Wednesday, May 25, 2011

ಗತಿ

ಬಸ್ಸಿನಿಂದಿಳಿದು ಧೂಳೀಮಯವಾದ ರಸ್ತೆಯಲ್ಲಿ ಅಂದಾಜಿ ನಲ್ಲೇ ಕಾಲಿಡುತ್ತಾ ದಾರಿ ಸವೆಸಿ ಮನೆಸೇರಿ ಬಾಗಿಲು ತಟ್ಟಿದೆ. ಎದ್ದು ಚಿಮಿಣಿ ದೀಪ ಹಚ್ಚಿ ಕಣ್ಣುಜ್ಜಿಕೊಳ್ಳುತ್ತಾ ಬಂದು ಬಾಗಿಲು ತೆರೆದ ಅಮ್ಮ ನನ್ನನ್ನು ಗುರುತಿಸಿ ‘ಯಾರು ಅಪ್ಪುವಾ? ಈ ಅಮಾವಾಸ್ಯೆ ಕತ್ತಲಲ್ಲಿ ಹ್ಯಾಗೆ ಬಂದಿ ಮಗಾ?’ಎಂದು ಹೇಳಿ ನನ್ನನ್ನೇ ಪಿಳಿ ಪಿಳಿ ನೋಡಿದಳು. ‘ಕಾಗದ ಸಿಕ್ಕಿತಾ?’ ಎಂದು ಕೇಳಿದಳು. ‘ಹೌದು’ ಎಂದೆ. ಬಟ್ಟೆ ಕಳಚಿ ಗೋಡೆಯಲ್ಲಿದ್ದ ಗೂಟಕ್ಕೆ ಸಿಕ್ಕಿಸಿ ಬಾವಿಕಟ್ಟೆಗೆ ತೆರಳಿ ಕೈ ಕಾಲು ಮುಖ ತೊಳೆದುಕೊಂಡು ಬಂದೆ. ‘ಅನ್ನಕ್ಕೆ ನೀರು ಹಾಕಿಯಾಗಿದೆ. ಅದೇ ಆಗಬಹುದಾ ಅಲ್ಲ ಬಿಸಿ ಅನ್ನ ಮಾಡಬೇಕಾ?’ ಎಂದು ಕೇಳಿದಳು. ‘ಅದನ್ನೇ ಹಿಂಡಿ ಹಾಕು’ ಎಂದೆ. ಪಡಸಾಲೆಯಲ್ಲಿ ತಟ್ಟೆಯ ಮುಂದೆ ಕುಳಿತು ಮಜ್ಜಿಗೆಯಲ್ಲಿ ಅನ್ನವನ್ನು ಕಲಸಿ ಊಟದ ಶಾಸ್ತ್ರವನ್ನು ಮುಗಿಸಿ ಕೈ ತೊಳೆದು ಚಾಪೆ ಬಿಡಿಸಿ ಚೀಲವನ್ನು ತಲೆಯಡಿ ಇಟ್ಟು ಮಲಗಿದೆ. ‘ನಾಳೆಯೇ ಅಲ್ಲಿಗೆ ಹೋಗಿ ಬರುತ್ತೇನೆ, ವೊದಲ ಬಸ್ಸಿನಲ್ಲೇ, ಬೇಗ ಎಬ್ಬಿಸು’ ಎಂದೆ. ಅಮ್ಮ ದೀಪ ಆರಿಸಿ ಜಗಲಿಯಲ್ಲಿ ಹಾಸಿದ್ದ ಬಟ್ಟೆಯ ಮೇಲೆ ಬಿದ್ದುಕೊಂಡಳು. ‘ಅಪ್ಪ ಇಲ್ಲವಾ?’ ಎಂದು ಕೇಳಿದೆ. ‘ಅಲೆವೂರಿಗೆ ಹೋಗಿದ್ದಾರೆ’ ಎಂದಳು.

ಪ್ರಯಾಣದ ಬಳಲಿಕೆಯಿಂದ ನಿದ್ದೆ ಬಂದುದರಿಂದ ಬೆಳಗ್ಗೆ ಬೇಗನೇ ಎಚ್ಚರವಾಗದೆ ಅಮ್ಮನೇ ಬಂದು ಎಬ್ಬಿಸಿದಳು. ದನ ಕರುಗಳಿಗೆ ಕಲಗಚ್ಚು ಇಟ್ಟು ಗಂಜಿಗೆ ನೀರಿಟ್ಟು ವೊಸರು ಕಡೆಯಲು ಕುಳಿತುಕೊಳ್ಳುವಷ್ಟರಲ್ಲಿ ನಾನು ಮುಖ ತೊಳೆದು ಸ್ನಾನ ಮಾಡಿ ಸಂಧ್ಯಾವಂದನೆಯ ‘ಶಾಸ್ತ್ರ’ ಮುಗಿಸಿ ಎದ್ದಾಗ ‘ಬಟ್ಟಲಲ್ಲಿ ಗಂಜಿ ಹಾಕಿದ್ದೇನೆ. ಬೇಗ ‘ಊಟ ಮಾಡಿ ಹೊರಡು’ ಎಂದು ಹೇಳಿ ಚೊಂಬು ಹಿಡಿದುಕೊಂಡು ಹಟ್ಟಿಗೆ ಹೋಗಿ ಕರುವನ್ನು ಬಿಟ್ಟು, ಕಟ್ಟಿ, ದನದ ಕಾಲಬುಡದಲ್ಲಿ ಕುಳಿತು ಹಾಲು ಕರೆಯತೊಡಗಿದಳು. ತಲೆಗೆ ಸ್ವಲ್ಪ ಎಣ್ಣೆ ಹಾಕಿಕೊಳ್ಳೋಣವೆಂದು ಎಣ್ಣೆಯ ಪಾತ್ರೆಯನ್ನು ಕೌಚಿ ಹಿಡಿದರೂ ಎಣ್ಣೆ ಬೀಳದಿದ್ದುದರಿಂದ ನಾಗಂದಿಗೆಯಲ್ಲಿದ್ದ ಡಬ್ಬಕ್ಕೆ ಕೈ ಹಾಕಿದೆ. ಅದರಲ್ಲಿಯೂ ಎಣ್ಣೆ ಇಲ್ಲದಿದ್ದಾಗ ಅಮ್ಮನ ಬಳಿಯೇ ತೆರಳಿ ಕೇಳಿದೆ. ‘ಕೋಣೆಯಲ್ಲಿ ಬಾಗಿಲ ಮೂಲೆಯಲ್ಲಿ ಬಾಟಲಿಯಲ್ಲಿ ಸ್ವಲ್ಪ ಉಂಟು. ಅದನ್ನು ಹಾಕಿಕೊ’ ಎಂದಳು. ತಲೆ ಬಾಚಿಕೊಂಡು ಎರಡು ಉಪ್ಪಿನ ಹರಳನ್ನು ಗಂಜಿಯ ಮೇಲೆ ಉದುರಿಸಿ ಪರಿಶಿಂಚನಮಾಡಿ ಊಟಕ್ಕೆ ಕುಳಿತೆ. ‘ಮ್ಯಾವ್’ ಎನ್ನುತ್ತಾ ಬಟ್ಟಲ ಬಳಿ ಬಂದ ಬೆಕ್ಕಿಗೆ ಗೋಡೆಯ ಬಳಿಯಲ್ಲಿ ಸ್ವಲ್ಪ ಗಂಜಿ ಹಾಕಿ ಊಟ ಮುಗಿಸಿ ಎದ್ದೆ.

ಅಮ್ಮ ಹಾಲನ್ನು ತಂದು ಸ್ವಲ್ಪ ನೀರು ಬೆರಸಿ ಸ್ಟೀಲ್ ಚೊಂಬಿನಲ್ಲಿ ತುಂಬಿಸಿ ‘ಹೋಗುವಾಗ ಇದನ್ನು ರಾಜಣ್ಣ ಹೊಟೆಲಿನಲ್ಲಿ ಕೊಟ್ಟು ಹೋಗು. ದುಡ್ಡು ಕೊಡಲಿಕ್ಕೆ ಹೇಳು. ಎರಡು ತಿಂಗಳಿಂದ ಕೊಡಲಿಲ್ಲ ದರಿದ್ರದವ. ಹೀಗಾದ್ರೆ ದನಕ್ಕೆ ಹಿಂಡಿ ಹಾಕುವುದು ಎಲ್ಲಿಂದ? ಮನೆಯ ಖರ್ಚು ನಡೆಯುವುದು ಹೇಗೆ?’ ಎಂದು ಗೊಣಗಿದಳು. ಅವಳನ್ನು ನೋಡಿದೆ. ಆದರೆ ನನ್ನಿಂದ ನೋಡಲಾಗಲಿಲ್ಲ. ಆ ಸುಕ್ಕುಗಟ್ಟಿದ ಶರೀರ, ಗುಳಿಬಿದ್ದ ಕೆನ್ನೆ, ನೆರಿಬಿದ್ದ ಹಣೆ, ಒಣಗಿ ಹೋದ ಚರ್ಮ, ನಿಸ್ತೇಜವಾದ ಕಣ್ಣುಗಳು, ಒಡೆದು ಹೋದ ಪಾದಗಳು ಹಟ್ಟಿಗೆ ಹೋದವಳು ಕಾಲು ಕೂಡಾ ತೊಳೆದುಕೊಂಡು ಬಂದಿರಲಿಲ್ಲ. ಸೆಗಣಿ ಮೆತ್ತಿಕೊಂಡೇ ಇತ್ತು. ಉಟ್ಟಿದ್ದ ಸೀರೆ ಸ್ವಲ್ಪ ಹರಿದಿತ್ತು. ಕಾಲಿನ ಗಂಟಿನಲ್ಲಿದ್ದ ಗಾಯಕ್ಕೆ ನೊಣಗಳು ಮುತ್ತಿಕೊಂಡಿದ್ದವು. ಕಾಲಿಗೆ ಏನಾಗಿದೆ ಎಂದು ಕೇಳಿದೆ. ಎಮ್ಮೆ ಹಾಯ್ದು ಬಿದ್ದದ್ದು ಎಂದಳು. ಮುಲಾಮು ತರಲೇ ಎಂದೆ. ಬೇಡ, ಹಾಗೆಯೇ ಗುಣವಾಗುತ್ತೆ ಎಂದಳು. ಏನೋ ಒಂದು ಸಣ್ಣ ಕಟ್ಟನ್ನು ತಂದು ನನ್ನ ಚೀಲದಲ್ಲಿ ತುರುಕಿದಳು. ಅದರಲ್ಲೊಂದು ಭಸ್ಮ ಉಂಟು. ಅದನ್ನು ನಿತ್ಯ ಹಚ್ಚಿಕೊಳ್ಳಲಿಕ್ಕೆ ಹೇಳು. ಒಳ್ಳೆಯದಾಗುವುದಾದರೆ ಆಗುತ್ತೆ ಎಂದಳು. ಅಪ್ಪ ಯಾವಾಗ ಬರ್ತಾರೆ ಎಂದು ಕೇಳಿದೆ. ‘ಇನ್ನೂ ನಾಲ್ಕೈದು ದಿನವಾಗಬಹುದು. ಏನೋ ಯಾಗ ನಡೆಯುತ್ತಿದೆಯಂತೆ. ಅದನ್ನು ಮುಗಿಸಿರಬಹುದು’ ಎಂದಳು.

ಬಟ್ಟಲು ತೊಳೆದು ಬಟ್ಟೆ ಧರಿಸಿದೆ. ಮತ್ತೊಮ್ಮೆ ತಲೆ ಬಾಚಿಕೊಂಡೆ.

ದಾರಿ ಗೊತ್ತಾದೀತಲ್ಲಾ ಎಂದಳು. ವಾತದಿಂದ ನರಳುತ್ತಿದ್ದ ಅಜ್ಜಿ ಮಲಗಿದ್ದಲ್ಲಿಗೆ ಹೋಗಿ ನೋಡಿದೆ. ಪಿಳಿ ಪಿಳಿ ನೋಡಿದರು. ಮಾತನಾಡಲಿಲ್ಲ. ನಿಟ್ಟುಸಿರುಬಿಟ್ಟು ಹೊರಬಂದೆ. ಮನೆಯಲ್ಲಿ ಜೀವಕಳೆಯೇ ಇರಲಿಲ್ಲ. ‘ಇಡೀ ದಿನ ಅಳುತ್ತಾ ಕೂತುಕೊಳ್ಳುವುದು ಬೇಡ. ನಾನು ಹೋಗಿ ಬರುತ್ತೇನೆ’ ಎಂದೆ. ಅಮ್ಮ ಸೆರಗಿನಲ್ಲಿ ಕಣ್ಣು ಒರೆಸಿಕೊಂಡಳು. ಹಟ್ಟಿಯತ್ತ ತೆರಳಿ ವೊಲೆ ತಿನ್ನುತ್ತಿದ್ದ ಕರುವನ್ನು ಎಳೆದು ತಂದು ಗೂಟಕ್ಕೆ ಕಟ್ಟಿ ಬಂದು ನಾನು ಸುಮಾರು ದೂರ ಹೋಗುವವರೆಗೂ ನನ್ನನ್ನೇ ನೋಡುತ್ತಿದ್ದಳು.
ಮೇಲ್ಮನೆಯ ಹಾಡಿ ದಾಟುವಾಗ ತಲೆಯಲ್ಲಿ ಅಕ್ಕನ ವಿಚಾರವೇ ಸುಳಿಯುತ್ತಿತ್ತು.
ಹಾಡಿಗೆ ಹೋಗಿದ್ದ ರಾಮ್ ಚಿಕ್ಕಪ್ಪ ಚೊಂಬು ಹಿಡಿದುಕೊಂಡು ಜನಿವಾರ ಕಿವಿಗೆ ಸಿಕ್ಕಿಸಿಕೊಂಡು ಬರುತ್ತಿದುದು ಕಾಣಿಸಿತು. ಹತ್ತಿರ ಬಂದವರೇ ‘ಯಾವಾಗ ಬಂದೇ ಮಾಣೀ’ ಎಂದು ಕೇಳಿದರು. ಹೇಳಿದೆ. ‘ಮನೆ ಕಡೆ ಬಂದು ಹೋಗಲ್ಲಾ’ ಎಂದರು. ‘ತೀರ್ಥ ಹಳ್ಳಿಗೆ ಇತ್ತಲಾಗೆ ಹೋಗಿದ್ದೆಯಾ?’
‘ಇಲ್ಲ, ಅಲ್ಲಿಗೇ ಹೊರಟಿದ್ದೇನೆ.’
‘ಓ ಹಾಗೋ ಬಾ ಮನೆಗೆ ಬಂದು ಹೋಗು’
ಅವರನ್ನೇ ಹಿಂಬಾಲಿಸಿದೆ. ಚಿಕ್ಕಪ್ಪ ಏನನ್ನೋ ಗಾಢವಾಗಿ ಆಲೋಚಿಸುತ್ತಿದ್ದಂತೆ ಕಂಡಿತು.
ಚಿಕ್ಕಪ್ಪ ಬಾವಿಕಟ್ಟೆಗೆ ಹೋದರು. ನಾನು ಮನೆಯಂಗಳದಲ್ಲೇ ನಿಂತೆ. ಕಸ ಗುಡಿಸುತ್ತಿದ್ದ ಚಿಕ್ಕಮ್ಮ ಪೊರಕೆ ಬಿಸುಟು ‘ಯಾರು? ಅಪ್ಪುವಾ? ಎಂದರು. ‘ಹೌದು’ ಎಂದೆ. ‘ಬಾ, ಒಳಗೆ ಬಾ’ ಎಂದರು. ಚಾವಡಿಯಲ್ಲಿ ಹೋಗಿ ಕುಳಿತೆ. ಚಿಕ್ಕಪ್ಪನೂ ಕೈ ಕಾಲು ತೊಳೆದುಕೊಂಡು ಬಂದರು. ‘ಅಕ್ಕನ ಮನೆಗೆ ಹೋಗಿ ಬರುತ್ತೀಯಾ?’ ಎಂದರು. ‘ಹೌದು’ ಎಂದೆ.
‘ವಿಶೇಷವೇನಾದರೂ ಉಂಟಾ?’
‘ವಿಶೇಷವೇನೂ ಇಲ್ಲ. ಎಂಟು ದಿನದ ಹಿಂದೆ ಅಕ್ಕನಿಂದ ಕಾಗದ ಬಂದಿತ್ತಂತೆ..’
‘ಹೌದು ಅದು ನನಗೂ ಗೊತ್ತು. ಈಗ ಹೇಗಿದ್ದಾನಂತೆ ಬಾಬೂರಾಯ?’ ಹುಶಾರಿಲ್ಲಾಂತ ಬರೆದಿದ್ದಳಂತಲ್ಲಾ.’
‘ಅನಂತರ ಏನೂ ಸುದ್ದಿ ಇಲ್ಲ. ಅಲ್ಲಿಗೆ ಒಮ್ಮೆ ಹೋಗಿ ಬಂದರೆ ಒಳ್ಳೆಯದೂಂತ ಅಮ್ಮ ಕಾಗದ ಬರೆಸಿದ್ದಳು. ನಾನು ಅದಕ್ಕಾಗಿಯೇ ನಿನ್ನೆ ಹೊರಟು ಬಂದೆ. ಅಲ್ಲಿಗೆ ಹೋಗಿ ಅಕ್ಕನನ್ನು ಒಮ್ಮೆ ನೋಡಿ ಬರೋಣಾಂತ ಹೊರಟಿದ್ದೇನೆ.’
ಚಿಕ್ಕಮ್ಮ ನಿಟ್ಟುಸಿರಿಟ್ಟು ಒಳಗೆ ಹೋದರು. ಚಿಕ್ಕಪ್ಪ ಕುರ್ಚಿ ಎಳೆದು ಕುಳಿತರು. ಸ್ವಲ್ಪ ಹೊತ್ತು ಮೌನ. ಎರಡು ಲೋಟ ಕಾಫಿ ತಂದಿಟ್ಟರು ಚಿಕ್ಕಮ್ಮ. ಲೋಟ ಎತ್ತಿ ತುಟಿಗೆ ತಾಗಿಸಿದೆ.

