Monday, October 11, 2010

ಹಸಿವಿನ ಮಕ್ಕಳ ಭಾರತ

ಗೆತಿನ್ ಚೇಂಬರ್‌ಲೀನ್
ಕೃಪೆ: ಗಾರ್ಡಿಯನ್

ಮಿರ್ಗಿತಾಂಡ್, ಜಾರ್ಖಂಡ್ ರಾಜ್ಯದ ಒಂದು ಪುಟ್ಟ ಗ್ರಾಮ. ಅಲ್ಲಿನ ಗುಡಿಸಲೊಂದರಲ್ಲಿ ಒಲೆಯ ಮುಂದೆ ನಿಂತುಕೊಂಡಿರುವ ಬಾಲಕ ಸುಖ್‌ಲಾಲ್ ಹೆಂಬ್ರೊಮ್, ತನ್ನ ಬರಿಹೊಟ್ಟೆಯ ಮೇಲೆ ಬಾಳೆ ಎಲೆಯೊಂದನ್ನು ಹಿಡಿದುಕೊಂಡು, ಪಿಳಿಪಿಳಿ ಕಣ್ಣುಗಳಿಂದ, ತನ್ನ ಎದುರು ಕುಳಿತಿರುವ ವೃದ್ಧನೊಬ್ಬನನ್ನೇ ದಿಟ್ಟಿಸುತ್ತಿದ್ದಾನೆ. ಒಮ್ಮಿಂದೊಮ್ಮೆಗೇ ವೃದ್ಧ ಠಾಕೂರ್ ದಾಸ್, ಬೆಂಕಿಯಿಂದ ಧಗಧಗಿಸುತ್ತಿದ್ದ ಒಲೆಯಿಂದ ಕಾದ ಕಬ್ಬಿಣದ ಸರಳನ್ನು ತೆಗೆದು ಹುಡುಗನ ಹೊಟ್ಟೆಗೆ ಬರೆಯಿಡುತ್ತಾನೆ.

ಆಗ ನೋವನ್ನು ಸಹಿಸಲಾಗದೆ ಬಾಲಕ ಜೋರಾಗಿ ಬೊಬ್ಬಿಡುತ್ತಾನೆ. ಹೊಟ್ಟೆಯ ಚರ್ಮದ ಮೇಲೆ ದೊಡ್ಡ ಗುಳ್ಳೆಯೇಳುತ್ತದೆ. ಈ ಕಾದ ಸಲಾಖೆಯಿಂದ ಮತ್ತೆ ಮತ್ತೆ ಬಾಲಕನ ಹೊಟ್ಟೆಗೆ ಬರೆಯೆಳೆಯಲಾಗುತ್ತದೆ. ಬಾಲಕನ ರೋದನ ಹೆಚ್ಚಾದಂತೆ,ಅಲ್ಲಿದ್ದವರಿಗೆ ಸಂತಸವಾಗುತ್ತದೆ. ಏಕೆಂದರೆ, ಮಿರ್ಗಿತಾಂಡ್ ಗ್ರಾಮದ ಜನತೆಗೆ, ತಮ್ಮ ಮಕ್ಕಳನ್ನು ಬಾಧಿಸುತ್ತಿರುವ ಹೊಟ್ಟೆನೋವನ್ನು ಗುಣಪಡಿಸಲು, ಕಾದಕಬ್ಬಿಣದಿಂದ ಬರೆಯೇಳುವುದಷ್ಟೇ ತಮಗಿರುವ ಏಕಮಾತ್ರ ದಾರಿ ಎಂದು ಭಾವಿಸಿದ್ದಾರೆ.

