸಿನಲ್ಲಿ ಲಾಟರಿ ದೇವತೆ ಒಲಿದು ಹರ್ಷದ ಶಿಖರದ ತುತ್ತ ತುದಿಯಲ್ಲಿ ನಿಂತಿದ್ದಾನೆ. ಗುಡಿಸಲು ಮಾಯವಾಗಿ ಅಲ್ಲಿ ಬಣ್ಣದ ಮನೆ ತಲೆಯೆತ್ತಿ ನಿಂತಿದೆ. ಮಗಳ ಮದುವೆಯಲ್ಲಿ ಹೊಸ ಮಲ್ಲು ದೋತಿ ಉಟ್ಟು ಸಂಭ್ರಮದಿಂದ ಓಡಾಡುತ್ತಿದ್ದಾನೆ. ಇನ್ನೇನು ಮಗಳಿಗೆ ಅಕ್ಕಿ ಕಾಳು ಹಾಕಬೇಕು ಅನ್ನುವಷ್ಟರಲ್ಲಿ ನಿದ್ರಾದೇವತೆ ರಂಗಜ್ಜನೊಂದಿಗೆ ಮುನಿಸಿಕೊಂಡವಳಂತೆ ಓಟ ಕೀಳುತ್ತಾಳೆ.

ಮಂದಹಾಸ ಬೀರುತ್ತಾ ಎದ್ದ ರಂಗಜ್ಜ ಮಗಳಿಗೆ ಎಮ್ಮೆ ಹಾಲು ಹಿಂಡಲು ಅವಸರಿಸಿದ. ಆಕೆ ಚಮತು ಮಾಡಿ ಎಲ್ಡು ಸಿಲವಾರ ತಂಬಿಗೆ ತುಂಬಾ ಹಾಲು ಕರೆದಳು. ಹಾಲು ತೆಗೆದುಕೊಂಡು ನಿತ್ಯವೂ ಕೊಡುವ ಮನೆಗಳಿಗೆ ಹಾಲು ಹಾಕಿ,“ಈ ವಾರ ಮುಂಗಾಡನ ರೊಕ್ಕ ಕೊಡ್ರೀ. ಮನಾಗ ಮುಕ್ಕು ಜ್ವಾಳದ ಕಾಳಿಲ್ಲ. ಸಂತಿ ಮಾಡಬೇಕು. ಕಿರಾಣಿ ಅಂಗಡಿ ಬಾಕಿ ಹರೀಬೇಕು” ಅಂತ ಬುರುಡಿ ಬಿಟ್ಟ. ಅವರು ಹಾಲು ತೆಗೆದುಕೊಂಡು ರಂಗಜ್ಜನ ಆಣತಿಯಂತೆ ದುಡ್ಡು ಕೊಟ್ಟರು.

ರಂಗಜ್ಜ ಖುಷಿಯಿಂದ ಊರಗಲ ಮುಖ ಮಾಡಿಕೊಂಡು ಮನೆಗೆ ಬಂದ. ಹನುಮಿ ಯಾರದೊ ಹೊಲದಲ್ಲಿ ಕಳೆ ತೆಗೆಯಲು ಹೋಗಲು ಬುತ್ತಿ ಕಟ್ಟತೊಡಗಿದ್ದಳು. “ನೀನು ಹೊಲಕ್ಕ ಹೋಗು. ನಾನು ಪಟ್ಟಣಕ್ಕೆ ಹೋಗಿ ಲಾಟರಿ ತಗೊಂಡು ಬರ‍್ತೀನಿ. ಇಳಿ ಹೊತ್ತಿನ್ಯಾಗ ಒಂದೆರಡು ತಾಸು ಎಮ್ಮಿ ಮೇಸ್ತಿನಂತ. ಅಲ್ಲೇ ಬರುವಾಗ ತಲಿಮ್ಯಾಗ ಒಂದು ಹೊರಿ ಹಸೆ ಮೇವು ಹೊತುಗೊಂಡು ಬಾ” ಅಂದ.