‘ಈಗ ನೀನು ಹೋಗಿ ಅವಳನ್ನು ಕರೆದುಕೊಂಡು ಬರುತ್ತೀಯಾ ಅಲ್ಲ ಸುಮ್ಮನೆ ನೋಡಿ ಬರುವುದಾ?’-ಚಿಕ್ಕಪ್ಪ ಕೇಳಿದರು.
‘ಏನು ಮಾಡೋದೂಂತ ನನಗೆ ಗೊತ್ತಾಗೊಲ್ಲ. ಇಷ್ಟು ವರ್ಷ ಅಲ್ಲಿದ್ದವಳನ್ನು ಈಗ ಬಾವ ಹುಶಾರಿಲ್ಲದೆ ಇರುವಾಗ ಕರೆದುಕೊಂಡು ಬರುವುದಾದರೂ ಹೇಗೆ? ಅವಳು ಬರುವುದು ಕೂಡಾ ಗ್ಯಾರಂಟಿ ಇಲ್ಲ. ಹೇಗೋ ಹೋಗಿ ಒಮ್ಮೆ ಮುಖ ತೋರಿಸಿ ಬರುವುದು ಅಷ್ಟೆ’-ಎಂದೆ.
‘ಏನೋ ಮಹರಾಯ ನನಗಂತೂ ಇದು ಒಂದೂ ಅರ್ಥವಾಗೊಲ್ಲ. ಇದು ಹೀಗೇ ಆಗುತ್ತೇಂತ ನನಗೆ ವೊದಲೇ ಗೊತ್ತಿತ್ತು. ನಿನ್ನ ಅಪ್ಪನಿಗೆ ನಾನು ಸಾರಿ ಸಾರಿ ಹೇಳಿದ್ದೆ.- ಈ ಸಂಬಂಧ ಬೇಡ ಅಂತ. ಆ ಮನೆಯಲ್ಲಿ’ ಹುಡುಗಿ ಯನ್ನು ಹುರಿದು ಮುಕ್ಕುವ ಪ್ರಾಣಿಗಳೇ ಇರುವುದು ಅಂತ. ನನ್ನ ಮಾತು ಕೇಳಿದ್ನಾ? ಅವರಿಗೆ ಅಡಿಕೆ ತೋಟ ಉಂಟು, ಕಾರು ಉಂಟು, ಬಂಗಲೆ ಉಂಟು ಅಂತ ಚಿನ್ನದಂಥ ಹುಡುಗಿಯನ್ನು ತೆಗೆದುಕೊಂಡು ಹೋಗಿ ಆ ಹೊಂಡಕ್ಕೆ ಹಾಕಿದ. ಈಗ ನೋಡು ಅವಸ್ಥೆ. ದೊಡ್ಡವರು ಏನು ಮಾಡಿದರೂ ಚೆಂದ. ನಾವ್ಯಾರೂ ಅವರ ಮನೆಗೆ ಕಾಲಿಡಕೂಡದೂಂತ ಕಟ್ಟಪ್ಪಣೆ ಆಗಿದೆಯಲ್ಲಾ? ಮದುವೆಯಾಗಿ ನಾಲ್ಕು ವರ್ಷ ಆಯ್ತು. ಅವಳ ಮುಖ ದರ್ಶನವಾದರೂ ಆಗಿದೆಯಾ ನಮಗೆ ಆ ಮೇಲೆ. ಒಂದು ಸರ್ತಿಯಾದರೂ ಕಳುಹಿಸಿಕೊಟ್ಟಿದ್ದಾರಾ ಹುಡುಗಿಯನ್ನು. ಕಾಗದ ಬರೆದರೆ ಜವಾಬೇ ಇಲ್ಲ. ಅದು ಹೋಗಲಿ- ಇವಳಿಗಾದರೂ ಏನಾದರೂ ಉಪಾಯ ಹೊಳೆಯಬಾರದೇ? ಅಲ್ಲಿ ಹೇಗಿದ್ದಾಳೋ ಏನಾಗಿದ್ದಾಳೋ ದೇವರಿಗೇ ಗೊತ್ತು?

‘ಗಣೇಶ ಕೆಫೆಯವರು ಇತ್ತೀಚೆಗೆ ನೋಡಿದ್ದರಂತೆ. ತುಂಬ ಬಚ್ಚಿ ಹೋಗಿದ್ದಾಳಂತೆ. ಈಗ ಹೊಟ್ಟೆಗೂ ಸರಿಯಾಗಿ ಹಾಕೋಲ್ಲ ಅಂದರಂತೆ. ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ’ ಎಂದೆ.
‘ಸುಮ್ಮನೆ ಅವರಿವರ ಮಾತು ಕೇಳಿ ಪ್ರಯೋಜನವಿಲ್ಲ. ಹುಡುಗಿಗೆ ಏನಾದರೂ ಒಂದು ದಾರಿ ತೋರಿಸಬೇಡವೇ? ಅದಕ್ಕೇನಾದರೂ ಉಪಾಯವಿದ್ದರೆ ಯೋಚಿಸಿರಿ’- ಚಿಕ್ಕಮ್ಮ ನಡುವೆ ಬಾಯಿ ಹಾಕಿದರು.
‘ಯೋಚಿಸಲಿಕ್ಕೇನು ಉಳಿದಿದೆ ಇನ್ನು ಮಣ್ಣು? ಮಾಡುವುದನ್ನೆಲ್ಲಾ ಮಡಿಯಾಗಿದೆ. ಇದುವರೆಗೆ ಗಂಡ ಹೆಂಡತಿ ಒಳ್ಳೆಯದಾಗಿರಲಿ ಅಂತ ಏನೆಲ್ಲಾ ಮಾಡಿಲ್ಲ ಹೇಳು. ಅವನ ಪೈಕಿಯವರ ಹತ್ತಿರ ಹೇಳಿಸಿ ನೋಡಿಯಾಯ್ತು. ಕಾಗದ ಬರೆದು ನೋಡಿಯಾಯ್ತು. ಕಡೆಗೆ ಯಂತ್ರ, ತಂತ್ರ, ಹೋಮ, ಶಾಂತಿ ಕೂಡಾ ಮಾಡಿಯಾಯ್ತು. ಕೋರ್ಟಿನ ಕಟ್ಟೆಯೊಂದನ್ನು ಏರಿಲ್ಲ. ಅದಕ್ಕಿಂತ ಹುಡುಗಿಗೆ ಸ್ವಲ್ಪ ಫಾಲಿಡಾಲನ್ನೋ ಇಲಿಪಾಶಾಣವನ್ನೋ ಕೊಟ್ಟು ಬಿಟ್ಟರೆ ಎಲ್ಲವಕ್ಕೂ ಮಂಗಳ ಹಾಡಿದಂತೆ ಆಗುತ್ತದೆ. ಕಡೆಗೆ ಯಾವ ಸಮಸ್ಯೆಯೂ ಇರೋಲ್ಲ.’

ಚಿಕ್ಕಪ್ಪನ ಮಾತು ಕೇಳಿ ನನ್ನ ಕಣ್ಣಲ್ಲಿ ಥಟ್ಟನೆ ನೀರಿಳಿಯಿತು. ಕಣ್ಣೊರೆಸಿಕೊಂಡೆ. ಮಾತನಾಡಲು ಗಂಟಲು ಒಣಗಿತ್ತು.
‘ಈಗ ಅತ್ತರೂ ಪ್ರಯೋಜನವಿಲ್ಲ, ನಕ್ಕರೂ ಪ್ರಯೋಜನವಿಲ್ಲ. ಆ ಹುಡುಗಿಯ ಅವಸ್ಥೆಯನ್ನು ನೆನೆದರೆ ಸಂಕಟವಾಗುತ್ತೆ. ಆದರೆ ಏನು ಮಾಡುವುದು ಹೇಳು?’ ಎಂದರು ಚಿಕ್ಕಪ್ಪ.
ಚಿಕ್ಕಪ್ಪನ ಮಗ ರಂಗ ಶಾಲೆಗೆ ಹೊರಟ. ‘ರಂಗ..ಈ ಹಾಲನ್ನು ರಾಜಣ್ಣನ ಹೊಟೇಲಿನಲ್ಲಿ ಕೊಟ್ಟು ಹೋಗು ಮಾರಾಯ.. ಹಾಗೆಯೇ ಸ್ವಲ್ಪ ದುಡ್ಡು ಕೊಟ್ಟು ಕಳಿಸಬೇಕಂತೇಂತ ಹೇಳು’ ಎಂದೆ. ಆಗಲಿ ಎಂದು ರಂಗ ಆ ಹಾಲನ್ನು ಕೊಂಡು ಹೋದ.
‘ಈಗ ನೀನು ಹೋಗಿ ಏನು ಮಾಡಬೇಕೂಂತಿದ್ದೀಯಾ?’ ಎಲೆ ಅಡಿಕೆ ಮೆಲ್ಲುತ್ತಾ ಚಿಕ್ಕಪ್ಪ ಕೇಳಿದರು.
‘ಮಾಡುವುದೆಂಥದು? ಹೋಗಿ ಅಕ್ಕನನ್ನು ನೋಡಿಕೊಂಡು ಬರುವುದು. ಬಂದರೆ ಕರೆದುಕೊಂಡು ಬರುವುದು’ ಎಂದೆ.
‘ಅವಳು ಬರ್ತಾಳೆ ಅಂತ ನಾನು ನಂಬುವುದಿಲ್ಲ. ಅವಳಿಗೂ ಹಠ ಏನೂ ಕಡಿಮೆ ಇಲ್ಲ. ಬರುವ ಹಾಗಿದ್ದರೆ ಅವತ್ತೇ ಬರುತ್ತಿದ್ದಳು. ಈಗ ನಾಲ್ಕು ವರ್ಷಗಳಿಂದಲೂ ಅಲ್ಲಿಯೇ ಒದ್ದಾಡುತ್ತಿಲ್ಲವೇ? ಒಳ್ಳೆಯದಾಗಿಯೇ ಗಂಡನನ್ನು ಕರೆದುಕೊಂಡೇ ಬರುತ್ತೇನೆಂಬ ಛಲ ಅವಳಲ್ಲಿರಬಹುದು. ಅವಳ ಹಠ ಸಾಧನೆ ಯಾವಾಗ ಆಗುತ್ತೋ ಕಾದು ನೋಡಬೇಕು’ ಎಂದು ನಿಟ್ಟುಸಿರಿಟ್ಟರು ಚಿಕ್ಕಪ್ಪ.
ಸ್ವಲ್ಪ ಹೊತ್ತು ತಡೆದು ಕೇಳಿದೆ-‘ನೀವು ಜತೆಯಲ್ಲಿ ಬನ್ನಿಯಲ್ಲ ಚಿಕ್ಕಪ್ಪ, ಒಟ್ಟಿಗೆ ಹೋಗಿ ಬರುವ.’
ಚಿಕ್ಕಪ್ಪ ಮಾತನಾಡಲಿಲ್ಲ. ಎಲೆಗೆ ಸುಣ್ಣ ಹಚ್ಚಿ ಬಾಯಲ್ಲಿಟ್ಟುಕೊಂಡರು, ಹೊಗೆಸೊಪ್ಪಿಗೆ ಸುಣ್ಣ ಹಚ್ಚಿ ಮಡಿಸಿ ಬಾಯಲಿಟ್ಟುಕೊಂಡರು. ಎಂಜಿಲು ಉಗುಳಿ ಬಂದರು.
‘ನಾನು ಬೇಕಾದರೆ ಬರುತ್ತೇನೆ. ಆದರೆ ಏಕಾಏಕಿ ನಾವು ಹೋದ್ದನ್ನು ನೋಡಿ ಅವರು ಏನಾದರೂ ತಿಳಿದುಕೊಂಡರೇ?’
‘ತಿಳಿದುಕೊಳ್ಳಲಿಕ್ಕೆ ಏನುಂಟು ಚಿಕ್ಕಪ್ಪ? ಎಲ್ಲವೂ ಗೊತ್ತಿದ್ದದ್ದೇ. ಅವರ ವಿಚಾರ ಎಲ್ಲರಿಗೂ ಗೊತ್ತುಂಟು. ಏನು ಬೇಕಾದರೂ ತಿಳಿದುಕೊಳ್ಳಲಿ. ನಾವು ಏನಾದರೂ ತೀರ್ಮಾನ ಮಾಡಲಿಕ್ಕೇ ಬಂದಿದ್ದೇವೇಂತ ಅವರು ತಿಳಿದುಕೊಂಡರೆ ಮತ್ತೂ ಅನುಕೂಲವೇ ಅಲ್ಲವೇ?’
‘ಅದೇನೋ ಸರಿ. ಆದರೆ ನಾವು ಹೋಗಿ ಏನೇನೋ ಮಾತನಾಡಿ ಕಷ್ಟ ಕೊಡುವಂಥಾದ್ದಾದರೂ ಏನುಂಟು? ಕೊಡುವ ಉಪಟಳ ಎಲ್ಲ ಕೊಟ್ಟಾಗಿದೆ. ಮಾಡಿಸಬಾರದ ಕೆಲಸಗಳನ್ನೆಲ್ಲ ಅವಳಿಂದ ಮಾಡಿಸಿಯಾಗಿದೆ, ಇನ್ನು ಹೆಚ್ಚೆಂದರೆ ಅವಳ ಪ್ರಾಣ ತೆಗೆದಾರು. ಅಷ್ಟೊಂದಕ್ಕೆ ಅವಳು’ ಹೆದರುತ್ತಾಳೆಯೇ? ಪ್ರಾಣ ತೆಗೆಯುವುದೂ ಅಷ್ಟು ಸುಲಭದಲ್ಲಿದೆಯೇ?
‘ಒಂದು ದೃಷ್ಟಿಯಲ್ಲಿ ನೀನು ಹೇಳುವುದೂ ಸರಿ. ಈಗ ನಾವು ಸುಮ್ಮನೆ ಹೋಗಿ ಬರುವುದರಲ್ಲಿ ಅರ್ಥವಿಲ್ಲ. ಒಂದೋ ಗಂಡ ಹೆಂಡತಿ ಒಟ್ಟಾಗುವ ಹಾಗೆ ಮಾಡಬೇಕು. ಇಲ್ಲ, ಅವಳನ್ನು ಕರೆದುಕೊಂಡು ಬರಬೇಕು, ಗಂಡನ ಸುಖವೂ ಇಲ್ಲ, ಅತ್ತೆ ಮಾವನವರ ಪ್ರೀತಿಯೂ ಇಲ್ಲ. ಮೈದುನ ನಾದಿನಿಯರ ಸ್ನೇಹವೂ ಇಲ್ಲ. ಬರೀ ಕತ್ತೆ ಚತಾಕರಿ ಮಾಡಿಕೊಂಡಿದ್ದು. ಬರೀ ಹೊಟ್ಟೆಯಲ್ಲಿ ಅವಳು ಅಲ್ಲಿ ಇರುವುದಕ್ಕಿಂತ ನಮ್ಮ ಮನೆಯಲ್ಲೇ ಇದ್ದದ್ರಲ್ಲೇ ತೃಪ್ತಿಪಟ್ಟುಕೊಂಡು ಇರಲಿ. ನಮ್ಮ ಮಗು ನಮಗೆ ಹೆಚ್ಚಾಗ್ತದಾ? ಏನೇಳ್ತೀ ನೀನು?’ ಎಂದರು ಚಿಕ್ಕಪ್ಪ.
ನನಗೆ ಸ್ವಲ್ಪ ಧೈರ್ಯ ಬಂದಂತಾಯ್ತು. ‘ಈ ಸರ್ತಿ ಏನಾದರೂ ಒಂದು ಇತ್ಯರ್ಥ ಮಾಡಿಬರುವ. ನೀವೂ ಹೊರಡಿ ಚಿಕ್ಕಪ್ಪ’ ಎಂದೆ.
‘ಈಗ ಅರ್ಜೆಂಟಾಗಿ ಹೊರಡಿ ಎಂದರೆ ಮನೆಬಿಟ್ಟು ಹೋಗುವುದು ಹೇಗೆ ಮಾರಾಯ? ತೋಟದಲ್ಲೊಂದು ಬಾವಿ ತೋಡಿಸಲು ಶುರುಮಾಡಿದ್ದೇನೆ. ಕಬ್ಬಿಗೆ ಗೊಬ್ಬರ ಹಾಕಿಸಬೇಕು. ಕೆಲಸ ಕಂಡಾಬಟ್ಟೆ ಇದೆ. ಎಂಥದು ಮಾಡುವುದೋ ತಿಳಿಯದು.’
‘ಒಂದೆರಡು ದಿನದ ಮಟ್ಟಿಗೆ ಏನಾದರೂ ಮಾಡಬಹುದು. ನಾಳೆ ಸಂಜೆ ಅಥವಾ ನಾಳಿದ್ದು ಬೆಳಗ್ಗೆ ವಾಪಸ್ಸು ಬಂದರಾಯಿತು.’
ನನ್ನ ಮಾತಿಗೆ ಒಪ್ಪಿ ಚಿಕ್ಕಪ್ಪ ಸ್ನಾನ ಮಾಡಿ ಬರಲು ಕೊಡಪಾನ ಹಿಡಿದು ಬಾವಿಕಟ್ಟೆಗೆ ತೆರಳಿದರು. ನಾನು ಕೈ ಚೀಲವನ್ನು ಚಾವಡಿಯ ಗೂಟಕ್ಕೆ ಸಿಕ್ಕಿಸಿ ಚಿಕ್ಕಮ್ಮನ ಹಿಂದೆ ಅಡುಗೆ ಮನೆಗೆ ತೆರಳಿದೆ.
‘ಅಲ್ಲ... ಒಂದು ಸುದ್ದಿಯೂ ತಿಳಿಯುತ್ತಿಲ್ಲ ಮಾರಾಯ. ಒಂದೊಂದು ಸಲ ಒಂದೊಂದು ತರದ ಸುದ್ದಿ ಬರ್ತಿದೆ. ಎಲ್ಲರಿಗೂ ಅವಳದ್ದೇ ಯೋಚನೆಯಾಗಿದೆ. ನಿನ್ನ ಚಿಕ್ಕಪ್ಪ ಅಂತೂ ದಿವಸಕ್ಕೆ ಹತ್ತು ಸರ್ತಿ ಅವಳನ್ನು ಜ್ಞಾಪಿಸಿಕೊಳ್ಳುತ್ತಾರೆ. ಎಂಥಾ ಹುಡುಗಿಯ ಸ್ಥಿತಿ ಹೇಗೆ ಆಗಿ ಹೋಯ್ತು ನೋಡು’- ಚಿಕ್ಕಮ್ಮ ಬಹಳ ಬೇಸರದಿಂದ ಹೇಳಿದರು.
‘ಎಲ್ಲಾ ನಮ್ಮ ಹಣೇಬರಹ. ಈಚೆಗೆ ನಿಮಗೇನಾದರೂ ಸುದ್ದಿ ಬಂದಿದೆಯಾ?’
‘ಆಗೊಮ್ಮೆ ಈಗೊಮ್ಮೆ ಒಂದೊಂದು ವಿಚಾರ ತಿಳಿಯುತ್ತೆ. ನಂಬಲಿಕ್ಕೂ ಅಲ್ಲ, ಬಿಡಲಿಕ್ಕೂ ಅಲ್ಲ. ಒಮ್ಮೆ ಯಾರೋ ಹೇಳಿದರು ಗಂಡಹೆಂಡತಿ ಒಳ್ಳೆಯದಾಗುವ ಹಾಗೆ ಉಂಟು ಅಂತ. ಅತ್ತೆ ಯಾವಾಗಲೂ ಬುಸುಗುಟ್ಟುತ್ತಾ ಇರುತ್ತಾರಂತೆ. ಬಾಬೂರಾಯ ಮನೆಯಲ್ಲಿ ಯಾರ ಹತ್ತಿರವೂ ಮಾತನಾಡುವುದಿಲ್ಲವಂತೆ. ಬೆಳಿಗ್ಗೆ ಕಾರು ಹಿಡಿದುಕೊಂಡು ಹೋದರೆ ಬರುವುದು ರಾತ್ರಿಯೇ ಸೈ. ಅವನ ಕೋಣೆಯೇ ಬೇರೆ, ಅವನ ವ್ಯವಹಾರವೇ ಬೇರೆ. ಎಲ್ಲಾ ಪ್ರಮೀಳಾ ದರ್ಬಾರು ಅಲ್ಲಿ. ನಿನ್ನ ಅಕ್ಕ ಎಷ್ಟೋ ಸರ್ತಿ ಅವನ ಕೋಣೆಗೆ ಬೇರೆ ಬೇರೆ ನೆವದಲ್ಲಿ ಹೋಗಿ ಅವನಿಂದ ಬೈಸಿಕೊಂಡು ಬಂದಿದ್ದಾಳಂತೆ. ಏಟು ಕೂಡಾ ತಿಂದಿದ್ದಾಳಂತೆ ನೋಡು. ಒಟ್ಟಾರೆ ಅವನ ತಲೆಯೇ ಕೆಟ್ಟ ಹಾಗಿದೆ. ಅವನೇ ಒಂದು ಸತಿ ಹೇಳಿದ ಅಂತೆ- ನಾನು ಕರೆದಾಗ ಮಾತ್ರ ನೀನು ಬರಬೇಕು. ಅದಕ್ಕೆ ವೊದಲು ನನಗೆ ಮುಖ ಕೂಡಾ ತೋರಿಸಬೇಡ ಅಂತ. ಹುಡುಗಿಯ ಗತಿ ಹೀಗೆ ಆದ್ರೆ ಹೇಗೆ ಹೇಳು. ವೊನ್ನೆ ವೊನ್ನೆ ಒಂದು ದಿನ ಕಣ್ಣೀರು ಸುರಿಸುತ್ತಾ ಅಡಿಗೆ ಮನೆಯಲ್ಲಿ ಒಬ್ಬಳೇ ಕುಳಿತಿದ್ದಳಂತೆ. ಆ ಮುದಿ ಮಾವ ಹೇಳಿದ್ರಂತೆ-ಸ್ವಲ್ಪ ತಾಳ್ಮೆ ವಹಿಸು... ದುಡುಕಿ ನಿನ್ನ ಬಾಳು ಪೂರಾ ಹಾಳು ಮಾಡಿಕೊಳ್ಳಬೇಡ... ಒಳ್ಳೆಯದಾಗುತ್ತೆ ಅಂತ. ಆ ಸಂಸಾರದ ಗುಟ್ಟೇ ಗೊತ್ತಾಗೋಲ್ಲಾ ಮಾರಾಯ. ಅವಳಿಗೆ ಎಲ್ಲಿಗೂ ಹೋಗಲಿಕ್ಕಿಲ್ಲವಂತೆ. ಮನೆಗೆ ಯಾರಾದರೂ ಬಂದರೆ ಅವಳಿಗೆ ಎದುರು ಬರಲೂ ಬಿಡುಮದಿಲ್ಲವಂತೆ. ನೆರೆಕರೆಯವರಲ್ಲಿ ಮಾತನಾಡಲೂ ಬಿಡುವುದಿಲ್ಲವಂತೆ ಅಷ್ಟು ದೊಡ್ಡ ಮನೆಯ ಒಳಗಿನ ಹೊರಗಿನ ಕೆಲಸ ಎಲ್ಲಾ ಒಬ್ಬಳೇ ಮಾಡುವುದಂದ್ರೆ ಏನು ಸಾಮಾನ್ಯವೇ? ಕಸ ಗುಡಿಸುವುದು, ನೆಲ ಒರೆಸುವುದು, ಬಟ್ಟೆ ಒಗೆಯುವುದು, ರುಬ್ಬುವುದು, ನೀರು ತುಂಬುವುದು, ಒಂದೇ ಎರಡೇ! ಕೆಲಸ ಸಾಯ್ಲಿ ನಾವೂ ಮಾಡೂತ್ತೇವೆ. ಆದರೆ ಹೊಟ್ಟೆಗೂ ಸರಿಯಾಗಿ ಹಾಕದೆ, ಮಾತು ಕೂಡಾ ಸರಿಯಾಗಿ ಆಡದೆ ಇದ್ದರೆ ಅವಳು ಹೇಗೆ ಇರಬೇಕು ಹೇಳು. ಲೆಕ್ಕಕ್ಕೆ ದೊಡ್ಡ ಮನೆಯ ದೊಡ್ಡ ಸೊಸೆ. ಇಲ್ಲಿ ಇರುವಾಗ ಪಟಾಪಟಿ ಮಾತನಾಡುತ್ತಿದ್ದ ಹುಡುಗಿ ಮಂಕಾಗಿ, ಬೆಪ್ಪು ಕಟ್ಟಿ ಹೋಗಿದೆಯಂತೆ ಈಗ. ನಾನಾಗಿದ್ದರೆ ಎಂದೋ ಜಗಳವಾಡಿ ಓಡಿ ಬರುತ್ತಿದ್ದೆ. ಇವಳಿಗೆ ಇಷ್ಟು ಹಠ, ತಾಳ್ಮೆ ಹೇಗೆ ಬಂತೋ ಆ ದೇವರಿಗೇ ಗೊತ್ತು. ಗಂಡ ಒಬ್ಬ ಸರಿ ಇದ್ದಿದ್ದರೆ ಈ ಉಳಿದ ಮಾರಿಗಳನ್ನೆಲ್ಲ ಸದೆ ಬಡಿಯಬಹುದಿತ್ತು. ಅವನೇ ಅವಳ ಕೈ ಬಿಟ್ಟಿರುವಾಗ, ಈ ರಣಹದ್ದುಗಳು ಅವಳನ್ನು ತಿನ್ನದೇ ಬಿಡುತ್ತಾವೆಯೇ..? ನೀನು ನಿಂತೇ ಇದ್ದಿ, ಕೂತುಕೋ ಅಪ್ಪು. ನಾನು ಈಗ ಬಂದೆ..’

