Tuesday, July 28, 2009

ನಾಡಿಗೆ ಮಾದರಿಯಾದ ಪುತ್ತೂರು!

ವಾರ್ತಾಭಾರತಿ ಪತ್ರಿಕೆಯ ಸಂಪಾದಕೀಯದಿಂದ...

ಕರಾವಳಿಯ ಅತ್ಯಂತ ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಪುತ್ತೂರಿನಿಂದ ಕನ್ನಡ ನಾಡಿಗೆ ನೆಮ್ಮದಿ, ಶಾಂತಿಯ ಸಂದೇಶವೊಂದು ಹೊರಟಿದೆ. ಪ್ರತಿಕಾರ, ಆಕ್ರೋಶಕ್ಕಿಂತ ದೊಡ್ಡದು ಸಹನೆ ಮತ್ತು ಕ್ಷಮೆ ಎನ್ನುವುದನ್ನು ಅಲ್ಲಿನವರು ನಾಡಿಗೆ ತೋರಿಸಿಕೊಟ್ಟಿದ್ದಾರೆ. ಮಂಗಳವಾರ ಮುಂಜಾನೆ ಪುತ್ತೂರಿನ ಎರಡು ಮಸೀದಿಗಳಿಗೆ ದುಷ್ಕರ್ಮಿಗಳು ಕೊಳೆತ ಮಾಂಸವನ್ನು ಎಸೆದು ಹೋಗಿದ್ದರು. ಇನ್ನೇನು ಪ್ರತಿಭಟನೆ, ಆಕ್ರೋಶ, ರಸ್ತೆ ತಡೆಯ ಮೂಲಕ ಗಲಭೆ ಸ್ಫೋಟಿಸಬೇಕು. ಆದರೆ ಅಂತಹದೇನೂ ಸಂಭವಿಸಲಿಲ್ಲ. ಪ್ರಾರ್ಥನಾ ಮಂದಿರದೊಳಗೆ ಮಾಂಸವನ್ನು ಎಸೆದ ಕೊಳೆತ ಮನಸ್ಸಿನ ಕುರಿತಂತೆ ಅನುಕಂಪವನ್ನು ವ್ಯಕ್ತಪಡಿಸಿದ ಪುತ್ತೂರಿನ ಜನತೆ ಮಸೀದಿಯನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿತು. ಬಳಿಕ, ದುಷ್ಕೃತ್ಯವನ್ನು ಎಸೆದ ದುಷ್ಕರ್ಮಿಗಳ ಮನಸ್ಸು ಶುಚಿಯಾಗಲಿ ಎಂದು ಧಾರ್ಮಿಕ ಗುರುಗಳು ಪ್ರಾರ್ಥನೆಯನ್ನು ಸಲ್ಲಿಸಿದರು. ದುಷ್ಕರ್ಮಿಗಳಿಗೆ ಇದಕ್ಕಿಂತ ಹೀನಾಯ ಮುಖಭಂಗ, ಅವಮಾನ ಇನ್ನೇನಿದೆ? ಮಂಗಳವಾರ ಮುಂಜಾನೆ ಗಲಭೆ, ದೊಂಬಿ ನಡೆಯುತ್ತದೆ ಎಂದು ಕಾಯುತ್ತಿದ್ದವರಿಗೆ, ಅಂಗಡಿ, ಮನೆಗಳನ್ನು ದೋಚಲು ಭರ್ಜರಿ ಸಿದ್ಧತೆಯಲ್ಲಿದ್ದವರಿಗೆ ದೊಡ್ಡ ನಿರಾಸೆ. ಮೂರು ದಿನಗಳ ಹಿಂದೆ ಮಂಗಳೂರಿನ ಮಸೀದಿಗೂ ದುಷ್ಕರ್ಮಿಗಳು ಹಂದಿಯನ್ನು ಎಸೆದಿದ್ದರು. ಅಲ್ಲಿಯ ಧರ್ಮಗುರುಗಳು ಮತ್ತು ಮುಖಂಡರೂ ಕೂಡ ಅನುಸರಿಸಿದ್ದುದು ಇದೇ ತಂತ್ರವನ್ನು. ಪರಿಣಾಮವಾಗಿ ದುಷ್ಕರ್ಮಿಗಳು ನಿರೀಕ್ಷಿಸಿದ ಯಾವ ಗಲಭೆಯೂ ಸಂಭವಿಸಲಿಲ್ಲ. ಮಂಗಳೂರನ್ನು ದೋಚಲು ಕಾದು ಕುಳಿತಿದ್ದ ಕ್ರಿಮಿನಲ್ ‘ಸಂಸ್ಕೃತಿ ರಕ್ಷಕ’ರಿಗೆ ಅಂದೂ ದೊಡ್ಡ ನಿರಾಸೆ. ಮಂಗಳೂರಿನಲ್ಲಿ ಘಟನೆ ನಡೆದ ಮುಂಜಾನೆ ಪಾಂಡೇಶ್ವರದ ಸಮೀಪ ಶಿವನ ವಿಗ್ರಹಕ್ಕೆ ಯಾರೋ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ್ದರು. ಈ ಸಂದರ್ಭದಲ್ಲಿ ಮಂಗಳೂರಿನ ಜನರೂ ಅಷ್ಟೇ ಸಹನೆಯನ್ನು ಕಾಯ್ದುಕೊಂಡಿದ್ದರು. ಬಳಿಕ, ವಿಗ್ರಹಕ್ಕೆ ಕಲ್ಲೆಸೆದಿರುವ ಕೆಲಸ, ಮಾನಸಿಕ ಅಸ್ವಸ್ಥನೊಬ್ಬನದು ಎನ್ನುವುದು ಬೆಳಕಿಗೆ ಬಂತು.(ಇನ್ನೊಂದು ಧರ್ಮವನ್ನು ಅವಮಾನಿಸುವ, ಮಸೀದಿ, ಮಂದಿರಗಳನ್ನು ಅಪವಿತ್ರಗೊಳಿಸುವವರು ಮಾನಸಿಕ ಅಸ್ವಸ್ಥರೇ ಆಗಿರುತ್ತಾರೆ. ಜೊತೆಗೆ ಕ್ರಿಮಿನಲ್‌ಗಳೂ ಆಗಿರುತ್ತಾರೆ.) ಘಟನೆಯನ್ನು ಮುಂದಿಟ್ಟು ಒಂದು ಗುಂಪು ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸಿತ್ತಾದರೂ, ಶಿವನ ನಿಜವಾದ ಭಕ್ತರು ಅದಕ್ಕೆ ಆಸ್ಪದ ಕೊಡಲಿಲ್ಲ. ಪೊಲೀಸರೂ ಈ ಸಂದರ್ಭದಲ್ಲಿ ಜನರ ಮನವೊಲಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದರು.

ಮಸೀದಿಗೆ ಹಂದಿ ಮಾಂಸ ಎಸೆಯುವ ಅಥವಾ ಮಂದಿರದಲ್ಲಿ ದನದ ಮಾಂಸ ಎಸೆಯುವವನ ಗುರಿ ಮಸೀದಿ, ಮಂದಿರವನ್ನು ಅಪವಿತ್ರಗೊಳಿಸುವುದಾಗಿರುವುದಿಲ್ಲ. ಮಸೀದಿ, ಮಂದಿರದ ಮೂಲಕ ಸಮಾಜದ ಶಾಂತಿಯನ್ನು ಕೆಡಿಸುವುದು ಆತನ ಉದ್ದೇಶವಾಗಿರುತ್ತದೆ. ಆತನಿಗೆ ಕಲುಷಿತಗೊಳ್ಳಬೇಕಾದುದು ಸಮಾಜದ ಶಾಂತಿ. ಮಂದಿರ, ಮಸೀದಿಗಳಿರುವುದು ಆರೋಗ್ಯಕರ ಸಮಾಜಗಳನ್ನು ನಿರ್ಮಾಣ ಮಾಡುವುದಕ್ಕಾಗಿ. ಜನಸಾಮಾನ್ಯರ ನೆಮ್ಮದಿ ಮಸೀದಿ, ಮಂದಿರಗಳ ಗುರಿ. ಹೀಗಿರುವಾಗ, ದುಷ್ಕರ್ಮಿಗಳು ಮಂದಿರ, ಮಸೀದಿಗಳಿಗೆ ಕೆಡುಕನ್ನು ಎಸಗಿದಾಗ, ಅದಕ್ಕೆ ಅಷ್ಟೇ ತೀವ್ರ ಪ್ರತಿಕ್ರಿಯೆಯನ್ನು ವ್ಯಕ್ತಿ ಪಡಿಸಿ, ಧಾರ್ಮಿಕ ಮನುಷ್ಯರೂ ದುಷ್ಕರ್ಮಿಗಳ ಮಟ್ಟಕ್ಕಿಳಿಯುವುದು ಮಂದಿರ, ಮಸೀದಿಗಳಿಗೆ ಎಸಗುವ ಅಗೌರವವಾಗುತ್ತದೆ. ಮಾನಸಿಕವಾಗಿ ಅನಾರೋಗ್ಯಕ್ಕೀಡಾದ ವ್ಯಕ್ತಿಗಳು ಮಸೀದಿ, ಮಂದಿರಗಳಿಗೆ ಹಂದಿ, ದನದ ಮಾಂಸವನ್ನು ಎಸೆದಾಕ್ಷಣ ಅವು ಅಪವಿತ್ರಗೊಳ್ಳುತ್ತವೆ ಎನ್ನುವ ನಂಬಿಕೆಯೇ ಬಾಲಿಶವಾದುದು. ಅಪವಿತ್ರ ಮನಸ್ಸುಗಳನ್ನು, ಅಪವಿತ್ರ ಕೃತ್ಯಗಳನ್ನು ತನ್ನ ಬಾಹುಗಳೆಡೆಗೆ ತೆಗೆದುಕೊಂಡು ಅಂತಹ ವ್ಯಕ್ತಿಗಳನ್ನು ಶುಚೀಕರಿಸುವ ಕೆಲಸ ಮಸೀದಿ, ಮಂದಿರಗಳದು. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡ ಪರಿಣಾಮವಾಗಿ ಪುತ್ತೂರಿನ ಸಾರ್ವಜನಿಕರು ದುಷ್ಕರ್ಮಿಗಳನ್ನು, ಕ್ಷಮಿಸಿ, ಅವರು ಮಾನಸಿಕವಾಗಿ ಆರೋಗ್ಯವಂತರಾಗಲಿ ಎಂದು ಪ್ರಾರ್ಥಿಸಿದರು. ಅಷ್ಟೇ ಅಲ್ಲ, ಕನ್ನಡ ನಾಡಿಗೆ ಪುತ್ತೂರು ಮಾದರಿಯಾಯಿತು. ಚಿಂತಕರು, ಪ್ರಗತಿಪರರ ನೆಲೆಡಾದ ಮೈಸೂರಿಗೆ ಸಾಧ್ಯವಾಗದೇ ಇದ್ದುದು ಪುತ್ತೂರಿಗೆ ಸಾಧ್ಯವಾಯಿತು.

ಒಬ್ಬ ಮುಸಲ್ಮಾನ ಹಿಂದೂ ದೇವಾಲಯಕ್ಕೆ ಮಾಲಿನ್ಯವನ್ನು ಎಸೆಯಲು ಮುಂದಾದರೆ ಆತ ಆ ಮೂಲಕ ಮಲಿನಗೊಳಿಸುವುದು ತನ್ನದೇ ಧರ್ಮದ ಆದರ್ಶ, ಸಿದ್ಧಾಂತಗಳನ್ನು. ಹಾಗೆಯೇ ಒಬ್ಬ ಹಿಂದೂ ಎಂದು ಕರೆಸಿಕೊಂಡಾತ ಮುಸ್ಲಿಮರ ಅಥವಾ ಕ್ರಿಶ್ಚಿಯನ್ನರ ಮಸೀದಿ, ಚರ್ಚುಗಳನ್ನು ಮಲಿನಗೊಳಿಸಲು ಮುಂದಾದರೆ ಆತ ಆ ಮೂಲಕ ಅಪವಿತ್ರಗೊಳಿಸುವುದು ತನ್ನದೇ ಧರ್ಮದ ಆದರ್ಶಗಳನ್ನು. ಇದನ್ನು ಅರಿತ ಯಾವ ಧರ್ಮೀಯರೂ ಇನ್ನೊಂದು ಧರ್ಮದ ಮಸೀದಿ, ಮಂದಿರಗಳನ್ನು ಅಪವಿತ್ರಗೊಳಿಸಲು ಮುಂದಾಗಿ ತಾವೇ ಸಣ್ಣವರಾಗಲು ಸಿದ್ಧರಾಗಲಾರರು. ಮೈಸೂರಿನಲ್ಲಿ ಇಂತಹ ಕೃತ್ಯಕ್ಕೆ ಇಳಿದು ಮುತಾಲಿಕರಂತಹ ನಾಯಕರು ತನ್ನ ಮಟ್ಟ ಯಾವುದು, ತಾನು ಯಾವ ಧರ್ಮವನ್ನು ಪ್ರತಿನಿಧಿಸುತ್ತೆದ್ದೇನೆ ಎನ್ನುವುದನ್ನು ಸಾಬೀತು ಪಡಿಸಿದರು. ಮಸೀದಿಗೆ ಹಂದಿಯ ತಲೆಯನ್ನು ಎಸೆದು ಆ ಮೂಲಕ ಸಮಾಜಕ್ಕೆ ಬೆಂಕಿ ಹಚ್ಚಲು ಹೊರಡುವ ಮುತಾಲಿಕ್ ಯಾವ ಕಾರಣಕ್ಕೂ ಹಿಂದೂ ಧರ್ಮವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ. ಆತನದು ಭಯೋತ್ಪಾದಕ ಧರ್ಮ. ಸಮಾಜ ವಿರೋಧಿ ಧರ್ಮ. ಆತ ಇರಬೇಕಾದುದು ಸಮಾಜದೊಳಗಲ್ಲ. ಜೈಲಿನೊಳಗೆ. ಹಾಗೆಯೇ ಮುಸ್ಲಿಮರು ಆತನ ಮೇಲೆ ಸೇಡು ತೀರಿಸಬೇಕಾಗಿಲ್ಲ. ಆತನ ಮಾನಸಿಕ ಆರೋಗ್ಯಕ್ಕಾಗಿ, ಮಲಿನಗೊಂಡ ಆತನ ಹೃದಯ ಶುಚಿಯಾಗುವುದಕ್ಕಾಗಿ ಪ್ರಾರ್ಥಿಸಿದರೆ ಸಾಕು.

ಇದೇ ಸಂದರ್ಭದಲ್ಲಿ ಜನರ ಶಾಂತಿ, ಸಂಯಮವನ್ನು ಕಂಡು ಪೊಲೀಸರು ತಮ್ಮ ಕರ್ತವ್ಯದಿಂದ ವಿಮುಖರಾಗಬಾರದು. ಹಂದಿ ಮಾಂಸ ಎಸೆದು ತಮ್ಮ ಕಾರ್ಯವನ್ನು ಸಾಧಿಸಲು ಸಾಧ್ಯವಾಗದ ಆಕ್ರೋಶದಲ್ಲಿ ದುಷ್ಕರ್ಮಿಗಳು, ಇನ್ನೊಂದು ಧರ್ಮವನ್ನು ಪ್ರಚೋದಿಸಲು ಇನ್ನಷ್ಟು ಅಪಾಯಕಾರಿ ಕೃತ್ಯಗಳಿಗೆ ಕೈಹಾಕುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಮಸೀದಿಗಳಿಗೆ ಮಾಂಸ ಎಸೆದು ಸಮಾಜದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಲು ಮುಂದಾದ ದುಷ್ಕರ್ಮಿಗಳನ್ನು ತಕ್ಷಣ ಪತ್ತೆ ಹಚ್ಚಬೇಕಾಗಿದೆ. ಕೇವಲ ಮಾಂಸ ಎಸೆದವನನ್ನಷ್ಟೇ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳದೆ, ಆತನಿಗೆ ಆ ಕೃತ್ಯಕ್ಕೆ ಪ್ರೇರಣೆ ನೀಡಿದವರನ್ನೂ ಕಂಡು ಹಿಡಿಯಬೇಕಾಗಿದೆ. ದುಷ್ಕರ್ಮಿಗಳ ಬೇರನ್ನು ಬುಡ ಸಮೇತ ಕಿತ್ತು ಹಾಕಬೇಕಾಗಿದೆ.

