Monday, October 11, 2010

ಒಂದು ತುಂಡು ಗೋಡೆ

ನನ್ನ ಕೈಯಾರೆ ಮನೆ ಸುಟ್ಟು
ಬೂದಿ ಹೊತ್ತು ಹೊರಟಿರುವೆ,
ಸುಡಬಯಸುವಿರಾದರೆ ನಿಮ್ಮ ಮನೆ
ನನ್ನ ಜತೆಯಲ್ಲಿ ಬರಬಹುದು-
-ಸಂತ ಕಬೀರ
ಒಂದು
ಬಸ್ ಸ್ಟಾಂಡ್ ಬಳಿಯಲ್ಲಿ ಮೂರು, ಮಸೀದಿ ಗುಡ್ಡೆಯಲ್ಲಿ ಎರಡು-ಹೀಗೆ ಐದು ಮಿಲಿಟರಿ ಹೊಟೇಲುಗಳಿಗೆ ಅಕ್ಕಿ ರೊಟ್ಟಿ ತಟ್ಟಿ ಕೊಟ್ಟು ಜೀವನ ಸಾಗಿಸುವ ‘ರೊಟ್ಟಿ ಪಾತುಮ್ಮ’ಳ ಕನಸಿನಲ್ಲಿ ಕಾಣಿಸಿಕೊಂಡ ದೇವರಾಜ ಅರಸು ಅವರು, “ಏನು ಪಾತುಮ್ಮ ನಿನ್ನ ವಿಚಾರ? ನಿನಗೆ ದರ್ಕಾಸ್ತು ಜಾಗ ಕೊಟ್ಟು ವರ್ಷ ಎಂಟು ದಾಟಿದರೂ ನೀನು ಮನೆ ಕಟ್ಟಿಸಿಕೊಳ್ಳುವ ಯೋಚನೆಯಲ್ಲಿಯೇ ಇದ್ದ ಹಾಗಿಲ್ಲವಲ್ಲಾ? ನಿನ್ನ ಜತೆಯಲ್ಲೇ ಹಕ್ಕು ಪತ್ರ ಪಡೆದುಕೊಂಡಿದ್ದ, ಕಮಲಕ್ಕ, ಹಾಲು ಮಾರುವ ಕರ್ಮಿನ ಬಾಯಿ, ಮೀನಿನಂಗಡಿಯ ಪೊಡಿಯಬ್ಬ- ಎಲ್ಲರೂ ಮನೆ ಕಟ್ಟಿಸಿಕೊಂಡು ವರ್ಷವೆಷ್ಟಾಯಿತು ಹೇಳು? ನೀನು ಇನ್ನು ಕೂಡಾ ಇದೇ ರೀತಿ ಉದಾಸೀನ ಮಾಡಿದರೆ, ಆ ಜಾಗವನ್ನು ಬೇರೆಯವರ ಹೆಸರಿನಲ್ಲಿ ಬರೆದುಬಿಟ್ಟೇನು ಹಾಂ!” ಎಂದು ವಾರ್ನಿಂಗ್ ಕೊಟ್ಟು ಬಿಟ್ಟಾಗ ಅವಳಿಗೆ ಎಚ್ಚರವಾಗಿ, ದಿಗ್ಗನೆ ಎದ್ದು ಕುಳಿತಳು.

ಮುತ್ತುಪ್ಪಾಡಿ ಮಸೀದಿಗುಡ್ಡೆಯ ಬಲಭಾಗದ ಇಳಿಜಾರಿನಲ್ಲಿ ಐದುಸೆಂಟ್ಸ್ ಮನೆ ನಿವೇಶನದ ಹಕ್ಕು ಪತ್ರವನ್ನು, ಎಂಟು ವರ್ಷಗಳಷ್ಟು ಹಿಂದೆ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದಿದ್ದ ಭವ್ಯ ಸಮಾರಂಭವೊಂದರಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಅಮೃತ ಹಸ್ತದಿಂದಲೇ ಸ್ವೀಕರಿಸಿದ್ದ ರೊಟ್ಟಿ ಪಾತುಮ್ಮಳನ್ನು ಮನೆ ಕಟ್ಟಿಸಿ ಕೊಳ್ಳುವಂತೆ ಒತ್ತಾಯಿಸುತ್ತಿರುವವರು ಹಲವಾರು ಮಂದಿ. ವಿಲೇಜ್ ಅಕೌಂಟೆಂಟ್ ಸೀತಾರಾಮ ಬೈಪಡಿತ್ತಾಯರಂತೂ ಒಮ್ಮೆ ಖಡಕ್ ಆಗಿಯೇ ಹೇಳಿಬಿಟ್ಟಿದ್ದರು, “ನೀನು ಡೀನೋಟೀಸು ಕೈಯಲ್ಲಿ ಉಂಟು ಅಂತ ಸುಮ್ಮನೆ ಕೂತುಬಿಟ್ರೆ, ನಾಳೆಯ ದಿನ ಮಾಂಕುವೋ, ಮಮ್ಮುಟ್ಟಿಯೋ ರಾತ್ರೋ ರಾತ್ರಿ ನಿನ್ನ ಜಾಗದಲ್ಲಿ ನಾಲ್ಕು ಕೋಲು ಊರಿ, ಆರು ಸೋಗೆ ಏರಿಸಿ, ಮೂರು ಕಲ್ಲು ಜೋಡಿಸಿ, ಒಂದು ಒಲೆ ಉರಿಸಿಬಿಟ್ರೆ ನಿನ್ನ ಡೀನೋಟೀಸನ್ನು ಅದೇ ಬೆಂಕಿಗೆ ಬಿಸಾಡಬೇಕಾಗಿ ಬರಬಹುದು. ಇನ್ನಾದ್ರೂ ನೀನು ಮನೆ ಕಟ್ಟಿಸುವ ಕೆಲಸ ಸುರು ಮಾಡದಿದ್ದರೆ ನಾನು ಡೀಸೀಗೆ ರಿಪೋರ್ಟು ಬರೆದು ಬಿಡುತ್ತೇನೆ. ಆ ಬಳಿಕ ನಿನ್ನ ಜಾಗ ಹೋಯಿತು ಅಂತ ಈ ಸೀತಾರಾಮನನ್ನು ದೂರುವುದು ಬೇಡ, ಗೊತ್ತಾಯ್ತಲ್ಲಾ?”

ಹಿಂದಾಗಲೀ ಮುಂದಾಗಲೀ ಯಾರದೇ ಬಲವಿಲ್ಲದ ನಲುವತ್ತರ ಆಸುಪಾಸಿನ ವಿಧವೆ ಪಾತುಮ್ಮ, ತನ್ನ ಬಲುದೂರದ ಸಂಬಂಧಿ ಕಾಸಿಂ ಬ್ಯಾರಿಯ ಮನೆ ಹಿಂಭಾಗದ ಅರೆವಾಸಿ ಮಾಡನ್ನು ಇಳಿಸಿ ನಿರ್ಮಿಸಲಾದ ಅಕ್ಕಿ ರೊಟ್ಟಿ ಸುಡುವ ಫ್ಯಾಕ್ಟರಿಗೆ ತಿಂಗಳೊಂದರ ಹದಿನೈದು ರೂಪಾಯಿ ಬಾಡಿಗೆ ನೀಡುತ್ತಿದ್ದಳು. ಕಳೆದ ಆರು ತಿಂಗಳಿನಿಂದ ಬಾಲ ಕಾರ್ಮಿಕನಾಗಿ ಸೇರಿಕೊಂಡ ಕಾಸಿಂ ಬ್ಯಾರಿಯ ತಂಗಿ ಸಾರಮ್ಮಳ ಮಗ ಸಮದ್‌ನಿಗೆ ವಾರವೊಂದಕ್ಕೆ ಏಳು ರೂಪಾಯಿ ಸಂಬಳ ಕೊಡುತ್ತಿದ್ದಳು. ದಿನವೊಂದರ ಐದು ಅಥವಾ ಆರು ಸೇರು ಅಕ್ಕಿಯನ್ನು ರುಬ್ಬಿ, ಮರದ ಮಣೆಯ ಮೇಲೆ ಹಾಸಿದ ತೆಳುಬಟ್ಟೆಯ ಮೇಲಿಟ್ಟು ತಟ್ಟಿ ನಿಗಿನಿಗಿ ಸುಡುವ ಕೆಂಡದ ನಡುವಿರಿಸಿ ಸುಟ್ಟು ಹೊಟೇಲುಗಳಿಗೆ ಸಂಜೆಯ ಹೊತ್ತಲ್ಲಿ ತಲುಪಿಸಿಬಿಟ್ಟರೆ ಸಿಗುವ ಸಂಪಾದನೆಯಲ್ಲಿ ಹೊಟ್ಟೆ ಬಟ್ಟೆಗೇನೂ ತೊಂದರೆಯಿಲ್ಲ. ಊರೊಳಗೆ ಮದುವೆ, ಮುಂಜಿ, ಬೀಗರ ಔತಣ ಹೀಗೆ ಏನಾದರೊಂದು ನಡೆಯುವುದಿದ್ದರೆ ಇವಳಿಗೆ ಕರೆ ಬರುತ್ತದೆ. ಈಕೆಯ ಕೈಯಲ್ಲಿ ತಟ್ಟಿಸಿಕೊಂಡು ಕೆಂಡದ ನಡುವೆ ಬೆಂದು ಉಬ್ಬುವ ರೊಟ್ಟಿಗಳು ಹೂವಿನ ಎಸಳಿನಂತೆ ಮೃದು ಮತ್ತು ಬೆಲ್ಲದ ತುಂಡಿನಂತೆ ರುಚಿ. ಆದ್ದರಿಂದಲೇ ಜನರು ಅವಳನ್ನು ಗುರುತಿಸುವುದು ‘ರೊಟ್ಟಿ ಪಾತುಮ್ಮ’ ಎಂದು; ಪದ್ಮಶ್ರೀ ಪಾತುಮ್ಮ ತರಹ.

ಹೀಗೆ ಹಲವರು ಅನುಕಂಪದಿಂದ ಕೆಲವರು ಅಸೂಯೆಯಿಂದ ಆಗಿಂದಾಗ್ಗೆ ಎಚ್ಚರಿಸುತ್ತಾ ಬರುತ್ತಿದ್ದರೂ ತಲೆ ಕೆಡಿಸಿಕೊಳ್ಳದಿದ್ದ ರೊಟ್ಟಿ ಪಾತುಮ್ಮ, ಸ್ವತಃ ದೇವರಾಜ ಅರಸು ಅವರೇ ಕನಸಿನಲ್ಲಿ ಕಾಣಿಸಿಕೊಂಡು ವಾರ್ನಿಂಗ್ ಕೊಟ್ಟ ಬಳಿಕ ಮೈ ಕೊಡವಿಕೊಂಡು ಎದ್ದಳು.
ಎದ್ದವಳೇ ‘ವಲು’ ಮಾಡಿಕೊಂಡು ಬಂದು ಮುಂಜಾನೆಯ ನಮಾಜು ಮಾಡಿದಳು. ಬಳಿಕ ಗೋಡೆಯಲ್ಲಿ ಕೊರೆದು ನಿರ್ಮಿಸಲಾಗಿದ್ದ ‘ಪೊಟರೆ ಕಪಾಟಿ’ನಿಂದ ಕುರಾನು ಗ್ರಂಥವನ್ನು ಹೊರತೆಗೆದು, ತಲೆದಿಂಬಿನ ಒಳಗೆ ಅಡಗಿಸಿಟ್ಟಿದ್ದ ಹತ್ತು ರೂಪಾಯಿಗಳ ಎರಡು ನೋಟುಗಳನ್ನು ಹೊರಗೆಳೆದು, ಕುರಾನು ಗ್ರಂಥದ ‘ಯಾಸೀನ್’ಸೂರಾ ಆರಂಭವಾಗುವ ಪುಟಗಳ ನಡುವೆ ನೋಟುಗಳನ್ನಿಟ್ಟು, ಗ್ರಂಥವನ್ನು ಮಡಚಿ ತೊಡೆಯ ಮೇಲಿರಿಸಿಕೊಂಡು ಇಡಿಯ ‘ಯಾಸೀನ್’ ಸೂರಾವನ್ನು ಕಂಠಪಾಠ ಪಠಿಸಿದಳು. ಆ ಬಳಿಕ ‘ದುವಾ’ ಮಾಡಿ ಗ್ರಂಥವನ್ನು ಬಿಡಿಸದೆಯೇ ಹಾಗೇ ಎತ್ತಿಕೊಂಡು ‘ಪೊಟರೆ ಕಪಾಟಿ’ನೊಳಗಿಟ್ಟು ತನ್ನ ಕೆಲಸ ಆರಂಭಿಸಿದಳು.

ಸಂಜೆ ಹೊಟೇಲುಗಳಿಗೆ ರೊಟ್ಟಿಗಳನ್ನು ವಿತರಿಸಿ ಮರಳುವ ದಾರಿಯಲ್ಲಿ ಏಳು ರೂಪಾಯಿ ತೆತ್ತು ಉಪ್ಪಿನಕಾಯಿ ಹಾಕಲು ಬಳಸುವಂತಹ ಪಿಂಗಾಣಿಯ ಭರಣಿಯೊಂದನ್ನು ಖರೀದಿಸಿ ತಂದಳು.

ರಾತ್ರಿಯ ಹೊತ್ತು ಪಕ್ಕದ ಮನೆಯವರೆಲ್ಲರೂ ನಿದ್ರೆ ಹೋಗಿದ್ದಾರೆಂಬುದನ್ನು ಖಾತರಿಸಿಕೊಂಡ ಬಳಿಕ, ತನ್ನ ಚಾಪೆಯ ಅಡಿಯಲ್ಲಿ ಬರುವಂತೆ ನೆಲದೊಳಗೆ ಎರಡು ಗೇಣು ಆಳ ಹಾಗೂ ಒಂದೂವರೆ ಗೇಣಿನಷ್ಟು ಅಗಲದ ಒಂದು ಗುಣಿ ತೋಡಿದಳು. ಉಪ್ಪಿನಕಾಯಿ ಭರಣಿಯನ್ನು ಗುಣಿಯೊಳಗಿರಿಸಿ ಮಟ್ಟ ನೋಡಿ ಸಮಾಧಾನ ಪಟ್ಟುಕೊಂಡ ಬಳಿಕ ಕೈ ತೊಳೆದುಕೊಂಡು, ಕುರಾನು ಗ್ರಂಥದೊಳಗಿರಿಸಿದ್ದ ಎರಡೂ ನೋಟುಗಳನ್ನು ಹೊರತೆಗೆದಳು.

ಎರಡೂ ನೋಟುಗಳನ್ನು ಕಣ್ಣಿಗೊತ್ತಿಕೊಂಡು ‘ದಯಾಮಯನಾದ ಅಲ್ಲಾಹುವೇ, ಈ ಇಪ್ಪತ್ತು ರೂಪಾಯಿಗಳು ಎರಡು ಸಾವಿರವಾಗುವಂತೆ ನನಗೆ ಪ್ರತಿವಾರವೂ ದುಡ್ಡು ಉಳಿಸಲು ಸಾಧ್ಯವಾಗುವಂತೆ ಮಾಡು’ ಎಂದು ಪ್ರಾರ್ಥಿಸಿ, ನೋಟುಗಳನ್ನು ಭರಣಿಯೊಳಕ್ಕೆ ಇಳಿಬಿಟ್ಟಳು. ಭರಣಿಯ ಮುಚ್ಚಳವನ್ನು ಮುಚ್ಚಿ, ಮುಂಜಾನೆಯೇ ಹುಡುಕಾಡಿ ತೆಗೆದು ಇರಿಸಿಕೊಂಡಿದ್ದ ತಗಡಿನ ಚೌಕವೊಂದನ್ನು ಕುಣಿಗೆ ಅಡ್ಡವಾಗಿಟ್ಟು ಚಾಪೆ ಬಿಡಿಸಿದಳು. ಆ ರಾತ್ರಿಯ ಕನಸಿನಲ್ಲಿ ಜಿನಸು ಅಂಗಡಿಯ ಅಣ್ಣುಗೌಡ ಕಟ್ಟಿಸಿದಂತಹದೇ ಆದ ಚಂದದ ಒಂದು ಮನೆ ಅವಳ ನಿವೇಶನದಲ್ಲಿ ಕಾಣಿಸಿಕೊಂಡಿತು.

ಆ ಬಳಿಕದ ಪ್ರತಿಯೊಂದು ಸೋಮವಾರವೂ ತನ್ನ ವಾರದ ಸಂಪಾದನೆಯಲ್ಲಿ ಹತ್ತೋ, ಹನ್ನೆರಡೋ ಉಳಿಸುತ್ತಾ ಉಪ್ಪಿನಕಾಯಿ ಭರಣಿ ತುಂಬತೊಡಗಿದ ರೊಟ್ಟಿ ಪಾತುಮ್ಮ, ‘ನೂರು ಸಾವಿರ ವರ್ಷವಾದರೂ ಸರಿಯೇ, ಅಲ್ಲಾಹುವಿನ ದಯೆಯಿಂದ ಸ್ವಂತಕ್ಕೊಂದು ಮನೆ ಕಟ್ಟಿಸಿಕೊಂಡೇ ಬಿಡುವುದು ’ ಎಂದು ಪ್ರಮಾಣ ಮಾಡಿದ ಬಳಿಕ, ಅಕ್ಕಿ ರೊಟ್ಟಿಯ ವ್ಯಾಸವನ್ನು ಒಂದು ಬೆರಳಿನಷ್ಟೂ, ದಪ್ಪವನ್ನು ಒಂದು ಉಗುರಿನಷ್ಟು ಕಿರಿದುಗೊಳಿಸಿದ್ದಲ್ಲದೆ, ದಿನಕ್ಕೆ ಎರಡು ಕಾಸು ಹೆಚ್ಚು ದುಡಿಯುತ್ತಾ, ಒಂದು ಮುಷ್ಟಿಯಷ್ಟು ಅನ್ನ ಕಡಿಮೆ ಉಣತೊಡಗಿದಳು.

ಈ ಎಲ್ಲ ಬದಲಾವಣೆಗಳ ಪರಿಣಾಮವಾಗಿ ಮುಂದಿನ ರಮಝಾನ್ ಹಬ್ಬದ ವೇಳೆಗೆ ಉಪ್ಪಿನಕಾಯಿ ಭರಣಿಯೊಳಗೆ ಅವಿತು ಕೂತ ನೋಟುಗಳ ಮೊತ್ತವು ಮುನ್ನೂರ ಐವತ್ತು ರೂಪಾಯಿಗಳ ಗಡಿ ದಾಟಿ ಬಿಟ್ಟು ರೊಟ್ಟಿ ಪಾತುಮ್ಮಳ ಎದೆ ನಡುಗಿಸಿಬಿಟ್ಟವು.

