Monday, April 12, 2010

ನಕ್ಸಲರ ದಾಳಿ-ಕ್ರೂರ, ಖಂಡನೀಯ...ಆದರೆ!

ಇದೇ ಏಪ್ರಿಲ್ ೬ರಂದು ಬೆಳಿಗ್ಗೆ ನಕ್ಸಲ್ ಚಳವಳಿಯ ಇತಿಹಾಸದಲ್ಲೇ ನಡೆಸಲಾದ ಅತಿ ದೊಡ್ಡದಾದ ಮತ್ತು ಕ್ರೂರವಾದ ದಾಳಿಯಲ್ಲಿ ಸಿಪಿ‌ಐ (ಮಾವೋವಾದಿ) ಪಕ್ಷದ ಪಿ‌ಎಲ್‌ಎ ಗೆರಿಲ್ಲಾ ಪಡೆಗಳು ಸಿ‌ಆರ್‌ಪಿ‌ಎಫ್‌ನ ೭೬ ಕ್ಕೂ ಹೆಚ್ಚು ಯೋಧರನ್ನು ಕೊಂದುಹಾಕಿವೆ.

ಪ್ರಾಯಶಃ ಸಾವಿನ ಸಂಖ್ಯೆ ಇನ್ನೂ ಹೆಚ್ಚಲಿದ್ದು ಸ್ವಾತಂತ್ರ್ಯಾ ನಂತರದಲ್ಲಿ ಈಶಾನ್ಯ ಭಾರತದಲ್ಲಿ ಬಿಟ್ಟರೆ ಭಾರತದ ಅರೆ ಸೈನಿಕ ಪಡೆಯ ಇಡೀ ಕಂಪನಿಯೊಂದು ಈ ರೀತಿ ಅಂತರಿಕ ಸಂಘ ರ್ಷದಲ್ಲಿ ಹತವಾದದ್ದು ಇದೇ ಮೊದಲಿರ ಬಹುದು. ಸರಕಾರ ಕೂಡಲೇ ಇದಕ್ಕೆ ದೊಡ್ಡ ಮಟ್ಟದಲ್ಲಿ ಪ್ರತಿಕಾರ ತೀರಿಸಿಕೊಳ್ಳಲು ಸಜ್ಜಾಗು ತ್ತಿದೆ. ಈ ದಾಳಿ ನಡೆದ ಸಂಜೆಯೇ ತುರ್ತಾಗಿ ನಡೆದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾವೊವಾದಿಗಳನ್ನು ಮಟ್ಟಹಾಕಲು ಸೇನಾಪಡೆಗಳನ್ನು ಬಳಸುವ ಬಗ್ಗೆ ಗುಪ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದರ ಹಿಂದಿನ ದಿನ ತಾನೇ ಗೃಹಮಂತ್ರಿ ಚಿದಂಬರಂ ಲಾಲ್‌ಘಡ್‌ನಲ್ಲಿ ಒಂದುಕಡೆ ನಕ್ಸಲರನ್ನು ಮಾತುಕತೆಗೂ ಆಹ್ವಾನಿಸಿ ಮತ್ತೊಂದು ಕಡೆ ನಕ್ಸಲ್ ಪೀಡೆಯನ್ನು ಇನ್ನು ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಹತ್ತಿಕ್ಕ ಲಾಗುವುದೆಂದೂ ಏಕಕಾಲದಲ್ಲಿ ಘೋಷಿಸಿದ್ದರು. ಅದರ ಮರುದಿನವೇ ಈ ದಾಳಿ ನಡೆದಿರುವುದು ಸರಕಾರಕ್ಕೆ ಮುಖಭಂಗವಾಗಿದೆ. ಹೀಗಾಗಿ ಇದನ್ನು ಸರಕಾರ ಸವಾಲೆಂದು ಸ್ವೀಕರಿಸಿರುವುದು ಅದರ ಹೇಳಿಕೆಗಳು ಮತ್ತು ನಡೆಸುತ್ತಿರುವ ತಯಾರಿಗಳಿಂದ ಸ್ಪಷ್ಟವಾಗುತ್ತಿದೆ. ಇದರ ಒಟ್ಟು ಫಲಿತಾಂಶವೆಂದರೆ ಚತ್ತೀಸ್‌ಘಡ್‌ದ ಚಂದ್ರಾ ವತಿ ನದಿಯಲ್ಲಿ ಇಷ್ಟರಲ್ಲೇ ರಕ್ತದ ಹೊಳೆಯೇ ಹರಿಯಲಿದೆ. ಅಲ್ಲಿ ಹರಿಯುವ ರಕ್ತದಲ್ಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಪಾಲೆಷ್ಟು, ಮಾವೊವಾದಿಗಳ ಪಾಲೆಷ್ಟು ಮತ್ತು ಅಮಾಯಕ ಆದಿವಾಸಿಗಳ ಪಾಲೆಷ್ಟು ಎಂಬ ಚರ್ಚೆಯಲ್ಲಿ ತೊಡಗುವುದು ನಿರರ್ಥಕ ಮತ್ತು ಕ್ರೂರ. ಅಷ್ಟೇ ವ್ಯರ್ಥವಾದದ್ದು ಈ ಸಂದರ್ಭದಲ್ಲಿ ಹಿಂಸೆ ಮತ್ತು ಅಹಿಂಸೆಗಳ ಅಮೂರ್ತ ನೈತಿಕ ವಾಗ್ವಾದಗಳಲ್ಲಿ ತೊಡಗಿಕೊಳ್ಳುವುದು.

ಏಕೆಂದರೆ ಪ್ರಭುತ್ವ ಮಾವೊವಾದಿಗಳ ಮೇಲೆ ಅಥವಾ ಆದಿವಾಸಿಗಳ ಮೇಲೆ ನಡೆಸುತ್ತಿರುವ ಪ್ರಭುತ್ವ ಹಿಂಸೆ ಇರಬಹುದು ಅಥವಾ ಅದಕ್ಕೆ ಪ್ರತಿಕ್ರಿಯೆಯಾಗಿ ಮಾವೊವಾದಿಗಳು ನಡೆಸುವ ಕ್ರಾಂತಿಕಾರಿ ಹಿಂಸೆ ಇರಬಹುದು ಅಮೂರ್ತದಲ್ಲಿ ನಡೆಯುತ್ತಿಲ್ಲ. ಅವು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಘಟಿಸುತ್ತಿವೆ. ಯಾ ವುದೇ ಬಗೆಯ ಹಿಂಸೆಯನ್ನು ಅನಿವಾರ್ಯ ಮಾಡುವ ಸಂದರ್ಭವನ್ನೇ ಬದಲಿಸದ ಹೊರತು ಅಹಿಂಸೆಯ ಬಗೆಗಿನ ಹಪಹಪಿಕೆಗಳು ಅರಣ್ಯರೋದನವಷ್ಟೇ ಆಗುತ್ತದೆ. ಈ ಹಿಂಸಾತ್ಮಕ ಸಂದರ್ಭದಲ್ಲಿರುವ ಹಿಂಸೆಯನ್ನು ಇಲ್ಲವಾಗಿಸದೆ ಕೇವಲ ಒಂದು ಬಗೆಯ ಹಿಂಸಾಚಾರವನ್ನು ಮಾತ್ರ ಖಂಡಿಸುವುದು ಅದಕ್ಕೆ ಪ್ರತಿಯಾಗಿರುವ ಹಿಂಸಾಚಾರದ ಪರೋಕ್ಷ ಸಮರ್ಥನೆಯಾಗು ತ್ತದೆಯೇ ವಿನಃ ಅಹಿಂಸೆಯ ಪ್ರತಿಪಾದನೆಯಾಗುವುದಿಲ್ಲ.

ಮಾವೊವಾದಿಗಳ ದಾಳಿ ನಡೆದು ಪ್ರಾಣ ಹಾನಿ ಸಂಭವಿಸಿದಾಗಲೆಲ್ಲಾ ಈ ದೇಶದ ಮಾನವ ಹಕ್ಕು ಹೋರಾಟಗಾರರ ಮೇಲೆ ಸರಕಾರಗಳು ಮತ್ತು ಬಲಪಂಥೀಯರು ಹರಿಹಾಯುತ್ತಾರೆ. ಮಾವೊವಾದಿಗಳ ಮೇಲೆ ದಾಳಿ ನಡೆದಾಗ ಮಾತ್ರ ಮಾನವ ಹಕ್ಕುಗಳ ಉಲ್ಲಂಘನೆಯಾಯಿತೆಂದು ಕೂಗಾಡುವ ನೀವು ಪೊಲೀಸರ ಹತ್ಯೆಯಾದಾಗ ಅವರ ಮಾನವ ಹಕ್ಕು ಹರಣ ಮಾಡಿದ ನಕ್ಸಲರ ವಿರುದ್ಧವೇಕೆ ಮಾತಾಡುವುದಿಲ್ಲ ಎಂದು ಪ್ರಶ್ನಿಸುತ್ತಾರೆ. ಆದರೆ ಇದೇ ಮಾಧ್ಯಮಗಳು ಮತ್ತು ತಥಾಕಥಿತ ಅಹಿಂಸಾವಾದಿಗಳು ಪ್ರಭುತ್ವ ಹಿಂಸೆಯ ಬಗ್ಗೆ ಯಾಗಲೀ, ಈ ತಾರತಮ್ಯ ವ್ಯವಸ್ಥೆ ನಿರಂತರ ವಾಗಿ ನಡೆಸಿಕೊಂಡು ಬರುತ್ತಿರುವ ವ್ಯವಸ್ಥೆಯ ಹಿಂಸೆಯ ಬಗ್ಗೆಯಾಗಲೀ ಮಾತನಾಡಿದ್ದೇ ಅಪರೂಪ. ಅಸಹನೀಯ ಬದುಕು ಸೃಷ್ಟಿಸು ತ್ತಿರುವ ಪ್ರತಿರೋಧದ ಸಂದರ್ಭದ ಭಾಗವಾಗಿ ಹಿಂಸೆ-ಪ್ರತಿಹಿಂಸೆಯ ವಿದ್ಯಮಾನವನ್ನು ಅರ್ಥ ಮಾಡಿಕೊಳ್ಳುವುದಂತೂ ಕನ್ನಡದ ಸಂದರ್ಭದಲ್ಲಿ ಇಲ್ಲವೇ ಇಲ್ಲ ಎನುವಷ್ಟು ಕಡಿಮೆ.