Friday, July 24, 2009

ಪಂಜರ ಮೀರುವ ಹೆಣ್ಣುಮಗಳ ಕಥೆ

-ಜ್ಯೋತಿ ಗುರುಪ್ರಸಾದ್‌

ಅವಳ ಹೆಸರು ಪೂರೋ.. ಪಂಜಾಬಿನ ತುಂಬಿದ ಕುಟುಂಬದ ಹೆಣ್ಣು ಮಗಳು. ಅವಳ ಕುಟುಂಬ ಭಾರತ-ಪಾಕಿಸ್ತಾನ ಎಂಬ ಗೆರೆಗಳ ಗಡಿಯ ವಿಭಜನೆ ಆಗುವ ಮೊದಲು ಭಾರತದ ನೆಲಕ್ಕೆ ಸೇರಿದ ಪಾಕಿಸ್ತಾನದಲ್ಲಿಯೇ ಇರುತ್ತದೆ. ಹಿಂದೂಸ್ಥಾನ-ಪಾಕಿಸ್ಥಾನ ಎಂಬ ವಿಭಾಗವಿಲ್ಲದೆ ಹಿಂದೂ-ಮುಸ್ಲಿಂ ಜನಾಂಗ ಭಾರತದಲ್ಲಿ ಜೀವಿಸುತ್ತಿದ್ದ ಸುಮಾರು ೧೯೪೬ರ ಸಂದರ್ಭ. ಪೂರೋ ಎಂಬ ಉತ್ಸಾಹದ ಬುಗ್ಗೆಯ ತರುಣಿಗೆ ಒಡ ಹುಟ್ಟಿದ ಪ್ರೀತಿಯ ಅಣ್ಣ, ಇಬ್ಬರು ತಂಗಿಯರು, ಪುಟ್ಟ ತಮ್ಮ ಜೊತೆಗೆ ಅಕ್ಕರೆಯ ಅಪ್ಪ ಅಮ್ಮ ಇರುತ್ತಾರೆ. ತಂದೆಗೆ ಸ್ವಲ್ಪ ಜಮೀನಿರುತ್ತದೆ. ಅಣ್ಣ ಹಳ್ಳಿ ಯಿಂದ ದೂರದೂರಿಗೆ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಬರಲು ಹೋಗುತ್ತಾನೆ. ಈ ನಡುವೆ ಮನೆಯಲ್ಲಿ ಪೂರೋಳನ್ನು ಕಂಡರೆ ಎಷ್ಟು ಆದರವಿರುತ್ತದೆಂದರೆ ಅಣ್ಣ ಕೇಳಿದರೆ ತಮ್ಮ ಜೇಬಿನಿಂದ ಹೆಚ್ಚು ಹಣ ತೆಗೆದು ಕೊಡದ ತಂದೆ ಪೂರೋಳಿಗೆ ಮಾತ್ರ ಯಾವ ಶಿಫಾರಸೂ ಇಲ್ಲದೆ ಕೊಟ್ಟು ಬಿಡುತ್ತಾರೆ! ಅದನ್ನು ಅವಳು ತನ್ನ ಮುದ್ದಿನ ಅಣ್ಣನಿಗಾಗಿ ಕೊಡುತ್ತಾಳೆ! ಹೀಗಿರುತ್ತದೆ ಮನೆಯಲ್ಲಿ ಅಣ್ಣ-ತಂಗಿಯರ ಬಾಂಧವ್ಯ ಹಾಗೂ ಮನೆಗೂ ಪೂರೋಗೂ ಇರುವ ನಂಟು. ಸದಾ ನಗು, ತಮಾಷೆ, ಹಬ್ಬದ ಸಂಭ್ರಮ. ಅವಳೇ ಮನೆಯ ದೊಡ್ಡ ಮಗಳು. ಒಬ್ಬ ಒಳ್ಳೆಯ ಮನೆತನದ ಜಮೀನುದಾರ ಕುಟುಂಬದ ಹುಡುಗನೊಡನೆ ಪೂರೋ ಮದುವೆ ನಿಶ್ಚಯವಾಗುತ್ತದೆ. ಹೆಣ್ಣು ಮಗಳಿಗೆ ಮದುವೆ ನಿಶ್ಚಯವಾಗುವುದೆಂದರೆ ಅದೂ ಆ ಕಾಲದಲ್ಲಿ ತುಂಬಾ ದೊಡ್ಡ ವಿಷಯವಲ್ಲವೇ?! ಆ ಹುಡುಗ ಎಷ್ಟು ಸೂಕ್ಷ್ಮ-ಒಳ್ಳೆಯವನೆಂದರೆ ವಾಲ್ಮೀಕಿ, ಕಾಳಿದಾಸ, ಮಿರ್ಜಾಗಾಲಿಬ್ ಎಲ್ಲರನ್ನೂ ಓದಿಕೊಂಡು ಅವರು ಮೂವರೂ ಅವರ ಒಳಿತಿನ ಚಿಂತನೆಯ ಕಾರಣದಿಂದ ಬೇರೆ ಬೇರೆ ಅಲ್ಲವೇ ಅಲ್ಲ- ಒಂದೇ ಎನ್ನುತ್ತಿರು ತ್ತಾನೆ. ಜಮೀನುದಾರನಾದರೂ ಮನುಷ್ಯ ಪರ ದನಿಯವನು. ಅವನ ಹೆಸರು ರಾಮಚಂದ್. ಅವನಿಗೊಬ್ಬಳು ಮುದ್ದು ತಂಗಿ. ಹೆಸರು ಲಾಜೋ. ಲಾಜೋಳನ್ನು ಪೂರೋಳ ಅಣ್ಣನಿಗೆ ಮದುವೆ ಮಾಡಿದರೆ ‘ಕೊಟ್ಟು-ತಂದು’ ಮಾಡುವ ಮದುವೆಯಿಂದ ಕುಟುಂಬ ಸುಖೀ ಯಾಗಿರುತ್ತದೆ ಎಂಬ ಭಾವನೆಯಿಂದ ಹಾಗೆಯೇ ನಿಶ್ಚಯವಾಗುತ್ತದೆ. ಪೂರೋ ಮತ್ತು ರಾಮಚಂದ್ ಒಬ್ಬರಿಗೊಬ್ಬರಿಗೆ ಇಷ್ಟವಾಗಿ ಮದುವೆಯ ಕನಸು ಕಾಣತೊಡಗು ತ್ತಾರೆ. ಈ ಕನಸು-ಈ ಸಂಭ್ರಮದ ನಡುವೆ ಒಬ್ಬ ವ್ಯಕ್ತಿಯ ಪ್ರವೇಶವಾಗುತ್ತದೆ. ಆತನ ಹೆಸರು ರಶೀದ್. ಪೂರೋಳನ್ನು ಆಗಾಗ ದಾರಿಯಲ್ಲಿ ಗಮನಿಸುತ್ತಿದ್ದ ರಶೀದ್‌ಗೆ ಅವಳ ಮುಗ್ಧ ಚೆಲುವು ಇಷ್ಟವಾಗಿ ಬಿಡುತ್ತದೆ. ಜೊತೆಗೆ ಪೂರೋ ಕುಟುಂಬ ಮೂಲದವರಿಂದ ಅವನ ಕುಟುಂಬಕ್ಕೆ ಅನ್ಯಾಯವಾಗಿರುತ್ತದೆ ಎಂಬ ಅಂಶ ಗೊತ್ತಿರುವ ರಶೀದ್ ಸೇಡು ತೀರಿಸಿ ಕೊಳ್ಳಲು ಇದೇ ಸಮಯವೆಂಬಂತೆ ಪುರೋ ಳನ್ನು ಒಂದು ದಿನ ತನ್ನ ಕುದುರೆಯ ಮೇಲೆ ಬಲವಂತವಾಗಿ ಎತ್ತಿ ಕೂರಿಸಿಕೊಂಡು ದೂರದ ತನ್ನೂರಿಗೆ ಹೊತ್ತೊಯ್ದು ಬಿಡುತ್ತಾನೆ. ಮನೆಯಲ್ಲಿ ಬಂಧಿಯಾಗಿಸಿಬಿಡುತ್ತಾನೆ. ಯಾಕೆ? ಏನು? ಎಂದು ಗೊತ್ತಿಲ್ಲದೆ ತಬ್ಬಿಬ್ಬಾಗುವ ಪೂರೋ ಎಂಬ ಮುಗ್ಧ ಹೆಣ್ಣು ಅನ್ನ-ನೀರು ಬಿಟ್ಟು ಕೊರಗ ಲಾರಂಭಿಸುತ್ತಾಳೆ. ರಶೀದ್ ಅವಳ ಮೇಲೆ ಬೇರೆ ಯಾವ ಬಲಾತ್ಕಾರ ಮಾಡದಿದ್ದರೂ ತನ್ನ ತುಂಬು ಕುಟುಂಬದಿಂದ ಥಟ್ಟನೆ ಕೊಂಡಿ ಕಳಚಿಕೊಂಡಂ ತಾದ ಪೂರೋ ದಿಕ್ಕೆಟ್ಟ ಅನಾಥ ಪ್ರಜ್ಞೆಯಿಂದ ವಿಲಿ ವಿಲಿ ಒದ್ದಾಡಿಬಿಡುತ್ತಾಳೆ. ಆದರೆ ಈಚೆ ಮದುವೆ ನಿಶ್ಚಯವಾದ ಹುಡುಗಿ ಪೂರೋ ಕಾಣೆಯಾಗಿ ಬಿಟ್ಟಳು ಎಂಬ ವಿಷಯವೇ ಪೂರೋ ತಂದೆ-ತಾಯಿಗೆ ದೊಡ್ಡ ಸಮಸ್ಯೆಯಾಗಿ ನುಂಗಲಾರದ ತುತ್ತಾಗಿ ಬಿಡುತ್ತದೆ. ರಾತ್ರಿ ಕಾಣೆಯಾಗಿ, ಯಾರೋ ಹೊತ್ತೊಯ್ದ ಪೂರೋ ತಮ್ಮ ಪಾಲಿಗೆ ಸತ್ತಳು, ಅವಳಿನ್ನು ಮದುವೆ ಯಾಗಲು ಯೋಗ್ಯಳಲ್ಲ, ತಮಗೆ ಅವಳಿಂದ ಇನ್ನೂ ಬರೀ ಕೆಟ್ಟ ಹೆಸರು ಎಂದಷ್ಟೇ ಸೀಮಿತ ವಾಗಿ ಯೋಚಿಸುತ್ತಾರೆಯೇ ವಿನಃ ಮಗಳು ಏನಾದಳೋ? ಜೋಪಾನವಾಗಿ ಬಂದು ಮನೆ ಸೇರಲಿ ದೇವರೇ.. ಎಂದು ವಿಹ್ವಲರಾಗಿ ಒಮ್ಮೆಯೂ ಆಲೋಚಿಸುವುದಿಲ್ಲ. ಎಲ್ಲಿ ಹೋಯಿತು ಈಗ ಮಗಳ ಮೇಲಿನ ಆ ಮೊದಲಿದ್ದ ಮಮಕಾರ?

ಒಂದು ರಾತ್ರಿ ಅವಳು ಇನ್ಯಾರೋ ಹೊತ್ತುಕೊಂಡು ಹೋದ ಎಂಬ ತಪ್ಪಿಗೆ, ತನ್ನದಲ್ಲದ ತಪ್ಪಿಗೆ ಮನೆಯಿಂದ ದೂರವಾದ ತಕ್ಷಣ ಸಂಬಂಧ ಕೆಡದೇ ಹೋಯಿತೇ?! ಅಯ್ಯೋ ಹೆಣ್ಣು ಜೀವದ ಪಾಡೇ ಎಂದು ಮರುಗುವಂತಾಗುತ್ತದೆ. ಅತ್ತ ಕಡೆ ರಶೀದ್‌ಗೆ ಪುರೋಳ ಸಂಕಟವನ್ನು ನೋಡಲಾಗದೆ, ಅವಳ ಸತ್ಯಾಗ್ರಹವನ್ನು ಎದುರಿಸಲಾಗದೆ ಕೆಲವು ದಿನಗಳ ನಂತರ ಪುರೋಳನ್ನು ಅವರ ಮನೆಗೇ ತಂದು ಬಿಟ್ಟು ತಾನು ಹೊರಗೆ ಏನಾಗುವುದೋ ಎಂದು ಗಮನಿಸಲು ನಿಲ್ಲುತ್ತಾನೆ. ಆಗುವುದೇನು? ಸೋತು-ಸೊರಗಿ ಮನೆ ಸೇರಲು ಬಂದು ರಾತ್ರಿ ಬಾಗಿಲು ತಟ್ಟಿದ ಆ ದುಃಖಿತೆಯನ್ನು ಅವಳ ತಂದೆ-ತಾಯಿ ಮುಲಾಜಿಲ್ಲದೆ ಅವಳು ತಮ್ಮ ಪಾಲಿಗೆ ಸತ್ತಳೆಂದು, ಅದೇ ತಮ್ಮ ಧರ್ಮವೆಂದು ಅವಳನ್ನು ಹೊರಗೆ ದೂಡಿ ಬಾಗಿಲು ಹಾಕಿಕೊಳ್ಳುತ್ತಾರೆ. ಹೊರಗೆ ಕಾಯುತ್ತಿದ್ದ ರಶೀದ್ ಮತ್ತೆ ಅವಳನ್ನೂ ತನ್ನ ಮನೆಗೇ ಕರೆದುಕೊಂಡು ಹೋಗಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿ ಅವಳೂ ಆ ಮನೆಯ ರೀತಿ-ರಿವಾಜು ಕಷ್ಟ ಸುಖಗಳಿಗೆ ಹೊಂದಿಕೊಂಡು ದುಃಖವನ್ನು ಮರೆಯುತ್ತ ಇರಲು ಕಲಿಯುತ್ತಾಳೆ. ಈ ಮಧ್ಯೆ ಅವಳ ಅಣ್ಣನ ಮದುವೆ ನಿಶ್ಚಯದಂತೆ ಅವನಿಚ್ಚೆಯಿಲ್ಲದೆಯೇ, ತಂಗಿಗಾಗಿ ಪರಿತಪಿಸುತ್ತಿರುವಾಗಲೇ ನಡೆದು ಹೋಗುತ್ತದೆ. ಪುರೋವನ್ನು ಮನೆಯಿಂದ ಹೊರಗೆ ಹಾಕುವಾಗ ಅವನು ಮನೆಯಲ್ಲಿರುವುದಿಲ್ಲ. ಈ ಸುದ್ದಿಯನ್ನು ದೊಡ್ಡವರು ಅವನಿಗೆ ತಿಳಿಸುವುದೂ ಇಲ್ಲ. ರಶೀದ್ ಪುರೋವನ್ನು ಹೊತ್ತೊಯ್ದದ್ದು ಎಂದು ತಿಳಿದಾಗ ಪುರೋ ಅಣ್ಣ ಅವನ ಗದ್ದೆಗೆ ಬೆಂಕಿಯಿಟ್ಟು ಬಿಡುತ್ತಾನೆ. ನೊಂದುಕೊಂಡ ರಶೀದ್ ತನ್ನಿಂದಲೇ ಇದೆಲ್ಲಾ ಆಗಿದ್ದು ಎಂದು ಕಣ್ಣೀರು ಸುರಿಸುತ್ತಾ ಸುಮ್ಮನಾಗಿ ಬಿಡುತ್ತಾನೆ. ಪುರೋ ಸಹವಾಸದಲ್ಲಿ ಅವನಿಗೆ ದಿನೇ ದಿನೇ ಪ್ರೀತಿಯ ಸಾಕ್ಷಾತ್ಕಾರವಾಗುತ್ತಿರುತ್ತದೆ. ೧೯೪೭ರ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ವಿಭಜನೆಯ ಕಾನೂನು ಬಂದು ಪಾಕಿಸ್ಥಾನದ ಹಿಂದೂಗಳೆಲ್ಲಾ ಹಿಂದೂಸ್ಥಾನಕ್ಕೆ ಹೋಗಬೇಕೆಂಬ ಸಂದರ್ಭದಲ್ಲಿ ಗಲಭೆ ಶುರುವಾಗಿ ಅತ್ಯಾಚಾರಗಳು ಶುರುವಾಗುತ್ತದೆ. ವಲಸೆ ಹೋಗುವ ಸಂದರ್ಭದಲ್ಲಿ ರಾಮಚಂದ್ ತಂಗಿ ಲಾಜೋಳನ್ನು ಒಬ್ಬ ಮುಸ್ಲಿಂ ಬಲಾತ್ಕಾರದಿಂದ ಹೊತ್ತೊಯ್ಯುತ್ತಾನೆ. ಆದರೆ ಪುರೋ ಮತ್ತು ರಶೀದ್ ಲಾಜೋಳನ್ನು ಶತ ಪ್ರಯತ್ನಮಾಡಿ ಉಪಾಯದಿಂದ ತಮ್ಮ ಮನೆಗೆ ರಕ್ಷಿಸಿ ಕರೆದುಕೊಂಡು ಬರುತ್ತಾರೆ. ಅವಳನ್ನು ತಂಗಿಯಂತೆ ಭಾವಿಸಿದ ರಶೀದ್ ಅವಳನ್ನು ಅವಳ ಮನೆ ಮುಟ್ಟಿಸುವುದಕ್ಕೆ ಹೋರಾಡುತ್ತಾ ವಲಸೆ ಕ್ಯಾಂಪ್‌ನಲ್ಲಿದ್ದ ಅವಳಣ್ಣ ರಾಮ್‌ಚಂದ್‌ನನ್ನು ಹುಡುಕಿ ತರುತ್ತಾನೆ. ರಾಮ್‌ಚಂದ್ ಕೂಡ ತಂಗಿಗಾಗಿ ಹಂಬಲಿಸಿ ಕಣ್ಣೀರಾಗುತ್ತಾನೆ. ಜೊತೆಯಲ್ಲಿ ಪುರೋ ಅಣ್ಣ ಕೂಡ ಇರುತ್ತಾನೆ. ಪುರೋ ಮತ್ತು ರಶೀದ್ ಲಾಜೋಳನ್ನು ರಾಮ್‌ಚಂದ್‌ಗೆ ಒಪ್ಪಿಸುವಾಗ ಪುರೋ ತನ್ನ ಅಣ್ಣನಿಗೆ “ಲಾಜೋಳನ್ನು ಯಾವ ಕಾರಣಕ್ಕೂ ಶಿಕ್ಷಿಸಬೇಡ. ಚೆನ್ನಾಗಿ ನೋಡಿಕೋ. ಅವಳು ನಿರಪರಾಧಿ” ಎನ್ನುತ್ತಾಳೆ. ಅವಳಣ್ಣ ಖಂಡಿತ ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಕಣ್ಣೀರು ತುಂಬಿಕೊಂಡು “ನೀನೂ ಹಿಂದೂಸ್ಥಾನಕ್ಕೆ ಬಂದು ಬಿಡು. ರಾಮ್‌ಚಂದ್ ನಿನ್ನನ್ನು ಮದುವೆಯಾಗಲು ಕಾಯುತ್ತಿದ್ದಾನೆ ಅವನು ತುಂಬಾ ಒಳ್ಳೆಯವನು” ಎಂದು ಅಂಗಲಾಚುತ್ತಾನೆ. ಆದರೆ ಪುರೋ ರಶೀದ್‌ನ ಜೊತೆಗೆ ಹೋಗಿ ಹೇಳುವ ಮಾತು - “ಇನ್ನಿದೇ ನನ್ನ ಮನೆ, ನನ್ನ ಮನೆಯಿಂದ ನಾನು ದೂರಾಗುವುದಿಲ್ಲ. ಯಾವ ಹೆಣ್ಣು ತನ್ನ ಮನೆಯನ್ನು ಸುರಕ್ಷಿತವಾಗಿ ಸೇರುತ್ತಾಳೋ ಅವಳಲ್ಲೆಲ್ಲಾ ನನ್ನ ಆತ್ಮವಿರುತ್ತದೆ. ಲಾಜೋಳಲ್ಲಿ ನನ್ನ ಆತ್ಮವಿದೆ” ಎನ್ನುತ್ತಾ ರಶೀದ್ ಜೊತೆಗೆ ನಡೆಯುತ್ತಾಳೆ.