ಒಂದು ಮತ್ತು ಎರಡು ರೂಪಾಯಿಗಳ ಸಂಖ್ಯೆಯೇ ಐದು ಅಥವಾ ಹತ್ತು ರೂಪಾಯಿ ನೋಟುಗಳ ಸಂಖ್ಯೆಗಿಂತ ಹತ್ತಾರುಪಟ್ಟು ಹೆಚ್ಚು ಇದ್ದುದರಿಂದಾಗಿ ಭರಣಿಯ ಅರೆವಾಸಿಗಿಂತಲೂ ಹೆಚ್ಚು ಭಾಗ ಸಂಪದ್ಭರಿತವಾಗಿ ಬಿಟ್ಟಿತ್ತು. ಸಕಾಲಿಕವಾಗಿ ಹೊಳೆದ ಪ್ರಥಮ ಚಿಕಿತ್ಸೆ ಎಂಬಂತೆ, ಮೂರು ಬೇರೆ ಬೇರೆ ಅಂಗಡಿಗಳಲ್ಲಿ ಹಂಚಿ ಬದಲಾಯಿಸಿಕೊಂಡು ಪಡೆದ ನೂರು ರೂಪಾಯಿಯ ಮೂರು, ಐವತ್ತು ರೂಪಾಯಿಯ ಒಂದು ನೋಟನ್ನು ಇತರೆ ಚಿಲ್ಲರೆ ನೋಟುಗಳ ಜತೆಯಲ್ಲಿಟ್ಟು ಉರುಟಾಗಿ ಮಡಚಿ ನೂಲಿನಿಂದ ಗಂಟು ಹಾಕಿ ಭರಣಿಯೊಳಗೆ ಹಾಕಿದಾಗ, ವರುಷವೊಂದರ ಸಮಗ್ರ ಸಂಪಾದನೆಯೆಲ್ಲವೂ ಭರಣಿಯ ತಳಕ್ಕೆ ಅಂಟಿಕೊಂಡು ಸುಲಭ ಗೋಚರವಾಗದೆ ಹೋದಾಗ, ಬರಬಾರದಿದ್ದ ಭಯಾನಕ ಯೋಚನೆಗಳೆಲ್ಲವೂ ಸಾಲುಗಟ್ಟಿ ಬಂದು ಬಿಟ್ಟವು.

ಯಾರಾದರೊಬ್ಬರು ತಾನಿಲ್ಲದಾಗ ಮನೆ ನುಗ್ಗಿ ಭರಣಿಯನ್ನು ಕದ್ದೊಯ್ಯುವುದರಲ್ಲಿ ಯಾವುದೇ ಅನುಮಾನ ಉಳಿಯದಾದಾಗ, ಹೊಸ್ತಿಲು ದಾಟುವಾಗಲೆಲ್ಲ ಕಾಲುಗಳು ನಡುಗಲಾರಂಭಿಸಿದ್ದುವು. ಈ ಎಲ್ಲಕ್ಕಿಂತಲೂ ಮುಖ್ಯವಾಗಿ, ಹಗಲು ಹೊತ್ತಿನಲ್ಲಿ ಸಹಾಯಕ್ಕೆಂದು ಬರುತ್ತಿರುವ ಹುಡುಗ ಸಮದ್‌ನ ವರ್ತನೆಗಳಲ್ಲಿ ಅನುಮಾನಕ್ಕೆ ಕಾರಣವಾಗುವ ಎಲ್ಲ ಅಂಶಗಳೂ ಒಂದೊಂದಾಗಿಯೇ ಪ್ರಕಟವಾಗತೊಡಗಿದವು.

ಇಂತಹಾ ಬಿಕ್ಕಟ್ಟಿನ ಸಮಯದಲ್ಲಿ ರೊಟ್ಟಿ ಪಾತುಮ್ಮಳಿಗೆ ಹೊಳೆದ ಅದ್ಭುತ ಉಪಾಯವೇನೆಂದರೆ- ಈಗಾಗಲೇ ಉಳಿಸಲಾಗಿರುವ ಒಟ್ಟು ಸಂಪತ್ತನ್ನು ಬಂಗಾರದ ಆಭರಣವನ್ನಾಗಿ ರೂಪಾಂತರಿಸಿ ತನ್ನ ದೇಹಕ್ಕೆ ಅಂಟಿಸಿಕೊಂಡು ಬಿಡುವುದೆಂದು.

ಎರಡು

ಥೇಟ್ ಬಿ. ಸರೋಜಾದೇವಿಯ ತರಹವೇ ನಗು ಚೆಲ್ಲುತ್ತಿರುವ ‘ಪರಿಮಳ ಅಗರಬತ್ತಿ’ಯವರ ‘ಧನಲಕ್ಷ್ಮಿ’ಗೆ ಊದುಕಡ್ಡಿ ಹಚ್ಚಿ ಕೈಮುಗಿದು. ಎರಡೂ ಕೈಗಳಿಂದ ತಿಜೋರಿಯ ತಲೆ ಸವರಿ ಕಣ್ಣಿಗೊತ್ತಿಕೊಂಡು. ಕಣ್ಣು ತೆರೆದ ಶ್ರೀನಿವಾಸ ಆಚಾರ್ಯರ ಕಣ್ಣಿಗೆ ಮೊದಲು ಬಿದ್ದವಳು ರೊಟ್ಟಿ ಪಾತುಮ್ಮ.

ರೊಟ್ಟಿಪಾತುಮ್ಮ ಆಚಾರ್ಯರಿಗೆ ತೀರಾ ಅಪರಿಚಿತಳೇನೂ ಅಲ್ಲ. ಅವಳ ಎರಡೂ ಕಿವಿಗಳನ್ನು ಅಲಂಕರಿಸಿರುವ ಐದೂ ಅಲಿಖತ್‌ಗಳನ್ನು ಸುಮಾರು ಇಪ್ಪತ್ತು ವರ್ಷಗಳಷ್ಟು ಹಿಂದೆ ತಯಾರಿಸಿಕೊಟ್ಟಿದ್ದು ತಾನೆಂಬುದು ಅವರಿಗಿನ್ನೂ ನೆನಪಿದೆ. ಮರದ ಮಿಲ್ಲಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅವಳ ಗಂಡ, ಮರದ ದಿಮ್ಮಿಗಳ ನಡುವೆಯೇ ಸಿಕ್ಕಿ ಹಾಕಿಕೊಂಡು ಸತ್ತು ಹೋದ ಸಂದರ್ಭದಲ್ಲಿ, ಇದೇ ಅಲಿಖತ್‌ಗಳನ್ನು ಗಿರವಿ ಇಟ್ಟು ಐವತ್ತು ರೂಪಾಯಿ ಸಾಲ ಪಡೆದುಕೊಂಡು ವಾಯಿದೆಗೆ ಮುನ್ನವೇ ಸಾಲ ತೀರಿಸಿ ಅಡವು ಬಿಡಿಸಿಕೊಂಡ ಆಕೆಯನ್ನು ಸುಲಭವಾಗಿ ಮರೆಯುವುದಾದರೂ ಹೇಗೆ?

ಮಹಾರಾಜರಾಗಿದ್ದಿರಲಿ ಅಥವಾ ಬಿಕಾರಿಯೇ ಆಗಿದ್ದಿರಲಿ ‘ಮುತ್ತುಪ್ಪಾಡಿ ಆಚಾರ್ರಕಟ್ಟೆ’ಯಲ್ಲಿ ಎಲ್ಲರಿಗೂ ಒಂದೇ ಮಣೆ. ಅಂಗಡಿಗೆ ಯಾರೇ ಬರಲಿ, ಯಾವ ಕೆಲಸವೇ ಇರಲಿ, ಜಗಲಿಯ ಬದಿಯಲ್ಲಿ ಗೋಡೆಗೊರಗಿಸಿ ಇಟ್ಟಿರುವ ಮರದ ಬೆಂಚಿನ ಮೇಲೆ ಕುಳಿತ ಬಳಿಕವೇ ಮಾತು. ಮುಸ್ಸಂಜೆಯ ಹೊತ್ತಲ್ಲಿ ದೀಪ ಉರಿಸಿದ ಬಳಿಕ ಅಂಗಡಿಗೆ ಬಂದ ಮೊದಲ ಗಿರಾಕಿ ರೊಟ್ಟಿ ಪಾತುಮ್ಮ. ‘ಕುಳಿತುಕೋ’ ಎಂದು ಬೆಂಚಿನತ್ತ ಬೆರಳು ತೋರಿಸಿದ ಆಚಾರ್ರು ಮಂಡದ ಮೇಲೆ ಆಸೀನರಾದರು. ಅವಳು ನಿಂತೇ ಇದ್ದಳು. ಆಚಾರ್ರು ತನ್ನ ಕೆಲಸದಲ್ಲಿ ಮುಳುಗಿಬಿಟ್ಟರು.

‘ಆಚಾರ್ರ ಕಟ್ಟೆ’ ಬರಿಯ ಮುತ್ತುಪ್ಪಾಡಿಯಲ್ಲಿ ಮಾತ್ರವಲ್ಲ; ಆಸುಪಾಸಿನ ಐವತ್ತು ಅರುವತ್ತು ಮೈಲು ಪಾಸಲೆಯಲ್ಲೂ ಫೇಮಸ್ಸು. ಬಂಗಾರದ ವ್ಯವಹಾರದಲ್ಲಿ ನಿಯತ್ತು ಅಂತ ಏನಾದರೂ ಉಂಟು ಅಂಥಾದರೆ ಅದಿರುವುದು ‘ಆಚಾರ್ರ ಕಟ್ಟೆ’ಯಲ್ಲಿ. ಲಾಭವಿಲ್ಲದೆ ಆಚಾರ್ರು ವ್ಯಾಪಾರ ಮಾಡುವುದಿಲ್ಲ ನಿಜ; ಮಜೂರಿ ಒಂದು ಎಂಟಾಣೆ ಜಾಸ್ತಿಯೇ ಹೇಳಿಯಾರು; ಆದರೆ ತೂಕದಲ್ಲಿ ಗುಲಗಂಜಿಯಷ್ಟೂ ಮೋಸವಿಲ್ಲ. ಚರ್ಚೆ, ಕಿರಿಕಿರಿ ಅವರಿಗಾಗುವುದಿಲ್ಲ. ಗಿರಾಕಿಗಳು ಅನಗತ್ಯ ಮಾತು ಆಡಿದರೆ ಸಾಕು, ‘ನಿಮಗೆ ನಮ್ಮ ಕಟ್ಟೆಯ ಮಾಲು ಆಗಲಿಕ್ಕಿಲ್ಲ. ಬೇರೆ ಕಟ್ಟೆ ನೋಡಿ’ ಎಂದು ಖಡಕ್ ಆಗಿಯೇ ಹೇಳಿಯಾರು. ಊರೊಳಗೆ ಮದುವೆ ಮಾತುಕತೆ ನಡುವೆ ಆಚಾರ್ರ ಕಟ್ಟೆ’ಯ ಪ್ರಸ್ತಾಪ ನುಸುಳಿ ಬರಲೇಬೇಕು. ಅಲ್ಲಿ ಒಡವೆ ಮಾಡಿಸುವ ಮಾತು ವಧುವಿನ ಅಪ್ಪನ ಬಾಯಿಯಿಂದ ಹೊರಬಿದ್ದರೆ ಸಾಕು; ಹುಡುಗಿಯ ಜಾತಕ ಕೂಡಿ ಬರುತ್ತದೆ.

ರೊಟ್ಟಿ ಪಾತುಮ್ಮ ಮೆತ್ತಗೆ ಕೆಮ್ಮಿದಳು. ಆಚಾರ್ರು ತಲೆಯೆತ್ತದೇ ಹೇಳಿದರು, “ಕುಳಿತುಕೋ.”

ಬೆಂಚಿನ ಅಂಚಿನಲ್ಲಿ ಅಳುಕುತ್ತಲೇ ಕುಂಡಿಯೂರಿದ ಅವಳು ತನ್ನ ಸೊಂಟದ ಚೀಲದಿಂದ ಹೊರತೆಗೆದ ನೋಟುಗಳ ಮಡಿಕೆಯನ್ನು, ಆಚಾರ್ರ ಎದುರಿದ್ದ ಗಾಜಿನ ಕಪಾಟಿನ ಮೇಲಿರಿಸಿ, ‘ಈ ದುಡ್ಡಿಗೆ ಏನಾದ್ರೂ ಒಂದು ಸಾಮಾನು ಕೊಡಿ’ ಎಂದಳು.

‘ಸಾಮಾನು!’ ಆಚಾರ್ರ ಹುಬ್ಬು ಮೇಲೇರಿತು. ಅವರ ನಲವತ್ತು ವರ್ಷಗಳ ಸರ್ವಿಸ್‌ನಲ್ಲಿ, ಕಟ್ಟೆಗೆ ಬಂದ ಯಾವಾತನೂ ಇಷ್ಟೊಂದು ಸದರವಾಗಿ ಮಾತನಾಡಿ ದೊಡ್ಡಸ್ತಿಕೆ ಪ್ರದರ್ಶಿಸಿದ್ದಿಲ್ಲ. ಆದರೆ ಈ ರೊಟ್ಟಿ ಮಾರುವ ಹೆಂಗಸು!

ಆಚಾರ್ರು ರೊಟ್ಟಿ ಪಾತುಮ್ಮಳನ್ನು ಅಳೆಯುವಂತೆ ದಿಟ್ಟಿಸಿದರು. ಕಪ್ಪು ಬುರ್ಕಾದೊಳಗಿನಿಂದ ಕಾಣಿಸುತ್ತಿದ್ದದ್ದು, ಕೆಂಡದ ನಡುವೆ ಸುಟ್ಟು ಕರಕಲಾಗಿದ್ದ ಕಪ್ಪು ಬೆರಳುಗಳು ಮತ್ತೆ ಅಷ್ಟೇ ಕಪ್ಪಾಗಿ ಕಾಣುವ ಕೋಲು ಮುಖ- ಎಲೆ- ಅಡಿಕೆ ಜಗಿದು ಕೆಂಪಾದ ಹಲ್ಲುಗಳು, ಯಾವುದೇ ಬಗೆಯ ಕಪಟ ಕಾಣದ ಕಣ್ಣುಗಳು. ಅಯ್ಯೋ ಪಾಪವೇ ಅನ್ನಿಸಿತು.

ಅವಳು ಎದುರು ಇರಿಸಿದ್ದ ನೋಟುಗಳನ್ನು ಎತ್ತಿಕೊಂಡು ಎಣಿಸಿದರು. ನಾಲ್ಕುನೂರ ಹತ್ತು ರೂಪಾಯಿಗಳಿದ್ದವು. ಎಡ ಭಾಗದ ಕಪಾಟಿನಿಂದ ಕಾಲಿಗೆ ತೊಡಬಹುದಾದ ಬೆಳ್ಳಿಯ “ಪೈಜಣಿಗೆ”ಯೊಂದನ್ನು ಹೊರತೆಗೆದು, ಅತ್ತಿತ್ತ ತಿರುಗಿಸಿ ಪರೀಕ್ಷಿಸಿದ ಬಳಿಕ ಅಸಮಾಧಾನಗೊಂಡವರಂತೆ ಮುಖ ಮುದುಡಿಸಿ, ಅದನ್ನು ಹಾಗೆಯೇ ಸ್ವಸ್ಥಾನ ಸೇರಿಸಿ, ‘ಮಕ್ಕಳಿಗೆ ಆಗುವ ಉಂಗುರವಾದರೆ ಬಂಗಾರದ್ದೇ ಸಿಕ್ಕೀತು’ ಎಂದವರೇ ಎಚ್ಚೆತ್ತುಕೊಂಡವರಂತೆ, ರೊಟ್ಟಿ ಪಾತುಮ್ಮಳತ್ತ ತಿರುಗಿ, ‘ಇದು ಯಾರಿಗೆ?’ ಎಂದು ಪ್ರಶ್ನಿಸಿದರು.

“ನನಗೇ” ಉತ್ತರ ಸಿದ್ಧವಿತ್ತು; “ನನಗೆ ಉಂಗುರ ಬೇಡ, ನನ್ನ ಕೈಯಲ್ಲಿ ಅದು ಕಪ್ಪಾಗುತ್ತದೆ. ಬೇರೆ ಏನಾದರೂ ಕೊಡಿ” ಎಂದಳು.
“ಒಂದು ಹತ್ತಿಪ್ಪತ್ತು ರೂಪಾಯಿ ಹೆಚ್ಚಾದರೂ ಆಗಬಹುದಲ್ಲವೇ”ಎಂದು ತನಗೆ ತಾನೇ ಪ್ರಶ್ನಿಸಿಕೊಂಡು ಅವಳ ಉತ್ತರಕ್ಕೆ ಕಾಯದೆ, ತನ್ನ ಬಲಭಾಗದಲ್ಲಿದ್ದ ತಿಜೋರಿಯ ಬಾಗಿಲು ತೆರೆದ ಆಚಾರ್ರು, ಎರಡೆಳೆಯ ಬೆಳ್ಳಿಯ ಸೊಂಟಪಟ್ಟಿಯೊಂದನ್ನು ಹೊರತೆಗೆದು ತೋರಿಸುತ್ತಾ. “ಇದು ಆಗಬಹುದಾ?” ಎಂದು ಪ್ರಶ್ನಿಸಿದರು.

ರೊಟ್ಟಿ ಪಾತುಮ್ಮಳ ಕಣ್ಣುಗಳು ಅರಳಿದವು. ಸೊಂಟ ಪಟ್ಟಿಯಾದರೆ ಅನುಕೂಲವೇ. ಸೊಂಟಕ್ಕೆ ಬಿಗಿದುಕೊಂಡು ಮೇಲ್ಗಡೆ ಸೀರೆಯಿಂದ ಕವರ್ ಮಾಡಿಕೊಂಡರೆ ಯಾರಿಗೂ ಗೊತ್ತಾಗುವುದಿಲ್ಲ. ಅಥವಾ ಕಂಡೀತು ಅಂತಲೇ ಇಟ್ಟುಕೊಳ್ಳುವ, ಕದ್ದದ್ದು ಅಲ್ವಲ್ಲಾ? ಈ ವರ್ಷ ಇದನ್ನೇ ಕೊಂಡು ಇಟ್ಟುಕೊಳ್ಳುವುದು; ಮುಂದಿನ ವರ್ಷ ಇನ್ನೇನಾದರೂ ಅಥವಾ ಆಗ ಇದನ್ನು ಇಲ್ಲಿಯೇ ವಾಪಾಸು ಕೊಟ್ಟು, ಒಟ್ಟೂ ಹಣದಿಂದ ಬಂಗಾರದ ಸರವನ್ನೇ ಕೊಂಡರಾಯಿತು, ಎಂದು ಲೆಕ್ಕಾಚಾರ ಮಾಡಿದ ಬಳಿಕ ಅನುಮಾನದಿಂದಲೇ ಪ್ರಶ್ನಿಸಿದಳು.

“ಒಂದು ವರ್ಷದ ನಂತರ ಇದನ್ನು ನಿಮಗೇ ಕೊಟ್ಟರೆ ನಾನು ಈಗ ಕೊಟ್ಟ ಹಣ ಎಲ್ಲ ವಾಪಾಸು ಸಿಗ್ತದಾ?”

‘ಅದು ಹೇಗೆ ಸಿಗುವುದು? ಇದು ಬೆಳ್ಳಿಯದಾಗಿರುವುದರಿಂದ ಪುನಃ ಮಾರಿದರೆ ಅರ್ಧಕರ್ಧ ಕಡಿಮೆ ಸಿಗುತ್ತದೆ.’ ಆಚಾರ್ರು ಸಹಜ ಸ್ವರದಲ್ಲೇ ಉತ್ತರಿಸಿದ್ದರು.

ಇದ್ದಕ್ಕಿದ್ದಂತೆ ತನ್ನ ರೂಪ ಬದಲಾಯಿಸಿಕೊಂಡ ಬೆಳ್ಳಿಯ ಸೊಂಟಪಟ್ಟಿ, ರೊಟ್ಟಿ ಪಾತುಮ್ಮಳನ್ನು ನುಂಗಲು ಸಿದ್ಧವಾಗಿ ನಿಂತ ಹೆಬ್ಬಾವಿನಂತೆ ಕಾಣಿಸಿತು.

