Wednesday, May 25, 2011

ಬೇಸಿಗೆ ರಜೆ ಮಕ್ಕಳ ಹಕ್ಕು

ಎಪ್ರಿಲ್ ೨೯, ೨೦೧೧ ವಾರ್ತಾಭಾರತಿ

ಹಿಂದೆಲ್ಲ ವಿದ್ಯಾರ್ಥಿಗಳು, ಮಕ್ಕಳು ಬೇಸಿಗೆಯ ಕಾಲಕ್ಕಾಗಿ ಕಾಯುತ್ತಿದ್ದರು. ಸುಡುವ ಬಿಸಿಲು ಆಕಾಶದಿಂದ ಸುರಿ ಯುತ್ತಿದ್ದರೂ ಅದು ಅವರ ಪಾಲಿಗೆ ತಂಪಾಗಿ ಕಾಣುತ್ತಿತ್ತು. ಇದಕ್ಕಿರುವ ಕಾರಣ ಒಂದೇ. ಬೇಸಿಗೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸ ಲಾಗುತ್ತಿತ್ತು. ಸುಮಾರು ಒಂದೂವರೆ ತಿಂಗಳು ಮಕ್ಕಳ ಪಾಲಿಗೆ ‘ರಜೆ’ಯ ಹಬ್ಬ. ಈ ಸಂದರ್ಭದಲ್ಲಿ ಮೇಷ್ಟ್ರುಗಳ ಭಯವಿಲ್ಲ. ಪಾಠದ ಹಂಗಿಲ್ಲ. ಬೆಳಗ್ಗೆ ಎದ್ದ ಕೂಡಲೇ ಶಾಲೆಗೆ ಸಿದ್ಧವಾಗಬೇಕಾಗಿಲ್ಲ. ನಾಲ್ಕು ಗೋಡೆಗಳ ನಡುವೆ ಬೆಳಗ್ಗಿನಿಂದ ಸಂಜೆಯ ವರೆಗೆ ಜೈಲಿನ ಬದುಕನ್ನು ಕಳೆಯಬೇಕಾಗಿಲ್ಲ. ಪರೀಕ್ಷೆಗೆ ಹೆದರಬೇಕಾಗಿಲ್ಲ. ಮನೆಯಲ್ಲಿ ಹೋಮ್‌ವರ್ಕ್‌ನ ರಗಳೆಯೂ ಇಲ್ಲ. ಈ ಕಾರಣಕ್ಕಾಗಿಯೇ ಮಕ್ಕಳು ಬೇಸಿಗೆಗಾಗಿ ಕಾಯುತ್ತಿದ್ದರು.