ಇಂದು ಸಿ‌ಆರ್‌ಪಿ‌ಎಫ್ ಯೋಧರ ಹತ್ಯೆ ನಡೆದಿರುವಾಗಲೂ ಮತ್ತೆ ಇದೇ ಬಗೆಯ ಆರೋಪ-ಪ್ರತ್ಯಾರೋಪಗಳ ನಿರರ್ಥಕ ವಾಗ್ವಾದಗಳು ನಡೆಯುತ್ತಿವೆ. ನಿಜಕ್ಕೂ ಶಾಶ್ವತ ಶಾಂತಿ ಬಯಸುವವರನ್ನು ಮಾವೊವಾದಿಗಳ ಬೆಂಬಲಿಗರಂತೆಯೂ, ಯೋಧರ ಹತ್ಯೆಯ ವಿರುದ್ಧ ಮಾವೊವಾದಿಗಳ ಮತ್ತು ಅವರ ಬೆಂಬಲಕ್ಕೆ ನಿಂತಿರುವ ಆದಿವಾಸಿಗಳ ಸಾಮೂ ಹಿಕ ಹತ್ಯೆ ಮಾಡಲು ಯುದ್ಧ ಘೋಷಿಸಬೇಕೆ ನ್ನುವವರನ್ನು ಮಹಾನ್ ದೇಶಭಕ್ತರಂತೆಯೂ ಮಾಧ್ಯಮ ಮತ್ತು ಸರಕಾರ ಚಿತ್ರಿಸುತ್ತಿದೆ. ಕಳೆದ ೪೩ ವರ್ಷಗಳಿಂದ ಇದೇ ಬಗೆಯ ವ್ಯರ್ಥ ವಾಗ್ವಾದಗಳೂ, ಪ್ರಾಣಹರಣಗಳೂ ನಡೆದಿದ್ದು ಇನ್ನಾದರೂ ಸೈನಿಕರ ಪ್ರಾಣ, ಮಾವೊವಾದಿಗಳ ಪ್ರಾಣ ಹಾಗೂ ಆದಿವಾಸಿಗಳ ಪ್ರಾಣ ಹರಣ ವಾಗುತ್ತಿರುವ ಸಂದರ್ಭವನ್ನು ಬದಲಿಸುವ ಬಗ್ಗೆ ನಿಜವಾದ ಶಾಂತಿಪ್ರಿಯರು ತಲೆಕೆಡಿಸಿಕೊಳ್ಳ ಬೇಕಿದೆ.

ಹೀಗಾಗಿ ನಾಗರಿಕ ಸಮಾಜ ಕೇಳಬೇಕಿರುವ ಪ್ರಶ್ನೆ:

ಆಪರೇಷನ್ ಗ್ರೀನ್ ಹಂಟ್ ಮತ್ತು ಅದಕ್ಕೆ ಪ್ರತಿಯಾಗಿ ಈ ಯೋಧರ ಸಾವಿಗೆ ಕಾರಣವಾ ಗಿರುವ ಮಾವೊವಾದಿಗಳ ಕ್ರಾಂತಿಕಾರಿ ಹಿಂಸೆ ಹುಟ್ಟಿಕೊಂಡಿರುವ ಸಂದರ್ಭವೇನು?

ಈ ದೇಶದ ನಾಗರೀಕರ ಹೆಸರಲ್ಲಿ, ಈ ದೇಶದ ಪ್ರಜಾಸತ್ತೆಯನ್ನು ಮತ್ತು ಕಾನೂನುಬದ್ಧ ಆಡಳಿತವನ್ನು (ರೂಲ್ ಆಫ್ ಲಾ) ಉಳಿಸುವ ಹೆಸರಿನಲ್ಲಿ ಛತ್ತೀಸ್‌ಘಡ್‌ದಲ್ಲಿ ಸರಕಾರ ಯುದ್ಧ ವನ್ನು ಪ್ರಾರಂಭಿಸಿದೆ. ಈ ದೇಶದ ಸಕಲ ಶೋಷಿತ ಜನತೆಯ ಹೆಸರಿನಲ್ಲಿ, ನವಪ್ರಜಾಸತ್ತಾ ತ್ಮಕ ಕ್ರಾಂತಿಯ ಹೆಸರಿನಲ್ಲಿ ಮಾವೊವಾದಿಗಳೂ ಸಹ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಿದ್ದಾರೆ.

ಸ್ಥೂಲವಾಗಿ ಇದು ಮೇಲ್ನೋಟಕೆ ಎರಡೂ ಕಡೆಯವರು ಘೋಷಣೆಗಳಿಂದ ಅರ್ಥವಾಗುವ ಸನ್ನಿವೇಶ. ಆದರೆ ಕಳೆದ ೬೦ ವರ್ಷಗಳಲ್ಲಿ ಸಂವಿಧಾನದ ನಿರ್ದೇಶನ ತತ್ವಗಳ ಆಶಯಕ್ಕೆ ವಿರುದ್ಧವಾಗಿಯೇ ಈ ದೇಶದ ರೂಲ್ ಆಫ್ ಲಾ ನಡೆದುಕೊಂಡು ಬಂದಿರುವುದೇ ಈ ದೇಶದ ಪ್ರಜಾಸತ್ತೆಯ ವಿಪರ್ಯಾಸ. ಹೀಗಾಗಿ ಈ Rule Of Law ಒಂದು ಕಡೆ ಈ ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಸಕಲ ಸಂಪತ್ತನ್ನೆಲ್ಲಾ ಲೂಟಿ ಮಾಡುವುದನ್ನು ಕಾನುನು ಬದ್ಧಗೊಳಿಸಿದ್ದರೆ, ಈ ನೀತಿಗಳಿಗೆ ಬಲಿಯಾಗಿರುವ ಈ ದೇಶದ ದಲಿತ, ಆದಿವಾಸಿ, ರೈತ ಕೂಲಿ ಕಾರ್ಮಿಕರ ಬದುಕನ್ನೇ Unlawful Activity (ಕಾನೂನು ಬಾಹಿರ ಚಟುವಟಿಕೆ)ಯನ್ನಾಗಿ ಮಾಡಿಬಿಟ್ಟಿದೆ. ಹೀಗಾಗಿಯೇ ಇಂದು Unlawful Activity Prevention Act (UAPA) ಅಡಿ ಅತಿಹೆಚ್ಚು ಬಂಧನವಾಗಿರುವುದು ಚತ್ತೀಸ್‌ಘಡ್‌ದ ಆದಿವಾಸಿಗಳದ್ದೇ.

ಚತ್ತೀಸ್‌ಘಡ್‌ನಲ್ಲಿ ಆಗುತ್ತಿರುವುದು ಇದೆ. ಅಲ್ಲಿ ಅಪರೂಪದ ಖನಿಜ ನಿಕ್ಷೇಪಗಳಿವೆ. ಅದರ ಒಟ್ಟು ಬೆಲೆ ಏನಿಲ್ಲವೆಂದರೂ ೧೦ ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ. ಹೀಗಾಗಿ ಅದರ ಮೇಲೆ ಈ ದೇಶದ ಮತ್ತು ಸಾಮ್ರಾಜ್ಯಶಾಹಿ ದೇಶಗಳ ಗಣಿ ಬಹುರಾಷ್ಟ್ರೀಯ ಕಂಪನಿಗಳ ಕಣ್ಣು ಬಿದ್ದಿದೆ. ಈಗಾಗಲೇ ಸರ್ಕಾರಗಳು ೧,೫೦,೦೦೦ ಕೋಟಿಗೂ ಹೆಚ್ಚಿನ ಮೌಲ್ಯದ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಗಣಿಗಾರಿಕೆ ನಿರಾತಂಕವಾಗಿ ನಡೆಯಬೇಕೆಂದರೆ ಶತಮಾನಗಳಿಂದ ಕಾಡನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಮಂದಿ ಆದಿವಾಸಿಗಳನ್ನು ಎತ್ತಂಗಡಿ ಮಾಡಬೇಕಿದೆ. ಆದರೆ ಸರ್ಕಾರದಿಂದ ತಮ್ಮ ಬದುಕಿನ ಪ್ರತಿಹೆಜ್ಜೆಯಲ್ಲೂ ಬರಿಯೇ ದಮನವನ್ನು ಎದುರಿಸುತ್ತಾ ಕುಗ್ಗಿ, ಬಗ್ಗಿ ಬದುಕುತ್ತಿದ್ದ ಈ ಆದಿವಾಸಿಗಳ ಬೆಂಬಲಕ್ಕೆ ನಿಂತಿದ್ದು ಮಾಧ್ಯಮಗಳು ಅಲ್ಲ, ಅಮೂರ್ತ ಅಹಿಂಸಾವಾದಿಗಳು ಅಲ್ಲ. ೬೦ ವರ್ಷಗಳಿಂದ ಸರ್ಕಾರದ ಒಬ್ಬ ಪ್ರತಿನಿಧಿಯೂ ಕಾಲಿಡದ ಆ ಗೊಂಡಾರಣ್ಯದ ಮೂಲೆಮೂಲೆಗೂ ತಲುಪಿ ಆದಿವಾಸಿಗಳನ್ನು ಸಂಘಟಿಸಿ, ಹೊಸ ಬದುಕು ಕಲಿಸಿದವರು ಈ ಹಿಂಸಾವಾದಿ ಮಾವೋವಾದಿಗಳೇ. ಹೀಗಾಗಿಯೇ ನಾಗರಿಕ ಸಮಾಜ ಒಪ್ಪಲಿ ಬಿಡಲಿ ಈ ದೇಶದ ಪ್ರಜಾಪ್ರಭುತ್ವವಾದಿ ಸರ್ಕಾರಕ್ಕಿಂತ, ಅಹಿಂಸಾವಾದಿ ನಾಗರಿಕ ಸಮಾಜಕ್ಕಿಂತ, ನಿಷ್ಪಕ್ಷಪಾತಿ ಮಾಧ್ಯಮಗಳಿಗಿಂತ ಈ ಆದಿವಾಸಿಗಳಿಗೆ ಹಿಂಸಾವಾದಿ ಮಾವೋವಾದಿಗಳೇ ಅಚ್ಚುಮೆಚ್ಚು.