“ಹಾಗಾದರೆ ಇದು ಬೇಡ. ವಾಪಾಸು ಮಾಡುವಾಗ ಹೆಚ್ಚು ನಷ್ಟವಾಗದಂತಹ ಬೇರೇನಾದರೂ ಸಾಮಾನು ಕೊಡಿ” ಎಂದಳು.

“ಯಾಕೆ? ಮುಂದಿನ ವರ್ಷ ಮಾರಲಿಕ್ಕಾ? ಆಚಾರ್ರ ಪ್ರಶ್ನೆಯಲ್ಲಿ ತೆಳ್ಳನೆಯ ವ್ಯಂಗ್ಯ ಬೆರೆತಿತ್ತು. ರೊಟ್ಟಿ ಪಾತುಮ್ಮಳ ಮುಖ ಬಾಡಿಹೋಯಿತು. ಆಚಾರ್ರಿಗೆ ನುಂಗಲೂ ಆಗದ ಉಗುಳಲೂ ಆಗದ ಸಂಕಟ. ದೀಪ ಉರಿಸಿದ ಬಳಿಕ ಬಂದಿರುವ ಮೊದಲ ಗಿರಾಕಿ . ರೂಪಾಯಿ ನೋಟುಗಳನ್ನು ಎಣಿಸಿ ಆಗಿದೆ; ಲಕ್ಷ್ಮಿಯನ್ನು ಮರಳಿಸಬಾರದು.

“ನೋಡು ಇವಳೇ. ಯಾವುದನ್ನು ನೀನು ಖರೀದಿಸಿದರೂ, ಅದನ್ನು ನಾಳೆಯ ದಿನವೇ ಮಾರುವುದಾದರೂ ನೀನು ಖರೀದಿಸಿದ ರೇಟು ಸಿಗುವುದಿಲ್ಲ. ಮಜೂರಿ, ತ್ಯಾಮಾನ ಅಂತ ನಷ್ಟ ಆಗಿಯೇ ತೀರುತ್ತದೆ. ಕೊಟ್ಟಿರುವ ದುಡ್ಡೆಲ್ಲ ವಾಪಾಸು ಬೇಕೂಂತ ಆದ್ರೆ ಈ ಹಣವನ್ನು ಒಂದು ಕರಡಿಗೆಯೊಳಗೆ ಹಾಕಿಟ್ಟು ಇಂತಹ ತಿಜೋರಿಯಲ್ಲಿಡಬೇಕಾದೀತು ಅಷ್ಟೇ...” ಎನ್ನುತ್ತಾ ತನ್ನ ಬಲಗಡೆಯಲ್ಲಿದ್ದ ತಿಜೋರಿಯತ್ತ ಬೊಟ್ಟು ಮಾಡಿ ನಕ್ಕರು ಆಚಾರ್ರು.

ರೊಟ್ಟಿ ಪಾತುಮ್ಮಳ ಕಣ್ಣುಗಳು ಒಮ್ಮೆಲೆ ಅರಳಿದವು. ತನ್ನ ಸಮಸ್ಯೆಗಳನ್ನೆಲ್ಲಾ ಪರಿಹರಿಸಬಲ್ಲ ತಿಜೋರಿಯತ್ತ ಆಸೆಯ ನೋಟ ಹರಿಸುತ್ತಾ ಹೇಳಿದಳು. “ನೀವು ಹಾಗೆಯೇ ಮಾಡಿರಿ. ಆ ಹಣವನ್ನು ಅದರೊಳಗೆ ಇಟ್ಟುಕೊಳ್ಳಿರಿ. ನನಗೇನೂ ಸಾಮಾನು ಈಗ ಬೇಡ. ಬೇಕಾದಾಗ ಬಂದು ಕೇಳುತ್ತೇನೆ. ಆಗ ಹಣವನ್ನೇ ವಾಪಾಸು ಕೊಟ್ಟರೆ ಸಾಕು” ಎಂದುಬಿಟ್ಟಳು.

“ಓಹೋ ಇದಾ ಸಂಗತಿ?!” ಆಚಾರ್ರು ನಿಟ್ಟುಸಿರು ಬಿಟ್ಟರು. ಎಲ್ಲವನ್ನೂ ಗ್ರಹಿಸಿಕೊಂಡವರಂತೆ ತಲೆಯಾಡಿಸಿದರು. ಊರೊಳಗಿನ ಯಾರಾದರೊಬ್ಬರು ಕೆಲವೊಮ್ಮೆ ಹೀಗೆ ದುಡ್ಡು ತಂದುಕೊಟ್ಟು ತಿಜೋರಿಯಲ್ಲಿ ಭದ್ರವಾಗಿಡಲು ಹೇಳುತ್ತಿರುವುದು ಹೊಸತೇನೂ ಅಲ್ಲ.

ಆದರೆ, ದೇವರಾಜ ಅರಸರು ಹಕ್ಕುಪತ್ರ ನೀಡಲಾಗಾಯ್ತು ಸಮದ್‌ನ ಅನುಮಾನಾಸ್ಪದ ನಡವಳಿಕೆಯವರೆಗಿನ ಎಲ್ಲ ಕತೆಯನ್ನು ರೊಟ್ಟಿಪಾತುಮ್ಮ ವಿವರಿಸಿದ ಬಳಿಕ ಆಚಾರ್ರು ಕೈಯ್ಯಾಡಿಸಿಬಿಟ್ಟರು.

“ಅದೆಲ್ಲ ಆಗಲಿಕ್ಕಿಲ್ಲ ಇವಳೇ. ಹಾಗೆಲ್ಲ ಬೇರೆಯವರ ಹಣವನ್ನು ವರ್ಷಗಟ್ಟಲೆ ಇಟ್ಟುಕೊಳ್ಳುವುದಕ್ಕೆ ಈಗೆಲ್ಲ ಅವಕಾಶವಿಲ್ಲ. ಅದಕ್ಕೆಲ್ಲ ಬೇರೆಯೇ ಲೈಸನ್ಸ್ ಬೇಕು ಅಂತ ಕಾನೂನು ಬಂದಿದೆ. ಈಗ ಇಂಥದಕ್ಕೆಲ್ಲ ಬ್ಯಾಂಕು ಉಂಟಲ್ಲ ಅಲ್ಲಿ ಹೋಗಿ ನಿನ್ನ ಹೆಸರಿನಲ್ಲಿ ಪಾಸುಪುಸ್ತಕ ತೆಗೆದುಕೊಳ್ಳು. ನಿನ್ನ ಹಣಕ್ಕವರು ಬಡ್ಡಿ ಕೂಡಾ ಕೊಡುತ್ತಾರೆ” ಎಂದರು.

ರೊಟ್ಟಿ ಪಾತುಮ್ಮ ಅದಷ್ಟರಲ್ಲೇ ತೀರ್ಮಾನ ತೆಗೆದುಕೊಂಡು ಆಗಿತ್ತು. ತನ್ನ ನಿರ್ಧಾರವನ್ನು ಆಚಾರ್ರಿಗೆ ಖಡಕ್ ಆಗಿಯೇ ಹೇಳಿಬಿಟ್ಟಳು. ತನಗೆ ತನ್ನ ಜಾತಿ ಬಾಂಧವರಿಗಿಂತಲೂ ಆಚಾರ್ರಕಟ್ಟೆಯ ತಿಜೋರಿಯ ಬಗ್ಗೆಯೇ ಹೆಚ್ಚು ವಿಶ್ವಾಸ ಎಂಬುದನ್ನು ಮತ್ತೆ ಮತ್ತೆ ಹೇಳುತ್ತಾ, ವಿಧವೆಯೂ ಆಗಿರುವ ತನಗೆ ತಂದೆಯ ಸ್ಥಾನದಲ್ಲಿ ನಿಂತು ಸಹಾಯ ಮಾಡಬೇಕಾಗಿರುವುದು ಆಚಾರ್ರ ಕರ್ತವ್ಯ ಎಂಬಿತ್ಯಾದಿ ಅರ್ಥ ಬರುವ ಎಲ್ಲ ಮಾತುಗಳನ್ನೂ ಚಟಪಟನೆ ಉದುರಿಸಿ, ಆಚಾರ್ರ ಬಾಯಿ ಕಟ್ಟಿ ಬಿಟ್ಟಳು.

“ಆಯಿತು ಇವಳೇ. ನನ್ನಿಂದಾಗಿ ನಿನಗೆ ಸಹಾಯವಾಗುವುದು ಅಂತ ಆದ್ರೆ ನಿನ್ನ ಈ ಹಣವನ್ನು ಇಟ್ಟುಕೊಳ್ಳುವುದಕ್ಕೆ ನನ್ನ ಅಡ್ಡಿ ಇಲ್ಲ.” ಎಂದು ನೋಟುಗಳನ್ನು ಮತ್ತೊಮ್ಮೆ ಎಣಿಸಿ ತಿಜೋರಿಯ ಒಳಗಿಟ್ಟು ತನ್ನ ಸ್ವಂತ ಖಾತೆ ಪುಸ್ತಕದಲ್ಲಿ ಬರೆದುಕೊಂಡರು.

ಹೀಗೆ ತನ್ನ ಚಿಂತೆಗಳ ಕಂತೆಯನ್ನು ‘ಆಚಾರ್ರ ಕಟ್ಟೆ’ಯ ತಿಜೋರಿಯೊಳಗೆ ಹುದುಗಿಸಿಟ್ಟು ಸಮಾಧಾನದಿಂದ ಮರಳಿದ ರೊಟ್ಟಿಪಾತುಮ್ಮ ಮುಂದಿನ ಸೋಮವಾರ ಸಂಜೆ ಹೊತ್ತಲ್ಲಿ ಪುನಃ ಹತ್ತು ರೂಪಾಯಿಯ ನೋಟೊಂದನ್ನು ತಂದು ‘ಇದನ್ನೂ ಅದರ ಜತೆಗಿಡಿ’ ಎಂದಾಗ ಆಚಾರ್ರ ಹುಬ್ಬು ಮೇಲೆ ಹೋದರೂ, ‘ಇದು ಒಳ್ಳೆಯ ಪಿಕಲಾಟ’ವೆಂಬುದನ್ನು ತನಗೆ ತಾನೇ ಹೇಳಿಕೊಂಡು ಸುಮ್ಮನಾದರು.

ಆನಂತರದ್ದು ಎಲ್ಲ ಮಾಮೂಲು. ಪ್ರತಿ ಸೋಮವಾರ ಸಂಜೆಯೂ ರೊಟ್ಟಿ ಪಾತುಮ್ಮ ಆಚಾರ್ರಕಟ್ಟೆಯ ಜಗಲಿಯೇರಿ ಬಂದು ಮೃದುವಾಗಿ ಕೆಮ್ಮುತ್ತಾಳೆ. ಆಚಾರ್ರು ಇದ್ದರೆ ಆಚಾರ್ರು, ಇಲ್ಲದೇ ಹೋದರೆ ಹಿರಿಮಗ ಕೇಶವ, ಅವನೂ ಬಿಜಿಯಾಗಿದ್ದರೆ ಕಿರಿಮಗ ಚಂದ್ರಣ್ಣ, ಎದ್ದು ಬಂದು ಅವಳು ನೀಡುವ ಹತ್ತೋ, ಹದಿನೈದೋ ರೂಪಾಯಿಗಳನ್ನು ತೆಗೆದುಕೊಂಡು, ಖಾಸಗಿ ಖಾತೆಪುಸ್ತಕದಲ್ಲಿ ದಾಖಲಿಸಿಡುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿತು.

ಕೆಲವೊಂದು ಸಾರಿ, ಅಂಗಡಿಯಲ್ಲಿ ಬೇರೆ ಯಾರೂ ಗಿರಾಕಿಗಳಿಲ್ಲದಿದ್ದರೆ ಆಚಾರ್ರು ಪ್ರಶ್ನಿಸುವುದುಂಟು, ‘ಹೌದಾ ಹೆಂಗಸೇ. ಕಳೆದ ಎರಡು ಎರಡೂವರೆ ವರ್ಷದ ಲಾಗಾಯ್ತು ಹಣ ತಂದು ಕೊಡ್ತಾ ಇದ್ದೀಯಲ್ಲಾ? ಒಮ್ಮೆಯಾದರೂ ಒಟ್ಟು ಹಣ ಎಷ್ಟಾಗಿದೆ ಅಂತ ಕೇಳಲೇ ಇಲ್ವಲ್ಲಾ? ಈವತ್ತು ಮಾತ್ರ ನಾನು ನಿನಗೆ ಪೂರ್ತಿ ಲೆಖ್ಖ ಒಪ್ಪಿಸುವವನೇ.ನಾಳೆ ಈ ಮುದುಕ ಗೋವಿಂದ ಆಗಿಬಿಟ್ರೆ ನಿನ್ನ ದುಡ್ಡು ಕೂಡಾ ಗೋವಿಂದಾ ಆಗಬಾರದಲ್ವಾ?’

ರೊಟ್ಟಿ ಪಾತುಮ್ಮಳ ನಾಲಗೆಯ ತುದಿಯಿಂದಲೇ ಉತ್ತರ ಜಿಗಿದು ಬಿಡುತ್ತಿತ್ತು, “ನಾನು, ನನ್ನದು ಅಂತ ಒಂದು ಮನೆ ಕಟ್ಟಿಸಿಕೊಳ್ಳುವ ತನಕ ನಿಮ್ಮ ಆಯುಷ್ಯದ ಸುದ್ದಿಗೆ ಯಾವ ದೇವರೂ ಬರುವುದಿಲ್ಲ. ಅದಕ್ಕೇ ಅಲ್ವಾ? ನಾನು ದುಡ್ಡನ್ನು ಇಲ್ಲಿಗೆ ತರುವ ಮೊದಲು ಕುರಾನು ಪುಸ್ತಕದ ಒಳಗೆ ಇರಿಸಿ ‘ದುವಾ’ ಮಾಡಿಯೇ ತರುವುದು?”

ಮುಂದೆ ‘ಆಚಾರ್ರ ಕಟ್ಟೆ’ ತನ್ನ ರೂಪವನ್ನು ಬದಲಾಯಿಸಿಕೊಂಡು ‘ಶ್ರೀನಿವಾಸ ಆಂಡ್ ಸನ್ಸ್’ ಆದ ಬಳಿಕವೂ ರೊಟ್ಟಿ ಪಾತುಮ್ಮಳ ಸೋಮವಾರದ ದಿನಚರಿ ಬದಲಾಗಲಿಲ್ಲ.

ಹಿರಿಮಗ ಕೇಶವಾಚಾರ್ಯ ತಂದೆಯಂತೆಯೇ ಕುಶಲ ಕೆಲಸಗಾರ. ಕರಿಮಣಿ ಬಳೆ ಡಿಸೈನ್‌ನಲ್ಲಿ ಈಗಾಗಲೇ ಹೆಸರು ಮಾಡಿದವನು. ಆದರೆ ಕಿರಿಯಾತ ಚಂದ್ರಣ್ಣನ ಬೆರಳುಗಳಿಗಿಂತಲೂ ನಾಲಿಗೆಯೇ ಹೆಚ್ಚು ಚುರುಕು. ಆದ್ದರಿಂದಲೇ ಪಿ.ಯು.ಸಿ. ಪರೀಕ್ಷೆ ಬರೆದು ಬಂದ ಸಂಜೆಯೇ ಅಂಗಡಿಯಲ್ಲಿ ಕುಳಿತುಕೊಳ್ಳಲಾರಂಭಿಸಿದವನು ತನ್ನ ನಾಲಗೆ ಮತ್ತು ನಗುವಿನಿಂದಾಗಿ ವರ್ಷದೊಳಗೆ ಊರವರಿಗೆಲ್ಲ ಚಂದ್ರಣ್ಣ ಆಗಿಬಿಟ್ಟಿದ್ದ.

ಮುಂದಿನ ಅಂಗಡಿ ಪೂಜೆಯ ಹೊತ್ತಿಗೆ ಅಂಗಡಿಯ ಶೇಪು ಬದಲಾಯಿಸಿದ ಚಂದ್ರಣ್ಣ, ಅಂಗಡಿಯ ನೆತ್ತಿಗೆ “ಶ್ರೀನಿವಾಸ ಆಂಡ್ ಸನ್ಸ್ ಜ್ಯುವೆಲ್ಲರ‍್ಸ್” ಎಂಬ ಬೋರ್ಡು ತೂಗಹಾಕಿದ್ದ. ಅಪ್ಪನ ಕಾಲದಲ್ಲಿ ಐವತ್ತು ಮೈಲು ಹೆಸರು ಮಾಡಿದ್ದ ‘ಆಚಾರ್ರಕಟ್ಟೆ’ ಇದೀಗ ಕೊಯಂಬತ್ತೂರು ತನಕ ಸುದ್ದಿ ಮಾಡತೊಡಗಿತ್ತು. ಪರಿಣಾಮವೆಂಬಂತೆ ಅಣ್ಣ ಕೇಶವನಿಗೆ ಕೊಯಂಬತ್ತೂರಿನ ಪ್ರಸಿದ್ಧ ಗೋಲ್ಡ್‌ಸ್ಮಿತ್ ಫ್ಯಾಮಿಲಿಯಿಂದಲೇ ಹೆಣ್ಣು ಬಂತು. ಒಟ್ಟಿನಲ್ಲಿ ಆಚಾರ್ರ ಕಟ್ಟೆಯಲ್ಲೀಗ ಶ್ರೀನಿವಾಸ ಆಚಾರ್ರಿಗೆ ಕೆಲಸವಿಲ್ಲ. ದಿನಕ್ಕೊಂದೆರಡು ತಾಸು ಶುಭ್ರ ಬಟ್ಟೆ ಧರಿಸಿ ಅಂಗಡಿಯ ಮಂಡದ ಮೇಲೆ ಕುಳಿತು ‘ಜ್ಯುವೆಲ್ಲರ್ ಶಾಪ್’ಗೆ ಶೋಭೆ ತಂದರೆ ಸಾಕು.

ಶ್ರೀನಿವಾಸಾಚಾರ್ರು ವಿಧವೆಯೊಬ್ಬಳಿಗೆ ಸಹಾಯ ಮಾಡುವ ದೃಷ್ಟಿಯಿಂದ ರೊಟ್ಟಿ ಪಾತುಮ್ಮಳ ಅನಧಿಕೃತ ಬ್ಯಾಂಕ್ ಆಗಲು ಸಮ್ಮತಿಸಿದ್ದರೆ, ನೂರಕ್ಕೆ ನೂರರಷ್ಟು ವ್ಯಾಪಾರಿ ಚಂದ್ರಣ್ಣ ‘ಬಡ್ಡಿಯಿಲ್ಲದೆ ಬರುವ ಪ್ರತಿಯೊಂದು ರೂಪಾಯಿಯೂ ಅತ್ಯಂತ ಬೆಲೆಯುಳ್ಳದ್ದು’ ಎಂಬ ವ್ಯವಹಾರೀ ಸೂತ್ರಕ್ಕೆ ಅಂಟಿಕೊಂಡು, ಅವಳನ್ನು ಓರ್ವ ಗೌರವಾನ್ವಿತ ಗಿರಾಕಿಯಂತೆಯೇ ಸ್ವಾಗತಿಸುತ್ತಿದ್ದ. ಅವಳು ಹಣ ನೀಡಲು ಬಂದಾಗಲೆಲ್ಲ, “ಏನು ಈವತ್ತು ತಡವಾಯಿತಲ್ಲ” ಎಂದೋ ಅಥವಾ “ನಿಮಗೆ ದುಡ್ಡು ಯಾವಾಗ ಬೇಕಾದರೂ ಹೇಳಿ ಬಿಡಿ. ಲೆಖ್ಖ ಮಾಡಿಕೊಟ್ಟು ಬಿಡ್ತೇನೆ. ಯಾವುದೇ ಚಿಂತೆ ಬೇಡ. ಒಂದು ದಿನ ಮೊದಲೇ ತಿಳಿಸಿದರೆ ಹೆಚ್ಚು ಅನುಕೂಲ” ಎಂದೇನಾದರೂ ಮಾತು ಆಡಿಯೇ ಬೀಳ್ಕೊಡುತ್ತಿದ್ದ. ಅಂತೆಯೇ ಆಕೆ ನೀಡುತ್ತಿರುವ ರೂಪಾಯಿಗಳನ್ನು ಲೆಖ್ಖ ಮಾಡಿ ಅವಳ ಹೆಸರಿನ ಮುಂದೆ ಖಾತೆ ಬರೆಯುತ್ತಿದ್ದ.

