Monday, October 11, 2010

ಅಯೋಧ್ಯೆ: ಕಾನೂನಿನ ಮೇಲೆ ಧರ್ಮದ ಸವಾರಿ

ಸಿದ್ಧಾರ್ಥ ವರದರಾಜನ್
(ಕೃಪೆ: ದಿ ಹಿಂದೂ)

ಹೊಸದಿಲ್ಲಿ, ಆ. ೨: ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ‘ಹಿಂದೂಗಳ ಶ್ರದ್ಧೆ ಹಾಗೂ ನಂಬಿಕೆ’ಯನ್ನೇ ಆಧಾರವಾಗಿಟ್ಟುಕೊಂಡು, ದುರ್ಬಲ ಸಾಕ್ಷಗಳನ್ನು ಉಲ್ಲೇಖಿಸಿ ತೀರ್ಪು ನೀಡಿದೆ. ಈ ತೀರ್ಪು ಇದೀಗ ಭಾರತದಲ್ಲಿ ಹೊಸ ನ್ಯಾಯಾಂಗ ಇತಿಹಾಸವನ್ನು ಸೃಷ್ಟಿಸಿದೆ.

ನ್ಯಾಯಾಲಯದ ವಿವೇಚನಾ ರಹಿತ ಈ ತೀರ್ಪಿನಿಂದಾಗಿ ಇಂತಹುದೇ ರೀತಿಯ ರಾಜಕೀಯ ಚಳವಳಿ ಹುಟ್ಟು ಹಾಕಲು ನೇರವಾಗಿ ಎಡೆ ಮಾಡಿಕೊಟ್ಟಿದೆ. ಕಾನೂನು ಮತ್ತು ಭಾರತ ಸಂವಿಧಾನವನ್ನು ಉಲ್ಲಂಘಿಸಲು ರಾಜಕೀಯ ಚಳವಳಿಗಳು ನೇರವಾಗಿ “ನಂಬಿಕೆ” ಮತ್ತು “ಶ್ರದ್ಧೆ”ಯನ್ನು ಆಧಾರವನ್ನಾ ಗಿಟ್ಟುಕೊಳ್ಳಲು ಅನುಕೂಲ ಮಾಡಿಕೊಟ್ಟಿರುವುದು ವಿಪರ್ಯಾಸವಾಗಿದೆ.

೫೦೦ ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ಧ್ವಂಸಗೊಳಿಸಿ, ೧೯೯೨ರಲ್ಲಿ ಇಂತಹುದೇ ಉಲ್ಲಂಘನೆ ನಡೆದಿದೆ. ಅಕ್ರಮ ಪ್ರವೇಶ, ಧ್ವಂಸದ ಅಪರಾಧಗಳಿಗೆ ಭಾರತದ ರಾಜಕೀಯ ಮತ್ತು ನ್ಯಾಯಾಂಗ ವ್ಯವಸ್ಥೆಯು ಅಂದು ಮೂಕ ಸಾಕ್ಷಿಯಾಯಿತು. ಕಾನೂನನ್ನು ಕೈಗೆತ್ತಿಕೊಂಡವರ “ಶ್ರದ್ಧೆ” ಮತ್ತು “ನಂಬಿಕೆ”ಯನ್ನು ಕಾನೂನು ಬದ್ಧಗೊಳಿಸುವ ಮೂಲಕ ೧೮ ವರ್ಷಗಳ ಬಳಿಕ ದೇಶವು ಮತ್ತೊಂದು ಪಾಪ ಮಾಡಿದೆ.

ಬಾಬರಿ ಮಸೀದಿ-ರಾಮ ಜನ್ಮ ಭೂಮಿ ಭೂ ವಿವಾದ ಪ್ರಕರಣದ ತೀರ್ಪಿನಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮೂವರು ನ್ಯಾಯಾಧೀಶರು ಪ್ರತ್ಯೇಕ ತೀರ್ಪುಗಳನ್ನು ನೀಡಿದ್ದಾರೆ. ಆದರೆ ನ್ಯಾಯಮೂರ್ತಿ ಎಸ್. ಯು. ಖಾನ್, ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಧರ್ಮರ ಶರ್ಮಾ ಮೂವರೂ ಒಂದು ಪ್ರಮುಖ ಅಂಶವನ್ನು ಗುರುತಿಸಿದ್ದಾರೆ.