ಈಗ ಕೆಲವೇ ಮಂದಿಯ ಲಾಭಕ್ಕೆ ದೇಶದ ಸಂಪತ್ತನ್ನೇ ಲೂಟಿ ಹೊಡೆದು ಆದಿವಾಸಿಗಳನ್ನು ಎತ್ತಂಗಡಿ ಮಾಡುವ ಪರಮ ದೇಶದ್ರೋಹಿ ಕಾರ್ಯಕ್ಕೆ ಸರ್ಕಾರ ೭೦,೦೦೦ಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿದೆ. ಅವರ ಕಣ್ಣು ಮುಂದೆ ಬಂದೂಕು ಹಿಡಿದ ನಕ್ಸಲರನ್ನು ಮತ್ತು ಅವರನ್ನು ಬೆಂಬಲಿಸುವ ಆದಿವಾಸಿಗಳನ್ನು ದೇಶದ ಶತ್ರುಗಳನ್ನಾಗಿ ಚಿತ್ರಿಸಲಾಗಿದೆ. ಅಂದರೆ ಕೆಲವರ ಹಿತಾಸಕ್ತಿಯನ್ನೇ ದೇಶದ ಹಿತಾಸಕ್ತಿಯೆಂದು ಬಣ್ಣಿಸುತ್ತಾ ೭೦,೦೦೦ ಯೋಧರ ಬದುಕನ್ನು ಬಲಿಗೊಡಲಾಗಿದೆ. ತಮ್ಮ ಅಣ್ಣತಮ್ಮಂದಿರನ್ನು ತಾವೇ ಕೊಲ್ಲುವಂತೆ ಅಥವಾ ಅವರಿಂದ ಹತರಾಗುವಂತ ದುರಂತ ಸಂದರ್ಭವನ್ನು ಸೃಷ್ಟಿಸಿದೆ. ಹೀಗೆ ಇಂದು ಸಹೋದರರ ನಡುವೆ ಯುದ್ಧ ಘೋಷಣೆಯಾಗಿದೆ. ಭ್ರಾತೃಹತ್ಯೆಯ ಲಾಭವನ್ನು ಮಾತ್ರ ನಾಗರಿಕ ಸಮಾಜದ ಉದ್ಯಮಿಗಳು ಪಡೆಯುತ್ತಿರುತ್ತಾರೆ. ಅಲ್ಲಿಯತನಕ ಯೋಧರೋ, ನಕ್ಸಲರೋ ಅಥವಾ ಆದಿವಾಸಿಗಳೋ ಪರಸ್ಪರ ಹತ್ಯೆಯಾಗುತತಿಲೇ ಇರುತ್ತಾರೆ. ಆದ್ದರಿಂದಲೇ ನಾಗರಿಕ ಸಮಾಜ ಈ ಹತ್ಯೆಗೆ ಕಾರಣವಾಗುತ್ತಿರುವ ನೀತಿಗಳನ್ನು ಬದಲಿಸಲು ಯತ್ನಿಸದೆ ಕೇವಲ ಹಿಂಸೆಯ ಬಗ್ಗೆ ಮಾತನಾಡುವುದೇ ಅತ್ಯಂತ ಹಿಂಸಾತ್ಮಕವಾದದ್ದು.

ಅದೇ ರೀತಿ ಸಮಾಜ ಬದಲಾವಣೆಯ ಉದಾತ್ತ ಆದರ್ಶಗಳಿಗಾಗಿ ಮಾವೋವಾದಿಗಳು ಪ್ರಾಣವನ್ನೇ ಬಲಿಕೊಡುವ ಅಥವಾ ಬಲಿತೆಗೆದುಕೊಳ್ಳುವಷ್ಟು ಬದ್ದತೆ ಹೊಂದಿದ್ದಾರೆ, ನಿಜ. ಆದರೆ ಈ ಬದ್ಧತೆಯು ಮೊಂಡುಹಠಮಾರಿತನವಾದರೆ, ಬದಲಾಗುತ್ತಿರುವ ಸಂದರ್ಭದ ವಿವೇಕಕ್ಕೆ ತೆರೆದುಕೊಳ್ಳದಿದ್ದರೆ ಹೇಗೆ ಕುರುಡನ್ನೂ ಮತ್ತು ಆತ್ಮವಿನಾಶವನ್ನೂ ತರುತ್ತದೆ ಎಂಬುದನ್ನು ನಕ್ಸಲ್ ಚಳವಳಿ ಪ್ರಾರಂಭದಲ್ಲೇ ಅನುಭವಿಸಿತ್ತು.

ದೇಶಾದ್ಯಂತ ಜನಸಮೂಹದ ರಾಜಕೀಯ ಹೋರಾಟಗಳ ಅಲೆ ಏರದೆ ಯಾವುದೋ ಮೂಲೆಯಲ್ಲಿ ಮಾತ್ರ ತಾರಕಕ್ಕೆ ಮುಟ್ಟುವ ಕ್ರಾಂತಿಕಾರಿ ಚಳವಳಿಯನ್ನು ಪ್ರಭುತ್ವ ಅತ್ಯಂತ ಕ್ರೂರವಾಗಿ ಹೊಸಕಿಹಾಕುತ್ತದೆಂಬುದನ್ನು ೭೪ರಲ್ಲೂ, ಇತ್ತೀಚೆಗೆ ಆಂಧ್ರ-ತೆಲಂಗಾಣದಲ್ಲೂ ಮಾವೋವಾದಿ ಚಳವಳಿ ತಾನೇ ಅನುಭವಿಸಿದೆ. ಆದರೆ ಅರ್ಥಮಾಡಿಕೊಂಡಂತಿಲ್ಲ. ಹೀಗಾಗಿ ಅದರಿಂದ ಏನೇನೂ ಪಾಠವನ್ನು ಕಲಿಯದೆ ಮತ್ತೊಮ್ಮೆ ಚತ್ತೀಸ್‌ಘಡ್‌ದಲ್ಲಿ ಅದೇ ರೀತಿಯ ಆತ್ಮಹತ್ಯಾತ್ಮಕ ಸಂದರ್ಭವನ್ನು ಸೃಷ್ಟಿಸಿಕೊಂಡಿದೆ.

ಆ ಪ್ರದೇಶದ ಇಡೀ ಆದಿವಾಸಿ ಸಮುದಾಯವನ್ನು ತನ್ನ ತಪ್ಪುವ್ಯೂಹತಂತ್ರಗಳಿಂದ ಸಾಮೂಹಿಕ ಹತ್ಯೆಯ ಅಪಾಯಕ್ಕೂ ದೂಡಿದೆ. ಚತ್ತೀಸ್‌ಘಡದ ಆದಿವಾಸಿಗಳ ಹೋರಾಟ ಏಕೆ ನಡೆಯುತ್ತಿದೆ ಎಂಬ ಬಗ್ಗೆ ಈ ದೇಶದ ಶೇ.೯೦ರಷ್ಟು ಜನತೆಗೇ ಗೊತ್ತೇ ಇಲ್ಲ. ಇನ್ನು ಅವರಿಂದ ಬೆಂಬಲ ದೊರಕಿಸಿಕೊಳ್ಳುವುದು ದೂರದ ಮಾತು. ಆದರೆ ಮಾವೋವಾದಿಗಳು ಒಬ್ಬ ಆರುಂಧತಿ ರಾಯ್ ಒಂದು ಔಟ್‌ಲುಕ್‌ನಲ್ಲಿ ಬರೆದ ಲೇಖನವನ್ನೇ ಜನರ ಬೆಂಬಲ ಎಂದು ಅರ್ಥಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ. ತಮ್ಮದೇ ಅನುಭವದಿಂದ ಅವರು ಪಾಠ ಕಲಿಯುವುದೇ ಆದರೆ ಶೇ.೯೦ರಷ್ಟು ಭಾರತದ ಜನತೆ ಇದರ ಬಗ್ಗೆ ಮೌನವಾಗಿದ್ದಾಗ ಅಥವಾ ದೇಶಾದ್ಯಂತ ಆಳುವವರ್ಗಗಳನ್ನು ಬಿಕ್ಕಟಿಗೆ ಸಿಲುಕಿಸುವಂಥ ಬೃಹತ್ ರಾಜಕೀಯ ಹೋರಾಟಗಳ ಸಂದರ್ಭವಿಲ್ಲದಿದ್ದಾಗ ಭಾರತದ ಪ್ರಭುತ್ವವನ್ನು ಯಾವುದೋ ಒಂದು ಮೂಲೆಯಲ್ಲಿ ಕೇವಲ ಸೇನಾತ್ಮಕವಾಗಿ ಮುಖಾಮುಖಿಯಾಗುವ ಸ್ಟ್ರಾಟೆಜಿಯನ್ನು ಅನುಸರಿಸುತ್ತಿರಲಿಲ್ಲ. ಇಂಥ ರಾಜಕೀಯವನ್ನು ಸಾಕ್ಷಾತ್ ಮಾವೋ ಅವರೇ ದುಸ್ಸಾಹಸ ಮತ್ತು ಕ್ರಾಂತಿಗೆ ಹಾನಿಕರ ಎಂದು ಬಣ್ಣಿಸಿದ್ದರು.

ಮಾವೋವಾದಿಗಳು ಪದೇಪದೇ ಇದೇ ಬಗೆಯ ದುಸ್ಸಾಹಸವನ್ನು ಮಾಡುತ್ತಾ ಈ ದೇಶದ ಕ್ರಾಂತಿಯನ್ನು ಮುಂದೂಡುತ್ತಲೇ ಬಂದಿದ್ದಾರೆ. ಏಪ್ರಿಲ್ ೬ರಂದು ಅವರ ಗೆರಿಲ್ಲಾ ಪಡೆಗಳು ನಡೆಸಿದ ದಾಳಿ ಇಂಥಾ ಒಂದು ದುಸ್ಸಾಹಸವಾದೀ ವ್ಯೂಹತಂತ್ರದ ಒಂದು ಭಾಗವೇ ಎಂದು ಕಾಣುತತಿದೆ. ಸಮಾಜವನ್ನು ಮತ್ತು ಜನರನ್ನು ಗೆಲ್ಲುವುದಕ್ಕಿಂತ ಪ್ರಭುತ್ವವನ್ನು ಸೋಲಿಸುವುದೇ ಪ್ರಧಾನವಾಗಿರುವುದು, ಮಿಲಿಟರಿ ವ್ಯೂಹತಂತ್ರ ತಾತ್ವಿಕತೆಯ ಸ್ಥಾನ ಪಡೆದುಕೊಳ್ಳುತ್ತಿರುವುದೂ, ಆತ್ಮ ಬಲಿದಾನದ ಹೆಗ್ಗಳಿಕೆ ಸೃಷ್ಟಿಸಿರುವ ಕುರುಡು ಮತ್ತು ಕಿವುಡುಗಳು ಸಹ ಚತ್ತೀಸ್‌ಘಡ್‌ನ ಇಂದಿನ ಹಿಂಸಾತ್ಮಕ ಸಂದರ್ಭವನ್ನು ಪ್ರಭಾವಿಸುತ್ತಿರುವ ಸಂಗತಿಯಾಗಿದೆ.

