Saturday, September 18, 2010

ಅದ್ದುವಿನ ‘ನೋಂಬು’ ಹಾರೈಸುವ ಒಳಿತಿನ ಬೆಳಕು

-ಜ್ಯೋತಿ ಗುರುಪ್ರಸಾದ್

‘ನೋಂಬು’ ಎಂಬ ಪಕೀರ್ ಮುಹಮ್ಮದ್ ಕಟಪಾಡಿಯವರು ಬರೆದಿರುವ ಕಥೆ ನನ್ನ ಇಷ್ಟದ ಕಥೆಗಳಲ್ಲಿ ಒಂದು. ಈ ಕಥೆ ಅದ್ದು ಎಂಬ ಹುಡುಗನ ಮುಗ್ಧ ಮನಸ್ಸಿನ ಮೂಲಕ ಲೋಕವನ್ನು ನೋಡುವ ಸತ್ಯ-ಧರ್ಮದ ನಿಜ ಎಳೆಗಳನ್ನು ಸರಳವಾಗಿ ಬೆಸೆಯುವ ಮಹತ್ವದ ಸಾಂಸ್ಕೃತಿಕ ಕೊಂಡಿಯಾಗಿ ಕಾಣುತ್ತದೆ.

‘ನೋಂಬು’ ಎಂದರೆ ಉಪವಾಸ ವ್ರತ. ಮುಖ್ಯವಾಗಿ ‘ರಮಝಾನ್’ ತಿಂಗಳಲ್ಲಿ ಇರುವ ಉಪವಾಸ ವ್ರತದ ಆಚರಣೆ. ಮುಂಜಾನೆ ಹಾಗೂ ಕತ್ತಲಾದ ನಂತರ ತೆಗೆದುಕೊಳ್ಳುವ ಉಪಹಾರ ಬಿಟ್ಟರೆ ಈ ನಡುವೆ ಮತ್ತೇನನ್ನೂ ಆಹಾರವಾಗಿ ಸ್ವೀಕರಿಸದೆ ಅಲ್ಲಾಹನ ಧ್ಯಾನದಲ್ಲಿ ಕಟ್ಟು ನಿಟ್ಟಾಗಿ ಆಚರಿಸುವ ಮನಃಶುದ್ಧಿಯ ಉಪವಾಸ ವ್ರತ. ಈ ಉಪವಾಸ ವ್ರತದ ಉದ್ದೇಶ ಒಳಿತಿನ ಹಾರೈಕೆ. ಈ ಒಳಿತಿನ ಕಲ್ಪನೆ ಹೇಗಿದೆ ಎಂದರೆ ಹಸಿವಿನ ಕಷ್ಟ ಅರ್ಥ ಮಾಡಿಕೊಂಡು ಉಳ್ಳವರು ಇಲ್ಲದವರಿಗೆ (ಬಡವರಿಗೆ) ಕೈಲಾದಷ್ಟು ದಾನ ಮಾಡುವ ಅಭ್ಯಾಸ ಬೆಳೆಸಿಕೊಂಡು ವ್ರತವನ್ನು ಆಚರಿಸಿದರೆ ಅವರ ಇಷ್ಟಾರ್ಥ ಫಲಿಸುವ ಸ್ವರ್ಗ ಸುಖ ಅವರಿಗೆ ಲಭಿಸುತ್ತದೆ ಎಂಬ ಸಂತಸದ ಸಂದೇಶವನ್ನು ರವಾನಿಸುವ ರೂಪಕ.