ಈ ಮನ ಮಿಡಿಯುವ ಕಥೆ ನನ್ನ ಪ್ರೀತಿಯ ಪಂಜಾಬೀ ಲೇಖಕಿ ಅಮೃತಾ ಪ್ರೀತಮ್ ಕಾದಂಬರಿ ‘ಪಿಂಜರ್’ ಎಂಬ ಪುಸ್ತಕದ್ದು. (ಪಿಂಜರ್ ಎಂದರೆ ಪಂಜರ. ಪಂಜರ ಮೀರುವ ಹೆಣ್ಣುಮಗಳ ಕಥೆಯಿದು.) ಇದು ಸುಂದರ ಹಿಂದಿ ಚಿತ್ರವಾಗಿ ಕೂಡ ರೂಪುಗೊಂಡು ನಿಜವಾದ ಪ್ರೀತಿಯ ಸಂಬಂಧಗಳು ಹೇಗಿರುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ನನ್ನ ಕಣ್ಣು ಹನಿಗೂಡಿತು. ಯಾರು ಹಿಂದು? ಯಾರು ಮುಸ್ಲಿಂ? ಹೃದಯವಿರುವ ಹಾದಿಯಲ್ಲಿ ನಡೆಯುವುದಷ್ಟೇ ಧರ್ಮ. ಅಲ್ಲವೇ ಎಂದು ಆತ್ಮ ಪ್ರಶ್ನಿಸುತ್ತದೆ.

ಒಂದು ಕೊಳಲಿನ ಕಥೆ

-ಸರ್ಜಾಶಂಕರ ಹರಳಿಮಠ
ಮಾತಿಗೆ ನಿಲುಕದ ಭಾವನೆಗಳು ಕೊಳಲ ದನಿಯಲ್ಲಿ ಜೀವ ಪಡೆದು ಬರುವಾಗ.. ಶುಭ್ರ ನೀಲಾಕಾಶದಲ್ಲಿ ಎತ್ತ ನೋಡಿದರೂ ಹಕ್ಕಿ-ಪಕ್ಷಿಗಳ ಸುಳಿವಿಲ್ಲ. ತಮ್ಮ ಹೊಟ್ಟೆಪಾಡಿಗಾಗಿ ಈಗಾಗಲೇ ಗೂಡು ಬಿಟ್ಟಿರಬೇಕಾಗಿದ್ದ ಪಕ್ಷಿ ಸಂಕುಲ ಹೊರ ಬಂದಿಲ್ಲ. ಹಸಿರು ಹೊದಿಕೆಯನ್ನು ಹೊದ್ದ ಗಿಡ ಮರಬಳ್ಳಿಗಳು ತುಟಿಬಿಚ್ಚದೆ ಮೌನವಾಗಿ ಕಂಡೂ ಕಾಣದಂತೆ ನಿಟ್ಟುಸಿರುಬಿಡುತ್ತಿವೆ. ಈ ಮುಂಜಾನೆ ಜೋಗಿಗುಡ್ಡದ ನೆತ್ತಿಯಲ್ಲಿ ನಿಂತು ತನ್ನ ಕಿರಣಗಳ ದಂತ ಪಂಕ್ತಿಯನ್ನು ಹೊರಚೆಲ್ಲಿ ನಗುಮೊಗದಿಂದ ಶುಭೋದಯ ಹೇಳುವ ರವಿಯೇಕೆ ಕಂಬನಿ ತುಂಬಿದ ಮೋಡಗಳ ಹಿಂದೆ ಮುಖಮುಚ್ಚಿ ಮರೆಯಾಗುತ್ತಿದ್ದಾನೆ.

ಯಾವುದದು ದನಿ? ಆ ಕೊಳಲದನಿ?

ಯಾವುದೋ ಅವ್ಯಕ್ತ ನೋವಿಗೆ ಅಭಿವ್ಯಕ್ತಿ ಕೊಡುವ ಕೊಳಲ ಸ್ವರ? ಇಡೀ ಹರಳಿಮಠವನ್ನು ದುಗುಡದ ಅಂಚಿನಲ್ಲಿ ಮುಳುಗಿಸುವ, ಹೃದಯ ವನ್ನು ತಟ್ಟಿ ತಟ್ಟಿ ಆರ್ದ್ರಗೊಳಿಸಿ ಕರಗಿ ನೀರಾ ಗಿಸುವ ದನಿ? ಕ್ಷಣಕಾಲ ಕೊಳಲ ನಿನಾದದ ಮನ ಕಲಕುವ ಲಯಕ್ಕೆ ಮಾರುಹೋದ ವೆಂಕಟೇಶನಿಗೆ ಕೊಳಲಿನೊಂದಿಗೆ ಬೆಸೆದುಕೊಂಡ ಕುಂಬಾರ ಸುಬ್ಬಣ್ಣ ನೆನಪಾಗಿ ಯಾಕೆ ಹೀಗೆ ಬೆಳಬೆಳಗೆ ಕೊಳಲು ಬಾರಿಸುತ್ತಿದ್ದಾನೆ ಎಂದು ತಲೆಕೆರೆದು ಕೊಂಡ. ತಲೆಕೆರೆದುಕೊಂಡಾಗ ವೆಂಕಟೇಶನಿಗೆ ಸಿಕ್ಕ ಕಾರಣ ಆತನ ಮದುವೆಯ ಹಗರಣ.

ಕುಂಬಾರ ಸುಬ್ಬಣ್ಣ ನಮ್ಮೂರಿನ ಹಿರಿತಲೆ. ಒಣ ಗಿದ ನುಗ್ಗೇಕಾಯಿಯಂತಹ ದೇಹ, ಆಳಕ್ಕಿಳಿದ ಕಣ್ಣು, ಕುರುಚಲು ಗಡ್ಡ, ಕಾಲೆಂಬ ಎರಡು ಕಡ್ಡಿಗಳೊಂದಿಗೆ ಊರುಗೋಲಾಗಿ ಒಂದು ಕೋಲು, ಸ್ವಲ್ಪವೇ ಬಾಗಿದ ಬೆನ್ನು. ಯಾವಾಗಲೂ ಎಲೆಯಡಿಕೆ ಜಗಿಯುವ ಬೊಚ್ಚುಬಾಯಿ. ಇವು ಸುಬ್ಬಣ್ಣನ ಚಹರೆಗಳು. ತೋಳಿರದ ಕಪ್ಪು ಬನಿಯನ್ ಅಥವಾ ಅಂಗಿಯೊಂದಿಗೆ ಮಂಡಿಯ ತನಕ ಮಾತ್ರ ಪಂಚೆಯುಟ್ಟ ಒಂದೇ ಲಯದಲ್ಲಿ ಹೆಜ್ಜೆ ಹಾಕುವ ವ್ಯಕ್ತಿ. ಹರಳಿಮಠ, ಸಸಿತೋಟ, ನೀರುಳ್ಳಿ, ಗೆರಸ, ದೇವರಕೊಪ್ಪ, ಕಂಕಳೆ ಸುತ್ತಮುತ್ತ ಅಷ್ಟೇಕೆ ತೀರ್ಥಹಳ್ಳಿಯಲ್ಲಿ ಕಂಡರೂ ಕೂಡ ಅದು ಸುಬ್ಬಣ್ಣನೇ ಎಂದು ಸುಲಭವಾಗಿ ಗುರುತಿಸುವಷ್ಟು ಸುಬ್ಬಣ್ಣನದು ವಿಶಿಷ್ಟ ವ್ಯಕ್ತಿತ್ವ. ಸುಬ್ಬಣ್ಣನಿಗೆ ವಯಸ್ಸೆಷ್ಟು ಎಂದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಎಪ್ಪತ್ತೈದು ವರ್ಷ ವಯಸ್ಸಿನ ಯುವಕ ಹಿರಿಯಣ್ಣ ಭಟ್ಟರೇ ಸುಬ್ಬ ನನಗಿಂತ ಹಿರಿಯವ ಎಂದು ಸುಬ್ಬಣ್ಣನ ಮಾತು ಬಂದಾಗ ಹೇಳುವುದುಂಟು.

ಇಂತಹ ಕುಂಬಾರ ಸುಬ್ಬಣ್ಣನಿಗೆ ಮದುವೆಯಾ ಗುವ ಬಯಕೆ ಉಂಟಾಗಿದೆಯೆಂದು ಊರ ತುಂಬಾ ಸುದ್ದಿ ಹರಡಿ ಹಳೆತಲೆಗಳ ಬೊಚ್ಚು ಬಾಯಲ್ಲೂ ನಗೆಯುಕ್ಕಿ ಹೈಕಳುಗಳೆಲ್ಲ ರೋಮಾಂಚಿತರಾಗಿ ಸುಬ್ಬಣ್ಣನ ರಸಿಕತನದ ತೆವಲಿಗೆ ತಮ್ಮದೇ ಉಪ್ಪು ಖಾರ ಸೇರಿಸಿ ಮನ ರಂಜನೆ ಪಡೆಯಹತ್ತಿದ್ದು ಸ್ವಲ್ಪ ಸ್ವಾರಸ್ಯವೇ..!

ಸುಬ್ಬಣ್ಣನಿಗೆ ಮದುವೆಯ ಬಯಕೆಯಾಗಿದೆ ಎಂದರೆ ಅವರಿಗೆ ಮದುವೆಯಾಗಿಲ್ಲವೇ, ಮಕ್ಕಳಿ ಲ್ಲವೇ ಎಂಬ ಪ್ರಶ್ನೆ ಸಹಜ. ಸುಬ್ಬಣ್ಣನಿಗೆ ಒಂದಲ್ಲ ಎರಡು ಮದುವೆಯಾಗಿತ್ತು. ಮೊದಲ ಹೆಂಡತಿ ಎರಡು ಮೂರು ಮಕ್ಕಳಾಗಿ ಸುಬ್ಬಣ್ಣನಿಗೂ ಅವರಿಗೂ ಸರಿ ಬರದೇ ಅವರೆಲ್ಲಾ ಗಡಿಕಲ್ಲಿನ ಮಕ್ಕಿ ಮನೆಯಲ್ಲಿದ್ದಾರೆಂಬ ಸುದ್ದಿ ಊರವರಿಗೆ ಗೊತ್ತಿತ್ತೇ ವಿನಃ ಅವರ ಪರಿಚಯ ಯಾರಿಗೂ ಇರಲಿಲ್ಲ. ಸುಬ್ಬಣ್ಣನ ಎರಡನೆ ಹೆಂಡತಿ ರುಕ್ಕಕ್ಕ ಮಾತ್ರ ಸುಬ್ಬಣ್ಣನಷ್ಟೇ ಖ್ಯಾತಿ ಪಡೆದ ಹೆಂಗಸಾಗಿದ್ದಳು.

ರುಕ್ಕು ಮತ್ತು ಸುಬ್ಬಣ್ಣನ ಪ್ರೀತಿ ಆರಂಭವಾದದ್ದು ಸಾವ್ಕಾರ್ರ ಮನೆಯ ಅಡಿಕೆ ಗೊನೆ ಹೊರುವಾಗ. ಸಾವ್ಕಾರ್ರ ಮನೆಯ ಮೇಲಿನ ಬಾಲ್ತೋಟ, ಕೆಳಗಿನ ಬಾಲ್ತೋಟಗಳಿಗೆ ಗಾಡಿ ಹೋಗುವುದಿಲ್ಲವಾದ್ದ ರಿಂದ ಅಲ್ಲಿ ಕಿತ್ತ ಅಡಿಕೆಗೊನೆಗಳನ್ನು ತಲೆ ಹೊರೆ ಯಲ್ಲಿಯೇ ಒಬ್ಬರಿಂದ ಒಬ್ಬರಿಗೆ ಬದಲಾಯಿಸಿ ಕೊಳ್ಳುತ್ತಾ ಮನೆಗೆ ತರಬೇಕು.

ಗೊನೆ ತುಂಬಿದ ಬುಟ್ಟಿಯನ್ನು ಬದಲಾಯಿಸಿ ಕೊಳ್ಳುವಾಗ ಸುಬ್ಬಣ್ಣನಿಗೂ ರುಕ್ಕುವಿಗೂ ನಡುವೆ ಕೇವಲ ಕೂದಲೆಳೆಯ ಅಂತರ. ಒಬ್ಬರ ಉಸಿರು ಇನ್ನೊಬ್ಬರ ಉಸಿರಿನೊಂದಿಗೆ ಬೆರೆಯುವಷ್ಟು ಸನಿಹ. ರುಕ್ಕುವಿನ ಮಿನುಗುವ ಕಣ್ಣುಗಳು, ಅಡಿಕೆಯ ಹಿಂಗಾರದಂತೆ ನಳನಳಿಸುವ ಮುಖ, ಕೇದಿಗೆಯ ಹೂ ಮುಡಿದ ಕೇಶರಾಶಿ ಸುಬ್ಬನನ್ನು ಸಮ್ಮೋಹನಗೊಳಿಸಿದ್ದರೆ, ಸುಬ್ಬಣ್ಣನ ಪ್ರೀತಿ ತುಂಬಿದ ಕಣ್ಣುಗಳು, ತುಂಟತನ ತೋರುವ ಆಕರ್ಷಕ ಮೀಸೆ, ಲವಲವಿಕೆಯ ಮಾತುಗಳು ಸುಬ್ಬಣ್ಣನನ್ನು ಒಂದು ನಿಮಿಷವೂ ಬಿಟ್ಟಿರಲಾರದಂತೆ ರುಕ್ಕುವನ್ನು ಕಟ್ಟಿಹಾಕಿ ಬಿಟ್ಟವು.

ಅಡಿಕೆ ಗೊನೆ ತುಂಬಿದ ಬುಟ್ಟಿ ಬದಲಾ ಯಿಸಿಕೊಳ್ಳುವಾಗ ಆರಂಭವಾದ ಸುಬ್ಬಣ್ಣನ ಪ್ರೇಮ ಪ್ರಕರಣ ಕಲಾನಾಥೇಶ್ವರ ದೇವಸ್ಥಾನದಲ್ಲಿ ಮದುವೆ ಯಾಗುವುದರೊಂದಿಗೆ ಸಮಾಜದ ಅಂUಕಾರ ಪಡೆಯಿತು.

ಮದುವೆಯಾಗುತ್ತಿದ್ದಂತೆಯೇ ಕೈಯಲ್ಲೊಂದಿಷ್ಟು ಕಾಸು ಮಾಡೋಣವೆಂದು ತನ್ನ ಕುಲಕಸುಬು ಕುಂಬಾರಿಕೆಯನ್ನು ಸುಬ್ಬಣ್ಣ ಆರಂಭಿಸಿದರೂ ಅದು ನಷ್ಟದ ಬಾಬಾಗತೊಡಗಿದಂತೆ ಪುನಃ ಸಾವ್ಕಾರ್ರ ಮನೆಯ ಕೆಲಸಕ್ಕೇ ಸೇರಿಕೊಂಡನು.

ರುಕ್ಕು-ಸುಬ್ಬಣ್ಣನ ಜೋಡಿಯನ್ನು ಊರಿನಲ್ಲಿ ನೋಡುವುದೇ ಒಂದು ಸೊಗಸೆನಿಸುತ್ತಿತ್ತು. ಕಟ್ಟಿಗೆಗೇ ಹೋಗಲಿ, ಸೊಪ್ಪಿಗೇ ಹೋಗಲಿ, ಅಥವಾ ಸೋಮವಾರ ಸಂತೆಗೇ ಹೋಗಲಿ, ರುಕ್ಕು ಮತ್ತು ಸುಬ್ಬಣ್ಣ ಒಟ್ಟಿಗೆ ಹೋಗಬೇಕು. ಕಟ್ಟಿಗೆ ತರುವಾಗ ಸುಬ್ಬಣ್ಣ ಸ್ವಲ್ಪ ಜೋರಾಗಿ ಹೆಜ್ಜೆ ಹಾಕಿ ಮುಂದೆ ಸಾಗುತ್ತಿದ್ದರೆ ಹ್ವಾಯ್.. ನಿಂತ್ಕಾಣಿ ಮಾರಾಯ್ರೆ.. ಎಂದು ರುಕ್ಕು ಹುಸಿಕೋಪ ತೋರುವಳು. ಆಗ ಸುಬ್ಬಣ್ಣ ಬೇಗ ಬರುಕಾತಿಲ್ಲೆ.. ಏನ್..ಒಳ್ಳೆ ಬಸ್ರಿ ಹೆಂಗ್ಸಿನಂಗೆ ಕಾಲಾಕ್ತಿ.. ಎಂದು ಪ್ರೀತಿಯಿಂದ ಗದರಿ ರುಕ್ಕು ಮತ್ತೆ ತನ್ನೊಡನೆ ಜೊತೆಗೂಡಿದ ನಂತರವೇ ಮುಂದೆ ಸಾಗುತ್ತಿದ್ದ.

ಸುಬ್ಬಣ್ಣ ರುಕ್ಕುವಿಗೆ ಬಸ್ರಿ ಹೆಂಗ್ಸಿನಂಗೆ ಎನ್ನುತ್ತಿ ದ್ದಂತೆ ರುಕ್ಕುವಿಗೆ ಹೊಟ್ಟೆ ಕಿವುಚಿದಂತಾಗುತ್ತಿತ್ತು. ಈ ಜೋಡಿ ಮದುವೆಯಾಗಿ ಹತ್ತಾರು ವರ್ಷವಾದರೂ ಇವರಿಗೆ ಮಕ್ಕಳ ಭಾಗ್ಯವಿರಲಿಲ್ಲ. ಪಂಡಿತರ ಔಸುತಿ, ಸ್ಥಳಕ್ಕೆ ಕೊಟ್ಟ ಹರಕೆ, ಕೊನೆಗೆ ತೀರ್ಥಹಳ್ಳಿ ಡಾಕುಟರ ಬಳಿಗೆ ಹೋಗಿ ಬಂದರೂ ಪ್ರಯೋ ಜನವಾಗಿರಲಿಲ್ಲ. ಬಸ್ರಿ ಹೆಂಗ್ಸಿನಂಗೆ ಅಂತ ಸುಬ್ಬಣ್ಣ ಹೇಳಿದರೂ ಕೂಡ ಅದನ್ನು ತಮಾಷೆಗೆ ಮಾತ್ರ ಹೇಳುತ್ತಿದ್ದನೇ ವಿನಃ ಅದರಲ್ಲಿ ವ್ಯಂಗ್ಯವಿರಲಿಲ್ಲ.