ರೊಟ್ಟಿ ಪಾತುಮ್ಮಳೂ ಅಷ್ಟೇ; ಪ್ರತಿ ಸೋಮವಾರ ಸಂಜೆ, ಹಿಂದಿನ ವಾರದ ಗಳಿಕೆಯಲ್ಲಿ ಉಳಿಸಲು ಸಾಧ್ಯವಾದ ರೂಪಾಯಿಗಳನ್ನು ತಂದು ಆಚಾರ್ರ ಕಟ್ಟೆಯಲ್ಲಿ ಕೊಟ್ಟು ನಿಶ್ಚಿಂತೆಯಿಂದ ಮರಳುತ್ತಿದ್ದಳಲ್ಲದೆ ಒಂದು ಸಲವಾದರೂ, ತನ್ನ ಉಳಿತಾಯದ ಮೊತ್ತ ಎಷ್ಟಾಗಿರಬಹುದೆಂದು ಕುತೂಹಲ ಕೂಡಾ ವ್ಯಕ್ತಪಡಿಸಿದವಳಲ್ಲ.

ಮೂರು

ಶ್ರೀರಾಮಚಂದ್ರನ ಮೇಲೆ ಆಣೆ ಹಾಕಿ ಹೇಳಬಹುದು; ಚಂದ್ರಣ್ಣ ಹಟ ಹಿಡಿದು ಕರಸೇವೆಗೆಂದು ಅಯೋಧ್ಯೆಗೆ ಹೋದವನಲ್ಲ. ರಾಮದಾಸ ಕಿಣಿಯವರು ಪ್ರಸ್ತಾಪಿಸಿದ್ದಾಗ, “ನನಗೆ ಅಂಥದಕ್ಕೆಲ್ಲ ಪುರುಸೊತ್ತು ಇಲ್ಲ ಮಾರಾಯ್ರೆ” ಎಂದು ನಯವಾಗಿಯೇ ನಿರಾಕರಿಸಿದ್ದನು. ಅಪ್ಪ ಶ್ರೀನಿವಾಸ ಆಚಾರ್ರಂತೂ ಖಂಡ ತುಂಡವಾಗಿಯೇ ಹೇಳಿಬಿಟ್ಟಿದ್ದರು, “ನೋಡು ಚಂದ್ರು. ಇದೆಲ್ಲ ನಮ್ಮಂಥ ವ್ಯಾಪಾರಸ್ಥರಿಗೆ ಹೇಳಿಸಿದ್ದಲ್ಲ. ನಮಗೆ ನಮ್ಮ ವ್ಯಾಪಾರದಲ್ಲಿ ಅವರು, ಇವರು ಅಂತ ವ್ಯತ್ಯಾಸ ಇರುವುದಿಲ್ಲ. ಇರಬಾರದು. ನಿಜ ಹೇಳಬೇಕೂಂತ ಆದ್ರೆ ನಮ್ಮ ಅಂಗಡಿಗೆ ನಾಲ್ಕು ಆಣೆ ಹೆಚ್ಚು ಫಾಯಿದೆ ಆಗುವುದು ಅವರ ಮನೆಯ ಹೆಂಗಸರಿಂದಲೇ. ನೀನು ಕೂಡಾ ಇಂಥದ್ದರಲ್ಲಿ ಇದ್ದಿ ಅಂತ ಅವರಿಗೆ ಗೊತ್ತಾಗಿ ಬಿಟ್ರೆ ನಷ್ಟ ಯಾರಿಗೆ ಹೇಳು?”

ಆದರೆ ದೈವೇಚ್ಛೆ ಬೇರೆಯೇ ಇದ್ದಿತ್ತು. ಮುತ್ತುಪ್ಪಾಡಿಯಿಂದ ಆಯ್ಕೆಯಾಗಿದ್ದ ಮೂರು ಮಂದಿಯ ತಂಡ ಹೊರಡಲು ಇನ್ನೇನು ನಾಲ್ಕು ದಿನ ಇದೆ ಎಂದಾದಾಗ, ತಂಡದ ಸದಸ್ಯರಲ್ಲೊಬ್ಬ ಕೈಕೊಟ್ಟುಬಿಟ್ಟ. ಬಿ.ಕಾಂ. ಸೆಕೆಂಡ್ ಕ್ಲಾಸ್ ಪಾಸಾಗಿಯೂ ಎರಡು- ಎರಡೂವರೆ ವರ್ಷದಿಂದ, ಭಗವತೀ ಕಲ್ಯಾಣ ಮಂಟಪದ ಮೆನೇಜರ್ ಅಂತ ಮುನ್ನೂರ ಐವತ್ತು ರೂಪಾಯಿಗಳಲ್ಲಿ ಮೆನೇಜ್ ಮಾಡಿಕೊಳ್ಳುತ್ತಿದ್ದ ಅನ್ ಅಂಪ್ಲಾಯಿಡ್ ಗ್ರಾಜುವೆಟ್ ಆರ್. ಸದಾಶಿವನಿಗೆ ಸಾಕ್ಷಾತ್ ಭಗವತಿಯೇ ಅನುಗ್ರಹಿಸಿದಂತೆ ಮಸ್ಕತ್‌ನಿಂದ ಹದಿನೆಂಟು ಸಾವಿರ ಸಂಬಳದ ಕರೆ ಬಂದಾಗ ನಿರಾಕರಿಸುವುದಾದರೂ ಹೇಗೆ? ಮಸ್ಕತ್‌ನ ‘ಅಲ್ ಮುಸ್ತಫಾ ಹೈಟೆಕ್ ನರ‍್ಸಿಂಗ್ ಹೋಂ’ನ ಜ್ಯೂನಿಯರ್ ಅಕೌಂಟೆಂಟ್ ಆಗಿ ನೇಮಕಗೊಂಡ ಬಗೆಗಿನ ಅಫಿಶಿಯಲ್ ಡಾಕ್ಯುಮೆಂಟಿನ ನೆರಳಚ್ಚು ಪ್ರತಿ ಹಾಗೂ ಒರಿಜಿನಲ್ ಸಾ ಸಹಿತ, ಕಾಸರಗೋಡಿನಿಂದ ಮುತ್ತುಪ್ಪಾಡಿವರೆಗೆ ಟ್ಯಾಕ್ಸಿ ಮಾಡಿಕೊಂಡೇ ಬಂದಿದ್ದ ‘ಮುಬಾರಕ್ ಟೂರ್ ಆಂಡ್ ಟ್ರಾವೆಲ್ಸ್’ನ ಕಾಸಿಂ ಬಾವಾ, ತಾನು ಸದಾಶಿವನಿಂದ ಪಡೆದಿದ್ದ ಮುಂಗಡ ನಲುವತ್ತೆರಡು ಸಾವಿರ ರೂಪಾಯಿಗಳಿಗೆ ನ್ಯಾಯವೊದಗಿಸಿದ್ದಲ್ಲದೆ, ಇನ್ನೂ ಆರು ದಿನಗಳ ಒಳಗೆ ಆರು ಸಾವಿರ ರೂಪಾಯಿಗಳ ಕಮೀಷನ್ ಹಣ ತೆತ್ತು, ಬೊಂಬಾಯಿ ತಲುಪಿ ‘ಮೆಡಿಕಲ್’ ಮುಗಿಸಿಕೊಂಡು ಮತ್ತೆರಡು ದಿನಗಳೊಳಗೇ ವಿಮಾನ ಏರಬೇಕು; ತಪ್ಪಿದಲ್ಲಿ ಕೊಟ್ಟಿರುವ ಮುಂಗಡಕ್ಕೆ ಕಾಸಿಂ ಜವಾಬ್ದಾರನಲ್ಲ ಎಂದು ಎಚ್ಚರಿಕೆ ನೀಡಿಯೇ ಹೋಗಿದ್ದ.

ರಾಮದಾಸ ಕಿಣಿಯವರ ತಲೆ ಹನ್ನೆರಡಾಣೆಯಾಗಿತ್ತು. ನುಂಗಲೂ ಅಲ್ಲ,ಉಗುಳಲೂ ಅಲ್ಲ. ಮೂರು ಮಂದಿಯ ಲಿಸ್ಟ್ ಕಳಿಸಿ ಆಗಿದೆ. ಯಾರ‍್ಯಾರು ಹೇಗ್ಹೇಗೆ ಅಂತ ಡಿಟ್ಟೇಲ್ಡ್ ರಿಪೋರ್ಟ್ ರವಾನಿಸಿ ಆಗಿದೆ. ಈಗ ಲಾಸ್ಟ್ ಮಿನಿಟ್‌ನಲ್ಲಿ ಮುತ್ತುಪ್ಪಾಡಿಯಿಂದ ಮೂರಿಲ್ಲ, ಬರೀ ಎರಡು ಅಂತ ಯಾವ ಮುಖದಲ್ಲಿ ಹೇಳುವುದು? ತನ್ನ ಆರ‍್ಗನೈಸಿಂಗ್ ಕೆಪೇಸಿಟಿಗೇ ಇದೊಂದು ಬ್ಲಾಕ್‌ಸ್ಪಾಟು. ಏನು ಮಾಡುವುದು?

ಚಂದ್ರಣ್ಣನಿಗೆ ಮತ್ತೊಮ್ಮೆ ಬುಲಾವು ಬಂತು. ಭಗವತೀ ಕಲ್ಯಾಣ ಮಂಟಪದ ಆಫಿಸು ಕೋಣೆಯಲ್ಲಿ-ಮೆನೇಜರನ ಅನುಪಸ್ಥಿತಿಯಲ್ಲಿ-ರಾತ್ರಿ ಒಂದೂವರೆ ತನಕವೂ ಚಂದ್ರಣ್ಣನಿಗೆ ತಿಳಿಯ ಹೇಳಲಾಯಿತು. ಇಂತಹ ಗಂಡಾಂತರದ ಸಂದರ್ಭಗಳಲ್ಲಿ ಊರಿನ ಘನತೆ- ಗೌರವಗಳನ್ನು ಕಾಪಾಡುವುದು ಚಂದ್ರಣ್ಣನಂತಹ ಬಿಸಿ ರಕ್ತದ ಹುಡುಗರ ಪರಮ ಕರ್ತವ್ಯ ಎಂಬುದನ್ನು ಮನದಟ್ಟು ಮಾಡಲಾಯಿತು. ಸ್ವತಃ ತನ್ನ ಆರನೇ ಮಗ ಪಿ.ಯು.ಸಿ. ಸೆಕೆಂಡ್ ಇಯರ್‌ನ ಕ್ರುಶಿಯಲ್ ಸ್ಟೇಜ್‌ನಲ್ಲಿ ಇದ್ದಿಲ್ಲವಾಗಿರುತ್ತಿದ್ದಲ್ಲಿ ತಾನು ಯಾರಿಗೂ ದಮ್ಮಯ್ಯ ಹಾಕುತ್ತಿರಲಿಲ್ಲ ಎಂಬುದನ್ನು ಪದೇ ಪದೇ ಒತ್ತಿ ಹೇಳಿದ ರಾಮದಾಸ ಕಿಣಿಯವರು, ಶ್ರೀನಿವಾಸ ಆಚಾರ್ರಲ್ಲಿ ಮಾತನಾಡಿ ಒಪ್ಪಿಗೆ ಪಡೆಯುವ ಹೊಣೆಯನ್ನು ದೇವಸ್ಥಾನದ ಅರ್ಚಕ ಸುಬ್ರಾಯ ತಂತ್ರಿಯವರಿಗೆ ಒಪ್ಪಿಸಿದ ಬಳಿಕ ಚಂದ್ರಣ್ಣನಿಗೆ ಹೇಳುವುದೇನೂ ಉಳಿದಿರಲಿಲ್ಲ.

ಚಂದ್ರಣ್ಣ ಹೊರಡುವ ದಿನ ಅಪ್ಪ ಏನನ್ನೂ ಹೇಳಲಿಲ್ಲ. ಸಂಜೆ ಹೊರಡುವ ಮುನ್ನ ಚಂದ್ರಣ್ಣನನ್ನು ಗುಟ್ಟಾಗಿ ಕರೆದು ಮಾತನಾಡಿಸಿದ್ದ ಅತ್ತಿಗೆ, ಒಂದು ಸಾವಿರ ರೂಪಾಯಿ ಎಣಿಸಿ ಕೊಟ್ಟು, ‘ಹೇಗೋ ನೀವೆಲ್ಲ ಮೊದಲು ಕಾಶಿಗೆ ಹೋಗುತ್ತೀರಂತೆ. ಅಲ್ಲಿ ಬೆನಾರಸ್ ಸಾರಿಗಳು ತುಂಬಾ ಚೀಪಲ್ಲಿ ಸಿಗುತ್ತದೆ, ಎರಡು ಅಥವಾ ಮೂರು ಸೀರೆ ತಂದು ಬಿಡು ಆಯ್ತಾ?’ ಎಂದು ಬೀಳ್ಕೊಟ್ಟರು.

ಮುತ್ತುಪ್ಪಾಡಿಯ ತಂಡ ಮಂಗಳೂರು ರೈಲು ನಿಲ್ದಾಣ ತಲುಪಿದಾಗ ಅಲ್ಲಿ ಶಿವಮೊಗ್ಗದಿಂದ ಬಂದಿದ್ದ ಏಳು ಜನರ ತಂಡ ಜತೆಯಾಯಿತು. ಇವರೆಲ್ಲರನ್ನೂ ರೈಲು ಹತ್ತಿಸಿದ ರಾಮದಾಸ ಕಿಣಿಯವರು ಧನ್ಯಭಾವದಿಂದ ಊರಿಗೆ ಮರಳಿ ತನ್ನ ಅಂಗಡಿಯೆದುರು ‘ಕ್ರಿಸ್‌ಮಸ್ ಇಳಿತದ ಮಾರಾಟ’ ಎಂಬ ಬೋರ್ಡ್ ಪ್ರದರ್ಶಿಸಿ, ಜವುಳಿ ವ್ಯಾಪಾರದಲ್ಲಿ ಮುಳುಗಿಬಿಟ್ಟರು.

ಬಳಸು ದಾರಿಯಿಂದ ರೈಲು ಬದಲಿಸುತ್ತಾ ಕಾಶಿ ತಲುಪುವಾಗ ಆರು ದಿನಗಳು ಸತ್ತವು. ಮುಂದಿನ ಆರು ದಿನ ಹೆಡ್‌ಕ್ವಾರ್ಟರ್‌ನ ಆದೇಶ ನಿರೀಕ್ಷಣೆಯಲ್ಲೇ ಕಳೆದು ಹೋಯಿತು. ಬಿರ್ಲಾ ಮಂದಿರದ ರಸ್ತೆಯಲ್ಲೇ ಇದ್ದ ಶಂಭುನಾಥ ಪಂಡಾರವರ ಎರಡಂತಸ್ತಿನ ಭವ್ಯ ‘ಕೋಠಿ’ಯಲ್ಲಿ, ಇವರಿಗಿಂತಲೂ ಮೊದಲು ಬಂದು ಸೇರಿದ್ದ ಪೂನಾದ ತಂಡದ ಸದಸ್ಯರ ಜತೆ ಅರ್ಧ ಹಿಂದಿ ಅರ್ಧ ಕನ್ನಡಲ್ಲಿ ಪೌರುಷದ ಮಾತು ಬದಲಿಸಿಕೊಳ್ಳುತ್ತಾ ಮೇಲಿನ ಆದೇಶಕ್ಕಾಗಿ ಕಾಯುವುದೇ ಕೆಲಸವಾಯಿತು.

ಅಲ್ಲಿಂದ ಫೈಜಾಬಾದಿಗೆ ಬಹಳ ದೂರವೇನೂ ಇಲ್ಲ. ಇವರ ಸಾಗಾಟಕ್ಕೆಂದು ‘ಕೋಠಿ’ಯ ಹಿಂದುಗಡೆ ಚಳಿಗೆ ಮುದುಡಿ ನಿಂತಿದ್ದ ಎರಡು ಮೆಟಡಾರ್ ವಾಹನಗಳಿಗೆ ಕೇವಲ ಮೂರು ತಾಸಿನ ಹಾದಿ. ಆದರೆ ಇವರಿಗೆ ಹೊಸ್ತಿಲು ದಾಟಿ ಅಂಗಳಕ್ಕಿಳಿಯಲೂ ಅನುಮತಿಯಿಲ್ಲ. ಟೀವಿ ನೋಡುತ್ತಾ ಪುಳಕಗೊಳ್ಳುವುದಷ್ಟೇ ಇವರ ದಿನಚರಿ. ಡಿಸೆಂಬರ್ ತಿಂಗಳ ಚಳಿ ಬೇರೆ.

ಕೊನೆಗೊಮ್ಮೆ ಆದೇಶ ಬಂತು. ‘ಎಲ್ಲರಿಗೂ ಅಭಿನಂದನೆಗಳು. ನಿಮ್ಮ ಕೆಲಸ ಪೂರೈಸಿದೆ. ನೀವು ನಾಳೆಯೇ ದೆಹಲಿಗೆ ಹೊರಡುವುದು.’

ಚಂದ್ರಣ್ಣನಿಗೆ ಕೋಪದಿಂದ ಅಳುವೇ ಬಂದುಬಿಟ್ಟಿತ್ತು. ರಾಮದಾಸ ಕಿಣಿಯವರು ಎದುರಿಗೇನಾದರೂ ಇದ್ದಿದ್ದರೆ ದೊಡ್ಡ ರಾದ್ದಾಂತವೇ ಆಗಿಬಿಡುತ್ತಿತ್ತು. ವೆಂಕು ಪಣಂಬೂರಿಗೆ ಹೋಗಿ ಬಂದ ಕತೆಯಂತಾಯಿತಲ್ಲಾ ಎಂದು ಪರಿತಪಿಸಿದ ಚಂದ್ರಣ್ಣನಿಗೆ, ಅತ್ತಿಗೆಗಾಗಿ ಒಂದು ಸೀರೆ ಕೊಳ್ಳಲೂ ಅವಕಾಶವಾಗಲಿಲ್ಲ.

