Monday, April 12, 2010

ನಕ್ಸಲರ ದಾಳಿ-ಕ್ರೂರ, ಖಂಡನೀಯ...ಆದರೆ!

ಇದೇ ಏಪ್ರಿಲ್ ೬ರಂದು ಬೆಳಿಗ್ಗೆ ನಕ್ಸಲ್ ಚಳವಳಿಯ ಇತಿಹಾಸದಲ್ಲೇ ನಡೆಸಲಾದ ಅತಿ ದೊಡ್ಡದಾದ ಮತ್ತು ಕ್ರೂರವಾದ ದಾಳಿಯಲ್ಲಿ ಸಿಪಿ‌ಐ (ಮಾವೋವಾದಿ) ಪಕ್ಷದ ಪಿ‌ಎಲ್‌ಎ ಗೆರಿಲ್ಲಾ ಪಡೆಗಳು ಸಿ‌ಆರ್‌ಪಿ‌ಎಫ್‌ನ ೭೬ ಕ್ಕೂ ಹೆಚ್ಚು ಯೋಧರನ್ನು ಕೊಂದುಹಾಕಿವೆ.

ಪ್ರಾಯಶಃ ಸಾವಿನ ಸಂಖ್ಯೆ ಇನ್ನೂ ಹೆಚ್ಚಲಿದ್ದು ಸ್ವಾತಂತ್ರ್ಯಾ ನಂತರದಲ್ಲಿ ಈಶಾನ್ಯ ಭಾರತದಲ್ಲಿ ಬಿಟ್ಟರೆ ಭಾರತದ ಅರೆ ಸೈನಿಕ ಪಡೆಯ ಇಡೀ ಕಂಪನಿಯೊಂದು ಈ ರೀತಿ ಅಂತರಿಕ ಸಂಘ ರ್ಷದಲ್ಲಿ ಹತವಾದದ್ದು ಇದೇ ಮೊದಲಿರ ಬಹುದು. ಸರಕಾರ ಕೂಡಲೇ ಇದಕ್ಕೆ ದೊಡ್ಡ ಮಟ್ಟದಲ್ಲಿ ಪ್ರತಿಕಾರ ತೀರಿಸಿಕೊಳ್ಳಲು ಸಜ್ಜಾಗು ತ್ತಿದೆ. ಈ ದಾಳಿ ನಡೆದ ಸಂಜೆಯೇ ತುರ್ತಾಗಿ ನಡೆದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾವೊವಾದಿಗಳನ್ನು ಮಟ್ಟಹಾಕಲು ಸೇನಾಪಡೆಗಳನ್ನು ಬಳಸುವ ಬಗ್ಗೆ ಗುಪ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದರ ಹಿಂದಿನ ದಿನ ತಾನೇ ಗೃಹಮಂತ್ರಿ ಚಿದಂಬರಂ ಲಾಲ್‌ಘಡ್‌ನಲ್ಲಿ ಒಂದುಕಡೆ ನಕ್ಸಲರನ್ನು ಮಾತುಕತೆಗೂ ಆಹ್ವಾನಿಸಿ ಮತ್ತೊಂದು ಕಡೆ ನಕ್ಸಲ್ ಪೀಡೆಯನ್ನು ಇನ್ನು ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಹತ್ತಿಕ್ಕ ಲಾಗುವುದೆಂದೂ ಏಕಕಾಲದಲ್ಲಿ ಘೋಷಿಸಿದ್ದರು. ಅದರ ಮರುದಿನವೇ ಈ ದಾಳಿ ನಡೆದಿರುವುದು ಸರಕಾರಕ್ಕೆ ಮುಖಭಂಗವಾಗಿದೆ. ಹೀಗಾಗಿ ಇದನ್ನು ಸರಕಾರ ಸವಾಲೆಂದು ಸ್ವೀಕರಿಸಿರುವುದು ಅದರ ಹೇಳಿಕೆಗಳು ಮತ್ತು ನಡೆಸುತ್ತಿರುವ ತಯಾರಿಗಳಿಂದ ಸ್ಪಷ್ಟವಾಗುತ್ತಿದೆ. ಇದರ ಒಟ್ಟು ಫಲಿತಾಂಶವೆಂದರೆ ಚತ್ತೀಸ್‌ಘಡ್‌ದ ಚಂದ್ರಾ ವತಿ ನದಿಯಲ್ಲಿ ಇಷ್ಟರಲ್ಲೇ ರಕ್ತದ ಹೊಳೆಯೇ ಹರಿಯಲಿದೆ. ಅಲ್ಲಿ ಹರಿಯುವ ರಕ್ತದಲ್ಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಪಾಲೆಷ್ಟು, ಮಾವೊವಾದಿಗಳ ಪಾಲೆಷ್ಟು ಮತ್ತು ಅಮಾಯಕ ಆದಿವಾಸಿಗಳ ಪಾಲೆಷ್ಟು ಎಂಬ ಚರ್ಚೆಯಲ್ಲಿ ತೊಡಗುವುದು ನಿರರ್ಥಕ ಮತ್ತು ಕ್ರೂರ. ಅಷ್ಟೇ ವ್ಯರ್ಥವಾದದ್ದು ಈ ಸಂದರ್ಭದಲ್ಲಿ ಹಿಂಸೆ ಮತ್ತು ಅಹಿಂಸೆಗಳ ಅಮೂರ್ತ ನೈತಿಕ ವಾಗ್ವಾದಗಳಲ್ಲಿ ತೊಡಗಿಕೊಳ್ಳುವುದು.