‘ಅಪ್ಪ ನಿನಗ ತಿಳಿಯಾಕಿಲ್ಲ. ಆ ಲಾಟರಿ ಗಿಟರಿ ನಂಬಬ್ಯಾಡ. ಅವು ಮೋಸದಾಟ. ಕುಡಗೋಲು ಕುಂಬಳಕಾಯಿ ಎರಡು ನಿನ್ನ ಕೈಯಾಗ ಅದಾವು. ಹ್ಯಾಂಗ ಮಾಡ್ತಿಯೋ ಏನೋ. ನಿನ್ನ ಚಿತ್ತಕ್ಕ ಬಿಟ್ಟಿದ್ದು’ ಎಂದು ಆಕಿ ಹೊಲದ ಕಡೆ ಹೆಜ್ಜೆ ಬೆಳೆಸಿದಳು.

ಅವಳ ಮಾತಿಗೆ ಕ್ಯಾರೆ ಅನ್ನದ ರಂಗಜ್ಜ ಪಟ್ಟಣಕ್ಕೆ ಹೋಗಲು ಚಹಾದ ಅಂಗಡಿ ಮುಂದ ನಿಂತಿದ್ದ ಕೆಂಪು ಬಸ್ಸು ಹತ್ತಿದ. ಇಂವ ಪಟ್ಟಣಕ್ಕೆ ಹೋಗುವುದು ಕೆಲವರಿಗೆ ಅಚ್ಚರಿಯೆನಿಸಿತು. ಮನಬಿಚ್ಚಿ ಕೇಳಿಯೂ ಬಿಟ್ಟರು. ಸಂತೆ ಮಾಡಲು ಎಂದು ಹೇಳಿ ಗುಟ್ಟನ್ನು ಬಿಟ್ಟು ಕೊಡಲಿಲ್ಲ.

ರಂಗಜ್ಜ ಪಟ್ಟಣಕ್ಕೆ ಬಂದಾಗ ಬಿಸಿಲಿನ ಜಳ ರಣರಣ ಹೊಡೆಯತೊಡಗಿತ್ತು. ಪಟ್ಟಣದ ಬಜಾರು ಟಾರು ರಸ್ತೆಯ ತುಂಬಾ ಜನವೋ ಜನ. ಇವರೆಲ್ಲರೂ ಲಾಟರಿಕೊಳ್ಳಲು ಬಂದಿರಬೇಕೆಂದು ಊಹಿಸಿದ. ಲಾಟರಿ ಟಿಕೇಟು ಆಗಿ ಬಿಟ್ಟಾವು ಎಂಬ ಭಯದಿಂದ ಲಾಟರಿ ಅಂಗಡಿ ಹುಡುಕಲು ಸನ್ನದ್ಧಗೊಂಡ.

ಲಾಟರಿ ಮಾರುವ ಟ್ಯಾಕ್ಸಿ ಗಾಡಿಯೊಂದು ಮೈಕಿನಲ್ಲಿ ಅನೌನ್ಸು ಮಾಡುತ್ತ ರಂಗಜ್ಜನ ಕಡೆಗೇ ಬಂತು. ‘ಬಂಪರ್ ಲಾಟರಿ. ಇಂದೇ ಡ್ರಾ. ಹತ್ತು ರೂಪಾಯಿ ಟಿಕೇಟಿಗೆ ಒಂದು ಲಕ್ಷ. ಐವತ್ತು ರೂಪಾಯಿಗೆ ಒಂದು ಕೋಟಿ ರೂಪಾಯಿ ಡ್ರಾ ಇದೆ. ಅದೃಷ್ಟದ ಲಕ್ಷ್ಮೀ ನಿಮಗೆ ಒಲಿಯಲಿದ್ದಾಳೆ. ಖರೀದಿಸಿ. ಮರೆಯದೆ ಟಿಕೇಟಿನ ಜೊತೆಗೆ ಶ್ಯಾಂಪೂ ಪಡೆಯಿರಿ.’ ಎಂದು ಆ ಮೈಕು ಪಟ್ಟಣದ ಕಿವಿಯಲ್ಲಿ ಕೂಗತೊಡಗಿತ್ತು.

ರಂಗಜ್ಜ ಉತ್ತೇಜನಗೊಂಡ. ಲಾಟರಿ ಹೊಡೆದವನಂತೆ ಖುಷಿಗೊಂಡ. ಒಳ ಜೇಬಿನಿಂದ ಅರವತ್ತು ರೂಪಾಯಿ ತೆಗೆದು ಹತ್ತು ಮತ್ತು ಐವತ್ತು ರೂಪಾಯಿಯ ತಲಾ ಒಂದೊಂದು ಟಿಕೇಟು, ಎರಡು ಶ್ಯಾಂಪೂ ಪಾಕೇಟ್ ಪಡೆದುಕೊಂಡು ಹಿಗ್ಗಿನಿಂದ ಊರ ಕಡೆ ನಡೆದ.