ತನ್ನ ಮಗುವಿನ ಮೇಲೆ ಈ ಅಮಾನುಷ ಆಚರಣೆಯನ್ನು ನಡೆಸಿದ್ದಕ್ಕಾಗಿ ದಾಸ್‌ಗೆ ಕಿಂಚಿತ್ತೂ ಬೇಸರವಿಲ್ಲ. ಅಷ್ಟಕ್ಕೂ,ಇಡೀ ಗ್ರಾಮದಲ್ಲಿ ಹೊಟ್ಟೆಯಲ್ಲಿ ಬರೆಯಿಲ್ಲದ ಒಬ್ಬನೇ ಒಬ್ಬ ವ್ಯಕ್ತಿ ಕಾಣಸಿಗುವುದು ತೀರಾ ಕಷ್ಟ. ಹೀಗೆ ಹೊಟ್ಟೆಗೆ ಬರೆಯೆಳೆಯಲ್ಪಟ್ಟ ಕೆಲವು ಮಕ್ಕಳು ಸತ್ತಿದ್ದರೂ ಸಹ, ಈ ಕ್ರೂರ ಆಚರಣೆಯು ಈಗಲೂ ಮುಂದುವರಿದಿದೆ. ಏಕೆಂದರೆ ತಮ್ಮ ಮಕ್ಕಳಿಗೆ ಸಮರ್ಪಕ ಪೌಷ್ಟಿಕ ಆಹಾರವನ್ನು ಒದಗಿಸಲು ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸುವ ಆರ್ಥಿಕ ಚೈತನ್ಯ ಹೆತ್ತವರಿಗಿಲ್ಲದಿರುವುದರಿಂದಲೇ,ಅವರು ಹೊಟ್ಟೆಗೆ ಬರೆಯೆಳೆಯುವಂತಹ ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದಾರೆಂಬುದರಲ್ಲಿ ಸಂಶಯವಿಲ್ಲ.

ಕೃಷಿಕ್ಷೇತ್ರದಲ್ಲಿ ಹೂಡಿಕೆಯ ವೈಫಲ್ಯ ಹಾಗೂ ಸಣ್ಣ ಪ್ರಮಾಣದ ಕೃಷಿಗೆ ಸರಕಾರಿ ಬೆಂಬಲದ ಕೊರತೆಯು, ಭಾರತದ ಸುಮಾರು ಅರ್ಧಾಂಶದಷ್ಟು ಮಕ್ಕಳನ್ನು ಪೌಷ್ಟಿಕ ಆಹಾರದ ಅಭಾವದಿಂದ ನರಳುವಂತೆ ಮಾಡಿದೆ. ಜೊತೆಗೆ ದೇಶದ ಸುಮಾರು ೧೦೦ ಕೋಟಿ ಜನಸಂಖ್ಯೆಯ ಐದನೆ ಒಂದಂಶದಷ್ಟು ಜನರನ್ನು ಹಸಿವಿನ ಕೂಪಕ್ಕೆ ತಳ್ಳಿದೆ.

ಜಾಗತಿಕ ಮಕ್ಕಳ ಸೇವಾಸಂಸ್ಥೆ ‘ಆಕ್ಷನ್ ಏಯ್ಡ್’ ಶತಮಾನದ ಅಭಿವೃದ್ಧಿ ಗುರಿಗಳ ಕುರಿತು ನ್ಯೂಯಾರ್ಕ್‌ನಲ್ಲಿ ಮುಂದಿನ ವಾರ ನಡೆಸಲಿರುವ ಶೃಂಗಸಭೆಗೆ ಪೂರ್ವಭಾವಿಯಾಗಿ ಬಿಡುಗಡೆಗೊಳಿಸಿರುವ ವರದಿಯು, ವಿಶ್ವದ ಕಡುಬಡತನದ ರಾಷ್ಟ್ರಗಳ ಜನತೆಯ ಹಸಿವನ್ನು ನೀಗಿಸಬೇಕಾದರೆ ವರ್ಷಕ್ಕೆ ೨೯೦ ಶತಕೋಟಿ ಡಾಲರ್‌ಗಳ ವೆಚ್ಚ ತಗಲುತ್ತದೆ ಎಂದು ಹೇಳಿದೆ. ಇದು ೨೦೧೫ರೊಳಗೆ ಜಾಗತಿಕ ಮಟ್ಟದಲ್ಲಿ ಹಸಿವಿನ ಸಮಸ್ಯೆಯನ್ನು ನೀಗಿಸುವ ಗುರಿಯನ್ನು ಸಾಧಿಸಲು ವಿಶ್ವಸಂಸ್ಥೆಯು ನಿಗದಿಪಡಿಸಿದ ಅಂದಾಜು ಮೊತ್ತಕ್ಕಿಂತ ಹತ್ತು ಪಟ್ಟು ಅಧಿಕವಾಗಿದೆ.