ಈ ಸಂಗತಿಗಳೆ ಸ್ವತಂತ್ರ ಭಾರತ ಹಿಂದೆಂದೂ ಕಾಣದಂಥ ಅಂತರಿಕ ಯುದ್ಧದ ಸಂದರ್ಭವನ್ನು ಸೃಷ್ಟಿಸಿದೆ. ಯುದ್ಧವೆಂದರೆ ಹಿಂಸಾಚಾರವೇ. ಕೆಲವೊಮ್ಮೆ ಯೋಧರ ಸಾವು. ಕೆಲವೊಮ್ಮೆ ಮಾವೋವಾದಿಗಳ-ಆದಿವಾಸಿಗಳ ಸಾವು. ಆದರೂ ಇದು ಅನ್ಯಾಯದ ಯುದ್ಧ. ಏಕೆಂದರೆ ಈ ಯುದ್ದದ ಉದ್ದೇಶ ಆದಿವಾಸಿಗಳನ್ನು ಎತ್ತಂಗಡಿ ಮಾಡಿ ಈ ದೇಶವನ್ನು ವಿದೇಶಿ ಕಂಪನಿಗಳ ವಸಾಹತುವನ್ನಾಗಿ ಮಾಡುವುದಾಗಿದೆ. ಹೀಗಾಗಿ ಹಿಂಸೆಗೆ ಪ್ರಮುಖ ಕಾರಣವೇ ಈ ಅನ್ಯಾಯಯುತ ಯುದ್ಧವಾದ್ದರಿಂದ ಮೊದಲು ‘ಆಪರೇಷನ್ ಗ್ರೀನ್‌ಹಂಟ್’ ಎಂಬ ಈ ಯುದ್ಧವನ್ನು ಬೇಷರತ್ತಾಗಿ ವಿರೋಧಿಸುವ ಮೂಲಕವೇ ಯೋಧರ ಮತ್ತು ಆದಿವಾಸಿಗಳ ಪ್ರಾಣವನ್ನು ರಕ್ಷಿಸಬೇಕಿದೆ. ಹಾಗೆಯೇ ಇದೊಂದು ಅಸಮಾನ ಯುದ್ಧ. ಮಾವೋವಾದಿಗಳ ಅವಿವೇಕದ ಪಾಲೂ ಇದರಲ್ಲಿದೆ. ಅದನ್ನೂ ಮನವರಿಕೆ ಮಾಡಿಸಬೇಕಿದೆ.

ಹೀಗೆ ಮಾಡಿದಲ್ಲಿ ಮಾತ್ರ ನಾಗರಿಕ ಸಮಾಜಕ್ಕೆ ಯಾವುದೇ ಹಿಂಸಾಚಾರವನ್ನು ಖಂಡಿಸುವ ನೈತಿಕ ಅರ್ಹತೆ ಬರುತ್ತದೆ. ಇಲ್ಲದಿದ್ದರೆ ಅದು ಕೇವಲ ಪ್ರಭುತ್ವದ “His Masters Voice” ಆಗಿಬಿಡುವ ಅಪಾಯವಿದೆ.
-ಶಿವಸುಂದರ್

Friday, April 9, 2010

ರುದ್ರಪ್ಪನ ಖಡ್ಗ

ಮಕ್ಕಳೊಂದಿಗೆ ರುದ್ರಪ್ಪನ ದಿನಚರಿ ಮೊನ್ನೆ ಇದ್ದಂತೆ ನಿನ್ನೆ ಇಲ್ಲ. ನಿನ್ನೆ ಇದ್ದಂತೆ ಇವತ್ತಿಲ್ಲ. ತುಂಬ ಬದಲಾಗಿದೆ. ಪೊಗದಸ್ತಾಗಿ ಊಟ ಮಾಡಿ ನೀಟಾಗಿ ಡ್ರೆಸ್ಸು ಮಾಡಿಕೊಂಡು ಅಂಗಳದ ಕಟ್ಟೆಗೆ ಕೂತು ಬೀದಿ ಉದ್ದಕ್ಕೂ ಕಣ್ಣು ಹರಿಬಿಟ್ಟು ಬೆಕ್ಕಿನಂತೆ ಹೊಂಚು ಹಾಕುತ್ತಾನೆ. ಆತನ ಕಣ್ಣಿಂದ ಯಾವುದೇ ಸಚರಾಚರ ತಪ್ಪಿಸುವುದು ಸಾಧ್ಯವಿಲ್ಲ. ಯಾರಾದರೂ ಸಿಕ್ಕರೆಂದರೆ ಮುಗಿಯಿತು.

ಅಯಸ್ಕಾಂತ ಸೆಳವಿಗೆ ಸಿಕ್ಕ ಕಬ್ಬಿಣದ ಚೂರಿನಂತೆ ತನ್ನ ಬಳಿಗೆ ಬಂದವರನ್ನು ಬರಮಾಡಿಕೊಳ್ಳುತ್ತಾನೆ. ಅವರ ಯೋಗ್ಯತೆಗೆ ತಕ್ಕ ಕಡೆ ಕೂಡ್ರಿಸಿ ಒಂದು ಬೀಡಿ ಒಗೆದು ಹಚ್ಚಿಕೊಳ್ಳಲು ಕಡ್ಡಿ ಪೊಟ್ಟಣವನ್ನೂ ಕೊಡುತ್ತಾನೆ. ಬುಸುಬುಸು ಹೊಗೆ ನಡುವೆ ಆತನ ದುಂಡು ಮುಖದ ನೀಳ ನಾಸಿಕ ಬೆಳ್ಳಿ ಚುಕ್ಕಿಯಂತೆ ಬೆಳಗಲಾರಂಭಿಸುತ್ತವೆ. ವಿಶಿಷ್ಟ ನಗೆಯ ಧ್ವನಿಯ ಸ್ವರೂಪ ಪಡೆಯದೆ ತುಟಿಗಳ ನಡುವೆ ನಂದಿಕೋಲು ಕುಣಿಯಲಾರಂಭಿಸುತ್ತದೆ. ಆತ ಎದೆಯ ಉಬ್ಬಿದ ಭಾಗ ಶ್ರೋತೃವಿಗೆ ಕಾಣಿಸಲೆಂಬಂತೆ ತೆಳುಗಾಳಿ ಕಣಗಿಲೆ ಪೊದೆ ಕಡೆಯಿಂದ ಬೀಸುತ್ತದೆ. ಆತನ ಧ್ವನಿಯ ಸ್ವರ ಲಾಲಿತ್ಯವನ್ನೇ ಮಾಂಸದ ಚೂರೆಂದು ಭ್ರಮಿಸಿ ಟೊಳಪನಾಯಿ ಆತನ ಮುಂದೆ ಕೂತು ಬಾಲ ಅಲ್ಲಾಡಿಸಲಾರಂಭಿಸುತ್ತದೆ. ಒಬ್ಬರಿಗೊಬ್ಬರಿಗೊಬ್ಬರು ಎಂಥ ಅನ್ಯೋನ್ಯ.

ರುದ್ರಪ್ಪ ತನ್ನ ತಾತನ ಕಾಲದ ಸುದ್ದಿ ಎತ್ತುತ್ತಲೆ ದನದ ಕೊಟ್ಟಿಗೆಯಲ್ಲಿ ಎತ್ತುಗಳ ಕಾಲ ಸಂದಿಯಲ್ಲಿ ಸೆಗಣಿ ಹೆಕ್ಕುವ ಕೆಲಸದಲ್ಲಿ ನಿರತಳಾಗಿರುವ ಮುದುಕಿ ಅರ್ಥಾತ್ ಆತಗೆ ಹೆಣ್ಣು ಕೊಟ್ಟು ನಿಂಗಜ್ಜಿ ಅಲಲಲಾ ಸೂರಾ ಪರಾಕ್ರಮಿ ಸುರು ಮಾಡಿಬಿಟ್ಟೆಯಾ ಪುರಾಣ. ಯೇಟು ದಿನಾದ್ವು ನೀವು ಹೊಲ್ದಾಗ ಕಾಲಿಡದೆ;ಯೋಟು ದಿನಾದ್ದು, ನೀನು ಎತ್ತುಗಳ್ಗೆ ನೀರು ಕುಡಿಸದೆ.. ಎಂದು ವಟವಟ ಉದುರಿಸಲಾರಂಭಿಸುತ್ತದೆ. ಅದಕ್ಕೆ ಅನುಪಲ್ಲವಿಯಾಗಿ ಅಡುಗೆ ಮನೆಯಲ್ಲಿ ಗೌರವ್ವ ಅರ್ಥಾತ್ ಆತನ ಹೆಂಡತಿ ಪಾತ್ರೆ ಪಗಡ ಎತ್ತೆತ್ತಿ ಇಟ್ಟು ತಾಳ ಕುಟ್ಟಲಾರಂಭಿಸುತ್ತಾಳೆ. ಮುರುಕು ತೊಟ್ಟಿಲಲ್ಲಿ ನೆತ್ತಿಗೆ ತಕ್ಕುದಾದ ಎಣ್ಣೆ ಬೆಣ್ಣೆ ಕಾಣದ ಕಂದಮ್ಮ ಚಿಟಾರನೆ ಚೀರಿ ಅಳಲಾರಂಭಿಸುತ್ತದೆ. ಹತ್ತಂಕಣದ ಭಾರಿ ಮನೆಯ ಮಾಡನ್ನೆ ಸಾಮ್ರಾಜ್ಯವನ್ನಾಗಿ ಮಾಡಿಕೊಂಡು ದಿನಕ್ಕೆರಡು ಮೂರು ಇಲಿಗಳನ್ನಾದರೂ ಗಬಕಾಯಿಸುತ್ತಿರುವ ಬೆಕ್ಕು ಮ್ಯಾವ್ ಗುಟ್ಟುತ್ತ ನಾಗಂದಿಗೆಯಿಂದ ಕೆಳಕ್ಕೆ ಜಿಗಿಯುತ್ತದೆ. ಆದರೂ ನೀರ ಮೇಲೆ ತೇಲುವ ತುಪ್ಪದಂಥ ರುದ್ರಪ್ಪ ತಾತನ ಪರಾಕ್ರಮಗಳಿಂದ ತನ್ನಪ್ಪನ ಪರಾಕ್ರಮಗಳಿಗೆ ಬಂದಿರುತ್ತಾನೆ. ಅಂಥ ಅಪ್ಪ ಯಾರಿಗೂ ಇರಲಿಕ್ಕಿಲ್ಲ ಎಂಬಂತೆ; ಆತನಿಗಿದ್ದ ಸೂಳೆಯರು ಅಮರಾವತಿಯ ಇಂದ್ರನಿಗೂ ಇರಲಿಕ್ಕಿಲ್ಲ ಎಂಬಂತಹ..ಆತನ ಗತ್ತು ಗೈರತ್ತುಗಳು ಗುಡೇಕೋಟೆ ಮರಾಜನಿಗೂ ಇರಲಿಕ್ಕಿಲ್ಲ ಎಂಬಂತಹ ಮಾತುಗಳ ಇಟ್ಟಿಗೆ ಪೇರಿಸಿಟ್ಟು ಶೋತೃವನ್ನು ಸಜೀವ ಸಮಾಧಿಗೆ ಸಿದ್ಧಗೊಳಿಸಿ ಅಪ್ಪಯ್ಯ ಮುಕ್ಕುಂದಿ ರಾಜಾರೆಡ್ಡಿಯನ್ನು ಹೆದರಿಸಿ ಓಡಿಸಿದ ಖಡ್ಗ ನೋಡೋ ಆಸೆ ಐತಾ ಎಂದು ಕೇಳುತ್ತಾನೆ. ಶ್ರೋತೃ ಹ್ಹೂ ಎಂಬಂತೆ ತಲೆ ಅಲ್ಲಾಡಿಸುತ್ತದೆ. ತಪ್ಪಿಸಿಕೊಳ್ಳದಂತೆ ಕೊರಳ ಪಟ್ಟಿ ಹಿಡಿದು ಪಡಸಾಲೆಗೆ ಕರೆದೊಯ್ಯುತ್ತಾನೆ. ಶ್ರೋತೃ ಇಲ್ಲಾಣ ಧೂಳು ಲೆಕ್ಕಿಸದೆ ಕಣ್ಣು ಬಾಯಿ ಏಕಕಾಲಕ್ಕೆ ತೆರೆದಿರಲು ರುದ್ರಪ್ಪ ತೊಲೆಜಂತಿ ಸಂದಿಯಿಂದ ತುಕ್ಕು ಹಿಡಿದು ಕಿಗ್ಗಲು ಮುಟ್ಟಿದ ಖಡ್ಗ ಹಿರಿದು ಹ್ಹ..ಹ್ಹ..ಹ್ಹ.. ಎಂದು ಗಹಗಹಿಸಿ ಮರು ಕ್ಷಣ ಅದರ ದುರವಸ್ಥೆಗೆ ಮುಖ ಬಿಗಿದು ‘ಯೇನ’ ಎಂದು ಹೆಂಡತಿಯನ್ನು ಕೂಗುತ್ತಾನೆ. ಬಂದ ಹೆಂಡತಿಯ ತುರುಬನ್ನು ಗಬಕ್ಕನೆ ಹಿಡಿದು ಇದನ್ನು ತಿಕ್ಕಿ ತೊಳ್ದಿಡು ಅಂದಿದ್ನೆಲ್ಲಾ ಯಾಕ ಮಾಡ್ಲಿಲ್ಲಾ ಎಂದು ಅಲ್ಲಾಡಿಸಿಬಿಡುತ್ತಾನೆ. ಗೌರವ್ವ ಅಯ್ಯಯ್ಯಪ್ಪೋ ಎಂದು ಬಾಯಿ ಬಾಯಿ ಬಡಿದುಕೊಳ್ಳಲು ಅಯ್ಯೋ ನಿನ್ ಕೈಯಿ ಸೇದಿಹೋಗ ಎಂದು ನಿಂಗಜ್ಜಿ ದನದ ಕೊಟ್ಟಿಗೆಯಿಂದ ಪಡಸಾಲೆಗೆ ಒಮ್ಮೆಗೆ ಕುಪ್ಪಳಿಸಿ ತನ್ನ ಮಗಳ ಸಹಾಯಕ್ಕೆ ಬರುತ್ತಾಳೆ. ಆಗ ಶ್ರೋತೃ ಒಮ್ಮೆಗೆ ವಾಸ್ತವಕ್ಕೆ ಮರಳಿ ಕಾಲಿಗೆ ಬುದ್ಧಿ ಹೇಳುತ್ತಾನೆ.