ಏಕೆಂದರೆ ಪ್ರಭುತ್ವ ಮಾವೊವಾದಿಗಳ ಮೇಲೆ ಅಥವಾ ಆದಿವಾಸಿಗಳ ಮೇಲೆ ನಡೆಸುತ್ತಿರುವ ಪ್ರಭುತ್ವ ಹಿಂಸೆ ಇರಬಹುದು ಅಥವಾ ಅದಕ್ಕೆ ಪ್ರತಿಕ್ರಿಯೆಯಾಗಿ ಮಾವೊವಾದಿಗಳು ನಡೆಸುವ ಕ್ರಾಂತಿಕಾರಿ ಹಿಂಸೆ ಇರಬಹುದು ಅಮೂರ್ತದಲ್ಲಿ ನಡೆಯುತ್ತಿಲ್ಲ. ಅವು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಘಟಿಸುತ್ತಿವೆ. ಯಾ ವುದೇ ಬಗೆಯ ಹಿಂಸೆಯನ್ನು ಅನಿವಾರ್ಯ ಮಾಡುವ ಸಂದರ್ಭವನ್ನೇ ಬದಲಿಸದ ಹೊರತು ಅಹಿಂಸೆಯ ಬಗೆಗಿನ ಹಪಹಪಿಕೆಗಳು ಅರಣ್ಯರೋದನವಷ್ಟೇ ಆಗುತ್ತದೆ. ಈ ಹಿಂಸಾತ್ಮಕ ಸಂದರ್ಭದಲ್ಲಿರುವ ಹಿಂಸೆಯನ್ನು ಇಲ್ಲವಾಗಿಸದೆ ಕೇವಲ ಒಂದು ಬಗೆಯ ಹಿಂಸಾಚಾರವನ್ನು ಮಾತ್ರ ಖಂಡಿಸುವುದು ಅದಕ್ಕೆ ಪ್ರತಿಯಾಗಿರುವ ಹಿಂಸಾಚಾರದ ಪರೋಕ್ಷ ಸಮರ್ಥನೆಯಾಗು ತ್ತದೆಯೇ ವಿನಃ ಅಹಿಂಸೆಯ ಪ್ರತಿಪಾದನೆಯಾಗುವುದಿಲ್ಲ.

ಮಾವೊವಾದಿಗಳ ದಾಳಿ ನಡೆದು ಪ್ರಾಣ ಹಾನಿ ಸಂಭವಿಸಿದಾಗಲೆಲ್ಲಾ ಈ ದೇಶದ ಮಾನವ ಹಕ್ಕು ಹೋರಾಟಗಾರರ ಮೇಲೆ ಸರಕಾರಗಳು ಮತ್ತು ಬಲಪಂಥೀಯರು ಹರಿಹಾಯುತ್ತಾರೆ. ಮಾವೊವಾದಿಗಳ ಮೇಲೆ ದಾಳಿ ನಡೆದಾಗ ಮಾತ್ರ ಮಾನವ ಹಕ್ಕುಗಳ ಉಲ್ಲಂಘನೆಯಾಯಿತೆಂದು ಕೂಗಾಡುವ ನೀವು ಪೊಲೀಸರ ಹತ್ಯೆಯಾದಾಗ ಅವರ ಮಾನವ ಹಕ್ಕು ಹರಣ ಮಾಡಿದ ನಕ್ಸಲರ ವಿರುದ್ಧವೇಕೆ ಮಾತಾಡುವುದಿಲ್ಲ ಎಂದು ಪ್ರಶ್ನಿಸುತ್ತಾರೆ. ಆದರೆ ಇದೇ ಮಾಧ್ಯಮಗಳು ಮತ್ತು ತಥಾಕಥಿತ ಅಹಿಂಸಾವಾದಿಗಳು ಪ್ರಭುತ್ವ ಹಿಂಸೆಯ ಬಗ್ಗೆ ಯಾಗಲೀ, ಈ ತಾರತಮ್ಯ ವ್ಯವಸ್ಥೆ ನಿರಂತರ ವಾಗಿ ನಡೆಸಿಕೊಂಡು ಬರುತ್ತಿರುವ ವ್ಯವಸ್ಥೆಯ ಹಿಂಸೆಯ ಬಗ್ಗೆಯಾಗಲೀ ಮಾತನಾಡಿದ್ದೇ ಅಪರೂಪ. ಅಸಹನೀಯ ಬದುಕು ಸೃಷ್ಟಿಸು ತ್ತಿರುವ ಪ್ರತಿರೋಧದ ಸಂದರ್ಭದ ಭಾಗವಾಗಿ ಹಿಂಸೆ-ಪ್ರತಿಹಿಂಸೆಯ ವಿದ್ಯಮಾನವನ್ನು ಅರ್ಥ ಮಾಡಿಕೊಳ್ಳುವುದಂತೂ ಕನ್ನಡದ ಸಂದರ್ಭದಲ್ಲಿ ಇಲ್ಲವೇ ಇಲ್ಲ ಎನುವಷ್ಟು ಕಡಿಮೆ.

ಇಂದು ಸಿ‌ಆರ್‌ಪಿ‌ಎಫ್ ಯೋಧರ ಹತ್ಯೆ ನಡೆದಿರುವಾಗಲೂ ಮತ್ತೆ ಇದೇ ಬಗೆಯ ಆರೋಪ-ಪ್ರತ್ಯಾರೋಪಗಳ ನಿರರ್ಥಕ ವಾಗ್ವಾದಗಳು ನಡೆಯುತ್ತಿವೆ. ನಿಜಕ್ಕೂ ಶಾಶ್ವತ ಶಾಂತಿ ಬಯಸುವವರನ್ನು ಮಾವೊವಾದಿಗಳ ಬೆಂಬಲಿಗರಂತೆಯೂ, ಯೋಧರ ಹತ್ಯೆಯ ವಿರುದ್ಧ ಮಾವೊವಾದಿಗಳ ಮತ್ತು ಅವರ ಬೆಂಬಲಕ್ಕೆ ನಿಂತಿರುವ ಆದಿವಾಸಿಗಳ ಸಾಮೂ ಹಿಕ ಹತ್ಯೆ ಮಾಡಲು ಯುದ್ಧ ಘೋಷಿಸಬೇಕೆ ನ್ನುವವರನ್ನು ಮಹಾನ್ ದೇಶಭಕ್ತರಂತೆಯೂ ಮಾಧ್ಯಮ ಮತ್ತು ಸರಕಾರ ಚಿತ್ರಿಸುತ್ತಿದೆ. ಕಳೆದ ೪೩ ವರ್ಷಗಳಿಂದ ಇದೇ ಬಗೆಯ ವ್ಯರ್ಥ ವಾಗ್ವಾದಗಳೂ, ಪ್ರಾಣಹರಣಗಳೂ ನಡೆದಿದ್ದು ಇನ್ನಾದರೂ ಸೈನಿಕರ ಪ್ರಾಣ, ಮಾವೊವಾದಿಗಳ ಪ್ರಾಣ ಹಾಗೂ ಆದಿವಾಸಿಗಳ ಪ್ರಾಣ ಹರಣ ವಾಗುತ್ತಿರುವ ಸಂದರ್ಭವನ್ನು ಬದಲಿಸುವ ಬಗ್ಗೆ ನಿಜವಾದ ಶಾಂತಿಪ್ರಿಯರು ತಲೆಕೆಡಿಸಿಕೊಳ್ಳ ಬೇಕಿದೆ.

