Monday, October 11, 2010

ಈ ತೀರ್ಪು ನ್ಯಾಯವೇ?

೬ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದದ ಬಗ್ಗೆ ಕೊನೆಗೂ ಒಂದು ತೀರ್ಪು ಹೊರ ಬಿದ್ದಿದೆ. ಆದರೆ ಈ ತೀರ್ಪು ನಿಜಕ್ಕೂ ನ್ಯಾಯವನ್ನು ನೀಡಿದೆಯೇ? ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿದಿ ದೆಯೇ? ಮೇಲ್ನೋಟಕ್ಕೆ ನೋಡಿದರೆ ಪ್ರಮುಖ ವಾದಿ-ಪ್ರತಿವಾದಿಗಳಾಗಿದ್ದ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ಹಿಂದೂತ್ವವಾದಿ ಸಂಘಟನೆಗಳ ಪ್ರತಿನಿಧಿಗಳಿಗೆ ವಿವಾದಿತ ಜಾಗವನ್ನು ಮೂರು ಭಾಗ ಮಾಡಿ ಹಂಚಲಾಗಿದೆ. ಇದರಿಂದಾಗಿ ಎಲ್ಲರಿಗೂ ನ್ಯಾಯ ಒದಗಿಸ ಲಾಗಿದೆ ಎಂಬ ಸಮಾಧಾನವನ್ನು ಕೆಲವರು ತೋರುತ್ತಾರೆ. ನ್ಯಾಯವೋ? ಅನ್ಯಾಯ ವೋ ಒಟ್ಟಿನಲ್ಲಿ ಇಡೀ ದೇಶಕ್ಕೆ ಬೆಂಕಿ ಹಚ್ಚಿದ ವಿವಾದವೊಂದು ಹೇಗೋ ಬಗೆಹರಿಯಿತಲ್ಲ ಎಂಬ ನಿಟ್ಟುಸಿರನ್ನು ಬಿಡುತ್ತಾರೆ. ಇನ್ನು ಮುಂದಾ ದರೂ ಶಾಂತಿ ಉಳಿದರೆ ಸಾಕು ಎಂಬ ಹತಾಶ, ಅಸಹಾಯಕತೆಯಿಂದ ತೀರ್ಪನ್ನು ಸ್ವಾಗತಿಸುತ್ತಿದ್ದಾರೆ. ಆದರೆ ಈ ತೀರ್ಪು ನಿಜಕ್ಕೂ ನ್ಯಾಯಾಧಾರಿತವಾದ ಶಾಂತಿ ಯನ್ನು ಎತ್ತಿ ಹಿಡಿದಿದೆಯೇ ಎಂಬುದನ್ನು ಗಮನಿಸಲೇಬೇಕಾಗಿದೆ.

ಈ ವಿವಾದದಲ್ಲಿ ಇದ್ದ ಪ್ರಮುಖ ವಾದ ಅಂಶಗಳ ಬಗ್ಗೆ ಯಾವ ಬಗೆಯ ನಿಲುವನ್ನು ನ್ಯಾಯಾಲಯ ತೆಗೆದು ಕೊಂಡಿದೆ? ಮೊದಲನೆಯದಾಗಿ ಇದು ರಾಮಜನ್ಮಭೂಮಿ ಎಂಬ ಪ್ರಮುಖವಾದ ವಿವಾದ ಒಂದು ಪುರಾಣದ ವಿಷಯವನ್ನು ಇತಿಹಾಸಿಕ ವಿಷಯವಾಗಿ ಪರಿಗಣಿಸಿದೆ. ದಾವೆ ಯನ್ನು ಪರಿಗಣಿಸಿದ್ದೆ ನ್ಯಾಯಕ್ಕೆ ಮಾಡಿದ ಅಪಚಾರ. ೧೯೮೯ರಲ್ಲಿ ಹಿಂದುತ್ವವಾದಿ ಸಂಘಟನೆಗಳು ಅಲಹಾಬಾದ್ ಹೈಕೋರ್ಟ್‌ನ ಮುಂದೆ ಹಾಕಿದ ದಾವೆಯಲ್ಲಿ ಸಾಕ್ಷಾತ್ ಶ್ರೀರಾಮಚಂದ್ರ ನನ್ನೆ ದಾವೆದಾರನನ್ನಾಗಿ ಮಾಡಿದ್ದವು. ಮತ್ತು ಆ ದೇವನು ಬಾಲ ರಾಮನಾಗಿರುವುದರಿಂದ ಅವನ ಗಾರ್ಡಿಯನ್‌ನಂತಾಗಿ ತಾವು ವಾದ ಮಾಡಿದ್ದೇವೆಂದು ಕೋರ್ಟ್ ಮುಂದೆ ಅಂUಕರಿಸಿದ್ದವು. ಇಂತಹ ಹಾಸ್ಯಾಸ್ಪದ ದಾವೆಯನ್ನು ಕೋರ್ಟ್ ಪರಿಗಣಿಸಿ ದ್ದಲ್ಲದೆ ಆ ಜಾಗವನ್ನು ರಾಮಜನ್ಮ ಭೂಮಿಯೆಂದು ಹಿಂದುಗಳು ಭಾವಿಸು ತ್ತಾದ್ದರಿಂದ ಮತ್ತೆ ಒಂದು ದೈವ ಸ್ವರೂಪವು ಯಾವುದೇ ಆಕಾರದಲ್ಲಾದರೂ ಇರಬಹುದಾದ್ದರಿಂದ ಅದು ರಾಮಜನ್ಮ ಭೂಮಿಯೇ ಎಂದು ಪರಿಗಣಿಸಿದೆ. ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇದಕ್ಕೆ ದಾವೆದಾರರ ಶ್ರದ್ಧೆಯೊಂದು ಪುರಾವೆಯೇ ಹೊರತು ಕಕ್ಷಿದಾರರು ಬೇರೆ ಯಾವುದೇ ಸಾಕ್ಷಿ ಪುರಾವೆಗಳನ್ನು ಒದಗಿಸಿಲ್ಲ. ಪುರಾಣ ಮತ್ತು ನಂಬಿಕೆ ವಿಷಯವೊಂದಕ್ಕೆ ಭೌತಿಕ ಸಾಕ್ಷಿ ಪುರಾವೆಗಳನ್ನು ಒದಗಿಸಲು ಬರುವುದಿಲ್ಲ. ಭಾರತದ ನ್ಯಾಯ ಸನ್ನಿಧಿಯಲ್ಲಿ ಸಾಕ್ಷಿ ಪುರಾವೆ ಇಲ್ಲದೆ ನ್ಯಾಯದಾನ ಸಾಧ್ಯವೇ ಇಲ್ಲ. ಆದರೂ ಇಲ್ಲಿ ಬಾಲ ರಾಮನೆಂಬ ನಂಬಿಕೆಯ ವಿಷಯವನ್ನು ಭೌತಿಕ ಅಸ್ತಿತ್ವವುಳ್ಳ ಕಕ್ಷಿದಾರ ರನ್ನಾಗಿ ನ್ಯಾಯಾಲಯ ಪರಿಗಣಿಸಿರುವುದು ಮಾತ್ರವಲ್ಲದೇ ನಂಬಿಕೆ ವಿಷಯವನ್ನೇ ಪ್ರಮುಖವಾಗಿ ಪರಿಗಣಿಸಿ ವಿವಾದಿತ ಸ್ಥಳವನ್ನು ರಾಮಜನ್ಮ ಭೂಮಿಯೆಂದು ಘೋಷಿಸಿದೆ. ಇದು ಸತ್ಯಕ್ಕೆ, ನ್ಯಾಯಕ್ಕೆ, ಸಂವಿಧಾನಕ್ಕೆ ಮಾಡಿದ ಘೋರ ಅಪಚಾರ ವಾಗಿದೆ. ಅಷ್ಟು ಮಾತ್ರವಲ್ಲ, ಬರಲಿರುವ ದಿನಗಳಲ್ಲಿ ಈ ನ್ಯಾಯಾದೇಶ ಅಪಾಯಗಳ ಹುತ್ತವನ್ನೇ ಹುಟ್ಟಿಸಿ ಹಾಕಲಿದೆ. ಏಕೆಂದರೆ ಒಂದು ಸ್ಥಳವು ಮಸೀದಿಯೋ ಮಂದಿರವೋ ಎಂಬುದು ಪುರಾವೆಗಳಿಲ್ಲದ ಬಹುಸಂಖ್ಯಾತರ ನಂಬಿಕೆಯೊಂದರ ಮೇಲೆ ತೀರ್ಮಾನವಾಗಿ ಬಿಟ್ಟರೆ ಅದು ದೇಶಾದ್ಯಂತ ಇಂತಹುದೇ ಹಲವಾರು ವಿವಾದಗಳನ್ನು ಹುಟ್ಟು ಹಾಕುವುದಕ್ಕೆ ಕಾರಣವಾಗುವು ದಿಲ್ಲವೇ? ಈಗಾಗಲೇ ಸಂಘಪರಿವಾರ ದವರೇ ದೇಶಾದ್ಯಂತ ೨೦೦೦ಕ್ಕೂ ಹೆಚ್ಚಿನ ಜಾಗಗಳಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ ಎಂದು ಸಾಕ್ಷಿ ಪುರಾವೆಗಳಿಲ್ಲದೆ ಗಲಭೆಗಳನ್ನು ಹುಟ್ಟ್ಟು ಹಾಕಿದ್ದಾರೆ. ಅಲ್ಲಿಯೂ ಕೂಡ ಸಂಘ ಪರಿವಾರದವರು ಶ್ರದ್ಧೆಯ ವಿಷಯವನ್ನೇ ಮುಂದು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬಂದಿರುವ ಆದೇಶ ಮುಂದೆ ಎಂತಹ ಸಂಕ್ಷೋಭೆಗಳನ್ನು ಹುಟ್ಟು ಹಾಕಬಹುದು? ಎರಡನೆಯದಾಗಿ ನ್ಯಾಯಾಲಯದ ಮುಂದಿದ್ದ ಮತ್ತೊಂದು ಪ್ರಶ್ನೆ ೧೫೨೮ರಲ್ಲಿ ಅಲ್ಲಿ ಬಾಬರಿ ಮಸೀದಿಯನ್ನು ಕಟ್ಟಿದಾಗ ಮಂದಿರವಿತ್ತೇ? ಮತ್ತು ಇದ್ದ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಲಾಯಿತೇ? ಎಂಬ ಪ್ರಶ್ನೆಗಳು. ಇದರ ಬಗ್ಗೆ ಮೂರು ನ್ಯಾಯಾಧೀಶರು ಬೇರೆ ಬೇರೆ ಅಭಿಪ್ರಾಯ ಗಳನ್ನು ಹೊಂದಿದ್ದಾರೆ. ಇಬ್ಬರು ನ್ಯಾಯಾ ಧೀಶರು ಬಾಬರಿ ಮಸೀದಿ ಕಟ್ಟುವ ಮುನ್ನ ಅಲ್ಲಿ ಮಂದಿರವೊಂದು ಇತ್ತೆಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬ ನ್ಯಾಯಾಧೀಶರು ಅಲ್ಲಿ ಮಂದಿರ ತರಹದ ಧಾರ್ಮಿಕ ಸ್ಥಳವೊಂದು ಇದ್ದಿರಬಹುದಾ ದರೂ ಅದನ್ನು ಕೆಡವಿ ಬಾಬರಿ ಮಸೀದಿ ಯನ್ನು ಕಟ್ಟಲಾಗಿದೆಯೆಂದು ಹೇಳಲಾಗುವು ದಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಅದೇನೇ ಇದ್ದರೂ ಸಾರಾಂಶ ಬಾಬರಿ ಮಸೀದಿ ಇದ್ದ ಜಾಗದಲ್ಲಿ ಮಂದಿರವೊಂದು ಇತ್ತೆಂದು ಅಭಿಪ್ರಾಯಕ್ಕೆ ಬರಲು ಅರ್ಕಿಯಾಲಜಿಕಲ್ ಸರ್ವೇ ಅಫ್ ಇಂಡಿಯಾ ನಡೆಸಿದ ಉತ್ಖನನದ ಪುರಾವೆಗಳನ್ನು ಆಧರಿಸಿದ್ದಾರೆ. ಆದರೆ ಆ ವರದಿ ಖಡಾಖಂಡಿತವಾಗಿ ಉತ್ಖನನದಲ್ಲಿ ಸಿಕ್ಕ ಅವಶೇಷಗಳು ಮಂದಿರವೇ ಎಂದೇನೂ ಹೇಳುವುದಿಲ್ಲ. ಆದರೂ ನ್ಯಾಯಾಲಯ ಅದು ಮಂದಿರವೇ ಎಂಬ ತೀರ್ಮಾನಕ್ಕೆ ಹೇಗೇ ಬಂದಿತೆಂಬುದನ್ನು ಎಂಟುವರೆ ಸಾವಿರ ಪುಟಗಳ ಆದೇಶದಲ್ಲಿ ಹುಡುಕ ಬೇಕಾಗಿದೆ. ಅದೇನೇ ಇರಲಿ ೪೦೦ ವರ್ಷಕ್ಕೂ ಹಿಂದೆ ನಡೆದು ಹೋದ ಅಥವಾ ನಡೆಯದೇ ಇರಬಹುದಾದ ಸಂಗತಿಯೊಂದನ್ನು ವರ್ತಮಾನದ ವಿವಾದವನ್ನು ಬಗೆಹರಿಸಲು ಸೂಕ್ತ ಮಾನದಂಡವಾಗಿ ಇಟ್ಟುಕೊಂಡಿರು ವುದನ್ನೆ ಪ್ರಾಯಶಃ ಪ್ರಪಂಚದ ಯಾವುದೇ ಪ್ರಜಾಪ್ರಭುತ್ವವು ಮಾಡಿ ರುವುದಿಲ್ಲ. ಇಂತಹ ಐತಿಹಾಸಿಕ ಸಂಗತಿಗಳನ್ನು ನಿರ್ಧರಿಸಲು ಇತಿಹಾಸ ಪರಿಣಿತರೇ ಬೇಕೆ ವಿನಃ ಅದರ ಬಗ್ಗೆ ಯಾವುದೇ ತರಬೇತಿ ಪಡೆಯದ ನ್ಯಾಯಾಧೀಶರಲ್ಲ. ಹೀಗಾಗಿ ಯಾವುದೇ ಸಾಕ್ಷಿ ಪುರಾವೆಯಿಲ್ಲದೆ ಅದು ಮಂದಿರವೆಂಬ ತೀರ್ಮಾನಕ್ಕೆ ಬಂದಿ ದ್ದಾರೆ. ಅಲ್ಲಿ ಕಟ್ಟಿದ್ದ ಮಸೀದಿಯು ಇಸ್ಲಾಮಿಕ್ ಶಾಸ್ತ್ರಗಳ ಅನುಸಾರವಾಗಿ ಇರುವ ಮಸೀದಿಯಾಗಲು ಸಾಧ್ಯವಿಲ್ಲ ಎಂಬ ತೀರ್ಮಾನವನ್ನು ನ್ಯಾಯಾಲಯ ನೀಡಿ ಬಿಟ್ಟಿದೆ.