“ಹಿಂದೂಗಳ ಶ್ರದ್ಧೆ ಮತ್ತು ನಂಬಿಕೆಯ”ಯ ಪ್ರಕಾರ ಬಾಬರಿ ಮಸೀದಿಯ ಕೇಂದ್ರ ಗೋಪುರದಲ್ಲಿ ೧೯೪೯ರಲ್ಲಿ ರಾಮಲಲ್ಲಾನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿರುವ ಸ್ಥಳವು ಶ್ರೀ ರಾಮನ ಜನ್ಮ ಭೂಮಿ ಎಂಬುದಾಗಿ ನಂಬಲಾಗುತ್ತದೆ ಎಂದು ವಿವಾದಿತ ಭೂಮಿಯ ಹಿಂದೂ ದಾವೆದಾರರು ಪ್ರತಿಪಾದಿಸು ತ್ತಿರುವುದಾಗಿ ಮೂವರು ನ್ಯಾಯಾಧೀಶರೂ ಗುರುತಿಸಿದ್ದಾರೆ.

ಬಾಬರಿ ಮಸೀದಿಯ ಕೇಂದ್ರ ಗೋಪುರದ ಪ್ರದೇಶವು ರಾಮ ಜನ್ಮ ತಳೆದ ಭೂಮಿಯೆಂದು ಪ್ರತಿಯೊಬ್ಬ ಹಿಂದೂವೂ ನಂಬು ತ್ತಾನೆ ಎನ್ನಲಾಗಿದೆ. ಆದರೆ ನ್ಯಾಯಾಲಯವು ಕಾನೂನು ಕಾರಣ ಗಳು ಮತ್ತು ಸತ್ಯಾಂಶಗಳನ್ನು ಆಧಾರವಾಗಿಟ್ಟುಕೊಳ್ಳು ವುದಕ್ಕೆ ಹೆಚ್ಚು ಆದ್ಯತೆ ನೀಡುವುದನ್ನು ಹೊರತಾಗಿಸಿ, ಧರ್ಮ ಶಾಸ್ತ್ರಕ್ಕೆ ಹೇಗೆ ಹೆಚ್ಚಿನ ಆದ್ಯತೆ ನೀಡಿತು ಎಂಬ ಪ್ರಶ್ನೆಯೊಂದು ಉದ್ಭವಿಸಿದೆ.ತುಳಸಿದಾಸ್, ಅಯೋಧ್ಯೆಯಲ್ಲಿ ೧೬ನೆ ಶತಮಾನದಲ್ಲಿ ರಾಮಚರಿತ ಮಾನಸ ಗ್ರಂಥವನ್ನು ರಚಿಸಿದ್ದಾರೆ. ಆದರೆ ಇದೀಗ ಐದು ಶತಮಾನಗಳ ಬಳಿಕ ನ್ಯಾಯಾಲಯವು ಸ್ಪಷ್ಟವಾಗಿ ಗುರುತಿಸಿರುವ ಪ್ರದೇಶವು ರಾಮ ಜನ್ಮ ಭೂಮಿ ಎಂದು ತುಳಸಿದಾಸ್ ತನ್ನ ಗ್ರಂಥದಲ್ಲಿ ಎಲ್ಲೂ ತಿಳಿಸಿಲ್ಲ.

“ಜನ್ಮ ಸ್ಥಾನ”ಕ್ಕೆ “ಮುಕ್ತಿ” ನೀಡುವುದಕ್ಕಾಗಿ ಬಿಜೆಪಿ ಮತ್ತು ವಿ‌ಎಚ್‌ಪಿ ೧೯೮೦ರ ದಶಕದಲ್ಲಿ ರಾಜಕೀಯ ಹೋರಾಟ ಆರಂಭಿಸಿದ ಬಳಿಕ ಇದೀಗ ನ್ಯಾಯಾಲಯವು “ಶ್ರದ್ಧೆ ಮತ್ತು ನಂಬಿಕೆ”ಯ ಮಾತುಗಳನ್ನಾಡುತ್ತಿದೆ.