ತನ್ನ ಮಾತು ರುಕ್ಕುವಿಗೂ ಬೇಸರ ತರಿಸಿದೆ ಎಂದು ಗೊತ್ತಾದ ಕೂಡಲೇ ರುಕ್ಕು, ತಮಾಷೆಗೆ ಕೆಂಡೇ ಕಣೆ. ಅಲ್ಲೇ, ಎಷ್ಟೆಷ್ಟೋ ಜನ ಮಕ್ಕಳು- ಮರಿ ಇದ್ದೂ, ವಯಸ್ಸಾದರೂ ದಾರಿ ಮೇಲಿಲ್ಲ. ಮಕ್ಕಳಿಲ್ಲ ಅದ್ಕಂಡ್ ನೀನ್ಯಾಕೆ ಏಚ್ನೆ ಮಾಡ್ತಿ. ತಿಮ್ಮಿ, ಸೋಮಿ, ಟಾಮಿ, ಬುಡ್ಡ, ಬೋಳಿ, ಮಳ್ಳ ಎಲ್ಲಾ ನಮ್ ಮಕ್ಕಳಲ್ವ...? ಎಂದು ಸಮಾಧಾನ ಹೇಳು ತ್ತಿದ್ದ. ಮಕ್ಕಳಿಲ್ಲದ ರುಕ್ಕು-ಸುಬ್ಬಣ್ಣರಿಗೆ ಅವರು ಸಾಕಿದ್ದ ಮೂಕ ಪ್ರಾಣಿಗಳೇ ಮಕ್ಕಳಾಗಿದ್ದವು. ನಾಯಿ ಟಾಮಿ, ಎಮ್ಮೆ ತಿಮ್ಮಿ, ಹಸು ಸೋಮಿ, ಬೆಕ್ಕು ಮಳ್ಳ, ಹುಂಜ ಬುಡ್ಡ, ಹ್ಯಾಟಿ ಬೋಳಿ ಸುಬ್ಬಣ್ಣನ ಸಾಕು ಮಕ್ಕಳು. ಎಮ್ಮೆ, ಹಸು, ನಾಯಿ, ಬೆಕ್ಕುಗಳಿಗೆ ಹೆಸರಿಟ್ಟು ಕರೆಯುವುದು ಸಾಮಾನ್ಯವಾದರೂ ಕೋಳಿಗಳಿಗೂ ಸುಬ್ಬಣ್ಣ ಹೆಸರಿಟ್ಟು ಕರೆಯುವುದು ಎಲ್ಲರಿಗೂ ಮೋಜಿನದಾಗಿತ್ತು.

ಸುಬ್ಬಣ್ಣನಿಗೆ ಈಗ ಉಳಿದಿರುವುದು ಈ ಮಕ್ಕಳು ಮಾತ್ರ. ರುಕ್ಕು ಕೇವಲ ನೆನಪು. ತನ್ನ ಪ್ರಿಯತಮ, ಸಾಕು ಮಕ್ಕಳೊಂದಿಗೆ ಶಾಂತವಾಗಿ ಹರಿಯುವ ತುಂಗೆಯಂತೆ ಯಾರಿಗೂ ತೊಂದರೆ ಕೊಡದೆ ಜೀವನ ಸಾಗಿಸುತ್ತಿದ್ದ ರುಕ್ಕುವಿನ ಅಂತ್ಯ ಹಾಗಾಗ ಬಾರದಾಗಿತ್ತು.

ಸುಬ್ಬಣ್ಣನಿಗೆ ಆ ತಿಂಗಳು ಇನ್ನೂ ಗೌರ‍್ನ್‌ಮೆಂಟ್ ನಿಂದ ಐವತ್ತು ರೂಪಾಯಿ ಬಂದಿರಲಿಲ್ಲ. ಮನೆಯಲ್ಲಿ ಅಕ್ಕಿ ಕಾಳು ಇರಲಿಲ್ಲ. ಕಷ್ಟ ಎಂದಾಗ ಕಾರಣ ಕೇಳದೆ ಕಾಸು ಕೊಡುತ್ತಿದ್ದ ಅಹ್ಮದಣ್ಣನ ಬಳಿ ಒಂದತ್ತು ರೂಪಾಯಿ ತರೋಣ ಎಂದು ಸುಬ್ಬಣ್ಣ ಅವರ ಮನೆಗೆ ತೆರಳಿದ್ದ. ಸುಬ್ಬಣ್ಣ ಅಹ್ಮದಣ್ಣನ ಮನೆ ಬಾಗಿಲು ತಟ್ಟುವುದಕ್ಕೂ ರುಕ್ಕುವಿನ ಬೊಬ್ಬೆ ಕೇಳುವುದಕ್ಕೂ ಸರಿಹೋಯಿತು. ಬೊಬ್ಬೆಗೆ ಬೆಚ್ಚಿದ ಸುಬ್ಬಣ್ಣ ಒಂದೇ ಉಸಿರಿಗೆ ಮನೆಗೆ ತೆರಳಿದ. ಸುಬ್ಬಣ್ಣ ಬಂದಾಗ ರುಕ್ಕುವಿನ ಬೊಬ್ಬೆ ನಿಂತಿತ್ತು. ಸುಬ್ಬಣ್ಣನಿಗೆ ಕೇಳಿದ ಬೊಬ್ಬೆ ರುಕ್ಕು ಚಡಪಡಿಸಿ ನರನರಳಿ ಕೂಗಿದ ಕೊನೆಯ ಬೊಬ್ಬೆಯಾಗಿರ ಬೇಕು. ರುಕ್ಕುವಿನ ಮೈಮೇಲೆ ಅಳಿದುಳಿದ ಸೀರೆ ತುಂಡುಗಳಿಂದ ಹೊಗೆ ಎದ್ದೇಳುತ್ತಿತ್ತು.

ಒಲೆಯ ಮೇಲೆ ಹಾಲನ್ನಿಟ್ಟು ಒಲೆಗೆ ಬೆನ್ನು ಹಾಕಿ ಎಲೆಯಡಿಕೆ ಹಾಕಲು ಅಣಿಯಾಗುತ್ತಿದ್ದ ರುಕ್ಕುವಿಗೆ ತನ್ನ ಸೆರಗು ಒಲೆಯ ಬಳಿ ಬಿದ್ದದ್ದು ತಿಳಿಯಲಿಲ್ಲ. ಬೆಂಕಿ ತನ್ನ ನಾಲಿಗೆ ಚಾಚಿತು. ಅದು ಅರಿವಿಗೆ ಬಂದ ತಕ್ಷಣ ಸೀರೆ ಜಾರಿಸಲು ನೋಡಿದ ರುಕ್ಕು ಸೀರೆಯನ್ನು ಬಿಗಿಯಾಗಿ ಗಂಟು ಹಾಕಿ ಉಟ್ಟು ಕೊಂಡಿದ್ದರಿಂದ ಕಳಚಲಾಗಲಿಲ್ಲ. ಈ ಸುದ್ದಿ ಮಿಂಚಿನ ವೇಗದಲ್ಲಿ ಸಾವ್ಕಾರ್ರ ಮನೆಗೆ ತಿಳಿದು ಸಾವ್ಕಾರ್ರು ಜೀಪಿನಲ್ಲಿ ಬಂದು ಆಸ್ಪತ್ರೆ ಸೇರಿಸಿದರು. ಆದರೆ ರುಕ್ಕುವಿನ ಭೂಮಿಯ ಮೇಲಿನ ಪಯಣ ಮುಗಿದಿತ್ತು.

ಸುಬ್ಬಣ್ಣನ ರೋದನ ಮುಗಿಲು ಮುಟ್ಟಿತು. ಕೊಟ್ಟಿಗೆಗೆ ಹೋಗಿ ತಿಮ್ಮಿ-ಸೋಮಿಯರನ್ನು ನೇವ ರಿಸಿ, ಅವುಗಳ ಬೆನ್ನ ಮೇಲೆ ತಲೆಯಿಟ್ಟು ಅತ್ತ. ಮಳ್ಳ ಟಾಮಿಯರನ್ನು ತಬ್ಬಿಕೊಂಡು ನಿಟ್ಟುಸಿರಿಟ್ಟ. ಬುಡ್ಡ ಬೋಳಿಯರನ್ನು ಅವುಚಿಕೊಂಡು ಆಲಾಪಿಸಿದ. ಅತ್ತೂ ಅತ್ತೂ ಪ್ರಜ್ಞೆ ತಪ್ಪಿದಂತಾಗಿ ಕೊಟ್ಟಿಗೆಯಲ್ಲಿ ಬಿದ್ದ.

ಎಚ್ಚರವಾದಾಗ ಮತ್ತೆ ರೋದಿಸಿದ. ಮಡಿದ ಮಡದಿಯ ಶೋಕದಲ್ಲಿ ಸುಬ್ಬಣ್ಣ ಊಟ-ತಿಂಡಿ ಗಳನ್ನೇ ಮರೆತ. ರುಕ್ಕು ಗತಿಸಿ ವಾರವಾದರೂ ಸುಬ್ಬಣ್ಣ ಹೊಟ್ಟೆಗೆ ಏನೂ ತೆಗೆದುಕೊಳ್ಳದಿದ್ದುದನ್ನು ನೋಡಿ ಊರವರು ದಿಗಿಲು ಗೊಂಡರು. ಸುಬ್ಬಣ್ಣ ನಿಗೆ ಹರಳಿಮಠದ ಪ್ರತಿ ಮನೆಯಿಂದಲೂ ಊಟ -ತಿಂಡಿಗಳು ಬರತೊಡಗಿದವು. ಸುಬ್ಬಣ್ಣ ಕಂಡೂ ಕಾಣದಂತೆ ನಿರ್ಲಿಪ್ತನಾದ. ತಿಮ್ಮಿ, ಸೋಮಿಯರಿಗೆ ಮುರಾ ತರಲು ಸಾವ್ಕಾರ್ರ ಮನೆಯ ತೋಟಕ್ಕೆ ಹೋಗುತ್ತಿದ್ದ ಸುಬ್ಬಣ್ಣನನ್ನು ನಯವಾಗಿ ಸಮಾಧಾನ ಗೊಳಿಸಿದ ಗಾಯಿತ್ರಮ್ಮ ಆತನಿಗೆ ಎರಡು ಇಡ್ಲಿ ತಿನ್ನಿಸುವುದರಲ್ಲಿ ಯಶಸ್ವಿಯಾದರು.

ಎರಡು ಇಡ್ಲಿಗಳನ್ನು ತಿಂದ ಸುಬ್ಬಣ್ಣ ಉಳಿದ ಮೂರ‍್ನಾಲ್ಕು ಇಡ್ಲಿಗಳನ್ನು ತೆಗೆದುಕೊಂಡು ಶ್ಮಶಾನಕ್ಕೆ ಹೋಗಿ ರುಕ್ಕು ಭಸ್ಮಗೊಂಡ ಜಾಗದಲ್ಲಿ ಇಟ್ಟು ಅತ್ತು ಬಂದ.

ರುಕ್ಕುವಿನ ಸಾವು ಸುಬ್ಬಣ್ಣನ ಜೀವನಗತಿಯನ್ನೇ ಮಂಕಾಗಿ ಸಿತು. ರುಕ್ಕುವನ್ನು ಮರೆಯಲು ಯತ್ನಿಸಿದಂತೆಲ್ಲಾ ಆಕೆಯ ನೆನಪು ಸುಬ್ಬಣ್ಣನಿಗೆ ಮತ್ತೆ ಮತ್ತೆ ಮರುಕಳಿಸಿ ಬರುತ್ತಿತ್ತು.

ಒಂದು ಮಧ್ಯಾಹ್ನ ಸುಬ್ಬಣ್ಣ ದಣಿದು ಮನೆಗೆ ಬಂದು ನೋಡುತ್ತಾನೆ... ತಿಮ್ಮಿ ಆಂಯ್ಗರೆಯುತ್ತಿದೆ, ಬುಡ್ಡ ಬೋಳಿ ಯರು ಪಿಳಿ ಪಿಳಿ ಕಣ್ಣು ಬಿಡುತ್ತಾ ಅನಾಥರಂತೆ ಕುಳಿತಿವೆ. ಸೋಮಿಯ ಕಣ್ಣಲ್ಲಿ ನೀರು, ಟಾಮಿ ತನ್ನ ಯಜ ಮಾನನ ಹಿಂದೆ ತಿರುಗಾಡಿ ಸುಸ್ತಾಗಿ ಮಂಡಿ ಯೂರಿ ಕುಳಿತಿದೆ. ರುಕ್ಕು ಕಣ್ಮರೆಯಾದ ನಂತರ ಸುಬ್ಬಣ್ಣ ತನ್ನ ಊಟ ತಿಂಡಿಯ ಬಗ್ಗೆಯೇ ಗಮನ ಕೊಟ್ಟಿರಲಿಲ್ಲ. ತನ್ನ ಮಕ್ಕಳಂತೆ ಸಾಕಿದ ಈ ಪ್ರಾಣಿಗಳ ಕಡೆ ನಾನು ನೋಡದಾದೆ ನಲ್ಲ ಎಂದು ಸುಬ್ಬಣ್ಣ ಈಗ ವ್ಯಥೆಪಟ್ಟ. ಹಿಂದೆ ಕೊಟ್ಟಿಗೆಗೆ ಬಂದು ನೋಡಿದರೆ ಅಲ್ಲಿ ಹುಲ್ಲಿನ ಒಂದು ಎಸಳೂ ಇರಲಿಲ್ಲ. ಸಪ್ಪಿನ ಹಗ್ಗ ಮತ್ತು ಕತ್ತಿಗೆ ಕಡಿ ಮಾಡಿನ ಗಳಕ್ಕೆ ಹಿಡಿದ ವರಲೆ ತನ್ನ ನಾಲಿಗೆ ಚಾಚಿತ್ತು. ಕತ್ತಿಗೆ ಮತ್ತು ಹಗ್ಗಕ್ಕೆ ಹಿಡಿದ ವರಲೆಯನ್ನೂ, ಜೇಡರ ಬಲೆಯನ್ನೂ ಕೊಡವಿದ ಸುಬ್ಬಣ್ಣ ಅಣ್ಣೇಚಾರರ ಗದ್ದೆಗೆ ಹೋಗಿ ಅಂಚಿನ ಲ್ಲಿದ್ದ ಹುಲ್ಲು ಕತ್ತರಿಸಿ ತಂದು ತಿಮ್ಮಿ ಸೋಮಿಯರ ಮೈದಡವಿ ಹುಲ್ಲು ನೀಡಿದ. ಬುಡ್ಡ ಬೋಳಿಯರನ್ನು ಕರೆದು ಕಾಳು ಹಾಕಿದ. ಬೆಳಗ್ಗೆಯೇ ಬೇಯಿ ಸಿಟ್ಟ ಗಂಜಿಯನ್ನು ಮೂರು ತಟ್ಟೆಗೆ ಬಗ್ಗಿಸಿಕೊಂಡು ತನ್ನೊಂದಿಗೆ ಟಾಮಿ, ಮಳ್ಳರನ್ನು ಕರೆದು ಊಟಕ್ಕೆ ಕುಳಿತುಕೊಂಡ. ಊಟ ಮಾಡುತ್ತಿದ್ದ ಸುಬ್ಬಣ್ಣ ತನ್ನ ಈ ಮಕ್ಕಳನ್ನೆಲ್ಲ ಸರಿಯಾಗಿ ನೋಡಿಕೊಳ್ಳಲು ಒಂದು ಸಮಕಟ್ಟು ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದ.

ರುಕ್ಕುವಿರಬೇಕಾದರೂ ಅಷ್ಟೆ, ಸುಬ್ಬಣ್ಣ ದಿನದ ಬಹುಭಾಗ ಹೊರಗೆ ಕಳೆಯುತ್ತಿದ್ದನು. ಸುಬ್ಬಣ್ಣನಿಗೆ ಕೆಲವು ಕಾಯಿಲೆಗಳಿಗೆ ಔಸುತಿ ಕೊಡುವುದು ಗೊತ್ತಿತ್ತು. ಇದಕ್ಕಿಂತ ಹೆಚ್ಚಾಗಿ ಉಳುಕಿಸಿಕೊಂಡವರಿಗೆ ಸುಬ್ಬಣ್ಣ ಎಣ್ಣೆ ಹಚ್ಚಿ ತಿಕ್ಕಿದನೆಂದರೆ ನೋವು ನಾಪತ್ತೆಯಾಗಿ ಬಿಡುತ್ತಿತ್ತು. ಹರಳಿಮಠ ಸುತ್ತ, ಮುತ್ತ ಸುಮಾರು ಹಾರೋಗೊಳಿಗೆ, ಕಡಿದಾಳು ಇತ್ತ ಗೆರಸ, ಹಲಸಿನಹಳ್ಳಿಯವರೆಗೆ ಮೈ, ಕೈ ಸೊಂಟ ಉಳುಕಿಸಿಕೊಂಡವ ರೆಲ್ಲಾ ಸುಬ್ಬಣ್ಣನಿಗೆ ಆಹ್ವಾನ ನೀಡುತ್ತಿದ್ದರು. ತೋಟ ಗದ್ದೆಯ ಕೆಲಸ ಮಾಡುತ್ತ್ತಾ ಕುತ್ತಿಗೆ, ರಟ್ಟೆ ಉಳುಕಿಸಿಕೊಂಡವರು, ರಾತ್ರಿ ನಿಶೆ ಜಾಸ್ತಿಯಾಗಿ ಜಾರಿ ಬಿದ್ದು ಮೈಕೈ ಉಳುಕಿಸಿಕೊಂಡವರು, ಕೊನೆಗೆ ದೀಪಾವಳಿ ದಿನ ಬೂರಿ ಹಾಯಲು ಹೋಗಿ ತೆಂಗಿನ ಮರದಿಂದ ಉರುಳಿಬಿದ್ದು ಉಳುಕಿಸಿಕೊಂಡವರೆಲ್ಲಾ ಗುಪ್ತವಾಗಿ ಸುಬ್ಬಣ್ಣನಿಗೆ ಕರೆ ಕಳಿಸುತ್ತಿದ್ದರು. ಅಲ್ಲಿಗೆಲ್ಲ ನಡೆದೇ ಹೋಗುತ್ತಿದ್ದ ಸುಬ್ಬಣ್ಣ ಬರುವಾಗ ಕಡಿಮೆಯೆಂದರೂ ರೇಡಿಯೋದಲ್ಲಿ ಕನ್ನಡ ವಾರ್ತೆ ಬರುತ್ತಿತ್ತು.