ಯೋನ್ಲೋ ಬಾಡ್ಕಾವ್ ಅಳಿಯಲ್ಲ ಮಗ ಅಂತ ತಿಳ್ಕೊಂಡು ಬೆಳೆಸಿದ್ಕೆ ಮೈಗೆ ಕೈ ಹಚ್ಚೀಯಾ. ಈ ಸೊಟ್ ಖಡ್ಗ ಬಿಟ್ರೆ ಯ್ಯೋನೈತೋ ನಿಮ್ಮಪ್ನಮನಿ ಆಸ್ತಿ ದುಡೀಲಿಲ್ಲಾ ದುಕ್‌ಪಡೀಲಿಲ್ಲ. ಬಂದೋರೆದ್ರೂಗೆ ಹೋಗೋರೆದ್ರೂಗೆ ಖಡ್ಗಾನ ವರ‍್ಣಸ್ತಾ ಕುಂಡ್ರುತಿಯಲ್ಲಾ ನೀನೊಬ್ಬ ಗಂಡುಸ್ನೇ ಎಂದದ್ದೇ ತಡ ಗಂಡನ ಬಿಗಿ ಮುಷ್ಠಿಯಿಂದ ತುರುಬು ಬಿಡಿಸಿಕೊಂಡವಳೇ ಗೌರವ್ವ. ‘ನನ ಗಂಡನ್ನ ಬಾಯ್ಗೆ ಬಂದಂಗ ಅಂದ್ರ ನಾನು ಸುಮ್ನಿರಾಕಿಲ್ಲ ನೋಡು.’ ಎಂದು ಎದುರಿಗೆ ಕುಪ್ಪಳಿಸಿ ನಿಂತಳು. ಅವರೀರ್ವರನ್ನು ಜಗಳ ಆಡಲು ಬಿಟ್ಟು ರುದ್ರಪ್ಪ ಖಡ್ಗವನ್ನು ಮೂಲಸ್ಥಾನದಲ್ಲಿಟ್ಟು ಮತ್ತೊಬ್ಬ ಶ್ರೋತೃವನ್ನು ಹುಡುಕಿಕೊಂಡು ಹೊರಹೊಂಟ.

ರುದ್ರಪ್ಪ ಮೊದಲು ಹೀಗಿರಲಿಲ್ಲ ಎಂಬುದನ್ನು ತಾಯಿ ಮಗಳಿಬ್ಬರೂ ಒಪ್ಪುತ್ತಾರೆ. ಆತ ಬದಲಾಗಿರುವುದು ಈಗ್ಗೆರಡು ತಿಂಗಳಿಂದ.

ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಕುರುಕೋಡಿಗೆ ಹೋಗಿ ತಾನೂ ಅಪ್ಪಗೆ ಹುಟ್ಟಿದ ಮಗನೆಂದು ವಾದ ಮಂಡಿಸಿದ್ದ ಒಡಹುಟ್ಟಿದ ರಾಚಪ್ಪನೆದುರು. ಆಸ್ತಿ ಏನೈತಿ ಗೆಂಡಿ ಅಂದು ರಾಚಪ್ಪ ಮುಷ್ಠಿಯಲ್ಲಿ ಬೀಡಿ ಹಚ್ಚಿಕೊಂಡಿದ್ದ. ಊರು ಆಡುವ ಗೌಡ ರುದ್ರಪ್ಪನನ್ನು ಮನೆಗೆ ಕರೆದೊಯ್ದು ಹಾಗಲಕಾಯಿ ಪಲ್ಯೆ ಬಿಳಿ ಜೋಳದ ರೊಟ್ಟಿ ಉಂಬಾಕಿಟ್ಟು ಲೇ ನಿಮ್ಮಪ್ಪ ನಾನೂ ಒಂದೇ ಗಂಗಾಳದಲ್ಲಿ ಉಂಬ್ತಿದ್ವಿ ಎಂದು ಆರಂಭಿಸಿ ಆಸ್ತಿ ಹೇಗೆ ಸೂಳೆಯರಿಗೂ ವಕೀಲರಿಗೂ ಸಮನಾಗಿ ಹಂಚಿಹೋಯ್ತು ಎಂದು ಸೋದಾರಣವಾಗಿ ವಿವರಿಸಿದ್ದ. ರುದ್ರಪ್ಪಗೆ ತನ್ನಪ್ಪನ ಬಗ್ಗೆ ಹೆಮ್ಮೆ ಮೂಡಿತು. ಎಂಥದಾದ್ರು ಅಪ್ಪನ ಗುರ‍್ತು ಕೊಡಿಸ್ರಿ. ಎಂದು ದುಂಬಾಲು ಬಿದ್ದಿದ್ದ. ಗೌಡರು ರಾಚಪ್ಪಗೆ ತಿಳಿಹೇಳಿ ಖಡ್ಗ ಕೊಡಿಸಿಕಳಿಸಿದ್ದರು.

ಆ ಖಡ್ಗ ತಂದ ಮೇಲೆಯೇ ರುದ್ರಪ್ಪ ಸಂಪೂರ್ಣ ಬದಲಾಗಿದ್ದು. ಖಡ್ಗ ಕುರಿತು ಯಾರಾದರೊಬ್ಬರಿಗೆ ಹೇಳಿಕೊಳ್ಳದ ಹೊರತು ಊಟ ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲ ಗ್ರಾಮದ ಕೆಲವು ಪ್ರತಿಷ್ಟರನ್ನು ಮನೆಗೆ ಕರೆತಂದು ಉಪ್ಪಿಟ್ಟು ಮಾಡು ಚಾ ಮಾಡು ಎಂದು ಹೆಂಡತಿಯನ್ನು ಜೀವ ತಿನ್ನುವುದು ಮಾಮೂಲಾಗಿತ್ತು. ತಿನ್ನುವುದಕ್ಕೂ ಕುಡಿಯುವುದಕ್ಕೂ ಜೋಡಿಸಲು ತಾಯಿ ಮಗಳೂ ಗಂಡಸರಂತೆ ದುಡಿಯುತ್ತಿದ್ದರು.

ತಾಯಿ ಮಗಳು ಇಡೀ ರಾತ್ರಿ ಎಲೆ ಅಡಿಕೆ ಜಮಡುತ್ತ ಕೂತು ರುದ್ರಪ್ಪ ಮೊದಲಿನಂತಾಗಬೇಕಾದರೆ ಖಡ್ಗವನ್ನು ಮಾಯಮಾಡಬೇಕೆಂಬ ತೀರ್ಮಾನಕ್ಕೆ ಬಂದರು. ಅಲ್ಲದೆ ತೀರ್ಮಾನವನ್ನು ಬೆಳಗಿನ ಜಾವದಲ್ಲಿಯೇ ಕಾರ್ಯ ರೂಪಕ್ಕೆ ತಂದರು.