ದೆಹಲಿಗೆ ತಲುಪಿದ ಬಳಿಕ ತಿಲಕ್‌ನಗರದಲ್ಲಿ ಶ್ರೀ ರಾಜಿಂದರ್‌ಸಿಂಗ್ ಹೆಸರಲ್ಲಿದ್ದ ಡಿ.ಡಿ.ಎ. ಫ್ಲಾಟ್‌ನಲ್ಲಿ ಎರಡು ದಿನ-ರಾತ್ರಿ ಚಳಿಗೆ ನಡುಗುವ ಶಿಕ್ಷೆ. ನಾಳೆ ಬೆಳಗ್ಗೆ ಮಂಗಳೂರಿಗೆ ಹೊರಡುವುದು ಎಂದು ನಿಶ್ಚಯವಾದಾಗ ರಾತ್ರಿಯ ಹೊತ್ತಲ್ಲಿ ಒಂದು ಸಂಗತಿ ನಡೆಯಿತು.

ಚಂದ್ರಣ್ಣನ ಅಸಹನೆಯನ್ನು ಕಳೆದ ಎರಡೂ ದಿನಗಳಿಂದ ಗಮನಿಸಿದ್ದ, ಪೂನಾದ ತಂಡದ ಸದಸ್ಯರಲ್ಲೊಬ್ಬ, ರಾತ್ರಿಯ ಊಟದ ಬಳಿಕ ಚಂದ್ರಣ್ಣನನ್ನು ಮನೆಯ ಟೇರೇಸಿಗೆ ಕರೆದುಕೊಂಡು ಹೋದ. ದೇಹವೆಲ್ಲ ಮರಗಟ್ಟುವಂತಹ ಚಳಿಯಲ್ಲಿ ಹೊಸಬನ ಬೆನ್ನು ಹಿಡಿದು ಮೇಲೇರಿದ ಚಂದ್ರಣ್ಣನಿಗೆ ನೂರೆಂಟು ಪ್ರಶ್ನೆಗಳು.

ಟೇರೇಸಿನಲ್ಲಿ ನಸುಗತ್ತಲು. ತನ್ನ ಬಗಲಚೀಲದಿಂದ ಸುಮಾರು ಅರ್ಧ ಕಿಲೋದಷ್ಟು ತೂಗಬಲ್ಲ ಮಣ್ಣಿನ ಹೆಂಟೆಯೊಂದನ್ನು ಹೊರತೆಗೆದು ಚಂದ್ರಣ್ಣನ ಕೈಗಿತ್ತು, “ನೀವು ಬೇಸರಪಡಬಾರದು. ಯಾರ‍್ಯಾರಿಂದ ಯಾವ್ಯಾವ ಕೆಲಸಗಳನ್ನು ನಿರೀಕ್ಷಿಸಲಾಗಿತ್ತೋ ಅವರೆಲ್ಲರೂ ಅವರವರ ಕೆಲಸಗಳನ್ನು ಸಂಪೂರ್ಣವಾಗಿ ನೆರವೇರಿಸಿದ್ದಾರೆ. ನಿಮ್ಮಿಂದ ನಿರೀಕ್ಷಿಸಲಾಗಿದ್ದ ಕೆಲಸವನ್ನು ನೀವು ಕೂಡಾ ಯಶಸ್ವಿಯಾಗಿ ಪೂರೈಸಿದ್ದೀರಿ. ಈ ಕಲ್ಲಿನ ತುಂಡು ನಿಮಗೆ. ಇದು ನಮ್ಮ ವಿಜಯದ ಸಂಕೇತವೆಂದು ತಿಳಿಯಿರಿ” ಎಂದು ಹೇಳಿ ಭುಜತಟ್ಟಿದ; ಚಂದ್ರಣ್ಣನಿಗೆ ರೋಮಾಂಚನವಾಯಿತು. ಮೆಟ್ಟಲಿಳಿಯುವಾಗ ಪೂನಾದ ಗೆಳೆಯ ಪಿಸುದನಿಯಲ್ಲಿ ಎಚ್ಚರಿಸಿದ್ದ, “ಕೆಲವು ದಿವಸಗಳ ಕಾಲ ಇದು ಗುಟ್ಟಾಗಿರಲಿ; ಯಾರಿಗೂ ಹೇಳುವುದು ಬೇಡ.”

ರೈಲಿನ ಎರಡನೆ ದಿನದ ಪ್ರಯಾಣದವರೆಗೂ ಗಂಟಲೊಳಗೇ ಅವಿತಿಟ್ಟುಕೊಂಡಿದ್ದ ಗುಟ್ಟನ್ನು ಚಂದ್ರಣ್ಣ ಉಳಿದಿಬ್ಬರಿಗೆ ತಿಳಿಸಿಬಿಟ್ಟ. ತಾನು ಅದನ್ನು ‘ಸೂಟ್‌ಕೇಸ್’ನಲ್ಲಿ ಭದ್ರವಾಗಿರಿಸಿರುವುದಾಗಿಯೂ, ಊರಿಗೆ ತಲುಪಿದ ಬಳಿಕ ಮೂರು ತುಂಡು ಮಾಡಿ ಉಳಿದಿಬ್ಬರಿಗೂ ಖಂಡಿತಾ ಹಂಚುವುದಾಗಿಯೂ ಭಾಷೆಯಿತ್ತ.

ಮಂಗಳೂರು ರೈಲು ನಿಲ್ದಾಣಕ್ಕೆ ತಲುಪುವಾಗ ರಾಮದಾಸ ಕಿಣಿಯವರ ಕಾರು ತಯಾರಾಗಿ ನಿಂತಿತ್ತು. ಅಂದೇ ರಾತ್ರಿ ಭಗವತೀ ಕಲ್ಯಾಣ ಮಂಟಪದಲ್ಲಿ ಆರಿಸಿದ ಗಣ್ಯನಾಗರಿಕರ ಉಪಸ್ಥಿತಿಯಲ್ಲಿ ಮೂವರನ್ನು ಹಾರ ಹಾಕಿ ಸನ್ಮಾನಿಸಲಾಯಿತು.

ಅಪ್ಪ ಹೆಚ್ಚು ವಿಚಾರಣೆ ಮಾಡಲಿಲ್ಲ. ಆದರೆ ಅತ್ತಿಗೆ ಮಾತ್ರ ಅಸಹನೆಯಿಂದ ಹಂಗಿಸಿದ್ದಳು. “ಆಯಿತಪ್ಪ, ನಿಮಗೆಲ್ಲ ಅಲ್ಲಿಗೆ ಹೋಗಲು ಬಿಡಲಿಲ್ಲ ಸರಿ. ಆದರೆ ಕಾಶಿಯಲ್ಲಿ ಒಂದು ವಾರ ನೀವೇನು ಭಜನೆ ಮಾಡಿದ್ದಾ? ಒಂದು ಸೀರೆ ಕೊಳ್ಳುವಷ್ಟು ಪುರುಸೊತ್ತು ಸಿಗಲಿಲ್ವ ನಿನಗೆ?”

ಚಂದ್ರಣ್ಣ ಪೆಚ್ಚು ಪೆಚ್ಚಾಗಿ ನಕ್ಕ.

ನಾಲ್ಕು

ಮಾತು ಕೊಟ್ಟಿದ್ದಂತೆ ಚಂದ್ರಣ್ಣ ವಾರವೊಂದರ ಬಳಿಕ, ತನ್ನ ಸೂಟ್‌ಕೇಸ್‌ನೊಳಗೆ ಬಚ್ಚಿಟ್ಟಿದ್ದ ಗೋಡೆಯ ತುಂಡನ್ನು ನಾಲ್ಕು ತುಂಡುಗಳನ್ನಾಗಿ ಮಾಡಿ, ತನ್ನ ಜತೆ ಬಂದಿದ್ದ ಇಬ್ಬರಿಗೂ ಒಂದೊಂದು ತುಂಡು ಕೊಟ್ಟ. ಒಂದು ತುಂಡನ್ನು ರಾಮದಾಸ ಕಿಣಿಯವರಿಗೆ ಕೊಟ್ಟು ಅದು ಸಿಕ್ಕ ಬಗೆಯನ್ನೂ ವಿವರಿಸಿದ.

ರಾಮದಾಸ ಕಿಣಿಯವರು ಅನುಮಾನಿಸುತ್ತಾ, “ಇದು ಸ್ವಲ್ಪ ಡೇಂಜರ್ರೇ. ಸ್ವಲ್ಪ ದಿನ ಈ ತುಂಡಿನ ಬಗ್ಗೆ ಯಾರಿಗೂ ಹೇಳಬೇಡ. ನನಗೆ ಕೊಟ್ಟಿದ್ದನ್ನೂ ಹೇಳಬೇಡ. ಪೇಪರ್‌ಗಳಲ್ಲಿ ಏನೇನೆಲ್ಲ ನ್ಯೂಸ್ ಬರ‍್ತಾ ಉಂಟು. ಈ ತುಂಡನ್ನು ಮೆಟೀರಿಯಲ್ ಎವಿಡೆನ್ಸ್ ಅಂತ ಟ್ರೀಟ್ ಮಾಡಿದರೆ ನಾವು ಹೋದ ಹಾಗೆಯೇ. ಏನಂತಿ?” ಎಂದು ಪ್ರಶ್ನಿಸಿದಾಗ ಚಂದ್ರಣ್ಣ ಅವರತ್ತ ಅಸಹ್ಯದ ನೋಟ ಚೆಲ್ಲಿ, ‘ಇಷ್ಟೆಲ್ಲ ಹೆದರಿಕೆ ಪಡುವವರು ನಮ್ಮನ್ನು ಕಳಿಸಿದ್ದು ಯಾಕೆ?’ ಎಂದು ನೇರವಾಗಿಯೇ ಪ್ರಶ್ನಿಸಿಬಿಟ್ಟ. ಮುಖ ಮುದುಡಿಸಿಕೊಂಡ ಕಿಣಿಯವರು, “ಹಾಗಲ್ಲ ಚಂದ್ರು? ತಲೆ ಗಟ್ಟಿ ಉಂಟು ಅಂತ ಬಂಡೆಕಲ್ಲಿಗೆ ಹೊಡೆದುಕೊಳ್ಳುವುದಾ?” ಎಂದು ಗಾದೆ ಉದುರಿಸಿ ಮಾತು ತೇಲಿಸಿಬಿಟ್ಟರು.

“ನನಗೇನೂ ಹೆದರಿಕೆ ಇಲ್ಲ. ನಾನು ಯಾಕೆ ಹೆದರಬೇಕು? ನಾನು ಅಲ್ಲಿ ತನಕ ಹೋಗಲೇ ಇಲ್ವಲ್ಲಾ?” ಚಂದ್ರಣ್ಣ ಪ್ರಶ್ನಿಸಿದಾಗ ಕಿಣಿಯವರು ಹೌಹಾರಿದ್ದರು, “ಓಹ್ ಮಾರಾಯಾ? ಹಾಗೆಲ್ಲ ನೀವು ಅಲ್ಲಿತನಕ ತಲುಪಲೇ ಇಲ್ಲ ಅಂತ ಹೇಳಬೇಡ ಮಾರಾಯ; ನಮ್ಮ ಊರಿನಿಂದಲೂ ಹೋಗಿ ಬಂದಿದ್ದಾರೆ ಅಂತ ಇಂಪ್ರೆಷನ್ ಕ್ರಿಯೇಟ್ ಮಾಡಿ ಆಗಿದೆ. ಈಗ ಇಲ್ಲ, ಇಲ್ಲ, ನಮ್ಮ ಹುಡುಗರಿಗೂ ಅದಕ್ಕೂ ಯಾವ ಕನೆಕ್ಷನೂ ಇಲ್ಲ ಅಂತ ಹೇಳಿ ಬಿಟ್ರೆ ನಮ್ಮ ಪ್ರೆಸ್ಟೀಜ್ ಏನಾದೀತು? ಒಂದು ವೇಳೆ ಅಂಥಾ ಸಂದರ್ಭ ಬಂದು; ಆ ರೀತಿ ಸ್ಟೇಟ್‌ಮೆಂಟ್ ಕೊಡದೆ ಬೇರೆ ದಾರಿಯೇ ಇಲ್ಲ ಅಂತ ಆಗಿಬಿಟ್ರೆ, ಆಗ ಬೇಕಾದ್ರೆ ನಿಜ ಹೇಳಿದ್ರೆ ಆಯ್ತಪ್ಪ. ಏನಂತಿ?ಎಂದು ಪ್ರಶ್ನಿಸಿದಾಗ ಚಂದ್ರಣ್ಣ ಪೆಚ್ಚು ನಗುಚೆಲ್ಲಿ, “ನನಗೊಂದೂ ಗೊತ್ತಾಗುವುದಿಲ್ಲ” ಎಂದು ಹೇಳಿ ಮರಳಿದ್ದ.

ತನ್ನ ಹಾಗೆಯೇ ತಂಡದಲ್ಲಿದ್ದ ಇನ್ನಿಬ್ಬರು ಕೂಡಾ, ಗೋಡೆಯ ತುಂಡನ್ನು ಸಂಭ್ರಮದಿಂದಲೇ ಪಡೆದುಕೊಂಡದ್ದು ಹೌದಾದರೂ, ‘ಹೇಳುವುದಾ-ಹೇಳದಿರುವುದಾ? ತೋರಿಸುವುದಾ? ಅಡಗಿಸಿಡುವುದಾ?’ ಎಂಬುದನ್ನು ನಿರ್ಧರಿಸಲಾಗದೆ ಒದ್ದಾಡುತ್ತಿರುವುದು ಚಂದ್ರಣ್ಣನ ಗಮನಕ್ಕೆ ಬಂದಿತ್ತು. “ಯಾರಿಗೂ ಹೇಳದೆ, ಯಾರಿಗೂ ತೋರಿಸದೆ ಕಳ್ಳ ಬಸಿರಿನಂತೆ ಅಡಗಿಸಿಡುವುದರಲ್ಲಿ ಯಾವ ಮಜವೂ ಇಲ್ಲ ಚಂದ್ರು.” ಎಂದು ಒಬ್ಬಾತ ಪರಿತಪಿಸಿದ್ದರೆ, ಮತ್ತೊಬ್ಬನಂತೂ ಬೇಸರದಿಂದ, ‘ಅಷ್ಟೆಲ್ಲ ದೂರ ಹೋಗಿ, ಆ ಚಳಿಗೆ ಸಂಕಟಪಟ್ಟದ್ದು ಯಾವ ಕರ್ಮಕ್ಕೆ ಅಂತ ನನಗಿನ್ನೂ ಅರ್ಥವಾಗಲಿಲ್ಲ. ಕೆಲವರ ಹತ್ರ ಹೋಗಿದ್ದೇನೆ ಅಂತಲೂ, ಇನ್ನೂ ಕೆಲವರ ಹತ್ರ ಇಲ್ಲ ಮಾರಾಯ್ರೆ, ಅರ್ಧದಲ್ಲೇ ಬಂದೆವು ಅಂತ ಹೇಳುವುದರಲ್ಲೇ ಮಂಡೆ ಬೆಚ್ಚ ಆಗುತ್ತದೆ’ ಎಂದು ಸಿಡುಕಿದ್ದ.

ಚಂದ್ರಣ್ಣನನ್ನು ಮೆಚ್ಚಿ ಅಭಿನಂದಿಸಲು ಬರುವವರ ಜತೆ ಕೆಲವೊಮ್ಮೆ ಚಂದ್ರಣ್ಣನೇ ಹೇಳುವುದುಂಟು. ‘ಇಲ್ಲ ಮಾರಾಯ್ರೇ, ನೀವು ನಂಬಿದಷ್ಟು ಧೈರ್ಯ ನನಗುಂಟಾ? ಏನೋ ಒಂದು ಆಗಿ ಹೋಯ್ತು. ಆ ಬಗ್ಗೆ ನಾವಿನ್ನು ಹೆಚ್ಚು ಮಾತನಾಡದಿರುವುದೇ ಕ್ಷೇಮ’ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದಾಗ ಕೇಳುವವರಿಗೆಲ್ಲ ಚಂದ್ರಣ್ಣನ ಸೌಜನ್ಯದ ಬಗ್ಗೆ ಅಭಿಮಾನ ಉಕ್ಕುತ್ತಿತ್ತು. “ನಮ್ಮ ಹತ್ತಿರ ನಿನ್ನ ನಾಟಕ ಬೇಡ ಚಂದ್ರಣ್ಣ. ನೀನು ಅಲ್ಲಿ ಹೋಗಿ ಏನು ಮಾಡಿದ್ದಿ, ಅಲ್ಲಿಂದ ಏನು ತಂದಿದ್ದಿ, ಎಲ್ಲ ಜಾತಕ ನಮಗೆ ತಲುಪಿದೆ; ಹ್ಹ...ಹ್ಹಾ...” ಎಂದು ನಕ್ಕಾಗ ಚಂದ್ರಣ್ಣನೂ ಅವರೆಲ್ಲರ ಅಭಿನಂದನೆಗಳನ್ನು ಸ್ವೀಕರಿಸುವವನಂತೆ ವಿನಯ ನಟಿಸುತ್ತಿದ್ದ.

ದಿನಗಳುರುಳಿದಂತೆ ಚಂದ್ರಣ್ಣನ ಉತ್ಸಾಹವೂ ಇಳಿಯತೊಡಗಿತ್ತು. ವ್ಯವಹಾರದ ಗಡಿಬಿಡಿಯ ನಡುವೆ ಪೇಪರುಗಳ ಮೇಲೆ ಕಣ್ಣಾಡಿಸಿದಾಗ, ಪ್ರಧಾನ ಮಂತ್ರಿಗಳ- ವಿರೋಧ ಪಕ್ಷ ನಾಯಕರುಗಳ ಹೇಳಿಕೆಗಳನ್ನು ಓದುವಾಗ, ಒಂದಿಷ್ಟು ಉದ್ವೇಗ ಮೂಡುತ್ತಿದ್ದರೂ, ಮರುಕ್ಷಣದಲ್ಲೇ ಮರೆತು ಹೋಗುತ್ತಿತ್ತು. ಈ ನಡುವೆ ರೊಟ್ಟಿಪಾತುಮ್ಮ ತನ್ನ ಅಭ್ಯಾಸ ಬಲದಿಂದೆಂಬಂತೆ ಪ್ರತಿಯೊಂದು ಸೋಮವಾರ ಸಂಜೆ ಹದಿನಾಲ್ಕೋ, ಇಪ್ಪತ್ತಾರೋ ರೂಪಾಯಿಗಳನ್ನು ತಂದುಕೊಟ್ಟು ನಿಶ್ಚಿಂತೆಯಿಂದ ಮರಳುತ್ತಿರುವುದನ್ನು ಗಮನಿಸುವಾಗ ‘ಈ ಮುದುಕಿಗೆ ತಾನು ಕರಸೇವೆಗೆ ಹೋಗಿ ಬಂದದ್ದು ಇನ್ನೂ ಗೊತ್ತಿರಲಿಕ್ಕಿಲ್ಲವೇ?’ ಎಂಬ ಅನುಮಾನ ಹುಟ್ಟುತ್ತಿತ್ತು. “ಪಾಪದ ಹೆಂಗಸು; ದುಡ್ಡು ಮರಳಿ ಕೊಡುವ ಸಂದರ್ಭದಲ್ಲಿ ಒಂದು ನೂರೋ, ಇನ್ನೂರೋ ಜಾಸ್ತಿ ಕೊಡಬೇಕು”, ಎಂದು ಯೋಚಿಸಿ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದ.