ತನ್ನ ಮೂಕ ಮಕ್ಕಳೊಂದಿಗೆ ಸುಬ್ಬಣ್ಣನಿಗೆ ಆಪ್ತವಾದ ಇನ್ನೊಬ್ಬ ಗೆಳೆಯ ರೇಡಿಯೋ. ರೇಡಿಯೋಗೂ ಸುಬ್ಬಣ್ಣನಿಗೂ ಗೆಳೆತನ ಆರಂಭವಾದದ್ದು ಕೊಳಲಿನ ಮಧ್ಯಸ್ಥಿಕೆಯಿಂದ. ಕೊಳಲು ಬಾರಿಸುವುದೆಂದರೆ ಸುಬ್ಬಣ್ಣನಿಗೆ ಎಲ್ಲಿ ಲ್ಲದ ಖುಷಿ. ಸುಬ್ಬಣ್ಣನ ಕೊಳಲ ನಿನಾದಕ್ಕೆ ಮಾರು ಹೋಗದವರಿಲ್ಲ. ಪ್ರತಿವರ್ಷ ದಸರಾಕ್ಕೂ ಮೈ ಕೈಗೆಲ್ಲಾ ಕಪ್ಪು ಮಸಿ ಬಳಿದುಕೊಂಡು ಕಿವಿಗೆ ವಾಸ್ತೇವಯ್ಯನ ಮನೆಯ ಚಕ್ಕುಲಿ ಸಿಕ್ಕಿಸಿಕೊಂಡು ಮನೆ ಮನೆಗೆ ತೆರಳಿ ಕೊಳಲು ಬಾರಿಸುವುದು ಸುಬ್ಬಣ್ಣನಿಗೆ ಖುಷಿ ಕೊಡುವ ಹವ್ಯಾಸ. ಸುಬ್ಬಣ್ಣನ ಮೈಕೈಗೆ ರುಕ್ಕುವೇ ತೆಂಗಿನ ಗರಿಯಿಂದ ಕರಿಮಾಡಿ ಎಣ್ಣೆಯಲ್ಲಿ ಬೆರೆಸಿ ಮಸಿ ಹಚ್ಚುತ್ತಿದ್ದಳು. ಹೀಗೆ ಕೊಳಲು ಬಾರಿಸುತ್ತಿದ್ದ ಸುಬ್ಬಣ್ಣ ರೇಡಿಯೋದಲ್ಲಿ ಬರುತ್ತಿದ್ದ ಕೊಳಲು ವಾದನಕ್ಕೆ ಮೈ ಸೋತು ತಾನು ಒಂದು ರೇಡಿಯೋ ಖರೀದಿಸಿ ದಿನಂಪ್ರತಿ ಕೊಳಲು ವಾದನ ಆಲಿಸುತ್ತಿದ್ದ. ಸುಬ್ಬಣ್ಣನಿಗೆ ಕಿವಿ ಸ್ವಲ್ಪ ದೂರ. ಅದಕ್ಕಾಗಿ ಸುಬ್ಬಣ್ಣನ ರೇಡಿಯೋ ಊರವರಿಗೆ ಸದಾ ಕೇಳುತ್ತಲೇ ಇರಬೇಕು. ಒಮ್ಮೊಮ್ಮೆ ರೇಡಿಯೋ ಜೋರಾಗಿ ಹಾಡುತ್ತಿದ್ದರೂ ಸುಬ್ಬಣ್ಣನಿಗೆ ಅದು ಕೇಳದೇ ತಾನು ರೇಡಿಯೋವನ್ನು ಬಂದ್ ಮಾಡಿದ್ದೇ ನೆಂದು ತಿಳಿದು ಮಲಗಿ ಬಿಡುತ್ತಿದ್ದ. ಮಧ್ಯರಾತ್ರಿಯವರೆಗೂ ರೇಡಿಯೋ ದನಿಯಿಂದ ನಿದ್ದಗೆಟ್ಟ ಅಕ್ಕಪಕ್ಕದ ಮನೆಯ ಶೇರೆ ಗಾರ್ ನಾಗರಾಜ, ಅಹ್ಮದಣ್ಣನ ಮನೆಯವರೆಲ್ಲಾ ಮರುದಿನ ಗದರಿದಾಗಲೇ ಮುಂದಿನ ನಾಲ್ಕಾರು ದಿನ ಸುಬ್ಬಣ್ಣ ಎಚ್ಚರ ವಹಿಸುತ್ತಿದ್ದ.

ಇತ್ತೀಚೆಗಂತೂ ಸುಬ್ಬಣ್ಣನ ಕಿವಿ ತುಂಬಾ ದುರ್ಬಲವಾಗಿತ್ತು. ರೇಡಿಯೋ ಸರಿಯಾಗಿ ಮಾತನಾಡುತ್ತಿದ್ದರೂ, ಅದರಿಂದ ಕೇಳಿಸಿಕೊಳ್ಳಲಾಗದ ಸುಬ್ಬಣ್ಣ ರೇಡಿಯೋ ಕೆಟ್ಟಿದೆ ಎಂದು ಅದರ ತಲೆಯ ಮೇಲೆ ಹೊಡೆದೂ ಹೊಡೆದೂ ರೇಡಿಯೋ ನಿಜವಾಗಿಯೂ ಕೆಟ್ಟುಹೋಗಿ ಬಿಡುತ್ತಿತ್ತು. ಮತ್ತೆ ರೀಪೇರಿ ಮಾಡಿ ತಂದ ಮೇಲೆ ಎರಡು ಮೂರು ದಿನಕ್ಕೆ ಸುಬ್ಬಣ್ಣ ಶೆಲ್ ಬದಲಾಯಿಸಬೇಕಿತ್ತು.

ಟಾಮಿ ಮಳ್ಳರೊಂದಿಗೆ ಊಟ ಮುಗಿಸಿದ ಸುಬ್ಬಣ್ಣ ಒಂದು ನಿರ್ಧಾರಕ್ಕೆ ಬಂದಿದ್ದ. ಊಟ ಮಾಡಿ ಎದ್ದವನೇ ಪುಟ್ಟಪ್ಪನ ಮನೆಗೆ ಹೋದ. ಹೆಂಡತಿ ಮಲ್ಲಿಕಾಳೊಂದಿಗೆ ಮಾತನಾಡುತ್ತಾ ಎಲೆಯಡಿಕೆ ಜಗಿಯುತ್ತಿದ್ದ ಪುಟ್ಟಪ್ಪನ ಬಳಿ, ‘ಪುಟ್ಟಪ್ಪ ನಾ ಮದುವೆಯಾಗಬೇಕಲ್ಲ..!’ ಎಂದುಸುರಿದ. ಸುಬ್ಬಣ್ಣ ತಮಾಷೆಗೆ ಹೇಳುತ್ತಿದ್ದಾನೆ ಎಂದುಕೊಂಡ ಪುಟ್ಟಪ್ಪ ‘ಅದಕ್ಕೇನ ಆಗಬೌದು’ ಎಂದು ನಕ್ಕ. ತಾನು ಹೇಳುವುದನ್ನು ಪುಟ್ಟಪ್ಪ ಲಘವಾಗಿ ತೆಗೆದುಕೊಂಡಿದ್ದಾನೆ ಎಂದು ಅರಿವಾದ ಸುಬ್ಬಣ್ಣ ಗಂಭೀರವಾಗಿ ಇನ್ನೊಮ್ಮೆ ತನ್ನ ಇಂಗಿತವನ್ನು ವ್ಯಕ್ತಪಡಿಸಿದ. ಈ ಬಾರಿ ಪುಟ್ಟಪ್ಪನಿಗೆ ಸಿಟ್ಟು, ನಗು ಒಮ್ಮೆಗೆ ಬಂತು. ‘ಏನಾ.. ಈ ವಯಸ್ಸಲ್ಲಿ ನಿನಗೆ ಮದುವೆ, ಹುಚ್ ಗಿಚ್ ಏನಾದರೂ ಹಿಡಿದಿದಿಯ’ ಎಂದು ಗದರಿದ. ಅಲ್ಲಿಂದ ಸುಬ್ಬಣ್ಣ, ಕೃಷ್ಣಪ್ಪನ ಮನೆಗೂ ಪ್ರಭಾಕರ, ಹಸನ್ ಸಾಹೇಬರ ಮನೆಗೂ ಹೋಗಿ ಬಂದು ಅವರಿಂದೆಲ್ಲ ಬೈಸಿಕೊಂಡು ಬಂದ. ಇವರೆಲ್ಲ ತನಗೆ ಏಕೆ ಬೈಯುತ್ತಿದ್ದಾರೆ ಎಂದು ಕಸಿವಿಸಿಗೊಂಡ. ತನಗೇನಾಗಿದೆ ಎಂದು ಸುಬ್ಬಣ್ಣ ನೋಡಿಕೊಳ್ಳಲು ಯೋಚಿಸಿದರೆ ಇದ್ದ ಒಂದೇ ಒಡೆದ ಕನ್ನಡಿಯನ್ನು ಹೋದ ವರ್ಷವೇ ಮಳ್ಳ ಪುಡಿ ಪುಡಿ ಮಾಡಿತ್ತು.

ಪುಟ್ಟಪ್ಪ, ಕೃಷ್ಣ, ಪ್ರಭಾಕರ, ಹಸನ್ ಸಾಹೇಬರು ಸುಬ್ಬಣ್ಣನ ಎದುರಿಗೆ ಬೈದು ಕಳಿಸಿದರೂ ಸುಬ್ಬಣ್ಣ ಒಬ್ಬನೇ ಮನೆಯಲ್ಲಿರುವುದು, ದನಕರುಗಳೆಲ್ಲ ಅನಾಥವಾಗಿರುವುದು ಅವರನ್ನೆಲ್ಲ ಯೋಚಿಸುವಂತೆ ಮಾಡಿದ್ದವು. ಸುಬ್ಬಣ್ಣನಂತೆ ನೊಂದಿರುವ ಯಾವುದಾದರೂ ಒಂಟಿ ಹೆಣ್ಣಿಗಾಗಿ ಅವರು ಶೋಧನೆಗೆ ತೊಡಗಿದರು. ಇವರೆಲ್ಲ ಸುಬ್ಬಣ್ಣನಿಗೆ ಹೆಣ್ಣು ನೋಡುತ್ತಿರುವ ಸುದ್ದಿ ಇಡೀ ಊರಿಗೆ ಹರಡಿ ತಮಗೆ ತಿಳಿದಂತೆ ಮಾತನಾಡ ಹತ್ತಿದರು. ಕೆಲವರ ವ್ಯಂಗ್ಯದ ಮಾತುಗಳು ಸುಬ್ಬಣ್ಣನ ಕಿವಿಗೂ ಬಿದ್ದು ಆತ ಒಳಗೊಳಗೆ ಬಹಳವಾಗಿ ನೊಂದುಕೊಂಡ. ಮತ್ತೆ ಮರುಕ್ಷಣವೇ ಜನರ ಮಾತು ತನ್ನ ಮಕ್ಕಳಿಗೆ ಹೊಟ್ಟೆ ತುಂಬಿಸುವುದಿಲ್ಲ ಎಂದು ಸಮಾಧಾನ ಮಾಡಿಕೊಂಡ.
ಸುಬ್ಬಣ್ಣನಿಗೊಂದು ಹೆಣ್ಣು ನೋಡುವುದರಲ್ಲಿ ಸುಬ್ಬಣ್ಣನ ಹಿತೈಷಿಗಳು ಕೊನೆಗೂ ಸಫಲರಾದರು. ಹದಿನಾಲ್ಕನೆ ಮೈಲಿಕಲ್ಲಿ ನಲ್ಲಿ ಸುಬ್ಬಣ್ಣನಂತೆ ಒಂಟಿಯಾಗಿದ್ದ ವಿಧವೆ ಮಿಣುಕು ಸುಬ್ಬಣ್ಣ ನನ್ನು ನೋಡಲು ಒಪ್ಪಿದಳು. ಪುಟ್ಟಪ್ಪ ಮತ್ತು ಸ್ನೇಹಿತರಿಗೆ ಮಾತು ಕೊಟ್ಟಂತೆ ತೀರ್ಥಹಳ್ಳಿ ಸಂತೆಯ ದಿನ ಮಿಣುಕು ಊರಿಗೆ ಬಂದಿಳಿದಳು.

ಮೊದಲೇ ತಿಳಿಸಿದಂತೆ ಪುಟ್ಟಪ್ಪನ ಮನೆಗೆ ಹೋದ ಮಿಣುಕು ಅಲ್ಲಿಂದ ಕೃಷ್ಣಪ್ಪ, ಪ್ರಭಾಕರ, ಹಸನ್ ಸಾಹೇಬರನ್ನು ಕರೆದುಕೊಂಡು ಸುಬ್ಬಣ್ಣನ ಮನೆಗೆ ಬಂದಳು. ಹಿಂದಿನ ಸಂತೆಗಳಲ್ಲಿ ಸುಬ್ಬಣ್ಣನನ್ನು ಮಿಣುಕು ಮೊದಲೇ ನೋಡಿದ್ದಳು. ಸುಬ್ಬಣ್ಣನೂ ಮಿಣುಕುವನ್ನು ನೋಡಿದ್ದರೂ ಮಾತನಾಡಿಸಿರ ಲಿಲ್ಲ. ಪುಟ್ಟಪ್ಪ, ಪ್ರಭಾಕರ, ಮಿಣುಕುವಿಗೆ ಸುಬ್ಬಣ್ಣನ ಮನೆಯ ಪರಿಸ್ಥಿತಿಯನ್ನು ವಿವರಿಸಿ ಸುಬ್ಬಣ್ಣನ ಗುಣ ಗಳನ್ನು ಹೊಗಳಿ ಸುಬ್ಬಣ್ಣನನ್ನು ಚೆನ್ನಾಗಿ ನೋಡಿ ಕೊಳ್ಳಬೇಕೆಂದು ಒಪ್ಪಿಸಿದರು. ಅದಕ್ಕೆಲ್ಲ ‘ಹ್ಹು...ಹ್ಹು...’ ಎಂದು ತನ್ನ ಸಮ್ಮತಿ ಸೂಚಿಸಿದಳು ಮಿಣುಕು. ಪುಟ್ಟಪ್ಪ ಮತ್ತು ಸ್ನೇಹಿತರು ತಮ್ಮ ಕೆಲಸ ಆಯಿತೆಂದು ಕೊಂಡು ನಿರ್ಗಮಿಸಿದರು. ಪುಟ್ಟಪ್ಪ ಮತ್ತು ಸ್ನೇಹಿತರು ಹೋದೊಡನೆ ಸುಬ್ಬಣ್ಣನ ಬಳಿ ಬಂದು ವೈಯಾರದಿಂದ ಅದೂ ಇದೂ ಮಾತನಾಡುತ್ತಾ ಮಿಣುಕು ಕೇಳಿದಳು ‘ಇಲ್ಲಿ ತನಕ ಎಷ್ಟು ಕಾಸು ಕೂಡಿಸಿದ್ದಿ? ಸುಬ್ಬಣ್ಣನಿಗೆ ಒಂದು ಕ್ಷಣ ಕಸಿವಿಸಿಯಾ ದರೂ ‘ನಾವು ಬಾಳುದೆ ಕಷ್ಟಾಗಿದೆ, ಇನ್ನೆಲ್ಲಿ ಕಾಸು ಕೂಡಿ ಸೋದು’ ಎಂದು ನಗೆ ಬೀರಿದ. ಸುಬ್ಬಣ್ಣನ ಉತ್ತರದಿಂದ ನಿರುತ್ಸಾಹ ಗೊಂಡ ಮಿಣುಕು ಪುಟ್ಟಪ್ಪ ಮತ್ತು ಮಿತ್ರರಿಗೂ ಹೇಳದೆ ತೀರ್ಥಹಳ್ಳಿ ಬಸ್ಸಿಡಿದು ಹೋಗಿಬಿಟ್ಟಳು.

ಮಿಣುಕುವನ್ನು ನೆನೆದು ಜುಗುಪ್ಸೆಗೊಂಡು ಸುಬ್ಬಣ್ಣನಿಗೆ ರುಕ್ಕುವಿನ ನೆನಪು ಮತ್ತೆ ಕಾಡಿತು. ಅದರೊಂದಿಗೆ ತನ್ನ ನಿರ್ಲಕ್ಷ ದಿಂದ ಸೋತು ಸಣ್ಣಗಾಗಿರುವ ತಿಮ್ಮಿ, ಟಾಮಿ, ಸೋಮಿ, ಮಳ್ಳ, ಬುಡ್ಡ, ಬೋಳಿಯರನ್ನು ನೋಡಿ ಸುಬ್ಬಣ್ಣನ ವೇದನೆ ಇನ್ನೂ ತೀವ್ರವಾಯಿತು. ದುಃಖವನ್ನು ಮರೆಯಲು ಕೊಳಲಿಡಿದು ಜೋಗಿಗುಡ್ಡಕ್ಕೆ ತೆರಳಿದ. ಮುಂಜಾನೆಯಿಂದ ಸಂಜೆಯವರೆಗೂ ತ್ರಾಣವಿದ್ದಾಗಲೆಲ್ಲ ಕೊಳಲೂದಿ ಸುಸ್ತಾದರೂ ಮನಸ್ಸು ಶಾಂತವಾದಂತಾಗಿ ಏಳುತ್ತಾ, ಬೀಳುತ್ತಾ ಮನೆಗೆ ಮರಳಿದ. ಜೋರಾಗಿ ಹಸಿವಾಗುತ್ತಿದ್ದರೂ ಗಂಜಿ ಬೇಯಿಸಲು ಸುಬ್ಬಣ್ಣನಲ್ಲಿ ಶಕ್ತಿ ಇರಲಿಲ್ಲ. ಕೊಟ್ಟಿಗೆಯಲ್ಲಿ ತಿಮ್ಮಿ ಸೋಮಿಯರು ಅತ್ತಂತೆ ಆಂಯ್ಗರೆಯುತ್ತಿದ್ದವು. ಬುಡ್ಡ ಬೋಳಿಯರು ಧ್ಯಾನಸ್ಥವಾಗಿದ್ದವು. ಮಳ್ಳ-ಟಾಮಿ ಸುಬ್ಬಣ್ಣನ ಪಕ್ಕ ಕುಳಿತು ಆಕಳಿಸುತ್ತಿದ್ದವು. ತನ್ನಂತೆ ಹಸಿದ ಮಕ್ಕಳನ್ನು ಕಂಡು ಸುಬ್ಬಣ್ಣನ ಕರುಳು ಕತ್ತರಿಸಿದಂತಾ ಯಿತು. ಇವಕ್ಕೆಲ್ಲಾ ಹೊಟ್ಟೆಗೆ ಹಾಕಲಾಗದವನು ಸತ್ತು ಹೋಗ ಬಾರದೆ ಎಂದು ಎಣಿಸಿದ. ಸಾವಿನೊಂದಿಗೆ ಬಂದ ರುಕ್ಕುವಿನ ನೆನಪು ಸುಬ್ಬಣ್ಣನನ್ನು ಇನ್ನಷ್ಟು ಕಲಕಿತು. ರುಕ್ಕುವಿಗೆ ಸಾವು ಕೊಟ್ಟ ದೇವರು ನನಗೆ ಅನ್ಯಾಯ ಮಾಡಿದ ಎಂದು ದೇವರನ್ನು ಬೈದ. ಯಾರಿಗೂ ಬೈದರೂ ಏನೂ ಆಗದಿದ್ದಕ್ಕೆ ಮತ್ತಷ್ಟು ವ್ಯಗ್ರನಾದ. ಕೋಪ ದುಃಖಗಳಿಂದ ಕುದಿಯತೊಡಗಿದ ಸುಬ್ಬಣ್ಣನ ಮನದಲ್ಲಿ ಒಂದು ಭಯಾನಕ ಯೋಜನೆ ಸಿದ್ಧಗೊಳ್ಳತೊಡಗಿತು.

