Friday, April 9, 2010

ಭಾರತೀಯರ ಬಿಟ್ಟೆನಂದರೂ ಬಿಡದೀ ಮಾಯೆ!

ಹೊಸದಿಲ್ಲಿ, ಎ.೯: ಭಾರತೀಯರು ಹೊಗೆ ಬತ್ತಿ ಸೇವನೆಯ ಅಭ್ಯಾಸವನ್ನು ಇತರರಿಗಿಂತ ತಡವಾಗಿ ಆರಂಭಿಸಿದ್ದಾರೆ. ಆದರೆ, ಅದರ ಅಭ್ಯಾಸದಿಂದ ಹೊರ ಬರುವವರು ಬಹಳ ಕಡಿಮೆ. ಭಾರತದಲ್ಲಿ ಕೇವಲ ಶೆ.೨ ಮಂದಿ ಮಾತ್ರ ‘ಮಾಜಿ ಧೂಮಪಾನಿ’ಗಳೆನಿಸಿದ್ದರೆ ಅಮೆರಿಕ ಹಾಗೂ ಯುರೋಪ್‌ನಲ್ಲಿ ಇವರ ಪ್ರಮಾಣ ಶೇ. ೪೦ರಷ್ಟಿದೆ.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಧೂಮಪಾನದಿಂದ ವಿಮುಕ್ತಿ ಹೊಂದಿದವರ ಸಂಖ್ಯೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಕೇರಳದಲ್ಲಿ ಅತಿ ಹೆಚ್ಚು ಅಂದರೆ ಶೇ. ೭ ಹೊಗೆ ಪ್ರಿಯರು ಈಗ ಮಾಜಿಗಳಾಗಿದ್ದರೆ, ರಾಜಧಾನಿ ದಿಲ್ಲಿ ಈ ವಿಭಾಗದಲ್ಲಿ ಕೊನೆಯಲ್ಲಿದೆ. ಅಲ್ಲಿ ಶೇ. ೧ಕ್ಕಿಂತಲೂ ಕಡಿಮೆ ಮಂದಿ ಬೀಡಿ-ಸಿಗರೇಟ್‌ಗೆ ವಿದಾಯ ಹೇಳಿದ್ದಾರೆ.

ಜಾಗತಿಕ ಆರೋಗ್ಯ ಸಂಶೋಧನೆ ಕೇಂದ್ರ ಹಾಗೂ ರಾಷ್ಟ್ರೀಯ ಸಾರ್ವಜನಿಕ ನಿಧಿ ಸಂಸ್ಥೆಗಳು ಈ ಅಧ್ಯಯನವನ್ನು ನಡೆಸಿವೆ.

ಧೂಮಪಾನ ಶೇ. ೧೦ರಷ್ಟು ಹೆಚ್ಚಾದರೆ ಆಯುಷ್ಯದ ಪ್ರಮಾಣ ಒಂದು ವರ್ಷ ಕಡಿಮೆಯಾಗುತ್ತದೆ. ನಗರ ಪ್ರದೇಶದಲ್ಲಿ ೨೦-೨೪ರ ವಯೋಮಾನದ ಯುವ ಧೂಮಪಾನಿಗಳ ಪ್ರಮಾಣ ೧೯೯೯ರಲ್ಲಿ ಶೇ. ೧೩ ಇದ್ದುದು ೨೦೦೬ಕ್ಕಾಗುವಾಗ ಶೇ. ೨೫ಕ್ಕೆ ಏರಿದೆ. ಇವರಲ್ಲಿ ಸಿಗರೇಟ್ ಸೇದುವವರು ಅಧಿಕ ಎಂದು ಅಧ್ಯಯನ ತಿಳಿಸಿದೆ.

ಇದರ ಒಟ್ಟಾರೆ ತಾತ್ಪರ್ಯವೆಂದರೆ ಹೊಗೆ ಸೇವನೆ ಬಿಡದಿದ್ದಲ್ಲಿ ಪುರುಷರ ಆಯುಷ್ಯದ ಪ್ರಮಾಣ ಒಂದು ವರ್ಷಕ್ಕೂ ಹೆಚ್ಚು ಕಡಿತವಾಗಲಿದೆಯೆಂದು ವರದಿಯ ಲೇಖಕರೊಬ್ಬರಾದ ಪ್ರಭಾತ್ ಝಾ ಹೇಳಿದ್ದಾರೆ.

