Wednesday, May 25, 2011

ಸರಳುಗಳ ಹಿಂದಿನಿಂದ

ಸುಮಾ ಸುಧಾಕಿರಣ್
(ವಾರ್ಭಾಭಾರತಿ, ಮೇ ೮)
ನಾಲ್ಕನೆ ಮಹಡಿಯ ಬಾಲ್ಕನಿಯಲ್ಲಿ ನಿಂತು ಗ್ರಿಲ್ ಸರಳುಗಳನ್ನು ಹಿಡಿದು ನೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದಾಳೆ ಮಗಳು ಎದುರು ರಸ್ತೆಯಲ್ಲಿ ಆಡುವ ಕಟ್ಟಡ ಕಾರ್ಮಿಕರ ಮಕ್ಕಳೆಡೆಗೆ.

ಒಂದು ಕ್ಷಣ ಸಿನೆಮಾಗಳಲ್ಲಿ ತೋರಿಸುವ ಜೈಲಿನ ಕೈದಿಗಳ ನೆನಪಾಯಿತು ನನಗೆ.
ಬೀಳುವ ಚಡ್ಡಿಯನ್ನೊಂದು ಕೈಯಲ್ಲಿ ಹಿಡಿದುಕೊಂಡೇ ಓಡುತ್ತಿರುವ ಆ ಪುಟ್ಟ ಹುಡುಗ, ಗೊಣ್ಣೆ ಸುರಿಸುತ್ತಾ ಓಡುತ್ತಿರುವ ಈ ಹುಡುಗಿಯನ್ನು ಇನ್ನೇನು ಹಿಡಿದೇ ಬಿಟ್ಟ ....
ಓಡು ಓಡು .. ನಿಂತಲ್ಲೇ ಕೂಗುತ್ತಿದ್ದಾಳೆ ಮಗಳು, ಇವಳೇ ಸಿಕ್ಕಿಬಿದ್ದಳೇನೋ ಎಂಬ ಭಾವದಲ್ಲಿ. ಕಣ್ಣುಗಳಲ್ಲೇನೋ ಹೊಳಪು.
ಅಮ್ಮ ನಾನೂ ಅಲ್ಲಿ ಆಡಲು ಹೋಗಲೆ? ಕೇಳಿದ್ದಳೊಮ್ಮೆ. ಸುಮ್ಮನಿರಿಸಿದ್ದೆ ಅವರ ಕೊಳಕುತನ, ಕೆಟ್ಟ ಭಾಷೆ, ಹರುಕು ಬಟ್ಟೆ ಅದು ಇದು ಹೀಗೆ ನೂರೆಂಟು ಕಾರಣ ಕೊಟ್ಟು.

ಛೆ! ಆ ಬೀದಿ ಮಕ್ಕಳ ಜೊತೆ ಆಡಲು ಕಳಿಸು ವುದೆ? ನಮ್ಮ ಅಂತಸ್ತೇನು? ಪಕ್ಕದ ಬಿಲ್ಡಿಂಗಿನ ಮಿಸೆಸ್ ಶರ್ಮ, ಎದುರು ಮನೆಯ ಮಿಸೆಸ್ ರಾವ್, ಕೊನೆ ಮನೆಯ ನಿಕಿತಾ ಜೈನ್ ಎಲ್ಲ ಏನೆಂದಾರು!

ಅಂದಿನಿಂದ ಇವಳದು ನಿತ್ಯ ಸಾಯಂಕಾಲ ಇದೇ ಕಾಯಕ .....ಬಾಲ್ಕನಿಯಲ್ಲಿ ನಿಂತು ಗ್ರಿಲ್ನಲ್ಲಿ ಹಣುಕಿ ಹೊರನೋಡುತ್ತಾ ನಿಲ್ಲುವುದು ....ಆ ಬೀದಿ ಮಕ್ಕಳಾಡುವ ಆಟಗಳನ್ನು ಕಣ್ತುಂಬಿಕೊಳ್ಳುವುದು, ತಾನೇ ಆಡುತ್ತಿರುವಂತೆ ಪ್ರತಿಕ್ರಿಯಿಸುವುದು.
ಕತ್ತಲೆಯಾಗುವವರೆಗೂ ಅವರ ಆಟ ಮುಂದುವರಿಯುತ್ತದೆ. ಇವಳ ನೋಟವೂ.... ನಂತರ ಕಾಲು ಸೋತಂತೆ, ಮಂಕು ಮುಖದಿಂದ ಒಳಬರುತ್ತಾಳೆ.