ಕದದ ಹಿಂದೆ ನೆಲ ಅಗೆದು ಖಡ್ಗವನ್ನು ಹುಗಿದು ಅದರ ಮೇಲೆ ಜೋಳದ ಗುಮ್ಮಿಯನ್ನು ಸರಿಸಿಬಿಟ್ಟರು. ರುದ್ರಪ್ಪ ಉಡುಪಿ ಹೋಟ್ಲಲ್ಲಿ ದೋಸೆ ಹೊಯ್ಯುವ ಭಟ್ಟರನ್ನು ಮನೆಗೆ ಕರೆದುಕೊಂಡು ಬಂದು ನೋಡುತ್ತಾನೆ. ಖಡ್ಗ ಇಲ್ಲ. ಹೆಂಡತಿಯ ತುರುಬಿಗೆ ಕೈ ಹಚ್ಚಿ ಎಲ್ಲಿಟ್ರಿ ಹೇಳ್ರೆ ಎಂದು ಎಳೆದಾಡಿದ. ಒಪ್ಪಂದದಂತೆ ಆಕೆ ಗಂಡನ ಯಾವ ಹಿಂಸೆಗೆ ಬಾಯಿ ಬಿಡಲಿಲ್ಲ. ಕೊನೆಗೆ ರುದ್ರಪ್ಪನು ಹೇಗೋ ಪತ್ತೆ ಮಾಡಿ ಖಡ್ಗವನ್ನು ಹೊರ ತೆಗೆದು ಖಬರ್ದಾರ್ ಎಂದು ಅತ್ತೆ ಮತ್ತು ಹೆಂಡತಿಯನ್ನು ಎಚ್ಚರಿಸುತ್ತಲೇ ಅವರು ಹಾಯ್ ಶಿವನೆ ಎಂದು ಉದ್ಗರಿಸಿದರು.

ತಾಳಿ ಕಟ್ಟಿದ ಹೆಂಡತಿಗೆ ಸೋಡಾ ಚೀಟಿ ಕೊಟ್ಟವನಂತೆ ರುದ್ರಪ್ಪ ಕೆಲವು ದಿನ ಖಡ್ಗದೊಂದಿಗೆ ಇದ್ದ. ತನ್ನನ್ನು ಯಾರೂ ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ ಎಂದು ಹೆಮ್ಮೆಯಿಂದ ಆತ ಎಷ್ಟು ದಿನ ಬೀಗುತ್ತಿರಲು ಸಾಧ್ಯ! ಮನೆಯೊಳಗೇ ಖಡ್ಗಕ್ಕೊಂದು ಸ್ಥಾನ ಕಲ್ಪಿಸಿ ತನ್ನ ಕಣ್ಣುಗಳೆಂಬ ಏಳು ಹೆಡೆ ಸರ್ಪಗಳನ್ನು ಅದಕ್ಕೆ ಕಾವಲಿಟ್ಟು ನಿಶ್ಚಿಂತೆಯಿಂದ ಇದ್ದ.

‘ಅಲಲಲಾ.. ಬಂಗಾರ‍್ದಂತ ನನ್ನಳೀಯ್ನೀಗೆ ಕಡ್ಗ ಕೊಟ್ಟೊನೆಂಥೋನು, ಕೊಡಿಸಿದೊನೆಂಥೋನು.. ಕಡ್ಗ ನಂ ರುದ್ರನ್ನ ಅದ್ಯೇನು ಮಳ್ಳು ಮಾಡೈತೋ ಸಿವ್ನೇ..ಕಡ್ಗಕ್ಕೆ ಬೆಂಕಿ ಹಚ್ಚಾ; ಕಡ್ಗಕ್ಕೆ ಕರಿನಾಗ್ರಾವ್ ಕಡಿಯಾ’ ಎಂದು ನಿಂಗಜ್ಜಿ ಅಂಗಲಕ್ಕೇರಮೇವವಾಗಿ ನಿಂತು ಎದೆ ಎದೆ ಬಡಿದುಕೊಳ್ಳಲು ಓಣಿಯ ಒಂದಿಬ್ರು ಗೊಳ್ಳನೆ ನಕ್ಕರು.

‘ಬೇ.. ಮುದ್ಕೀ ಕಡ್ಗ ಮಳ್ಳು ಮಾಡಿರೋದು ರುದ್ರಪ್ಗಲ್ಲ.. ನಿನ್ಗೆ.. ಇನ್ನೆಂಟು ದಿನದಾಗ ನಿನ್ಗೆ ಉಂಡಕೂಳು ಹೊಟ್ಗೆ ಹತ್ತಾಕ್ಕಿಲ್ಲ ನೋಡ್ತಿರು ಆಮಟಿ ನಗಾಡಿದ ಕಾಲಜ್ಞಾನಿಯಂತೆ. ಆ ಮಾತು ಮೈಯ ತೊಗಲಿಗಿಂತ ಬಲವಾಗಿ ಅಂಟಿಕೊಂಡು ಬಿಡಲು ನಿಂಗಜ್ಜಿ ಹಿಂಡನಗಲಿದ ಕರುವಿನಂತೆ ಒದ್ದಾಡಿತು. ‘ಗೌರೀ ಹಾಳಾದ ಕಡ್ಗಕ್ಕೆ ಗತಿ ಕಾಣಿಸದಾವರ‍್ತು ನನ್ ಜೀವಕ್ಕೆ ಸಮಾಧಾನಿಲ್ಲಲೇ” ಎಂದು ಕಣ್ಣು ತುಂಬಿಕೊಂಡು ತಾಯಿಯನ್ನು ಅವುಚಿಕೊಂಡು ‘ಯವ್ವೋ..ನನ್ ಕಥಿಯ್ಯೋನು ಹೇಳ್ಲಿ.. ನನ್‌ಗಿಂದ ಆತ್ಗೆ ಕಡ್ಗನೆ ಯಚ್ಚಾಗೈತೆ ಯವ್ವೋ’ ಎಂದು ಲಬ್‌ಗುಟ್ಟಿ ಅತ್ತಳು.

ಅವರಿಬ್ಬರೂ ಹಗಲಿರುಳು ಯೋಚಿಸಿ ಒಂದು ತೀರ್ಮಾನಕ್ಕೆ ಬಂದರು. ತಮ್ಮಿಬ್ಬರನ್ನೂ ಆ ರುದ್ರಪ್ಪ ಕುತ್ಗೆ ಹಿಚುಕಿ ಸಾಯಿಸಿದರೂ ಸರಿಯೇ ಅದನ್ನೊಯ್ದು ಕನ್ನೀರವ್ವನ ಬಾವಿಗೆ ಹಾಕಿ ಬಿಡುವುದಂದು ನಿರ್ಧರಿಸಿದರು. ದೆವ್ವ ಪಿಶಾಚಿ ಭೇತುಳ ಕಾಳೋರಗಗಳಿಗೆ ಹೆಸರಾದ ಹಾಗೂ ತಳವೇ ಪತ್ತೆ ಇಲ್ಲದ ಪ್ರಾಚೀನ ಕಾಲದ ಕನ್ನೀರವ್ವನ ಬಾವಿ ಬಳಿಗೆ ರಾತ್ರೋ ರಾತ್ರಿ ಹೋಗಿ ಖಡ್ಗವನ್ನು ಹಾಕಲು ಬಾವಿಯು ಗಳುಂ ಎಂದು ನುಂಗಿತು.

ಮರುದಿನ ಬೆಳಗಾಗೆ ಖಡ್ಗ ಕಾಣದಿರಲು ರುದ್ರಪ್ಪ ‘ಏನು ಮಾಡಬಿದರಬೇ ನಿಮ್ಮವ್ನ’ ಎಂದು ತಾರಕ ಸ್ವರ ತೆಗೆಯಲು ಓಣಿಯೇ ಹೋಹೋ ಎಂದಿತು. ‘ನಮ್ ಪಿರಾಣ ಹೋದ್ರೂ ಹೇಳಾಕಿಲ್ಲ ಖೊಲ್ಲೋಖೊಲ್ಲು ಎಂದು ಕುಬುಸದ ಗುಂಡಿಬಿಚ್ಚಿ ಅವನಿಗಡ್ಡ ಮಲಗಿದರು. ಸಾಯಲಿಕ್ಕೆ ಸಿದ್ದರಾದವರ ಮುಖಗಳಿಗೆ ಥೂ ನಿಮ ಬಾಯಾಕ. ಎಂದು ಉಗುಳಿದ ರುದ್ರಪ್ಪ ಅತಳ ವಿತಳ ರಸಾತಳ ಪಾತಾಳದಲ್ಲಿ ಬಚ್ಚಿಟ್ಟಿದ್ದರೂ ಪತ್ತೆ ಮಾಡದೆ ಬಿಡೆನು ಎಂದು ಭೀಕರ ಪ್ರತಿಜ್ಞೆ ಮಾಡಿದನು.

ಉಸಿರಾಟವನ್ನೂ ಮರೆತು ಪತ್ತೆ ಕಾರ್ಯಕ್ಕಿಳಿದ ರುದ್ರಪ್ಪನನ್ನು ಊರಮ್ಮನಗುಡಿಯ ಬಳಿ ಕೊಟ್ರನೆಂಬುವ ಚಾಡಿಕೋರ ಸಂದಿಸಿ ವಂದು ಸೀಕರೇಟು ಕಡ್ವಸ್ತೀಯಾ ವಂದ್ ಸುದ್ದಿ ಯೋಳ್ತಿನಿ ಎನ್ನಲು ಆತಗೆ ನಿಧಿ ಸಿಕ್ಕಷ್ಟು ಸಂತಸವಾಯಿತು. ಅಲ್ಲಲೇ ಒಂದ್ಯಾಕ ಒಂದು ಪ್ಯಾಕೇ ಕೊಡಿಸ್ತೀನಿ ಎಂದದ್ದಲ್ಲದೆ ಕೊಡಿಸಿಯೂ ಬಿಟ್ಟನು. ಇಡೀ ಒಂದು ಸಿಗರೇಟು ಸೇದಿ ಆದ ಮೇಲೆ ಮೊನ್ನೆ ರಾತ್ರಿ ಮುದುಕಿ ಗವುರವ್ವನ ಸಂಗಾಟ ಕನ್ನೀರವ್ವನ ಬಾವಿಕಡೆ ವೋಗಿದ್ದು ನೋಡ್ದೆ ಎಂದವನೆ ಟಣಕೂ ಟಣಕೂ ಜಿಕ್ಕೋತ ಓಡಿ ಮರೆಯಾದನು.

“ಹ್ಹಾ.. ಹ್ಹಾ ಕನ್ನೀರವ್ವನ ಬಾವ್ಯಾಗಾ ಹಾಕಿರೇನ್ರೇ ನನ ಖಡ್ಗಾ” ಎಂದು ಅಂಗಳವನ್ನು ದೊಪ್ಪನೆ ತುಳಿದು ಕೂಗು ಹಾಕಲು ಗೌರವ್ವ ಹಡದವ್ವನನ್ನು ಗಟ್ಟಿಯಾಗಿ ಅವುಚಿಕೊಂಡು ಬಿಟ್ಟಳು. ನಿಂಗಜ್ಜಿ ಆಕೆಯಿಂದ ಬಿಡಿಸಿಕೊಂಡು ಅಂಗಳಕ್ಕೆ ನೆಗೆದು ಹಾಕೀವಲೋ ಹಾಕೀವಿ ಅದ್ಯೇನು ಹರ‍್ಕಂತಿಯೋ ಹರ‍್ಕ ಎಂದು ಪರಿಶೈಪೈಕಿ ಪೈಲ್ವಾನಳಂತೆ ನಿಂತಿತು.