ಭಾರತದಲ್ಲಿ ಎಲ್ಲ ವಿಷಯಗಳಲ್ಲೂ ನಂಬಿಕೆಗೆ ಪ್ರಧಾನ ಸ್ಥಾನವಿದೆ. ಆದರೆ ಕಾನೂನು ನಿರ್ವಹಣೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿಸಲು ನಂಬಿಕೆ ಮುಖ್ಯ ಆಧಾರವಾಗದು. ಮಾತ್ರವಲ್ಲದೆ ಚರಿತ್ರೆಯ ತಪ್ಪುಗಳೂ ಇಂದಿನ ನ್ಯಾಯ ನಿರ್ಧಾರಕ್ಕೆ ಆಧಾರವಾಗುವುದಿಲ್ಲ.

ಬಾಬರಿ ಮಸೀದಿ ಪ್ರದೇಶದಲ್ಲಿ ಹಿಂದೂ ಮಂದಿರವಿತ್ತೇ ಎಂಬ ಕುರಿತಾದ ಪ್ರಶ್ನೆಗೆ ಸಂಬಂಧಿಸಿ ೧೯೯೩ರಲ್ಲಿ ನರಸಿಂಹ ರಾವ್ ಸರಕಾರವು ಸುಪ್ರೀಂ ಕೋರ್ಟ್‌ಗೆ ಮಾಡಿದ್ದ ಮನವಿಗೆ ಉತ್ತರಿಸಲು ಸರ್ವೋಚ್ಚ ನ್ಯಾಯಾಲಯವು ಹಿಂದೇಟು ಹಾಕಿತ್ತು. ಈ ಸಂಬಂಧ ಉತ್ತರಿಸುವುದರಿಂದ ಸುಪ್ರೀಂ ಕೋರ್ಚ್ ಬುದ್ಧಿವಂತಿಕೆಯಿಂದ ನುಣುಚಿಕೊಂಡಿತ್ತು. ಆದರೂ ಹೈಕೋರ್ಟ್ ಮಾತ್ರ ಭೂ ಒಡೆತನಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧವಿರದ ಪ್ರಶ್ನೆಗಳನ್ನು ಕಲೆ ಹಾಕಿ ತೀರ್ಪು ನೀಡಿದೆ.

“ಹಿಂದೂ ಮಂದಿರವಿತ್ತೆನ್ನಲಾದ ಪ್ರದೇಶದಲ್ಲಿ ಅದನ್ನು ನಾಶಪಡಿಸಿ ಪ್ರಸ್ತುತ ಕಟ್ಟಡ ನಿರ್ಮಿಸಲಾಗಿದೆಯೇ?” ಎಂಬುದು ನ್ಯಾಯಾಲಯ ಹುಟ್ಟು ಹಾಕಿರುವ ಪ್ರಶ್ನೆಗಳಲ್ಲೊಂದಾಗಿದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ತಾಣದಲ್ಲಿ ಉತ್ಖನನ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ನ್ಯಾಯಾಲಯ ಆದೇಶಿಸಿತ್ತು. ಅದನ್ನು ೨೦೦೩ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿ‌ಎ ಸರಕಾರ ಅಧಿಕಾರದಲ್ಲಿದ್ದಾಗ ನಡೆಸಲಾಯಿತು. ಹೀಗಾಗಿ ಅಲ್ಲಿ “ಹಿಂದೂ ಧಾರ್ಮಿಕ ಕಟ್ಟಡ”ವಿದ್ದ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಯು ವರದಿ ನೀಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅದನ್ನು ಹೊರತಾಗಿಸಿಯೂ ಆ ವರದಿಯ ಬಗ್ಗೆ ಹಲವಾರು ಇತಿಹಾಸಕಾರರು ಮತ್ತು ಪುರಾತತ್ವ ಶಾಸ್ತ್ರಜರಿಗೆ ಭಿನ್ನಾಭಿಪ್ರಾಯವಿದೆ.