ಈ ರೂಪಕವನ್ನು ‘ನೋಂಬು’ ಕಥೆಯ ಅದ್ದು ಎಂಬ ಬಡವರ ಮನೆಯ ಹುಡುಗ ನಮಗೆ ಎಷ್ಟು ಚೆನ್ನಾಗಿ ಕಣ್ಮುಂದೆ ಬರಿಸುತ್ತಾ ನೆಂದರೆ ಧ್ಯಾನದಲ್ಲಿ ಓದುವ ನಾವು ಕೂಡ ‘ನೋಂಬು’ ಆಚರಿಸಿದ ಸಂಭ್ರಮಕ್ಕೆ ಒಳಗಾಗು ತ್ತೇವೆ. ಕಥೆ ಇಬ್ಬರು ಎಳೆಯ ಗೆಳೆಯರ ಮನೆಗಳ ನಡುವೆ ನಡೆಯುತ್ತದೆ. ಅದ್ದು ಮತ್ತು ಕಾಸಿಂ ಎಂಬ ಹೆಸರಿನ ಪುಟ್ಟ ಮಕ್ಕಳು ಅವರು. ಅದ್ದು ಬೀಡಿ ಕಟ್ಟಿ ಜೀವನ ಸಾಗಿಸುವ ಅನಿವಾರ್ಯತೆ ಇರುವ ಬಡ ಅಪ್ಪ ಅಮ್ಮನ ಮಗನಾದರೆ, ಕಾಸಿಂ ತನ್ನ ಮನೆಯಲ್ಲಿ ಐಹಿಕವಾದ ಎಲ್ಲಾ ಸುಖ ಸಂಪತ್ತು ಉಳ್ಳ ಶ್ರೀಮಂತರ ಮನೆಯ ಹುಡುಗ. ಅದ್ದುವಿಗೆ ‘ನೋಂಬು’ ಹೇಗಿರುತ್ತದೆ ಎಂದು ತಿಳಿದು ಕೊಳ್ಳುವ ಅದಮ್ಯ ಹಂಬಲ. ಅವನ ಮನೆಯಲ್ಲಿ ಅವನ ಅಪ್ಪ-ಅಮ್ಮ ನೋಂಬನ್ನು ಕೈಗೊಂಡಿದ್ದಾರೆ. ತನ್ನ ಗೆಳೆಯ ಕಾಸಿಂನನ್ನು ‘ನೋಂಬು ಹೇಗಿರುತ್ತದೋ?’ ಎಂದು ಕೇಳುತ್ತಾನೆ. ಅವನಿಗೂ ನೋಂಬಿನ ಅನುಭವವಿರುವುದಿಲ್ಲ! ಮಕ್ಕಳಿಗೆ-ಕೈಲಾಗದ ದುರ್ಬಲರಿಗೆ ನೋಂಬಿನ ಕಡ್ಡಾಯವಿರುವು ದಿಲ್ಲ. ತನಗೆ ತನ್ನ ಅಮ್ಮನಿಂದ ತಿಳಿದಷ್ಟನ್ನು ಮಾತ್ರ ಹೇಳುತ್ತಾನೆ. ‘ಈ ರಮಝಾನ್ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದಂತೆ. ಈ ರಮಾಝಾನ್ ತಿಂಗಳಲ್ಲಿ ಖುರಾನ್ ಇದೆಯಲ್ಲ, ಅದು ಭೂಮಿಗೆ ಬಂದಿತ್ತಂತೆ ನೋಂಬು ಮಾಡಿದವರೆಲ್ಲ ಸ್ವರ್ಗಕ್ಕೆ ಹೋಗುತ್ತಾ ರಂತೆ’. ‘ಈ ಸ್ವರ್ಗ ಅನ್ನೋದು ಸತ್ತ ನಂತರ ಸಿಗೋದು ಅಲ್ವಾ ಕಾಸಿಂ? ಬದುಕಿರೋವಾಗ ನಮಗೆ ಸಿಕ್ಕಿದ್ರೆ ಎಂಥ ಗಮ್ಮತ್ತು ಆಗ್ತಿತ್ತಲ್ವಾ?’ ಎನ್ನುತ್ತಾನೆ ಅದ್ದು. ‘ಭೂಮಿಯಲ್ಲಿ ಹರಾಮ್ ಆದದ್ದು ಕೂಡ ಸ್ವರ್ಗದಲ್ಲಿ ಹಲಾಲ್ ಆಗಿರುತ್ತ ದಂತೆ’ ಎನ್ನುತ್ತಾನೆ ಕಾಸಿಂ. ‘ಹೌದು ಅಲ್ಲಿ ಸುಖ ಸಂಪತ್ತು ಎಲ್ಲ ಇರ‍್ತದಂತೆ, ಹೊಟ್ಟೆ ತುಂಬ ಊಟ ಇರ‍್ತದಂತೆ, ಮೂಸಂಬಿ, ಸೇಬು, ದ್ರಾಕ್ಷಿ ಹಣ್ಣುಗಳಿರ‍್ತವಂತೆ. ದಿನವೂ ಮಾಂಸದ ಅಡುಗೆ, ತುಪ್ಪದ ಅನ್ನ, ಗರಿ ಗರಿ ಇಸ್ತ್ರೀ ಮಾಡಿದ ಸಿಲ್ಕ್ ಅಂಗಿ, ಜರಿಯ ಟೊಪ್ಪಿ ಎಲ್ಲ ಇರ‍್ತದಂತೆ’ ಎಂದು ಅದ್ದು ತನ್ನ ಜ್ಞಾನದ ಬಗ್ಗೆ ಹೇಳುತ್ತಾನೆ. ‘ಅಯ್ಯೋ ಇದೆಲ್ಲ ಬೇಕಾದ್ರೆ ಸ್ವರ್ಗಕ್ಕೆ ಹೋಗ್ಬೇಕಾ? ನಮ್ಮ ಮನೆಯಲ್ಲಿ ಅದೆಲ್ಲಾ ಇರ‍್ತದೆ’ ಎಂದು ಕಾಸಿಂ ನಗುತ್ತಾನೆ. ತನ್ನ ಬಡ ಅಪ್ಪ ಅಮ್ಮನ ಬೀಡಿ ಕಟ್ಟುವ ಕಷ್ಟ-ಅವರ ಕೆಮ್ಮು-ಹೊಟ್ಟೆಗಿಲ್ಲದ ಉಪವಾಸದ ದಿನಗಳು ಇವೆಲ್ಲದರ ಅನುಭವ ವಿದ್ದ ಅದ್ದು ಕಾಸಿಂನ ಈ ಮಾತನ್ನು ಕೇಳಿ ಪೆಚ್ಚಾ ಗುತ್ತಾನೆ. ‘ಹಾಗಾದ್ರೆ ಕಾಸಿಂನ ಮನೆಯೆಂದರೆ ಸ್ವರ್ಗವೇ ಇರಬೇಕು’ ಎಂದುಕೊಂಡು ಅದ್ದು ಕುತೂಹಲದಿಂದ ಗೆಳೆಯ ಕಾಸಿಂನ ಮನೆಗೆ ಕಾಲಿಡುತ್ತಾನೆ. ಅಲ್ಲಿ ಅವನಿಗೆ ಕಾಸಿಂನ ಶ್ರೀಮಂತ ಮನೆಯ ಸುಖ-ಸುಪ್ಪತ್ತಿಗೆಯ ಜೊತೆಗೆ ಕಾಸಿಂನ ಅಪ್ಪ ಅಮ್ಮ ಅಕ್ಕ ಭಾವ ಎಲ್ಲರ ಪರಿಚಯದ ಅನುಭವನೂ ಆಗ ತೊಡಗುತ್ತದೆ. ಕಾಸಿಂನೊಡನೆ ಅದ್ದುವಿಗೂ ಪ್ರೀತಿಯಿಂದ ರೊಟ್ಟಿ ಮಾಡಿ ಕೊಡುವ ಕಾಸಿಂನ ಅಮ್ಮನ ಮೂಲಕ ‘ನೋಂಬಿ’ನ ಬಗೆಗಿನ ಕಥೆಯೊಂದು ಅದ್ದುವಿನ ಮನೋಭೂಮಿಕೆಯಲ್ಲಿ ಅಚ್ಚಳಿಯದೆ ಕಾಡುತ್ತಾ ಉಳಿದು ಬಿಡುತ್ತದೆ.