ಹಿಂದೆಲ್ಲ ಬೇಸಿಗೆಯನ್ನು ಮಕ್ಕಳು ಅನುಭವಿಸುವ ರೀತಿಯೂ ಭಿನ್ನವಾಗಿ ರುತ್ತಿತ್ತು. ಮಕ್ಕಳು ನಡೆದದ್ದೇ ದಾರಿ. ಆಡಿದ್ದೇ ಆಟ. ಬೇಸಿಗೆಯಲ್ಲಿ ಗೇರು, ಮಾವು ವೊದಲಾದ ಹಣ್ಣುಗಳು ಕಣ್ಣು ಬಿಡುವ ಸಮಯ. ಬೀದಿಯಲ್ಲಿ ಬೆಳೆದು ನಿಂತ ಮಾವು, ಗೇರು ಗಿಡಗಳನ್ನು ಹತ್ತಿ ಹಣ್ಣುಗಳನ್ನು ಕೊಯ್ಯುವುದು ಮಕ್ಕಳ ದೊಡ್ಡ ಸಾಹಸ. ಕಲ್ಲೆಸೆದು ಮಾವುಗಳನ್ನು ಕೆಡವುದು, ಕಾಡು, ಗುಡ್ಡ ಅಲೆದು ನೇರಳೆ, ಪೇರಳೆ, ನೆಲ್ಲಿಕಾಯಿ ಸಂಗ್ರಹಿಸುವುದು, ಗೇರು ಬೀಜಗಳನ್ನು ಸಂಗ್ರಹಿಸಿ ಮಾರುವುದು ಇವೆಲ್ಲ ಮಕ್ಕಳ ಪಾಲಿನ ಭಾರೀ ಸಾಹಸಗಳು. ಇಲ್ಲಿ ಮಕ್ಕಳಿಗೆ ಯಾರೂ ಗುರುಗಳಿಲ್ಲ. ಅವರಿಗೆ ಅವರೇ ನಾಯಕರು. ನದಿ, ಕೆರೆಗಳಿಗೆಲ್ಲ ಮಕ್ಕಳೇ ರಾಜರು. ತಮಗೆ ತಾವೇ ಈಜು ಕಲಿತು, ನದಿಯ ಆಳ, ಅಗಲಗಳನ್ನು ಅಳೆಯುತ್ತಾರೆ. ಮೈದಾನದಲ್ಲಿ ಕ್ರಿಕೆಟ್ ಎನ್ನುವ ಏಕತಾನದ ಆಟಕ್ಕಿಂತಲೂ, ಗ್ರಾಮೀಣ ಆಟಗಳಲ್ಲಿ ಅವರು ತಲ್ಲೀನರಾಗಿರುತ್ತಾರೆ. ಗೋರಿ, ಕಬಡ್ಡಿ, ಕುಂಟೇಬಿಲ್ಲೇ, ಚಿನ್ನೆ ದಾಂಡು ಇತ್ಯಾದಿ ಆಟಗಳಿಗೆ ಜೀವ ಬರುತ್ತದೆ. ಈ ಆಟಗಳಲ್ಲಿ ಅವರಿಗೆ ಅವರೇ ಚಾಂಪಿಯನ್‌ಗಳು.

ಬೇಸಿಗೆಯ ಮಕ್ಕಳ ಆಟ-ಪಾಠಗಳಿಗೆ ಪ್ರಕೃತಿಯೇ ಗುರು. ಬಿಸಿಲು ಅವರಿಗೆ ತಾಗುವುದೇ ಇಲ್ಲ. ಕಾಡಿನಲ್ಲಿ ಅರಳುವ ಎಲ್ಲ ಹೂವುಗಳ ಹೆಸರು ಅವರಿಗೆ ಗೊತ್ತಿರುತ್ತಿತ್ತು. ಕಾಡುಹಣ್ಣುಗಳ ಸ್ವಾದವನ್ನು ಅವರು ಅರಿತಿದ್ದರು. ಇಡೀ ವರ್ಷ ಶಾಲೆಯಲ್ಲಿ ಅನುಭವಿಸಿದ ಕಟ್ಟುಪಾಡನ್ನೆಲ್ಲ ಪ್ರಕೃತಿಯ ಬಯಲಲ್ಲಿ ಹರಿದೊಗೆದು, ಜಿಗರೆಯಂತೆ ಜಿಗಿಯುತ್ತಾ ನಲಿದಾಡುತ್ತಾರೆ. ಅವರು ಶಾಲೆಯಲ್ಲಿ ಕಲಿತುದಕ್ಕಿಂತಲೂ ಹೆಚ್ಚು ವಿಷಯಗಳನ್ನು ಬೇಸಿಗೆಯಲ್ಲಿ ಈ ಪ್ರಕೃತಿಯ ಮಡಿಲಲ್ಲಿ ಕಲಿಯುತ್ತಿದ್ದರು. ಅವರೊಳಗಿನ ಸಾಹಸ, ಸೃಜನಶೀಲತೆ ಈ ಪ್ರಕೃತಿಯ ಮಡಿಲಲ್ಲಿ ಚಿಗುರೊಡೆಯುತ್ತಿತ್ತು. ಅವರೊಳಗೆ ಅವಿತಿದ್ದ ಪ್ರತಿಭೆಯಲ್ಲ ಈ ಪ್ರಕೃತಿಯ ಮಡಿಲಲ್ಲಿ ಜೀವ ಪಡೆಯುತ್ತಿತ್ತು. ಅವರ ಚಟುವಟಿಕೆಗಳಿಗೆ ಇಲ್ಲಿ ಪರೀಕ್ಷೆಯಿರಲಿಲ್ಲ. ಅಂಕ ಹಾಕುವವರೂ ಇರಲಿಲ್ಲ. ಆದರೆ ಎಲ್ಲ ವಿದ್ಯಾರ್ಥಿಗಳೂ ಪ್ರಕೃತಿಯ ಮಡಿಲಲ್ಲಿ ನೂರಕ್ಕೆ ನೂರು ಅಂಕ ಪಡೆದು ಉತ್ತೀರ್ಣರಾಗುತ್ತಿದ್ದರು.