ಚಿಕ್ಕಮ್ಮ ಒಲೆಯ ಹತ್ತಿರ ಹೋದರು, ನಾನು ಮೂಕನಾಗಿಯೇ ನಿಂತಿದ್ದೆ. ನನ್ನಿಂದ ಯಾವ ಮಾತನ್ನೂ ಆಡಲಾಗಲಿಲ್ಲ. ಅಕ್ಕನ ದಾರುಣ ಸ್ಥಿತಿಯನ್ನು ನೆನೆದು ಗಂಟಲು ಒಣಗಿತ್ತು. ತೇವವಾಗಿದ್ದ ಕಣ್ಣುಗಳನ್ನು ಒರೆಸಿಕೊಂಡು ಚಾವಡಿಗೆ ಬಂದೆ. ಗೋಡೆಯ ಮೇಲಿದ್ದ ಫೊಟೋಗಳು ಕಣ್ಣಿಗೆ ಬಿದ್ದವು. ಅಕ್ಕನ ಮದುವೆಯ ಸಮಯ ತೆಗೆಸಿದ್ದ ಫೊಟೋಗಳು ಅಲ್ಲಿದ್ದವು. ಅಕ್ಕ ಭಾವ ಒಟ್ಟಿಗೆ ಕುಳಿತದ್ದು, ಧಾರೆಯ ಸಮಯ ಎದಿರು ಬದಿರಾಗಿ ನಿಂತದ್ದು, ದಿಬ್ಬಣದ್ದು, ಇಡೀ ಸಂಸಾರದವರು ಒಟ್ಟಾಗಿ ಕುಳಿತದ್ದು ಎಲ್ಲಾ ನಮೂನೆಯ ಫೊಟೋಗಳೂ ಅಲ್ಲಿದ್ದುವು. ಅಕ್ಕನ ಮುಖದಲ್ಲಿ ತೇಜಸ್ವಿ ಕಳೆ, ಮುಗ್ಧ ನಗು, ಲವಲವಿಕೆ, ಭಾವನೊಟ್ಟಿಗೆ ನಿಂತ ಠೀವಿ, ಭಾವ ಹೆಗಲ ಮೇಲೆ ಕೈ ಹಾಕಿ ಕುಳಿತಿದ್ದಾಗಿನ ಅವಳ ಹಿಗ್ಗು- ರಾಮ ರಾಮಾ ನೆನೆಯದಾದೆ. ಒಂದೇ ಒಂದು ತಿಂಗಳು.. ಮದುವೆಯಾಗಿ ಒಂದೇ ಒಂದು ತಿಂಗಳು. ಯಾವ ಜಂಜಾಟವೂ ಇಲ್ಲದೆ ಅಕ್ಕನ ಜೀವನ ಸುಖಮಯವಾಗಿತ್ತು. ಸಂಭ್ರಮಮಯವಾಗಿತ್ತು. ಅಥವಾ ಹಾಗೆಯೇ ನಮಗೆಲ್ಲಾ ಕಂಡಿತ್ತು. ಅನಂತರ ಏನಾಯ್ತೋ? ಗಂಡನ ಮನೆಗೆ ಕಣ್ಣೀರಿಟ್ಟು ತೆರಳಿದ ಅಕ್ಕ ಎಲ್ಲರನ್ನೂ ಕಣ್ಣೀರಲ್ಲೇ ಮುಳುಗಿಸಿದಳು. ಅಂದಿನಿಂದ ಇಂದಿನವರೆಗೂ ಸುಖವಿಲ್ಲ, ಶಾಂತಿ ಇಲ್ಲ. ಒಂದೊಂದೇ ಈಗಲೋ ಆಗಲೋ ನಡೆದಂತೆ ಭಾಸವಾಗುತ್ತಿದೆ. ಎಲ್ಲ ಒಂದು ಕನಸಿನಂತೆ ಕಾಣುತ್ತಿದೆ. ಅಕ್ಕ ಬೆಳೆದು ಸುಂದರಿಯಾಗಿ ಕಂಡು ಎಲ್ಲರ ಕಣ್ಮನಗಳಿಗೆ ಸಂತಸ ನೀಡಿದ್ದು, ಒಂದು ಬಾರಿ ಕಂಡೊಡನೆಯೇ ಮದುವೆಯಾಗಲು ಒಪ್ಪಿ ಭಾವ ಮುಂದೆ ಬಂದದ್ದು, ಅಕ್ಕನನ್ನು ನೋಡಿ ಹೋದ ಮೇಲೆ ಮಾರನೆಯ ದಿನವೇ ಭಾವ ಮೋಟರ್ ಸೈಕಲಿನಲ್ಲಿ ಬಂದು ಅಕ್ಕನನ್ನು ಕುಂಜಾರ್‌ಗಿರಿಗೆ ಕರೆದುಕೊಂಡು ಹೋದ್ದು, ಅಲ್ಲಿ ದೇವರೆದುರು ನಿಂತು ಏನನ್ನೋ ಪ್ರಾರ್ಥಿಸಿಕೊಂಡದ್ದು, ಕೈ ಕೈ ಹಿಡಿದು ಇಬ್ಬರೂ ಕೆಳಗಿಳಿದದ್ದು, ಓಡಲಾರದ ನನ್ನನ್ನು ಕಂಡು ಹಾಸ್ಯ ಮಾಡಿದ್ದು, ದೇವಸ್ಥಾನದಲ್ಲಿ ಮದುವೆಯಾದದ್ದು. ಅಕ್ಕನಿಗೆ ಜಲ್ಲಿ ಇಳಿಸಿದ್ದು, ಬಾವನ ತಾಯಿಗೂ ಅಪ್ಪಯ್ಯನ ಅಕ್ಕನಿಗೂ ಏನೋ ಮಾತಿಗೆ ಮಾತು ಬೆಳೆದು ಮನಸ್ತಾಪ ಉಂಟಾದ್ದು..ಎಲ್ಲವೂ ನಿನ್ನೆ ವೊನ್ನೆ ನಡೆದ ಹಾಗೆ ಇದೆ. ಆ ಅತ್ತೆಗೆ ಅಕ್ಕನಲ್ಲಿ ಏನು ಕುಂದು ಕಂಡು ಬಂತೋ? ಬಡವರ ಮನೆಯ ಹುಡುಗಿಯೆಂದು ಜರೆದದ್ದಂತೆ, ಹೀಯಾಳಿಸಿ ಮಾತನಾಡಿದ್ದಂತೆ, ಎಲ್ಲಾ ಕೆಲಸಗಳನ್ನೂ ಅವಳಿಂದಲೇ ಮಾಡಿಸಿದ್ದಂತೆ, ಅಕ್ಕ ಒಮ್ಮೆ ಏನೋ ಎದುರುತ್ತರ ಕೊಟ್ಟದ್ದಕ್ಕೆ ಎದೆ ಬಡಿದುಕೊಂಡು ಅತ್ತಿದ್ದಂತೆ, ಭಾವನ ಹತ್ತಿರ ಇಲ್ಲ ಸಲ್ಲದ ಚಾಡಿ ಹೇಳಿ ಅಕ್ಕನನ್ನು ಹೆಂಡತಿಯಾಗಿ ಪರಿಗ್ರಹಿಸಿದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಂತೆ- ಎಲ್ಲವೂ ಅಂತೆಗಳ ಕಂತೆಯಾಗಿಯೇ ಉಳಿದಿವೆ. ನಿಜವಾಗಿ ಏನು ನಡೆದಿದೆ, ಏಕೆ ನಡೆದಿದೆ ಎಂಬುದು ಯಾರಿಗೂ ಸರಿಯಾಗಿ ತಿಳಿಯದು.