“ಸರೆ ಆ ಕನ್ನೀರವ್ನ ಬಾವಿ ಅದೇಟು ಗಡುತರ ನೋಡೇಬಿಡ್ತೀನಿ” ಎಂದವನೇ ಅಂಗಿ ಬಿಚ್ಚಿ ಇಟ್ಟು ಬಾವಿಕಡೆ ಹೆಜ್ಜೆ ಹಾಕುತ್ತಲೇ ಓಣಿ ಎಂಬೋ ಓಣಿಯೇ ಅಯ್ಯೋ ಬ್ಯಾಡ ಅಯ್ಯೋಬ್ಯಾಡ ಎಂದು ಆತನ ಹಿಂದೆ ಹೆಜ್ಜೆ ಹಾಕಿತು. ಅಯ್ಯೋ ನನಗಂಡ ಕನ್ನೀರವು ಬಾವಿಗೆ ವಂಟಾನ ನನ ಸೋಭಾಗ್ಯ ವುಳಿಸ್ರಪೊ ಎಂದು ಗೌರವ್ವನೂ ಅಯ್ಯೋ ನನಮಗಳ ಸೋಭಾಗ್ಯವೇ ಎಂದು ನಿಂಗಜ್ಜಿಯೂ ಮುಂಚೂಣಿಯಲ್ಲಿದ್ದರು.

‘ಬ್ಯಾಡಪೋ ಬ್ಯಾಡ ಅದರಲ್ಲೀಜಿದವರಾರು ಬದುಕಿ ಬಂದುದನ್ನು ಕಾಣೆ ನನ್ನ ನೂರು ವರುಷದ ಆಯಾಮದಾಗೆ’ ಎಂದು ಶತಾಯುಷಿಯೂ ಒಂದು ಕಾಲದಲ್ಲಿ ನಿಂಗಜ್ಜಿಯ ಕಳ್ಳ ಪ್ರೇಮಿಯೂ ಆದ ಕಾಳಜ್ಜ ನೂರು ದೃಷ್ಟಾಂತಗಳ ಸಹಿತ ಹೇಳಿದರೂ ಕಿವಿ ಮೇಲೆ ಹಾಕಿಕೊಳ್ಳದೆ ರುದ್ರಪ್ಪ ಸಿಂಹ ವಿಗ್ರಹದ ನೆತ್ತಿ ಮೇಲೆ ಕಾಲೂರಿ ಹಸಿರು ಬಣ್ಣದ ನೀರಿಗೆ ದುಡುಮ್ಮನೆ ಧುಮುಕಲು ಜನ ಹೋ ಹೋ ಎಂದಿತು.

‘ಅಯ್ಯೋ ನನ್ನ ಮಾಂಗಲ್ಯದ ಋಣ ತೀರಿತೇ, ನನ್ನ ಕಂದಯ್ಯಗಿನ್ನಾರು ದಿಕ್ಕು’ ಎಂದು ಎದೆಗೂ ನೆಲಕ್ಕೂ ಏಕಾಗಿ ಬಡಿದುಕೊಳ್ಳತೊಡಗಿದರು. ‘ಅದಕ್ಯಾಕ ಅಳ್ತೀಯೇ.. ಹರೇದಾಗ ರಂಡ್ಯಾಗಿ ನಾನು ಬದುಕಿಲ್ಲೇನು’ ಎಂದು ನಿಂಗಜ್ಜಿ ಮಗಳನ್ನು ಗಟ್ಟಿಯಾಗಿ ಅವುಚಿಕೊಂಡಿತು. ರುದ್ರಪ್ಪನ ಹೆಣ ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ತೇಲಬಹುದೆಂದು ಚಾತಕಪಕ್ಷಿಗಳಂತೆ ಓಣಿಯ ಸಮಸ್ತರೇ ಕಾಯುತ್ತಿರಲು ಅಸೀಮ ಸಾಹಸಿ ರುದ್ರಪ್ಪನು ತೇಲಿ ಈಜಿ ದಡ ತಲುಪಿದನು. ಏಕಮೇವ ಪಿತ್ರಾರ್ಜಿತ ಆಸ್ತಿಯಾದ ಖಡ್ಗದೊಂದಿಗೆ. ಅಯ್ಯೋ ನನ ಸೌಭಾಗ್ಯವೇ ಮರಳಿ ಬಂದೆಯಾ ದೇವರು ದೊಡ್ಡವನೆಂದು ಗೌರವ್ವ ಓಡಿ ಹೋಗಿ ಗಂಡನನ್ನು ಗಟ್ಟಿಯಾಗಿ ಅವುಚಿಕೊಂಡಳು.

ಕನ್ನೀರವ್ವನ ಬಾವ್ಯಾಗ ಯ್ಯೋಳು ಕೊಪ್ಪರಿಗಿ ಬಂಗಾರೈತಲ್ಲಾ; ಕಂಡಿತೇನು ಎಂದು ಪ್ರಶ್ನೆಗಳ ಮಳೆ ಸುರಿಸಲಾರಂಭಿಸಿದ ವರುಣರಿಂದ ಬಿಡಿಸಿಕೊಂಡು ಮನೆ ತಲುಪುವಷ್ಟರಲ್ಲಿ ರುದ್ರಪ್ಪಗೆ ಸಾಕುಸಾಕಾಗಿ ಹೋಯಿತು.

ನಾನು ಮನಿ ಬಿಟ್ಟು ಹೊಂಡೋಗ್ತೀನೆಂದು ರುದ್ರಪ್ಪನೂ ಅದೆಂಗಬಿಟ್ ಹೋಗ್ತಿ ನೋಡೇಬಿಡ್ತಿನಿ ಎಂದು ನಿಂಗಜ್ಜಿಯೂ ಪಂಚಾಯ್ತಿ ಎರಡು ದಿನ ಪರ್ಯಂತರ ನಡೆಯಿತು. ಹೋದರೆ ಪಿತ್ರಾರ್ಜಿತ ಎಂಬುದು ಒಂಚೂರು ಹೊಲ ಉಂಟಾ, ನೆರಳುಂಟಾ ಕೊನೆಗೆ ಓಣಿ ದೈವಸ್ಥರ ಮಾತಿಗೆ ಮನ್ನಣೆ ಕೊಟ್ಟು ಅತ್ತೆಯ ನೆರಳಿಗೆ ಶರಣಾಗತನಾದನು.

ತನ್ನ ಪೂರ್ವಜರ ಪರಾಕ್ರಮಕ್ಕೆ ಕಿರೀಟವಿಟ್ನಂತೆ ತಾನು ಅಜೇಯ ಕನ್ನೀರವ್ವನ ಬಾವಿಗೆ ಧುಮುಕಿ ಖಡ್ಗ ತಂದದ್ದು ಎಂದು ತನ್ನನ್ನು ತಾನೇ ಮೋಹಿಸಿಕೊಂಡುಬಿಟ್ಟ ರುದ್ರಪ್ಪ ತೆಪ್ಪಗೆ ಬಾಯಿ ಮುಚ್ಚಿಕೊಂಡು ಎಷ್ಟು ದಿನ ಪಡಸಾಲೆಯ ಮೂಲೆಯಲ್ಲಿ ಕೂತಿರಲು ಸಾಧ್ಯ?ವಾಕಿಂಗ್ ಹೋಗಿ ದಿನಕ್ಕೆ ಐದಾರು ಮಂದಿಯನ್ನಾದರೂ ಮನೆಗೆ ಕರೆದು ತರಲಾರಂಭಿಸಿದನಲ್ಲದೆ ತುಸು ಏರು ದನಿಯಲ್ಲಿಯೇ ಹೆಂಡತಿಗೆ ಸತ್ಕಾರ ಕುರಿತು ಆಜ್ಞೆ ವಿಧಿಸತೊಡಗಿದನು. ಅವರೀರ್ವರೂ ನಂತರ ಅತಿಥಿಗಳು ಅತ್ತ ಹೋಗುತ್ತಲೇ ಇತ್ತ ನಿಂಗವ್ವ ‘ಅಲಲಲಾ’ ಎಂದು ಹೂಂಕರಿಸುವುದು ಮೊದಲಾಯಿತು.

ಯ್ಯೋನು ಮಾಡುವುದಪ್ಪಾ ಖಡ್ಗವನ್ನು ಎಂದು ನಿಂಗಜ್ಜಿ ಓಣಿಯ ಹಲವರ ಬಳಿ ಅಳಲು ತೋಡಿಕೊಂಡಳು. ‘ಅಂಥಾ ಕನ್ನೀರವ್ವನ ಬಾವಿಗೆ ಹಾಕಿದ್ರೇ ಬಿಡ್ಲಿಲ್ಲ ನಿನ್ನಳಿಯಾ’ ಎಂದು ಸೋಗುಟ್ಟಿದರು.

ಮರುದಿನ ಬೆಳಗಾಗೆ ಕೊಟ್ಟೂರಿನ ಬೆಣ್ಣೆ ಬಸವರಾಜನ ತಂಡದ ಸಮಾಳನಾದನದ ಸದ್ದು ಕಿವಿಗೆ ಬೀಳುತ್ತಲೆ ಹೋಗಿ ನೋಡುತ್ತಾಳೆ ಗುಗ್ಗುಳ ಧಗಧಗ ಕೆನ್ನಾಲಿಗೆ ಚಾಚಿ ಹೊಂಟಿರುವುದೂ ಕಾಸಿ ಅಯ್ನೋರು ತಮ್ಮ ನಾಲಗೆಗಳಿಗೆ ಫಳ ಫಳ ಸೂತ್ರ ಸಿಕ್ಕಿಸಿಕೊಂಡು ರಾವೇಶದಿಂದ ನರ್ತಿಸುತ್ತಿರುವುದೂ. ಸೂತ್ರಕ್ಕೆ ಮದುಮಗ ಗದಗದ ನಡುಗುತ್ತಿರುವುದೂ ಕಂಡಿತು.

