Monday, October 11, 2010

ಭಾರತವು ನಿಜವಾಗಿಯೂ ಬಲಾಢ್ಯ ಶಕ್ತಿಯಾಗಿ ರೂಪುಗೊಳ್ಳುತ್ತಿದೆಯೇ

ಅರುಂಧತಿ ರಾಯ್

ಭಾರತದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ಯ ಶೇ.೨೫ರಷ್ಟು ಸಂಪತ್ತು ಬರೀ ೧೦೦ ಮಂದಿ ಕೋಟ್ಯಾಧಿಪತಿಗಳ ಹಿಡಿತದಲ್ಲಿದೆ. ಭಾರತದ ೮೩ ಕೋಟಿ ಜನರ, ಸರಾಸರಿ ದೈನಂದಿನ ಜೀವನವೆಚ್ಚ ಈಗಲೂ ಕಡಿಮೆ. ಇಂತಹ ಅಸಮಾನತೆಯಿರುವ ಭಾರತದಲ್ಲಿ ಬಂಡವಾಳಶಾಹಿವಾದವು ಹೇಗೆ ದಿನಗಳೆದಂತೆ ಬಲಿಷ್ಠವಾಗುತ್ತಿದೆ ಮತ್ತು ಜನಸಾಮಾನ್ಯರ ಆಶೋತ್ತರಗಳನ್ನು ಹೊಸಕಿಹಾಕುತ್ತದೆ ಎಂಬುದನ್ನು ಅರುಂಧತಿ ರಾಯ್ ವಿವರಿಸಿದ್ದಾರೆ.

ಔಟ್‌ಲುಕ್ ಪತ್ರಿಕೆಯಲ್ಲಿ ಪ್ರಕಟವಾದ ಅವರ ಲೇಖನದ ಭಾವಾನುವಾದ ಇಲ್ಲಿ.

ಭಾರತದ ೬೪ನೆ ಸ್ವಾತಂತ್ರ ದಿನಾಚರಣೆಯಂದು ಪ್ರಧಾನಿ ಮನಮೋಹನ್‌ಸಿಂಗ್, ಕೆಂಪುಕೋಟೆಯ ಮೇಲೆ, ಗುಂಡು ನಿರೋಧಕ ಆವರಣದೊಳಗೆ ನಿಂತು,ಯಾವುದೇ ಭಾವೋದ್ವೇಗವಿಲ್ಲದೆ, ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೊಸತೇನೂ ಇರಲಿಲ್ಲ. ಆದರೆ ಅವರ ಭಾಷಣವನ್ನು ಕೇಳಿದರೆ, ಭಾರತವು ಜಗತ್ತಿನಲ್ಲೇ ಎರಡನೆ ಅತ್ಯಧಿಕ ಆರ್ಥಿಕ ಬೆಳವಣಿಗೆಯನ್ನು ಕಾಣುತ್ತಿರುವ ರಾಷ್ಟ್ರವಾದ ಹೊರತಾಗಿಯೂ, ಅದು ಆಫ್ರಿಕದ ೨೬ ಕಡುಬಡತನದ ರಾಷ್ಟ್ರಗಳ ಒಟ್ಟು ಜನಸಂಖ್ಯೆಗಿಂತಲೂ ಅಧಿಕ ಬಡವರನ್ನು ಹೊಂದಿದೆಯೆಂದು ಯಾರಾದರೂ ಭಾವಿಸಿಯಾರೇ ?.

ಮನಮೋಹನ್‌ಸಿಂಗ್ ಪ್ರಧಾನಿಯಾಗಿ ತನ್ನ ೭ ವರ್ಷಗಳ ಸೇವೆಯುದ್ದಕ್ಕೂ ಸೋನಿಯಾಗಾಂಧಿಯ ವಿನಮ್ರಪೂರ್ವಕ ಹಾಗೂ ಮೃದು ವ್ಯಕ್ತಿತ್ವದ ಸಹಾಯಕನಂತೆ ವರ್ತಿಸಿದ್ದಾರೆ. ಪಶ್ಚಿಮಬಂಗಾಳದ ಮಾಜಿ ಹಣಕಾಸು ಸಚಿವ ಅಶೋಕ್ ಮಿತ್ರಾ ತನ್ನ ಆತ್ಮಕಥೆಯಲ್ಲಿ ಪ್ರಧಾನಿ ಮನಮೋಹನ್‌ಸಿಂಗ್ ಅಧಿಕಾರದ ರಾಜಕೀಯದಲ್ಲಿ ಹೇಗೆ ಮೇಲೆ ಬಂದರೆಂಬುದನ್ನು ವಿವರವಾಗಿ ಬರೆದಿದ್ದಾರೆ. ೧೯೯೧ರಲ್ಲಿ ಭಾರತದ ವಿದೇಶಿ ವಿನಿಮಯವು ಅಪಾಯಕಾರಿ ಮಟ್ಟದಲ್ಲಿ ಕುಸಿದಿದ್ದಾಗ, ಆಗಿನ ನರಸಿಂಹರಾವ್ ಸರಕಾರವು ತುರ್ತು ಸಾಲಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐ‌ಎಂಎಫ್)ಯನ್ನು ಸಂಪರ್ಕಿಸಿತ್ತು. ಆಗ ಐ‌ಎಂಎಫ್ ಎರಡು ಶರತ್ತುಗಳನ್ನು ಒಡ್ಡಿತ್ತು. ಅವುಗಳಲ್ಲಿ ಒಂದನೆಯದು ಸಂರಚನಾತ್ಮಕ ಹೊಂದಾಣಿಕೆ ಹಾಗೂ ಆರ್ಥಿಕ ಸುಧಾರಣೆ. ಎರಡನೆಯದು ತಾನು ಹೆಸರಿಸಿದ ವ್ಯಕ್ತಿಯನ್ನು ಕೇಂದ್ರ ಹಣಕಾಸು ಸಚಿವನಾಗಿ ನೇಮಕಗೊಳಿಸುವುದು. ಆ ವ್ಯಕ್ತಿಯೇ ಮನಮೋಹನ್‌ಸಿಂಗ್.

ಅರ್ಥಸಚಿವನಾಗಿ, ಪ್ರಧಾನಿಯಾಗಿ ಅಧಿಕಾರ ನಿರ್ವಹಿಸಿದ ಹಲವು ವರ್ಷಗಳಿಂದ ಮನಮೋಹನ್‌ಸಿಂಗ್ ತನ್ನ ಸಂಪುಟದಲ್ಲಿ ಮತ್ತು ಅಧಿಕಾರವರ್ಗದಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳ ರಕ್ಷಣೆಗೆ ಬದ್ಧರಾಗಿರುವ ವ್ಯಕ್ತಿಗಳನ್ನೇ ನುಗ್ಗಿಸುತ್ತಾ ಬಂದರು. ಜಲ,ವಿದ್ಯುತ್, ಖನಿಜಗಳು, ಕೃಷಿ, ಭೂಮಿ,ದೂರಸಂಪರ್ಕ, ಶಿಕ್ಷಣ, ಆರೋಗ್ಯ ಈ ಎಲ್ಲ ಕ್ಷೇತ್ರಗಳಲ್ಲಿ ಕಾರ್ಪೊರೇಟ್‌ರಂಗದ ಹಿತಾಸಕ್ತಿಯನ್ನು ಯಾರು ಸಂರಕ್ಷಿಸುತ್ತಾರೋ ಅವರೆಲ್ಲರನ್ನೂ ಪ್ರಧಾನಿ ಪೋಷಿಸಿದರು.

ಸೋನಿಯಾಗಾಂಧಿ ಹಾಗೂ ಅವರ ಪುತ್ರ ಈ ಎಲ್ಲದರಲ್ಲೂ ಪ್ರಮುಖ ಪಾತ್ರವನ್ನು ವಹಿಸಿದರು. ಸಹಾನುಭೂತಿ ಹಾಗೂ ವರ್ಚಸ್ಸಿನ್ನೇ ಬಂಡವಾಳವಾಗಿಟ್ಟುಕೊಂಡು, ಚುನಾವಣೆಗಳಲ್ಲಿ ಜಯಗಳಿಸುವುದೇ ಇವರಿಬ್ಬರ ವೃತ್ತಿಯಾಗಿದೆ. ಪ್ರಗತಿಪರವೆಂಬಂತೆ ತೋರುವ, ಆದರೆ ನಿಜವಾಗಿಯೂ ತಂತ್ರಗಾರಿಕೆಯ ನಿರ್ಧಾರಗಳನ್ನು ಕೈಗೊಳ್ಳಲು ಅವರಿಗೆ ಅವಕಾಶವಿದೆ. ಸರಕಾರದ ನಿರ್ಧಾರಗಳ ವಿರುದ್ಧ ಭುಗಿಲೇಳುವ ಜನಾಕ್ರೋಶವನ್ನು ತಣಿಸಿ, ಸರಕಾರದ ರಥವು ಸುಗಮವಾಗಿ ನಡೆಯುವಂತೆ ಮಾಡುವುದೇ ಇವರ ತಂತ್ರಗಾರಿಕೆಯಾಗಿದೆ. ಒರಿಸ್ಸಾದ ನ್ಯಾಮಗಿರಿ ಪ್ರದೇಶದಲ್ಲಿ ಬಾಕ್ಸೆಟ್ ಗಣಿಗಾರಿಕೆಗೆ ಅನುಮತಿ ರದ್ದುಗೊಂಡ ಪ್ರಯುಕ್ತ ರಾಹುಲ್‌ಗಾಂಧಿಯ ನೇತೃತ್ವದ ಆಯೋಜಿಸಲಾದ ರ‍್ಯಾಲಿ ಈ ತಂತ್ರಗಾರಿಕೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ರ‍್ಯಾಲಿಯಲ್ಲಿ ರಾಹುಲ್‌ಗಾಂಧಿ ತಾನು ಬುಡಕಟ್ಟು ಜನರ ಸೈನಿಕನೆಂದು ಘೋಷಿಸಿಕೊಂಡಿದ್ದರು. ತನ್ನ ಪಕ್ಷದ ಆರ್ಥಿಕ ನೀತಿಗಳೇ, ಬುಡಕಟ್ಟು ಜನರ ಸಾಮೂಹಿಕ ಸ್ಥಳಾಂತರಕ್ಕೆ ಮುಖ್ಯ ಕಾರಣವೆಂಬುದನ್ನು ಅವರು ತನ್ನ ಭಾಷಣದಲ್ಲಿ ಪ್ರಸ್ತಾಪಿಸಲಿಲ್ಲ. ಮಾತ್ರವಲ್ಲದೆ ನ್ಯಾಮಗಿರಿಯ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಬಾಕ್ಸೆಟ್ ಗಣಿಗಾರಿಕೆಯ ಬಗ್ಗೆ ಈ ‘ಬುಡಕಟ್ಟು ಯೋಧ’ ಚಕಾರ ಎತ್ತಲಿಲ್ಲ.

