Monday, October 11, 2010

ಅಯೋಧ್ಯೆ ತೀರ್ಪಿನಿಂದ ಇತಿಹಾಸಕ್ಕೆ ಅಪಚಾರ

ರೋಮಿಲಾ ಥಾಪರ್
ಖ್ಯಾತ ಇತಿಹಾಸ ತಜ್ಞೆ.

ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪು ನಿಜಕ್ಕೂ ಒಂದು ರಾಜಕೀಯ ದೃಷ್ಟಿಕೋನದ ತೀರ್ಪು ಎಂದೇ ಹೇಳಬಹುದು. ಈ ತೀರ್ಪಿನಲ್ಲಿ ಹೇಳಿದ್ದೆಲ್ಲವನ್ನೂ ಸ್ವತಃ ಸರಕಾರವೇ ಹಲವು ವರ್ಷಗಳ ಹಿಂದೆಯೇ ಕೈಗೊಳ್ಳಬಹುದಾಗಿತ್ತು. ವಿವಾದಿತ ನಿವೇಶನವನ್ನು ಸ್ವಾಧೀನಪಡಿಸಿಕೊಂಡು, ಧ್ವಂಸಗೊಂಡಿರುವ ಮಸೀದಿಯ ಜಾಗದಲ್ಲಿ ನೂತನ ದೇಗುಲವನ್ನು ನಿರ್ಮಿಸುವ ಬಗ್ಗೆಯೇ ನ್ಯಾಯಾಲಯ ಗಮನಹರಿಸಿದಂತಿದೆ. ಧಾರ್ಮಿಕ ಗುರುತುಗಳನ್ನು ಐತಿಹಾಸಿಕ ಸಾಕ್ಷಾಧಾರಗಳೆಂದು ಹೇಳಿಕೊಂಡು ನಡೆಸಲಾಗುತ್ತಿರುವ ಆಧುನಿಕ ರಾಜಕೀಯವೇ ಈ ಎಲ್ಲ ಸಮಸ್ಯೆಗಳಿಗೆ ಮೂಲ.

ನಿರ್ದಿಷ್ಟ ಸ್ಥಳವೊಂದರಲ್ಲಿ ದೈವಿಕ ಅಂಶದ ಅಥವಾ ಅರೆ ದೈವಿಕ ಅಂಶದ ವ್ಯಕ್ತಿಯೊಬ್ಬ ಜನಿಸಿದ್ದನೆಂದೂ, ಆತನ ಜನನದ ನೆನಪಿಗಾಗಿ, ಆ ಜಾಗದಲ್ಲಿ ನೂತನ ದೇಗುಲವೊಂದನ್ನು ನಿರ್ಮಿಸಲಾಯಿತೆಂದೂ ನ್ಯಾಯಾಲಯ ಘೋಷಿಸಿದೆ. ಹಿಂದೂಗಳ ಶ್ರದ್ಧೆ ಹಾಗೂ ನಂಬಿಕೆಗೆ ಸಂಬಂಧಿಸಿದ ವಿಷಯ ಇದಾಗಿದೆಯೆಂಬ ಮನವಿಗೆ ನ್ಯಾಯಾಲಯದ ಪ್ರತಿಕ್ರಿಯೆ ಇದಾಗಿದೆ. ಆದರೆ ಈ ವಾದವನ್ನು ಬೆಂಬಲಿಸುವಂತಹ ಸಾಕ್ಷಾಧಾರ ಗಳಿಲ್ಲದೆ ನೀಡಿರುವ ಈ ತೀರ್ಪನ್ನು ಕಾನೂನು ನ್ಯಾಯಾಲಯದಿಂದ ನಿರೀ ಕ್ಷಿಸಲು ಸಾಧ್ಯವಿಲ್ಲ. ಶ್ರೀರಾಮನನ್ನು ಹಿಂದೂಗಳು ಭಕ್ತಿಭಾವದಿಂದ ಆರಾಧಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಆತನ ಜನ್ಮಸ್ಥಳದ ಕುರಿತ ಹಕ್ಕುಸ್ಥಾಪನೆಯ ವಾದವನ್ನು ಬೆಂಬಲಿಸುವ ತೀರ್ಮಾನವನ್ನು ನ್ಯಾಯಾಂಗ ಕೈಗೊಳ್ಳಲು ಸಾಧ್ಯವೇ?.