ಹೀಗಾಗಿ ನಾಗರಿಕ ಸಮಾಜ ಕೇಳಬೇಕಿರುವ ಪ್ರಶ್ನೆ:

ಆಪರೇಷನ್ ಗ್ರೀನ್ ಹಂಟ್ ಮತ್ತು ಅದಕ್ಕೆ ಪ್ರತಿಯಾಗಿ ಈ ಯೋಧರ ಸಾವಿಗೆ ಕಾರಣವಾ ಗಿರುವ ಮಾವೊವಾದಿಗಳ ಕ್ರಾಂತಿಕಾರಿ ಹಿಂಸೆ ಹುಟ್ಟಿಕೊಂಡಿರುವ ಸಂದರ್ಭವೇನು?

ಈ ದೇಶದ ನಾಗರೀಕರ ಹೆಸರಲ್ಲಿ, ಈ ದೇಶದ ಪ್ರಜಾಸತ್ತೆಯನ್ನು ಮತ್ತು ಕಾನೂನುಬದ್ಧ ಆಡಳಿತವನ್ನು (ರೂಲ್ ಆಫ್ ಲಾ) ಉಳಿಸುವ ಹೆಸರಿನಲ್ಲಿ ಛತ್ತೀಸ್‌ಘಡ್‌ದಲ್ಲಿ ಸರಕಾರ ಯುದ್ಧ ವನ್ನು ಪ್ರಾರಂಭಿಸಿದೆ. ಈ ದೇಶದ ಸಕಲ ಶೋಷಿತ ಜನತೆಯ ಹೆಸರಿನಲ್ಲಿ, ನವಪ್ರಜಾಸತ್ತಾ ತ್ಮಕ ಕ್ರಾಂತಿಯ ಹೆಸರಿನಲ್ಲಿ ಮಾವೊವಾದಿಗಳೂ ಸಹ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಿದ್ದಾರೆ.

ಸ್ಥೂಲವಾಗಿ ಇದು ಮೇಲ್ನೋಟಕೆ ಎರಡೂ ಕಡೆಯವರು ಘೋಷಣೆಗಳಿಂದ ಅರ್ಥವಾಗುವ ಸನ್ನಿವೇಶ. ಆದರೆ ಕಳೆದ ೬೦ ವರ್ಷಗಳಲ್ಲಿ ಸಂವಿಧಾನದ ನಿರ್ದೇಶನ ತತ್ವಗಳ ಆಶಯಕ್ಕೆ ವಿರುದ್ಧವಾಗಿಯೇ ಈ ದೇಶದ ರೂಲ್ ಆಫ್ ಲಾ ನಡೆದುಕೊಂಡು ಬಂದಿರುವುದೇ ಈ ದೇಶದ ಪ್ರಜಾಸತ್ತೆಯ ವಿಪರ್ಯಾಸ. ಹೀಗಾಗಿ ಈ Rule Of Law ಒಂದು ಕಡೆ ಈ ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಸಕಲ ಸಂಪತ್ತನ್ನೆಲ್ಲಾ ಲೂಟಿ ಮಾಡುವುದನ್ನು ಕಾನುನು ಬದ್ಧಗೊಳಿಸಿದ್ದರೆ, ಈ ನೀತಿಗಳಿಗೆ ಬಲಿಯಾಗಿರುವ ಈ ದೇಶದ ದಲಿತ, ಆದಿವಾಸಿ, ರೈತ ಕೂಲಿ ಕಾರ್ಮಿಕರ ಬದುಕನ್ನೇ Unlawful Activity (ಕಾನೂನು ಬಾಹಿರ ಚಟುವಟಿಕೆ)ಯನ್ನಾಗಿ ಮಾಡಿಬಿಟ್ಟಿದೆ. ಹೀಗಾಗಿಯೇ ಇಂದು Unlawful Activity Prevention Act (UAPA) ಅಡಿ ಅತಿಹೆಚ್ಚು ಬಂಧನವಾಗಿರುವುದು ಚತ್ತೀಸ್‌ಘಡ್‌ದ ಆದಿವಾಸಿಗಳದ್ದೇ.