ಇದರಲ್ಲಿ ಗಮನಿಸಬೇಕಾದ ಮುಖ್ಯಾಂಶವೇನೆಂದರೆ ಮಂದಿರ ಕೆಡವಿ ಮಸೀದಿಯನ್ನು ಕಟ್ಟಿದರು ಎಂಬ ಐತಿಹ್ಯ ಅಲ್ಲಿಗೆ ನಿಲ್ಲುವುದಿಲ್ಲ. ಏಕೆಂದರೆ ಭಾರತದ ಇತಿಹಾಸವನ್ನು ಉತ್ಖನನ ಮಾಡುತ್ತಾ ಹೋದರೆ ಮಸೀದಿಗಳ ಅವಶೇಷಗಳು ಸಿಗುತ್ತವೆ. ಬೌದ್ಧ ವಿಹಾರಗಳ ಅವಶೇಷಗಳು ದೊರೆಯುತ್ತವೆ. ಇನ್ನೂ ಆಳಕ್ಕೆ ತೋಡಿದರೆ ಈ ದೇಶದ ಮೂಲ ನಿವಾಸಿಗಳ ದೇವಸ್ಥಾನಗಳನ್ನೆಲ್ಲಾ ಆರ್ಯರು ನಾಶ ಮಾಡಿದ ಅವಶೇಷಗಳು ಸಿಗುತ್ತವೆ. ಆದುದರಿಂದಲೇ ವರ್ತಮಾನದ ವಿವಾದಗಳನ್ನು ಬಗೆಹರಿಸಲು ಆಧುನಿಕ ಪ್ರಜಾಪ್ರಭುತ್ವಗಳು ಇತಿಹಾಸದ ಅವಘಡ ಗಳನ್ನು ಯಾವ ಕಾರಣಕ್ಕೂ ಪುರಾವೆಯಾಗಿ ಪರಿಗಣಿಸಬಾರದು. ಆದರೆ ಈ ವಿವಾದದಲ್ಲಿ ಇತಿಹಾಸವಿರದ ಪುರಾಣವೇ ಪುರಾವೆ ಯಾಗಿಬಿಟ್ಟಿದೆ.

ಮೂರನೆಯದಾಗಿ ಮಂದಿರದ ಗೊಮ್ಮಟವಿದ್ದ ಜಾಗದಲ್ಲೇ ರಾಮಜನ್ಮವಾಗಿದೆ ಎಂದು ದಾವೆದಾರರು ಭಾವಿಸುವುದರಿಂದ ಈ ಜಾಗವನ್ನು ಮೂರು ಪಾಲು ಮಾಡಿ ಹಂಚುವಾಗ ಗೋಮ್ಮಟವಿದ್ದ ಕೆಳ ಭಾಗವನ್ನು ಅವರಿಗೆ ಬಿಟ್ಟು ಕೊಡಬೇಕೆಂದು ಆದೇಶಿಸಲಾಗಿದೆ. ಇಲ್ಲಿ ಮೂರು ಪಾಲು ಹಂಚಿಕೆಯಾಗುವ ಮುನ್ನ ಸುನ್ನಿ ವಕ್ಫ್ ಬೋರ್ಡ್ ಆಗಲಿ, ನಿರ್ಮೋಹಿ ಅಖಾಡವಾಗಲಿ ತಾವೇ ನಿಜವಾದ ವಾರಸುದಾರರೆಂದು ಸಾಬೀತು ಮಾಡಲು ವಿಫಲರಾಗಿದ್ದಾರೆಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಆದರೂ ನಿರ್ಮೋಹಿ ಅಖಾಡಕ್ಕೆ ಹಿಂದುತ್ವ ಸಂಘಟನೆಗಳಿಗೆ ಮೂರನೆ ಎರಡು ಭಾಗದಷ್ಟು ಸ್ಥಳ ದಾನ ಮಾಡಿದ್ದಾರೆ. ಮತ್ತು ಅನ್ಯಾಯವೆಂದು ಕಾಣದಂತೆ ಮಾಡಲು ರಾಜಿ ನ್ಯಾಯ ಮಾಡಿ ಮೂರನೆ ಒಂದು ಭಾಗದಷ್ಟು ಮುಸ್ಲಿಮ್ ಸಂಘಟನೆಗೆ ನೀಡಲಾಗಿದೆ. ಈ ಆದೇಶದ ಹಿಂದೆ ಕೆಲಸ ಮಾಡಿರುವುದು ಯಾವುದೇ ಬಗೆಯ ನ್ಯಾಯಿಕ ಮಾನದಂಡವಲ್ಲ. ಬದಲಿಗೆ ಸಂಘಪರಿವಾರವು ರಾಷ್ಟ್ರದ್ಯಾಂತ ಧಾರ್ಮಿಕ ದಳ್ಳುರಿ ಹಚ್ಚಿ ಪರೋಕ್ಷವಾಗಿ ತಂದ ಒತ್ತಡವೇ ಇಲ್ಲಿ ಒಂದು ಮಾನದಂಡವಾಗಿ ಕೆಲಸ ಮಾಡಿದೆ.