ಆಫ್ರಿಕ ಖಂಡದ ಸಹರಾ ಭೂಭಾಗದ ರಾಷ್ಟ್ರಗಳಿಗಿಂತಲೂ ಅಧಿಕ ಪ್ರಮಾಣದ ಪೌಷ್ಟಿಕ ಆಹಾರದ ಕೊರತೆಯನ್ನು ಭಾರತವು ಎದುರಿಸುತ್ತಿದೆ. ಭಾರತದಲ್ಲಿ ಐದು ವರ್ಷಗಳಿಗಿಂತ ಕೆಳಗಿನ ಶೇ.೪೩.೫ರಷ್ಟು ಮಕ್ಕಳು ದೇಹತೂಕದ ಕೊರತೆಯನ್ನು ಅನುಭವಿಸುತ್ತಿದ್ದಾರೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ಆಫ್ರಿಕದ ದೇಶಗಳಾದ ಸೂಡಾನ್ ಮತ್ತು ಝಿಂಬಾಬ್ವೆಗಿಂತಲೂ ಕೆಳಗಿನ ಸ್ಥಾನದಲ್ಲಿದೆ. ಕಳೆದ ವರ್ಷ ಭಾರತವು ಕಂಡಂತಹ ವಿನಾಶಕಾರಿ ಮುಂಗಾರು ಮಳೆ , ಆದರ ಬೆನ್ನಿಗೆ ಬಂದ ಬರಗಾಲ ಹಾಗೂ ಬೆಳೆ ವೈಫಲ್ಯಗಳು, ಹಸಿವಿನ ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡಿದೆಯೆಂದು ‘ಆಕ್ಷನ್ ಏಯ್ಡ್’ ವರದಿ ಹೇಳಿದೆ.

ಸುಮಾರು ೧.೯೦ ಲಕ್ಷ ಜನರಿಗೆ ಉಣಿಸಬಹುದಾಗಿದ್ದ ೬೭ ಸಾವಿರ ಟನ್ ಆಹಾರಧಾನ್ಯಗಳು ಸರಕಾರಿ ಗೋದಾ ಮುಗಳಲ್ಲಿ ಕೊಳೆತು ಹೋಗಲು ಆಸ್ಪದ ನೀಡಿದ್ದಕ್ಕಾಗಿ, ಸುಪ್ರೀಂಕೋರ್ಟ್ ಕಳೆದ ತಿಂಗಳು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಮಾತ್ರವಲ್ಲದೆ ಕಳಪೆ ರೀತಿಯ ದಾಸ್ತಾನಿನಿಂದಾಗಿ ಕೊಳೆತು ಹೋಗುವ ಅಪಾಯದಲ್ಲಿದ್ದ ೧೭.೮ ಟನ್ ಆಹಾರಧಾನ್ಯಗಳನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆಯೂ ಅದು ಆದೇಶಿಸಿತು.

ಆದರೆ ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ, ಸರಕಾರದ ನೀತಿಯನ್ನು ರೂಪಿಸುವ ವಿಷಯಗಳಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ನಡೆಸುತ್ತಿದೆಯೆಂದು ಪ್ರಧಾನಿ ಮನಮೋಹನ್‌ಸಿಂಗ್ ತಗಾದೆ ತೆಗೆದರು. ಬಡತನ ರೇಖೆಗಿಂತ ಕೆಳಗಿರುವ ದೇಶದ ಅಂದಾಜು ೩೭ ಶೇಕಡ ಜನಸಂಖ್ಯೆಗೆ ಆಹಾರವನ್ನು ಉಚಿತವಾಗಿ ವಿತರಿಸುವುದರಿಂದ ರೈತರ ಉತ್ಪನ್ನಗಳಿಗೆ ಯಾವುದೇ ಉತ್ತೇಜಕಗಳನ್ನು ನೀಡಲು ಅಸಾಧ್ಯವಾಗುವುದೆಂದು ಎಚ್ಚರಿಕೆ ನೀಡಿದರು. ಆದರೆ ಸುಪ್ರೀಂಕೋರ್ಟ್‌ನ ನಿಲುವು ಅಚಲವಾಗಿತ್ತು. ತಾನು ನೀಡಿರುವುದು ಆದೇಶವೇ ಹೊರತು, ಸಲಹೆಯಲ್ಲವೆಂದು ಸ್ಪಷ್ಟವಾಗಿ ಸರಕಾರಕ್ಕೆ ತಿಳಿಸಿತು.