ಇನ್ನೂ ಕೇಂದ್ರ ಸಂಪುಟದ ಹಿರಿಯ ಸದಸ್ಯರಾದ ಪಿ.ಚಿದಂಬರಂ ಪ್ರತಿಪಕ್ಷೀಯರಲ್ಲೂ ಎಷ್ಟು ಜನಪ್ರಿಯರಾಗಿದ್ದಾರೆಂದರೆ, ಒಂದು ವೇಳೆ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡರೂ, ಅವರು ಮಾತ್ರ ಗೃಹ ಸಚಿವರಾಗಿಯೇ ಮುಂದುವರಿಯಬಹುದಾಗಿದೆ. ಅವರಿಗೆ ನಿಯೋಜಿಸಲಾದ ಕಾರ್ಯವೊಂದನ್ನು ಪೂರ್ಣಗೊಳಿಸಲು ಅವರಿಗೆ ತನ್ನ ಅಧಿಕಾರಾವಧಿಯಲ್ಲಿ ಇನ್ನೂ ಕೆಲವು ವರ್ಷಗಳು ಬೇಕಾಗಬಹುದು. ಅಕ್ಟೋಬರ್ ೨೦೦೭ರಲ್ಲಿ ಹಾರ್ವರ್ಡ್ ವಿ.ವಿ.ಯಲ್ಲಿ ಅವರು “ಬಡತನದಲ್ಲಿರುವ ಶ್ರೀಮಂತ ರಾಷ್ಟ್ರಗಳು: ಅಭಿವೃದ್ಧಿಯ ಸವಾಲುಗಳು” ಎಂಬ ವಿಷಯದ ಬಗ್ಗೆ ಉಪನ್ಯಾಸದಲ್ಲಿ ಆ ಕಾರ್ಯದ ರೂಪುರೇಷೆಗಳನ್ನು ಬಿಚ್ಚಿಟ್ಟಿದ್ದರು. ಅದರ ಸಾರಾಂಶ ಹೀಗಿದೆ.

“ ಭಾರತವು ಕಬ್ಬಿಣದ ಆದಿರು, ಮ್ಯಾಂಗನೀಸ್,ಮೈಕಾ, ಬಾಕ್ಸೆಟ್, ಟೈಟಾನಿಯಂ ಆದಿರು, ಕ್ರೊಮೈಟ್, ವಜ್ರಗಳು,ನೈಸರ್ಗಿಕ ಅನಿಲ, ಪೆಟ್ರೋಲಿಯಂ ಹಾಗೂ ಸೀಮೆಸುಣ್ಣ ಸೇರಿದಂತೆ ಜಗತ್ತಿನಲ್ಲೇ ನಾಲ್ಕನೆ ಅತ್ಯಧಿಕ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ದೇಶವಾಗಿದೆ. ನಾವು ಈ ಸಂಪನ್ಮೂಲಗಳನ್ನು ತ್ವರಿತವಾಗಿ ಹಾಗೂ ದಕ್ಷತೆಯಿಂದ ಗಣಿಗಾರಿಕೆ ನಡೆಸಬೇಕಾಗಿದೆ. ಅದಕ್ಕೆ ಭಾರೀ ಬಂಡವಾಳದ ಅಗತ್ಯವಿದೆ. ಮಾರುಕಟ್ಟೆಯ ಶಕ್ತಿಗಳು ಕಾರ್ಯನಿರ್ವಹಿಸುವಂತಹ ದಕ್ಷ ಸಂಘಟನೆಗಳು ಹಾಗೂ ನೀತಿಯ ಅಗತ್ಯವಿದೆ. ಇಂದಿನ ಗಣಿಗಾರಿಕಾ ವಲಯದಲ್ಲಿ ಅಂತಹ ಯಾವುದೇ ಅಂಶಗಳು ಕಾಣುತ್ತಿಲ್ಲ. ಆ ಕುರಿತ ಕಾನೂನುಗಳು ತೀರಾ ಹಳೆಯದಾಗಿವೆ. ಗಣಿಗಾರಿಕೆಯಲ್ಲಿ ಬೃಹತ್ ಪ್ರಮಾಣದಲ್ಲಿ ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ನಮ್ಮ ಪ್ರಯತ್ನಗಳು ವಿಫಲವಾಗಿವೆ. ಏತನ್ಮಧ್ಯೆ ಗಣಿಗಾರಿಕೆ ವಲಯವು ರಾಜ್ಯ ಸರಕಾರಗಳ ಕಪಿಮುಷ್ಟಿಯಲ್ಲಿ ಬಂಧಿತವಾಗಿದೆ. ಅರಣ್ಯ , ಪರಿಸರ ಅಥವಾ ಬುಡಕಟ್ಟು ಜನರ ಹಿತಾಸಕ್ತಿಗಳನ್ನು ಪ್ರತಿಪಾದಿಸುವ ಗುಂಪುಗಳು, ಪ್ರಸಕ್ತ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ವಿರೋಧಿಸುತ್ತಿವೆ. ಗಣಿಗಾರಿಕೆಯು ರಾಜ್ಯದ ಏಕಸ್ವಾಮ್ಯವೆಂದು ಭಾವಿಸುವ ರಾಜ್ಯ ಸರಕಾರಗಳಿವೆ ಮತ್ತವು ಖಾಸಗಿ ವಲಯದ ಪ್ರವೇಶವನ್ನು ತಾತ್ವಿಕವಾಗಿ ವಿರೋಧಿಸುತ್ತಿವೆ. ಇದಕ್ಕಾಗಿ ಅವು ಕಾರ್ಮಿಕ ಸಂಘಟನೆಗಳ ಬೆಂಬಲವನ್ನು ಪಡೆಯುತ್ತಿವೆ. ಇವೆಲ್ಲದರ ಪರಿಣಾಮವಾಗಿ ಗಣಿಗಾರಿಕೆಯಲ್ಲಿ ನೈಜ ಹೂಡಿಕೆ ತೀರಾ ಕಡಿಮೆ”.

ಮಾರುಕಟ್ಟೆ ಶಕ್ತಿಗಳಿಗೆ, ಗಣಿ ಸಂಪನ್ಮೂಲಗಳನ್ನು ದಕ್ಷವಾಗಿ ಹಾಗೂ ತ್ವರಿತವಾಗಿ ಬಳಸಿಕೊಳ್ಳಲು ಅವಕಾಶ ನೀಡುವ ಕ್ರಮವನ್ನು ಒಂದು ಕಾಲದಲ್ಲಿ ವಸಾಹತುಶಾಹಿ ಶಕ್ತಿಗಳು ತಮ್ಮ ವಸಾಹತುಗಳಲ್ಲಿ ಅನುಸರಿಸಿದ್ದವು. ಸ್ಪೇನ್ ಹಾಗೂ ಉತ್ತರ ಅಮೆರಿಕಗಳು ದಕ್ಷಿಣ ಅಮೆರಿಕದಲ್ಲಿ,ಯುರೋಪಿಯನ್ ರಾಷ್ಟ್ರಗಳು ಆಫ್ರಿಕದಲ್ಲಿ ಮಾಡಿದ್ದು ಕೂಡಾ ಇದೇ.

ಬುಡಕಟ್ಟು ಜನತೆಯ ಹಕ್ಕುಗಳ ದಮನಕ್ಕೆ ಸಂವಿಧಾನವನ್ನೇ ಉಲ್ಲಂಘಿಸುತ್ತಿರುವ ಸರಕಾರ

ಗಣಿಗಾರಿಕೆಗಾಗಿ ಏರ್ಪಟ್ಟ ತಿಳುವಳಿಕಾ ಒಪ್ಪಂದಗಳನ್ನು ಮರುಪರಿಶೀಲಿಸಬೇಕೆಂದು ಸರಕಾರಿ ವರದಿಯೊಂದು ಆಗ್ರಹಿಸಿತ್ತು. ಆದರೆ ಈ ವರದಿಗೆ ಸರಕಾರದಿಂದ ದೊರೆತ ಪ್ರತಿಕ್ರಿಯೆಯಾದರೊ ನಿರಾಶಾದಾಯಕವಾಗಿತ್ತು. ಎಪ್ರಿಲ್ ೨೪,೨೦೧೦ರಲ್ಲಿ ಔಪಚಾರಿಕ ಸಮಾರಂಭವೊಂದರಲ್ಲಿ ಪ್ರಧಾನಿಯು ಈ ವರದಿಯನ್ನು ಬಿಡುಗಡೆಗೊಳಿಸಿದರು. ಆದರೆ ಅದು ಕೆಲವೇ ದಿನಗಳಲ್ಲಿ ಮೂಲೆಗುಂಪಾಯಿತು.

೨೦೦೯ರಲ್ಲಿ ಮನಮೋಹನ್‌ಸಿಂಗ್ ಸಂಸತ್‌ನಲ್ಲಿ ಮಾತನಾಡುತ್ತಾ “ಎಡಪಂಥೀಯ ತೀವ್ರವಾದವು, ದೇಶದಲ್ಲಿ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಬೆಳೆಯುತ್ತಿದೆ. ಇದು ಹೂಡಿಕೆಯ ವಾತಾವರಣದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಭಾರತದಲ್ಲಿ ಸದ್ಯದ ಸನ್ನಿವೇಶದಲ್ಲಿ ನಡೆಯುತ್ತಿರುವ ವಿವಿಧ ಹೋರಾಟಗಳ ಬಗ್ಗೆ ಗಮನಹರಿಸಿದಲ್ಲಿ, ಜನತೆ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಆಗ್ರಹಿಸುತ್ತಿದ್ದಾರೆಯೇ ಹೊರತು ಬೇರ‍್ಯಾವುದಕ್ಕೂ ಅಲ್ಲವೆಂಬುದು ಮನದಟ್ಟಾಗುತ್ತದೆ. ಆದರೆ ಭಾರತ ಸರಕಾರವು ಮಾತ್ರ ಭಾರತದ ಸಂವಿಧಾನಕ್ಕೆ ಬದ್ಧವಾಗಿ ನಡೆಯುವ ಕಾಳಜಿಯನ್ನು ವಹಿಸಿಲ್ಲ. ಅದು ಸಂವಿಧಾನವನ್ನು ಜನತೆಯ ರಕ್ಷಣೆಗಾಗಿ ಬಳಸುತ್ತಿಲ್ಲ. ಅದಕ್ಕೆ ಬದಲಾಗಿ ಹೆಚ್ಚುತ್ತಿರುವ ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸುತ್ತಿರುವ ಜನರನ್ನು ಹತ್ತಿಕ್ಕಲು ಸಂವಿಧಾನವನ್ನೇ ಆಸ್ತ್ರವಾಗಿ ಸರಕಾರ ಬಳಸಿಕೊಳ್ಳುತ್ತಿದೆ.

ಖ್ಯಾತ ಪತ್ರಕರ್ತ ಬಿ.ಜಿ. ವUಸ್,ಔಟ್‌ಲುಕ್ ಪತ್ರಿಕೆಯ ಮೇ ೩ರ ಸಂಚಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಸರಕಾರ ಮತ್ತು ಬೃಹತ್ ಕಾರ್ಪೊರೇಟ್ ಸಂಸ್ಥೆಗಳನ್ನು ಬೆಂಬಲಿಸುತ್ತಾ “ಪ್ರಜಾತಾಂತ್ರಿಕ ಭಾರತದಲ್ಲಿ ಮಾವೊವಾದಿಗಳು ಶೀಘ್ರವೇ ಮರೆಯಾಗಲಿದ್ದಾರೆ ಮತ್ತು ಸಂವಿಧಾನವು ವಿಜಯಶಾಲಿಯಾಗಲಿದೆ. ಆದರೆ ಇದಕ್ಕೆ ಸ್ವಲ್ಪ ಸಮಯ ತಗಲಬಹುದು ಹಾಗೂ ನೋವನ್ನು ಅನುಭವಿಸಬೇಕಾಗಬಹುದು” ಎಂದು ಹೇಳಿದ್ದರು.

ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಮಾವೊವಾದಿ ನಾಯಕ ಆಝಾದ್, ತನ್ನ ಸಾವಿಗೆ ಕೆಲವೇ ತಿಂಗಳುಗಳ ಮುನ್ನ ಈ ಲೇಖನಕ್ಕೆ ಬರೆದ ಉತ್ತರ ಹೀಗಿತ್ತು. ಅದನ್ನು ಔಟ್‌ಲುಕ್ ಪತ್ರಿಕೆಯು ಜುಲೈ ೧೧,೨೦೧೦ರ ಸಂಚಿಕೆಯಲ್ಲಿ ಪ್ರಕಟಿಸಿತ್ತು.

“ಶ್ರೀಮಾನ್ ವUಸ್‌ರವರೇ ಭಾರತದ ಯಾವ ಭಾಗದಲ್ಲಿ ಸಂವಿಧಾನವು ಮೇಲುಗೈ ಸಾಧಿಸಿದೆ?. ದಾಂತೆವಾಡ, ಬಿಜಾಪುರ್,ಕಂಕೇರ್, ನಾರಾಯಣ್‌ಪುರ್, ರಾಜಾನಂದ್‌ಗಾಂವ್‌ಗಳಲ್ಲಿಯೇ?, ಜಾರ್ಖಂಡ್, ಒರಿಸ್ಸಾದಲ್ಲೇ?. ಮಣಿಪುರದಲ್ಲೇ?. ೨೫ ವರ್ಷಗಳ ಹಿಂದೆ ಸಾವಿರಾರು ಸಿಖ್ಖರ ಮಾರಣಹೋಮ ನಡೆದಾಗ ನಿಮ್ಮ ಸಂವಿಧಾನವು ಎಲ್ಲಿ ಅಡಗಿತ್ತು?. ಸಾವಿರಾರು ಮುಸ್ಲಿಮರ ಹತ್ಯಾಕಾಂಡವಾದಾಗ ಅದು ಎಲ್ಲಿತ್ತು ?. ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಮತ್ತು ಸರಕಾರಿ ಪ್ರಾಯೋಜಿತ ಸಲ್ವಾ ಜುಡುಂ ಗ್ಯಾಂಗ್‌ಗಳು ಸಾವಿರಾರು ಜನರನ್ನು ಕೊಂದುಹಾಕುವಾಗ, ಅಮಾಯಕರನ್ನು ಖಾಕಿ ಸಮವಸ್ತ್ರದ ಗೂಂಡಾಗಳು ಅಪಹರಿಸುವಾಗ ಸಂವಿಧಾನ ಎಲ್ಲಿಗೆ ಹೋಗಿತ್ತು ?” ಎಂದು ಆಜಾದ್ ಸವಾಲು ಹಾಕಿದ್ದರು.

ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಬುಡಕಟ್ಟು ಜನರು ಅತ್ಯಧಿಕ ಸಂಖ್ಯೆಯಲ್ಲಿರುವ ಪ್ರಾಂತ್ಯಗಳು, ಭಾರತ ಸರಕಾರಕ್ಕೆ ಮಾತ್ರವಲ್ಲ, ಪ್ರತಿರೋಧ ಚಳವಳಿಗೂ ಸಹ ದೊಡ್ಡ ಸವಾಲಾಗಿ ಪರಿಣಮಿಸಿವೆ.

ಈಗ ಸರಕಾರವು ಭಾವಿಸಿರುವಂತಹ ಪ್ರಗತಿ, ಅಭಿವೃದ್ಧಿ ಮತ್ತು ನಾಗರಿಕತೆಯೆಂಬ ಪದಗಳ ನಿಜವಾದ ಅರ್ಥವೇನೆಂಬುದನ್ನು ಈ ಪ್ರದೇಶಗಳು ಪ್ರಶ್ನಿಸತೊಡಗಿವೆ. ಈ ಬುಡಕಟ್ಟು ಜನರು ಛತ್ತೀಸ್‌ಗಡ ಮುಕ್ತಿ ಮೋರ್ಚಾ, ಕೊಯೆಲ್ ಕರೊ ಹಾಗೂ ಗಂಧಮಾರ್ಧನ ಚಳವಳಿಗಳ ಮೂಲಕ ಹಲವಾರು ವರ್ಷಗಳತನಕ ಶಾಂತಿಯುತವಾಗಿ ತಮ್ಮ ನ್ಯಾಯಬದ್ಧ ಹಕ್ಕುಗಳನ್ನು ಕೇಳುತ್ತಲೇ ಬಂದಿದ್ದಾರೆ. ನರ್ಮದಾ ಕಣಿವೆಯಲ್ಲಿ ನರ್ಮದಾ ನದಿಗೆ ಕಟ್ಟಲಾಗುವ ಅಣೆಕಟ್ಟನ್ನು ಪ್ರತಿಭಟಿಸಿ ನಡೆಸಲಾದ ನರ್ಮದಾ ಬಚಾವೊ ಆಂದೋಲನದಲ್ಲೂ ಸಂತ್ರಸ್ತ ಬಡ ಬುಡಕಟ್ಟು ಜನರು ನ್ಯಾಯಕ್ಕಾಗಿ ಹಲವು ವರ್ಷಗಳ ಹೋರಾಟ ನಡೆಸಿದ್ದರು. ಆದರೆ ಅವೆಲ್ಲವೂ ನೀರಲ್ಲಿ ಹೋಮವಿರಿಸಿದ ಹಾಗೆ ನಿಷ್ಪಲವಾಯಿತು.

ಈ ಅನ್ಯಾಯಗಳ ವಿರುದ್ಧ ಹೋರಾಡಿದವರಿಗೆ ಭಾರತದಲ್ಲಿ ತುರ್ತು ಪರಿಸ್ಥಿತಿಯೆಂಬ ಭಾವನೆ ಮೂಡಿದೆ. ಕಾಶ್ಮೀರ, ಮಣಿಪುರ, ನಾಗಲ್ಯಾಂಡ್ ಹಾಗೂ ಅಸ್ಸಾಂಗಳ ಜನತೆಯಂತೆ,ತಮ್ಮ ನಾಗರಿಕ ಹಕ್ಕುಗಳನ್ನು ಕೂಡಾ ಕಿತ್ತುಕೊಂಡಿರುವುದು ಬಂಡೆದ್ದ ಬುಡಕಟ್ಟು ಜನರ ಅನುಭವಕ್ಕೆ ಬಂದಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯು‌ಎಪಿ‌ಎ)ಹಾಗೂ ಛತ್ತೀಸ್‌ಗಡ ವಿಶೇಷ ಸಾರ್ವಜನಿಕ ಭದ್ರತಾ ಕಾಯ್ದೆ (ಸಿ‌ಎಸ್‌ಪಿಸಿ‌ಎ)ಯು ಮಾತು ಹಾಗೂ ಕೃತಿಗಳ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುತ್ತದೆ.

ಮಾವೊವಾದಿಗಳನ್ನು ಸದೆಬಡಿಯುವ ನೆಪದಲ್ಲಿ ಬಡವರ ವಿರುದ್ಧ ಸಮರ

ಕಳೆದ ಕೆಲವು ತಿಂಗಳುಗಳಿಂದ, ಸರಕಾರವು ಮಾವೊವಾದಿಗಳ ಪ್ರಾಬಲ್ಯವಿರುವ ಪ್ರದೇಶಗಳ ದಟ್ಟಾರಣ್ಯಗಳಲ್ಲಿ ಸಾವಿರಾರು ಸಶಸ್ತ್ರ ಅರೆಸೈನಿಕ ಪಡೆಗಳನ್ನು ಜಮಾಯಿಸುತ್ತದೆ. ಇದಕ್ಕೆ ಪ್ರತ್ಯುತ್ತರವಾಗಿ ಮಾವೊವಾದಿಗಳು, ಭದ್ರತಾಪಡೆಗಳ ಮೇಲೆ ಆಕ್ರಮಣಕಾರಿ ದಾಳಿಗಳನ್ನು ನಡೆಸುತ್ತಿದ್ದಾರೆ. ಆ ಸಂದರ್ಭಗಳಲ್ಲಿ ಭುಗಿಲೇಳುತ್ತಿರುವ ಘರ್ಷಣೆಗಳಲ್ಲಿ ೨೦೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಸಾವಿUಡಾಗಿದ್ದಾರೆ. ಅವರ ಶವಗಳನ್ನು ಅರಣ್ಯದಿಂದ ಹೊರತಂದು, ರಾಷ್ಟ್ರಧ್ವಜದಲ್ಲಿ ಸುತ್ತಿ ಗೌರವಗಳನ್ನು ಸಲ್ಲಿಸುತ್ತದೆ.ಮಾವೊವಾದಿಗಳ ಬರ್ಬರ ಹತ್ಯಾಕಾಂಡಗಳನ್ನು ನಡೆಸಲು ಸರಕಾರಕ್ಕೆ ಇದೊಂದು ಉತ್ತಮ ನೆಪವಾಗಿ ಬಿಡುತ್ತದೆ. ದಟ್ಟಾರಣ್ಯಗಳಲ್ಲಿ ನಡೆದ ಕಾಳಗಳಲ್ಲಿ ಸತ್ತ ಮಾವೊವಾದಿ ಗಳ ವಿಛಿದ್ರಗೊಂಡ, ಶಿರಚ್ಛೇದನಗೊಂಡ ಶವಗಳನ್ನು ಮಣ್ಣುಪಾಲು ಮಾಡಿದಾಗ, ಅವರ ಕುಟುಂಬಗಳಾಗಲಿ, ಬಂಧುಗಳಾಗಲಿ ಇರುವುದಿಲ್ಲ.

ಎಪ್ರಿಲ್ ೬, ೨೦೧೦ರಲ್ಲಿ ಜನತಾ ವಿಮೋಚನಾ ಗೆರಿಲ್ಲಾ ಸೇನೆ(ಪಿ‌ಎಲ್‌ಜಿ‌ಎ) ಯು ದಾಂತೆವಾಡದಲ್ಲಿ ನಡೆಸಿದ ಅತ್ಯಂತ ಭೀಕರ ದಾಳಿಯೊಂದರಲ್ಲಿ ೭೬ ಸಿ‌ಆರ್‌ಪಿ‌ಎಫ್ ಸಿಬ್ಬಂದಿಗಳನ್ನು ಬರ್ಬರವಾಗಿ ಹತ್ಯೆಗೈಯಿತು. ಬಳಿಕ ಪಿ‌ಎಲ್‌ಜಿ‌ಎ, ತಾನು ನಡೆಸಿದ ಬರ್ಬರ ಹತ್ಯಾಕಾಂಡದ ಬಗ್ಗೆ ಬಹಿರಂಗ ಹೇಳಿಕೆ ನೀಡಿತು.

ಟಿವಿ ಚಾನೆಲ್‌ಗಳು ಈ ಹತ್ಯಾಕಾಂಡದ ಸುದ್ದಿಗಳನ್ನು ರಸವತ್ತಾಗಿ ಪ್ರಸಾರ ಮಾಡಿತು. ಆದರೆ ದುರಂತವೆಂದರೆ ಮಾವೊವಾದಿಗಳ ಪರ ಸಹಾನುಭೂತಿ ಹೊಂದಿದವರಿಗೂ ಕೂಡಾ ಈ ಹತ್ಯಾಕಾಂಡದ ಬೆಂಬಲಿಗರೆಂಬ ಹಣೆಪಟ್ಟಿಯನ್ನು ಸರಕಾರವು ಕಟ್ಟಿರುವುದು.

