Friday, July 24, 2009

ಪಂಜರ ಮೀರುವ ಹೆಣ್ಣುಮಗಳ ಕಥೆ

-ಜ್ಯೋತಿ ಗುರುಪ್ರಸಾದ್‌

ಅವಳ ಹೆಸರು ಪೂರೋ.. ಪಂಜಾಬಿನ ತುಂಬಿದ ಕುಟುಂಬದ ಹೆಣ್ಣು ಮಗಳು. ಅವಳ ಕುಟುಂಬ ಭಾರತ-ಪಾಕಿಸ್ತಾನ ಎಂಬ ಗೆರೆಗಳ ಗಡಿಯ ವಿಭಜನೆ ಆಗುವ ಮೊದಲು ಭಾರತದ ನೆಲಕ್ಕೆ ಸೇರಿದ ಪಾಕಿಸ್ತಾನದಲ್ಲಿಯೇ ಇರುತ್ತದೆ. ಹಿಂದೂಸ್ಥಾನ-ಪಾಕಿಸ್ಥಾನ ಎಂಬ ವಿಭಾಗವಿಲ್ಲದೆ ಹಿಂದೂ-ಮುಸ್ಲಿಂ ಜನಾಂಗ ಭಾರತದಲ್ಲಿ ಜೀವಿಸುತ್ತಿದ್ದ ಸುಮಾರು ೧೯೪೬ರ ಸಂದರ್ಭ. ಪೂರೋ ಎಂಬ ಉತ್ಸಾಹದ ಬುಗ್ಗೆಯ ತರುಣಿಗೆ ಒಡ ಹುಟ್ಟಿದ ಪ್ರೀತಿಯ ಅಣ್ಣ, ಇಬ್ಬರು ತಂಗಿಯರು, ಪುಟ್ಟ ತಮ್ಮ ಜೊತೆಗೆ ಅಕ್ಕರೆಯ ಅಪ್ಪ ಅಮ್ಮ ಇರುತ್ತಾರೆ. ತಂದೆಗೆ ಸ್ವಲ್ಪ ಜಮೀನಿರುತ್ತದೆ. ಅಣ್ಣ ಹಳ್ಳಿ ಯಿಂದ ದೂರದೂರಿಗೆ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಬರಲು ಹೋಗುತ್ತಾನೆ. ಈ ನಡುವೆ ಮನೆಯಲ್ಲಿ ಪೂರೋಳನ್ನು ಕಂಡರೆ ಎಷ್ಟು ಆದರವಿರುತ್ತದೆಂದರೆ ಅಣ್ಣ ಕೇಳಿದರೆ ತಮ್ಮ ಜೇಬಿನಿಂದ ಹೆಚ್ಚು ಹಣ ತೆಗೆದು ಕೊಡದ ತಂದೆ ಪೂರೋಳಿಗೆ ಮಾತ್ರ ಯಾವ ಶಿಫಾರಸೂ ಇಲ್ಲದೆ ಕೊಟ್ಟು ಬಿಡುತ್ತಾರೆ! ಅದನ್ನು ಅವಳು ತನ್ನ ಮುದ್ದಿನ ಅಣ್ಣನಿಗಾಗಿ ಕೊಡುತ್ತಾಳೆ! ಹೀಗಿರುತ್ತದೆ ಮನೆಯಲ್ಲಿ ಅಣ್ಣ-ತಂಗಿಯರ ಬಾಂಧವ್ಯ ಹಾಗೂ ಮನೆಗೂ ಪೂರೋಗೂ ಇರುವ ನಂಟು. ಸದಾ ನಗು, ತಮಾಷೆ, ಹಬ್ಬದ ಸಂಭ್ರಮ. ಅವಳೇ ಮನೆಯ ದೊಡ್ಡ ಮಗಳು. ಒಬ್ಬ ಒಳ್ಳೆಯ ಮನೆತನದ ಜಮೀನುದಾರ ಕುಟುಂಬದ ಹುಡುಗನೊಡನೆ ಪೂರೋ ಮದುವೆ ನಿಶ್ಚಯವಾಗುತ್ತದೆ. ಹೆಣ್ಣು ಮಗಳಿಗೆ ಮದುವೆ ನಿಶ್ಚಯವಾಗುವುದೆಂದರೆ ಅದೂ ಆ ಕಾಲದಲ್ಲಿ ತುಂಬಾ ದೊಡ್ಡ ವಿಷಯವಲ್ಲವೇ?! ಆ ಹುಡುಗ ಎಷ್ಟು