‘ಆಕ್ಷನ್ ಏಯ್ಡ್’ ಪ್ರಕಾರ, ೧೯೯೦ರಲ್ಲಿದ್ದಷ್ಟೇ ಮಟ್ಟದಲ್ಲಿ ಜಾಗತಿಕ ಹಸಿವಿನ ಪ್ರಮಾಣವು ೨೦೦೯ರಲ್ಲಿಯೂ ಇತ್ತು. ಹಸಿವಿನ ವಿರುದ್ಧ ಹೋರಾಡಲು ಅಭಿವೃದ್ಧಿ ಹೊಂದಿದ ದೇಶಗಳು ೧೪ ಶತಕೋಟಿ ಡಾಲರ್‌ಗಳನ್ನು ದೇಣಿಗೆಯಾಗಿ ನೀಡುವಂತೆ ಈ ಸೇವಾಸಂಸ್ಥೆಯು ಆಗ್ರಹಿಸಿತ್ತು.

“ಮುಂದಿನ ಐದು ವರ್ಷಗಳಲ್ಲಿ ಸಾಧಿಸಬೇಕಾದ ಅತಿ ಮುಖ್ಯ ಅಭಿವೃದ್ಧಿ ಗುರಿಗಳ ಬಗ್ಗೆ ಚರ್ಚಿಸಲು ಮುಂದಿನ ವಾರ ಶೃಂಗಸಭೆ ನಡೆಯಲಿರುವ ಈ ಸಂದರ್ಭದಲ್ಲಿ ವಿಶ್ವದಾದ್ಯಂತ ೧೦೦ ಕೋಟಿ ಜನರು ಹೊಟ್ಟೆ ತುಂಬದೆ ನಿದ್ರಿಸುವಂತಹ ಪರಿಸ್ಥಿತಿಯಿದೆಯೆಂದು ಸೇವಾಸಂಸ್ಥೆಯ ನೀತಿ ರಚನಾ ವಿಭಾಗದ ವರಿಷ್ಠ ಮೆರೆಡಿತ್ ಅಲೆಕ್ಸಾಂಡರ್ ತಿಳಿಸಿದ್ದಾರೆ. ವಿಶ್ವದ ಆರನೆ ಒಂದರಷ್ಟು ಜನಸಂಖ್ಯೆಗೆ ಹೊಟ್ಟೆ ತುಂಬಾ ತಿನ್ನುವಷ್ಟು ಆಹಾರ ದೊರೆಯುತ್ತಿಲ್ಲ. ಆದರೆ ನಾವು ಭೂಗ್ರಹದಲ್ಲಿರುವ ಪ್ರತಿಯೊಬ್ಬ ಪುರುಷ, ಮಹಿಳೆ ಹಾಗೂ ಮಗುವಿಗೆ ಸಾಕಾಗುವಷ್ಟು ಆಹಾರವನ್ನು ಬೆಳೆಸುತ್ತಿದ್ದೇವೆ. ಆದರೆ ಹಸಿವಿನ ಸಮಸ್ಯೆಗೆ ಆಹಾರದ ಕೊರತೆ ಮುಖ್ಯ ಕಾರಣವಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ” ಎಂದವರು ಹೇಳಿದ್ದಾರೆ.

೨೦೦೯ರಲ್ಲಿ ವಿಶ್ವದಾದ್ಯಂತ ೯೨.೫೦ ಕೋಟಿ ಜನರು ಹಸಿವಿನಿಂದ ಬಾಧಿತರಾಗಿದ್ದು, ಇದು ಹಿಂದಿನ ವರ್ಷಕ್ಕಿಂತ ೯.೮೦ ಕೋಟಿಯಷ್ಟು ಕಡಿಮೆಯಾಗಿದೆಯೆಂದು ವಿಶ್ವಸಂಸ್ಥೆಯ ಆಹಾರ ಹಾಗೂ ಕೃಷಿ ಸಂಸ್ಥೆಯು ಪ್ರಕಟಿಸಿದೆ. ಆದರೆ ಎರಡು ವರ್ಷಗಳಿಂದ ಕಂಡುಬಂದಿರುವ ಪೂರಕ ಹವಾಮಾನ ಪರಿಸ್ಥಿತಿ ಹಾಗೂ ಅದೃಷ್ಟ ಕಾರಣವೇ ಹೊರತು ಜಾಗತಿಕ ನಾಯಕರು ಕೈಗೊಂಡ ಕ್ರಮಗಳಿಂದಾಗಿ ಅಲ್ಲವೆಂದು ‘ಓಕ್ಸ್‌ಫಾಮ್’ ಎಚ್ಚರಿಕೆ ನೀಡಿದೆ.