ರಾತ್ರಿ ಗುಡಿಸಲದಲ್ಲಿ ಹನುಮಿ ಸೆಟಗೊಂಡು, ಆ ಎಲ್ಲ ಸಿಟ್ಟನ್ನು ಅರೆಯುತ್ತಿದ್ದ ಹಿಂಡಿಯ ಮೇಲೆ ತೀರಿಸಿಕೊಳ್ಳತೊಡಗಿದ್ದಳು. ‘ಹನುಮವ್ವ ನೋಡಿಲ್ಲಿ. ಟಿಕೇಟಿನ ಸಂಗಡ ಶ್ಯಾಂಪೂ ಕೊಟ್ಟಾರ. ಇವು ಮಲ್ಲಗಿ ಹೂವಿನಂಗ ಘಮ ಘಮ ಅಂತಾವಂತೆ. ಇನ್ನ ಲಾಟರಿಯಂತೂ ನನಗ ಹೊಡೆದ ಹೊಡೆಯುತ್ತಾ...’ಅಂತ ರಂಗಜ್ಜ ಅವಳ ಕೋಪವನ್ನು ಆರಿಸಲು ನೋಡಿದ.

ಹನುಮಿ ಖುಷಿಯಾಗಿ ಚೆಂಡು ಹೂವಿನಂತೆ ಮುಖ ಅರಳಿಸಿದಳು. ಅವಳು ಟಿ.ವಿ.ಯಲ್ಲಿ ಶ್ಯಾಂಪೂ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದ ಉದ್ದ ಕೇಶರಾಶಿಯ ಚೆಲುವೆಯರನ್ನು ಕಂಡು ಮತ್ಸರ ಪಟ್ಟಿದ್ದಳು. ಸಕ್ಕರಿ, ಚಾಪುಡಿ ತರಲು ಶೆಟ್ಟರ ಕಿರಾಣಿ ಅಂಗಡಿಗೆ ಹೋದಾಗ ಅಲ್ಲಿ ಇಳಿಬಿಟ್ಟಿದ್ದ ಶ್ಯಾಂಪೂ ಚೀಟುಗಳನ್ನು ನೋಡಿದ್ದಳು. ಆದರೆ ತರಲು ಅದ್ಯಾಕೋ ಹಿಂಜರಿಕೆ ಅನಿಸಿ ಶ್ಯಾಂಪೂ ತರುವುದಕ್ಕೆ ಎಳ್ಳುನೀರು ಬಿಟ್ಟಿದ್ದಳು. ಈಗ ತಾನು ಶ್ಯಾಂಪೂ ಹಚ್ಚಿಕೊಳ್ಳುವ ಭಾಗ್ಯವನ್ನು ಈ ಲಾಟರಿ ಕರುಣಿಸುತ್ತಿರುವುದನ್ನು ಸ್ವಾಗತಿಸಿದಳು. ಶ್ಯಾಂಪೂವಿನ ಘಮಕ್ಕೆ ಮನಸೋತ ಅವಳ ಮನಸಿನ ಹೊಲದ ತುಂಬಾ ಕನಸಿನ ಸಸಿಗಳು ಮೊಳಯತೊಡಗಿದ್ದವು.