ಹತ್ತು ಘಂಟೆಗೆ ಊಟ ಮುಗಿಸಿ ನಾವು ಸುಮಾರು ದೂರ ಹೋದ ಮೇಲೆ ಚಿಕ್ಕಪ್ಪ ಹೇಳಿದರು- ‘ಈ ನಮೂನೆಯ ಜನಗಳನ್ನು ನಾನು ಎಲ್ಲೂ ನೋಡಿಲ್ಲ ಮಾರಾಯ. ಇವರ ಕಥೆ ಎಂಥದೂಂತ ಗೊತ್ತಾಗೋಲ್ಲ. ನೋಡು ಅವಳ ಮದುವೆಯಾಗಿ ನಾಲ್ಕು ವರ್ಷವಾಯಿತು ಹೆಚ್ಚು ಕಡಿಮೆ. ಪ್ರಸ್ತದ ದಿನ ಬಿಟ್ಟು ಮತ್ತೆಂದೂ ಬಾಬುರಾಯ ಅವಳೊಟ್ಟಿಗೆ ಇದ್ದ ಹಾಗೆ ಕಾಣೊಲ್ಲ. ಅವನ ಮನೆಯವರು ಮನುಷ್ಯ ಜಾತಿಯಲ್ಲಿ ಮಾತನಾಡುವುದಿಲ್ಲ. ಅವರ ಮನೆಯಲ್ಲಿ ವಿಶೇಷದ ಊಟ ಏನೂ ಆದ್ದು ನಮಗೆ ಗೊತ್ತಿಲ್ಲ. ಈ ಹುಡುಗಿಗೆ ಈ ವಯಸ್ಸಿನಲ್ಲೇ ಹೀಗೆ ಆಗಬೇಕಾ? ಗಂಡ ಸತ್ತು ಹೋಗಿದ್ದರೆ ವಿಧವೆ ಅಂತ ಆದ್ರೂ ಒಂದು ಸಮಾಧಾನ ಇರ್ತಿತ್ತು. ಈಗ ಗಂಡ ಇದ್ದು ಆ ಎಳೆಯ ಜೀವ ಯಾತನೆ ಪಡಬೇಕಾಯ್ತಲ್ಲಾ. ಮಾತೆತ್ತಿದರೆ ಅಪ್ಪನ ಮನೆಗೆ ಹೋಗು ಅಂತ ಬೈಯ್ತಾ ಇರ್ತಾಳಂತೆ ಆ ಮುದುಕಿ. ಗಂಡನ ಮನೆ ಬೇಕಾದರೆ ಇಲ್ಲಿ ಹೇಳಿದ ಹಾಗೆ ಕೇಳ್ತಾ ಇರಬೇಕು, ಇಲ್ಲದಿದ್ದರೆ ನಿನ್ನ ಅಪ್ಪನ ಮನೆಗೆ ಹೋಗಬಹುದು. ನಮ್ಮದೇನೂ ಅಡ್ಡಿ ಇಲ್ಲ ಅಂತ ಹೇಳಿದ್ದಾಳಂತೆ ಅವಳು. ಅಲ್ಲ ಅಷ್ಟು ಮಕ್ಕಳಿಗೂ ಸ್ವಂತ ಬುದ್ಧಿ ಎನ್ನುವಂಥಾದ್ದೇ ಇಲ್ಲವೋ ಹೇಗೆ? ಯಾರೂ ನೆಲದ ಮೇಲೆ ಇದ್ದ ಹಾಗೆಯೇ ಕಾಣುವುದಿಲ್ಲ. ಎಲ್ಲಾ ಅಹಂಕಾರದ ಮುದ್ದೆಗಳೇ. ನನಗಂತೂ ಸಂಶಯವುಂಟು. ಅವನಿಗೆ ಬೇರೆ ಯಾರೋ ಗಿರಾಕಿ ಗಂಟು ಬಿದ್ದಿದ್ದೇಂತ...’
‘ಹೌದೇ?...’
‘ನಿನಗೆ ಅದೆಲ್ಲಾ ಗೊತ್ತಿರಲಿಕ್ಕಿಲ್ಲ. ನೀನು ಪರವೂರಿನಲ್ಲಿರುವವ. ನಿನ್ನ ಭಾವನ ವಿಚಾರ ನಿನಗೆ ಗೊತ್ತಾಗುವುದಾದರೂ ಹೇಗೆ? ಅವನೊಬ್ಬ ಶುದ್ಧ ಲಫಂಗ ಅಂತ ನಾನು ಹೇಳಲಾರೆ. ವ್ಯಾಪಾರ ವ್ಯವಹಾರದಲ್ಲಿ ಒಳ್ಳೇ ಚುರುಕಿದ್ದಾನೆ. ಆದರೇನು? ಮನುಷ್ಯತ್ವ ಬೇಡವೇ? ಮನೆ ವಿಚಾರದಲ್ಲಿ, ಹೆಂಡತಿ ವಿಚಾರದಲ್ಲಿ ತಲೆಯೇ ಹಾಕೋಲ್ಲ ಅಂದರೆ ಹೇಗೆ? ಹುಡುಗಿಯ ವಿಷಯ ಮಾತನಾಡಲು ಹೋದರೆ ಅದೊಂದು ಬಿಟ್ಟು ಬೇರೆ ಏನು ಬೇಕಾದರೂ ಮಾತನಾಡಿ ಎನ್ನುತ್ತಾನೆ. ಅಂಥವನ ಹತ್ತಿರ ವಾದಿಸುವುದು ಹೇಗೆ? ವಾರಕ್ಕೆ ಮೂರು ಸರ್ತಿ ಶಿವವೊಗ್ಗಕ್ಕೆ ಹೋಗಿ ಬರುತ್ತಾನೆ. ಅಲ್ಲಿ ಯಾವುದೋ ಒಂದು ಹುಡುಗಿಯನ್ನು ಕಟ್ಟಿಕೊಂಡಿದ್ದಾನಂತೆ. ಒಂದಲ್ಲ ಹತ್ತು ಹುಡುಗಿಯರಿರಲಿ; ಅದಕ್ಕೆ ಮದುವೆಯಾದವಳನ್ನು ಈ ರೀತಿ ನೋಡಿಕೊಳ್ಳಬೇಕೂಂತ ಉಂಟಾ?... ಆ ಹುಡುಗಿ ಇವನ ತಲೆ ತಿರುಗಿಸಿದ್ದಾಳೆ ಅಂತ್ಲೂ ಹೇಳುತ್ತಾರೆ. ಆದರೆ ಇವನಿಗೆ ಇವನ ತಲೆ ಸರಿ ಇಟ್ಟುಕೊಳ್ಳಲು ತಿಳಿಯದೇ? ಅಂತೂ ಈ ಚಿನ್ನದಂಥ ಹುಡುಗಿಯನ್ನು ಕಸಕ್ಕೆ ಹಾಕಿದನಲ್ಲಾ ಎಂತ ಬೇಸರವಾಗುತ್ತೆ. ನೆವನಕ್ಕೊಂದು ಇವಳ ಕಾಗದ- ‘ಅತ್ತೆ ಕಷ್ಟ ಕೊಡುತ್ತಾರೆ ನಾವು ಸ್ವಲ್ಪ ಸಮಯ ಅವರಿಂದ ದೂರ ಇರುವುದು ಒಳ್ಳೆಯದು’ ಅಂತ ಬರೆದಿದ್ದಳಂತೆ ಹಿಂದೆ. ಅದೇ ವಿಚಾರವನ್ನು ದೊಡ್ಡದು ಮಾಡಿ ನಿಮ್ಮ ಹುಡುಗಿ ನಮಗೆ ಬೇಡ ಅಂತ ಮನೆಗೆ ಬಂದವಳನ್ನು ಕರೆದುಕೊಂಡು ಹೋಗಲೇ ಇಲ್ಲ. ಕಡೆಗೆ ನಾವು ಕರೆದುಕೊಂಡು ಹೋಗಿ ಪಂಚಾಯಿಗೆ ಮಾಡಿ ಬಿಟ್ಟು ಬಂದದ್ದಲ್ವಾ? ನಾವು ಯಾರೂ ಅಲ್ಲಿಗೆ ಹೋಗಬಾರದೆಂಬ ಷರತ್ತಿಗೂ ಒಪ್ಪಿ ಬಂದೆವು- ಕ್ರಮೇಣ-ಗಂಡ -ಹೆಂಡತಿ, ಅತ್ತೆ-ಸೊಸೆ ಒಳ್ಳೆಯ ರೀತಿಯಲ್ಲಿ ಇರಬಹುದೆಂದುಕೊಂಡು. ಆದರೆ ಆದ ಕಥೆಯೇ ಬೇರೆ. ಎಲ್ಲರೂ ಹೇಳುವುದು ನೋಡಿದರೆ ಹುಡುಗಿ ಇಷ್ಟು ದಿವಸ ಜೀವ ಇಟ್ಟುಕೊಂಡು ಬದುಕಿದ್ದೇ ದೊಡ್ಡದು ಅಂತ. ಕೆಲಸದ ಹುಡುಗಿಗಿಂತಲೂ ಕೀಳಾಗಿ ಆ ಮನೆಯಲ್ಲಿ ಒದ್ದಾಡ್ತಾ ಇದ್ದಾಳೆ. ನಾವು ಇಷ್ಟು ದಿನ ಕೈ ಕಟ್ಟಿ ಬಾಯಿ ಮುಚ್ಚಿ ಕುಳಿತದ್ದು ತಪ್ಪಾಯ್ತು. ಈಗ ನಾಲ್ಕು ಜನರ ಎದುರು ಅವರ ಮರ್ಯಾದೆ ತೆಗೆದು ಬರಬೇಕು ಅಷ್ಟೆ. ಹುಡುಗಿಯ ಬಾಳಂತೂ ಹಾಳಾಯ್ತು. ಇನ್ನು ನಾವು ಹೆದರಿ ಕೂರಬಾರದು.’
‘ಜ್ಯೋತಿಷಿ ಸೀನು ಭಟ್ರು ಖಡಾಖಂಡಿತವಾಗಿ ಹೇಳಿದ್ದಾರಂತೆ- ಇನ್ನೊಂದು ತಿಂಗಳೊಳಗೆ ಮನೆಗೆ ಬರ್ತಾಳೆ, ಮುಂದೆ ಒಳ್ಳೆಯದಾಗುತ್ತದೆ ಅಂತ. ಅವಳ ಜಾತಕದಲ್ಲೂ ಮೂರು ನಾಲ್ಕು ವರ್ಷ ಬಹಳ ಕಠಿಣ, ನಂತರ ಒಳ್ಳೆಯದಾಗುತ್ತದೆ ಅಂತ ಉಂಟಂತೆ. ಅಪ್ಪಯ್ಯ ಅವಳಿಗೆ ಶ್ರೇಯಸ್ಸಾಗಬೇಕೂಂತ ನಿತ್ಯ ದೇವಿಪಾರಾಯಣೆ ಮಾಡ್ತಾ ಇದ್ದಾರೆ. ನವಗ್ರಹ ಹೋಮ, ಹವನ, ಶಾಂತಿಗಳನ್ನೆಲ್ಲಾ ಮಾಡಿಸಿಯಾಯ್ತು ಅವಳ ಹೆಸರಿನಲ್ಲಿ. ಎಲ್ಲಾ ದೇವರಿಗೂ ಮುಡಿಪು ತೆಗೆದಿರಿಸಿದೆ. ಮರ್ಯಾದೆಯಾಗಿ ಯಾವ ಗಲಾಟೆಯೂ ಇಲ್ಲದೆ ಗಂಡ ಹೆಂಡತಿ ಚೆನ್ನಾಗಿದ್ದರೆ ಸಾಕು ಎಂಬುದು ನಮ್ಮ ಆಸೆ. ನಾವು ಹೋದ ಮೇಲೆ ಏನೆಲ್ಲಾ ಗಲಾಟೆ ನಡೆಯುತ್ತೋ ದೇವರಿಗೇ ಗೊತ್ತು.’

‘ಗಲಾಟೆ ಆಗಲೂಬಹುದು. ಆಗದಿರಲೂಬಹುದು. ಅಂತೂ ನಾವು ಹೋದೊಡನೆಯೇ ನಮ್ಮ ಕುತ್ತಿಗೆಗೆ ಕೈ ಹಾಕಿ ಹೊರಗೆ ದೂಡಲಿಕ್ಕಿಲ್ಲವಲ್ಲಾ. ಅಪರೂಪಕ್ಕೆ ಹೋದವರನ್ನು ಮಾತನಾಡಿಸದೇ ಇರಲಿಕ್ಕಿಲ್ಲವಲ್ಲಾ. ನಾವೂ ಮನಬಿಚ್ಚಿಯೇ ಮಾತನಾಡೋಣ. ನಿನ್ನ ಭಾವ ಹುಶಾರಾಗಿದ್ದರೆ ಅಕ್ಕನನ್ನು ಕರೆದುಕೊಂಡು ಮನೆಗೆ ಬಂದು ಹೋಗಲು ಹೇಳೋಣ. ನಮಗೇನು ಹೆದರಿಕೆ. ಏನಾದರೂ ಒಂದು ಇತ್ಯರ್ಥ ಆಗಲಿ. ಏನ್ಹೇಳ್ತಿ ನೀನು?’
ನಾನು ಏನನ್ನೂ ಹೇಳಲಿಲ್ಲ.