ಅದುದರಿಂದಲೇ ಸಂಘಪರಿವಾರದ ಶಕ್ತಿಗಳು ಈ ಆದೇಶದ ಬಗ್ಗೆ ಸಂಭ್ರಮ ಪಡುತ್ತಿವೆ. ಉಳಿದಂತೆ ಮುಸ್ಲಿಮರ ಹಕ್ಕು ಪರಿಗಣಿಸದೆ ನ್ಯಾಯಾಲಯ ಔದರ್ಯದಿಂದ ನೀಡಿದ ಮೂರನೆ ಒಂದು ಭಾಗದಷ್ಟು ಜಾಗವನ್ನು ನೀಡಿರುವುದನ್ನೇ ನ್ಯಾಯದಾನವೆಂದು ಮತ್ತೆ ಕೆಲವರು ಭಾವಿಸುತ್ತಿದ್ದಾರೆ.

ಈ ಆದೇಶ ಏನೇ ಬಂದಿದ್ದರೂ ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗುವ ಅವಕಾಶವಿರುವುದರಿಂದಲೇ ಈಗಲೇ ಹತಾಶರಾಗುವ ಅಗತ್ಯವಿಲ್ಲ. ಶಾಂತಿಯನ್ನು, ಸಂಯಮವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ ಎಂಬುದು ಸರಿಯಾದುದೆ. ಆದರೆ ನ್ಯಾಯಾಲಯವು ಸತ್ಯಕ್ಕೆ ಮತ್ತು ನ್ಯಾಯಕ್ಕೆ ಮಾಡಿರುವ ಅಪಚಾರವನ್ನು ಅನ್ಯಾಯ ಎಂದು ಹೇಳಲು ನಿಜವಾದ ನಾಗರಿಕರ‍್ಯಾರು ಹಿಂಜರಿಯಬಾರದು.

೧೯೪೭ಕ್ಕೂ ಹಿಂದೆ ಈ ದೇಶದಲ್ಲಿ ಧರ್ಮಗಳ ನಡುವೆ, ಶ್ರದ್ಧೆಗಳ ನಡುವೆ ಸಾಕಷ್ಟು ಕಲಹಗಳು ನಡೆದು ಹೋಗಿವೆ. ೪೭ರ ಆಗಸ್ಟ್ ೧೫ರ ನಂತರ ಈ ದೇಶದ ನಾಗರಿಕರಿಂದಲೂ ಸಾಮಾನತೆ ಮತ್ತು ಭ್ರಾತೃತ್ವದಿಂದ ಬಾಳಲು ಸಂಕಲ್ಪ ತೊಟ್ಟಿದ್ದೇವೆ. ಆದುದರಿಂದ ಇತಿಹಾಸಗಳ ಸಂಗತಿಗಳನ್ನು ಇತಿಹಾಸಕ್ಕೆ ಬಿಟ್ಟು ಹೊಸದಾಗಿ ಬದುಕು ಕಟ್ಟುವ ಭವಿಷ್ಯ ಮುಖಿ ರಾಜಕೀಯ ಮತ್ತು ನ್ಯಾಯಸಂಹಿತೆ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ೧೯೯೧ರಲ್ಲಿ ಸಂಸತ್ತಿನಲ್ಲಿ mZಛಿ ಟ್ಛ ಡಿಟ್ಟoeಜಿm (omಛ್ಚಿಜಿZ mಟqಜಿoಜಿಟ್ಞo) Zಠಿ೧೯೯೧ ಎಂಬ ಕಾಯಿದೆ ಜಾರಿಗೆ ಬಂದಿದೆ. ಇದರ ಪ್ರಕಾರ ಈ ದೇಶದಲ್ಲಿ ಯಾವುದೇ ಶ್ರದ್ಧಾ ಕೇಂದ್ರಗಳ ಬಗ್ಗೆ ವಿವಾದವಿದ್ದರೂ ಅದನ್ನು ಆ ಶ್ರದ್ಧಾ ಕೇಂದ್ರಗಳನ್ನು ೧೯೪೭ರ ಆಗಸ್ಟ್ ೧೫ರಂದು ಯಾವ ಸ್ಥಿತಿಯಲ್ಲಿತ್ತೋ, ಯಾವ ಧಾರ್ಮಿಕ ಸ್ವರೂಪದಲ್ಲಿತ್ತೋ ಅದೇ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬರಬೇಕೆಂದು ನಿರ್ದೇಶಿಸಲಾಗಿದೆ. ದುರದೃಷ್ಟವಶಾತ್ ಬಾಬರಿ ಮಸೀದಿ ವಿವಾದವೊಂದನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ ಈ ಕಾಯಿದೆಯ ಹಿಂದಿನ ತರ್ಕ ಅಂದರೆ ೪೭ರ ಹಿಂದಿನ ಇತಿಹಾಸವನ್ನು ಇತಿಹಾಸಕ್ಕೆ ಬಿಟ್ಟು ಭ್ರಾತೃತ್ವ ಮತ್ತು ಸಮಾನತೆಯನ್ನು ಕಾಪಾಡಿಕೊಂಡು ಬರಲು ಆಯಾ ಸ್ಥಳಗಳ ಯಥಾಸ್ಥಿತಿಯನ್ನು ಕಾಪಾಡಿಕೊಂಡ ಬರಬೇಕು ಎಂಬ ತರ್ಕ ಅತ್ಯಂತ ನ್ಯಾಯೋಚಿತವಾದುದು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತದ್ದು. ಬಾಬರಿ ಮಸೀದಿ ವಿವಾದವು ನ್ಯಾಯೋಚಿತವಾಗಿ ಬಗೆಹರಿಯಲು ಇದೇ ಸರಿಯಾದ ಭೂಮಿಕೆಯನ್ನು ಒದಗಿಸುತ್ತದೆ. ಆಗಿಲ್ಲದೆ ಅಲಹಾಬಾದ್ ಕೋರ್ಟ್ ನೀಡಿರುವ ಆದೇಶದ ಹಿಂದಿನ ತರ್ಕವನ್ನು ಬಳಸಿದರೆ ಇಡೀ ದೇಶದಲ್ಲೇ ಧಾರ್ಮಿಕ ಕಲಹಗಳನ್ನು ಉತ್ತೇಜಿಸಿದಂತಾಗುತ್ತದೆ.

ಆದುದರಿಂದ ಸುಪ್ರಿಂ ಕೋರ್ಟ್ ಈ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಆಶಿಸೋಣ. ಯಾಕೆಂದರೆ ಶಾಂತಿ ಅತ್ಯಂತ ಮುಖ್ಯವಾದುದು. ಆದರೆ ಅದು ಅನ್ಯಾಯದ ನೆಲೆಗಟ್ಟಿನಿಂದ ಸೇರಿದ ಶಾಂತಿಯಾದರೆ ಅದರ ಬಾಳು ಅತ್ಯಂತ ಅಲ್ಪಾವಧಿಯಾಗಿರುತ್ತದೆ. ನ್ಯಾಯದ ನೆಲೆಗಟ್ಟಿನಿಂದ ಆರಳುವ ಶಾಂತಿಯೇ ಶಾಶ್ವತವಾದದು ಮತ್ತು ಸೌಹಾರ್ದಯುತವಾದುದು.
ಹುಸಿ ಶಾಂತಿಯನ್ನು ಬೆಳೆಸಲು ನಿಜವಾದ ಶಾಂತಿಯ ಪರವಾಗಿ ನಾಗರಿಕರೆಲ್ಲರೂ ಶಾಂತಿ ಮತ್ತು ಸಂಯಮದಿಂದ ಪ್ರಯತ್ನಿಸಬೇಕಾದ ಸವಾಲು ನಮ್ಮೆದುರಲ್ಲಿದೆ.

-ಶಿವಸುಂದರ್

No comments:

Post a Comment