ಆದರೆ ಅಮಾಯಕ ಗ್ರಾಮಸ್ಥರೇ ತುಂಬಿರುವ ಹಳ್ಳಿಗಳಲ್ಲಿ ಸಿ‌ಆರ್‌ಪಿ‌ಎಫ್‌ನ ಒಂದು ತುಕಡಿಯು ೨೧ ಎಕೆ೪೭ ರೈಫಲ್‌ಗಳು, ೩೮ ಐ‌ಎನ್‌ಎಸ್‌ಎ‌ಎಸ್ ರೈಫಲ್‌ಗಳು, ಏಳು ಎಸ್‌ಎಲ್‌ಆರ್‌ಗಳು, ಆರು ಲಘುಮೆಶಿನ್‌ಗನ್‌ಗಳು, ಒಂದು ಸ್ಟೆನ್‌ಗನ್ ಮತ್ತಿತರ ಮಾರಕ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಗಸ್ತು ತಿರುಗುವ ಅಗತ್ಯವಾದರೂ ಏನಿದೆ ?. ಈ ಪ್ರಶ್ನೆಯನ್ನೇ ಕೇಳಿದರೆ, ಅದೊಂದು ದೇಶದ್ರೋಹದ ಕೃತ್ಯವಾಗಿಬಿಡುತ್ತದೆ.

ಈ ಘಟನೆ ನಡೆದ ಕೆಲವೇ ದಿನಗಳ ಬಳಿಕ, ದಿಲ್ಲಿಯ ವಾಹನ ಪಾರ್ಕಿಂಗ್ ಸ್ಥಳವೊಂದರಲ್ಲಿ ಹರಟೆ ಹೊಡೆಯುತ್ತಿದ್ದ ಅರೆಸೈನಿಕ ಪಡೆಗಳ ಕಮಾಂಡೊಗಳ ಸಂಭಾಷಣೆಯನ್ನು ಅಲಿಸುವ ಅವಕಾಶ ನನಗೆ ಒದಗಿತ್ತು. ಅರೆಸೈನಿಕ ಪಡೆಯಲ್ಲಿ ಒಬ್ಬ ಉದ್ಯೋಗ ದೊರೆಯಬೇಕಾದರೆ, ಎಷ್ಟು ಲಕ್ಷ ಸುರಿಯಬೇಕಾಗುತ್ತದೆ ಯೆಂಬ ಬಗ್ಗೆ ಅವರು ಚರ್ಚಿಸುತ್ತಿದ್ದರು. ಉದ್ಯೋಗ ಪಡೆಯಲು ಅವರ ಕುಟುಂಬಗಳು ಸಾಲ ಮಾಡಿಯಾದರೂ ಲಂಚ ಕೊಡುತ್ತಿದ್ದವು. ಆದರೆ ಓರ್ವ ಜವಾನಿಗೆ ದೊರೆಯುವ ಕನಿಷ್ಠ ವೇತನದಲ್ಲಿ ಆ ಸಾಲವನ್ನು ಮರುಪಾವತಿಸು ವುದು ಅಸಾಧ್ಯವೇ ಸರಿ. ಆಗ ಆತ ಹುಡುಕುವ ಇನ್ನೊಂದು ದಾರಿಯೆಂದರೆ, ಉದ್ಯಮಿಗಳಿಗೆ, ಸಂಸ್ಥೆಗಳಿಗೆ ಸುರಕ್ಷತೆಯನ್ನು ಖಾತರಿಪಡಿಸುವ ರ‍್ಯಾಕೆಟ್‌ಗಳನ್ನು ನಡೆಸುತ್ತಾನೆ, ಲಂಚ ಕೇಳುತ್ತಾನೆ. ದಾಂತೆವಾಡದಂತಹ ಹಳ್ಳಿಗಳಲ್ಲಿ ಅರೆಸೈನಿಕ ಯೋಧರು ಗ್ರಾಮಸ್ಥರನ್ನು ದೋಚಲು, ನಗ,ನಗದು ಕದಿಯಲೂ ಹೇಸುವುದಿಲ್ಲ.

ಆದರೆ ಅಂತಹ ಯೋಧರು, ಅಕಾಲಿಕವಾಗಿ ಮರಣವನ್ನಪ್ಪಿದಾಗ ಅವರ ಕುಟುಂಬಗಳು ದಾರಿಗೆ ಬೀಳುತ್ತವೆ.

ಆದರೆ ಮಾವೊವಾದಿಗಳ ವಿರುದ್ಧ ಸಮರ ನಡೆಯುತ್ತಿರುವ ಪ್ರದೇಶಗಳಲ್ಲಿ ಸಿ‌ಆರ್‌ಪಿ‌ಎಫ್ ಸಿಬ್ಬಂದಿಗಳು ಗಸ್ತುತಿರುಗಲು ನಿರಾಕರಿಸಿದ ಘಟನೆಗಳು ಹೆಚ್ಚೆಚ್ಚು ವರದಿಯಾಗತೊಡಗಿವೆ. ಅವರ ತಮ್ಮ ಪಾಳಿ ಪುಸ್ತಕದಲ್ಲಿ ಸಹಿಹಾಕುತ್ತಾರೆಯೇ ಹೊರತು, ಗಸ್ತು ತಿರುಗುವ ಕರ್ತವ್ಯದಿಂದ ಉಪಾಯವಾಗಿ ನುಣುಚಿಕೊಳ್ಳತೊಡಗಿದ್ದಾರೆ. ಬಹುಶಃ ಅವರಿಗೆ ತಾವು ಶ್ರೀಮಂತರ ಪರವಾಗಿ ನಡೆಯುತ್ತಿರುವ ಯುದ್ಧದಲ್ಲಿ ಬಲಿಪಶುಗಳು ಎಂಬ ಭಾವನೆ ಅವರಿಗುಂಟಾಗತೊಡಗಿದೆ.

ಮೇ ೧೭, ೨೦೧೦ರಲ್ಲಿ ದಾಂತೆವಾಡದಲ್ಲಿ ಮಾವೊವಾದಿಗಳು ಬಸ್ಸೊಂದನ್ನು ಸ್ಫೋಟಿಸಿ, ಸುಮಾರು ೪೪ ಮಂದಿಯನ್ನು ಹತ್ಯೆಗೈದರು. ಅವರಲ್ಲಿ ೧೬ ಮಂದಿ ವಿಶೇಷ ಪೊಲೀಸ್ ಅಧಿಕಾರಿಗಳಾಗಿದ್ದಾರೆ. ವಾಸ್ತವವಾಗಿ ಅವರು ಸರಕಾರಿ ಕೃಪಾಪೋಷಿತ ಉಗ್ರಗಾಮಿ ಸೇನೆಯಾದ ಸಲ್ವಾಜುಡುಂನ ಸದಸ್ಯರಾಗಿದ್ದರು. ಉಳಿದವರೆಲ್ಲರೂ ಅಮಾಯಕ ಗ್ರಾಮಸ್ಥರಾಗಿದ್ದರು. ಆದರೆ ಮಾವೊವಾದಿಗಳು ನಾಗರಿಕರ ಹತ್ಯಾಕಾಂಡಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದರು.

ದಾಂತೆವಾಡದಲ್ಲಿ ಮಾವೊವಾದಿಗಳು ನಡೆಸಿದ ನಾಗರಿಕರ ಹತ್ಯಾಕಾಂಡದ ಬಗ್ಗೆ ದೇಶಾದ್ಯಂತ ಮಾಧ್ಯಮಗಳು, ಸುದ್ದಿವಿಶ್ಲೇಷಕರಿಂದ ಖಂಡನೆಗಳ ಸುರಿಮಳೆಯೇ ಹರಿದು ಬಂದಿತು. ಆದರೆ ಇದೇ ಸಮಯದಲ್ಲಿ ಟಾಟಾ, ಜಿಂದಾಲ್ ಮತ್ತು ಪೊಸ್ಕೊ ಮತ್ತಿತರ ಬೃಹತ್ ಕಂಪೆನಿಗಳಿಗಾಗಿ ತಮ್ಮ ಜಮೀನುಗಳನ್ನು ಸರಕಾರವು ಸ್ವಾಧೀನಪಡಿಸಿಕೊಳ್ಳುತ್ತಿರುವುದರ ವಿರುದ್ಧ ಒರಿಸ್ಸಾದ ಕಳಿಂಗನಗರ್ ಹಾಗೂ ಜಾರ್ಖಂಡ್‌ನ ಬಾಳಿತುತಾ ಮತ್ತು ಪೊರ್ಕೊಗಳಲ್ಲಿ, ಪತಿಭಟನೆ ನಡೆಸುತ್ತಿದ್ದ ಸಾವಿರಾರು ಜನರ ಮೇಲೆ ಗುಂಡಿನ ಸುರಿಮಳೆಗರೆದಾಗ ಅದು ದೊಡ್ಡ ಸುದ್ದಿಯಾಗಲೇ ಇಲ್ಲ. ಇಂದಿಗೂ ಕೂಡಾ ಆ ಪ್ರದೇಶಗಳಲ್ಲಿ ಪೊಲೀಸ್ ದಿಗ್ಬಂಧನ ಮುಂದುವರಿದಿದೆ. ಪೊಲೀಸ್ ಗೋಲಿಬಾರ್‌ನಲ್ಲಿ ಗಾಯಗೊಂಡ ಆದಿವಾಸಿಗಳನ್ನು ಆಸ್ಪತ್ರೆಗೆ ಸಾಗಿಸಲೂ ಪೊಲೀಸರು ತಡೆಯೊಡ್ಡಿದ್ದರು.

ಮಾವೊವಾದಿಗಳ ವಿರುದ್ಧ ಸರಕಾರವು ನಡೆಸುತ್ತಿರುವ ‘ಆಪರೇಶನ್ ಗ್ರೀನ್ ಹಂಟ್’ನಿಂದ ಒಂದು ಪ್ರಯೋಜನವಂತೂ ಆಗಿದೆ. ಇದರಿಂದಾಗಿ ಶ್ರೀಸಾಮಾನ್ಯರಿಗೂ ಸಹ ವಾಸ್ತವವಾಗಿ ಈ ಎಲ್ಲ ಕಾರ್ಯಾಚರಣೆಗಳು ಯಾರ ಹಿತವನ್ನು ಕಾಪಾಡಲು ನಡೆಯುತ್ತಿದೆಯೆಂಬುದು ಸ್ಪಷ್ಟವಾಗಿ ಅರಿವಾಗತೊಡಗಿದೆ. ಹಳ್ಳಿಯ ಸಣ್ಣಪುಟ್ಟ ಮಕ್ಕಳಿಗೂ ಸಹ ಪೊಲೀಸರು ದೊಡ್ಡದೊಡ್ಡ ಕಂಪೆನಿಗಳಿಗಾಗಿ ದುಡಿಯುತ್ತಿದ್ದಾರೆ. ಆಪರೇಶನ್ ಗ್ರೀನ್ ಹಂಟ್ ಮಾವೊವಾದಿಗಳ ವಿರುದ್ಧ ನಡೆಸುತ್ತಿರುವ ಸಮರವಲ್ಲ. ಬದಲಿಗೆ ಅದು ಬಡವರ ವಿರುದ್ಧ ಹೂಡಿರುವ ಯುದ್ದವಾಗಿದೆ ಎಂಬ ಸತ್ಯವು ಮನದಟ್ಟಾಗಿದೆ.

