Tuesday, July 28, 2009

ನಾಡಿಗೆ ಮಾದರಿಯಾದ ಪುತ್ತೂರು!

ವಾರ್ತಾಭಾರತಿ ಪತ್ರಿಕೆಯ ಸಂಪಾದಕೀಯದಿಂದ...

ಕರಾವಳಿಯ ಅತ್ಯಂತ ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಪುತ್ತೂರಿನಿಂದ ಕನ್ನಡ ನಾಡಿಗೆ ನೆಮ್ಮದಿ, ಶಾಂತಿಯ ಸಂದೇಶವೊಂದು ಹೊರಟಿದೆ. ಪ್ರತಿಕಾರ, ಆಕ್ರೋಶಕ್ಕಿಂತ ದೊಡ್ಡದು ಸಹನೆ ಮತ್ತು ಕ್ಷಮೆ ಎನ್ನುವುದನ್ನು ಅಲ್ಲಿನವರು ನಾಡಿಗೆ ತೋರಿಸಿಕೊಟ್ಟಿದ್ದಾರೆ. ಮಂಗಳವಾರ ಮುಂಜಾನೆ ಪುತ್ತೂರಿನ ಎರಡು ಮಸೀದಿಗಳಿಗೆ ದುಷ್ಕರ್ಮಿಗಳು ಕೊಳೆತ ಮಾಂಸವನ್ನು ಎಸೆದು ಹೋಗಿದ್ದರು. ಇನ್ನೇನು ಪ್ರತಿಭಟನೆ, ಆಕ್ರೋಶ, ರಸ್ತೆ ತಡೆಯ ಮೂಲಕ ಗಲಭೆ ಸ್ಫೋಟಿಸಬೇಕು. ಆದರೆ ಅಂತಹದೇನೂ ಸಂಭವಿಸಲಿಲ್ಲ. ಪ್ರಾರ್ಥನಾ ಮಂದಿರದೊಳಗೆ ಮಾಂಸವನ್ನು ಎಸೆದ ಕೊಳೆತ ಮನಸ್ಸಿನ ಕುರಿತಂತೆ ಅನುಕಂಪವನ್ನು ವ್ಯಕ್ತಪಡಿಸಿದ ಪುತ್ತೂರಿನ ಜನತೆ ಮಸೀದಿಯನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಿತು. ಬಳಿಕ, ದುಷ್ಕೃತ್ಯವನ್ನು ಎಸೆದ ದುಷ್ಕರ್ಮಿಗಳ ಮನಸ್ಸು ಶುಚಿಯಾಗಲಿ ಎಂದು ಧಾರ್ಮಿಕ ಗುರುಗಳು ಪ್ರಾರ್ಥನೆಯನ್ನು ಸಲ್ಲಿಸಿದರು. ದುಷ್ಕರ್ಮಿಗಳಿಗೆ ಇದಕ್ಕಿಂತ ಹೀನಾಯ ಮುಖಭಂಗ, ಅವಮಾನ ಇನ್ನೇನಿದೆ? ಮಂಗಳವಾರ ಮುಂಜಾನೆ ಗಲಭೆ, ದೊಂಬಿ ನಡೆಯುತ್ತದೆ ಎಂದು ಕಾಯುತ್ತಿದ್ದವರಿಗೆ, ಅಂಗಡಿ, ಮನೆಗಳನ್ನು ದೋಚಲು ಭರ್ಜರಿ ಸಿದ್ಧತೆಯಲ್ಲಿದ್ದವರಿಗೆ ದೊಡ್ಡ ನಿರಾಸೆ. ಮೂರು ದಿನಗಳ ಹಿಂದೆ ಮಂಗಳೂರಿನ ಮಸೀದಿಗೂ ದುಷ್ಕರ್ಮಿಗಳು ಹಂದಿಯನ್ನು ಎಸೆದಿದ್ದರು. ಅಲ್ಲಿಯ ಧರ್ಮಗುರುಗಳು ಮತ್ತು ಮುಖಂಡರೂ ಕೂಡ ಅನುಸರಿಸಿದ್ದುದು ಇದೇ ತಂತ್ರವನ್ನು. ಪರಿಣಾಮವಾಗಿ ದುಷ್ಕರ್ಮಿಗಳು ನಿರೀಕ್ಷಿಸಿದ ಯಾವ ಗಲಭೆಯೂ ಸಂಭವಿಸಲಿಲ್ಲ. ಮಂಗಳೂರನ್ನು ದೋಚಲು ಕಾದು ಕುಳಿತಿದ್ದ ಕ್ರಿಮಿನಲ್ ‘ಸಂಸ್ಕೃತಿ ರಕ್ಷಕ’ರಿಗೆ ಅಂದೂ ದೊಡ್ಡ ನಿರಾಸೆ. ಮಂಗಳೂರಿನಲ್ಲಿ ಘಟನೆ ನಡೆದ ಮುಂಜಾನೆ ಪಾಂಡೇಶ್ವರದ ಸಮೀಪ ಶಿವನ ವಿಗ್ರಹಕ್ಕೆ ಯಾರೋ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ್ದರು. ಈ ಸಂದರ್ಭದಲ್ಲಿ ಮಂಗಳೂರಿನ ಜನರೂ ಅಷ್ಟೇ ಸಹನೆಯನ್ನು ಕಾಯ್ದುಕೊಂಡಿದ್ದರು. ಬಳಿಕ, ವಿಗ್ರಹಕ್ಕೆ ಕಲ್ಲೆಸೆದಿರುವ ಕೆಲಸ, ಮಾನಸಿಕ ಅಸ್ವಸ್ಥನೊಬ್ಬನದು ಎನ್ನುವುದು ಬೆಳಕಿಗೆ ಬಂತು.(ಇನ್ನೊಂದು ಧರ್ಮವನ್ನು ಅವಮಾನಿಸುವ, ಮಸೀದಿ, ಮಂದಿರಗಳನ್ನು ಅಪವಿತ್ರಗೊಳಿಸುವವರು ಮಾನಸಿಕ ಅಸ್ವಸ್ಥರೇ ಆಗಿರುತ್ತಾರೆ. ಜೊತೆಗೆ ಕ್ರಿಮಿನಲ್‌ಗಳೂ ಆಗಿರುತ್ತಾರೆ.) ಘಟನೆಯನ್ನು ಮುಂದಿಟ್ಟು ಒಂದು ಗುಂಪು ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸಿತ್ತಾದರೂ, ಶಿವನ ನಿಜವಾದ ಭಕ್ತರು ಅದಕ್ಕೆ ಆಸ್ಪದ ಕೊಡಲಿಲ್ಲ. ಪೊಲೀಸರೂ ಈ ಸಂದರ್ಭದಲ್ಲಿ ಜನರ ಮನವೊಲಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದರು.