ಆ ಕಥೆ ಹೀಗಿದೆ-‘ಒಂದೂರಿನಲ್ಲಿ ಒಬ್ಬ ಏಳು ವರ್ಷದ ಹುಡುಗನಿದ್ದ ನಿಮ್ಮ ಹಾಗೆ...’ ಎನ್ನುತ್ತಾ ರೊಟ್ಟಿ ಸುಡುವ ಜೊತೆಗೆ ಕಾಸಿಂನ ಅಮ್ಮ ಕಥೆ ಹೇಳತೊಡಗುತ್ತಾಳೆ. ಹುಡುಗ ತಾಯಿಯೊಂದಿಗೆ ಹಠ ಹಿಡಿದು ಉಪವಾಸ ಮಾಡಿದ್ದು, ಸಂಜೆಯಾಗುತ್ತಲೇ ಮುಖ ಬಾಡಿ, ಮೈ ಒಣಗುತ್ತಾ ಬಂದು ಅವನು ಸತ್ತು ಹೋದದ್ದು, ಆಗ ಅಲ್ಲಾಹನ ಧೂತನೊಬ್ಬ ಪಕೀರನ ವೇಷದಲ್ಲಿ ಬಂದು ಅಲ್ಲಾಹನ ದಯೆಯಿಂದ ಬದುಕಿಸಿದ್ದು, ಮತ್ತೇ ಅವನು ತನ್ನ ತಂದೆ-ತಾಯಿಗಳ ಜೊತೆಗೆ ಸುಖವಾಗಿ ಬಾಳಿದ್ದು. ಕಥೆ ಕೇಳುತ್ತಾ ರೋಮಾಂಚನಗೊಂಡ ಅದ್ದು ತಾನೂ ಅಮ್ಮನೊಂದಿಗೆ ಹಠ ಹಿಡಿದು ಮಾರನೆ ದಿನ ನೋಂಬನ್ನು ಆರಂಭಿಸುತ್ತಾನೆ. ‘ತಾನು ಸತ್ತರೆ ಅಲ್ಲಾಹನ ಧೂತ ಬಂದು ಬದುಕಿಸುತ್ತಾನೆ ಉಪವಾಸ ಮಾಡಿದಾಗ ದುವಾ ಮಾಡಿದರೆ ಅಲ್ಲಾಹ್ ಕೇಳಿದ್ದೆಲ್ಲ ಕೊಡುತ್ತಾನಂತೆ. ನಮ್ಮ ಅಪ್ಪ ಅಮ್ಮನಿಗೆ ಕಷ್ಟ ಕೊಡಬೇಡ ಅಂತ ಅಲ್ಲಾಹನಲ್ಲಿ ಬೇಡಿಕೊಳ್ಳಬೇಕು. ನಮಗೆ ಕೂಡ ಕಾಸಿಂನವರಿಗಿರುವಂತಹ ‘ಜನ್ನತುಲ್ ಫಿರ್ದೌಸು’ ನಂತಹ ಮನೆ, ಚೆಂದದ ಬಟ್ಟೆ ಬರೆ ಕೊಡು’ ಎಂದು ಅಲ್ಲಾಹನಲ್ಲಿ ಕೇಳಬೇಕೆಂಬುದು ಅದ್ದುವಿನ ನೋಂಬಿನ ಉದ್ದೇಶ.