ಮಿರ್ಗಿತಾಂಡ್ ಗ್ರಾಮವು ಜಾರ್ಖಂಡ್ ರಾಜಧಾನಿ ರಾಂಚಿಯಿಂದ ೧೯೫ ಕಿ.ಮೀ. ದೂರದ ಪೂರ್ವದಲ್ಲಿದೆ. ಒಂದರ್ಥದಲ್ಲಿ ಈ ಗ್ರಾಮವು ಭಾರತ ದೇಶದಲ್ಲಿದ್ದೂ ಇಲ್ಲದಂತಿದೆ. ಮಿರ್ಗಿತಾಂಡ್ ಹಾಗೂ ಆಸುಪಾಸಿನ ಹಳ್ಳಿಗಳಲ್ಲಿ ಪ್ರಬಲವಾಗಿರುವ ಮಾವೊವಾದಿಗಳು, ಭದ್ರತಾಪಡೆಗಳನ್ನು ಈ ಪ್ರದೇಶದೊಳಗೆ ಕಾಲಿಡಲೂ ಅವಕಾಶ ನೀಡುತ್ತಿಲ್ಲ.

ಈ ಗ್ರಾಮದಲ್ಲಿ ಪ್ರತಿಯೊಂದು ಮಗುವಿನ ಹೊಟ್ಟೆಯ ಮೇಲಿರುವ ಬರೆಯ ಗುರುತುಗಳನ್ನು ನೋಡಿದಾಗ ಹೊರಗಿನವರ‍್ಯಾರಾದರೂ ದಂಗಾಗುತ್ತಾರೆ. ಆದರೆ ಬಡತನದಲ್ಲೇ ಬೇಯುತ್ತಿರುವ ಇಲ್ಲಿನ ಜನತೆಗೆ ಇದು ಸಹಜವಾಗಿಬಿಟ್ಟಿದೆ. ಹಳ್ಳಿಗೆ ಭೇಟಿ ನೀಡಿದ ಪತ್ರಕರ್ತರು ಈ ಬಗ್ಗೆ ವಿಚಾರಿಸಿದಾಗ, ಗ್ರಾಮಸ್ಥರು ಮಕ್ಕಳಿಗೆ ಬರೆಯ ಗುರುತುಗಳನ್ನು ತೋರಿಸುವಂತೆ ಹೇಳಿದರು. ಐದು ವರ್ಷದ ಬಾಲಕ ಮೋಲಿಲಾಲ್ ಕಿಸ್ಕು, ಶರ್ಟ್ ಎತ್ತಿ ದೊಡ್ಡದಾಗಿ ಉಬ್ಬಿರುವ ತನ್ನ ಉದರವನ್ನು ತೋರಿಸಿದಾಗ, ಅದರ ಮೇಲೆ ವೃತ್ತಾಕಾರದಲ್ಲಿ ಬರೆ ಎಳೆದ ಗುರುತುಗಳಿದ್ದವು. ಅಂದ ಹಾಗೆ ಈ ಗ್ರಾಮದಲ್ಲಿ ಹೊಟ್ಟೆಯಲ್ಲಿ ಬರೆಯ ಗುರುತುಗಳಿರದ ಮಕ್ಕಳ್ಯಾರೂ ಇಲ್ಲವೆಂಬುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.