ಸರಾಸರಿ ೩೦ರ ವಯೋಮಾನದ ಪುರುಷರು ಹಾಗೂ ಮಹಿಳೆಯರಲ್ಲಿ ಪುರುಷ ‘ಬೀಡಿ ಸೇವಕರು’ ತಮ್ಮ ಆಯುಷ್ಯದ ಆರು ವರ್ಷಗಳನ್ನು ಕಳೆದುಕೊಂಡಿದ್ದರೆ, ಮಹಿಳಾ ‘ಬೀಡಿ ಸೇವಕಿಯರು’ ಆಯುರ್ಮಾನದ ೮ ವರ್ಷಗಳನ್ನು ಕಳೆದುಕೊಂಡಿದ್ದಾರೆ. ಪುರುಷ ‘ಸಿಗರೇಟು ಸೇವಕರು’ ೧೦ ವರ್ಷ ಮೊದಲೇ ಇಹಲೋಕ ತ್ಯಜಿಸಲಿದ್ದಾರೆ.

ಈ ವರದಿಯ ಪ್ರಕಾರ ಹೊಗೆ ಬತ್ತಿಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದು ಜನರು ‘ಧೂಮದಾಸ’ ರಾಗುವುದನ್ನು ತಡೆಯುವ ಪರಿಣಾಮಕಾರಿ ಉಪಾಯವಾಗಿದೆ. ಉದಾಹರಣೆಗೆ ಹೊಗೆಬತ್ತಿಯ ಬೆಲೆ ಶೇ. ೧೦ರಷ್ಟು ತುಟ್ಟಿಯಾದರೆ, ಅಭ್ಯಾಸಕ್ಕೆ ವಿದಾಯ ಹೇಳುವವರ ಪ್ರಮಾಣ ಶೇ. ೨-೪ರಷ್ಟು ಹೆಚ್ಚಾಗುತ್ತದೆ.

ಈ ವರ್ಷದ ಬಜೆಟ್‌ನಲ್ಲಿ ವಿತ್ತ ಸಚಿವ ಪ್ರಣವ್ ಮುಖರ್ಜಿಯವರು ತಂಬಾಕು ಉತ್ಪನ್ನಗಳ ಮೇಲೆ ಶೇ. ೧೭ರಷ್ಟು ಅಬಕಾರಿ ಸುಂಕ ವಿಧಿಸಿರುವುದರಿಂದ ಹೊಗೆ ಬತ್ತಿಗಳ ಬೆಲೆ ಶೇ. ೬ರಷ್ಟು ಹೆಚ್ಚಿದೆ. ಇದರಿಂದಾಗಿ ಸುಮಾರು ೨ ಲಕ್ಷದಷ್ಟು ಹಾಲಿ ಧೂಮಪಾನಿಗಳು ಈ ಅಭ್ಯಾಸದಿಂದ ಮುಕ್ತಿ ಹೊಂದಲು ಯೋಚಿಸಬಹುದು ಎಂದು ಝಾ ಅಭಿಪ್ರಾಯಿಸಿದ್ದಾರೆ.

ಈ ೨ ಲಕ್ಷ ಮಂದಿ ಜೀವ ಉಳಿಸಿಕೊಂಡವರಲ್ಲಿ ಅರ್ಧದಷ್ಟು ಜನ ಮಧ್ಯ ವಯಸ್ಕರಾಗಿರುತ್ತಾರೆ.

ಸಿಗರೇಟು ಹಾಗೂ ಮುಖ್ಯವಾಗಿ ಬೀಡಿಗಳ ಮೇಲೆ ಇನ್ನಷ್ಟು ಕರಭಾರ ವಿಧಿಸುವುದರಿಂದ ಮುಂದಿನ ಕೆಲವು ದಶಕಗಳಲ್ಲಿ ಸುಮಾರು ೨ ಕೋಟಿ ಜನರ ಪ್ರಾಣ ಉಳಿಯಬಹುದು ಅಥವಾ ಆಯುಷ್ಯ ಹೆಚ್ಚಾಗಬಹುದೆಂದು ವರದಿ ಅಂದಾಜಿಸಿದೆ.

No comments:

Post a Comment