ನೋಂಬಿನಲ್ಲಿರುವವರು ಸುಳ್ಳು ಹೇಳಬಾರದು, ಮೋಸ ಮಾಡಬಾರದು, ದುಶ್ಚಟಗಳಲ್ಲಿ ಬೀಳಬಾರದು ಎಂಬುದು ಅದ್ದುವಿಗಿದ್ದ ನಂಬಿಕೆ. ಅದು ಅವನಿಗೆ ಅವನ ಮನೆಯ ವಾತಾವರಣದಿಂದಲೂ ಲಭಿಸಿರುತ್ತದೆ. ಆದರೆ ಕಾಸಿಂ ಮನೆಯಲ್ಲಿ ಅವನ ನಂಬಿಕೆಗೆ ತದ್ವಿರುದ್ದವಾದ ಘಟನೆಗಳೇ ನಡೆಯುತ್ತಾ ದೊಡ್ಡವರ ಕಪಟ ಆಚರಣೆಯ ಬಗ್ಗೆ ಅದ್ದುವಿನ ಕೋಮಲವಾದ ಮನಸ್ಸು ಘಾಸಿಗೊಳ್ಳುವ ಪ್ರಸಂಗಗಳು ಎದುರಾಗುತ್ತದೆ. ಮದುವೆಯಾಗಿ ವರ್ಷದ ಮೊದಲ ಹಬ್ಬಕ್ಕಾಗಿ ಮಾವನ ಮನೆಗೆ ಬಂದಿರುವ ಕಾಸಿಂನ ಭಾವ ನೋಂಬಿನಲ್ಲಿರುವ ಅದ್ದುವನ್ನು ಯಾರಿಗೂ ತಿಳಿಯದಂತೆ ತನಗೆ ಸಿಗರೇಟು ತಂದುಕೊಡಬೇಕೆಂದು ಹೇಳುತ್ತಾನೆ. ನೋಂಬಿನ ಬಗೆಗೆ ಪ್ರಶ್ನೆ ಆಗಲಿಂದ ಅದ್ದುವಿನ ಪುಟ್ಟ ತಲೆಯಲ್ಲಿ ಆರಂಭವಾಗುತ್ತದೆ. ‘ಸಿಗರೇಟು ಸೇದಿದ್ರೆ ನೋಂಬು ಹೋಗುತ್ತದೆ..’ ಎನ್ನುತ್ತಾನೆ ಅದ್ದು. ‘ನನಗೇ ಬುದ್ದಿ ಹೇಳ್ತಿಯೇನೋ ಹುಡುಗ’ ಎಂದು ಕಾಸಿಂನ ಭಾವ ಗದರಿದ ತಕ್ಷಣ ಅದ್ದು ಅಲ್ಲಿಂದ ಕಂಬಿಕೀಳುತ್ತಾನೆ. ಸೂರಪ್ಪನ ಅಂಗಡಿಯಿಂದ ಸಿಗರೇಟು ತರುವಾಗ ಅದ್ದುವಿಗೆ ಸಿಗುವ ಇಸ್ಮಾಲಿ ಹಾಜಿಯವರು ಮಾತಾಡಲೇ ಬಿಡದಂತೆ ಆ ಸಿಗರೇಟು ಅದ್ದುವಿನ ಅಪ್ಪನಿಗೆ ಇರಬೇಕೆಂದು ತಪ್ಪು ಊಹೆ ಮಾಡಿ ‘ಅದಕ್ಕೆ ನೀವು ಬಡವರಾಗಿರೋದು’ ಎಂದು ಚುಚ್ಚು ಮಾತನ್ನಾಡಿ ಅದ್ದುವನ್ನು ನೋಯಿಸುತ್ತಾರೆ. ‘ಅಪ್ಪ-ಅಮ್ಮ ನೋಂಬು-ನಮಾಝ್ ಎರಡನ್ನೂ ಎಂದೂ ತಪ್ಪಿಸಿದವರಲ್ಲ ಆದರೂ ನಾವು ಯಾಕೆ ಬಡವರಾಗಿಯೇ ಉಳಿದಿದ್ದೇವೆ?’ ಎಂಬ ಪ್ರಶ್ನೆ ಅದ್ದುವಿಗೆ ಏಳುತ್ತದೆ. ನಂತರ ಕಾಸಿಂನ ಒಳ್ಳೆಯ ಅಕ್ಕ ಜಮೀಲಾಳ ಮೇಲೆ ಕಾಸಿಂನ ಭಾವ ಹಣಕ್ಕಾಗಿ ದಬ್ಬಾಳಿಕೆ ಮಾಡುವುದನ್ನು ನೋಡಿ ಅಲ್ಲಿಂದ ಓಡೋಣವೆನಿಸುತ್ತದೆ. ‘ನಾನು ಹೇಳಿದ ಹಾಗೆ ಕೇಳ್ಬೇಕು. ತಪ್ಪು ಎದುರು ಮಾತಾಡಿದ್ರೆ ಸೊಡ್ಡಿಗೆ ಜಪ್ಪುತ್ತೇನೆ’ ಎನ್ನುತ್ತಾ ಹೆಂಡತಿ ಜಮೀಲಾಳಿಗೆ ಕಾಸಿಂನ ಭಾವ ಜೋರು ಮಾಡುತ್ತಾನೆ. ‘ಅದೆಷ್ಟು ಹಣ ನಿಮ್ಗೆ ಅಪ್ಪನಿಂದ ಕೊಡ್ಸೋದು? ನೀವೇನಾದ್ರು ಸಂಪಾದನೆ ಮಾಡದಿದ್ರೆ ಹೇಗೆ? ಅಪ್ಪ ಎಷ್ಟೂಂತ ಕೊಟ್ಟಾರು?’ ಇದು ಜಮೀಲಕ್ಕನ ಸ್ವರ. ಪಟಾರನೆ ಅವಳ ಕೆನ್ನೆಗೆ ಕಾಸಿಂನ ಭಾವ ಹೊಡೆವ ಪೆಟ್ಟು. ಆಗ ಅದ್ದು ಗಡಗಡನೆ ನಡುಗುತ್ತಾನೆ. ನಂತರ ಮನೆಯ ಹೊರಗೆ ಅಲ್ಲೇ ನಿದ್ದೆಯಿಂದೆದ್ದ ಕಾಸಿಂನ ತಂದೆ ಬೇಡಲು ಬಂದಿದ್ದ ಒಬ್ಬ ಹುಚ್ಚನನ್ನು ಗಟ್ಟಿಯಾಗಿ ಗದರುವುದು ಕೇಳುತ್ತದೆ. ಮಸೀದಿಯ ಮುಂದೆ ಹರಕು ಬಟ್ಟೆ ತೊಟ್ಟು ಯಾವಾಗಲೂ ಬೇಡುತ್ತಾ ನಿಲ್ಲುವ ಹುಚ್ಚನನ್ನು ‘ ನಿಂಗೆ ನೋಂಬಿನ ದಿನ ಗೊತ್ತುಂಟ ಇಲ್ವಾ? ಊಟ ಹಾಕಿ ಅಂತಾ ಕೇಳ್ತಿಯಲ್ವಾ ನಾಚಿಕೆ ಇಲ್ಲದವನೆ! ಅದಕ್ಕಾಗೇ ಅಲ್ಲಾಹ್ ನಿನಗೆ ಹೀಗೆ ಹುಚ್ಚನನ್ನಾಗಿ ಮಾಡಿಟ್ಟಿದ್ದಾನೆ ನಡಿಯಾಚೆ...’ ಎಂದು ಕಾಸಿಂನ ಅಪ್ಪ ಗದರಿಸಿದಾಗ ಆ ಹುಚ್ಚ ಒಂಥರಾ ನಕ್ಕು ಅಲ್ಲಿಂದ ಓಡಿರುತ್ತಾನೆ. ಕಾಸಿಂನ ತಂದೆಯ ಮುಖದ ಮೇಲೆ ಹುಚ್ಚನಿಗೆ ಜೋರು ಮಾಡಿದ ಸಿಟ್ಟನ್ನು ಅದ್ದು ಗಮನಿಸುತ್ತಾನೆ. ಸರಿದು ನಿಲ್ಲುತ್ತಾನೆ.