ವಿವಾದಿತ ಸ್ಥಳದಲ್ಲಿ ೧೨ನೆ ಶತಮಾನದಲ್ಲಿ ದೇವಾಲಯವೊಂದಿತ್ತು. ಆದನ್ನು ನಾಶಪಡಿಸಿ, ಅಲ್ಲಿ ಮಸೀದಿಯೊಂದನ್ನು ನಿರ್ಮಿಸಲಾಗಿತ್ತು ಎಂದು ನ್ಯಾಯಾಲಯದ ತೀರ್ಪು ಹೇಳುತ್ತದೆ. ಹಾಗಾಗಿ ಆ ನಿವೇಶನದಲ್ಲಿ ನೂತನ ದೇಗುಲವನ್ನು ನಿರ್ಮಿಸುವುದು ನ್ಯಾಯಬದ್ಧವೆಂದು ತೀರ್ಪು ಪ್ರತಿಪಾದಿಸಿದೆ. ವಿವಾದಿತ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ ನಡೆಸಿದ ಉತ್ಖನನ ಹಾಗೂ ಅದರ ವರದಿಗಳನ್ನು ನ್ಯಾಯಾಲಯ ಸಂಪೂರ್ಣವಾಗಿ ಒಪ್ಪಿಕೊಂಡಿದೆ. ಆದರೆ ಈ ವರದಿಗಳ ಬಗ್ಗೆ ಇತರ ಪುರಾತತ್ವ ಶಾಸ್ತ್ರಜ್ಞರು ಹಾಗೂ ಇತಿಹಾಸಕಾರರು ಪ್ರಬಲವಾದ ಆಕ್ಷೇಪಗಳನ್ನೆತ್ತಿದ್ದರು. ಆದರೆ ಇದೊಂದು ವೃತ್ತಿಪರ ಪರಿಣತಿಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ, ಯಾವುದೇ ಒಂದು ಅಭಿಪ್ರಾಯದ ಬಗ್ಗೆ ಭಿನ್ನಾಭಿಪ್ರಾಯಗಳಿರುವುದು ಸಹಜ.

ತೀರ್ಪು ನೀಡಿದ ಒಬ್ಬ ನ್ಯಾಯಾಧೀಶರಂತೂ ತಾನು ಇತಿಹಾಸಕಾರ ನಾಗಿರದಿರುವುದರಿಂದ ಐತಿಹಾಸಿಕ ಅಂಶಗಳನ್ನು ಪರಾಮರ್ಶಿಸಿಲ್ಲವೆಂದು ಹೇಳಿದ್ದಾರೆ. ಮಾತ್ರವಲ್ಲದೆ, ಈ ಪ್ರಕರಣದ ಬಗ್ಗೆ ತೀರ್ಪು ನೀಡಲು ಇತಿಹಾಸ ಹಾಗೂ ಪುರಾತತ್ವ ಶಾಸ್ತ್ರದ ನೆರವು ಖಂಡಿತವಾಗಿಯೂ ಅಗತ್ಯವಿಲ್ಲವೆಂದು ಸಾರಿದ್ದಾರೆ.

ನಮ್ಮ ಪರಂಪರೆಯ ಒಂದು ಭಾಗವಾಗಿದ್ದ ೫೦೦ ವರ್ಷಗಳಷ್ಟು ಹಿಂದಿನ ಮಸೀದಿಯೊಂದನ್ನು, ರಾಜಕೀಯ ನಾಯಕತ್ವವೊಂದರ ಕುಮ್ಮಕ್ಕಿನ ಮೇರೆಗೆ ಜನರ ಗುಂಪೊಂದು ನಾಶಪಡಿಸಿತ್ತು. ಆದರೆ ಅಲಹಾಬಾದ್ ನ್ಯಾಯಾಲಯದ ತೀರ್ಪಿನ ಸಾರಾಂಶದಲ್ಲಿ ಈ ಬರ್ಬರ ವಿನಾಶಕಾರಿ ಘಟನೆಯ ಬಗ್ಗೆ ಪ್ರಸ್ತಾಪವೇ ಇಲ್ಲ. ನಮ್ಮ ಪರಂಪರೆಯ ಮೇಲೆ ನಡೆದ ಈ ಅಪರಾಧವನ್ನು ಖಂಡಿಸಲೇಬೇಕಾಗಿದೆ. ಮಸೀದಿಯ ಅವಶೇಷಗಳ ಪ್ರದೇಶದಲ್ಲಿ, ನೂತನ ದೇವಾಲಯವು ನಿರ್ಮಾಣವಾಗಲಿದೆ.

ಹೀಗಿರುವಾಗ ಆ ಪ್ರದೇಶದಲ್ಲಿ ಪುರಾತನ ಕಾಲದಲ್ಲಿ ಇತ್ತೆನ್ನಲಾದ ದೇವಾಲಯದ ನಾಶವನ್ನು ಖಂಡಿಸಲು ಹಾಗೂ ಅಲ್ಲೀಗ ನೂತನ ದೇವಾಲಯವನ್ನು ನಿರ್ಮಿಸುವುದನ್ನು ಹೇಗೆ ಸಮರ್ಥಿಸಲು ಸಾಧ್ಯ?. ಬಹುಶಃ ಮಸೀದಿ ಧ್ವಂಸದ ಘಟನೆಯನ್ನು ಅನುಕೂಲತೆ ಗಾಗಿ, ಪ್ರಕರಣದ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಯೆಂದೇ ಹೇಳಬಹುದು.