ಈ ದಿನಚರಿ ತಪ್ಪಿಸಲು ನಾನು ಏನೇನೆಲ್ಲ ಮಾಡಿದೆ ಗೊತ್ತೆ ? ಕಂಪ್ಯೂಟರ್ ಗೇಮ್ಸ್, ಡಿಯೊ ಗೇಮ್ಸ್, ಕಾರ್ಟೂನ್ ಫಿಲ್ಮ್, ರಿಮೋಟ್ ಏರೋಪ್ಲೇನ್..... ಒಂದೇ ಎರಡೇ ...ಊಹುಂ ....ಯಾವುದೂ ಅವಳ ಕಣ್ಣುಗಳಲ್ಲಿ ಬೀದಿ ಮಕ್ಕಳ ಆಟ ನೋಡುತ್ತಿರುವಾಗ ಕಾಣುವ ಹೊಳಪನ್ನು ತರಲಿಲ್ಲ.

ನನ್ನ ಸಮೃದ್ಧ ಬಾಲ್ಯದ ನೆನಪಾಗುತ್ತದೆ. ....ತುಂಬಾ ಮಳೆ ಎಂದು ಶಾಲೆಗೆ ರಜೆ ಕೊಟ್ಟರೆ ಸಾಯಂಕಾಲದವರೆಗೂ ರಸ್ತೆ, ಚರಂಡಿ ನೀರಿನಲ್ಲಿ ಅಟವಾಡುತ್ತಿದ್ದುದು ... ಮನೆಯೆದುರಿನ ಚಿಕ್ಕ ಹಳ್ಳದ ನೀರಿನಲ್ಲಿರುತ್ತಿದ್ದ ಬಣ್ಣ ಬಣ್ಣದ ಕಲ್ಲುಗಳನ್ನು ತೇಯ್ದು ಆ ಬಣ್ಣಗಳನ್ನು ಮೈ ,ಮುಖಕ್ಕೆಲ್ಲ ಬಳಿದುಕೊಂಡು ಯಕ್ಷಗಾನದ ಬಣ್ಣದ ವೇಷ ಕಟ್ಟಿದ್ದು.... ಮಾವಿನಮರದ ಕೊಂಬೆಗೆ ಜೋಕಾಲಿ ಕಟ್ಟಿ ಜೋರಾಗಿ ಜೀಕಿ ಬಿದ್ದದ್ದು .... ಸೈಕಲ್ ಕಲಿಯುತ್ತೇನೆಂದು ಹೊಂಗೆ ಮರದ ಬಳಿಯ ಏರಿನಿಂದ ಸ್ಪೀಡಾಗಿ ಬಂದು ಜಾರಿ ಬಿದ್ದು ಕಾಲು ಮುರಿದುಕೊಂಡದ್ದು .....ಮದುವೆಯಾಟ ಆಡೋಣ ಎಂದು ಪುಟ್ಟ ರಶ್ಮಿಗೂ ಮತ್ತು ತುಂಟ ರಾಮುಗೂ ಶೃಂಗರಿಸಿ ಕುಳ್ಳಿರಿಸಿ ಆರತಿ ಎತ್ತಿದ್ದು .....ತಂಗಿಗೆ ಸ್ಕೂಟರ್ ಸವಾರಿ ಮಾಡಿಸುತ್ತೇನೆಂದು ತೆಂಗಿನ ಹೆಡೆಯ ಮೇಲೆ ಕೂರಿಸಿ ಎಳೆದದ್ದು ......ಅವಳಿಗೆ ಸೌತೆಮಿಡಿ ಕೊಡುತ್ತೇನೆಂದು ಕಹಿಹಿಂಡಲೆ ಕಾಯಿ ತಿನ್ನಿಸಿ ಅಳಿಸಿದ್ದು ......ಕಣ್ಣೆ ಮುಚ್ಚೆ ಆಟವಾಡುವಾಗ ದೊಡ್ಡಜ್ಜನಮನೆಯ ಕತ್ತಲೆಕೋಣೆಯಲ್ಲಿ ಗಂಟೆಗಟ್ಟಲೆ ಅವಿತು ಕುಳಿತದ್ದು......