‘ಇರ‍್ಲಿ ಈ ಹುಚ್ಚನಿಗೂ ಹೀಗೆ ಒಂದು ದಿನ ನೋಂಬು’ಎಂದು ಒಳಗೊಳಗೆ ಅದ್ದು ನಗುತ್ತಾನೆ. ಮುಂದೆ ಕಾಸಿಂ ಅಕ್ಕ ಜಮೀಲಾ ಯಾರಿಗೂ ಹೇಳದಂತೆ ತನಗೆ ಹೊಳೆಯ ಬದಿಯಿಂದ ಎರಡು ತೆಂಬೆ ಕಾಯಿ ಕೊಯ್ದು ತಂದು ಕೊಡ್ತಿಯಾ ಎಂದು ಅದ್ದುವನ್ನು ಕೇಳುತ್ತಾಳೆ. ಅದೆಷ್ಟು ಸುಲಭದ ಕೆಲಸವೆನಿಸಿ ಆ ಮರವನ್ನು ಹತ್ತಿ ಆ ಕಾಯಿಯನ್ನು ಅದ್ದು ಜಮೀಲಕ್ಕನಿಗೆ ತಂದು ಕೊಡುತ್ತಾನೆ. ಆದರೆ ನಂತರ ಅದು ವಿಷದ ಕಾಯಿ ಎಂದು ತಾಯಿಯಿಂದ ತಿಳಿದ ತಕ್ಷಣ ಯಾರಿಗೂ ಹೇಳುವುದಿಲ್ಲವೆಂದು ಜಮೀಲಕ್ಕಳಿಗೆ ಮಾಡಿದ ಆಣೆಯನ್ನು ಮುರಿದು ತಾಯಿಗೆ ಸತ್ಯ ಹೇಳುತ್ತಾನೆ. ತಕ್ಷಣ ಅದ್ದುವಿನ ತಾಯಿ ಕಾಸಿಂ ಮನೆಗೆ ಸುದ್ದಿ ಮುಟ್ಟಿಸಲು ಓಡುವವರೆಗೆ ಜಮೀಲ ವಿಷದ ಕಾಯಿಯನ್ನು ತಿಂದು ನಿಸ್ತೇಜವಾಗಿ ಇನ್ನೂ ಉಳಿದಿರುವ ಪ್ರಾಣದಿಂದ ನರಳುತ್ತಿರುತ್ತಾಳೆ. ಜಮೀಲಳ ತಾಯಿ ಅಂತಹ ಕೆಟ್ಟ ಗಂಡನಿಗೆ ತನ್ನ ಮುತ್ತಿನಂತಹ ಮಗಳನ್ನು ಮದುವೆ ಮಾಡಿಕೊಟ್ಟಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾ ಅಳುತ್ತಿರುತ್ತಾಳೆ.

ಆ ನಂತರ ಸಂಜೆಯಾಗುತ್ತಾ ಬಂದಂತೆ ಕಾಸಿಂನ ಮನೆಯ ಹತ್ತಿರವಿದ್ದ ಹುಚ್ಚ ಅದ್ದುವಿನ ಮನೆಗೆ ಬೇಡಲು ಬರುತ್ತಾನೆ. ಅದ್ದುವಿನ ಮನೆಯಲ್ಲಿ ಅವನಿಗೆ ಅದ್ದುವಿನ ಪಾಲಿಗಿಟ್ಟಿದ್ದ ಮಮತೆಯಿಂದ ಕೊಡುವ ಅನ್ನ ಸಿಗುತ್ತದೆ. ಹುಚ್ಚ ಅದನ್ನು ಗಬಗಬನೆ ತಿನ್ನುತ್ತಾನೆ. ‘ಇವನೇ ಆ ಕಥೆಯಲ್ಲಿ ಬಂದ ದೇವಧೂತನ?’ ಎಂದು ಅದ್ದುವಿಗೆ ಪ್ರಶ್ನೆ ಬರುತ್ತದೆ. ಆದರೆ ಹುಚ್ಚ ತಲೆಯೆತ್ತಿ ಅದ್ದುವಿನತ್ತ ನೋಡಿ ಗೇಲಿ ಮಾಡುವವನಂತೆ ಪುಸ ಪುಸನೆ ನಗುತ್ತಾನೆ. ಇದರಿಂದ ಪೆಚ್ಚಾದ ಅದ್ದು ‘ನೋಂಬಿದಲ್ಲವ ಇವ ದೇವಧೂತ ಹೇಗಾದನು?’ ಎಂದುಕೊಳ್ಳುತ್ತಾನೆ. ಕೊನೆಗೆ ಕಾಸಿಂನ ಅಮ್ಮ ಹೇಳಿದ ಕಥೆಯಲ್ಲಿ ಬರುವ ಹುಡುಗ ಒಂದೇ ದಿನದ ನೋಂಬಿನಲ್ಲಿ ಹೇಗೆ ಸತ್ತ? ನಾನ್ಯಾಕೆ ಸಾಯಲಿಲ್ಲ ಎಂಬ ಪ್ರಶ್ನೆಗಳು ಅದ್ದುವನ್ನು ಕಾಡ ತೊಡಗುತ್ತದೆ. ಸೂರ್ಯ ಮುಳುಗಿದ ನಂತರ ಮಸೀದಿಯಿಂದ ಮಗ್ರಿಬ್ ನಮಾಝಿನ ಬಾಂಗ್ ಕೇಳಿ ಬರುವ ಹೊತ್ತು ಅದ್ದು ಮೌನವಾಗಿರುವುದನ್ನು ನೋಡಿ ಅವರಮ್ಮ ಕೇಳುತ್ತಾಳೆ- ‘ಹೇಗಾಯ್ತು ಮಗು ನೋಂಬು?’ ಎನ್ನುತ್ತಾಳೆ. ‘ಅರೆ! ನೋಂಬಂದ್ರೆ ಇದೇಯೇನಮ್ಮಾ? ಹೀಗೆ ನಾವು ತುಂಬಾ ಸಲ ಇದ್ದೇವಲ್ಲಾ..! ಆ ದಿನ ನೋಡು, ಅಪ್ಪ ಆಸ್ಪತ್ರೆಯಲ್ಲಿ ಇದ್ದಾಗ ನೀನು ಬೀಡಿ ಕಟ್ಟುವ ದಿನ.. ಅನ್ನ ಮಾಡದೆ ಹೀಗೆಯೇ ನೋಂಬಿನಂತೆಯೇ ಇತ್ತಲ್ಲ..?’ ಎನ್ನುತ್ತಾನೆ ಅದ್ದು . ಅಮ್ಮ ಅಪ್ಪನ ಮುಖ ನೋಡುತ್ತಾಳೆ. ‘ನಮ್ಮ ಮಗ ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತಾನೆ’ ಎಂದು ಅದ್ದುವಿನ ತಂದೆ ಹೇಳುವುದರೊಂದಿಗೆ ಕಥೆ ಮುಗಿಯುತ್ತದೆ.

ಆದರೆ ‘ನೋಂಬು’ವಿನ ನಿಜವಾದ ಅರ್ಥ ನಮ್ಮ ಎದೆಯೊಳಗೆ ಸಂಚರಿಸಲಾರಂಭಿಸುತ್ತದೆ-ಸಮಾನತೆ-ಶಾಂತಿ ಎಲ್ಲದರ ನಿಷ್ಕಪಟ ಆಚರಣೆಯಾಗಿ. ಅಲ್ಲಿ ರಮಝಾನ್‌ಚಂದ್ರ-ಚೌತಿಚಂದ್ರ ಒಟ್ಟಾಗಿ ಕಾಣಲಾರಂಭಿಸುತ್ತಾರೆ. ಅದ್ದುವಿನೊಳಗೆ ಸಮೂಹ ಹಿತವನ್ನು ಬಯಸುವ ಗಣೇಶ ಚತುರ್ಥಿಯ ಮೂರ್ತಿಯಾದ ಗಣೇಶನೂ ಇರುವನೆಂದು ಹೇಳಿದರೆ ನನ್ನ ಮಾತು ಸುಳ್ಳಲ್ಲ ಅಲ್ಲವೇ?
ಇಂಥಹ ಕಥೆಯನ್ನು ಬರೆದು ನಮ್ಮೊಳಗೆ ನಿಜವಾದ ‘ನೋಂಬ’ನ್ನು ತಂದ ಕಟಪಾಡಿಯವರಿಗೆ ನಮಸ್ಕಾರಗಳು.

No comments:

Post a Comment