ದೇವಾಂಶ ಸಂಭೂತ ಅಥವಾ ಅರೆದೈವಿಕ ಅಂಶದ ವ್ಯಕ್ತಿಯೊಬ್ಬನ ಜನ್ಮಸ್ಥಳವೆಂದು ಘೋಷಿಸುವ ಮೂಲಕ ಯಾವುದೇ ಒಂದು ಗುಂಪು ಆ ನಿವೇಶನದ ಮೇಲೆ ಹಕ್ಕುಸ್ಥಾಪನೆಯ ವಾದ ಮಂಡಿಸಬಹುದೆಂಬುದನ್ನು ಈ ತೀರ್ಪು ಇತರ ನ್ಯಾಯಾಲಯಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

ಇದಕ್ಕೆ ಪೂರಕವಾದಂತಹ ನಿವೇಶನಗಳು ಇರುವಲ್ಲೆಲ್ಲಾ ಹಲವಾರು ಜನ್ಮಸ್ಥಾನಗಳು ತಲೆಯೆತ್ತಲಿವೆ ಮತ್ತು ಅದಕ್ಕೆ ಬೇಕಾದ ವಿವಾದಗಳನ್ನು ಕೂಡಾ ಸೃಷ್ಟಿಯಾಗುತ್ತವೆ. ಐತಿಹಾಸಿಕ ಸ್ಮಾರಕಗಳ ನಾಶವನ್ನು ಖಂಡಿಸಲಾಗದಿದ್ದರೆ, ಇನ್ನಿತರ ಕಟ್ಟಡಗಳನ್ನು ನಾಶಗೊಳಿಸದಂತೆ ಜನರನ್ನು ತಡೆಯುವುದರಲ್ಲಿ ಯಾವ ಅರ್ಥವಿದೆ?. ಆರಾಧನಾ ಸ್ಥಳಗಳ ಸ್ಥಾನಮಾನವನ್ನು ಬದಲಿಸುವ ವಿರುದ್ಧ ೧೯೯೩ರಲ್ಲಿ ಅಂUಕರಿಸಲಾದ ಶಾಸನವು ನಿಷ್ಕ್ರಿಯವಾಗಿರುವುದು ನಮ್ಮ ಕಣ್ಮೆದುರೇ ಗೋಚರಿಸುತ್ತಿದೆ.

ಇತಿಹಾಸದಲ್ಲಿ ಏನೆಲ್ಲ ನಡೆಯಿತೋ. ಅವೆಲ್ಲ ಆಗಿ ಹೋದ ಸಂಗತಿಗಳು. ಅದನ್ನು ಮತ್ತೆ ಬದಲಾಯಿಸಲು ಸಾಧ್ಯವಿಲ್ಲ. ಆದರೆ ವಿಶ್ವಸನೀಯ ಸಾಕ್ಷಗಳ ಆಧಾರದಲ್ಲಿ ಅವುಗಳ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಹೊಂದಿರಬೇಕು. ಪ್ರಸಕ್ತ ರಾಜಕೀಯವನ್ನು ಸಮರ್ಥಿಸುವುದಕ್ಕಾಗಿ ಇತಿಹಾಸವನ್ನು ಬದಲಾಯಿಸಲು ನಮಗಾಗದು. ಈ ತೀರ್ಪು ಇತಿಹಾಸದ ಮೇಲಿನ ಗೌರವವನ್ನು ತೊಡೆದುಹಾಕಿದೆ ಹಾಗೂ ಇತಿಹಾಸದ ಜಾಗದಲ್ಲಿ ಧಾರ್ಮಿಕ ನಂಬುಗೆಯು ಆಕ್ರಮಿಸಬೇಕೆಂದು ಅದು ಬಯಸುತ್ತಿದೆ. ಈ ದೇಶದ ಕಾನೂನು ಕೇವಲ ನಂಬಿಕೆ ಹಾಗೂ ಶ್ರದ್ಧೆಯನ್ನು ಮಾತ್ರವಲ್ಲ, ಸಾಕ್ಷಗಳನ್ನು ಕೂಡಾ ಆಧರಿಸಿದೆಯೆಂಬ ಬಗ್ಗೆ ವಿಶ್ವಾಸ ಮೂಡಿದಾಗ ಮಾತ್ರ ನೈಜ ಮರುಸಂಧಾನ ಸಾಧ್ಯ.

No comments:

Post a Comment