ಚತ್ತೀಸ್‌ಘಡ್‌ನಲ್ಲಿ ಆಗುತ್ತಿರುವುದು ಇದೆ. ಅಲ್ಲಿ ಅಪರೂಪದ ಖನಿಜ ನಿಕ್ಷೇಪಗಳಿವೆ. ಅದರ ಒಟ್ಟು ಬೆಲೆ ಏನಿಲ್ಲವೆಂದರೂ ೧೦ ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ. ಹೀಗಾಗಿ ಅದರ ಮೇಲೆ ಈ ದೇಶದ ಮತ್ತು ಸಾಮ್ರಾಜ್ಯಶಾಹಿ ದೇಶಗಳ ಗಣಿ ಬಹುರಾಷ್ಟ್ರೀಯ ಕಂಪನಿಗಳ ಕಣ್ಣು ಬಿದ್ದಿದೆ. ಈಗಾಗಲೇ ಸರ್ಕಾರಗಳು ೧,೫೦,೦೦೦ ಕೋಟಿಗೂ ಹೆಚ್ಚಿನ ಮೌಲ್ಯದ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಗಣಿಗಾರಿಕೆ ನಿರಾತಂಕವಾಗಿ ನಡೆಯಬೇಕೆಂದರೆ ಶತಮಾನಗಳಿಂದ ಕಾಡನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಮಂದಿ ಆದಿವಾಸಿಗಳನ್ನು ಎತ್ತಂಗಡಿ ಮಾಡಬೇಕಿದೆ. ಆದರೆ ಸರ್ಕಾರದಿಂದ ತಮ್ಮ ಬದುಕಿನ ಪ್ರತಿಹೆಜ್ಜೆಯಲ್ಲೂ ಬರಿಯೇ ದಮನವನ್ನು ಎದುರಿಸುತ್ತಾ ಕುಗ್ಗಿ, ಬಗ್ಗಿ ಬದುಕುತ್ತಿದ್ದ ಈ ಆದಿವಾಸಿಗಳ ಬೆಂಬಲಕ್ಕೆ ನಿಂತಿದ್ದು ಮಾಧ್ಯಮಗಳು ಅಲ್ಲ, ಅಮೂರ್ತ ಅಹಿಂಸಾವಾದಿಗಳು ಅಲ್ಲ. ೬೦ ವರ್ಷಗಳಿಂದ ಸರ್ಕಾರದ ಒಬ್ಬ ಪ್ರತಿನಿಧಿಯೂ ಕಾಲಿಡದ ಆ ಗೊಂಡಾರಣ್ಯದ ಮೂಲೆಮೂಲೆಗೂ ತಲುಪಿ ಆದಿವಾಸಿಗಳನ್ನು ಸಂಘಟಿಸಿ, ಹೊಸ ಬದುಕು ಕಲಿಸಿದವರು ಈ ಹಿಂಸಾವಾದಿ ಮಾವೋವಾದಿಗಳೇ. ಹೀಗಾಗಿಯೇ ನಾಗರಿಕ ಸಮಾಜ ಒಪ್ಪಲಿ ಬಿಡಲಿ ಈ ದೇಶದ ಪ್ರಜಾಪ್ರಭುತ್ವವಾದಿ ಸರ್ಕಾರಕ್ಕಿಂತ, ಅಹಿಂಸಾವಾದಿ ನಾಗರಿಕ ಸಮಾಜಕ್ಕಿಂತ, ನಿಷ್ಪಕ್ಷಪಾತಿ ಮಾಧ್ಯಮಗಳಿಗಿಂತ ಈ ಆದಿವಾಸಿಗಳಿಗೆ ಹಿಂಸಾವಾದಿ ಮಾವೋವಾದಿಗಳೇ ಅಚ್ಚುಮೆಚ್ಚು.