ಮಸೀದಿಗೆ ಹಂದಿ ಮಾಂಸ ಎಸೆಯುವ ಅಥವಾ ಮಂದಿರದಲ್ಲಿ ದನದ ಮಾಂಸ ಎಸೆಯುವವನ ಗುರಿ ಮಸೀದಿ, ಮಂದಿರವನ್ನು ಅಪವಿತ್ರಗೊಳಿಸುವುದಾಗಿರುವುದಿಲ್ಲ. ಮಸೀದಿ, ಮಂದಿರದ ಮೂಲಕ ಸಮಾಜದ ಶಾಂತಿಯನ್ನು ಕೆಡಿಸುವುದು ಆತನ ಉದ್ದೇಶವಾಗಿರುತ್ತದೆ. ಆತನಿಗೆ ಕಲುಷಿತಗೊಳ್ಳಬೇಕಾದುದು ಸಮಾಜದ ಶಾಂತಿ. ಮಂದಿರ, ಮಸೀದಿಗಳಿರುವುದು ಆರೋಗ್ಯಕರ ಸಮಾಜಗಳನ್ನು ನಿರ್ಮಾಣ ಮಾಡುವುದಕ್ಕಾಗಿ. ಜನಸಾಮಾನ್ಯರ ನೆಮ್ಮದಿ ಮಸೀದಿ, ಮಂದಿರಗಳ ಗುರಿ. ಹೀಗಿರುವಾಗ, ದುಷ್ಕರ್ಮಿಗಳು ಮಂದಿರ, ಮಸೀದಿಗಳಿಗೆ ಕೆಡುಕನ್ನು ಎಸಗಿದಾಗ, ಅದಕ್ಕೆ ಅಷ್ಟೇ ತೀವ್ರ ಪ್ರತಿಕ್ರಿಯೆಯನ್ನು ವ್ಯಕ್ತಿ ಪಡಿಸಿ, ಧಾರ್ಮಿಕ ಮನುಷ್ಯರೂ ದುಷ್ಕರ್ಮಿಗಳ ಮಟ್ಟಕ್ಕಿಳಿಯುವುದು ಮಂದಿರ, ಮಸೀದಿಗಳಿಗೆ ಎಸಗುವ ಅಗೌರವವಾಗುತ್ತದೆ. ಮಾನಸಿಕವಾಗಿ ಅನಾರೋಗ್ಯಕ್ಕೀಡಾದ ವ್ಯಕ್ತಿಗಳು ಮಸೀದಿ, ಮಂದಿರಗಳಿಗೆ ಹಂದಿ, ದನದ ಮಾಂಸವನ್ನು ಎಸೆದಾಕ್ಷಣ ಅವು ಅಪವಿತ್ರಗೊಳ್ಳುತ್ತವೆ ಎನ್ನುವ ನಂಬಿಕೆಯೇ ಬಾಲಿಶವಾದುದು. ಅಪವಿತ್ರ ಮನಸ್ಸುಗಳನ್ನು, ಅಪವಿತ್ರ ಕೃತ್ಯಗಳನ್ನು ತನ್ನ ಬಾಹುಗಳೆಡೆಗೆ ತೆಗೆದುಕೊಂಡು ಅಂತಹ ವ್ಯಕ್ತಿಗಳನ್ನು ಶುಚೀಕರಿಸುವ ಕೆಲಸ ಮಸೀದಿ, ಮಂದಿರಗಳದು. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡ ಪರಿಣಾಮವಾಗಿ ಪುತ್ತೂರಿನ ಸಾರ್ವಜನಿಕರು ದುಷ್ಕರ್ಮಿಗಳನ್ನು, ಕ್ಷಮಿಸಿ, ಅವರು ಮಾನಸಿಕವಾಗಿ ಆರೋಗ್ಯವಂತರಾಗಲಿ ಎಂದು ಪ್ರಾರ್ಥಿಸಿದರು. ಅಷ್ಟೇ ಅಲ್ಲ, ಕನ್ನಡ ನಾಡಿಗೆ ಪುತ್ತೂರು ಮಾದರಿಯಾಯಿತು. ಚಿಂತಕರು, ಪ್ರಗತಿಪರರ ನೆಲೆಡಾದ ಮೈಸೂರಿಗೆ ಸಾಧ್ಯವಾಗದೇ ಇದ್ದುದು ಪುತ್ತೂರಿಗೆ ಸಾಧ್ಯವಾಯಿತು.