ಒಂದು ಸೋಮವಾರ ಸಂಜೆ ಚಂದ್ರಣ್ಣ ಅಂಗಡಿಗೆ ಬಂದಿದ್ದ ಹಿರಿಯರೊಬ್ಬರಿಗೆ ತನ್ನ ಯಾತ್ರೆಯ ಕತೆ ವಿವರಿಸುತ್ತಾ ಡ್ರಾವರಿನೊಳಗೆ ಕಾಗದದಲ್ಲಿ ಸುತ್ತಿ ಇರಿಸಿದ್ದ ಗೋಡೆಯ ತುಂಡನ್ನು ಹೊರತೆಗೆದು, ಇನ್ನೇನು ಪ್ರದರ್ಶಿಸಬೇಕು ಎಂದು ಯೋಚಿಸುತ್ತಿರುವಷ್ಟರಲ್ಲಿ, ಮೆಟ್ಟಲೇರಿ ಬಂದ ರೊಟ್ಟಿಪಾತುಮ್ಮಳನ್ನು ಗಮನಿಸಿ ಹಾವು ತುಳಿದವನಂತೆ ಬೆಚ್ಚಿ ಬಿದ್ದಿದ್ದ! ಆಕೆಯ ಆಗಮನ ಸೋಮವಾರದಂದು ಅನಿರೀಕ್ಷಿತವೇನೂ ಅಲ್ಲ. ಆದರೆ ಆಕೆಯ ಮುಖದಲ್ಲಿ ಎಂದಿನ ನಗು ಕಾಣಿಸದಾದಾಗ ಚಂದ್ರಣ್ಣ ಗಲಿಬಿಲಿಗೊಂಡಿದ್ದ.

ಸಾಮಾನ್ಯವಾಗಿ ಆಕೆ ಅಂಗಡಿಯ ಮೆಟ್ಟಲ ಬಳಿಗೆ ತಲುಪಿದವಳೇ ಮೃದುವಾದ ಸ್ವರವೆಬ್ಬಿಸಿ ಕೆಮ್ಮಿ ಗಮನ ಸೆಳೆಯುವವಳು. ಆದರೆ ಇಂದು ಮಾತ್ರ ಅಂಗಡಿಯ ಮಂಡದ ಬಳಿಗೇ ತಲುಪಿದ್ದಾಳೆ; ಅಂದ ಮೇಲೆ ತಾನು ಆಡಿದ್ದ ಮಾತೆಲ್ಲ ಅವಳಿಗೂ ಕೇಳಿಸಿದ್ದಿರಬಹುದು. ತನ್ನ ಬಳಿ ‘ಗೋಡೆಯ ತುಂಡು’ ಇರುವುದೂ ಅವಳಿಗೆ ಗೊತ್ತಾಗಿದ್ದಿರಬಹುದು. ಅನುಮಾನದಿಂದಲೇ ಅವಳ ಕಣ್ಣುಗಳನ್ನೆದುರಿಸಿದ.

“ಈ ವಾರ ದುಡ್ಡು ಉಳಿಸಲಾಗಲಿಲ್ಲ. ರೊಟ್ಟಿ ಮಾಡುವ ಮಣೆ ತುಂಡಾಗಿ ಹೋಗಿದೆ. ಅದನ್ನು ರಿಪೇರಿ ಮಾಡಿಸಬೇಕು. ಹಾಗಾಗಿ ನೀವು ನನ್ನನ್ನು ಕಾಯುವುದು ಬೇಡ ಅಂತ ಹೇಳಿ ಹೋಗಲು ಬಂದೆ. ಮುಂದಿನ ಸೋಮವಾರ ಬರುತ್ತೇನೆ” ಎಂದು ಸೋತ ಸ್ವರದಲ್ಲಿ ಹೇಳಿದ ರೊಟ್ಟಿ ಪಾತುಮ್ಮ ಹೊರಟು ಹೋದಾಗ ಚಂದ್ರಣ್ಣ ಅವಕ್ಕಾಗಿದ್ದ. ತನ್ನ ಅನುಮಾನದ ಬಗ್ಗೆ ತಾನೇ ನಾಚಿಕೊಂಡ.
ತನ್ನ ಸಾಹಸದ ಕತೆಯ ಅಂತಿಮ ಹಂತವನ್ನು ಕಣ್ಣಾರೆ ಕಾಣಲು ಕಾತರಿಸಿ ಕುಳಿತಿದ್ದ ಹಿರಿಯರತ್ತ ತಿರುಗಿದ ಚಂದ್ರಣ್ಣ, ಡ್ರಾವರ್ ಹುಡುಕಿದಂತೆ ನಟಿಸಿ, “ಓಹ್! ನಾನು ಮರೆತೇ ಬಿಟ್ಟಿದ್ದೆ. ಈಗ ಆ ತುಂಡು ಮನೆಯಲ್ಲಿದೆ. ಕಳೆದ ವಾರ ಒಬ್ಬರಿಗೆ ತೋರಿಸಲೆಂದು ಕೊಂಡು ಹೋದದ್ದನ್ನು ವಾಪಾಸು ತಂದೇ ಇಲ್ಲ. ನಿಮಗೆ ಇನ್ನೊಮ್ಮೆ ತೋರಿಸುತ್ತೇನೆ” ಎಂದು ಹೇಳಿದವನು ಬಂದವರನ್ನು ಸಾಗ ಹಾಕಿದ.

ಅವರು ಹೊರಟು ಹೋಗುವುದನ್ನೇ ಕಾಯುತ್ತಿದ್ದವನಂತೆ, ಪಕ್ಕದಲ್ಲಿ ಕೂತಿದ್ದ ಕೇಶವಾಚಾರ್ಯ ‘ಪಕಪಕ’ನೆ ಸ್ವರವೆಬ್ಬಿಸಿ ನಕ್ಕ. ಅಣ್ಣನ ನಗುವಿನ ಕಾರಣ ಚಂದ್ರಣ್ಣನಿಗೂ ಅರ್ಥವಾಗಿ ಅವನಿಗೂ ನಗು ಉಕ್ಕಿತು. ಗೋಡೆಯ ತುಂಡನ್ನು ಮನೆಯಲ್ಲಿ ಇಟ್ಟುಕೊಳ್ಳಲಾಗದಂತಹ ಒಂದು ಘಟನೆ ನಡೆದದ್ದು ಅವರಿಬ್ಬರ ನಗುವಿಗೆ ಕಾರಣವಾಗಿತ್ತು.

ರಾಮದಾಸ ಕಿಣಿಯವರಿಗೆ ಗೋಡೆಯ ತುಂಡೊಂದನ್ನು ಉಡುಗೊರೆಯಾಗಿ ಕೊಟ್ಟ ದಿನ-ಅಂದು ಭಾನುವಾರದ ರಜ-ಮಧ್ಯಾಹ್ನ ಚಂದ್ರಣ್ಣ ತನ್ನ ಪಾಲಿನ ಗೋಡೆಯ ತುಂಡನ್ನು ಎಲ್ಲಿಡುವುದೆಂಬುದನ್ನು ನಿಖರವಾಗಿ ನಿರ್ಧರಿಸಲಾಗದೆ ದೇವರ ಕೋಣೆಯಲ್ಲಿದ್ದ ಊದುಗಡ್ಡಿ ಸ್ಟೂಲ್‌ನ ಮೇಲೆ ಇಟ್ಟುಬಿಟ್ಟಿದ್ದೇ ಅನಾಹುತಕ್ಕೆ ಹೇತುವಾಗಿತ್ತು.

ಸಂಜೆಯ ಹೊತ್ತಿಗೆ ದೇವರ ಕೋಣೆಗೆ ಹೋಗಿದ್ದ ಅತ್ತೆ- ತಂದೆಯ ಅಕ್ಕ- ದೇವರಿಗೆ ಊದುಗಡ್ಡಿ ಹಚ್ಚುವಾಗ ಸ್ಟೂಲಿನ ಮೇಲಿದ್ದ ಕಲ್ಲನ್ನು ಕಂಡು ಕುತೂಹಲದಿಂದ ಅದನ್ನೆತ್ತಿ ಕೊಂಡೇ ಹೊರಗೆ ಬಂದವರು, ಬಾಗಿಲ ಬಳಿಯೇ ಎದುರಾದ ಕೇಶವಾಚಾರ್ಯನಿಗೆ ಅದನ್ನು ತೋರಿಸುತ್ತಾ “ಇದೆಂಥದ್ದೋ ಕಲ್ಲು? ಅಥವಾ ಇದು ಲೋಬಾನದ ಗಟ್ಟಿಯೋ?” ಎಂದು ಪ್ರಶ್ನಿಸಿದ್ದರು.

“ಇದು ನಮ್ಮ ಚಂದ್ರಣ್ಣನಿಗೆ ಡೆಲ್ಲಿಯಲ್ಲಿ ಸಿಕ್ಕ ಮೆಡಲು” ಎಂದು ನಕ್ಕ ಕೇಶವಾಚಾರ್ಯ ಹೊರಗೆ ಚಾವಡಿಯಲ್ಲಿ ಟೇಪ್‌ರೆಕಾರ್ಡ್ ಆಲಿಸುತ್ತಿದ್ದ ಚಂದ್ರಣ್ಣನನ್ನು ಕೂಗಿ ಕರೆದು, “ನೋಡು ಚಂದ್ರು, ನಿನ್ನ ಅತ್ತೆಗೆ ನಿನ್ನ ಕಲ್ಲಿನ ಮಹಾತ್ಮೆ ವಿವರಿಸಬೇಕಂತೆ” ಎಂದ.

ಆದಷ್ಟೂ ಹೊತ್ತು ಕಲ್ಲಿನ ತುಂಡನ್ನು ಅತ್ತಿತ್ತ ತಿರುಗಿಸಿ ಪರೀಕ್ಷಿಸುತ್ತಿದ್ದ ಅತ್ತೆ, ಚಂದ್ರಣ್ಣ ಹತ್ತಿರ ಬಂದ ಕೂಡಲೇ, “ಎಂಥಾ ಕಲ್ಲು ಇದು?” “ದೇವರ ಕೋಣೆಯಲ್ಲಿ ಯಾಕೆ ಇಟ್ಟದ್ದು?” ಎಂದು ಪ್ರಶ್ನಿಸಿದ್ದರು.

ಒಂದು ಕ್ಷಣ ಗಲಿಬಿಲಿಗೊಂಡರೂ, ಕೂಡಲೇ ಸಾವರಿಸಿಕೊಂಡು, ಅದೇನೂ ಅಂತಹಾ ವಿಶೇಷ ಸಂಗತಿಯಲ್ಲ ಎನ್ನುವ ಸ್ವರದಲ್ಲಿ, “ಓ...ಅದಾ? ಅದು ನಾನವತ್ತು ಹೋಗಿ ಬಂದೆ ನೋಡು. ಅಲ್ಲಿಂದ ತಂದದ್ದು. ಗೋಡೆ ಒಡೆದದ್ದರ ನೆನಪಿಗೆ ಇರಲಿ ಅಂತ” ಎಂದು ಉತ್ತರಿಸಿದ.

ಅತ್ತೆಯವರ ಮುಖ ಹೇಲು ತುಳಿದವರಂತೆ ಕಿವಿಚಿಕೊಂಡಿತು. “ಅಯ್ಯೋ ರಾಮ, ರಾಮಾ..,ಅವರ ಮಸೀದಿಯ ಕಲ್ಲಿನ ತುಂಡನ್ನು ದೇವರ ಕೋಣೆಯಲ್ಲಿ ಯಾರಾದರೂ ಇಡುತ್ತಾರಾ? ನಿನಗೆ ತಲೆ ಸರಿ ಉಂಟಾ ಇಲ್ವಾ?” ಎಂದು ಕೀರಲು ಧ್ವನಿಯಲ್ಲಿ ಆಕ್ಷೇಪಿಸುತ್ತಾ ಗೋಡೆಯ ತುಂಡನ್ನು ಚಂದ್ರಣ್ಣನ ಕೈಗೆ ಹಾಕಿ “ಈ ಅನಿಷ್ಟದ ಕಲ್ಲನ್ನು ಎಲ್ಲಾದ್ರೂ ದೂರ ಬಾವಿಗೆ ಬಿಸಾಡಿ ಸ್ನಾನ ಮಾಡ್ಕೊಂಡು ಒಳಗೆ ಬಾ” ಎಂದು ಆದೇಶವಿತ್ತರು.

ಚಂದ್ರಣ್ಣನ ಮುಖ ಇಂಗು ತಿಂದ ಮಂಗನ ಹಾಗಾಯಿತು. ಸಾಹಸಯಾತ್ರೆಯ ಉತ್ಸಾಹವೆಲ್ಲವು ನೀರಾಗಿ ಬಿಟ್ಟಿತ್ತು. ಆದರೂ ಅತ್ತೆಯವರನ್ನು ಸಮಾಧಾನ ಪಡಿಸುವ ಆಸೆಯಿಂದ, ‘ಹಾಗಲ್ಲ ಅತ್ತೆ, ಇದು ನಿಜವಾಗಿಯೂ ನಮ್ಮ ಹಳೆಯ ದೇವಸ್ಥಾನದ ತುಂಡು’ ಎಂದುಬಿಟ್ಟ.

ಅತ್ತೆ ಮುಖ ಇದ್ದಕ್ಕಿದ್ದಂತೆ ಬಿಳುಚಿಕೊಂಡಿತು. ಆಕಾಶವೇ ಮೈಮೇಲೆ ಬಿದ್ದವರಂತೆ ಹಣೆಗೆ ಬಡಿದುಕೊಳ್ಳುತ್ತಾ, “ಅಯ್ಯಯ್ಯೋ! ಈ ಚಂದ್ರು ಎಂಥದ್ದು ಹೇಳ್ತಾ ಇರುವುದು?! ಹಾಗಾದರೆ ಅಷ್ಟೆಲ್ಲ ಸಂಭ್ರಮದಿಂದ ನೀವೆಲ್ಲ ಹೊರಟು ಹೋಗಿ ಕೊನೆಗೆ ಒಡೆದು ಹಾಕಿದ್ದು ನಮ್ಮದೇ ದೇವಸ್ಥಾನವನ್ನು ?” ಅತ್ತೆಯವರು ಎದುರಿಟ್ಟ ಹೊಸಬಗೆಯ ಪ್ರಶ್ನೆಯಿಂದ ಗಾಬರಿಗೊಂಡ ಚಂದ್ರಣ್ಣ, ಸಹಾಯಕ್ಕಾಗಿ ಅಣ್ಣನತ್ತ ಕಣ್ಣು ಹಾಯಿಸಿದರೆ, ಕೇಶವಾಚಾರ್ಯ ಬಾಯಿಗಡ್ಡ ಕೈ ಹಿಡಿದುಕೊಂಡು ನಗುತ್ತಿದ್ದ.

ಐದು

‘ಅಹ್ಮದ್ ಬಾವಾ ಬೆಹರಿನ್‌ನಿಂದ ಬಂದಿದ್ದಾನಂತೆ, ಗೊತ್ತುಂಟಾ?’ ಬಳೆಯೊಂದಕ್ಕೆ ಅರದಿಂದ ತಿಕ್ಕಿ ಪಾಲೀಶು ಮಾಡುತ್ತಿದ್ದ ಕೇಶವಚಾರ್ಯ ತನ್ನ ತಮ್ಮನ ಪ್ರಶ್ನೆಯಿಂದ ಅಚ್ಚರಿಗೊಂಡು, ‘ಹೌದಾ! ಯಾವಾಗ ಬಂದದ್ದಂತೆ?’ ಎಂದು ಮರುಪ್ರಶ್ನೆ ಹಾಕಿದ.
‘ನನಗವನು ಮಾತಾಡಲು ಸಿಗಲಿಲ್ಲ. ಕಳೆದ ವಾರ ಬಸ್‌ಸ್ಟಾಂಡ್ ಹತ್ರ ರಿಕ್ಷಾ ಹತ್ತುವುದನ್ನು ನೋಡಿದೆ’ ಎಂದ ಚಂದ್ರಣ್ಣ.

‘ಹೌದಾ! ಒಂದು ವಾರದ ಹಿಂದೆಯಾ!’ ಎಂದು ಉದ್ಗರಿಸಿದ ಕೇಶವಾಚಾರ್ಯ ಬಳಿಕ ಅನುಮಾನಿಸುವವನಂತೆ, ‘ಹಾಗಾದರೆ ಅಂಗಡಿಗೆ ಯಾಕೆ ಬರಲಿಲ್ಲ?’ ಎಂದು ಪ್ರಶ್ನಿಸಿದ.

‘ನಾನೂ ಅದನ್ನೇ ಕೇಳಬೇಕೆಂದಿದ್ದೆ. ಈ ಹಿಂದೆಯೆಲ್ಲ ವರ್ಷ ವರ್ಷ ಊರಿಗೆ ಬರುತ್ತಿದ್ದವನು, ಬಂದಾಗಲೆಲ್ಲ ಮರುದಿನವೇ ಅಂಗಡಿಗೆ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದನಲ್ಲಾ? ಈ ಸಲ ಯಾಕೆ ತಪ್ಪಿಸಿದಾ?’ ಎಂದ ಚಂದ್ರಣ್ಣ, ಬೇರೇನೋ ಮಾತು ಜೋಡಿಸಬೇಕೆಂದು ಬಾಯಿ ತೆರೆದವನು ಸುಮ್ಮನಾದ.

‘ಏನೋ ಅರ್ಜೆಂಟ್ ಕೆಲಸವಿದ್ದಿರಬಹುದು. ಅದಕ್ಕೇ ಬರಲಾಗಿದ್ದಿರಲಿಕ್ಕಿಲ್ಲ. ಕೇಶವಾಚಾರ್ಯ ತನಗೆ ತಾನೇ ಸಮಾಧಾನ ಮಾಡಿಕೊಳ್ಳುವವನಂತೆ ಹೇಳಿದ.’

ಚಂದ್ರಣ್ಣ ಮೌನ ಮುರಿಯಲಿಲ್ಲ.

ಕೇಶವಾಚಾರ್ಯನೇ ಮಾತು ಮುಂದುವರಿಸಿದ, ‘ಪುನಃ ಬೆಹರೀನ್‌ಗೆ ಹೋಗುವ ಮೊದಲು ಬರಲಿಕ್ಕೆ ಸಾಕು.’

‘ನನಗೇನೋ ಅವನು ಬಂದು ನಿನ್ನನ್ನು ಕಾಣುತ್ತಾನೆಂಬ ನಂಬಿಕೆಯಿಲ್ಲ. ಬರುವವನಾಗಿರುತ್ತಿದ್ದರೆ ಇದಕ್ಕೆ ಮೊದಲೇ ಬರುತ್ತಿದ್ದ.’ ಚಂದ್ರಣ್ಣ ಎಲ್ಲ ತಿಳಿದವನಂತೆ ಗಂಭಿರವಾಗಿ ಹೇಳಿದ್ದ.