ಅಂಚೆಕಚೇರಿಯಲ್ಲಿ ದುಡಿಯುತ್ತಿರುವ ೪೪ರ ಹರೆಯದ ಮನೋರಂಜನ್ ಮೆಹ್ತಾ, ಇವೆಲ್ಲವನ್ನೂ ಮರದ ದಿಮ್ಮಿಯೊಂದರ ಮೇಲೆ ಕುಳಿತು ನೋಡುತ್ತಿದ್ದ. ಆತನು ಕೂಡಾ ಈ ಮೂಢನಂಬಿಕೆಯಿಂದ ಹೊರತಾಗಿಲ್ಲ.ವಿದ್ಯಾವಂತನಾಗಿದ್ದರೂ ಸಹ, ತಾನು ಮಗ ಹೇಮಂತ್‌ನನ್ನು ಈ ಆಚರಣೆಗೆ ಒಳಪಡಿಸಿದ್ದಾಗಿ ಆತ ಹೇಳುತ್ತಾನೆ.

“ನನ್ನ ಮಗನ ಹೊಟ್ಟೆ ದೊಡ್ಡದಾಗಿ ಉಬ್ಬಿತ್ತು. ನಾವು ಹಲವಾರು ವೈದ್ಯರ ಬಳಿ ಹೋದೆವು. ಅವರಿಗೆ ಗುಣಪಡಿಸಲು ಸಾಧ್ಯವಾಗಲಿಲ್ಲ” ಎಂದಾತ ಹೇಳುತ್ತಾನೆ. “ಈ ಗ್ರಾಮದಲ್ಲಿ, ಮಗುವಿನ ಹೊಟ್ಟೆಯು ಮಡಕೆಯಾಕಾರದಲ್ಲಿ ಉಬ್ಬಿದರೆ, ನಾವು ಮಗುವಿನ ಹೊಟ್ಟೆಯ ಮೇಲೆ ಬಾಳೆ‌ಎಲೆಯ ತುಂಡನ್ನು ಇರಿಸುತ್ತೇವೆ. ನಂತರ ನಾವು ಎಲೆಯ ಮೇಲೆ ಸುಡುತ್ತಿರುವ ಕಲ್ಲಿದ್ದಲು ಅಥವಾ ಕಾದ ಕಬ್ಬಿಣವನ್ನು ಇಡುತ್ತೇವೆ. ಒಂದು ವೇಳೆ ಮಗುವು ನೋವಿನಿಂದ ಅರಚುತ್ತಿದ್ದರೆ, ಹೊಟ್ಟೆಯಲ್ಲಿರುವ ಹುಳುಗಳು ಸಾಯುತ್ತವೆಯೆಂದು ಅರ್ಥ.

ಆದರೆ ಮೆಹ್ತಾನ ಪುತ್ರ ಹೇಮಂತ್‌ನ ಹೊಟ್ಟೆಗೆ ಎಳೆದ ಬರೆಯೇ ಅವನಿಗೆ ಮೃತ್ಯುವಾಗಿ ಪರಿಣಮಿಸಿತು. ಬರೆಯಿಂದಾದ ಗಾಯಕ್ಕೆ ರೋಗಾಣುಗಳ ಸೋಂಕು ತಗಲಿತು ಮತ್ತು ಆತ ೨೧ ಡಿಸೆಂಬರ್ ೨೦೦೭ರಲ್ಲಿ ಕೊನೆಯುಸಿರೆಳೆದ. ಆಗ ಅವನಿಗೆ ಕೇವಲ ೭ ವರ್ಷ ವಯಸ್ಸು.

ಉಳಿವಿಗಾಗಿ ಹೋರಾಟ

ಭಾರತವು ಆರ್ಥಿಕ ರಂಗದಲ್ಲಿ ಪ್ರಗತಿಯೆಡೆಗೆ ದಾಪುಗಾಲಿನ ಹೆಜ್ಜೆಯನ್ನಿಡುತ್ತಿದೆ. ವಿಪರ್ಯಾಸವೆಂದರೆ, ಈ ದೇಶವು ಇಂದಿಗೂ ಬಡತನ ಹಾಗೂ ಹಸಿವುನಿಂದ ನರಳುತ್ತಲೇ ಇದೆ.

ಭಾರತದ ಕೇವಲ ೮ ರಾಜ್ಯಗಳಲ್ಲಿ ೪೧ ಕೋಟಿ ಜನರು,ಕಡುಬಡತನದಲ್ಲಿ ಜೀವಿಸುತ್ತಿದ್ದಾರೆ. ಇದು ಆಫ್ರಿಕ ಖಂಡದ ಸಹರಾ ಭೂಖಂಡದಲ್ಲಿ ೨೬ ದೇಶಗಳ ಒಟ್ಟು ಜನಸಂಖ್ಯೆಗಿಂತಲೂ ಅಧಿಕ.