ಕುಳಿತಲ್ಲಿಯೇ ತನ್ನ ಯೋಜನೆಗೆ ಬೇಕಾದ ವಸ್ತುವನ್ನು ಎಲ್ಲಿದೆ ಎಂದು ಸುಬ್ಬಣ್ಣ ಅವಲೋಕಿಸತೊಡಗಿದ. ಕಡಿಮಾಡಿನಲ್ಲಿ ಅದು ಗೋಚರಿಸುತ್ತಿದ್ದಂತೆಯೇ ನಿಟ್ಟುಸಿರಿಟ್ಟು ಟಾಮಿ, ಮಳ್ಳರನ್ನು ಹೊರಗೆ ಅಟ್ಟಿ ಬಾಗಿಲು ಹಾಕಿ ಬಂದ. ಸುಬ್ಬಣ್ಣನ ಮನಸ್ಸಿನಲ್ಲಿ ಯೋಜನೆ ಕಾಯ ರೂಪಕ್ಕಿಳಿಯತೊಡಗಿತು. ಮೂಲೆಯಲ್ಲಿದ್ದ ಖಾಲಿ ಅಕ್ಕಿಡಬ್ಬವನ್ನು ಈಚೆಗೆಳೆದುಕೊಂಡು ಅದರ ಮೇಲೆ ಹತ್ತಿ ಕಡಿಮಾಡಿನಲ್ಲಿ ಬೆಂಗ್ಟೆಗೆ ಸಿಕ್ಕಿಸಿದ್ದ ಸಪ್ಪಿನ ಹಗ್ಗವನ್ನು ಅದೇ ಮಾಡಿನಲ್ಲಿ ಸ್ವಲ್ಪ ಎತ್ತರಕ್ಕೆ ಕಟ್ಟಿದ. ಇನ್ನೊಂದು ಕೊನೆಯನ್ನು ಉರುಳಾಗಿಸಿದ. ಕೊಟ್ಟಿಗೆಗೆ ಹೋಗಿ ತಿಮ್ಮಿ ಸೋಮಿಯರನ್ನು ನೇವರಿಸಿ ಬಂದ. ಹಿತ್ತಲ ಬಾಗಿಲಿನಿಂದಲೇ ಮುಂದುಗಡೆ ಹೋಗಿ ಟಾಮಿ ಮಳ್ಳರನ್ನು ಅವುಚಿಕೊಂಡು, ಬುಡ್ಡ ಬೋಳಿಯರನ್ನು ಎತ್ತಿಕೊಂಡು ಕೆಳಗೆ ಬಿಟ್ಟು ಪುನಃ ಹಿಂಬಾಗಿಲಿನಿಂದ ಒಳಸೇರಿದ.

ಅಕ್ಕಿ ಡಬ್ಬವನ್ನು ಹತ್ತಿ, ಸಪ್ಪಿನ ಹಗ್ಗದ ಮುಂದೆಬಂದು ಕೊನೆಯದಾಗಿಯೆಂಬಂತೆ ರುಕ್ಕುವನ್ನು ನೆನಸಿಕೊಂಡ. ರುಕ್ಕುವನ್ನು ನೆನಸುವುದಕ್ಕೂ ಯಾರೋ ದಬದಬನೆ ಬಾಗಿಲು ಬಡಿಯುವು ದಕ್ಕೂ ಸರಿಹೋಯಿತು. ನಿಧಾನಕ್ಕೆ ಬಡಿದರೆ ಸುಬ್ಬಣ್ಣನಿಗೆ ಕೇಳುವುದಿಲ್ಲ ಎಂದು ಹೊರಗಿದ್ದ ವ್ಯಕ್ತಿ ತಿಳಿದಿದ್ದಂತೆ ಕಾಣುತ್ತದೆ. ‘ಈ ಜನ ಸಾಯಲಿಕ್ಕೂ ಬಿಡುವುದಿಲ್ಲ’ ಎಂದು ಬೈದುಕೊಂಡ ಸುಬ್ಬಣ್ಣ ಹಗ್ಗವನ್ನು ಬಿಚ್ಚಿ ಯಥಾ ಸ್ಥಾನದಲ್ಲಿಟ್ಟು ಒಂದು ಬಾಗಿಲು ತೆರೆದ.

ಅಹ್ಮದಣ್ಣನ ಪುಟ್ಟ ಮಗಳು ಝೀನತ್ ತಟ್ಟೆಯಲ್ಲಿ ಊಟ ಹಿಡಿದು ನಿಂತಿದ್ದಳು. ಯಾಕೆ ಪಾಪು ಎಂದ ಸುಬ್ಬಣ್ಣ ಕ್ಷೀಣ ಸ್ವರದಲ್ಲಿ
‘ಊಟಕ್ಕೆ’ ಎಂದು ನಕ್ಕ ಝೀನತ್ ತಟ್ಟೆಯಿಟ್ಟು ಹಿಂದಿರುಗಿ ದಳು.

ಸುಬ್ಬಣ್ಣನ ಕೋಪ-ತಾಪ ದುಃಖಗಳೆಲ್ಲ ನಿಧಾನವಾಗಿ ಕರಗತೊಡಗಿದವು.

ಸುಬ್ಬಣ್ಣನ ಕಣ್ಣಲ್ಲಿ ಸ್ವಲ್ಪ ಹೊಳಪು ಮಿಂಚತೊಡಗಿತು.

Thursday, July 23, 2009

ಬಾಬ್ರಿ ಮಸೀದಿ ಕಹಿನೆನಪು: ಅಂದಿನ India Today ಛಾಯಾಚಿತ್ರಗ್ರಾಹಕ ಪ್ರಶಾಂತ ಪಂಜಿಯಾರ್‌ರ ಒಂದು ಅನುಭವ

ಪ್ರಶಾಂತ ಪಂಜಿಯಾರ್
(ಛಾಯಾಚಿತ್ರಗ್ರಾಹಕ)
ಕನ್ನಡಕ್ಕೆ: ಗೋಪಾಲ ಬಿ. ಶೆಟ್ಟಿ

೧೯೯೨, ಡಿಸೆಂಬರ್ ೫; ಎಲ್.ಕೆ.ಅಡ್ವಾಣಿ ಯವರ ಲಕ್ನೋ ರ‍್ಯಾಲಿಯ ಛಾಯಾಚಿತ್ರಣ ವನ್ನು ತೆಗೆಯುವ ಹೊಣೆ ನನಗೆ ವಹಿಸಿ ಕೊಡಲಾಗಿತ್ತು. ಉತ್ತರ ಪ್ರದೇಶದ ಬಿಜೆಪಿಯ ಎಲ್ಲ ಮುಖಂಡರು ಆ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ಕಾರಣಕ್ಕಾಗಿ India Today ಅಡ್ವಾಣಿಯವರನ್ನು ಹಿಂಬಾಲಿಸಲು ನನಗೆ ಸೂಚನೆ ನೀಡಿತ್ತು. ಎಲ್ಲ ಭಾಷಣಗಳು ಮುಗಿದ ಮೇಲೆ ಆ ದಿನ ರಾತ್ರಿ ಎಲ್ಲ ಪತ್ರಕರ್ತರು ಹೊರಟು ಹೋದರು. ನನಗೇಕೋ ಅಲ್ಲಿಯೇ ನಿಲ್ಲಬೇಕೆನಿಸಿತು. ನಾನು ಅಡ್ವಾಣಿ ಯವರನ್ನು ಹಿಂಬಾಲಿಸಿದೆ. ಅವರು ಕಲ್ಯಾಣ್ ಸಿಂಗ್ ಅವರ ಮನೆಗೆ ಹೋದರು. ಅಲ್ಲಿ ನನ್ನ ಹೊರತು ಬೇರೆ ಯಾರೂ ಛಾಯಾಚಿತ್ರ ಗ್ರಾಹಕರು ಇದ್ದಿಲ್ಲ. ಅವರು ನನ್ನನ್ನು ಒಳಗೆ ಹೋಗಲು ಅನುಮತಿ ಕೊಟ್ಟರು. ಪ್ರಮುಖ ಬಿಜೆಪಿ ಮುಖಂಡರಾದ ಅಟಲ್‌ಬಿಹಾರಿ ವಾಜಪೇಯಿ, ಮುರಳೀ ಮನೋಹರ ಜೋಶಿ ಮುಂತಾದವರು ಒಂದು ಕೊಠಡಿಯಲ್ಲಿ ಬಿರುಸಿನ ಮಾತುಕತೆ ನಡೆಸುತ್ತಿದ್ದರು.

ಸುಮಾರು ಮಧ್ಯರಾತ್ರಿ ಹೊತ್ತು ಮನೆ ಯಿಂದ ಹೊರಗೆ ಬಂದಾಗ “ನೀವು ನಾಳೆ ಎಷ್ಟು ಹೊತ್ತಿಗೆ ಅಯೋಧ್ಯೆಗೆ ಹೊರಡುತ್ತಿದ್ದೀರಿ?” ಎಂದು ಕೇಳಿದೆ. ‘ಈಗ ತಾನೆ ಹೊರ ಡಲಿದ್ದೇನೆ’, ಇದು ಅವರ ಉತ್ತರ. ಕೂಡಲೇ ವಾಜಪೇಯಿ ಹೊರಗೆ ಬಂದರು. ಅವರಿಗೆ ದೆಹಲಿಗೆ ಹೋಗಬೇಕಾಗಿತ್ತು. ಏನೋ ಅವರೆಲ್ಲ ನಿರೀಕ್ಷಿಸಿದಂತೆ ನಡೆದಿಲ್ಲ ವೆನ್ನುವ ಅನುಮಾನ. ನಾನು ನನ್ನ ಸಹೋದ್ಯೋಗಿ ವರದಿಗಾರನನ್ನು ಕೂಡಿ ಕೊಂಡು ಹೊರಗೆ ಬಂದೆ.

ಅಡ್ವಾಣಿಯವರನ್ನು ನಾವು ಅಯೋಧ್ಯೆಯಲ್ಲಿ ಮಹಂತ ಪರಮಹಂಸರ ಆಶ್ರಮದಲ್ಲಿ ಬಜರಂಗದಳದ ವಿನಯ ಕಟಿಯಾರ್, ವಿಶ್ವ ಹಿಂದೂ ಪರಿಷತ್ತಿನ ಅಶೋಕ್ ಸಿಂಘಾಲ್, ಸಂಘ ಪರಿವಾರದ ಹೆಚ್.ವಿ. ಶೇಷಾದ್ರಿಯವರೊಡನೆ ಕುಳಿತಿರುವುದನ್ನು ನೋಡಿದೆವು. ಕರಸೇವಕರು ಬಾಬ್ರಿ ಮಸೀದಿಯನ್ನು ಖಂಡಿತ ವಾಗಿಯೂ ಉರುಳಿಸುವ ನಿರ್ಧಾರಕ್ಕೆ ಬಂದಂತೆ ನಮಗೆ ಕಂಡು ಬಂತು.

ಅಡ್ವಾಣಿಯವರು ಆಶ್ರಮದಿಂದ ಹೊರಗೆ ಬಂದಾಗ ನಾನು ಅವರನ್ನು ಹಿಂಬಾಲಿಸಿದೆ. ಬಿಜೆಪಿ ಮತ್ತು ಇತರ ವಿ‌ಎಚ್‌ಪಿ ಪ್ರಮುಖ ರೊಡನೆ ಅವರು ಮೊದಲೇ ಸಿದ್ಧಗೊಳಿಸಿದ ವೇದಿಕೆಯ ಹತ್ತಿರ ಬಂದರು; ವಾದಗ್ರಸ್ಥವಾದ ಮಂದಿರ ಆ ವೇದಿಕೆಯ ಎದುರುಗಡೆ ಇತ್ತು. ಅಲ್ಲಿ ಸಾಂಕೇತಿಕವಾಗಿ ಪೂಜೆ ನಡೆಸುವ ಸಲುವಾಗಿ ಆ ಸ್ಥಳವನ್ನು ಅವರು ವಿಕ್ಷಿಸುತ್ತಿದ್ದರು. ಪೂರ್ವಾಹ್ನ ೧೧.೩೦ರ ಹೊತ್ತಿಗೆ “ಜೈ ಶ್ರೀರಾಮ್” ಮಂತ್ರ ಪಠಣ ಪ್ರಾರಂಭವಾಗ ಬೇಕಿತ್ತು. ಸುಮಾರು ೨೦೦ ಮೀಟರ್ ದೂರದ ರಾಮಕಥಾ ಕುಂಜದ ಕಟ್ಟಡದ ಟೆರೇಸ್‌ನ ಮೇಲೆ ಒಂದು ದೊಡ್ಡ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು. ಅಡ್ವಾಣಿ ವೇದಿಕೆಯ ಕಡೆಗೆ ಹೊರಟು ನಿಂತರು, ನಾನು ಅವರನ್ನು ಹಿಂಬಾಲಿಸಿದೆ. ಟೆರೇಸ್‌ನ ಒಂದು ಮೂಲೆ ಯಲ್ಲಿ ಬಾಬ್ರಿ ಮಸೀದಿಯ ಗುಮ್ಮಟಗಳನ್ನು ನಾನು ನೋಡಿದೆ. ಅದರ ಹೊರತು ಬೇರೇನೂ ನನ್ನ ಕಣ್ಣಿಗೆ ಬೀಳಲಿಲ್ಲ.

ಸಂಘ ಪರಿವಾರದ ಎಲ್ಲ ಮುಖಂಡರು- ಉಮಾಭಾರತಿ ಸಾಧ್ವಿ ಋತಾಂಬರ ವಿಜಯ ರಾಜೆ ಸಿಂಧಿಯಾ, ಎಮ್.ಎಮ್.ಜೋಶಿ, ಶೇಷಾದ್ರಿ, ಅಡ್ವಾಣಿ, ಪ್ರಮೋದ್ ಮಹಾಜನ್ ವೇದಿಕೆಯ ಮೇಲೆ ಆಸೀನರಾಗಿರುವುದನ್ನು ನಾನು ನೋಡಿದೆ. ನಾನು ವಿಶ್ವಹಿಂದೂ ಪರಿ ಷತ್ತಿನ ಛಾಯಾ ಚಿತ್ರಗ್ರಾಹಕನೆಂದು ಅವರು ಊಹಿಸಿದ್ದರು. ಹಾಗಾಗಿ ನನಗೆ ಒಳಗೆ ಇರಲು ಅನುಮತಿ ಸಿಕ್ಕಿತು. ಉಳಿದ ಹೆಚ್ಚಿನ ಛಾಯಾ ಚಿತ್ರಗ್ರಾಹಕರು ಪೂಜೆ ನಡೆಯುವ ಶಿಬಿರದ ಹತ್ತಿರವೇ ಇದ್ದರು.

ಬಾಬ್ರಿ ಮಸೀದಿ ಧ್ವಂಸ ಮಾಡುವ ಮುಹೂರ್ತ ಸಮೀಪಿಸುತ್ತಿತ್ತು. ಇತ್ತ ವೇದಿಕೆಯಲ್ಲಿ ಕುಳಿತಿದ್ದ ಅಡ್ವಾಣಿ ಮತ್ತು ಶೇಷಾದ್ರಿ ಕಂಗಾಲಾದಂತೆ ಕಂಡು ಬಂದರು. ಪೂಜೆ ಪ್ರಾರಂಭವಾಯಿತು. ಅಂತೆಯೇ ಭಾಷಣಗಳು. ಸುಮಾರು ಬೆಳಗ್ಗೆ ೧೧.೩೦ಕ್ಕೆ ಸರಿ ಯಾಗಿ ಜನರು ಗುಂಬಜದ ಮೇಲೆ ಹತ್ತಲಾರಂಭಿಸಿದರು. ಫೊಟೋ ಗ್ರಾಫರ‍್ಸ್ ಕ್ಲಿಕ್ ಮಾಡಲು ಅಣಿಯಾದರು. ಕರ ಸೇವಕರು ಅವರ ಮೇಲೆ ಏರಿ ಬಂದರು. ಎಲ್ಲ ಛಾಯಾಗ್ರಾಹಕರನ್ನು ಒಂದು ಕೊಠಡಿಯೊಳಗೆ ಕೂಡಿ ಹಾಕಿ ಬೀಗ ಹಾಕಲಾಯಿತು. ಪ್ರತಿಭಟಿಸಿದವರನ್ನು ಥಳಿಸಲಾಯಿತು. “ಹೊರಗೆ ಬರಲು ಮುಂದಾದರೆ ನಿಮ್ಮ ಕಾಲುಗಳನ್ನು ಮುರಿ ದೇವು” ಎಂದು ಎಚ್ಚರಿಕೆ ಕೊಡಲಾಯಿತು.

ಗುಂಬಜದ ಸ್ಪಷ್ಟ ಕ್ಷಣೆಯನ್ನು ನನ್ನ ಹೊರತಾಗಿ ಬೇರೆ ಯಾವ ಛಾಯಾಗ್ರಾಹಕನಿಗೂ ಮಾಡಲು ಸಾಧ್ಯವಾಗಲಿಲ್ಲ. ಕಬ್ಬಿಣದ ಸಲಾಕೆಗಳಿಂದ ಜನರು ಗುಂಬಜಗಳನ್ನು ಒಡೆ ಯುತ್ತಿದ್ದರು. ಇತ್ತ ವೇದಿಕೆಯಲ್ಲಿ ಆಸೀನರಾದವರು ಗಹಗಹಿಸಿ ನಗುತ್ತಿದ್ದರು. ಹಠಾತ್ತನೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಬಜದ ತುತ್ತ ತುದಿಗೆ ಏರಿ ಬಂದರು. ಇದು ದಾಳಿಯ ಪರಮಾವಧಿಯೆಂದು ನಾನು ಊಹಿಸಿದೆ. ನಾನು ಅಡ್ವಾಣಿ ಮತ್ತು ಶೇಷಾದ್ರಿಯ ಮುಖವನ್ನು ನೋಡಿದೆ. ಅವರ ಮುಖ ಗೊಂದಲಕ್ಕೀಡಾದವರಂತೆ ಕಂಡುಬಂತು. ಸ್ವಲ್ಪ ಹೊತ್ತಿನ ಅನಂತರ ಅವರು ಬೆರಗು ಕಣ್ಣುಗಳಿಂದ ಬಾಯಿ ತೆರೆದು ಗುಂಬಜದ ಕಡೆಗೇ ನೋಡುತ್ತಿದ್ದರು. ಅವರೊಟ್ಟಿಗಿದ್ದ ಇತರ ಮುಖಂಡರು ಖುಶಿಯಲ್ಲಿದ್ದಂತೆ ಕಂಡು ಬಂತು. ಇದೀಗ ಅಡ್ವಾಣಿಯವರು ವಿಹೆಚ್‌ಪಿ ಧುರೀಣರ ಕಡೆಗೆ ಮುಖಮಾಡಿ “ಸಾಕು ಇನ್ನು ಅವರನ್ನು ಕೆಳಗೆ ಬರಲು ಹೇಳಿ” ಎಂದು ಸನ್ನೆ ಮಾಡುವಂತೆ ಕಂಡು ಬಂತು. ಆದರೆ ಇತರರಿಗೆ ಇಷ್ಟರಲ್ಲಿಯೇ ತೃಪ್ತಿಯಾಗಲಿಲ್ಲ; ಅವರಿಗೆ ಇನ್ನೂ “ಹೆಚ್ಚು”ಮಾಡಬೇಕಾಗಿತ್ತು.