ಅಜ್ಜನ ಹತ್ತಿರ ತೆಂಗಿನ ಮಡಿಲುಗಳ ಚಾಪೆ ನೇಯಿಸಿಕೊಂಡು ಸೀಮಾ ಮನೆಯ ಅಂಗಳದಲ್ಲಿ ಗುಡಿಸಲು ಕಟ್ಟಿ ಖಾರ ಅವಲಕ್ಕಿ ಮಾಡಿ ತಿಂದದ್ದು.......ಕೆಳಗಿನ ಗದ್ದೆಯ ಹೊಳೆಯ ಒಂಟಿ ಸಂಕದ ಮೇಲೆ ದೊಂಬರ ಹುಡುಗಿಯಂತೆ ಸರ್ಕಸ್ ಮಾಡಿ ನಡೆಯುತ್ತಿದ್ದುದು.... ಭತ್ತದ ಕಣದ ಮೂಲೆಯಲ್ಲಿದ್ದ ಹುಲ್ಲಿನ ಗೊಣಬೆ ಹತ್ತಿ ಜಾರುತ್ತಿದ್ದುದು.... ತುಳಸಿಯೊಂದಿಗೆ ಹುಣಸೇ ಮರದ ಹಿಂದೆ ಅವಿತು ಕುಳಿತು, ಸಾಯಂಕಾಲದ ವೇಳೆ ಆಚೆ ದಿಂಬದ ತನ್ನ ಮನೆಗೆ ಹೋಗುತ್ತಿದ್ದ ಮಡಿವಾಳ ಗಂಗೆಯನ್ನು ಗೂಬೆಯಂತೆ ಕೂಗಿ ಹೆದರಿಸುತ್ತಿದ್ದುದು.....ಬೇಸಗೆ ಬಂತೆಂದರೆ ರಸ್ತೆಯಲ್ಲಿ ಡಾಂಕಿ ಮಂಕಿ, ಉಪ್ಪಾಟ, ಸಗಣಿ ಕೋಲು ಇತ್ಯಾದಿ ಆಟಗಳನ್ನು ರಾತ್ರಿಯವರೆಗೂ ಆಡುತ್ತಿದ್ದುದು .....ಸಾಯಂಕಾಲ ರೈಲು ನೋಡಲು ದೂರದ ಬ್ಯಾಣದ ಬಳಿಯಿದ್ದ ರೈಲ್ವೆ ರಸ್ತೆಗೆ ಓಡುತ್ತಿದ್ದುದು..........ಓಹ್ ನೆನೆದಷ್ಟೂ ಮುಗಿಯದ ನೆನಪಿನ ಸುರುಳಿ!

ಈ ಲೋಕಕ್ಕೆ ಜಾರಿದಾಗ ಗ್ರಿಲ್ ಹಿಂದೆ ನಿಂತ ಮಂಕು ಕಣ್ಗಳ ಮಗಳ ಮುಖ ನೋಡಿ ನನ್ನ ಕಣ್ಣಂಚು ಒದ್ದೆಯಾಗುತ್ತದೆ.
ನಿಧಾನಕ್ಕೆ ಹೊರಬಾಗಿಲು ತೆಗೆದು, ಹೋಗು ಪುಟ್ಟ ಎನ್ನುತ್ತೇನೆ.... ಸಂತಸದಿಂದ ಅರಳುವ ಅವಳ ಕಣ್ಗಳ ಬೆಳಕಲ್ಲಿ ಮಿಸೆಸ್ ಶರ್ಮ, ಮಿಸೆಸ್ ರಾವ್, ನಿಖಿತಾ ಜೈನ್ ಎಲ್ಲರೂ ಮಸುಕಾಗುತ್ತಾರೆ.

No comments:

Post a Comment