ಕಳೆದ ವರ್ಷದ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು“ಆತಂಕಕಾರಿ ಪರಿಸ್ಥಿತಿ”ಯನ್ನು ಎದುರಿಸುತ್ತಿರುವ ೮೫ ರಾಷ್ಟ್ರಗಳ ಪಟ್ಟಿಯಲ್ಲಿ ೬೫ನೆ ಸ್ಥಾನದಲ್ಲಿದ್ದು, ಉ.ಕೊರಿಯಾಗಿಂತಲೂ ಕೆಳಗಿದೆ.

ಜೊತೆಗೆ ಭಾರತಾದ್ಯಂತ ಲಕ್ಷಾಂತರ ಮಂದಿ ಪೌಷ್ಟಿಕ ಆಹಾರದ ಕೊರತೆಯಿಂದ ನರಳುತ್ತಿದ್ದಾರೆ. ದಿಲ್ಲಿಯ ಕೊಳೆಗೇರಿಗಳಲ್ಲಿ ಆರು ವರ್ಷಕ್ಕಿಂತ ಕೆಳಗಿನ ಪ್ರಾಯದ ಶೇ.೬೬ರಷ್ಟು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಾಧಿತರಾಗಿದ್ದಾರೆಂದು, ಮೇಯಲ್ಲಿ ಬಿಡುಗಡೆಗೊಂಡ ಅಧ್ಯಯನ ವರದಿಯೊಂದು ತಿಳಿಸಿದೆ. ಸಮಾಜದ ಅತ್ಯಂತ ದುರ್ಬಲ ವರ್ಗಗಳಿಗೆ,ದೊರೆಯಬೇಕಾಗಿದ್ದ ಸರಕಾರಿ ಕಾರ್ಯಕ್ರಮಗಳು ತಲುಪದಿರುವುದು, ಹಸಿವಿನ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ.

ಜಾರ್ಖಂಡ್ ರಾಜ್ಯದ ೨೦ ಹಳ್ಳಿಗಳಲ್ಲಿ ನಡೆಸಿದ ಸಮೀಕ್ಷೆಯೊಂದು ಹಸಿವಿನಿಂದಾಗಿ ಅಲ್ಲಿ ೧೩ ಮಂದಿ ಸಾವನ್ನಪ್ಪಿರುವುದನ್ನ್ನು ಹಾಗೂ ೧ ಸಾವಿರ ಕುಟುಂಬಗಳು, ಹಸಿವಿಗೆ ಸಂಬಂಧಿಸಿ ರೋಗಲಕ್ಷಣಗಳಿಂದ ನರಳುತ್ತಿರುವುದನ್ನು ಬೆಳಕಿಗೆ ತಂದಿತ್ತು. ಜಾರ್ಖಂಡ್ ರಾಜ್ಯದಲ್ಲಿ ಪ್ರತಿ ವರ್ಷವೂ ಸುಮಾರು ೫೦ ಸಾವಿರ ಮಕ್ಕಳು ಮೊದಲ ಹುಟ್ಟುಹಬ್ಬವನ್ನು ಆಚರಿಸುವ ಮುನ್ನವೇ ಸಾವನ್ನಪ್ಪುತ್ತವೆ. ಭಾರತದಲ್ಲಿ ಅತ್ಯಂತ ಕಳಪೆ ವೇತನವನ್ನು ಪಡೆಯುತ್ತಿರುವವರಲ್ಲಿ ಜಾರ್ಖಂಡ್‌ನ ಸರಕಾರಿ ವೈದ್ಯರೂ ಸೇರಿದ್ದಾರೆ. ರಾಜಧಾನಿ ಹೊಸದಿಲ್ಲಿಯ ಸರಕಾರಿ ವೈದ್ಯರ ಸಂಪಾದನೆಯ ಅರ್ಧಾಂಶದಷ್ಟು ವೇತನ ಮಾತ್ರವೇ ಜಾರ್ಖಂಡ್‌ನ ವೈದ್ಯರಿಗೆ ದೊರೆಯುತ್ತಿದೆ. ಐದು ವರ್ಷಗಳ ರಾಜ್ಯ ಸರಕಾರವು ನೇಮಿಸಿದ ೨೪೬೮ ವೈದ್ಯರ ಪೈಕಿ ೨೨೦೦ ಮಂದಿ,ಯಾಕೆ ಉದ್ಯೋಗವನ್ನು ತೊರೆದಿದ್ದಾರೆಂಬ ಪ್ರಶ್ನೆಗೆ ಉತ್ತರ ಇಲ್ಲಿ ಅಡಗಿದೆ. ಜಾರ್ಖಂಡ್‌ಗೆ ೮೦೦ಕ್ಕೂ ಅಧಿಕ ಆರೋಗ್ಯ ಕೇಂದ್ರಗಳ ಅಗತ್ಯವಿದೆಯಾದರೂ,ಅಲ್ಲಿ ಈಗ ಇರುವುದು ಕೇವಲ ೩೩೦.