ಜಗತ್ತಿನ ಅತ್ಯಂತ ಪುರಾತನ ನಾಗರಿಕತೆಯನ್ನು ಹೊಂದಿರುವ ಭಾರತದ ಭೂ ವ್ಯಾಪ್ತಿಯಲ್ಲಿ ಹಲವಾರು ಐತಿಹಾಸಿಕ ಕಟ್ಟಡಗಳನ್ನು ನಿರ್ಮಿಸುವ ಮೊದಲು ಅದಕ್ಕೂ ಮೊದಲು ಅಲ್ಲಿದ್ದ ಕಟ್ಟಡಗಳನ್ನು ನಾಶ ಪಡಿಸಿಯೇ ನಿರ್ಮಿಸಲಾಗಿದೆ.

ಬಹುತೇಕ ಬೌದ್ಧ ವಿಹಾರಗಳಲ್ಲಿ ಹಿಂದೂ ಮಂದಿರಗಳನ್ನು ನಿರ್ಮಿಸಲಾಗಿದೆ. ಮಂದಿರಗಳನ್ನು ಒಡೆದು ಮಸೀದಿಯನ್ನು ನಿರ್ಮಿಸಲಾಗಿದೆ. ಮಸೀದಿಗಳನ್ನು ಒಡೆದು ಮಂದಿರಗಳನ್ನು ನಿರ್ಮಿಸಲಾಗುತ್ತಿದೆ. ಹೀಗಾಗಿ ೧೬ನೆ ಶತಮಾನದಲ್ಲಿ ಮಂದಿರವನ್ನು ಒಡೆದು ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದ್ದರೂ, ಅದಕ್ಕೆ ೨೧ನೆ ಶತಮಾನದಲ್ಲಿ ಯಾವ ಕಾನೂನು ಸಮರ್ಥನೆ ಇರಲು ಸಾಧ್ಯ? ಆಸ್ತಿ ವಿವಾದವನ್ನು ಇತ್ಯರ್ಥಗೊಳಿಸಲು ಇಂತಹ ಧ್ವಂಸಗಳೇ ಆಧಾರವಾದರೆ, ಇದು ಎಲ್ಲಿಗೆ ಹೋಗಿ ನಿಲ್ಲಬಹುದು? ವಾರಣಾಸಿಯಲ್ಲಿನ ಗ್ಯಾನ್‌ವಪಿ ಮಸೀದಿಯಲ್ಲಿ ಹಿಂದೂ ಮಂದಿರದ ಅವಶೇಷಗಳಿವೆ. ಮೂಲತ: ಅದೊಂದು ವಿಶ್ವನಾಥ ಮಂದಿರವೆಂದು ವಾದಿಸಲಾಗುತ್ತಿದೆ.

ತಮಗೆ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿರುವ ಭೂಮಿಯಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಬಹುತೇಕ “ಹಿಂದೂ”ಗಳ “ನಂಬಿಕೆ”ಯಾಗಿದೆ. ಬಾಬರಿ ಮಸೀದಿಯ ಧ್ವಂಸಕ್ಕೆ ಸಂಬಂಧಿಸಿ ಸೃಷ್ಟಿಸಲಾದ ಚಳವಳಿಯು ಭಾರತದಲ್ಲಿ ಸುಲಭವಾಗಿ ಅಧಿಕಾರಕ್ಕೆ ಬರಲು ಮತ್ತು ತೀವ್ರಗತಿಯಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸಲು ರಾಜಕೀಯ ಪಕ್ಷಗಳಿಗೆ ಹಿಂದೆಂದೂ ಕಂಡರಿಯದ ಮಾರ್ಗವಾಗಿತ್ತು.

ಬಾಬರಿ ಮಸೀದಿಯ ಅಡಿಯಲ್ಲಿ ಮಂದಿರವಿತ್ತೆಂಬ ಭಾರತೀಯ ಪುರಾತತ್ವ ಇಲಾಖೆಯ ದೋಷಪೂರಿತ ವರದಿಯನ್ನು ಊಹೆಯ ಆಧಾರದಲ್ಲಿ ನಿರ್ಮಿಸಲಾಗಿದೆಯೇ ಹೊರತು, ಯಾವುದೇ ವೈಜ್ಞಾನಿಕ ಆಧಾರದಲ್ಲಿ ಅಲ್ಲ. ಭಾರ ತೀಯ ಪುರಾತತ್ವ ಇಲಾಖೆಯಾಗಲೀ ಅಥವಾ ಇತರ ಯಾವುದೇ ತಜ್ಞರಾಗಲೀ ಈ ಕುರಿತಾದ ವೈಜ್ಞಾನಿಕ ವಿವರಣೆ ಗಳನ್ನು ನೀಡಿಲ್ಲ. ಮಂದಿರವನ್ನು ಧ್ವಂಸಗೊಳಿಸಿದ ಬಳಿಕ ಮಸೀದಿ ಯನ್ನು ನಿರ್ಮಿಸಲಾಗಿದೆ ಎಂದು ಮೂವರು ನ್ಯಾಯಾಧೀಶರ ಪೈಕಿ ಇಬ್ಬರು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ.