ಆದರೆ ದುರದೃಷ್ಟವಶಾತ್ ಇಂದಿನ ದಿನಗಳಲ್ಲಿ ಮಕ್ಕಳಿಗೆ ಆ ಭಾಗ್ಯವಿದೆಯೇ? ವರ್ಷವಿಡೀ ಜೈಲಿನಂತಹ ಶಾಲೆಯ ನಾಲ್ಕು ಗೋಡೆಗಳೊಳಗೆ ಕಳೆಯುವ ಮಕ್ಕಳಿಗೆ ಬೇಸಿಗೆ ರಜೆಯೂ ಹಿತಕರವಾಗಿರುವುದಿಲ್ಲ. ಸಾಧಾರಣ ವಾಗಿ ಬೇಸಿಗೆ ರಜೆಯನ್ನು ಮಕ್ಕಳಿಗೆ ವಿಶೇಷ ತರಗತಿಗಳಿಗಾಗಿ ಪಾಲಕರು ಬಳಸಿಕೊಳ್ಳುತ್ತಾರೆ. ಅಥವಾ ಬೇಸಿಗೆ ಶಿಬಿರವೆನ್ನುವ ಕೃತಕ ವಾತಾವರಣದಲ್ಲಿ ಮಕ್ಕಳನ್ನು ಕಳೆಯ ಬಿಡಲಾಗುತ್ತದೆ. ಅಲ್ಲಿ ಮಕ್ಕಳಿಗೆ ಕಲೆ, ಹಾಡು, ಸಂUತ ಇತ್ಯಾದಿಗಳ ಕುರಿತಂತೆ ಬಲವಂತದ ಉಣಿಸನ್ನು ಉಣಿಸಲಾಗುತ್ತದೆ. ರಜೆಯ ನ್ನಾದರೂ ತಮ್ಮ ಇಷ್ಟದಂತೆ ಕಳೆಯುವ ಹಕ್ಕು ಮಕ್ಕಳಿಗಿಲ್ಲ. ಇತ್ತೀಚಿನ ದಿನಗಳಲ್ಲಿ ರಜೆಯ ದಿನಗಳಲ್ಲಿ ಮಕ್ಕಳು ಸ್ವತಂತ್ರವಾಗಿ ಹೊರಗಡೆ ತಿರುಗಾಡುವಂತಹ ವಾತಾವರಣವೂ ಇಲ್ಲ. ನಗರ ಪ್ರದೇಶಗಳಲ್ಲಿ ಇದು ಸಾಧ್ಯವೂ ಇಲ್ಲ. ಇದರ ಲಾಭವನ್ನು ತಮ್ಮದಾಗಿಸಿಕೊಳ್ಳಲು ಇಂದು ಬೇಸಿಗೆ ರಜೆ ಶಿಬಿರವೆನ್ನುವ ದಂಧೆ ಆರಂಭವಾಗಿದೆ. ಈ ಶಿಬಿರಗಳಲ್ಲಿ ಮಕ್ಕಳನ್ನು ಸೇರಿಸಬೇಕಾದರೆ ಮತ್ತೆ ಶುಲ್ಕಗಳಿವೆ. ಜೊತೆಗೆ ಸೃಜನಶೀಲತೆಯ ಹೆಸರಿನಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳು ಹೇಳಿಕೊಟ್ಟುದನ್ನು ಮಕ್ಕಳು ಅನುಸರಿಸಬೇಕು. ತಂಟೆಗಳು, ಜಗಳ, ಆಟ, ಪಾಟ ಎಲ್ಲಕ್ಕೂ ಮತ್ತೆ ಕಡಿವಾಣ. ತಮ್ಮ ಮನಸ್ಸಿಗೆ ತೋಚಿದುದನ್ನು ಮಾಡುವ ಯಾವ ಅಧಿಕಾರವೂ ಇಲ್ಲ. ಮರಗಳಿಗೆ ಹತ್ತುಮದು, ನದಿ ಕಂಡಲ್ಲಿ ಈಜುವುದು ಇತ್ಯಾದಿಗಳಿಗೂ ಅವಕಾಶವಿಲ್ಲ. ಒಟ್ಟಿನಲ್ಲಿ ಶಾಲೆಯ ಇನ್ನೊಂದು ಮುಖವಾಗಿ ಈ ಶಿಬಿರಗಳು ಕೆಲಸ ಮಾಡುತ್ತವೆ.