ಸೂಕ್ಷ್ಮ-ಒಳ್ಳೆಯವನೆಂದರೆ ವಾಲ್ಮೀಕಿ, ಕಾಳಿದಾಸ, ಮಿರ್ಜಾಗಾಲಿಬ್ ಎಲ್ಲರನ್ನೂ ಓದಿಕೊಂಡು ಅವರು ಮೂವರೂ ಅವರ ಒಳಿತಿನ ಚಿಂತನೆಯ ಕಾರಣದಿಂದ ಬೇರೆ ಬೇರೆ ಅಲ್ಲವೇ ಅಲ್ಲ- ಒಂದೇ ಎನ್ನುತ್ತಿರು ತ್ತಾನೆ. ಜಮೀನುದಾರನಾದರೂ ಮನುಷ್ಯ ಪರ ದನಿಯವನು. ಅವನ ಹೆಸರು ರಾಮಚಂದ್. ಅವನಿಗೊಬ್ಬಳು ಮುದ್ದು ತಂಗಿ. ಹೆಸರು ಲಾಜೋ. ಲಾಜೋಳನ್ನು ಪೂರೋಳ ಅಣ್ಣನಿಗೆ ಮದುವೆ ಮಾಡಿದರೆ ‘ಕೊಟ್ಟು-ತಂದು’ ಮಾಡುವ ಮದುವೆಯಿಂದ ಕುಟುಂಬ ಸುಖೀ ಯಾಗಿರುತ್ತದೆ ಎಂಬ ಭಾವನೆಯಿಂದ ಹಾಗೆಯೇ ನಿಶ್ಚಯವಾಗುತ್ತದೆ. ಪೂರೋ ಮತ್ತು ರಾಮಚಂದ್ ಒಬ್ಬರಿಗೊಬ್ಬರಿಗೆ ಇಷ್ಟವಾಗಿ ಮದುವೆಯ ಕನಸು ಕಾಣತೊಡಗು ತ್ತಾರೆ. ಈ ಕನಸು-ಈ ಸಂಭ್ರಮದ ನಡುವೆ ಒಬ್ಬ ವ್ಯಕ್ತಿಯ ಪ್ರವೇಶವಾಗುತ್ತದೆ. ಆತನ ಹೆಸರು ರಶೀದ್. ಪೂರೋಳನ್ನು ಆಗಾಗ ದಾರಿಯಲ್ಲಿ ಗಮನಿಸುತ್ತಿದ್ದ ರಶೀದ್‌ಗೆ ಅವಳ ಮುಗ್ಧ ಚೆಲುವು ಇಷ್ಟವಾಗಿ ಬಿಡುತ್ತದೆ. ಜೊತೆಗೆ ಪೂರೋ ಕುಟುಂಬ ಮೂಲದವರಿಂದ ಅವನ ಕುಟುಂಬಕ್ಕೆ ಅನ್ಯಾಯವಾಗಿರುತ್ತದೆ ಎಂಬ ಅಂಶ ಗೊತ್ತಿರುವ ರಶೀದ್ ಸೇಡು ತೀರಿಸಿ ಕೊಳ್ಳಲು ಇದೇ ಸಮಯವೆಂಬಂತೆ ಪುರೋ ಳನ್ನು ಒಂದು ದಿನ ತನ್ನ ಕುದುರೆಯ ಮೇಲೆ ಬಲವಂತವಾಗಿ ಎತ್ತಿ ಕೂರಿಸಿಕೊಂಡು ದೂರದ ತನ್ನೂರಿಗೆ ಹೊತ್ತೊಯ್ದು ಬಿಡುತ್ತಾನೆ. ಮನೆಯಲ್ಲಿ ಬಂಧಿಯಾಗಿಸಿಬಿಡುತ್ತಾನೆ. ಯಾಕೆ? ಏನು? ಎಂದು ಗೊತ್ತಿಲ್ಲದೆ ತಬ್ಬಿಬ್ಬಾಗುವ ಪೂರೋ ಎಂಬ ಮುಗ್ಧ ಹೆಣ್ಣು ಅನ್ನ-ನೀರು ಬಿಟ್ಟು ಕೊರಗ ಲಾರಂಭಿಸುತ್ತಾಳೆ. ರಶೀದ್ ಅವಳ ಮೇಲೆ ಬೇರೆ ಯಾವ ಬಲಾತ್ಕಾರ ಮಾಡದಿದ್ದರೂ ತನ್ನ ತುಂಬು ಕುಟುಂಬದಿಂದ ಥಟ್ಟನೆ ಕೊಂಡಿ ಕಳಚಿಕೊಂಡಂ ತಾದ ಪೂರೋ ದಿಕ್ಕೆಟ್ಟ ಅನಾಥ ಪ್ರಜ್ಞೆಯಿಂದ ವಿಲಿ ವಿಲಿ ಒದ್ದಾಡಿಬಿಡುತ್ತಾಳೆ. ಆದರೆ ಈಚೆ ಮದುವೆ ನಿಶ್ಚಯವಾದ ಹುಡುಗಿ ಪೂರೋ ಕಾಣೆಯಾಗಿ ಬಿಟ್ಟಳು ಎಂಬ ವಿಷಯವೇ ಪೂರೋ ತಂದೆ-ತಾಯಿಗೆ ದೊಡ್ಡ ಸಮಸ್ಯೆಯಾಗಿ ನುಂಗಲಾರದ ತುತ್ತಾಗಿ ಬಿಡುತ್ತದೆ. ರಾತ್ರಿ ಕಾಣೆಯಾಗಿ, ಯಾರೋ ಹೊತ್ತೊಯ್ದ ಪೂರೋ ತಮ್ಮ ಪಾಲಿಗೆ ಸತ್ತಳು, ಅವಳಿನ್ನು ಮದುವೆ ಯಾಗಲು ಯೋಗ್ಯಳಲ್ಲ, ತಮಗೆ ಅವಳಿಂದ ಇನ್ನೂ ಬರೀ ಕೆಟ್ಟ ಹೆಸರು ಎಂದಷ್ಟೇ ಸೀಮಿತ ವಾಗಿ ಯೋಚಿಸುತ್ತಾರೆಯೇ ವಿನಃ ಮಗಳು ಏನಾದಳೋ? ಜೋಪಾನವಾಗಿ ಬಂದು ಮನೆ ಸೇರಲಿ ದೇವರೇ.. ಎಂದು ವಿಹ್ವಲರಾಗಿ ಒಮ್ಮೆಯೂ ಆಲೋಚಿಸುವುದಿಲ್ಲ. ಎಲ್ಲಿ ಹೋಯಿತು ಈಗ ಮಗಳ ಮೇಲಿನ ಆ ಮೊದಲಿದ್ದ ಮಮಕಾರ?

ಒಂದು ರಾತ್ರಿ ಅವಳು ಇನ್ಯಾರೋ ಹೊತ್ತುಕೊಂಡು ಹೋದ ಎಂಬ ತಪ್ಪಿಗೆ, ತನ್ನದಲ್ಲದ ತಪ್ಪಿಗೆ ಮನೆಯಿಂದ ದೂರವಾದ ತಕ್ಷಣ ಸಂಬಂಧ ಕೆಡದೇ ಹೋಯಿತೇ?! ಅಯ್ಯೋ ಹೆಣ್ಣು ಜೀವದ ಪಾಡೇ ಎಂದು ಮರುಗುವಂತಾಗುತ್ತದೆ. ಅತ್ತ ಕಡೆ ರಶೀದ್‌ಗೆ ಪುರೋಳ ಸಂಕಟವನ್ನು ನೋಡಲಾಗದೆ, ಅವಳ ಸತ್ಯಾಗ್ರಹವನ್ನು ಎದುರಿಸಲಾಗದೆ ಕೆಲವು ದಿನಗಳ ನಂತರ ಪುರೋಳನ್ನು ಅವರ ಮನೆಗೇ ತಂದು ಬಿಟ್ಟು ತಾನು ಹೊರಗೆ ಏನಾಗುವುದೋ ಎಂದು ಗಮನಿಸಲು ನಿಲ್ಲುತ್ತಾನೆ. ಆಗುವುದೇನು? ಸೋತು-ಸೊರಗಿ ಮನೆ ಸೇರಲು ಬಂದು ರಾತ್ರಿ ಬಾಗಿಲು ತಟ್ಟಿದ ಆ ದುಃಖಿತೆಯನ್ನು ಅವಳ ತಂದೆ-ತಾಯಿ ಮುಲಾಜಿಲ್ಲದೆ ಅವಳು ತಮ್ಮ ಪಾಲಿಗೆ ಸತ್ತಳೆಂದು, ಅದೇ ತಮ್ಮ ಧರ್ಮವೆಂದು ಅವಳನ್ನು ಹೊರಗೆ ದೂಡಿ ಬಾಗಿಲು ಹಾಕಿಕೊಳ್ಳುತ್ತಾರೆ. ಹೊರಗೆ ಕಾಯುತ್ತಿದ್ದ ರಶೀದ್ ಮತ್ತೆ ಅವಳನ್ನೂ ತನ್ನ ಮನೆಗೇ ಕರೆದುಕೊಂಡು ಹೋಗಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿ ಅವಳೂ ಆ ಮನೆಯ ರೀತಿ-ರಿವಾಜು ಕಷ್ಟ ಸುಖಗಳಿಗೆ ಹೊಂದಿಕೊಂಡು ದುಃಖವನ್ನು ಮರೆಯುತ್ತ ಇರಲು ಕಲಿಯುತ್ತಾಳೆ. ಈ ಮಧ್ಯೆ ಅವಳ ಅಣ್ಣನ ಮದುವೆ ನಿಶ್ಚಯದಂತೆ ಅವನಿಚ್ಚೆಯಿಲ್ಲದೆಯೇ, ತಂಗಿಗಾಗಿ ಪರಿತಪಿಸುತ್ತಿರುವಾಗಲೇ ನಡೆದು ಹೋಗುತ್ತದೆ. ಪುರೋವನ್ನು ಮನೆಯಿಂದ ಹೊರಗೆ ಹಾಕುವಾಗ ಅವನು ಮನೆಯಲ್ಲಿರುವುದಿಲ್ಲ. ಈ ಸುದ್ದಿಯನ್ನು ದೊಡ್ಡವರು ಅವನಿಗೆ ತಿಳಿಸುವುದೂ ಇಲ್ಲ. ರಶೀದ್ ಪುರೋವನ್ನು ಹೊತ್ತೊಯ್ದದ್ದು ಎಂದು ತಿಳಿದಾಗ ಪುರೋ ಅಣ್ಣ ಅವನ ಗದ್ದೆಗೆ ಬೆಂಕಿಯಿಟ್ಟು ಬಿಡುತ್ತಾನೆ. ನೊಂದುಕೊಂಡ ರಶೀದ್ ತನ್ನಿಂದಲೇ ಇದೆಲ್ಲಾ ಆಗಿದ್ದು ಎಂದು ಕಣ್ಣೀರು ಸುರಿಸುತ್ತಾ ಸುಮ್ಮನಾಗಿ ಬಿಡುತ್ತಾನೆ. ಪುರೋ ಸಹವಾಸದಲ್ಲಿ ಅವನಿಗೆ ದಿನೇ ದಿನೇ ಪ್ರೀತಿಯ ಸಾಕ್ಷಾತ್ಕಾರವಾಗುತ್ತಿರುತ್ತದೆ. ೧೯೪೭ರ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ವಿಭಜನೆಯ ಕಾನೂನು ಬಂದು ಪಾಕಿಸ್ಥಾನದ ಹಿಂದೂಗಳೆಲ್ಲಾ ಹಿಂದೂಸ್ಥಾನಕ್ಕೆ ಹೋಗಬೇಕೆಂಬ ಸಂದರ್ಭದಲ್ಲಿ ಗಲಭೆ ಶುರುವಾಗಿ ಅತ್ಯಾಚಾರಗಳು ಶುರುವಾಗುತ್ತದೆ. ವಲಸೆ ಹೋಗುವ ಸಂದರ್ಭದಲ್ಲಿ ರಾಮಚಂದ್ ತಂಗಿ ಲಾಜೋಳನ್ನು ಒಬ್ಬ ಮುಸ್ಲಿಂ ಬಲಾತ್ಕಾರದಿಂದ ಹೊತ್ತೊಯ್ಯುತ್ತಾನೆ. ಆದರೆ ಪುರೋ ಮತ್ತು ರಶೀದ್ ಲಾಜೋಳನ್ನು ಶತ ಪ್ರಯತ್ನಮಾಡಿ ಉಪಾಯದಿಂದ ತಮ್ಮ ಮನೆಗೆ ರಕ್ಷಿಸಿ ಕರೆದುಕೊಂಡು ಬರುತ್ತಾರೆ. ಅವಳನ್ನು ತಂಗಿಯಂತೆ ಭಾವಿಸಿದ ರಶೀದ್ ಅವಳನ್ನು ಅವಳ ಮನೆ ಮುಟ್ಟಿಸುವುದಕ್ಕೆ ಹೋರಾಡುತ್ತಾ ವಲಸೆ ಕ್ಯಾಂಪ್‌ನಲ್ಲಿದ್ದ ಅವಳಣ್ಣ ರಾಮ್‌ಚಂದ್‌ನನ್ನು ಹುಡುಕಿ ತರುತ್ತಾನೆ. ರಾಮ್‌ಚಂದ್ ಕೂಡ ತಂಗಿಗಾಗಿ ಹಂಬಲಿಸಿ ಕಣ್ಣೀರಾಗುತ್ತಾನೆ. ಜೊತೆಯಲ್ಲಿ ಪುರೋ ಅಣ್ಣ ಕೂಡ ಇರುತ್ತಾನೆ. ಪುರೋ ಮತ್ತು ರಶೀದ್ ಲಾಜೋಳನ್ನು ರಾಮ್‌ಚಂದ್‌ಗೆ ಒಪ್ಪಿಸುವಾಗ ಪುರೋ ತನ್ನ ಅಣ್ಣನಿಗೆ “ಲಾಜೋಳನ್ನು ಯಾವ ಕಾರಣಕ್ಕೂ ಶಿಕ್ಷಿಸಬೇಡ. ಚೆನ್ನಾಗಿ ನೋಡಿಕೋ. ಅವಳು ನಿರಪರಾಧಿ” ಎನ್ನುತ್ತಾಳೆ. ಅವಳಣ್ಣ ಖಂಡಿತ ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಕಣ್ಣೀರು ತುಂಬಿಕೊಂಡು “ನೀನೂ ಹಿಂದೂಸ್ಥಾನಕ್ಕೆ ಬಂದು ಬಿಡು. ರಾಮ್‌ಚಂದ್ ನಿನ್ನನ್ನು ಮದುವೆಯಾಗಲು ಕಾಯುತ್ತಿದ್ದಾನೆ ಅವನು ತುಂಬಾ ಒಳ್ಳೆಯವನು” ಎಂದು ಅಂಗಲಾಚುತ್ತಾನೆ. ಆದರೆ ಪುರೋ ರಶೀದ್‌ನ ಜೊತೆಗೆ ಹೋಗಿ ಹೇಳುವ ಮಾತು - “ಇನ್ನಿದೇ ನನ್ನ ಮನೆ, ನನ್ನ ಮನೆಯಿಂದ ನಾನು ದೂರಾಗುವುದಿಲ್ಲ. ಯಾವ ಹೆಣ್ಣು ತನ್ನ ಮನೆಯನ್ನು ಸುರಕ್ಷಿತವಾಗಿ ಸೇರುತ್ತಾಳೋ ಅವಳಲ್ಲೆಲ್ಲಾ ನನ್ನ ಆತ್ಮವಿರುತ್ತದೆ. ಲಾಜೋಳಲ್ಲಿ ನನ್ನ ಆತ್ಮವಿದೆ” ಎನ್ನುತ್ತಾ ರಶೀದ್ ಜೊತೆಗೆ ನಡೆಯುತ್ತಾಳೆ.

ಈ ಮನ ಮಿಡಿಯುವ ಕಥೆ ನನ್ನ ಪ್ರೀತಿಯ ಪಂಜಾಬೀ ಲೇಖಕಿ ಅಮೃತಾ ಪ್ರೀತಮ್ ಕಾದಂಬರಿ ‘ಪಿಂಜರ್’ ಎಂಬ ಪುಸ್ತಕದ್ದು. (ಪಿಂಜರ್ ಎಂದರೆ ಪಂಜರ. ಪಂಜರ ಮೀರುವ ಹೆಣ್ಣುಮಗಳ ಕಥೆಯಿದು.) ಇದು ಸುಂದರ ಹಿಂದಿ ಚಿತ್ರವಾಗಿ ಕೂಡ ರೂಪುಗೊಂಡು ನಿಜವಾದ ಪ್ರೀತಿಯ ಸಂಬಂಧಗಳು ಹೇಗಿರುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ನನ್ನ ಕಣ್ಣು ಹನಿಗೂಡಿತು. ಯಾರು ಹಿಂದು? ಯಾರು ಮುಸ್ಲಿಂ? ಹೃದಯವಿರುವ ಹಾದಿಯಲ್ಲಿ ನಡೆಯುವುದಷ್ಟೇ ಧರ್ಮ. ಅಲ್ಲವೇ ಎಂದು ಆತ್ಮ ಪ್ರಶ್ನಿಸುತ್ತದೆ.

No comments:

Post a Comment