ಇವತ್ತು ಎಂದಿಗಿಂತ ಬೇಗನೆ ಎದ್ದು ಕಸ ಮುಸುರೆ ಮಾಡಿದ ಹನುಮಿ ಜಳಕ ಮಾಡಲು ಒಲೆಯ ಮೇಲೆ ಗಡಗಿಯಲ್ಲಿ ನೀರು ಕಾಯಿಸಲು ಇಟ್ಟಳು. ಅವಳಿಗೆ ಶ್ಯಾಂಪೂ ಹಚ್ಚಿಕೊಳ್ಳುವ, ಅದರ ಘಮ ಸವಿಯುವ ಕುತೂಹಲ ಒಳಗೊಳಗೆ ಹೆಡೆಯಾಡತೊಡಗಿತ್ತು.
ನಿನ್ನೆ ಕೊಂಡಿರುವ ಲಾಟರಿ ಕತೆ ಏನಾಗಿದೆ ಅನ್ನುವುದನ್ನು ಮನಗಾಣಲು ರಂಗಜ್ಜ ಪತ್ರಿಕೆ ನೋಡಲು ಚಹಾದಂಗಡಿ ಕಡೆ ಹೋಗಲು ಮುಂದಾದ. ಹನುಮಿ ತಲೆಗೆ ನೀರು ಹನಿಸಿಕೊಂಡು ಅಂಗೈಯಲ್ಲಿ ಶ್ಯಾಂಪೂ ಹಾಕಿಕೊಂಡು ಕೂದಲಿಗೆ ಸವರಿದಾಗ ಏಳುವ ನೊರೆಯಾದ ಬುರುಗು ಅವಳನ್ನು ಆಹ್ಲಾದಗೊಳಿಸಿತ್ತು. ಅದ್ಯಾಕೊ ಎದುರು ಮನೆಯ ದನ ಕಾಯುವ ಸುಬ್ಬ ನೆನಪಾದ. ಅವಳು ಮೈ ತುಂಬಾ ಮಾದಕತೆ ತುಂಬಿಕೊಂಡು ಮಧುರ ಯಾತನೆಯಿಂದ ನರಳತೊಡಗಿದಳು. ಮೊದಲ ಮಳೆಗೆ ಸಿಕ್ಕ ಮಣ್ಣಿನ ಹೆಂಟೆಯಂತೆ ಅರಳತೊಡಗಿದಳು. ‘ಆ’ ಭಾಗ್ಯ ತನಗೆ ಅದ್ಯಾವಗ ಒಲಿಯುವುದೊ ಎಂದು ಮನಸಲ್ಲಿ ಮಂಡಿಗೆ ತಿನ್ನುತ್ತಾ ವಿರಹ ವೇದನೆಯಿಂದ ಬಳಲತೊಡಗಿದಳು.

ರಂಗಜ್ಜ, ಪಂಚಾಯಿತಿ ಸಿಪಾಯಿ ಸಂಗನಿಗೆ ಲಾಟರಿಕೊಟ್ಟು ಪತ್ರಿಕೆಯಲ್ಲಿ ತನ್ನ ನಂಬರು ಹತ್ತಿರುವುದನ್ನು ಖಾತ್ರಿ ಮಾಡಿಕೊಳ್ಳಲು ನೋಡಿದ. ಚಹಾದಂಗಡಿಯಲ್ಲಿ ನೆರೆದಿದ್ದ ಜನರೆಲ್ಲರೂ ಕುತೂಹಲದಿಂದ ಅದನ್ನೆ ದಿಟ್ಟಿಸತೊಡಗಿದ್ದರು. ಸಂಗ ಹುಡುಕಿ ನೋಡಿದ. ಆ ನಂಬರ್ ಎಲ್ಲೂ ಕಾಣುತ್ತಿಲ್ಲ. ರಂಗಜ್ಜ ಪೇಚು ಮಾರಿ ಹಾಕಿಕೊಂಡು ಗುಡಿಸಲು ಕಡೆ ಹೆಜ್ಜೆ ಕಿತ್ತ.

ರಂಗಜ್ಜ ಹಾಲು ಮಾರಿದ ಹಣವನ್ನು ನೀರಿನಂತೆ ಲಾಟರಿಗೆ ಖರ್ಚು ಮಾಡತೊಡಗಿದ. ಲಾಟರಿ ಲಕ್ಷ್ಮೀ ಇನ್ನೂ ಇವನಿಗೆ ಒಲಿದಿಲ್ಲ. ರಂಗಜ್ಜ ಮಾತ್ರ ನಿತ್ಯವೂ ಪ್ಯಾಟೆಗೆ ಹೋಗಿ ಲಾಟರಿ ತರುವುದನ್ನು ವ್ರತದಂತೆ ಪಾಲಿಸತೊಡಗಿದ. ಹನುಮಿ ತಪ್ಪದೆ ದಿನವೂ ಶ್ಯಾಂಪೂ ಹಚ್ಚಿಕೊಂಡು ಜಳಕ ಮಾಡುತ್ತಾಳೆ. ತಲೆಗೆ ಹನಿಸಿಕೊಂಡಾಗ ಬೀಳುತ್ತಿದ್ದ ನೀರಲ್ಲಿ ಸಣ್ಣಗೆ ಜಿನುಗುತ್ತಿದ್ದ ಅವಳ ಕಣ್ಣೀರು ಯಾರಿಗೂ ಕಾಣದೆ ಹೋದವು.

No comments:

Post a Comment