ದುರದೃಷ್ಟವಶಾತ್ ಹಳ್ಳಿಗಳಲ್ಲೂ ಬೇಸಿಗೆ ಶಿಬಿರಗಳು ಕಾಲಿಟ್ಟಿವೆ. ಸ್ವತಂತ್ರವಾಗಿ ಹಾರುವ ಚಿಟ್ಟೆಗಳನ್ನು ಪಂಜರದಲ್ಲಿಟ್ಟು ಹಾರುವುದಕ್ಕೆ ಕಲಿಸುವ ಪ್ರಯತ್ನದಂತಿದೆ ಈ ಬೇಸಿಗೆ ಶಿಬಿರ. ಬೇಸಿಗೆ ರಜೆ ಮಕ್ಕಳ ಹಕ್ಕು. ಆ ರಜೆಯಲ್ಲಿ ಮಕ್ಕಳನ್ನು ಮಕ್ಕಳ ಪಾಡಿಗೆ ಬಿಡಬೇಕು. ಪೇಟೆಗಳಲ್ಲಿ ಇದಕ್ಕೆ ಅವಕಾಶವಿಲ್ಲ ನಿಜ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಹಳ್ಳಿಗಳಲ್ಲಿ ರುವ ತಮ್ಮ ಅಜ್ಜನ ಮನೆಗೆ, ಸಂಬಂಧಿಕರ ಮನೆಗೆ ಕರೆದೊಯ್ಯಬೇಕು. ಅಲ್ಲಿನ ಪ್ರಕೃತಿಯ ಮಡಿಲಲ್ಲಿ ಮಕ್ಕಳನ್ನು ಮುಕ್ತವಾಗಿ ಆಡುವುದಕ್ಕೆ, ಓಡಾಡುವುದಕ್ಕೆ ಬಿಡಬೇಕು. ಸಾಧ್ಯವಾದರೆ ಪಾಲಕರೂ ಈ ಮಕ್ಕಳ ಸಂತೋಷದೊಂದಿಗೆ ಭಾಗಿಯಾಗಬೇಕು. ಅವರ ಆಟ, ನೋಟ ಗಳಲ್ಲಿ ಜೊತೆಯಾಗಬೇಕು. ಪ್ರಕೃತಿಯ ಬಯಲಲ್ಲಿ ಮಕ್ಕಳು ಸಹಜವಾಗಿ ಅರಳುವುದಕ್ಕೆ ಬೇಸಿಗೆ ರಜೆ ಒಂದು ಅವಕಾಶವಾಗಬೇಕು. ಎಲ್ಲ ಪಾಲಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.

No comments:

Post a Comment