ಈಗ ಕೆಲವೇ ಮಂದಿಯ ಲಾಭಕ್ಕೆ ದೇಶದ ಸಂಪತ್ತನ್ನೇ ಲೂಟಿ ಹೊಡೆದು ಆದಿವಾಸಿಗಳನ್ನು ಎತ್ತಂಗಡಿ ಮಾಡುವ ಪರಮ ದೇಶದ್ರೋಹಿ ಕಾರ್ಯಕ್ಕೆ ಸರ್ಕಾರ ೭೦,೦೦೦ಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿದೆ. ಅವರ ಕಣ್ಣು ಮುಂದೆ ಬಂದೂಕು ಹಿಡಿದ ನಕ್ಸಲರನ್ನು ಮತ್ತು ಅವರನ್ನು ಬೆಂಬಲಿಸುವ ಆದಿವಾಸಿಗಳನ್ನು ದೇಶದ ಶತ್ರುಗಳನ್ನಾಗಿ ಚಿತ್ರಿಸಲಾಗಿದೆ. ಅಂದರೆ ಕೆಲವರ ಹಿತಾಸಕ್ತಿಯನ್ನೇ ದೇಶದ ಹಿತಾಸಕ್ತಿಯೆಂದು ಬಣ್ಣಿಸುತ್ತಾ ೭೦,೦೦೦ ಯೋಧರ ಬದುಕನ್ನು ಬಲಿಗೊಡಲಾಗಿದೆ. ತಮ್ಮ ಅಣ್ಣತಮ್ಮಂದಿರನ್ನು ತಾವೇ ಕೊಲ್ಲುವಂತೆ ಅಥವಾ ಅವರಿಂದ ಹತರಾಗುವಂತ ದುರಂತ ಸಂದರ್ಭವನ್ನು ಸೃಷ್ಟಿಸಿದೆ. ಹೀಗೆ ಇಂದು ಸಹೋದರರ ನಡುವೆ ಯುದ್ಧ ಘೋಷಣೆಯಾಗಿದೆ. ಭ್ರಾತೃಹತ್ಯೆಯ ಲಾಭವನ್ನು ಮಾತ್ರ ನಾಗರಿಕ ಸಮಾಜದ ಉದ್ಯಮಿಗಳು ಪಡೆಯುತ್ತಿರುತ್ತಾರೆ. ಅಲ್ಲಿಯತನಕ ಯೋಧರೋ, ನಕ್ಸಲರೋ ಅಥವಾ ಆದಿವಾಸಿಗಳೋ ಪರಸ್ಪರ ಹತ್ಯೆಯಾಗುತತಿಲೇ ಇರುತ್ತಾರೆ. ಆದ್ದರಿಂದಲೇ ನಾಗರಿಕ ಸಮಾಜ ಈ ಹತ್ಯೆಗೆ ಕಾರಣವಾಗುತ್ತಿರುವ ನೀತಿಗಳನ್ನು ಬದಲಿಸಲು ಯತ್ನಿಸದೆ ಕೇವಲ ಹಿಂಸೆಯ ಬಗ್ಗೆ ಮಾತನಾಡುವುದೇ ಅತ್ಯಂತ ಹಿಂಸಾತ್ಮಕವಾದದ್ದು.

ಅದೇ ರೀತಿ ಸಮಾಜ ಬದಲಾವಣೆಯ ಉದಾತ್ತ ಆದರ್ಶಗಳಿಗಾಗಿ ಮಾವೋವಾದಿಗಳು ಪ್ರಾಣವನ್ನೇ ಬಲಿಕೊಡುವ ಅಥವಾ ಬಲಿತೆಗೆದುಕೊಳ್ಳುವಷ್ಟು ಬದ್ದತೆ ಹೊಂದಿದ್ದಾರೆ, ನಿಜ. ಆದರೆ ಈ ಬದ್ಧತೆಯು ಮೊಂಡುಹಠಮಾರಿತನವಾದರೆ, ಬದಲಾಗುತ್ತಿರುವ ಸಂದರ್ಭದ ವಿವೇಕಕ್ಕೆ ತೆರೆದುಕೊಳ್ಳದಿದ್ದರೆ ಹೇಗೆ ಕುರುಡನ್ನೂ ಮತ್ತು ಆತ್ಮವಿನಾಶವನ್ನೂ ತರುತ್ತದೆ ಎಂಬುದನ್ನು ನಕ್ಸಲ್ ಚಳವಳಿ ಪ್ರಾರಂಭದಲ್ಲೇ ಅನುಭವಿಸಿತ್ತು.

ದೇಶಾದ್ಯಂತ ಜನಸಮೂಹದ ರಾಜಕೀಯ ಹೋರಾಟಗಳ ಅಲೆ ಏರದೆ ಯಾವುದೋ ಮೂಲೆಯಲ್ಲಿ ಮಾತ್ರ ತಾರಕಕ್ಕೆ ಮುಟ್ಟುವ ಕ್ರಾಂತಿಕಾರಿ ಚಳವಳಿಯನ್ನು ಪ್ರಭುತ್ವ ಅತ್ಯಂತ ಕ್ರೂರವಾಗಿ ಹೊಸಕಿಹಾಕುತ್ತದೆಂಬುದನ್ನು ೭೪ರಲ್ಲೂ, ಇತ್ತೀಚೆಗೆ ಆಂಧ್ರ-ತೆಲಂಗಾಣದಲ್ಲೂ ಮಾವೋವಾದಿ ಚಳವಳಿ ತಾನೇ ಅನುಭವಿಸಿದೆ. ಆದರೆ ಅರ್ಥಮಾಡಿಕೊಂಡಂತಿಲ್ಲ. ಹೀಗಾಗಿ ಅದರಿಂದ ಏನೇನೂ ಪಾಠವನ್ನು ಕಲಿಯದೆ ಮತ್ತೊಮ್ಮೆ ಚತ್ತೀಸ್‌ಘಡ್‌ದಲ್ಲಿ ಅದೇ ರೀತಿಯ ಆತ್ಮಹತ್ಯಾತ್ಮಕ ಸಂದರ್ಭವನ್ನು ಸೃಷ್ಟಿಸಿಕೊಂಡಿದೆ.