೧೯ನೆ ಶತಮಾನಕ್ಕೆ ಮುನ್ನ ಆ ಸ್ಥಳದ ಬಗ್ಗೆ ಯಾವುದೇ ಮಾಹಿತಿಯಿಲ್ಲವಾದರೂ, ಆನಂತರ ಈ ವಿವಾದಿತ ತಾಣದಲ್ಲಿ ಹಿಂದೂ ಮತ್ತು ಮುಸ್ಲಿಮರು ಆರಾಧಿಸುತ್ತಿದ್ದ ಬಗ್ಗೆ ನಮಗೆ ತಿಳಿದಿದೆ.

ಮುಸ್ಲಿಮರು ಬಾಬರಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರೆ, ಹಿಂದೂಗಳು ರಾಮ ಚಬೂತ್ರದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಅವೆರಡೂ ಮಸೀದಿ ಆವರಣದಲ್ಲಿದ್ದವು.

ಈ ಸಂಪ್ರದಾಯವು ೧೯೪೯ರಲ್ಲಿ ರಾಜಕೀಯ ದುರುದ್ದೇಶ ಪೂರಿತ ವ್ಯಕ್ತಿಗಳು ಮಸೀದಿಯೊಳಗೆ ನುಗ್ಗಿ ರಾಮಲಲ್ಲಾನ ಪ್ರತಿಮೆಯನ್ನು ಪ್ರತಿಷ್ಠಾಪಿಸುವವರೆಗೂ ಸಹಜವಾಗಿ ನಡೆದುಕೊಂಡು ಬಂದಿತ್ತು. ೧೯೪೯ರ ಬಳಿಕ ೧೯೮೬ರಲ್ಲಿ ಹಿಂದೂಗಳಿಗೆ ದರ್ಶನಕ್ಕೆ ಅವಕಾಶ ನೀಡುವವರೆಗೂ ಎರಡೂ ಸಮುದಾಯಗಳಿಗೂ ಅಲ್ಲಿ ಪ್ರವೇಶಿಸುವ ಅವಕಾಶವಿರಲಿಲ್ಲ.

ವಿವಾದಿತ ಭೂಮಿಯನ್ನು ಮೂರು ಪಾಲುಗಳನ್ನಾಗಿ ಮಾಡುವ ಮೂಲಕ ಈ ಬಿಕ್ಕಟ್ಟಿನಲ್ಲಿ ರಾಜಕಾರಣಿಗಳು ಮೂಗು ತೂರಿಸುವ ಮೊದಲು ಇದ್ಧಂತಹ ಧಾರ್ಮಿಕ ಯಥಾಸ್ಥಿತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹೈಕೋರ್ಟ್ ಪುಟ್ಟ ಹೆಜ್ಜೆಯೊಂದನ್ನು ಇರಿಸಿದೆ.

ಈ ಕುರಿತಾದ ತರ್ಕ ಅಪಾಯಕಾರಿಯಾಗಿದೆ. ಆದರೆ ಸುಪ್ರೀಂ ಕೋರ್ಟ್ ಈ ತಪ್ಪನ್ನು ಸರಿ ಪಡಿಸದಿದ್ದಲ್ಲಿ, ತೀರ್ಪಿನ ಪರಿಣಾಮವು ದೇಶದ ಕಾನೂನು, ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ತೀವ್ರ ಅಪಾಯವನ್ನು ತಂದೊಡ್ಡಲಿದೆ.

No comments:

Post a Comment