‘ಯಾಕೆ ಹಾಗಂತೀಯಾ? ಕಳೆದ ಸುಮಾರು ಮೂವತ್ತು ವರ್ಷಗಳಿಂದ ನನಗವನು ಗೊತ್ತುಂಟು. ಒಟ್ಟಿಗೆ ಆಡಿ ಬೆಳೆದವರು ನಾವು. ನಾನು ಕಟ್ಟಿಕೊಂಡಿರುವ ಈ ವಾಚು ಕೂಡಾ ಅವನೇ ತಂದುಕೊಟ್ಟಿದ್ದು. ನಾನೇನು ಅವನಿಗೆ ದುಡ್ಡು ಕೊಟ್ಟಿದ್ದೇನಾ? ಏನೋ ಕೆಲಸ ಇದ್ದಿರಬಹುದು. ಹಾಗಾಗಿ ಬರಲಿಕ್ಕೆ ಪುರುಸೊತ್ತು ಸಿಕ್ಕಿದ್ದಿರಲಿಕ್ಕಿಲ್ಲ.’ ಕೇಶವಾಚಾರ್ಯ ಚಂದ್ರಣ್ಣನ ಮುಖದತ್ತ ಕಣ್ಣುನೆಟ್ಟು ಹೇಳಿದ.
‘ನನಗೇಕೋ ಅನುಮಾನವೇ’ ಚಂದ್ರಣ್ಣ ಚುಟುಕಾಗಿ ಹೇಳಿದ.

‘ಅನುಮಾನ ಏಕೆ?! ನೀನೊಬ್ಬ ಕರಸೇವೆಗೆ ಹೋಗಿಬಂದ ಅಂತ ಅವ್ನು ನನ್ನ ಸ್ನೇಹ ಬಿಟ್ಟುಬಿಡ್ತಾನಾ? ಅವನು ಅಂಥವನಲ್ಲ. ನಿನUಗ ಪ್ರತಿಯೊಂದರಲ್ಲೂ ಅನುಮಾನ ಸುರುವಾಗಿದೆ. ಅಂಗಡಿಗೆ ಅವರ ಪೈಕಿ ಯಾರಾದರೂ ಬಂದರೆ ಅಗತ್ಯಕ್ಕಿಂತ ಹೆಚ್ಚೇ ಉಪಚಾರ ಮಾಡ್ತೀಯ. ಮಜೂರಿ ಹೇಳುವಾಗ ಒಂದೆರಡು ರೂಪಾಯಿ ಕಡಿಮೆಯೇ ಹೇಳ್ತೀಯ. ಯಾಕೆ? ಏನಾಗಿದೆ ನಿನ್ಗೆ?! ಏನೋ ಮಹಾ ಅಪರಾಧ ಮಾಡಿದವರ ಹಾಗೆ ಒದ್ದಾಡ್ತಿದ್ದೀಯಲ್ಲಾ? ಇಷ್ಟೆಲ್ಲ ಯೋಚನೆ ಮಾಡುವವನು ಅವತ್ತು ಹೋದದ್ದು ಯಾಕೆ? ಈಗ ಹೋಗಿ ಬಂದು ಆಗಿದೆ. ಈಗ ಆ ಬಗ್ಗೆ ಮಂಡೆ ಬಿಸಿ ಮಾಡುವುದು ಯಾಕೆ? ಒಂದು ವೇಳೆ ನೀನು ಹೇಳಿದ್ದೇ ನಿಜವಾಗಿ, ಅವನು ನಮ್ಮ ಅಂಗಡಿ ಕಡೆಗೆ ತಲೆ ಹಾಕಲಿಲ್ಲ ಅಂತಲೇ ಇಟ್ಕೋ; ಏನಾಯ್ತು ಅದರಿಂದ? ಏನು ನಷ್ಟವಾಗ್ತದೆ? ಇಷ್ಟೆಲ್ಲ ಅನುಮಾನಿಸುವ ನೀನು ಈ ಕಲ್ಲಿನ ತುಂಡನ್ನು ಇಟ್ಟುಕೊಂಡು ಬಂದ ಬಂದವರಲ್ಲೆಲ್ಲ ಜಂಭ ಕೊಚ್ಚುವುದು ಯಾಕೆ? ಅತ್ತೆಯವರು ಹೇಳಿದ ಹಾಗೆ ಅದನ್ನು ಎತ್ತಿಕೊಂಡು ಹೋಗಿ ಯಾವುದಾದರೂ ಒಂದು ಬಾವಿಗೆ ಬಿಸಾಡಿ ಬರಬಾರದಾ?’ ಕೇಶವಾಚಾರ್ಯ ಪ್ರಶ್ನೆಗಳ ಗೊಂಚಲನ್ನೇ ಚಂದ್ರಣ್ಣನತ್ತ ಎಸೆದಿದ್ದ.

ಚಂದ್ರಣ್ಣ ಉತ್ತರಿಸಲೂ ಪ್ರಯತ್ನಿಸಲಿಲ್ಲ.

ಸ್ವಲಹೊತ್ತು ಇಬ್ಬರೂ ಮೌನವಾಗಿ ತಮ್ಮ ಕೆಲಸ ಮುಂದುವರಿಸಿದರು.

‘ಈವತ್ತು ಮಧ್ಯಾಹ್ನ ನೀನು ಊಟಕ್ಕೆ ಹೋಗಿದ್ದಾಗ ರೊಟ್ಟಿ ಪಾತುಮ್ಮ ಬಂದಿದ್ದಳು.’ ಚಂದ್ರಣ್ಣ ಹೊಸ ವಿಷಯ ಪ್ರಸ್ತಾಪಿಸಿದ್ದ!’
‘ಈವತ್ತು ಬಂದಿದ್ಳಾ?!’ ಈವತ್ತು ಸೋಮವಾರ ಅಲ್ವಲ್ಲಾ? ಎಷ್ಟು ಕೊಟ್ಟಳು ಈವತ್ತು?’ ಕೇಶವಾಚಾರ್ಯ ಕುತೂಹಲ ವ್ಯಕ್ತಪಡಿಸಿದ.
‘ಹಣ ಕೊಡಲು ಬಂದದ್ದಲ್ಲ ಅವಳು; ಹಣ ವಾಪಾಸು ಕೇಳಲು ಬಂದದ್ದು. ನಾಳದು ಶುಕ್ರವಾರದ ಮೊದಲು ಹಣ ಬೇಕಂತೆ. ಶುಕ್ರವಾರ ಮನೆ ಕೆಲಸ ಆರಂಭಿಸ್ತಾಳಂತೆ.’ ಚಂದ್ರಣ್ಣ ಉತ್ತರಿಸಿದ.

‘ಹೌದಾ!’ ಎಂದು ಉದ್ಗರಿಸಿದ ಕೇಶವಾಚಾರ್ಯ, ‘ಒಳ್ಳೆಯದೇ ಆಯ್ತು ಬಿಡು. ನಮಗೂ ಒಂದು ರಗಳೆ ತಪ್ಪಿದ ಹಾಗಾಯಿತು.’ ಎಂದು ಹೇಳಿದ.

‘ಅವಳು ನಿಜವಾಗಿಯೂ ಶುಕ್ರವಾರದಂದು ಮನೆ ಕೆಲಸ ಸುರು ಮಾಡ್ತಾಳಾ?’ ಚಂದ್ರಣ್ಣ ಅನುಮಾನಿಸುತ್ತಲೇ ಪ್ರಶ್ನಿಸಿದ್ದ.

‘ಸುರುವಾಯಿತಲ್ಲ ನಿನ್ನದು?’ ಕೇಶವಾಚಾರ್ಯ ಅಸಹನೆಯಿಂದ ಪ್ರಶ್ನಿಸಿ, ‘ಅವಳು ಮನೆ ಕಟ್ತಾಳೋ ಬಾವಿಗೆ ಬಿಸಾಡ್ತಾಳೋ; ಅದರಿಂದ ನಿನಗೇನು ನಷ್ಟ? ಅವಳ ಹಣ ಅವಳಿಗೆ ಬೇಕಾಗಿದೆ. ಇಷ್ಟು ದಿವಸ ನಮ್ಮ ಮೇಲೆ ನಂಬಿಕೆ ಇಟ್ಟು ಕೊಟ್ಟಿದ್ದಾಳೆ. ಈಗ ವಾಪಾಸು ಬೇಕು ಅಂತ ಕೇಳ್ತಿದ್ದಾಳೆ. ಲೆಖ್ಖ ಮಾಡಿ ಕೊಟ್ಟರಾಯಿತು. ಎಷ್ಟಾಯಿತು ಅಂತ ಟೋಟಲ್ ನೋಡಿದ್ಯಾ?’ ಎಂದು ಚಂದ್ರಣ್ಣನ ಮುಖ ದಿಟ್ಟಿಸಿದ್ದ.

‘ಹೌದು. ನಾಲ್ಕು ಸಾವಿರದ ಇನ್ನೂರ ಎಂಭತ್ತೆರಡು ರೂಪಾಯಿ ಆಗಿದೆ. ನಾಳೆ ಸಂಜೆಗೆ ಬರಲಿಕ್ಕೆ ಹೇಳಿದ್ದೇನೆ. ನಾಳೆ ಬೆಳಗ್ಗೆ ಬ್ಯಾಂಕ್‌ನಿಂದ ಕ್ಯಾಷ್ ತರಬೇಕಾದೀತು’ ಚಂದ್ರಣ್ಣ ಉತ್ತರಿಸಿದ.

‘ಸರಿ, ಹಾಗೇ ಮಾಡು. ಹಣ ಕೊಡುವಾಗ ಒಂದು ಇನ್ನೂರು ರೂಪಾಯಿ ನಮ್ಮ ಪಾಲಿನದ್ದು ಅಂತ ಸೇರಿಸಿ ಕೊಡು. ಆಗಲಿಕ್ಕಿಲ್ವಾ?’ ಕೇಶವಾಚಾರ್ಯ ಪ್ರಶ್ನಿಸಿದಾಗ ಚಂದ್ರಣ್ಣ, ‘ನಾನೂ ಹಾಗೇ ಯೋಚನೆ ಮಾಡಿದ್ದೇನೆ. ಬಡ್ಡಿ ಹಣ ಅಂತ ಲೆಖ್ಖ ಮಾಡಿದ್ರೂ ಐನೂರು ಆರುನೂರು ರೂಪಾಯಿ ಆಗಬಹುದು’ಎಂದು ಹೇಳಿದ.

ಕೇಶವಾಚಾರ್ಯ ತನ್ನ ಕೆಲಸದಲ್ಲಿ ಮುಳುಗಿದ.

ಸ್ವಲ್ಪ ಹೊತ್ತು ಬಿಟ್ಟು ಚಂದ್ರಣ್ಣ ಪುನಃ ಪ್ರಶ್ನಿಸಿದ, ‘ನಾಳೆ ಅವಳು ದುಡ್ಡುಕೊಂಡು ಹೋಗಲು ಬಂದಾಗ, ಅವಳಿಗೆ ನಾನು ಕರಸೇವೆಗೆ ಹೋಗಿ ಬಂದದ್ದು ಗೊತ್ತುಂಟಾ ಅಂತ ವಿಚಾರಿಸಿದರೆ ಹೇಗೆ?’

‘ಅವಳು, ಹೌದು ಗೊತ್ತುಂಟು, ಎಂದರೆ ಏನು ಮಾಡ್ತಿ?’ ಚಾಟಿಯಿಂದ ಹೊಡೆದಂತೆ ಕೇಶವಾಚಾರ್ಯ ಪ್ರಶ್ನಿಸಿದ್ದ.

ರೊಟ್ಟಿ ಪಾತುಮ್ಮ ಹಣ ಮರಳಿ ಬಯಸಿದ್ದ ಸಂಗತಿಯನ್ನು ರಾತ್ರಿ ಊಟದ ನಡುವೆ ಚಂದ್ರಣ್ಣ ತಂದೆಗೆ ತಿಳಿಸಿದಾಗ ಅವರು, ‘ಅಯ್ಯೋ ಪಾಪ. ಇಷ್ಟು ವರ್ಷ ನಮ್ಮ ಅಂಗಡಿ ಮೇಲೆ ನಂಬಿಕೆ ಇಟ್ಟು ಹಣ ಉಳಿಸಿದಳಲ್ಲ! ಒಂದು ದಿನವಾದರೂ ಒಟ್ಟು ಹಣ ಎಷ್ಟಾಗಿದೆಯೆಂಬುದನ್ನೂ ವಿಚಾರಿಸಲಿಲ್ಲ’ ಎಂದು ರೊಟ್ಟಿ ಪಾತುಮ್ಮಳನ್ನು ಮೆಚ್ಚಿಕೊಂಡು, ಬಳಿಕ ಏನನ್ನೋ ನಿರ್ಧರಿಸಿದವರಂತೆ, ‘ಚಂದ್ರು, ಒಂದು ಕೆಲಸ ಮಾಡು. ನಾಳೆ ಅವಳ ಲೆಕ್ಖಾಚಾರ ಸೆಟಲ್ ಮಾಡಿದ ಬಳಿಕ ನಮ್ಮ ಲೆಖ್ಖದ್ದು ಅಂತ ಒಂದು ಐನೂರು ರೂಪಾಯಿ ಬೇರೆಯೇ ಕೊಟ್ಟುಬಿಡು. ಅಂದ ಹಾಗೆ ಬಡ್ಡಿ ಹಣ, ಹಾಗೆ-ಹೀಗೆ ಅಂತ ಹೇಳಲು ಹೋಗಬೇಡ. ಆ ಜಾತಿ ಮಂದಿ ಬಡ್ಡಿ ಹಣ ತೆಗೆದುಕೊಳ್ಳಬಾರದಂತೆ. ಮನೆ ಕಟ್ಟಿಸುವವಳಿಗೆ ನಮ್ಮದೂ ಒಂದು ಸಹಾಯ ಅಂತ ಇರಲಿ’ ಎಂದರು.

‘ತಾನೂ ಹಾಗೆಯೇ ಮಾಡಲು ನಿರ್ಧರಿಸಿದ್ದೆ’ ಎಂಬ ಮಾತು ತುಟಿಯವರೆಗೆ ಬಂದರೂ ಚಂದ್ರಣ್ಣ ಮೌನವಾಗಿ ತಲೆಯಾಡಿಸಿದ. ತಾನು ಕರಸೇವೆಗೆ ಹೋಗಿ ಬಂದದ್ದನ್ನು ತಿಳಿದು, ಬೇಸರವಾಗಿ ಆಕೆ ದುಡ್ಡು ಮರಳಿ ಕೇಳಿರಬಹುದೇ? ಎಂಬ ಪ್ರಶ್ನೆಯನ್ನು ತಂದೆಯವರಲ್ಲಿ ಕೇಳುವುದೇ ಬೇಡವೇ ಎಂಬುದನ್ನು ನಿರ್ಧರಿಸಲಾಗದೆ ಚಡಪಡಿಸುತ್ತಾ ಅಣ್ಣ ಕೇಶವಾಚಾರ್ಯನತ್ತ ಕಣ್ಣು ಹಾಯಿಸಿದಾಗ, ಆತ ‘ಸುಮ್ಮನಿರು’ ಎಂದು ಕಣ್ಣಲ್ಲೇ ಸೂಚನೆ ದಾಟಿಸಿದ್ದ.

ಮರುದಿನ ಮುಂಜಾನೆಯೇ ಬಂಟ್ವಾಳದ ಪಾರ್ಟಿಯೊಂದು ಏಳೆಂಟು ಸಾವಿರದ ಕ್ಯಾಷ್ ವ್ಯವಹಾರ ಮಾಡಿ ಹೋದುದರಿಂದಾಗಿ ಬ್ಯಾಂಕಿನಿಂದ ಹಣ ಡ್ರಾ ಮಾಡಿ ತರುವ ಅಗತ್ಯ ಬೀಳಲಿಲ್ಲ.

ಮಧ್ಯಾಹ್ನದ ಊಟದ ಬಳಿಕ ಚಂದ್ರಣ್ಣ ಖಾತೆ ಪುಸ್ತಕ ಹೊರತೆಗೆದು ರೊಟ್ಟಿ ಪಾತುಮ್ಮಳ ಒಟ್ಟು ಉಳಿತಾಯವನ್ನು ಮತ್ತೊಮ್ಮೆ ಟೋಟಲ್ ಮಾಡಿದ. ನಿನ್ನೆ ಮಾಡಿದ ಟೋಟಲ್‌ಗಿಂತ ಹದಿನೇಳು ರೂಪಾಯಿ ಕಡಿಮೆ ಟೋಟಲ್ ಬಂತು. ಮತ್ತೊಮ್ಮೆ ‘ಟೋಟಲ್’ ಮಾಡತೊಡಗಿದ; ಅರ್ಧ ‘ಟೋಟಲ್’ ಮಾಡುವಷ್ಟರಲ್ಲಿ ಬೇಸರವಾಗಿ ಖಾತೆ ಪುಸ್ತಕ ಮಡಚಿಟ್ಟ. ನಿನ್ನೆ ಕೂಡುವಾಗ ಬಂದ ಮೊತ್ತವನ್ನೇ ‘ಫೈನಲ್ ಟೋಟಲ್’ ಅಂತ ಕಾಗದದ ಚೂರೊಂದರಲ್ಲಿ ಬರೆದು ತಿಜೋರಿಯಿಂದ ಹಣ ತೆಗೆದು ಎಣಿಸಿ ರಬ್ಬರ್ ಬ್ಯಾಂಡ್ ಹಾಕಿಟ್ಟ. ಬೇರೆಯೇ ಆಗಿ ಐನೂರು ರೂಪಾಯಿಗಳನ್ನು ಎಣಿಸಿ ಮತ್ತೊಂದು ರಬ್ಬರ್ ಬ್ಯಾಂಡ್ ಹಾಕಿದ. ರೂಪಾಯಿ ನೋಟುಗಳ ಎರಡೂ ಕಂತೆಗಳನ್ನು ಲಕೋಟೆಯೊಂದರೊಳಗೆ ಸೇರಿಸಿ ಇನ್ನೊಂದು ರಬ್ಬರ್ ಬ್ಯಾಂಡ್ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಕುಳಿತ.

ಯಾವುದೇ ಕೆಲಸದಲ್ಲಿ ಆಸಕ್ತಿಯಿಲ್ಲದವನಂತೆ ರಸ್ತೆ ನೋಡುತ್ತಾ ಕುಳಿತ ಚಂದ್ರಣ್ಣನತ್ತ ಅನುಕಂಪದ ನೋಟ ಬೀರಿದ ಕೇಶವಾಚಾರ್ಯ, ‘ಸಂಜೆ ತಂದೆಯವರು ಬರ‍್ತಾರಂತೆ. ಆ ಹೆಂಗಸು ಬಂದಾಗ ಅವರಿದ್ದು, ಅವರ ಕೈಯಿಂದಲೇ ದುಡ್ಡು ಕೊಟ್ಟರೆ ಒಳ್ಳೆಯದಲ್ವಾ?’ ಎಂದು ಪ್ರಶ್ನಿಸಿದ.

ಚಂದ್ರಣ್ಣ ಹೌದು ಎಂಬಂತೆ ತಲೆಯಾಡಿಸಿದ. ಅಣ್ಣನತ್ತ ತಿರುಗಿಯೂ ನೋಡಲಿಲ್ಲ.

ಅರ್ಧ ತಾಸು ಕಳೆಯಿತು. ತಮ್ಮನತ್ತ ಕಡೆಗಣ್ಣ ನೋಟ ಇಟ್ಟುಕೊಂಡೇ ತನ್ನ ಕೆಲಸ ಮುಂದುವರಿಸಿದ್ದ ಕೇಶವಾಚಾರ್ಯ, ಡ್ರಾವರಿನ ಒಳಗೆ ಇರಿಸಿದ್ದ ಗೋಡೆಯ ತುಂಡನ್ನು ಹೊರತೆಗೆದು ಪ್ಯಾಂಟಿನ ಜೇಬಿನೊಳಗೆ ಸೇರಿಸಿಕೊಂಡು ಚಂದ್ರಣ್ಣ ಎದ್ದು ನಿಂತಾಗ ಗಾಬರಿಗೊಂಡು, ‘ಯಾಕೆ?!’ ಎಲ್ಲಿ ಹೊರಟೆ?’ ಎಂದು ಪ್ರಶ್ನಿಸಿದ.