ಮಾವೊವಾದವು ನಗರಪ್ರದೇಶದಲ್ಲಿ ದುಡಿಯುವ ವರ್ಗಗಳಿಗೆ, ದಲಿತ ಚಳವಳಿಗೆ, ಅರಣ್ಯ ಪ್ರದೇಶಗಳಿಂದ ಹೊರಗಿರುವ ರೈತರು ಮತ್ತು ಕೃಷಿ ಕಾರ್ಮಿಕರ ಬವಣೆಗಳಿಗೆ ಅಪ್ರಸ್ತುತವಾಗಿ ಬಿಟ್ಟಿದೆಯೆಂಬ ಆರೋಪ ಕೇಳಿಬರುತ್ತಿದೆ. ಪ್ರಾಯಶಃ ಇದು ನಿಜ. ಆರಣ್ಯಗಳ ಹೊದಿಕೆಯಿಲ್ಲದ ಪ್ರದೇಶಗಳಲ್ಲಿ ಮಾವೊವಾದಿಗಳ ಮಿಲಿಟರೀಕರಣಗೊಂಡ ರಾಜಕೀಯವನ್ನು ನಡೆಸುವುದು ಅಸಾಧ್ಯವಾಗಿದೆ.

ಆದಾಗ್ಯೂ, ಕಮ್ಯೂನಿಸ್ಟ್ ಪಕ್ಷಗಳು ರಾಜಕೀಯದ ಮುಖ್ಯವಾಹಿನಿಯಲ್ಲಿ ಬದುಕುಳಿಯುವುದಕ್ಕಾಗಿ ತಮ್ಮ ವಿಚಾರಧಾರೆಗಳ ಜೊತೆ ರಾಜಿಮಾಡಿಕೊಂಡಿವೆ. ಹೀಗಾಗಿ ಅವುಗಳಿಗೂ ಇತರ ರಾಜಕೀಯ ಪಕ್ಷಗಳ ಮಧ್ಯೆ ಯಾವುದೇ ವ್ಯತ್ಯಾಸವುಳಿದಿಲ್ಲ. ಕಮ್ಯೂನಿಸ್ಟ್ ಪಕ್ಷಗಳು ತಮ್ಮ ಸಾಂಪ್ರದಾಯಿಕ ಭದ್ರಕೋಟೆಗಳಾದ ಕೇರಳ ಮತ್ತು ಪ.ಬಂಗಾಳಗಳನ್ನು ಹೊರತುಪಡಿಸಿ, ಉಳಿದೆಲ್ಲೆಡೆ ಅವು ನೆಲೆಗಳನ್ನು ಕಳೆದುಕೊಳ್ಳಲಾರಂಭಿಸಿವೆ. ಅವುಗಳ ಕಾರ್ಮಿಕ ಸಂಘಟನೆಗಳು ಕೂಡಾ ನೆಲಕಚ್ಟತೊಡಗಿವೆ. ಹೊಸ ಆರ್ಥಿಕ ನೀತಿಗಳ ಪರಿಣಾಮವಾಗಿ ಕಾರ್ಮಿಕರ ಹಕ್ಕುಗಳು ಕಸಿಯಲ್ಪಡುತ್ತಿರುವುದನ್ನು ತಡೆಗಟ್ಟಲು ಸಹ ಅವುಗಳಿಗೆ ಸಾಧ್ಯವಾಗಲಿಲ್ಲ. ಆದಿವಾಸಿ ಹಾಗೂ ದಲಿತ ಸಮುದಾಯಗಳಿಂದ ಅವು ಬಹುತೇಕ ದೂರವಾಗಿಬಿಟ್ಟಿವೆ.ಎಡರಂಗದ ೩೦ ವರ್ಷಗಳ ಆಡಳಿತವು ಪ.ಬಂಗಾಳವನ್ನು ಶೋಚನೀಯ ಸ್ಥಿತಿಗೆ ತಳ್ಳಿದೆ. ನಂದಿಗ್ರಾಮ ಹಾಗೂ ಸಿಂಗೂರ್‌ಗಳಲ್ಲಿ ಮತ್ತು ಇದೀಗ ಜಂಗಲ್‌ಮಹಲ್ ಪ್ರದೇಶದಲ್ಲಿ ಆದಿವಾಸಿಗಳ ಮೇಲೆ ಎಡಪಕ್ಷಗಳು ನಡೆಸಿದ ದೌರ್ಜನ್ಯಗಳಿಂದಾಗಿ ಅವು ಕೆಲವೇ ವರ್ಷಗಳಲ್ಲಿ ಅಧಿಕಾರ ಕಳೆದುಕೊಂಡಲ್ಲಿ ಅಚ್ಚರಿಯೇನೂ ಇಲ್ಲ.

ಆದರೆ ಮಾವೊವಾದಿಗಳು, ವಿಭಿನ್ನ ರಾಜಕೀಯ ದೃಷ್ಟಿಕೋನವನ್ನು ಹೊಂದಿದ್ದಾರೆ. ಭೂರಹಿತರಿಗೆ ಭೂಮಿಯ ವಿತರಣೆಗಾಗಿ ಹಿಂಸೆಯನ್ನು ಕೈಗೆತ್ತಿಕೊಳ್ಳುವುದರಲ್ಲಿ ತಪ್ಪಿಲ್ಲವೆಂಬುದು ಅವರ ವಾದವಾಗಿದೆ. ಆದರೆ ತಮ್ಮ ಧ್ಯೇಯದಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದರೆ ಅವರು ಶ್ರೀಸಾಮಾನ್ಯರ ಬೆಂಬಲದೊಂದಿಗೆ, ತಮ್ಮ ಧ್ಯೇಯಸಾಧನೆಗಾಗಿ ನಡೆಸುತ್ತಿರುವ ಸಶಸ್ತ್ರ ಹೋರಾಟವು ಸಾವಿರಾರು ಜೀವಗಳನ್ನು ತೆಗೆದುಕೊಂಡಿರುವುದೇನೂ ನಿಜ. ಈ ಹೋರಾಟವು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಆಳವಾಗಿ ಬೇರುಬಿಟ್ಟಿರುವ ಅನ್ಯಾಯಗಳ ಬಗ್ಗೆ ಹೊಸ ಬೆಳಕನ್ನು ಚೆಲ್ಲಿದೆ.

ಇಂದಿಗೂ ಸಹ ಪ್ರಧಾನಿಯು ಬುಡಕಟ್ಟು ಪ್ರದೇಶಗಳ ಅಸಮಾನ ಬೆಳವಣಿಗೆ ಹಾಗೂ ಶೋಷಣೆಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ಸರಕಾರ ಕೂಡಾ ಅರಣ್ಯ ಇಲಾಖೆಯ ನಿಯಂತ್ರಣದಲ್ಲಿರುವ ಜಂಟಿ ಅರಣ್ಯ ನಿರ್ವಹಣೆ ನಿಧಿಯನ್ನು ಗ್ರಾಮಪಂಚಾಯತ್‌ಗಳಿಗೆ ವರ್ಗಾಯಿಸುವ ಯೋಜನೆಯನ್ನು ಹೊಂದಿದೆ. ಯೋಜನಾ ಆಯೋಗ ಕೂಡಾ ಬುಡಕಟ್ಟು ಜನರ ಅಭಿವೃದ್ಧಿಗಾಗಿ ೧೪ ಸಾವಿರ ಕೋಟಿ ರೂ. ನೀಡುವುದಾಗಿ ಪ್ರಕಟಿಸಿದೆ. ಈ ಹಣವನ್ನು ಮಧ್ಯವರ್ತಿಗಳ ಜೇಬಿಗೆ ಸೇರದೆ, ಆದಿವಾಸಿ ಸಮುದಾಯದ ಅಭಿವೃದ್ಧಿಗೆ ಬಳಕೆಯಾದರೆ, ಆಗ ಖಂಡಿತವಾಗಿಯೂ ಮಾವೊವಾದಿ ಚಳವಳಿಗೆ ಒಂದು ಬಗೆಯ ಬೆಲೆ ದೊರೆಯಿತೆಂದು ಅರ್ಥ. ಅರಣ್ಯ ಪ್ರದೇಶಗಳ ಹೊರಗೆ ರಾಜಕೀಯ ಮಟ್ಟದಲ್ಲಿ ಮಾವೊವಾದಿಗಳ ಉಪಸ್ಥಿತಿ ಕಂಡುಬರದಿದ್ದರೂ,ಅವರ ಪರವಾಗಿ ಸಹಾನುಭೂತಿ ಹೊಂದಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಮಾವೊವಾದಿಗಳ ವಿರುದ್ಧ ಕೇಳಿಬರುತ್ತಿರುವ ಇನ್ನೊಂದು ಆರೋಪವೆಂದರೆ, ಅವರ ನಾಯಕರು ತಮ್ಮ ಸ್ವಾರ್ಥಸಾಧನೆಗಾಗಿ ಜನರನ್ನು ಬಡವರನ್ನಾಗಿ ಹಾಗೂ ಅನಕ್ಷರಸ್ಥರನ್ನಾಗಿಯೇ ಇರಿಸಲು ಆಸಕ್ತರಾಗಿದ್ದಾರೆಂಬುದು. ದಂಡಕಾರಣ್ಯ ಪ್ರದೇಶವು ಕಳೆದ ೩೦ ವರ್ಷಗಳಿಂದ ಮಾವೊವಾದಿಗಳ ಭದ್ರಕೋಟೆಯಾಗಿದ್ದರೂ, ಅಲ್ಲಿ ಅದು ಯಾಕೆ ಶಾಲೆಗಳನ್ನು ಹಾಗೂ ಆಸ್ಪತ್ರೆಗಳನ್ನು ನಡೆಸುತ್ತಿಲ್ಲ?. ಯಾಕೆ ಅವರು ಚೆಕ್‌ಡ್ಯಾಂಗಳನ್ನು ಮತ್ತು ಸುಧಾರಿ ಕೃಷಿ ಪದ್ಧತಿಯನ್ನು ಜಾರಿಗೊಳಿಸಿಲ್ಲ?. ಅಲ್ಲಿ ಈಗಲೂ ಯಾಕೆ ಜನರು ಪೌಷ್ಟಿಕ ಆಹಾರದ ಕೊರತೆ ಹಾಗೂ ಮಲೇರಿಯಾದಿಂದ ಸಾವನ್ನಪ್ಪುತ್ತಿದ್ದಾರೆಂದು ಟೀಕಿಸುವವರು ಹಲವರಿದ್ದಾರೆ.

ಆದರೆ ನಿಷೇಧಿತ ಸಂಘಟನೆಯೊಂದರ ಸದಸ್ಯರನ್ನು, ಅವರು ವೈದ್ಯರಾಗಿರಲಿ ಅಥವಾ ಶಿಕ್ಷಕರಾಗಿರಲಿ, ಕಂಡಲ್ಲಿ ಗುಂಡಿಕ್ಕಿ ಕೊಲ್ಲಲಾಗುತ್ತಿದೆಯೆಂಬ ವಾಸ್ತವಾಂಶವನ್ನು ಅವರು ಯಾಕೆ ಕಡೆಗಣಿಸುತ್ತಿದ್ದಾರೆ?.

ಒರಿಸ್ಸಾ, ಚತ್ತೀಸ್‌ಗಢ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಮಾವೊವಾದಿಗಳಿಂದ ಬಾಧಿತವಾಗಿರುವ ೨೦೦ ಜಿಲ್ಲೆಗಳಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಯಕ್ರಮ (ಎನ್‌ಆರ್‌ಇಜಿ‌ಎ)ಯ ಕಾರ್ಯನಿರ್ವಹಣೆಯ ಬಗ್ಗೆ ಇತ್ತೀಚೆಗೆ ಪ್ರಕಟವಾದ ವಿಶ್ಲೇಷಣಾತ್ಮಕ ವರದಿಯು ಹೀಗೆ ವಿವರಿಸಲಾಗಿದೆ.

ಮಾವೊವಾದಿಗಳು ಅಭಿವೃದ್ಧಿ ಕಾರ್ಯಕ್ರಮಗಳನ್ನು ತಡೆಗಟ್ಟುತ್ತಿದ್ದಾರೆಂಬ ಆರೋಪಕ್ಕೆ ಯಾವುದೇ ಹುರುಳಿಲ್ಲವೆಂಬುದು ಕ್ಷೇತ್ರ ಸಮೀಕ್ಷೆಯು ಬಹಿರಂಗಪಡಿಸಿದೆ. ವಾಸ್ತವಾಗಿ ಇತರ ಕೆಲವು ಪ್ರದೇಶಗಳಿಗಿಂತ ಬಸ್ತಾರ್‌ನಲ್ಲಿ (ಮಾವೊವಾದಿಗಳ ಭದ್ರಕೋಟೆ) ಎನ್‌ಆರ್‌ಇಜಿ‌ಎ ಅತ್ಯುತ್ತಮವಾಗಿ ಅನುಷ್ಠಾನಗೊಂಡಿದೆ.ಇವೆಲ್ಲದಕ್ಕೂ ಮಿಗಿಲಾಗಿ ಹಲವಾರು ವರ್ಷಗಳ ಹಿಂದೆ ಕನಿಷ್ಠ ದಿನಗೂಲಿ ಕುರಿತಾಗಿ ಈ ಪ್ರದೇಶಗಳಲ್ಲಿ ನಡೆದಿರುವ ಹೋರಾಟಗಳ ನೇತೃತ್ವವನ್ನು ಮಾವೊವಾದಿಗಳು ವಹಿಸಿದ್ದಾರೆಂಬುದು ನೆನಪಿಡತಕ್ಕ ಅಂಶವಾಗಿದೆ.ಇದರ ಪರಿಣಾಮವಾಗಿ ಈಗ ಮಾವೊವಾದಿಗಳು ಪ್ರಬಲವಾಗಿರುವ ಪ್ರದೇಶಗಳಲ್ಲಿ ತೆಂಡು ಎಲೆ ಕಾರ್ಮಿಕರ ದಿನಗೂಲಿಯಲ್ಲಿ ಎರಡು ಪಟ್ಟು ಏರಿಕೆಯಾಗಿದೆ.

ಮಾವೊವಾದಿಗಳೆಂದರೆ ಕೈಬೆರಳೆಣಿಕೆಯ ಸಂಖ್ಯೆಯಷ್ಟಿರುವ ಹೊರಗಿನವರಿಂದ ನಿಯಂತ್ರಿಸಲ್ಪಡುವ ದುಷ್ಟಕೂಟವಾಗಿದೆಯೆಂದು ಆಪಾದಿಸುವವರಿದ್ದಾರೆ. ಮಾವೊವಾದದ ಕಟುಟೀಕಾಕಾರರಾಗಿರುವ ವಿಶ್ವವಿದ್ಯಾನಿಲಯದ ಉಪನ್ಯಾಸಕರೊಬ್ಬರು, ಮಾವೊವಾದಿಗಳನ್ನು, ಬಡ ಆದಿವಾಸಿಗಳನ್ನು ನೆತ್ತರುಕುಡಿಯುತ್ತಿರುವ ಪರಾವಲಂಭಿಗಳೆಂದು ಜರೆದಿದ್ದರು. ತನ್ನ ವಾದವನ್ನು ಸಮರ್ಥಿಸಲು ಆತ ಮಾವೊವಾದಿಗಳಿಂದ ಬಾಧಿತವಾದ ದಂಡಕಾರಣ್ಯ ಪ್ರದೇಶಕ್ಕೂ, ದಕ್ಷಿಣದಲ್ಲಿರುವ ಕೇರಳ ರಾಜ್ಯವು ಸಾಧಿಸಿರುವ ಪ್ರಗತಿಯನ್ನು ಪರಸ್ಪರ ಹೋಲಿಸಿದ್ದರು. ಆದಿವಾಸಿಯೇತರ ಮಾವೊವಾದಿ ನಾಯಕರು ಅರಣ್ಯದಲ್ಲಿ ಅವಿತುಕೊಂಡಿರುವ ಹೇಡಿಗಳೆಂದು ಅವರು ನಿಂದಿಸಿದ್ದರು.ಆದಿವಾಸಿ ಮಾವೊವಾದಿ ಗೆರಿಲ್ಲಾಗಳು ಹಾಗೂ ಗ್ರಾಮಾಂತರ ಮಾವೊವಾದಿ ಸಶಸ್ತ್ರ ಪಡೆಯು, ಗಾಂಧಿವಾದಿ ನಾಯಕರ ಮುಂದೆ ಶರಣಾಗತರಾಗಬೇಕೆಂದು ಅವರು ಕರೆ ನೀಡಿದ್ದರು.

ಮಾವೊವಾದಿ ಚಳವಳಿಯಲ್ಲಿ ಸಕ್ರಿಯವಾಗಿರುವ ಆದಿವಾಸಿಯೇತರ ನಾಯಕರೆಲ್ಲರನ್ನೂ ಯುದ್ಧಾಪರಾಧಗಳಿಗಾಗಿ ವಿಚಾರಣೆಗೊಳಪಡಿಸಬೇಕೆಂದು ಅವರು ಆಗ್ರಹಿಸಿದ್ದರು.

ಆದರೆ ಈ ವಿಚಾರವಾದಿಗೆ ಶರಣಾಗತಿಯ ವಿಷಯದಲ್ಲಿ ಆದಿವಾಸಿಯೇತರ ಗಾಂಧಿವಾದಿಗಳು ಬೇಕಾಗುತ್ತಾರೆ. ಆದರೆ ಆದಿವಾಸಿಯೇತರ ಮಾವೊವಾದಿಗಳು ಯಾಕೆ ಬೇಡವಾಗುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ.

ಹಸಿವಿನಲ್ಲೇ ಬಳಲುತ್ತ್ತಿರುವವರಿಂದ ನಿರಶನ ಸತ್ಯಾಗ್ರಹ ನಿರೀಕ್ಷಿಸಲಾದೀತೇ?

ಒರಿಸ್ಸಾದಲ್ಲಿ ವಿವಿಧ ರೀತಿಯ ನಿಶಸ್ತ್ರ ಪ್ರತಿರೋಧ ಚಳವಳಿಯನ್ನು ನಡೆಸುತ್ತಿರುವ ಸಂಘಟನೆಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳಿರುವುದು ನಿಜ. ಆದರೂ ಕೂಡಾ ಅವು, ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಯೋಜನೆಗಳನ್ನು ಮುಂದುವರಿಸುವುದಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾಗಿವೆ. ಕಳಿಂಗ ನಗರದಲ್ಲಿ ಟಾಟಾ, ಜಮ್ಶೆದ್‌ಪುರದಲ್ಲಿ ಪೊಸ್ಕೊ, ನಿಯಮ್‌ಗಿರಿಯಲ್ಲಿ ವೇದಾಂತ ಸಂಸ್ಥೆಗಳ ಆಟಾಟೋಪಕ್ಕೆ ಕಡಿವಾಣ ಹಕ್ಕುವಲ್ಲಿ ಈ ಸಂಘಟನೆಗಳು ಯಶಸ್ವಿಯಾಗಿವೆ. ಈ ಸಂಘಟನೆಗಳು ಸಕ್ರಿಯವಾಗಿರುವ ಒರಿಸ್ಸಾ ರಾಜ್ಯವನ್ನು ಮಾವೊವಾದಿಗಳು ಒಂದು ಪಡಸಾಲೆಯಂತೆ ಬಳಸಿಕೊಳ್ಳುತ್ತವೆಯೇ ಹೊರತು, ದೊಡ್ಡ ಪ್ರಮಾಣದ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ ಭದ್ರತಾ ಪಡೆಗಳು, ಬೃಹತ್ ಕಾರ್ಪೊರೇಟ್ ಸಂಸ್ಥೆಗಳ ವಿರುದ್ಧ ನಿಶಸ್ತ್ರ ಚಳವಳಿಯಲ್ಲಿ ತೊಡಗಿರುವ ಜನತೆಯನ್ನು ದಮನಿಸುವ ಕಾರ್ಯಾಚರಣೆಯನ್ನು ಮುಂದು ವರಿಸಿದಲ್ಲಿ ಮಾವೊವಾದಿಗಳು ಅಖಾಡಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.

೨೦೦೬ರಲ್ಲಿ ಕಂಧಮಲ್ ಜಿಲ್ಲೆಯಲ್ಲಿ ದಲಿತರು ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಆದಿವಾಸಿ ಸಮುದಾಯಗಳ ನಡುವೆ ಉದ್ವಿಗ್ನತೆಯು ತಾರಕಕ್ಕೇರಿದ ಸಂದರ್ಭದಲ್ಲಿ, ಮಾವೊವಾದಿಗಳು ವಿಶ್ವಹಿಂದೂ ಪರಿಷತ್ ನಾಯಕ ಲಕ್ಷ್ಮಣಾನಂದ ಸರಸ್ವತಿಯವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಲಕ್ಷ್ಮಣಾನಂದ ಸರಸ್ವತಿ ಆದಿವಾಸಿಗಳನ್ನು ಹಿಂದೂಧರ್ಮಕ್ಕೆ ಮರಳಿ ಕರೆತರುವ ಉದ್ದೇಶದಿಂದ ಕಂಧಮಲ್ ಜಿಲ್ಲೆಯ ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯಾ ಚರಿಸುತ್ತಿದ್ದರು. ಲಕ್ಷ್ಮಣಾನಂದ ಸರಸ್ವತಿಯ ಹತ್ಯೆಯ ಬಳಿಕ ತೀರಾ ಇತ್ತೀಚೆಗೆ ಹಿಂದೂಧರ್ಮಕ್ಕೆ ಮತಾಂತರಗೊಂಡ ಕಂಧಾ ಬುಡಕಟ್ಟು ಜನರಿಗೆ ಹಿಂಸಾಚಾರಕ್ಕಿಳಿಯುವಂತೆ ಕುಮ್ಮಕ್ಕು ನೀಡಲಾಯಿತು. ಈ ಕ್ರೈಸ್ತ ವಿರೋಧಿ ಹಿಂಸಾಚಾರದಲ್ಲಿ ಸುಮಾರು ೪೦೦ ಗ್ರಾಮಗಳು ಸ್ಮಶಾನಗಳಾದವು. ಹಲವು ವಾರಗಳವರೆಗೆ ನಡೆದ ಗಲಭೆಗಳಲ್ಲಿ ೫೪ ಮಂದಿ ಪನ್ನಾ ಬುಡಕಟ್ಟಿನ ದಲಿತ ಕ್ರೈಸ್ತರನ್ನು ಬರ್ಬರವಾಗಿ ಹತ್ಯೆಗೈಯಲಾಯಿತು. ೨೦೦ಕ್ಕೂ ಅಧಿಕ ಚರ್ಚ್‌ಗಳನ್ನು ಸುಟ್ಟು ಹಾಕಲಾಯಿತು, ಸಾವಿರಾರು ದಲಿತ ಕ್ರೈಸ್ತರು ಪ್ರಾಣಭಯದಿಂದ ಮನೆಮಾರು ತೊರೆದು, ಕಾಡಿನಲ್ಲಿ ಆವಿತುಕೊಂಡರು. ಈಗಲೂ ಸ್ವಗ್ರಾಮಕ್ಕೆ ಮರಳುವ ಧೈರ್ಯವಿರದೆ, ನಿರಾಶ್ರಿತ ಶಿಬಿರಗಳಲ್ಲಿ ಉಳಿದುಕೊಂಡವರು ಹಲವರಿದ್ದಾರೆ.