ಪ್ರಾಯಶಃ ಕರಸೇವಕರು ಬಿಜೆಪಿ ಮುಖಂಡರ ಮಾತನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ವೆನ್ನುವ ಸುದ್ದಿ ಅವರಿಗೆ ಮೊದಲೇ ಮುಟ್ಟಿರಬಹುದು; ಈ ಕಾರಣಕ್ಕಾಗಿ ವಾಜಪೇಯಿ ದೆಹಲಿಗೆ ಹೊರಟು ಹೋದರು. ಆದರೆ ಅಡ್ವಾಣಿ ಅಯೋಧ್ಯೆಗೆ ಕೂಡಲೇ ಹೊರಟರು; ಕಲ್ಯಾಣಸಿಂಗ್ ಲಕ್ನೋದಲ್ಲಿಯೇ ಉಳಿದುಕೊಂಡರು. ಪ್ರಾಯಶಃ ಅಡ್ವಾಣಿಯವರಿಗೆ ರಾಮ ಜನ್ಮಭೂಮಿ ಆಂದೋಲನದವರು “ಮಸೀದಿಯನ್ನು ಉರುಳಿಸುವುದಿಲ್ಲ. ಆದರೆ ಗಲಭೆಯನ್ನು ಉಂಟುಮಾಡುತ್ತೇವೆ”ಎಂದು ಭರವಸೆ ಕೊಟ್ಟಿರಲೂಬಹುದು. ಆದರೆ ಅಡ್ವಾಣಿಯವರು ಈ ಆಪಾದನೆಯಿಂದ ದೋಷ ಮುಕ್ತರಾಗಲು ಸಾಧ್ಯವಾಗಲಾರದು.

ಈ ಮಧ್ಯೆ ಇತರರು ಬಹಳಷ್ಟು ಸಂತೋಷದಿಂದ ಗಹಗಹಿಸಿ ನಗುತ್ತಿದ್ದರು.

ಮೊದಲನೆಯ ಗುಂಬಜವು ಬಿರುಕುಬಿಟ್ಟಾಗ ಉಮಾಭಾರತಿ, ಸಾಧ್ವಿ ಋತಾಂಬರ ಮತ್ತು ಸಿಂಧಿಯಾ ಕೇಕೇ ಹಾಕುತ್ತ ನಗುತ್ತಿದ್ದರು. “ಇನ್ನೊಂದು ಹೊಡೆತ ಬಲವಾಗಿ; ಬಾಬ್ರಿ ಮಸೀದಿ ಒಡೆದು ಹಾಕಿ” ಎಂದು ಕರಸೇವಕರಿಗೆ ಅವರು ಹುರಿದುಂಬಿಸುತ್ತಿದ್ದರು.

ಹೆಚ್ಚಿನ ಫೊಟೋಗ್ರಾಫರ‍್ಸ್‌ಗೆ ಕರಸೇವಕರಿಂದ ಏಟು ಬಿದ್ದ ವಾರ್ತೆ ಇದೀಗ ಮತ್ತೆ ನನಗೆ ಮುಟ್ಟಿತು. ಗುಂಬಜಗಳು ಉರುಳಿ ಬೀಳುವ ದೃಶ್ಯವನ್ನು ಫೊಟೋ ತೆಗೆದವನು ನಾನೊಬ್ಬ ಮಾತ್ರ ಎಂದು ನನಗೆ ಮನವರಿಕೆಯಾಯಿತು; ಇನ್ನು ನಾನು ಜಾಗರೂಕ ನಾಗಿ ಇರಬೇಕೆಂದು ನಿರ್ಧರಿಸಿದೆ. ಸುಮಾರು ಮಧ್ಯಾಹ್ನದ ಹೊತ್ತಿಗೆ ಗುಂಬಜಗಳು ಪೂರ್ಣಾಹುತಿಗೆ ಒಳಗಾದವು. ಮಸೀದಿಗಳ ಒಳಗಿನಿಂದ ಜನರು ದೊಡ್ಡ ಕಂಬಗಳನ್ನು ಹೊರಗೆ ಕೊಂಡೊಯ್ಯುತ್ತಿರುವುದನ್ನು ನಾನು ನೋಡಿದೆ. ಈ ಮಧ್ಯೆ ‘ಏನೆಲ್ಲ ನಡೆಯಿತು ನೋಡಿ ಬಾ’ ಎಂದು ಅಡ್ವಾಣಿ ಪ್ರಮೋದ್ ಮಹಾಜನ್‌ಗೆ ಹೇಳುವುದನ್ನು ನಾನು ಗುಟ್ಟಾಗಿ ಆಲಿಸಿದೆ. ಅಡ್ವಾಣಿಯವರು ವೇದಿಕೆ ಬಿಟ್ಟು ಕದಲಲಿಲ್ಲ. ಆದರೆ ಇತರ ಮುಖಂಡರು ಅತ್ತಿಂದಿತ್ತ ಸುತ್ತಾಡುತ್ತಿದ್ದರು. ಮಹಾಜನ್ ಮತ್ತೆ ತಿರುಗಿ ಬಂದರು. ಏನು ಮಾಡಲೂ ಸಾಧ್ಯವಿಲ್ಲ; ಹಿಂದಿನಿಂದ ಹಗ್ಗವನ್ನು ಕಟ್ಟಿಯಾಗಿದೆ; ಅವರು ಗುಂಬಜಗಳನ್ನು ಉರು ಳಿಸುತ್ತಾರೆ’ ನಾನು ಗುಟ್ಟಾಗಿ ಈ ಮಾತನ್ನು ಆಲಿಸಿದೆ.

ಮಧ್ಯಾಹ್ನದ ಹೊತ್ತು ತಡೆಯಲಾರದ ಸೆಕೆ. ನಾನು ಆಹಾರ ನೀರಿಲ್ಲದೆ ಇಡೀ ದಿನ ಅಲ್ಲಿಯೇ ಇದ್ದೆ. ನಾನು ಕುರ್ಚಿಯಲ್ಲಿ ತಲೆತಗ್ಗಿಸಿ ಕುಳಿತೆ. ಒಬ್ಬ ಸ್ವಾಮಿ ನನ್ನ ಹತ್ತಿರ ಬಂದು “ತಲೆ ತಗ್ಗಿಸಿ ಏಕೆ ಕುಳಿತಿದ್ದಿಯಾ? ನಿನಗೇನು ಖುಶಿಯಾಗಲಿಲ್ಲವೆ. (ಧ್ವಂಸವಾದದ್ದು)?” ಕೇಳಿದ. ಸುಮಾರು ಸಂಜೆ ೪.೩೦ಕ್ಕೆ ಎರಡು ಗುಂಬಜಗಳು ಉರುಳಿಬಿದ್ದವು. ಈ ದೃಶ್ಯವನ್ನು ನಾನು ಫೊಟೋ ತೆಗೆದೆ.

ಏಟು ತಿಂದ ಕೆಲವು ಛಾಯಾಗ್ರಾಹಕರು ತಪ್ಪಿಸಿಕೊಂಡು ವೇದಿಕೆಯ ಹತ್ತಿರಕ್ಕೆ ಬಂದರು. ನಾನು ಒಬ್ಬನಿಂದ ಒಂದು ದೊಡ್ಡದಾದ ಲೆನ್ಸ್ ತೆಗೆದುಕೊಂಡೆ. ಅವನ ಕ್ಯಾಮೆರಾ ಒಡೆದು ಹೋಗಿತ್ತು. ಆತ ತುಂಬ ಹತಾಶನಾಗಿದ್ದ. ದೊಡ್ಡದಾದ ಈ ಲೆನ್ಸ್‌ನಿಂದ ಎರಡನೆಯ ಗುಂಬಜ ಬೀಳುವ ದೃಶ್ಯವನ್ನು ನಾನು ಸೆರೆಹಿಡಿದೆ. ಅದು ವಾಲುತ್ತ ನಿಧಾನವಾಗಿ ನೆಲಕ್ಕೆ ಅಪ್ಪಳಿಸಿತು. ಧೂಳಿನ ಪದರು ಸುತ್ತ ಪಸರಿಸಿತು. ಆ ಗುಂಬಜ ವಾಲುತ್ತ ಕೆಳಗೆ ಅಪ್ಪಳಿಸುವ ದೃಶ್ಯ ಅಚ್ಚಳಿಯದೆ ಮನಸ್ಸಿನಲ್ಲಿ ಉಳಿಯುವಂತಹದು. ವೇದಿಕೆಯ ಮೇಲೆ ಎಲ್ಲಿಲ್ಲದ ಹರ್ಷೋಲ್ಲಾಸ. ಈ ಕಡೆ ನಗರದ ಬಾನಂಗಳದಲ್ಲಿ ಮುಸುಕಾದ ಹೊಗೆ! ಒಬ್ಬ ಆಚಾರ್ಯ ಧ್ವನಿವರ್ಧಕದಲ್ಲಿ ಹೇಳಿದ, “ಈ ಮುಸ್ಲಿಮರನ್ನು ನೋಡಿ; ಅವರು ತಮ್ಮ ಮನೆಗಳಿಗೆ ತಾವೇ ಬೆಂಕಿ ಹಚ್ಚಿ ವೈರತ್ವವನ್ನು ಹರಡಲು ಹೊರಟಿದ್ದಾರೆ ”. ಕರಸೇವಕರು ರೊಚ್ಚಿಗೆದ್ದರು. ಇದು ಕೋಮು ಹತ್ಯೆಗೆ ನಾಂದಿ ಹಾಡಿತು. ಇಡೀ ಆಕಾಶ ಹೊಗೆ ಮತ್ತು ಬೆಂಕಿ ಜ್ವಾಲೆಯಿಂದ ಆವರಿಸಿಕೊಂಡಿತು.

ಒಬ್ಬ ಹದಿಹರೆಯದ ಮಹಿಳಾ ಪೊಲೀಸ್ ಅಧಿಕಾರಿ ಮೂಕವಿಸ್ಮಿತಳಾಗಿ ರಾಮಕಥಾ ಕುಂಜಕ್ಕೆ ಬಂದಳು. ಇಡೀ ನಗರವೇ ಹತೋಟಿಯನ್ನು ಕಳೆದುಕೊಂಡಿದೆ. ಆಕೆ ಇಬ್ಬರು ಛಾಯಾ ಚಿತ್ರಗ್ರಾಹಕರ ಕಥೆಯನ್ನು ಹೇಳಿದರು: “ಅವರ ಹೆಸರು ನಿತಿನ್‌ರಾಯ್ ಮತ್ತು ಪ್ಯಾಬ್ಲೋ ಬಾರ‍್ತೊಲೋಮಿಯೊ. ಅವರನ್ನು ಕರಸೇವಕರು ಶಿಕ್ಷಿಸುವುದರಲ್ಲಿದ್ದರು. ಹಾಗೆ ಮಾಡಿದರೆ ನಿಮ್ಮನ್ನು ದಸ್ತಗಿರಿ ಮಾಡುವುದಾಗಿ ಹೇಳಿ ಅವರನ್ನು ರಕ್ಷಿಸಿದೆ”.

ನಾನು ವೇದಿಕೆಯ ಮೇಲಿನಿಂದ ಕೆಳಗೆ ಇಳಿದು ಬಂದಾಗ ನಾನು ನೋಡಿದ್ದು ಕೇವಲ ಮರದ ದಿಮ್ಮಿಗಳು, ರಸ್ತೆತಡೆ, ಬೆಂಕಿ, ಜನರು ಲಾಠಿ ಮತ್ತು ಕಬ್ಬಿಣದ ಸರಳುಗಳನ್ನು ಹಿಡಿದು ಝಳಪಿಸುತ್ತಿದ್ದರು. ಸುಮಾರು ಸಂಜೆ ೭.೩೦ರ ಹೊತ್ತಿಗೆ ಎಲ್ಲ ಪತ್ರಕರ್ತರು ಅಯೋಧ್ಯೆಯಿಂದ ಕಾಲು ಕಿತ್ತರು. ನಾನು ಕೂಡ ಒಂದು ಕಾರಿನಲ್ಲಿ ಹೋಗುವ ಅವಕಾಶ ಸಿಕ್ಕಿ ಫೈಝಾಬಾದ್ ಕಡೆಗೆ ಮುಖಮಾಡಿದೆ. ಅಲ್ಲಿ ನಾವು ಪತ್ರಕರ್ತರು ಉಳಿದು ಕೊಳ್ಳುವ ತಾಣವಾಗಿತ್ತು.

ಉಳಿದ ದೃಶ್ಯಾವಳಿಗಳ ಫೊಟೋ ತೆಗೆಯಲು ಮತ್ತೆ ಮರುದಿನ ಅಯೋಧ್ಯೆಗೆ ಹೋದೆ. ಬೆಟ್ಟದ ಸಾಲಿನಲ್ಲಿ ನಿಂತಿದ್ದ ಆ ಮಸೀದಿಯ ಸ್ಥಳದಲ್ಲಿ ಕಂದುಬಣ್ಣದ ಡೇರೆಗಳು ಕಾಣಿಸಿ ಕೊಂಡವು. ಕರಸೇವಕರು ತತ್ಕಾಲಿಕ ಮಂದಿರವನ್ನು ಕಟ್ಟಲು ಪ್ರಾರಂಭಿಸಿದರು.

ಬಾಬ್ರಿ ಮಸೀದಿ ಗುಂಬಜ ನೆಲಕ್ಕುರುಳಿ ಹದಿನೇಳು ವರ್ಷ ಸಂದು ಹೋದವು. ಆದರೆ ಗುಂಬಜ ಕೆಳಗೆ ಉರುಳಿದ ದೃಶ್ಯ ಕೊನೆಯ ಕಹಿ ನೆನಪಲ್ಲ. ಆದರೆ ಆಚಾರ್ಯರೊಬ್ಬರು ಹೇಳಿದ ಮಾತು ಮುಖ್ಯ “ಮುಸ್ಲಿಮರ ಮನೆಗಳು ಹೊತ್ತಿ ಉರಿಯುತ್ತವೆ. ಅದಕ್ಕೆ ಅವರೇ ಕಾರಣ”. ಬಾಬ್ರಿ ಮಸೀದಿ ಧ್ವಂಸದ್ವೇಷ ರಾಜಕಾರಣದ ಒಂದು ಅಂಗವಾಗಿರಬಹುದು. ಆದರೆ ಅಡ್ವಾಣಿಯವರಿಗೆ ಆಚಾರ್ಯನ ಧ್ವನಿವರ್ಧಕದ ಹತ್ತಿರ ಬಂದು ಆ ಅನಾಹುತ ವನ್ನು ತಡೆಯಬಹುದಿತ್ತು. ಕೇವಲ ಅಡ್ವಾಣಿಯವರು ಮಾಡುವ ಒಂದು ವಿನಂತಿ ಕೆಲವು ಜೀವಗಳನ್ನಾದರೂ ಉಳಿಸಬಹುದಿತ್ತು. ಹಾಗೆ ಮಾಡದಿರುವುದು ಧೈರ್ಯದ ಕೊರತೆಯ ನ್ನು ಮಾತ್ರ ಸೂಚಿಸುತ್ತದೆ.

(ಕೃಪೆ: ತೆಹಲ್ಕಾ )

Sunday, July 19, 2009

ಹಂದಿ, ಹಿಂಸೆ ಮತ್ತು ತಮಸ್
-ಮಲ್ನಾಡ್ ಮೆಹಬೂಬ್, ಸಕಲೇಶಪುರ
ತಮಸ್...
ಭೀಷ್ಮ ಸಾಹನಿ ರಚಿಸಿದ ಪ್ರಖ್ಯಾತ ಕಾದಂಬರಿ ‘ತಮಸ್’ ಜಗತ್ತಿಗೆ ಕೊಟ್ಟಿರುವ ಸಂದೇಶಗಳಲ್ಲಿ ಅದರಲ್ಲೂ, ಮುಸ್ಲಿಂ ಸಮಾಜಕ್ಕೆ ತಿಳಿಸಿರುವುದು ‘ಹಂದಿಯ ದೇಹ ನಿಮ್ಮ ಮಸೀದಿಗೆ ಯಾರಾದರೂ ಹಾಕಿದರೆ ಇದು ಕೋಮು ಹಿಂಸೆಗೆ ಬಳಸಲಾಗಿರುವ ತಂತ್ರ ಎಂಬುದನ್ನು ಅರ್ಥಮಾಡಿಕೊಳ್ಳಿ’ ಎಂದು ವಿವರಿಸಿದೆ.

ಹಂದಿಯ ಮೂಲಕ ನಡೆಯುವ ಕೋಮುಗಲಭೆಗಳ ಅಂತರಂಗವನ್ನು ಬಹಿರಂಗಗೊಳಿಸಿ, ಇಂದಿಗೂ ‘ತಮಸ್’ ಮನೆ ಮಾತಾಗಿದೆ.
೧೯೭೩ರಲ್ಲಿ ಮಹಾರಾಷ್ಟ್ರದ ಭೀವಂಡಿಯ ಹಿಂಸಾಚಾರ ನೋಡಿ ನೋಂದು ಭೀಷ್ಮ ಸಾಹನಿಯವರು, ೧೯೭೪ರಲ್ಲಿ ನಡೆದ ಪಂಜಾಬ್ ಪ್ರಾಂತ್ಯದ ಹಿಂಸಾಚಾರದ ವಾಸ್ತವಗಳನ್ನು ಅಕ್ಷರಗಳ ಮೂಲಕ ತೆರೆದಿಟ್ಟ ‘ದುರಂತ ಕಾವ್ಯ’ವಾಗಿದೆ ತಮಸ್.