ಒಬ್ಬ ಮುಸಲ್ಮಾನ ಹಿಂದೂ ದೇವಾಲಯಕ್ಕೆ ಮಾಲಿನ್ಯವನ್ನು ಎಸೆಯಲು ಮುಂದಾದರೆ ಆತ ಆ ಮೂಲಕ ಮಲಿನಗೊಳಿಸುವುದು ತನ್ನದೇ ಧರ್ಮದ ಆದರ್ಶ, ಸಿದ್ಧಾಂತಗಳನ್ನು. ಹಾಗೆಯೇ ಒಬ್ಬ ಹಿಂದೂ ಎಂದು ಕರೆಸಿಕೊಂಡಾತ ಮುಸ್ಲಿಮರ ಅಥವಾ ಕ್ರಿಶ್ಚಿಯನ್ನರ ಮಸೀದಿ, ಚರ್ಚುಗಳನ್ನು ಮಲಿನಗೊಳಿಸಲು ಮುಂದಾದರೆ ಆತ ಆ ಮೂಲಕ ಅಪವಿತ್ರಗೊಳಿಸುವುದು ತನ್ನದೇ ಧರ್ಮದ ಆದರ್ಶಗಳನ್ನು. ಇದನ್ನು ಅರಿತ ಯಾವ ಧರ್ಮೀಯರೂ ಇನ್ನೊಂದು ಧರ್ಮದ ಮಸೀದಿ, ಮಂದಿರಗಳನ್ನು ಅಪವಿತ್ರಗೊಳಿಸಲು ಮುಂದಾಗಿ ತಾವೇ ಸಣ್ಣವರಾಗಲು ಸಿದ್ಧರಾಗಲಾರರು. ಮೈಸೂರಿನಲ್ಲಿ ಇಂತಹ ಕೃತ್ಯಕ್ಕೆ ಇಳಿದು ಮುತಾಲಿಕರಂತಹ ನಾಯಕರು ತನ್ನ ಮಟ್ಟ ಯಾವುದು, ತಾನು ಯಾವ ಧರ್ಮವನ್ನು ಪ್ರತಿನಿಧಿಸುತ್ತೆದ್ದೇನೆ ಎನ್ನುವುದನ್ನು ಸಾಬೀತು ಪಡಿಸಿದರು. ಮಸೀದಿಗೆ ಹಂದಿಯ ತಲೆಯನ್ನು ಎಸೆದು ಆ ಮೂಲಕ ಸಮಾಜಕ್ಕೆ ಬೆಂಕಿ ಹಚ್ಚಲು ಹೊರಡುವ ಮುತಾಲಿಕ್ ಯಾವ ಕಾರಣಕ್ಕೂ ಹಿಂದೂ ಧರ್ಮವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ. ಆತನದು ಭಯೋತ್ಪಾದಕ ಧರ್ಮ. ಸಮಾಜ ವಿರೋಧಿ ಧರ್ಮ. ಆತ ಇರಬೇಕಾದುದು ಸಮಾಜದೊಳಗಲ್ಲ. ಜೈಲಿನೊಳಗೆ. ಹಾಗೆಯೇ ಮುಸ್ಲಿಮರು ಆತನ ಮೇಲೆ ಸೇಡು ತೀರಿಸಬೇಕಾಗಿಲ್ಲ. ಆತನ ಮಾನಸಿಕ ಆರೋಗ್ಯಕ್ಕಾಗಿ, ಮಲಿನಗೊಂಡ ಆತನ ಹೃದಯ ಶುಚಿಯಾಗುವುದಕ್ಕಾಗಿ ಪ್ರಾರ್ಥಿಸಿದರೆ ಸಾಕು.