ಆ ಪ್ರದೇಶದ ಇಡೀ ಆದಿವಾಸಿ ಸಮುದಾಯವನ್ನು ತನ್ನ ತಪ್ಪುವ್ಯೂಹತಂತ್ರಗಳಿಂದ ಸಾಮೂಹಿಕ ಹತ್ಯೆಯ ಅಪಾಯಕ್ಕೂ ದೂಡಿದೆ. ಚತ್ತೀಸ್‌ಘಡದ ಆದಿವಾಸಿಗಳ ಹೋರಾಟ ಏಕೆ ನಡೆಯುತ್ತಿದೆ ಎಂಬ ಬಗ್ಗೆ ಈ ದೇಶದ ಶೇ.೯೦ರಷ್ಟು ಜನತೆಗೇ ಗೊತ್ತೇ ಇಲ್ಲ. ಇನ್ನು ಅವರಿಂದ ಬೆಂಬಲ ದೊರಕಿಸಿಕೊಳ್ಳುವುದು ದೂರದ ಮಾತು. ಆದರೆ ಮಾವೋವಾದಿಗಳು ಒಬ್ಬ ಆರುಂಧತಿ ರಾಯ್ ಒಂದು ಔಟ್‌ಲುಕ್‌ನಲ್ಲಿ ಬರೆದ ಲೇಖನವನ್ನೇ ಜನರ ಬೆಂಬಲ ಎಂದು ಅರ್ಥಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ. ತಮ್ಮದೇ ಅನುಭವದಿಂದ ಅವರು ಪಾಠ ಕಲಿಯುವುದೇ ಆದರೆ ಶೇ.೯೦ರಷ್ಟು ಭಾರತದ ಜನತೆ ಇದರ ಬಗ್ಗೆ ಮೌನವಾಗಿದ್ದಾಗ ಅಥವಾ ದೇಶಾದ್ಯಂತ ಆಳುವವರ್ಗಗಳನ್ನು ಬಿಕ್ಕಟಿಗೆ ಸಿಲುಕಿಸುವಂಥ ಬೃಹತ್ ರಾಜಕೀಯ ಹೋರಾಟಗಳ ಸಂದರ್ಭವಿಲ್ಲದಿದ್ದಾಗ ಭಾರತದ ಪ್ರಭುತ್ವವನ್ನು ಯಾವುದೋ ಒಂದು ಮೂಲೆಯಲ್ಲಿ ಕೇವಲ ಸೇನಾತ್ಮಕವಾಗಿ ಮುಖಾಮುಖಿಯಾಗುವ ಸ್ಟ್ರಾಟೆಜಿಯನ್ನು ಅನುಸರಿಸುತ್ತಿರಲಿಲ್ಲ. ಇಂಥ ರಾಜಕೀಯವನ್ನು ಸಾಕ್ಷಾತ್ ಮಾವೋ ಅವರೇ ದುಸ್ಸಾಹಸ ಮತ್ತು ಕ್ರಾಂತಿಗೆ ಹಾನಿಕರ ಎಂದು ಬಣ್ಣಿಸಿದ್ದರು.