ಆದರೆ ಇದೀಗ ಅಷ್ಟೆ ಅಪಾಯಕಾರಿಯಾದ ಪರಿಸ್ಥಿತಿಯು ಒರಿಸ್ಸಾದ ನಾರಾಯಣಪಟ್ನ ಹಾಗೂ ಕೊರಾಪುಟ್ ಜಿಲ್ಲೆಗಳಲ್ಲಿ ತಲೆಯೆತ್ತಿದೆ. ಈ ಪ್ರದೇಶಗಳಲ್ಲಿ ಚಾಸಿ ಮುಲ್ಯ ಆದಿವಾಸಿ ಸಂಘವು, ಸ್ಥಳೀಯ ಲೇವಾದೇವಿಗಾರರು ಹಾಗೂ ಮದ್ಯದ ದೊರೆಗಳು ಬುಡಕಟ್ಟು ಜನರಿಂದ ಕಸಿದುಕೊಂಡ ಭೂಮಿಯನ್ನು ಮರಳಿ ಪಡೆಯಲು ಪ್ರಬಲವಾದ ಚಳವಳಿಯನ್ನು ನಡೆಸುತ್ತಿದೆ. ಆದರೆ ಪೊಲೀಸರು ಈಗಾಗಲೇ ಚಾಸಿ ಮುಲ್ಯ ಆದಿವಾಸಿ ಸಂಘವನ್ನು, ಮಾವೊವಾದಿಗಳ ಒಂದು ವೇದಿಕೆಯೆಂದು ಹಣೆಪಟ್ಟಿ ಕಟ್ಟಿದ್ದಾರೆ. ಈ ಪ್ರದೇಶಗಳಲ್ಲಿ ಈಗ ಪೊಲೀಸ್‌ರಾಜ್ ಸ್ಥಾಪನೆಯಾಗಿದೆ. ತಮ್ಮ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟ ನಡೆಸಿದ್ದ ನೂರಾರು ಆದಿವಾಸಿಗಳು ಕೊರಾಪುಟ್ ಜೈಲಿನಲ್ಲಿ ಕೊಳೆಯುತ್ತಿದ್ದರೆ, ಸಾವಿರಾರು ಜನರು ತಮ್ಮ ಮನೆಗಳಿಗೆ ಹೋಗಲು ಹೆದರಿಕೊಂಡು, ಕಾಡುಗಳಲ್ಲಿ ದಿನಗಳೆಯುತ್ತಿದ್ದಾರೆ.

ಇಂತಹ ಸನ್ನಿವೇಶಗಳಲ್ಲಿ ಜೀವಿಸುತ್ತಿರುವ ಜನರಿಗೆ ಶಾಂತಿಮಂತ್ರವನ್ನು ಜಪಿಸುವ ಕೈಬೆರಳೆಣಿಕೆಯಷ್ಟು ಮಂದಿಯಿಂದ ಬೋಧನೆಗಳನ್ನು ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಆಗ ಅವರಿಗೆ ಬಂಧೂಕುಗಳನ್ನು ಹಿಡಿದು, ತಮ್ಮ ಆಶೋತ್ತರಗಳನ್ನು ಬೆಂಬಲಿಸುವ ಜನರು ಹೆಚ್ಚು ಅಪ್ಯಾಯವಾಗುತ್ತಾರೆ. ಗಾಂಧಿವಾದಿ ಸತ್ಯಾಗ್ರಹವು ಒಂದು ಬಗೆಯ ರಾಜಕೀಯ ನಾಟಕರಂಗವಾಗಿದೆ. ಈ ಸತ್ಯಾಗ್ರಹವು ಪರಿಣಾಮಕಾರಿಯಾಗಬೇಕಾದರೆ, ಆ ಬಗ್ಗೆ ಸಾವಕಾಶವಾಗಿ ವಿಚಾರವಿಮರ್ಶೆ ಮಾಡುವಂತಹ ಸಹಾನುಭೂತಿಯುಳ್ಳ ಪ್ರೇಕ್ಷಕರ ಅಗತ್ಯ ವಿರುತ್ತದೆ. ಆದರೆ ದಟ್ಟಾರಣ್ಯದ ನಡುವೆ ಜೀವಭಯದಿಂದ ಅಡಗಿರುವ ಆದಿವಾಸಿ ಗಳಿಂದ ಇಂತಹ ತಾಳ್ಮೆಯ ವರ್ತನೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅರಣ್ಯದ ನಡುವೆ ಇರುವ ಗ್ರಾಮದಲ್ಲಿ ೮೦೦ಕ್ಕೂ ಅಧಿಕ ಪೊಲೀಸರು ಗುಂಪುಗುಂಪಾಗಿ ಗುಡಿಸಲುಗಳನ್ನು ಸುಟ್ಟುಹಾಕಿ, ಮನಬಂದಂತೆ ಜನರಿಗೆ ಗುಂಡಿಕ್ಕುತ್ತಿದ್ದರೆ, ಉಪವಾಸ ಸತ್ಯಾಗ್ರಹ ಮಾಡಿ ಏನು ಪ್ರಯೋಜನ?. ಅಷ್ಟಕ್ಕೂ ಪ್ರತಿ ದಿನವೂ ಅರೆಹೊಟ್ಟೆಯಲ್ಲೇ ಇರುವ ಜನರನ್ನು ನಿರಶನ ಸತ್ಯಾಗ್ರಹ ಮಾಡಿ ಎಂದು ಕೇಳುವುದು ಯಾವ ನ್ಯಾಯ?.

ಸರಕಾರವು ತನ್ನನ್ನು ವಿರೋಧಿಸುವ ಪ್ರತಿಯೊಬ್ಬರಿಗೂ ಮಾವೊವಾದಿಗಳೆಂಬ ಹಣೆಪಟ್ಟಿ ಕಟ್ಟುತ್ತಿದೆ. ಹೀಗಾಗಿ ಮಾವೊವಾದಿಗಳು ದೇಶದ ವಿದ್ಯಮಾನಗಳಲ್ಲಿ ಪ್ರಧಾನ ಪಾತ್ರ ವಹಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಮಾವೊವಾದಿಗಳಿಗೆ ಹಫ್ತಾ ದೊರೆಯುವ ತನಕ ಅವರು ಗಣಿಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮುಂದುವರಿಸಲು ಆಸ್ಪದ ನೀಡುತ್ತಾರೆಂಬ ಭಾವನೆ ಗಣಿಗಾರಿಕೆ ಕಂಪೆನಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ಅನೇಕ ಜನರಲ್ಲಿದೆ. ಗಣಿಗಾರಿಕೆಯ ವಿರುದ್ಧ ತಾವು ನಡೆಸುತ್ತಿರುವ ಹೋರಾಟವು ಮಾವೊವಾದಿಗಳ ಸಶಸ್ತ್ರ ಚಳವಳಿಗಿಂತ ಹೆಚ್ಚು ಉತ್ತಮವೆಂಬ ಭಾವನೆಯನ್ನು ವ್ಯಕ್ತಪಡಿಸುವ ಹಲವು ಬುದ್ಧಿಜೀವಿ ನಾಯಕರಿದ್ದಾರೆ. ಮಾತ್ರವಲ್ಲ ಪರಿಸರ ಧಾರಣಾಶೀಲ ಗಣಿಗಾರಿಕೆಗೆ ಬೆಂಬಲವನ್ನು ಅವರು ನೀಡುತ್ತಾರೆ. ಅಧಿಕ ಮೊತ್ತದ ರಾಜಧನ, ಸಂತ್ರಸ್ತರಿಗೆ ಉತ್ತಮ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಿಕೊಡುವ ಭರವಸೆಯನ್ನು ಅವರು ನೀಡುತ್ತಾರೆ.

ನಮ್ಮ ಹಾಲಿ ಗಣಿಗಾರಿಕಾ ಸಚಿವರೂ ಕೂಡಾ ಇಂಥವರ ಸಾಲಿಗೆ ಸೇರುತ್ತಾರೆ. ಸಂಸತ್‌ನಲ್ಲಿ ಅವರು ಇತ್ತೀಚೆಗೆ ಮಾತನಾಡುತ್ತಾ, ಗಣಿಗಾರಿಕೆಯಿಂದ ದೊರೆಯುವ ಲಾಭದ ಶೇ.೨೫ರಷ್ಟು ಪಾಲು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ದೊರಕಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಆದರೆ ಸತ್ಯದ ತಲೆಯ ಮೇಲೆ ಹೊಡೆಯುವಂತೆ ಹೇಳುವ ಇಂತಹ ಭರವಸೆಗಳನ್ನು ನಂಬುವಂತಹ ಪರಿಸ್ಥಿತಿಯಲ್ಲಿ ಯಾರೂ ಇಲ್ಲ.

ಈಗ ದೇಶದ ಗಣಿಗಾರಿಕಾ ವಲಯಗಳಲ್ಲಿ ನಡೆಯುತ್ತಿರುವ ಬಾಕ್ಸೆಟ್ ಆದಿರಿನ ಗಣಿಗಾರಿಕೆಯಿಂದ ಗಣಿಗಾರಿಕಾ ಕಂಪೆನಿಗಳಿಗೆ ನೂರಾರು ಕೋಟಿ ಡಾಲರ್ ಆದಾಯ ದೊರೆಯುತ್ತದೆ. ಆದರೆ ಪರಿಸರಕ್ಕೆ ಸಹನೀಯವಾದ ರೀತಿಯಲ್ಲಿ ಬಾಕ್ಸೆಟ್‌ನ ಗಣಿಗಾರಿಕೆಯನ್ನು ಮಾಡಿ, ಅದನ್ನು ಆಲ್ಯುಮಿನಿಯಂ ಆಗಿ ಸಂಸ್ಕರಿಸುವಂತಹ ಯಾವ ವಿಧಾನವೂ ಪ್ರಸ್ತುತ ಭಾರತದಲ್ಲಿ ಆಚರಣೆಯಲ್ಲಿಲ್ಲ. ಇದೊಂದು ಅತ್ಯಂತ ವಿಷಕಾರಿಯಾದ ಪ್ರಕ್ರಿಯೆಯಾಗಿದೆ. ಪಾಶ್ಚಾತ್ಯ ರಾಷ್ಟ್ರಗಳಂತೂ ಬಾಕ್ಸೆಟ್ ಸಂಸ್ಕರಿಸಿ, ಆಲ್ಯುಮಿನಿಯಂ ಉತ್ಪಾದಿಸುವ ಪ್ರಕ್ರಿಯೆಯನ್ನು ತಮ್ಮ ದೇಶದಲ್ಲಿ ನಡೆಸಲು ಸುತರಾಂ ಒಪ್ಪಿಗೆ ನೀಡುವುದಿಲ್ಲ. ಒಂದು ಟನ್ ಆಲ್ಯುಮಿನಿಯಂ ಉತ್ಪಾದಿಸಬೇಕಾದರೆ, ನಿಮಗೆ ಆರು ಟನ್ ಬಾಕ್ಸೆಟ್, ಸಾವಿರಾರು ಟನ್ ಜಲ ಹಾಗೂ ಬೃಹತ್ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ. ಹೀಗಾಗಿ ನೀರನ್ನು ಸಂಗ್ರಹಿಸಲು ಮತ್ತು ವಿದ್ಯುತ್ ಉತ್ಪಾದಿಸಲು ದೊಡ್ಡ ಅಣೆಕಟ್ಟು ಗಳು ಬೇಕಾಗುತ್ತವೆ. ಇಷ್ಟಕ್ಕೂ ಉತ್ಪಾದನೆಯಾದ ಅಲ್ಯುಮಿನಿಯಂ ಎಲ್ಲಿಗೆ ಹೋಗುತ್ತದೆಯೆಂಬ ಪ್ರಶ್ನೆಯೇಳುತ್ತದೆ?. ಶಸ್ತ್ರಾಸ್ತ್ರಗಳನ್ನು ತಯಾರಿಕಾ ಉದ್ಯಮದಲ್ಲಿ ಅಲ್ಯುಮಿನಿಯಂ ಪ್ರಧಾನವಾಗಿ ಬಳಕೆಯಾಗುತ್ತಿರುವ ಲೋಹವಾಗಿದೆ. ಅದು ಕೂಡಾ ವಿದೇಶಗಳ ಶಸ್ತ್ರಾಸ್ತ್ರ ಉದ್ಯಮಗಳಿಗಾಗಿ ಈ ಲೋಹವನ್ನು ರಫ್ತ ಮಾಡಲಾಗುತ್ತಿದೆ.