ಇದೇ ಸಂದರ್ಭದಲ್ಲಿ ಜನರ ಶಾಂತಿ, ಸಂಯಮವನ್ನು ಕಂಡು ಪೊಲೀಸರು ತಮ್ಮ ಕರ್ತವ್ಯದಿಂದ ವಿಮುಖರಾಗಬಾರದು. ಹಂದಿ ಮಾಂಸ ಎಸೆದು ತಮ್ಮ ಕಾರ್ಯವನ್ನು ಸಾಧಿಸಲು ಸಾಧ್ಯವಾಗದ ಆಕ್ರೋಶದಲ್ಲಿ ದುಷ್ಕರ್ಮಿಗಳು, ಇನ್ನೊಂದು ಧರ್ಮವನ್ನು ಪ್ರಚೋದಿಸಲು ಇನ್ನಷ್ಟು ಅಪಾಯಕಾರಿ ಕೃತ್ಯಗಳಿಗೆ ಕೈಹಾಕುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಮಸೀದಿಗಳಿಗೆ ಮಾಂಸ ಎಸೆದು ಸಮಾಜದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಲು ಮುಂದಾದ ದುಷ್ಕರ್ಮಿಗಳನ್ನು ತಕ್ಷಣ ಪತ್ತೆ ಹಚ್ಚಬೇಕಾಗಿದೆ. ಕೇವಲ ಮಾಂಸ ಎಸೆದವನನ್ನಷ್ಟೇ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳದೆ, ಆತನಿಗೆ ಆ ಕೃತ್ಯಕ್ಕೆ ಪ್ರೇರಣೆ ನೀಡಿದವರನ್ನೂ ಕಂಡು ಹಿಡಿಯಬೇಕಾಗಿದೆ. ದುಷ್ಕರ್ಮಿಗಳ ಬೇರನ್ನು ಬುಡ ಸಮೇತ ಕಿತ್ತು ಹಾಕಬೇಕಾಗಿದೆ.

No comments:

Post a Comment