ಧರ್ಮದ ಹೆಸರಿನಲ್ಲಿ ಗಲಭೆಗಳನ್ನು ಪ್ರಚೋದಿಸಿದಾಗ ಅಮಾಯಕ, ಮುಗ್ಧಗನ ಅನುಭವಿಸುವ ಸಂಕಷ್ಟಗಳ ಈ ಕಥೆ... ನೆಮ್ಮದಿ ಮತ್ತು ಶಾಂತಿಯಿಂದ ಇದ್ದ ಜನರನ್ನು, ಒಬ್ಬರು-ಮತ್ತೊಬ್ಬರ ಕತ್ತು, ಕತ್ತರಿಸುವಂತೆ ಮೂಡಿದ್ದು ಹೇಗೆ ಎಂಬುದನ್ನು ಈ ಕಥೆ ಹೇಳುತ್ತದೆ.

ಇದು ಕಲ್ಪನೆಯಲ್ಲ-ವಾಸ್ತವ, ರಾಷ್ಟ್ರ ಇದರ ಮೂಲಕ ಹಾದು ಹೋಗಿದೆ. ತಮ್ಮ ತಪ್ಪು ಏನೇನೂ ಇಲ್ಲದಿದ್ದರು ಬಹಳಷ್ಟು ಮಂದಿ ಈ ದುರಂತಕ್ಕೆ ಸಿಲುಕಿ, ಮತಾಂಧರ ಕೈಗೆ ಸಿಕ್ಕಿ ನಾಶ ಹೊಂದುತ್ತಾರೆ. ದೇವರಿಗೆ ಅಂಜುವ ನೆರೆ-ಹೊರೆಯವರಿಂದ ಬಹಳಷ್ಟು ಮಂದಿ ಬದುಕಿ ಉಳಿಯುತ್ತಾರೆ.

ಈ ಕಥೆಯಲ್ಲಿ ‘ಹಂದಿ’ ಕೊಂದು ಪ್ರಾರ್ಥನಾ ಸ್ಥಳಕ್ಕೆ ಹಾಕಿದವನೂ ಪಾಪಪ್ರಜ್ಞೆಯಿಂದ ಪೀಡಿತನಾಗಿ ಸತ್ತು ಹೋಗುತ್ತಾನೆ. ಈತನ ಕೈಗೆ ೫ ರೂಪಾಯಿ ನೋಟು ಇಟ್ಟು ಗಲಭೆಗೆ ಕಾರಣನಾದವನು ‘ಶಾಂತಿ’ ಮಂತ್ರ ಹೇಳುತ್ತ ಗಣ್ಯವ್ಯಕ್ತಿಗಳೊಂದಿಗೆ ಸೇರಿಕೊಳ್ಳುತ್ತಾನೆ. ಹೀಗೆ ‘ತಮಸ್’ ಅಂದರೆ ‘ಕಗ್ಗತ್ತಲು’ ಕಾದಂಬರಿ ಮುಕ್ತಾಯವಾಗುತ್ತದೆ.

ಮೈಸೂರು ‘ಹಂದಿ’ಗಲಭೆ...

ಸ್ವಾತಂತ್ರ ಪೂರ್ವ ಹಾಗೂ ನಂತರವೂ ಈ ‘ಹಂದಿಯ ಹಿಂಸೆ’ ಮುಸ್ಲಿಮ್‌ರ ಸುತ್ತ ಸುತ್ತುತ್ತಲೇ ಇದೆ. ಇತ್ತೀಚೆಗೆ ನಡೆದ ಮೈಸೂರು ಗಲಭೆಯಲ್ಲಿ ೩ ಅಮಾಯಕರ ಸಾವು, ಅಸ್ತಿ-ಪಾಸ್ತಿ ನಷ್ಟ ಸಮಾಜದ ಮೂರ್ಖತನಕ್ಕೆ ಸಾಕ್ಷಿಯಾಗಿದೆ.

ಇಸ್ಲಾಂ ಏನೂ ಹೇಳುತ್ತೆ...

ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರರವರ ಅನುಮತಿ ಪಡೆದು ಅನ್ಯ ಧರ್ಮದ ವ್ಯಕ್ತಿಯೊಬ್ಬ, ರಾತ್ರಿ ಮಸೀದಿಯಲ್ಲಿ ತಂಗುತ್ತಾನೆ. ಬೆಳಗ್ಗೆ ಆತ ಮಸೀದಿಯಲ್ಲಿ ಹೇಸಿಗೆ ಮಾಡಿ ಹೋಗಿರುತ್ತಾನೆ. ಇದನ್ನು ಕಂಡ ಪ್ರವಾದಿಗಳು ತಮ್ಮ ಕೈಗಳಿಂದ ಹೇಸಿಗೆಯನ್ನು ಸ್ವಚ್ಚ ಮಾಡುತ್ತಾರೆ. ಇಂಥಹ ಸಂದರ್ಭದಲ್ಲಿ ‘ಹೀಗೆ ಮಾಡಬೇಕು’ ಎಂದು ಇದು ಪ್ರವಾದಿಯವರು ಸೂಚಿಸಿರುವ ಧರ್ಮ ಬದ್ಧ ಪರಿಹಾರವೆಂದು ಧರ್ಮಕ್ಕೆ ಸಂಬಂಧಿಸಿದ ‘ಗ್ರಂಥಗಳು’ ಹೇಳುತ್ತವೆ.

ಧರ್ಮ ಪಾಲಕರು ಮಾಡುತ್ತಿರುವುದು...

ಕೋಮು ಹಿಂಸಾಚಾರ ನಡೆಸಲು ಹಿಂದಿನಿಂದಲೂ ಬಳಸುತ್ತಿರುವ ಹಳಸಲು, ಸವಕಲು ತಂತ್ರಗಳಲ್ಲಿ ಒಂದು ‘ಹಂದಿ ದೇಹವನ್ನು ಮುಸ್ಲಿಂ ಪ್ರಾರ್ಥನ ಸ್ಥಳಗಳಲ್ಲಿ ಹಾಕುವುದು’ ಇದನ್ನು ಕಂಡ ಮುಸ್ಲಿಂರು ರೊಚ್ಚಿಗೆದ್ದು ಬೀದಿಗಿಳಿಯುವುದು, ಕೋಮುವಾದಿಗಳ ಯೋಜನೆಯನ್ನು ಸಫಲಗೊಳಿಸುವುದು, ಪ್ರಾಣ, ಆಸ್ತಿ-ಪಾಸ್ತಿ ಹಾಗೂ ನೆಮ್ಮದಿ ಕಳೆದುಕೊಳ್ಳುತ್ತಿರುವುದು.

ಅರ್ಥವಾಗದದ್ದು...

ಸಮಾಜದ ಶಾಂತಿಯನ್ನು ಕದಡುವ ಉದ್ದೇಶದಿಂದಲೇ ಮುಸ್ಲಿಂಮರನ್ನು ಪ್ರಚೋದಿಸಿ, ಕೋಮುಗಲಭೆ ಸೃಷ್ಟಿಸಿ, ಶಾಂತಿ ಪ್ರಿಯರ ಪ್ರಾಣ, ಆಸ್ತಿ-ಪಾಸ್ತಿ ನಷ್ಟ ಮಾಡಲು ಕಾರ್ಯತಂತ್ರ ರೂಪಿಸಿ ‘ಪ್ರಾರ್ಥನ ಸ್ಥಳಗಳಲ್ಲಿ ಹಂದಿ ದೇಹದ ಮಾಂಸ ಹಾಕಲಾಗುತ್ತದೆ ಎಂಬ ಈ ಸತ್ಯ ಇಡೀ ಸಮಾಜಕ್ಕೆ ತಿಳಿದಿದ್ದರು, ಇಂಥಹ ಸಂದರ್ಭದಲ್ಲಿ ಕಿಡಿಗೇಡಿಗಳ ಕಾರ್ಯತಂತ್ರಕ್ಕೆ ತಕ್ಕಂತೆ, ಮುಸ್ಲಿಂ ಜನಾಂಗದ ಕೆಲವರು ವರ್ತಿಸುವುದು ಏಕೆ? ಎಂಬುದು ಅರ್ಥವಾಗುವುದಿಲ್ಲ.

ಗಮನಿಸಬೇಕಾದ ಅಂಶ...

ಏಕ ದೇವನನ್ನು ನಂಬುವ, ಮಹಮ್ಮದ್ ಪೈಗಂಬರ್‌ರವರ ಜೀವನ ಕ್ರಮವನ್ನು ತಮ್ಮ ಜೀವನದ ದಿನಿತ್ಯದ ಬದುಕಿನಲಲಿ ಅಳವಡಿಸಿಕೊಂಡು ಬದುಕಿ, ಮುಕ್ತಿಕಾಣಲು ಬಯಸುವ ಮುಸ್ಲಿಂಮರು ‘ಮಸೀದಿಗೆ ಮಲಿನ ಪ್ರಾಣಿಯ ದೇಹದ ಮಾಂಸ ಹಾಕಿದಾಗ’ ಪ್ರವಾದಿಯ ನಡೆ-ನುಡಿಯನ್ನು ಏಕೆ? ಪಾಲಿಸುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದ್ದು, ಇದು ತರ್ಕಕ್ಕೆ ಸಿಗದಂತಾಗಿದೆ.

ಪ್ರಮುಖ ಅಂಶ...

ಇಂಥಹ ಅನೇಕ ಘಟನೆಗಳು ‘ಈ ಹಿಂದೆ ನಡೆದಿದ್ದು’ ಇದರಿಂದಾಗಿ ಆಗಿರುವ ಪರಿಣಾಮದ ಬಗ್ಗೆ ತಿಳಿದಿದ್ದರು, ಪದೇ ಪದೇ ಮೂರ್ಖತನಕ್ಕೆ, ಮೋಸಕ್ಕೆ, ಕುತಂತ್ರಕ್ಕೆ ಒಳಗಾಗುವುದು ಏಕೆ? ಎಂಬುದು ಅರ್ಥವಾಗದ ಪ್ರಮುಖ ಅಂಶವಾಗಿದೆ.

ಅರ್ಥಮಾಡಿಕೊಳ್ಳಬೇಕಾಗಿರುವುದು...

ಇಲ್ಲಿ ಓಟಿಗಾಗಿ ದೇವರು ಧರ್ಮವನ್ನು ಬೀದಿಗೆ ತಂದು ಬೆತ್ತಲೆಗೊಳಿಸುವ ‘ಖಾದಿ’ದಾರಿಗಳಿದ್ದಾರೆ. ‘ಖಾಕಿ’ಯೊಳಗೆ ಬಚ್ಚಿಟ್ಟುಕೊಂಡಿರುವ ಕೋಮುವಾದಿಗಳಿದ್ದಾರೆ. ಒಂದು ಕೋಮಿನ ಕರಿ ಕೋಟು ಧರಿಸಿರುವ ಕಾನೂನು ಪಾಲಕರಿದ್ದಾರೆ. ಕೋಮುವಾದಿಗಳನ್ನು ಹಾಗೂ ವ್ಯವಸ್ಥೆಯನ್ನು ಪ್ರತಿನಿಧಿಸುವ ಆಡಳಿತ ರಾಜ್ಯದಲ್ಲಿ ಜಾರಿಯಲ್ಲಿದೆ. ಇವರ ಮುಂದೆ ಪ್ರಾಮಾಣಿಕವಾಗಿ ನಮ್ಮ ತಲೆ ಕಡಿದು ಅವರ ‘ಪಾದದ ಮೇಲಿಟ್ಟರು, ಇದು ಎಳೇನೂರು ಚಿಪ್ಪು’ ಎಂದು ವಾದಿಸುವವರ ಮುಂದೆ ಜಾಗೃತರಾಗಿ ಬದುಕುವುದನ್ನು ಹಾಗೂ ಒಂದು ಪ್ರಾಣಿಯ ದೇಹದಿಂದ ಯಾವುದೇ ಧರ್ಮವು ಅಧರ್ಮವಾಗುವುದಿಲ್ಲ. ಧರ್ಮದ ಹೆಸರಿನಲ್ಲಿ ಜನರು ಸಮಾಜದಲ್ಲಿ ನೀಚ ಕೆಲಸ ಮಾಡಿದರೆ ಆಗಮಾತ್ರ ಧರ್ಮ ಮಲಿನವಾಗುತ್ತದೆ’ ಅರ್ಥಮಾಡಿಕೊಳ್ಳಬೇಕು.

ಏನೂ ಮಾಡಬೇಕು?

ಮಲೀನ ಪ್ರಾಣಿಯ ದೇಹದ ಮಾಂಸವನ್ನು ಮಸೀದಿಗೆ ಹಾಕಿದಾಗ ಪೊಲೀಸರಿಗೆ ವಿಷಯ ತಿಳಿಸಬೇಕು. ಶ್ವಾನದಳ ಬೆರಳಚ್ಚು ತಜ್ಞರು ಸ್ಥಳ ಪರಿಶೀಲಿಸುವವರೆಗೆ ಯಾರು ಹತ್ತಿರಕ್ಕೆ ಹೋಗದಂತೆ ಈ ಬಗ್ಗೆ ಎಚ್ಚರಿಕೆ ವಹಿಸುವುದು. ಪೊಲೀಸರ ಮಾರ್ಗದರ್ಶನದಂತೆ ನಡೆದುಕೊಂಡು ಮಸೀದಿ ಸ್ವಚ್ಚಗೊಳಿಸುವುದು, ಮಾಧ್ಯಮದವರಿಗೆ ವಿಷಯ ತಿಳಿಸುವುದು ಮುಖ್ಯವಾಗಿದೆ. ಇಂಥಹ ವಿಷಯಗಳಿಂದ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ‘ತಮ್ಮ ಮಾನಸಿಕ ಹಾಗೂ ಧಾರ್ಮಿಕ ವಿಚಾರಧಾರೆಗಳ ಮೂಲಕ ಗಟ್ಟಿತನದ’ ಹೇಳಿಕೆ ನೀಡುವುದು. ಪೊಲೀಸರ ಆಶ್ರಯದಲ್ಲಿ ಸೌಹಾರ್ದ ಸಭೆಯನ್ನು ವಿಶಾಲವಾದ ಸಭಾಂಗಣದಲ್ಲಿ ನಡೆಸುವುದು, ಘಟನೆಯ ಬಗ್ಗೆ ಊರಿನ ಎಲ್ಲ ವರ್ಗದ ಜನರು ಸೇರಿ ಖಂಡಿಸುವುದು, ಪ್ರಾಮಾಣಿಕವಾದ ಚರ್ಚೆ ನಡೆಸುವುದು. ಜಾತ್ಯತೀತ ಶಕ್ತಿಗಳ ಧ್ವನಿಯನ್ನು ಗಟ್ಟಿಗೊಳಿಸುವುದಕ್ಕೆ ಒತ್ತು ನೀಡಬೇಕಾಗಿದೆ.

ಬದುಕಲು ಸಮಾಜದಲ್ಲಿ ‘ಶಾಂತಿ ಸೌಹಾರ್ದತೆ’ ಎಷ್ಟು ಮುಖ್ಯವಾಗಿದೆ ಎಂಬುದನ್ನು ಸಮಾಜಕ್ಕೆ ತಿಳಿಸುವುದು, ಕಿಡಿಗೇಡಿಗಳು ಯಾವುದೇ ಧರ್ಮದವರಾಗಲಿ, ಅವರ ಕುತಂತ್ರಕ್ಕೆ ಬಲಿಯಾಗದಂತಹ ವಾತಾವರಣ ನಿರ್ಮಿಸುವುದು ಮುಖ್ಯವಾಗಿದೆ. ಈ ಬಗ್ಗೆ ಧಾರ್ಮಿಕ ಮುಖಂಡರ ಚರ್ಚೆ, ಸಂವಾದ ನಡೆಸಿ ಯುವಕರಿಗೆ ಅರಿವು ಮೂಡಿಸಲು ಯತ್ನಿಸಬೇಕು. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕ ಹಾದಿಯಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿಂಸೆಗೆ ಯಾರು ಬಲಿಯಾಗದಂತೆ ಎಚ್ಚರವಹಿಸಬೇಕು.

ಪರಿಹಾರ

ಶೋಷಿತರು, ದೌರ್ಜನ್ಯಕ್ಕೆ ಒಳಗಾದವರು ತಮ್ಮ ‘ಹನಿ ಹನಿ ಕಣ್ಣೀರನ್ನು, ದುಃಖವನ್ನು, ಆಕ್ರೋಶವನ್ನು ತಮ್ಮೊಡಲೊಳಗೆ ಶೇಖರಿಸಿ ಸಾಗರದ ಸುನಾಮಿ ಅಲೆಯಾಗಿಸಿಕೊಳ್ಳಬೇಕು’, ‘ಹೆದರಿಕೆಯ ಎದೆ ಬಡಿತದ ಸದ್ದನ್ನು ಅದುಮಿ ಕೂಡಿಟ್ಟು ಗಂಡೆದೆಯ ಗುಡುಗಾಗಿಸಿ’ ಮುಂದಿನ ಚುನಾವಣೆಯಲ್ಲಿ ಬ್ಯಾಲೆಟ್ ಮೇಲೆ ಪ್ರಯೋಗಿಸಬೇಕು. ಈ ವ್ಯವಸ್ಥೆಯನ್ನು ಬದಲಾಯಿಸಿ ಪ್ರಾಮಾಣಿಕ ವ್ಯಕ್ತಿಗಳಿಂದ ಕೂಡಿದ ‘ಜನತಂತ್ರ’ ವ್ಯವಸ್ಥೆ ಆಡಳಿತಕ್ಕೆ ಬರುವಂತೆ ಮಾಡಿದಾಗ ಮಾತ್ರ ‘ನ್ಯಾಯ ಪಡೆಯಲು ಸಾಧ್ಯ’. ಬೀದಿಯಲ್ಲಿ ಕೂಗಾಡುವುದರಿಂದ ‘ಏನೂ ಸಾಧಿಸಲು ಸಾಧ್ಯವಿಲ್ಲ’ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಸಮಾಜವನ್ನು ಹಂದಿಯ ಸುತ್ತ ಗಿರಕಿ ಹೊಡೆಯಲು ಬಿಡದೆ ಪರಿಹಾರದ ಪರಿವರ್ತನೆಯತ್ತ ಸಾಗಬೇಕಾಗಿದೆ.