ಭಾರತದಲ್ಲಿ ಇಷ್ಟೆಲ್ಲಾ ಹಿಂಸಾಚಾರ ಹಾಗೂ ದುರಾಸೆಗಳ ಮಧ್ಯೆ, ಆಶಾವಾದದ ಹೊಂಗಿರಣ ಕೂಡಾ ಕಾಣಿಸುತ್ತಿದೆ. ಕೊಳ್ಳುಬಾಕತನ ಸಂಸ್ಕೃತಿಗೆ ಅಡಿಯಾಳಾಗದ ದೊಡ್ಡ ಜನಸಮೂಹ ಈಗಲೂ ಕೂಡಾ ನಮ್ಮ ದೇಶದಲ್ಲಿ ಕಾಣಸಿಗುತ್ತದೆ. ಗಾಂಧೀಜಿ ಪ್ರತಿಪಾದಿಸಿದ ಧಾರಣಾಶೀಲತೆ ಹಾಗೂ ಸ್ವಾವಲಂಬನೆ ತತ್ವಗಳಿಗಾಗಿ ಹೋರಾಟ ನಡೆಸಿದ ಉದಾತ್ತ ಪರಂಪರೆಯ ಜನರು ನಮ್ಮ ನಡುವೆ ಕಾಣಸಿಗುತ್ತಾರೆ. ಹಾಗೆಯೇ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಿದ್ಧಾಂತಕ್ಕೆ ಬದ್ಧವಾಗಿರುವ ಸಮಾಜವಾದಿಗಳು ನಮ್ಮೆದುರಿಗಿದ್ದಾರೆ. ಮಾತ್ರವಲ್ಲದೆ ಈ ಎರಡೂ ವಿಚಾರಧಾರೆಗಳಿಗೆ ಗಂಭೀರ ರೀತಿಯಲ್ಲಿ ಸವಾಲೊಡ್ಡುವ ಅಂಬೇಡ್ಕರ್ ಚಿಂತನೆಯೂ ಭದ್ರ ನೆಲೆಯನ್ನು ಕಂಡುಕೊಂಡಿದೆ. ಈಗ ನಾವು ಅತ್ಯಂತ ಅಭೂತಪೂರ್ವವಾದ ಒಕ್ಕೂಟವನ್ನು ಸಾಧಿಸಿರುವ ಅನುಭವಸ್ಥ, ತಿಳುವಳಿಕೆ ಮತ್ತು ದೂರದೃಷ್ಟಿಯನ್ನು ಹೊಂದಿದ ಪ್ರತಿರೋಧ ಚಳವಳಿಗಳನ್ನು ಕಾಣುತ್ತಿದ್ದೇವೆ.

ಇವೆಲ್ಲದಕ್ಕೂ ಮಿಗಿಲಾಗಿ ಭಾರತದಲ್ಲಿ ಹೆಚ್ಚುಕಮ್ಮಿ ೧೦ ಕೋಟಿಗೂ ಅಧಿಕ ಆದಿವಾಸಿಗಳಿದ್ದಾರೆ. ಧಾರಣಾಶೀಲ ಬದುಕಿನ ರಹಸ್ಯಗಳನ್ನು ಈಗಲೂ ತಿಳಿದಿರುವ ಜನಸಮುದಾಯದಲ್ಲಿ ಅವರು ಕೂಡಾ ಸೇರಿದ್ದಾರೆ. ಒಂದು ವೇಳೆ ಈ ಜನಸಮೂಹವು ಕಣ್ಮರೆಯಾದಲ್ಲಿ ಈ ಮಹತ್ವದ ರಹಸ್ಯಗಳನ್ನು ಅವರು ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ. ಆಪರೇಷನ್ ಗ್ರೀನ್ ಹಂಟ್‌ನಂತಹ ಸಮರಗಳು ಈ ಆದಿವಾಸಿಗಳನ್ನು ನಿರ್ಮೂಲನೆ ಮಾಡುತ್ತಿವೆ. ಹೀಗಾಗಿ ಈ ಸಮರದತ ಪ್ರತಿಪಾದಕರು ವಿನಾಶದ ಬೀಜಗಳನ್ನು ಬಿತ್ತುತ್ತಾರೆ. ಮಧ್ಯಭಾರತದಲ್ಲಿ ನಡೆಯುತ್ತಿರುವ ಈ ಸಮರವು ಇಡೀ ಮನುಕುಲಕ್ಕೆ ಅತ್ಯಂತ ಮುಖ್ಯವಾದ ವಿಷಯವಾಗಿದೆ. ಈ ಕಾರಣದಿಂದಲಾದರೂ ಯುದ್ಧವನ್ನು ವಿರೋಧಿಸುತ್ತಿರುವ ಎಲ್ಲ ರಾಜಕೀಯ ಸಂಘಟನೆಗಳ ನಡುವೆ ನೈಜ ಹಾಗೂ ತ್ವರಿತ ಮಾತುಕತೆಗಳು ನಡೆಯಬೇಕಾದ ಅಗತ್ಯವಿದೆ.

ಯಾವಾಗ ಬಂಡವಾಳಶಾಹಿವಾದವು, ತನ್ನ ನಡುನೆ ಬಂಡವಾಳಶಾಹಿ ಯೇತರ ಸಮಾಜಗಳನ್ನು ತಾಳಿಕೊಳ್ಳಲು ಸಾಧ್ಯವಾಗುವುದೋ, ಯಾವಾಗ ಬಂಡವಾಳಶಾಹಿ ವಾದಕ್ಕೆ, ತನಗೆ ನಿರಂತರವಾಗಿ ಕಚ್ಚಾವಸ್ತುಗಳು ಪೂರೈಕೆಯಾಗುತ್ತವೆಯೆಂಬ ಭ್ರಮೆಯು ಅಳಿಸಿಹೋಗುವುದೋ, ಆಗ ಹೊಸ ಬದಲಾವಣೆ ಖಂಡಿತವಾಗಿಯೂ ಕಾಣಸಿಗುವುದು.

ಜಗತ್ತಿಗೆ ಯಾವುದಾದರೂ ಆಶಾವಾದವೆಂಬುದಿದ್ದರೆ, ಅದು ನಗರಗಳ ದೊಡ್ಡ ಕಟ್ಟಡಗಳಲ್ಲಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತುಕೊಂಡು, ಹವಾಮಾನ ಬದಲಾವಣೆಯ ಕುರಿತು ಸಮಾವೇಶಗಳನ್ನು ನಡೆಸುವ ಮಂದಿಯಿಂದ ದೊರೆಯಲು ಸಾಧ್ಯವಿಲ್ಲ. ಅದು ತಮ್ಮ ಅರಣ್ಯಗಳನ್ನು, ಪರ್ವತಗಳನ್ನು ಹಾಗೂ ನದಿಗಳನ್ನು ರಕ್ಷಿಸಲು ಹೋರಾಡುತ್ತಿರುವ ಜನರಿಂದ ಮಾತ್ರ ಸಾಧ್ಯ. ಏಕೆಂದರೆ ಈ ಅರಣ್ಯಗಳು, ಪರ್ವತಗಳು ಹಾಗೂ ನದಿಗಳನ್ನು ತಮ್ಮನ್ನು ರಕ್ಷಿಸುತ್ತವೆ ಎಂಬ ನಂಬಿಕೆಯಿಂದಲೇ ಅವರು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಡುತ್ತಿದ್ದಾರೆ.

ಪ್ರಸಕ್ತ ಜಗತ್ತಿನ ಬಗ್ಗೆ ವಿಭಿನ್ನ ಕಲ್ಪನೆಯನ್ನು ಹೊಂದಿದವರನ್ನು ನಿರ್ಮೂಲಗೊಳಿಸುವುದನ್ನು ನಿಲ್ಲಿಸುವುದೇ ಈಗಿನ ಪ್ರಪಂಚಕ್ಕೆ ಹೊಸ ವರ್ಚಸ್ಸನ್ನು ನೀಡುವ ನಿಟ್ಟಿನಲ್ಲಿ ಕೈಗೊಳ್ಳುವ ಪ್ರಥಮ ಹೆಜ್ಜೆಯಾಗಿದೆ. ನಮ್ಮ ಪರಂಪರೆಯ ಪಾಲಕರಾಗಿರುವ, ಆದರೆ ನಿಜವಾಗಿ ನಮ್ಮ ಭವಿಷ್ಯದ ಮಾರ್ಗದರ್ಶಕರಾಗಿರುವ ಈ ಜನರ ಉಳಿವಿಗಾಗಿ ಕೆಲವೊಂದು ಭೌತಿಕ ಅವಕಾಶಗಳನ್ನು ಒದಗಿಸುವುದು ತುರ್ತು ಅಗತ್ಯವಾಗಿದೆ. ಹೀಗೆ ಮಾಡಲು ನಾವು ನಮ್ಮನ್ನು ಆಳುವವರಿಗೆ ಕೆಲವೊಂದು ಪ್ರಶ್ನೆಯನ್ನು ಕೇಳಬೇಕಾಗಿದೆ. ನೀವು ನದಿಯಲ್ಲಿ ನೀರನ್ನು, ಕಾಡಲ್ಲಿ ಮರಗಳನ್ನು, ಪರ್ವತಗಳಲ್ಲಿ ಆದಿರನ್ನು ಉಳಿಸಬಲ್ಲಿರಾ?. ಅದು ಅವರಿಗೆ ಸಾಧ್ಯವಿಲ್ಲದಿದ್ದರೆ, ಈ ಸಮರಗಳಲ್ಲಿ ಸಂತ್ರಸ್ತರಾದವರಿಗೆ ನೈತಿಕತೆಯ ಬೋಧನೆ ಮಾಡುವುದನ್ನು ಕೂಡಾ ಅವರು ನಿಲ್ಲಿಸಬೇಕು.

No comments:

Post a Comment