ಮಾವೋವಾದಿಗಳು ಪದೇಪದೇ ಇದೇ ಬಗೆಯ ದುಸ್ಸಾಹಸವನ್ನು ಮಾಡುತ್ತಾ ಈ ದೇಶದ ಕ್ರಾಂತಿಯನ್ನು ಮುಂದೂಡುತ್ತಲೇ ಬಂದಿದ್ದಾರೆ. ಏಪ್ರಿಲ್ ೬ರಂದು ಅವರ ಗೆರಿಲ್ಲಾ ಪಡೆಗಳು ನಡೆಸಿದ ದಾಳಿ ಇಂಥಾ ಒಂದು ದುಸ್ಸಾಹಸವಾದೀ ವ್ಯೂಹತಂತ್ರದ ಒಂದು ಭಾಗವೇ ಎಂದು ಕಾಣುತತಿದೆ. ಸಮಾಜವನ್ನು ಮತ್ತು ಜನರನ್ನು ಗೆಲ್ಲುವುದಕ್ಕಿಂತ ಪ್ರಭುತ್ವವನ್ನು ಸೋಲಿಸುವುದೇ ಪ್ರಧಾನವಾಗಿರುವುದು, ಮಿಲಿಟರಿ ವ್ಯೂಹತಂತ್ರ ತಾತ್ವಿಕತೆಯ ಸ್ಥಾನ ಪಡೆದುಕೊಳ್ಳುತ್ತಿರುವುದೂ, ಆತ್ಮ ಬಲಿದಾನದ ಹೆಗ್ಗಳಿಕೆ ಸೃಷ್ಟಿಸಿರುವ ಕುರುಡು ಮತ್ತು ಕಿವುಡುಗಳು ಸಹ ಚತ್ತೀಸ್‌ಘಡ್‌ನ ಇಂದಿನ ಹಿಂಸಾತ್ಮಕ ಸಂದರ್ಭವನ್ನು ಪ್ರಭಾವಿಸುತ್ತಿರುವ ಸಂಗತಿಯಾಗಿದೆ.

ಈ ಸಂಗತಿಗಳೆ ಸ್ವತಂತ್ರ ಭಾರತ ಹಿಂದೆಂದೂ ಕಾಣದಂಥ ಅಂತರಿಕ ಯುದ್ಧದ ಸಂದರ್ಭವನ್ನು ಸೃಷ್ಟಿಸಿದೆ. ಯುದ್ಧವೆಂದರೆ ಹಿಂಸಾಚಾರವೇ. ಕೆಲವೊಮ್ಮೆ ಯೋಧರ ಸಾವು. ಕೆಲವೊಮ್ಮೆ ಮಾವೋವಾದಿಗಳ-ಆದಿವಾಸಿಗಳ ಸಾವು. ಆದರೂ ಇದು ಅನ್ಯಾಯದ ಯುದ್ಧ. ಏಕೆಂದರೆ ಈ ಯುದ್ದದ ಉದ್ದೇಶ ಆದಿವಾಸಿಗಳನ್ನು ಎತ್ತಂಗಡಿ ಮಾಡಿ ಈ ದೇಶವನ್ನು ವಿದೇಶಿ ಕಂಪನಿಗಳ ವಸಾಹತುವನ್ನಾಗಿ ಮಾಡುವುದಾಗಿದೆ. ಹೀಗಾಗಿ ಹಿಂಸೆಗೆ ಪ್ರಮುಖ ಕಾರಣವೇ ಈ ಅನ್ಯಾಯಯುತ ಯುದ್ಧವಾದ್ದರಿಂದ ಮೊದಲು ‘ಆಪರೇಷನ್ ಗ್ರೀನ್‌ಹಂಟ್’ ಎಂಬ ಈ ಯುದ್ಧವನ್ನು ಬೇಷರತ್ತಾಗಿ ವಿರೋಧಿಸುವ ಮೂಲಕವೇ ಯೋಧರ ಮತ್ತು ಆದಿವಾಸಿಗಳ ಪ್ರಾಣವನ್ನು ರಕ್ಷಿಸಬೇಕಿದೆ. ಹಾಗೆಯೇ ಇದೊಂದು ಅಸಮಾನ ಯುದ್ಧ. ಮಾವೋವಾದಿಗಳ ಅವಿವೇಕದ ಪಾಲೂ ಇದರಲ್ಲಿದೆ. ಅದನ್ನೂ ಮನವರಿಕೆ ಮಾಡಿಸಬೇಕಿದೆ.

ಹೀಗೆ ಮಾಡಿದಲ್ಲಿ ಮಾತ್ರ ನಾಗರಿಕ ಸಮಾಜಕ್ಕೆ ಯಾವುದೇ ಹಿಂಸಾಚಾರವನ್ನು ಖಂಡಿಸುವ ನೈತಿಕ ಅರ್ಹತೆ ಬರುತ್ತದೆ. ಇಲ್ಲದಿದ್ದರೆ ಅದು ಕೇವಲ ಪ್ರಭುತ್ವದ “His Masters Voice” ಆಗಿಬಿಡುವ ಅಪಾಯವಿದೆ.
-ಶಿವಸುಂದರ್

No comments:

Post a Comment