ಹ್ಹಹ್ಹ ರ ನಮ್ಮ ಕರಿರಭದ್ರ ದೇವರು ಖಡ್ಗ ಹಿಡಿದುಕೊಂಡು ದಕ್ಷನನ್ನು ಕೊಲ್ಲಲು ಹ್ಯಾಗೆ ಬರುತ್ತಿದ್ದಾರೆಂದರೆ.. ಹಿಂದೆಯೇ ಒಡಪು ಹೇಳುತ್ತಿರುವುದೂ ಕಿವಿಗೆ ಬಿತ್ತು. ಆ ಕ್ಷಣ ನಿಂಗಜ್ಜಿಗೆ ಏನು ಹೊಳೆಯಿತೋ ಏನೋ! ಸರಸರನೆ ಬಂದವಳೆ ಖಡ್ಗವನ್ನು ಸೀರೆಯಲ್ಲಿ ಬಚ್ಚಿಟ್ಟುಕೊಂಡು ಸರಸರನೆ ಕೋಟೆ ರಭದ್ರ ಗುಡಿಗೆ ಹೋಗಿ ದೇವ್ರ ಈ ಖಡ್ಗ ನಿನ್ನತ್ರ ಇಟ್ಕಾ ಎಂದು ದೀರ್ಘ ಪ್ರಣಾಮ ಸಲ್ಲಿಸಿ ಮರಳಿದಳು.

ಖಡ್ಗ ಕಾಣದಾಗಲು ರುದ್ರಪ್ಪಗೆ ಎಂದಿನಂತೆ ಸಿಟ್ಟು ಬಂದು ‘ಏನ್ರೇ’ ಎಂದು ಗರ್ಜಿಸಲು ನಿಂಗಜ್ಜಿ ಅದನ್ನೋಯ್ದು ಯೀರ್‌ಬದ್ರರದ್ಯಾವ್ರು ಕ್ವಟ್ ಬಂದೀನಿ ಗಂಡಸಾಗಿದ್ರೆ ತಕ್ಕಂಬಾ ವೋಗೋ ಹ್ಹ...ಹ್ಹ...ಎಂದು ನಗಾಡಿತು.

ಅತುಲ ಪರಾಕ್ರಮದಿಂದ ಗುಡಿಗೆ ಹೋದ ರುದ್ರಪ್ಪಗೆ ಖಡ್ಗ ತರಲು ಸಾಧ್ಯವಾಗಲೇ ಇಲ್ಲ. ಮಾತು, ಪಿತ್ರಾರ್ಜಿತ ಪರಾಕ್ರಮ ಕಳೆದುಕೊಂಡವನಂತೆ ಮನೆಯ ಕಟ್ಟೆಗೆ ಕುಂತಿರುತ್ತಾನೆ.

ಭಾರತೀಯರ ಬಿಟ್ಟೆನಂದರೂ ಬಿಡದೀ ಮಾಯೆ!

ಹೊಸದಿಲ್ಲಿ, ಎ.೯: ಭಾರತೀಯರು ಹೊಗೆ ಬತ್ತಿ ಸೇವನೆಯ ಅಭ್ಯಾಸವನ್ನು ಇತರರಿಗಿಂತ ತಡವಾಗಿ ಆರಂಭಿಸಿದ್ದಾರೆ. ಆದರೆ, ಅದರ ಅಭ್ಯಾಸದಿಂದ ಹೊರ ಬರುವವರು ಬಹಳ ಕಡಿಮೆ. ಭಾರತದಲ್ಲಿ ಕೇವಲ ಶೆ.೨ ಮಂದಿ ಮಾತ್ರ ‘ಮಾಜಿ ಧೂಮಪಾನಿ’ಗಳೆನಿಸಿದ್ದರೆ ಅಮೆರಿಕ ಹಾಗೂ ಯುರೋಪ್‌ನಲ್ಲಿ ಇವರ ಪ್ರಮಾಣ ಶೇ. ೪೦ರಷ್ಟಿದೆ.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಧೂಮಪಾನದಿಂದ ವಿಮುಕ್ತಿ ಹೊಂದಿದವರ ಸಂಖ್ಯೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಕೇರಳದಲ್ಲಿ ಅತಿ ಹೆಚ್ಚು ಅಂದರೆ ಶೇ. ೭ ಹೊಗೆ ಪ್ರಿಯರು ಈಗ ಮಾಜಿಗಳಾಗಿದ್ದರೆ, ರಾಜಧಾನಿ ದಿಲ್ಲಿ ಈ ವಿಭಾಗದಲ್ಲಿ ಕೊನೆಯಲ್ಲಿದೆ. ಅಲ್ಲಿ ಶೇ. ೧ಕ್ಕಿಂತಲೂ ಕಡಿಮೆ ಮಂದಿ ಬೀಡಿ-ಸಿಗರೇಟ್‌ಗೆ ವಿದಾಯ ಹೇಳಿದ್ದಾರೆ.

ಜಾಗತಿಕ ಆರೋಗ್ಯ ಸಂಶೋಧನೆ ಕೇಂದ್ರ ಹಾಗೂ ರಾಷ್ಟ್ರೀಯ ಸಾರ್ವಜನಿಕ ನಿಧಿ ಸಂಸ್ಥೆಗಳು ಈ ಅಧ್ಯಯನವನ್ನು ನಡೆಸಿವೆ.

ಧೂಮಪಾನ ಶೇ. ೧೦ರಷ್ಟು ಹೆಚ್ಚಾದರೆ ಆಯುಷ್ಯದ ಪ್ರಮಾಣ ಒಂದು ವರ್ಷ ಕಡಿಮೆಯಾಗುತ್ತದೆ. ನಗರ ಪ್ರದೇಶದಲ್ಲಿ ೨೦-೨೪ರ ವಯೋಮಾನದ ಯುವ ಧೂಮಪಾನಿಗಳ ಪ್ರಮಾಣ ೧೯೯೯ರಲ್ಲಿ ಶೇ. ೧೩ ಇದ್ದುದು ೨೦೦೬ಕ್ಕಾಗುವಾಗ ಶೇ. ೨೫ಕ್ಕೆ ಏರಿದೆ. ಇವರಲ್ಲಿ ಸಿಗರೇಟ್ ಸೇದುವವರು ಅಧಿಕ ಎಂದು ಅಧ್ಯಯನ ತಿಳಿಸಿದೆ.

ಇದರ ಒಟ್ಟಾರೆ ತಾತ್ಪರ್ಯವೆಂದರೆ ಹೊಗೆ ಸೇವನೆ ಬಿಡದಿದ್ದಲ್ಲಿ ಪುರುಷರ ಆಯುಷ್ಯದ ಪ್ರಮಾಣ ಒಂದು ವರ್ಷಕ್ಕೂ ಹೆಚ್ಚು ಕಡಿತವಾಗಲಿದೆಯೆಂದು ವರದಿಯ ಲೇಖಕರೊಬ್ಬರಾದ ಪ್ರಭಾತ್ ಝಾ ಹೇಳಿದ್ದಾರೆ.

ಸರಾಸರಿ ೩೦ರ ವಯೋಮಾನದ ಪುರುಷರು ಹಾಗೂ ಮಹಿಳೆಯರಲ್ಲಿ ಪುರುಷ ‘ಬೀಡಿ ಸೇವಕರು’ ತಮ್ಮ ಆಯುಷ್ಯದ ಆರು ವರ್ಷಗಳನ್ನು ಕಳೆದುಕೊಂಡಿದ್ದರೆ, ಮಹಿಳಾ ‘ಬೀಡಿ ಸೇವಕಿಯರು’ ಆಯುರ್ಮಾನದ ೮ ವರ್ಷಗಳನ್ನು ಕಳೆದುಕೊಂಡಿದ್ದಾರೆ. ಪುರುಷ ‘ಸಿಗರೇಟು ಸೇವಕರು’ ೧೦ ವರ್ಷ ಮೊದಲೇ ಇಹಲೋಕ ತ್ಯಜಿಸಲಿದ್ದಾರೆ.

ಈ ವರದಿಯ ಪ್ರಕಾರ ಹೊಗೆ ಬತ್ತಿಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದು ಜನರು ‘ಧೂಮದಾಸ’ ರಾಗುವುದನ್ನು ತಡೆಯುವ ಪರಿಣಾಮಕಾರಿ ಉಪಾಯವಾಗಿದೆ. ಉದಾಹರಣೆಗೆ ಹೊಗೆಬತ್ತಿಯ ಬೆಲೆ ಶೇ. ೧೦ರಷ್ಟು ತುಟ್ಟಿಯಾದರೆ, ಅಭ್ಯಾಸಕ್ಕೆ ವಿದಾಯ ಹೇಳುವವರ ಪ್ರಮಾಣ ಶೇ. ೨-೪ರಷ್ಟು ಹೆಚ್ಚಾಗುತ್ತದೆ.

ಈ ವರ್ಷದ ಬಜೆಟ್‌ನಲ್ಲಿ ವಿತ್ತ ಸಚಿವ ಪ್ರಣವ್ ಮುಖರ್ಜಿಯವರು ತಂಬಾಕು ಉತ್ಪನ್ನಗಳ ಮೇಲೆ ಶೇ. ೧೭ರಷ್ಟು ಅಬಕಾರಿ ಸುಂಕ ವಿಧಿಸಿರುವುದರಿಂದ ಹೊಗೆ ಬತ್ತಿಗಳ ಬೆಲೆ ಶೇ. ೬ರಷ್ಟು ಹೆಚ್ಚಿದೆ. ಇದರಿಂದಾಗಿ ಸುಮಾರು ೨ ಲಕ್ಷದಷ್ಟು ಹಾಲಿ ಧೂಮಪಾನಿಗಳು ಈ ಅಭ್ಯಾಸದಿಂದ ಮುಕ್ತಿ ಹೊಂದಲು ಯೋಚಿಸಬಹುದು ಎಂದು ಝಾ ಅಭಿಪ್ರಾಯಿಸಿದ್ದಾರೆ.

ಈ ೨ ಲಕ್ಷ ಮಂದಿ ಜೀವ ಉಳಿಸಿಕೊಂಡವರಲ್ಲಿ ಅರ್ಧದಷ್ಟು ಜನ ಮಧ್ಯ ವಯಸ್ಕರಾಗಿರುತ್ತಾರೆ.

ಸಿಗರೇಟು ಹಾಗೂ ಮುಖ್ಯವಾಗಿ ಬೀಡಿಗಳ ಮೇಲೆ ಇನ್ನಷ್ಟು ಕರಭಾರ ವಿಧಿಸುವುದರಿಂದ ಮುಂದಿನ ಕೆಲವು ದಶಕಗಳಲ್ಲಿ ಸುಮಾರು ೨ ಕೋಟಿ ಜನರ ಪ್ರಾಣ ಉಳಿಯಬಹುದು ಅಥವಾ ಆಯುಷ್ಯ ಹೆಚ್ಚಾಗಬಹುದೆಂದು ವರದಿ ಅಂದಾಜಿಸಿದೆ.