ಇನ್ನು ಮಧ್ಯ ಭಾರತದ ರಾಜ್ಯವಾದ ಮಧ್ಯಪ್ರದೇಶದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಅಲ್ಲಿ ಕಳೆದ ಐದು ವರ್ಷಗಳಲ್ಲಿ ಐದಕ್ಕಿಂತಲೂ ಕೆಳಗಿನ ವಯಸ್ಸಿನ ೫ ಲಕ್ಷ ಮಕ್ಕಳು ಸಾವನ್ನಪ್ಪಿದ್ದಾರೆ ಹಾಗೂ ಶೇ.೬೦ರಷ್ಟು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ನರಳುತ್ತಿದ್ದಾರೆ. ರಾಜ್ಯದ ಶೇ. ೩೭ರಷ್ಟು ಜನತೆ ಗ್ರಾಮೀಣ ಪ್ರದೇಶಗಳಲ್ಲಿ ಮಾಸಿಕವಾಗಿ ೩೨೭ ರೂ. ಹಾಗೂ ನಗರ ಪ್ರದೇಶಗಳಲ್ಲಿ ೫೭೦ ರೂ.ಗೂ ಕಡಿಮೆ ವರಮಾನದಲ್ಲಿ ಬದುಕುತ್ತಿದ್ದಾರೆ.

ಬಡವರೇ ಅಧಿಕಸಂಖ್ಯೆಯಲ್ಲಿರುವ ಮಧ್ಯಪ್ರದೇಶದ ಸರಕಾರಿ ಗೋದಾಮುಗಳಲ್ಲಿ ೧ ಲಕ್ಷ ಟನ್ ಗೋಧಿ ಕೊಳೆತುಬಿದ್ದಿರುವುದನ್ನು ತೋರಿಸುವ ದೃಶ್ಯಗಳನ್ನು ಮೇ ತಿಂಗಳಲ್ಲಿ ರಾಷ್ಟ್ರೀಯ ಟಿವಿ ವಾಹಿನಿಗಳು ಪ್ರಸಾರ ಮಾಡಿದಾಗ, ಕೋಲಾಹಲವುಂಟಾಗಿತ್ತು.

ಉತ್ತರಪ್ರದೇಶದಲ್ಲಿ ಗಾನೆ ಎಂಬ ಪಟ್ಟಣದಲ್ಲಿ ಮಕ್ಕಳು ಹಸಿವಿನ ಬೇಗೆಯನ್ನು ತಾಳಲಾರದೆ ಮಣ್ಣನ್ನು ತಿನ್ನುತ್ತಿರುವುದು ಕೂಡಾ ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ ಅದು ಮಾಧ್ಯಮಗಳಲ್ಲಿ ಬರತೊಡಗುತ್ತಿದ್ದಂತೆಯೇ, ಎಚ್ಚೆತ್ತ ಅಧಿಕಾರಿಗಳು ಒಂದಿಷ್ಟು ಆಹಾರವನ್ನು ರವಾನಿಸಿ ಕೈತೊಳೆದುಕೊಂಡರು ಹಾಗೂ ಗ್ರಾಮಸ್ಥರಿಗೆ ತೆಪ್ಪಗಿರುವಂತೆ ತಿಳಿಸಿದರು. ಹಸಿವನ್ನು ಮುಚ್ಚಿಡುವುದೆಂದರೆ ಹೀಗಲ್ಲವೇ?.

No comments:

Post a Comment