ಆಗುಂಬೆಯಲ್ಲಿ ನಾವು ಬಸ್ಸು ಹತ್ತುವಾಗ ಹಾರಾಡಿಯ ನಮ್ಮ ಗುರುತಿನವರೊಬ್ಬರು ಸಿಕ್ಕಿದರು. ಭಾವನ ಹತ್ತಿರದ ಸಂಬಂಧಿ ಕೂಡಾ. ನನ್ನ ಪರಿಚಯ ಅವರಿಗೆ ಸರಿಯಾಗಿ ಇದ್ದಂತೆ ಕಾಣಲಿಲ್ಲ. ಆದರೆ ಚಿಕ್ಕಪ್ಪನ ಪರಿಚಯ ಚೆನ್ನಾಗಿತ್ತು. ಚಿಕ್ಕಪ್ಪನೇ ಅವರನ್ನು ಕಂಡು ‘ತೀರ್ಥಹಳ್ಳಿಯವರೆಗೆ ಹೋಗಿ ಬರುತ್ತೇವೆ. ಅಲ್ಲಿಯ ಸಮಾಚಾರ ಏನಾದರೂ ಗೊತ್ತುಂಟಾ?’ ಎಂದು ಕೇಳಿದರು.
‘ಬಾಬು ರಾಯನಿಗೆ ಹುಶಾರಿರಲಿಲ್ಲ. ಸ್ವಲ್ಪ ಜ್ವರವಿತ್ತು. ಅದು ಗುಣವಾಯ್ತು. ವೊನ್ನೆ ಶಿವವೊಗ್ಗಕ್ಕೆ ಹೋಗಿದ್ದ, ವಾಪಸ್ಸು ಬರುವಾಗ ಮೋಟರ್ ಸೈಕಲ್ ಆಕ್ಸಿಡೆಂಟ್ ಆಗಿ ತಲೆಗೆ ತುಂಬಾ ಪೆಟ್ಟಾಗಿದೆ. ಶಿವವೊಗ್ಗ ಆಸ್ಪತ್ರೆಗೆ ಹಾಕಿದ್ದಾರೆ. ನಾನೂ ನಿನ್ನೆ ನೋಡಿಬಂದೆ. ಜೀವ ಉಳಿಯುವುದು ಕಷ್ಟ’-ಎಂದರು. ‘ಇನ್ನು ದೇವರೇ ಗತಿ’ ಎಂದು ನಿಟ್ಟುಸಿರಿಟ್ಟು ತೆರಳಿದರು.
‘ಚಿಕ್ಕಪ್ಪ, ನಾವು ಸೀದಾ ಶಿವವೊಗ್ಗಕ್ಕೆ ಹೋಗಿ ಭಾವನನ್ನು ನೋಡಿ ಬಂದರೆ ಹೇಗೆ?’ ಎಂದೆ.
‘ಬೇಡ. ತೀರ್ಥಹಳ್ಳಿಯಲ್ಲಿ ಇಳಿದು, ಮನೆಯಲ್ಲಿ ವಿಚಾರಿಸಿಯೇ ಬೇಕಾದರೆ ಶಿವವೊಗ್ಗಕ್ಕೆ ಹೋಗುವ’ ಎಂದರು.
ನಾವು ಭಾವನ ಮನೆ ಸೇರಿದಾಗ ಘಂಟೆ ನಾಲ್ಕಾಗಿತ್ತು. ಮನೆಯೆಲ್ಲಾ ಭಣ ಭಣ ಎನ್ನುತ್ತಿತ್ತು. ಯಾರದ್ದೂ ಸದ್ದಿಲ್ಲ. ಅಲ್ಲಿದ್ದ ಪುರೋಹಿತರೊಬ್ಬರು ನಮ್ಮನ್ನು ಕಂಡು ‘ನೀವು ಬಾಬುರಾಯನ ಹೆಂಡತಿ ಕಡೆಯವರಾ? ಬಾಬುರಾಯನ ಕಥೆ ಮುಗಿಯಿತು. ಬೆಳಗ್ಗೆ ಶಿವವೊಗ್ಗದಿಂದ ಹೆಣ ತಂದು ಈಗ ತಾನೇ ಸಂಸ್ಕಾರ ಆಯ್ತು. ಎಲ್ಲಾ ಒಳಗಿದ್ದಾರೆ’ ಎಂದರು.

ಚಿಕ್ಕಪ್ಪನ ಮುಖ ಕಪ್ಪಾಯ್ತು. ನನ್ನ ಕೈ ಕಾಲು ಗಡಗಡನೆ ನಡುಗುತ್ತಿತ್ತು.ಪಡಸಾಲೆಯಲ್ಲಿ ಅಕ್ಕ ಒಬ್ಬಳೇ ಕುಳಿತಿದ್ದಳು. ಕಣ್ಣಿನಲ್ಲಿ ಚೂರೂ ನೀರಿರಲಿಲ್ಲ. ಮುಖದಲ್ಲಿ ಚೂರೂ ವ್ಯಸನವಿರಲಿಲ್ಲ. ನನ್ನನ್ನು ನೋಡಿಯೂ ಅವಳಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ನನ್ನೆದುರು ಆಚೀಚೆ ಮನೆಯೊಳಗೇ ಓಡಾಡುತ್ತಿದ್ದ ಆ ಅತ್ತೆ, ಮಾವ, ನಾದಿನಿಯರು, ಭಾವನ ತಮ್ಮಂದಿರು ಎಲ್ಲ ಪಿಶಾಚಿಗಳಂತೆ, ರಾಕ್ಷಸರಂತೆ ಕಂಡು ಬಂದರು. ನಾನು ಮೂಕನಾಗಿ ಅಕ್ಕನ ಎದುರು ಎಷ್ಟು ಹೊತ್ತು ನಿಂತಿದ್ದೆನೋ? ಚಿಕ್ಕಪ್ಪ ಬಂದು ಎಚ್ಚರಿಸಿದರು.- ಅಪ್ಪು ಕಾರು ತಂದಿದ್ದೇನೆ. ಇವಳನ್ನು ಕರೆದುಕೊಂಡು ಹೋಗುವ. ಈ ಮನೆಯ ಋಣ ಮುಗಿಯಿತು ಅವಳಿಗೆ. ಇನ್ನಾದರೂ ಉಳಿದವರು ಸುಖವಾಗಿರಲಿ ಎಂದರು.

ಅಕ್ಕನನ್ನು ಕಾರಿನಿಂದಿಳಿಸಿ ಮನೆಗೆ ಕರೆದುಕೊಂಡು ಹೋದೆವು. ರಾತ್ರಿಯಾಗಿ ಅಮ್ಮ ಮಲಗಿಯಾಗಿತ್ತು. ಅವಳನ್ನು ಎಬ್ಬಿಸಿದೆ. ಚಿಮಿಣಿ ದೀಪದ ಬೆಳಕಿನಲ್ಲಿ ಕುಂಕುಮವಿಲ್ಲದೆ ಬಂದು ನಿಂತಿದ್ದ ಅಕ್ಕನನ್ನು ನೋಡಿ ಅಮ್ಮ ಚೀರಿದಳು. ನಾನು ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಸಾಧ್ಯವಾದಷ್ಟು ಅತ್ತೆ.

No comments:

Post a Comment