‘ಆ ಮುದುಕಿಯ ಹಣ ಮತ್ತು ತಂದೆಯವರು ಕೊಡಲು ಹೇಳಿದ್ದ ಪ್ರತ್ಯೇಕ ಐನೂರು ರೂಪಾಯಿ- ಎರಡನ್ನೂ ಬೇರೆ ಬೇರೆ ಕಟ್ಟಿ ಕವರ್‌ನಲ್ಲಿ ಹಾಕಿಟ್ಟಿದ್ದೇನೆ. ಒಂದು ವೇಳೆ ನಾನಿಲ್ಲದಾಗ ಅವಳು ಬಂದ್ರೆ ಕೊಟ್ಟುಬಿಡು. ಒಂದು ವೇಳೆ ತಂದೆಯವರೇ ಅಂಗಡಿಗೆ ಬಂದ್ರೆ ಒಳ್ಳೆಯದೇ ಆಯ್ತಲ್ವಾ?’ ಎನ್ನುತ್ತಾ ಹೊರಟ.

‘ನೀನೀಗ ಎಲ್ಲಿಗೆ ಹೋಗ್ತಾ ಇದ್ದೀಯಾ?’ ಕೇಶವಾಚಾರ್ಯನ ಪ್ರಶ್ನೆಯಲ್ಲಿ ಬರಿಯ ವಿಚಾರಣೆಯಿದ್ದಿರಲಿಲ್ಲ; ಹೋಗಬೇಡ ಎಂಬ ಸೂಚನೆಯಿತ್ತು.

ಹೇಳುವುದೇ, ಹೇಳದಿರುವುದೇ ಎಂಬುದನ್ನು ನಿರ್ಧರಿಸುವವನಂತೆ ಅರೆಕ್ಷಣ ತಡೆದು, ‘ಒಮ್ಮೆ ರಾಮದಾಸ ಕಿಣಿಯವರನ್ನು ಕಂಡು ಅವರ ಲೆಖ್ಖಾಚಾರವನ್ನೂ ಚುಕ್ತಾ ಮಾಡಬೇಕಿತ್ತು.’ ಎಂದಷ್ಟೇ ಹೇಳಿದ ಚಂದ್ರಣ್ಣ, ಅಣ್ಣ ಮತ್ತೊಂದು ಪ್ರಶ್ನೆಯನ್ನು ಎಸೆಯುವ ಮುನ್ನವೇ ಮೆಟ್ಟಲಿಳಿದು, ಸೈಕಲೇರಿದ್ದ.

‘ಕಲ್ಪನಾ ಸಾರಿ ಸೆಂಟರ್’ನ ಹೊರಗೆ ಸೈಕಲ್ ನಿಲ್ಲಿಸಿದ ಚಂದ್ರಣ್ಣ ಮೆಟ್ಟಲೇರುತ್ತಿರುವಂತೆಯೇ ಸ್ವಾಗತಿಸಿದ ಸೇಲ್ಸ್‌ಮನ್ ಗೋಪಾಲಣ್ಣ. ‘ಊಟಕ್ಕೆಂದು ಮನೆಗೆ ಹೋದವರು ಇನ್ನೂ ಬಂದಿಲ್ಲ. ಹೋಗುವಾಗ್ಲೇ ಸ್ವಲ್ಪ ಜ್ವರ ಬರ‍್ತಾ ಉಂಟು ಹೇಳ್ತಾ ಇದ್ರು, ಇನ್ನು ಈವತ್ತು ಬರುವುದಿಲ್ವೋ ಏನೋ.’ ಎಂದು ಅನುಮಾನ ವ್ಯಕ್ತಪಡಿಸಿದ.

ಚಂದ್ರಣ್ಣ ಸೈಕಲೇರಿ ರಾಮದಾಸ ಕಣಿಯವರ ಮನೆಯ ದಾರಿಯಲ್ಲಿ ತುಳಿದ.
ಗುಡ್ಡೆ ಶಾಲೆಯ ತಿರುವಿನಲ್ಲಿದ್ದ ಸರಕಾರಿ ಬಾವಿ ಬಳಿ ತಲುಪಿದಾಗ ಒಮ್ಮಿಂದೊಮ್ಮೆಗೆ ಬಾಲ್ಯ ನೆನಪಾಯಿತು.

ಬಾವಿಯ ಪಕ್ಕದ ಗುಡ್ಡದ ಮೇಲಿರುವ ಶಾಲೆಯ ಆಟದ ಬಯಲಲ್ಲಿ ಕ್ರಿಕೆಟ್ ಆಡುತ್ತಿರುವಾಗಲೆಲ್ಲ ಚೆಂಡು ಪುಟಿಯುತ್ತಾ ಬಂದು ಬಾವಿಗೆ ಬಿದ್ದರೆ ಅರ್ಧ ತಾಸು ಆಟಕ್ಕೆ ವಿರಾಮ. ಪಕ್ಕದಲ್ಲೇ ಇರುವ ಅದ್ರಾಮ ಬ್ಯಾರಿಯ ಮನೆಯಿಂದ ಹಗ್ಗ-ಬಕೇಟು ತಂದು ಕೊಡುತ್ತಾನೆಂಬ ಏಕೈಕ ಕಾರಣದಿಂದಾಗಿ ಅದ್ರಾಮ ಬ್ಯಾರಿ ಮೊದಲ ಬಾರಿಗೆ ಔಟಾಗುವ ಆಟಗಾರನಾದರೂ ಕ್ಯಾಪ್‌ಟನ್‌ಶಿಪ್ ಗಿಟ್ಟಿಸಿಕೊಳ್ಳುವುದನ್ನು ನೆನಪಿಸಿಕೊಂಡಾಗ ನಗು ಬಂತು. ಆದರೆ ಅದೇ ಅದ್ರಾಮ ಬ್ಯಾರಿ, ಅಪ್ಪ ಹೊಡೆದ ಎಂಬ ಸಿಟ್ಟಿನಿಂದಲೇ ಬಾವಿಗೆ ಹಾರಿ ಸತ್ತು ಹೋದಾಗ ಚಂದ್ರಣ್ಣ ಎಂಟನೇ ಕ್ಲಾಸಿನ ವಿದ್ಯಾರ್ಥಿ. ಕೆಲವು ದಿವಸ ಸಂಜೆಯ ಬಳಿಕ ಸರಕಾರಿ ಬಾವಿಯ ಬಳಿಗೆ ಗೆಳಯರಾರೂ ಹೋಗುತ್ತಿರಲಿಲ್ಲ. ಅದ್ರಾಮ ಬ್ಯಾರಿಯ ಜಾತಿಯವರು ಆತ್ಮಹತ್ಯೆ ಮಾಡಿಕೊಂಡರೂ ಪ್ರೇತವಾಗುವುದಿಲ್ಲ ಎಂಬುದು ಗೊತ್ತಿದ್ದರೂ, ಬಾವಿ ಬಳಿ ಸುಳಿದಾಡಲು ಅಳುಕು. ಈಗ ಅದ್ರಾಮ ಬ್ಯಾರಿ ಬದುಕಿದ್ದರೆ ತನ್ನಷ್ಟೇ ದೊಡ್ಡವನಾಗಿರುತ್ತಿದ್ದ. ತಾನು ಕರಸೇವೆಗೆ ಹೋದ ಬಗ್ಗೆ ಅವನು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದ? ಸ್ನೇಹ ಬಿಡುತ್ತಿದ್ದನೆ?

ಚಂದ್ರಣ್ಣ ಸೈಕಲು ನಿಲ್ಲಿಸಿ ಸ್ಟಾಂಡು ಹಾಕಿದ. ಅಕ್ಟೋಬರದ ದಸರಾ ರಜವಿದ್ದುದರಿಂದ ಶಾಲೆ ಮೌನವಾಗಿ ಮುಚ್ಚಿಕೊಂಡು ಕೂತಿತ್ತು. ಬಾವಿ ಬಳಿ ಬಂದ ಚಂದ್ರಣ್ಣ ಇಣಕಿ ನೋಡಿ. ಹತ್ತಾಳು ಆಳದಲ್ಲಿ ನೀರು ಕಪ್ಪಗೆ ಕಾಣಿಸಿತು. ಚಿಕ್ಕವನಿದ್ದಾಗ ಬಾವಿಗೆ ಕಲ್ಲು ಬಿಸಾಡಿ ಅದು ‘ಗುಳುಂ’ ಎಂದು ಸದ್ದು ಮಾಡುವುದನ್ನು ಆಲಿಸುವುದರಲ್ಲೇ ಒಂದು ಬಗೆಯ ಮಜ. ಚಂದ್ರಣ್ಣ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಪುಟ್ಟ ಕಲ್ಲೊಂದನ್ನು ಆರಿಸಿ ಬಾವಿಗೆ ಎಸೆದ. ಸದ್ದು ಸ್ಪಷ್ಟವಾಗಿ ಕೇಳಿಸದಾಗ ನಿರಾಸೆಯಾಯಿತು. ಸ್ವಲ್ಪ ದೊಡ್ಡ ಕಲ್ಲು ಎಸೆದರೆ ಸದ್ದು ಕೇಳಿಸಬಹುದು. ಅಕ್ಕಪಕ್ಕ ನೋಡಿದ; ಇದ್ದಕ್ಕಿದ್ದಂತೆ ಜೇಬಿನೊಳಗಿನಿಂದ ‘ಗೋಡೆಯ ತುಂಡನ್ನು’ ಹೊರತೆಗೆದು ಬಾವಿಯೊಳಕ್ಕೆ ಎಸೆದು ಬಿಟ್ಟ! ‘ಗುಳುಂ’ ಎಂಬ ಸದ್ದು ಕೇಳಿಸಿದಾಗ ಮನಸ್ಸು ನಿರಾಳವಾಯಿತು. ಸಮಾಧಾನ ಗೊಂಡವನಂತೆ ಅಲ್ಲೇ ಪಕ್ಕದಲ್ಲಿ ಇದ್ದ ಬಟ್ಟೆ ತೊಳೆಯುವ ಕಲ್ಲಿನ ಮೇಲೆ ಕುಳಿತು. ಶಾಲಾ ಬಯಲಿನ ಇಳಿಜಾರಲ್ಲಿ ಆಟವಾಡುತ್ತಿದ್ದ ಪುಟ್ಟ ಮಕ್ಕಳನ್ನು ನೋಡತೊಡಗಿದ.

ಆರು

ಚಂದ್ರಣ್ಣ ಅಂಗಡಿಗೆ ಮರಳಿ ಬಂದಾಗ ಸೂರ್ಯ ಮುಳುಗಿದ್ದ.

ಅಣ್ಣ ತನ್ನ ಮಾಮೂಲು ಜಾಗದಲ್ಲಿ ಕುಳಿತು ಕೆಲಸದಲ್ಲಿ ಮುಳುಗಿದ್ದ. ಅಪ್ಪ ಕಾಣಿಸಲಿಲ್ಲ. ‘ಕಿಣಿ ಸಿಕ್ಕಿದ್ರಾ?’ ‘ಇಲ್ಲ ನಾನು ಅಲ್ಲಿಗೆ ಹೋಗಲಿಲ್ಲ’ ಎಂದು ಶುಷ್ಕವಾಗಿ ಉತ್ತರಿಸಿದ ಚಂದ್ರಣ್ಣ ಮಂಚದಲ್ಲಿ ಕುಳಿತುಕೊಳ್ಳುತ್ತಾ, ‘ತಂದೆಯವರು ಬರಲಿಲ್ವಾ?’ ಎಂದು ಪ್ರಶ್ನಿಸಿದ.

‘ತಂದೆಯವರೂ ಬಂದಿದ್ರು. ಆ ಹೆಂಗಸೂ ಬಂದಿತ್ತು. ಹಣ ತೆಗೆದುಕೊಂಡು ಹೋದಳು. ನಮ್ಮ ಲೆಖ್ಖದ ಐನೂರು ರೂಪಾಯಿ ತೆಗೆದುಕೊಳ್ಳುವಾಗ ಕಣ್ಣೀರು ಹಾಕಿಬಿಟ್ಳು ಪಾಪ’ ಎಂದ ಕೇಶವಾಚಾರ್ಯ. ಚಂದ್ರಣ್ಣ ಏನೂ ಹೇಳಲಿಲ್ಲ.

ಕೇಶವಾಚಾರ್ಯನೇ ಮಾತು ಮುಂದುವರಿಸಿದ, ‘ನಮ್ಮ ಅಹ್ಮದ್ ಬಾವಾನ ಕತೆ ಗೊತ್ತುಂಟಾ ನಿನ್ಗೇ? ರೊಟ್ಟಿ ಪಾತುಮ್ಮಳೇ ಹೇಳಿದ್ದು. ಇವಳು ಮನೆ ಕಟ್ಟಿಸುವ ಸಮಯದಲ್ಲಿ ಏನಾದರೂ ಸ್ವಲ್ಪ ಸಹಾಯ ಮಾಡ್ತೇನೆ ಅಂತ ಕಳೆದ ಸಲ ಬಂದಾಗ ಹೇಳಿದ್ದನಂತೆ. ಆದ್ರೆ ಈ ಸಲ ಊರಿಗೆ ಬಂದಿದ್ದವನು ಒಂದು ದಿನವೂ ಮನೆಯಲ್ಲಿ ನಿಲ್ಲಲಿಲ್ಲವಂತೆ. ಕಾಸರಗೋಡಿಗೆ ಕೊಟ್ಟಿದ್ದ ಅವನ ತಂಗಿ ಹೆರಿಗೆಗೆಂದು ಅಲ್ಲೇ ನರ‍್ಸಿಂಗ್ ಹೋಮ್ ಸೇರಿದವಳ ಕಂಡೀಷನ್ ಸೀರಿಯೆಸ್ ಆಯಿತಂತೆ. ಇವನು ಬಂದ ದಿನವೇ ಪೋನ್ ಬಂದಿತ್ತಂತೆ. ಹಾಗೆ ಕಾಸರಗೋಡಿಗೆ ಹೋದ ಇವನು ಇನ್ನೂ ಮರಳಿ ಬಂದಿಲ್ಲವಂತೆ. ಮಗ ಹುಟ್ಟುವಾಗಲೇ ಸತ್ತು ಹೋಗಿ ತಾಯಿ ಸ್ಥಿತಿ ಬಹಳ ಹೋಪ್ಲೆಸ್ ಆಯಿತಂತೆ. ಈಗ ಮಂಗಳೂರಿಗೆ ಶಿಫ್ಟ್ ಮಾಡಿದ್ದಾರಂತೆ.’

ಕೇಶವಾಚಾರ್ಯ ಅನಗತ್ಯವಾಗಿ ವಿವರ ನೀಡುವ ಮೂಲಕ ಅಹ್ಮದ್ ಬಾವಾನ ಗೈರುಹಾಜರಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾನೆ ಎಂದರಿತ ಚಂದ್ರಣ್ಣ, ಅಣ್ಣನಿಗೆ ಬೇಸರವಾಗಬಾರದೆಂಬ ಕಾರಣದಿಂದ, ‘ಹೌದಾ? ಛೇ, ಛೇ’ ಎಂದು ಲೊಚಗುಟ್ಟಿ, ‘ನಾನು ಸುಮ್ಮನೆ ಅವನ ಬಗ್ಗೆ ತಪ್ಪು ಯೋಚನೆ ಮಾಡಿಬಿಟ್ಟೆ.’ ಎಂಬ ಮಾತೂ ಜೋಡಿಸಿದ.

‘ನಿನಗೆ ಇನ್ನೊಂದು ಸಂಗತಿ ಗೊತ್ತುಂಟಾ?’ ಎಂದು ಪ್ರಶ್ನಿಸಿದ ಕೇಶವಾಚಾರ್ಯ ಚಂದ್ರಣ್ಣನ ಗಮನವನ್ನು ಸೆಳೆಯುವವನಂತೆ ಸ್ವಲ್ಪ ಹೊತ್ತು ಸುಮ್ಮನಿದ್ದು, ಬಳಿಕ ಹೇಳಿದ. ‘ನಿನ್ನ ಆ ಮುದುಕಿ, ನಾಳೆ ಸಂಜೆ ಮತ್ತೆ ಬರ‍್ತಾಳಂತೆ. ನೀನು ಎಲ್ಲಿಗೂ ಹೋಗದೆ ಅಂಗಡಿಯಲ್ಲೇ ಇರಬೇಕಂತೆ’

‘ಯಾಕೆ! ಮತ್ಯಾಕೆ ಬರುವುದು? ನನ್ನ ಲೆಖ್ಖಾಚಾರದಲ್ಲಿ ಹೆಚ್ಚು ಕಡಿಮೆ ಆಗಿದೆಯಂತೆಯಾ ? ಹಾಗೆ ಹೇಳುವುದಾದರೆ ಒಂದು ಹತ್ತು ಹದಿನೈದು ರೂಪಾಯಿ ಜಾಸ್ತಿಯೇ ಆಗಿದೆ ನಾನು ಕೂಡಿಸಿದ್ದು.’ ಚಂದ್ರಣ್ಣ ಅಸಹನೆಯಿಂದಲೇ ಹೇಳಿದ್ದ.

ಕೇಶವಾಚಾರ್ಯ ವಿಷಾದದಿಂದೆಂಬಂತೆ ಉತ್ತರಿಸಿದ

‘ನಿನ್ನ ಲೆಖ್ಖಾಚಾರ ಹೆಚ್ಚು ಕಮ್ಮಿಯಾಗಿರುತ್ತಿದ್ದರೇ ಚೆನ್ನಾಗಿತ್ತು ಚಂದ್ರು, ಆದರೆ ಅವಳು ನಿನ್ನನ್ನು ಕಾಣಲು ಬರುವುದು ಬೇರೆಯೇ ಕಾರಣಕ್ಕೆ. ಹೇಳಿದ್ರೆ ನೀನು ನಂಬಲಿಕ್ಕಿಲ್ಲ’ ಎಂದವನು ಸ್ವಲ್ಪ ತಡೆದು ಒಂದೇ ಉಸಿರಿನಲ್ಲಿ ಹೇಳಿದ, ‘ನಾಳದು ಶುಕ್ರವಾರ ಬೆಳಗ್ಗೆ ಅವಳು ಗೋಡೆ ಕೆಲಸ ಆರಂಭಿಸುತ್ತಾಳಂತೆ. ನಿನ್ನ ಹತ್ರ ಇರುವ ಆ ‘ಗೋಡೆಯ ತುಂಡಿ’ನ ಒಂದು ಸಣ್ಣ ಚೂರಾದರೂ ನೀನು ಅವಳಿಗೆ ಕೊಡಬೇಕಂತೆ. ಅದನ್ನು ಸೇರಿಸಿಯೇ ಮನೆ ಗೋಡೆ ಕಟ್ಟಿಸಬೇಕೆಂದು ಅವಳಿಗೆ ಕಳೆದ ಒಂದು ವರ್ಷದಿಂದಲೂ ಆಸೆಯಿತ್ತಂತೆ.’

ಸರಕಾರಿ ಬಾವಿಯೊಳಗಿದ್ದ ಅದ್ರಾಮಬ್ಯಾರಿ ಗಹಗಹಿಸಿ ನಕ್ಕ.

ಬೊಳುವಾರು ಮಹಮದ್ ಕುಂಞಿ

1 comment: