Monday, October 11, 2010

ಉತ್ತಮ ಆದಾಯ ತರುವ ಶುಂಠಿ ಬೆಳೆ

ಸಂಯುಕ್ತ ಕರ್ನಾಟಕ, ಮಾಚ್, ೧೦, ೨೦೧೦

ಶುಂಠಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ. ಈ ವರ್ಷ ಇಳುವರಿ ಪ್ರಮಾಣ ಕಡಿಮೆ ಇದ್ದ ಕಾರಣ, ಪ್ರತಿ ಕ್ವಿಂಟಾಲ್‌ಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ದರ ಇದೆ. ವರ್ತಕರು ಮಾರುಕಟ್ಟೆ ಬೆಲೆ ಆಧರಿಸಿ ಗದ್ದೆಗೆ ಬಂದು ಖರೀದಿ ಮಾಡುತ್ತಿರುವುದರಿಂದ ಉತ್ತಮ ಆದಾಯ ಪಡೆಯುತ್ತಿರುವ ಪ್ರಸನ್ನ ಹೆಗಡೆ ಶುಂಠಿ ಜೊತೆ ತರಕಾರಿಯನ್ನು ಬೆಳೆಸುತ್ತಿದ್ದಾರೆ.

ಶಿರಸಿಯಿಂದ ಬನವಾಸಿಗೆ ಹೋಗುತ್ತಿರುವಾಗ ನವಣಗೇರಿ ಕ್ರಾಸ್‌ನಿಂದ ಎಂಟು ಕಿಲೋಮೀಟರ್ ಅಂತರದಲ್ಲಿರುವ ಬೆಂಗಳಿಯಲ್ಲಿ ವಾಹನ ನಿಲ್ಲಿಸಿ ಗದ್ದೆ ಕಡೆ ಕಣ್ಣು ಹಾಯಿಸಿದಾಗ, ಶುಂಠಿ ಬೆಳೆದ ಗದ್ದೆಯೊಂದು ಗಮನ ಸೆಳೆಯಿತು. ಹತ್ತಿರ ಹೋಗಿ ಕೆಲಸದಲ್ಲಿ ನಿರತರಾದ ಕೃಷಿಕ ಪ್ರಸನ್ನ ಹೆಗಡೆ ಅವರನ್ನು ಮಾತನಾಡಿಸಿದಾಗ, “ನೋಡಿ, ಕೇವಲ ಹತ್ತು ಗಂಟೆ ಜಮೀನಿನಲ್ಲಿ ಈ ವರ್ಷ ಕನಿಷ ಮೂವತ್ತು ಕ್ವಿಂಟಾಲ್ ಶುಂಠಿ ಬೆಳೆಯುತ್ತೇನೆ” ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾ ತಮ್ಮ ಗದ್ದೆಯತ್ತ ಬೊಟ್ಟು ಮಾಡಿ ತೋರಿಸಿದರು.

ಕೆಲವೊಂದು ಹಳ್ಳಿಗಳಲ್ಲಿರುವಂತೆ ಪರಸ್ಪರ ಕೊಡುಕೊಳ್ಳುವ (ತಮ್ಮ ಹತ್ತಿರ ಇರುವ ಧವಸಧಾನ್ಯ, ಕಾಳುಕಟ್ಟಿ, ಬೀಜ ಮುಂತಾದವುಗಳನ್ನು ಬೇರೆಯವರಿಗೆ ಕೊಡುವುದು. ಅವರಿಂದ ತಮಗೆ ಬೇಕಾದ ಬೀಜ, ಗೊಬ್ಬರ, ಧಾನ್ಯಗಳನ್ನು ತೆಗೆದುಕೊಂಡು ಬರುವುದು) ವಿನಿಮಯ ಪದ್ಧತಿ ಬೆಂಗಳಿಯಲ್ಲಿಯೂ ಕಾಣಬರುತ್ತದೆ. ಹೀಗೆ ವಿನಿಮಯ ಪದ್ಧತಿಯಿಂದ ತಂದ ಕೇರಳ ಮೂಲದ ಶುಂಠಿಯನ್ನು ಎರಡರಿಂದ ಎರಡುವರೆ ಅಡಿಗೊಂದರಂತೆ ಮಡಿ ಮಾಡಿ, ಹತ್ತು ಗುಂಟೆ ಜಮೀನಿನಲ್ಲಿ ಮೂರುವರೆ ಕ್ವಿಂಟಾಲ್ ಶುಂಠಿ ಬಿತ್ತನೆ ಮಾಡಿದ್ದಾರೆ. ಉತ್ತಮ ಫಸಲು ಬರಲು ಹತ್ತು ಟ್ರಾಕ್ಟರ್ ಕಪ್ಪು ಮಣ್ಣಿನ ಜೊತೆ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ಹರಡಿದ್ದಾರೆ.

ತಮ್ಮ ಗದ್ದೆಯಲ್ಲಿರುವ ಕೊಳವೆ ಬಾವಿಯಿಂದ ಪಿವಿಸಿ ಪೈಪಿನ ಮುಖಾಂತರ ಹತ್ತು ಮಿಲಿಮೀಟರ್ ವ್ಯಾಸದ (ಸುತ್ತಳತೆ) ಲ್ಯಾಟ್ರಲ್ ವೈರ್ ಬಳಸಿ ಹತ್ತು ಅಡಿಗೊಂದರಂತೆ ಮೈಕ್ರೊಜೆಟ್‌ಗಳನ್ನು ಅಳವಡಿಸಿ ಬೆಳೆಗೆ ನೀರುಣಿಸುವ ವ್ಯವಸ್ಥೆ ಮಾಡಿದ್ದಾರೆ.

ಬಿತ್ತನೆಯಿಂದ ಹಿಡಿದು ಬೆಳೆ ಕೊಯ್ಲು ಆಗುವವರೆಗೆ ಕನಿಷ್ಠ ನಲವತ್ತು ಆಳುಗಳ ಅವಶ್ಯಕತೆ ಇದೆ. ಇತ್ತೀಚೆಗೆ ಕೂಲಿ ಕೆಲಸಕ್ಕೆ ಆಳುಗಳು ಸಿಗುತ್ತಿಲ್ಲವಾದ್ದರಿಂದ ತಮ್ಮ ಮನೆಯಲ್ಲಿರುವ ಕೂಲಿ ಕೆಲಸದವನ ಸಹಾಯದಿಂದ ತಾವೇ ಗದ್ದೆ ಕೆಲಸ ನಿರ್ವಹಿಸುತ್ತಿದ್ದಾರೆ.
ಶುಂಠಿ ಬೀಜ ನೆಟ್ಟು ಗಿಡ ಬೆಳೆಯಲು ಎರಡು ತಿಂಗಳು ಬೇಕು. ಆ ಸಮಯದಲ್ಲಿ ಮೆಣಸಿನಕಾಯಿ ಗಿಡ, ಬಳ್ಳಿ ಬೀನ್ಸ್, ಹೀರೇಕಾಯಿ ಬಳ್ಳಿ, ಅರಿಶಿಣವನ್ನು ಬೆಳೆಯುತ್ತಾರೆ. ತರಕಾರಿಯನ್ನು ಮನೆಗೆ ಬಳಸುವುದರ ಜೊತೆಗೆ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಕೊಡುವ ಬಿಸಿ ಊಟಕ್ಕೆ ಉಚಿತವಾಗಿ ಕೊಡುತ್ತಾರೆ ಪ್ರಸನ್ನ. ಈ ವರ್ಷ ಮೆಣಸಿನಕಾಯಿಯ ಇಳುವರಿ ಒಂದರಿಂದ ಎರಡು ಕ್ವಿಂಟಾಲ್‌ನಷ್ಟು ಬರಬಹುದೆಂಬ ನಿರೀಕ್ಷೆ ಹೊಂದಿದ್ದಾರೆ.

ಶುಂಠಿ ಬೆಳೆಯನ್ನು ಕಾಡುವ ಬೂಸ್ಟ್ ರೋಗಕ್ಕೆ ವರ್ಷಕ್ಕೆ ೨೦ರಿಂದ ೨೫ರ ಸಲ ರಾಸಾಯನಿಕ ಕೀಟನಾಶಕ ಸಿಂಪರಣೆ ಮಾಡುತ್ತಾರೆ. ಇದು ಅಪಾಯಕಾರಿ ಅಲ್ಲವೇ ಎಂದಾಗ, ಶುಂಠಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದರಿಂದ ಗಿಡಕ್ಕೆ ಬೂಸ್ಟ್ ರೋಗ ಕಾಣಿಸಿಕೊಂಡ ನಂತರ ಕೀಟನಾಶಕ ಸಿಂಪರಣೆ ಮಾಡುತ್ತೆನೆ ಎನ್ನುತ್ತಾರೆ.

ಬಿತ್ತನೆ ಮಾಡಿದ ೬ರಿಂದ ೮ ತಿಂಗಳಿಗೆ ಶುಂಠಿ ಫಸಲು ಬರುತ್ತದೆ. ಉತ್ತಮ ಬೆಲೆ ಬರುವವರೆಗೂ ಶುಂಠಿಯನ್ನು ಭೂಮಿಯಲ್ಲಿ ಬಿಡುವುದರಿಂದ ಯಾವುದೇ ತೊಂದರೆ ಇಲ್ಲ. ಫಸಲು ಬಂದ ಒಂದು ವರ್ಷದ ಒಳಗೆ ಕೊಯ್ಲು ಮಾಡಿ ನಂತರ ಅದೇ ಭೂಮಿಯಲ್ಲಿ ಶುಂಠಿಯ ಬದಲಾಗಿ ಭತ್ತ ಬೆಳೆದರೆ ಹೆಚ್ಚು ಇಳುವರಿ ಪಡೆಯಬಹುದು. ಪ್ರತಿ ವರ್ಷ ಶುಂಠಿಯನ್ನೇ ಬೆಳೆದರೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ ಎಂಬುದು ಪ್ರಸನ್ನ ಅವರ ಅನುಭವದ ಮಾತು.

ಇತ್ತೀಚೆಗೆ ಮಾರುಕಟ್ಟೆ ಬೇಡಿಕೆ ಆಧರಿಸಿ ವರ್ತಕರು ಗದ್ದೆಗೆ ಬಂದು ಶುಂಠಿಯನ್ನು ಖರೀದಿ ಮಾಡುತ್ತಿದ್ದಾರೆ. ಈ ವರ್ಷ ಒಟ್ಟಾರೆ ಇಳುವರಿ ಪ್ರಮಾಣ ಕಡಿಮೆ ಇದ್ದ ಕಾರಣ ಪ್ರತಿ ಕ್ವಿಂಟಾಲ್‌ಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ದರ ಇದೆ. ಅಲ್ಲದೆ ಶುಂಠಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ ಎನ್ನುತ್ತಾರೆ ಪ್ರಸನ್ನ ಹೆಗಡೆ. (೯೮೮೬೫೩೭೫೭೦)

ತನ್ನು ಹಸಿ

ಪ್ರಸನ್ನ ತಮ್ಮ ಇನ್ನೊಂದು ಗದ್ದೆಯಲ್ಲಿ ಶುಂಠಿ ಬೆಳೆದಿದ್ದಾರೆ. ಗದ್ದೆಯಿಂದ ಅನತಿ ದೂರದಲ್ಲಿರುವ ಸಣ್ಣ ಕಾಲುವೆಯಲ್ಲಿ ಮಳೆಗಾಲದಲ್ಲಿ ನೀರು ಹರಿಯುತ್ತಿದ್ದು, ತಮ್ಮ ಗದ್ದೆಯಲ್ಲಿರುವ ಶುಂಠಿ ಬೆಳೆಗೆ ಬೇಕಾಗುವ ನೀರಿಗೋಸ್ಕರ ಸಣ್ಣ ಝರಿಯೊಂದನ್ನು ನಿರ್ಮಿಸಿ ಗದ್ದೆ ತುಂಬ ಹರಿಯುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಭೂಮಿ ಸ್ವಲ್ಪ ಕೆಳಭಾಗದಲ್ಲಿರುವುದರಿಂದ ಸಾಕಷ್ಟು ನೀರು ಹರಿದುಬರುತ್ತದೆ. ಶುಂಠಿ ನಾಟಿ ಮಾಡಿ ಮೊಳಕೆ ಬಂದ ನಂತರ ಎಷ್ಟು ನೀರು ಹರಿದರೂ ಶುಂಠಿ ಬೆಳೆಗೆ ಏನೂ ಆಗುವುದಿಲ್ಲ. ಭೂಮಿ ಸಾಕಷ್ಟು ಪ್ರಮಾಣದಲ್ಲಿ ನೀರು ಹೀರಿಕೊಂಡಿರುವುದರಿಂದ ಹಾಗೂ ಮಣ್ಣಿನ ಗುಣವು ನೀರು ಹೀರಿಕೊಳ್ಳುವುದಕ್ಕೆ ಸಹಕಾರಿಯಾಗಿರುವುದರಿಂದ ಬೆಳೆಯ ಕಾಂಡ ಹಾಗೂ ಬೇರಿನ ಭಾಗದಲ್ಲಿ ಯಾವಾಗಲೂ (ತೇವ) ಹಸಿಯಾಗಿರುತ್ತದೆ. ಇದಕ್ಕೆ ತನ್ನು ಹಸಿ ಎನ್ನುತ್ತಾರೆ. ಬೇಸಿಗೆ ಕಾಲದಲ್ಲಿ ಈ ಕಾಲುವೆಯಲ್ಲಿ ನೀರು ಇರುವುದಿಲ್ಲ. ಆಗ ಈ ತನ್ನು ಹಸಿಯೇ ಬೆಳೆಗೆ ಆಧಾರ. ಬೆಳೆಯ ಇಳುವರಿಯೂ ಉತ್ತಮವಾಗಿ ಬರುತ್ತದೆ.

ಚಿತ್ರ ಲೇಖನ:
ಸುರೇಶ ನಿ. ಧಾರವಾಡಕರ್
ಕೃಷಿ ಮಾಧ್ಯಮ ಕೇಂದ್ರದ ವಿದ್ಯಾರ್ಥಿ, ಮಾದರಿ
೫-೬೪, ರಾ.ಶಾ.ವಿ.ಕೇ. ವಸಾಹತು, ಶಕ್ತಿನಗರ್-೫೮೪೧೭೦, ರಾಯಚೂರು ಜಿಲ್ಲೆ, ಮೊ.೯೯೦೦೭೭೬೧೩೫

1 comment:

  1. ಆದರೆ ನಾನು ಶುಂಟಿ ಹಾಕಬೇಕು ಎಂದುಕೊಂಡಿದ್ದೆನೆ ಹಾಗೂ ತುಂಬ ಜನಗಳನ್ನು ಅದರ ಬಗ್ಗೆ ವಿಚಾರಿಸಿದಾಗ ಾ ಬೆಳೆ ಹಾಕುವುದರಿಂದ ಬೂಮಿ ಕೆಡುತ್ತಯದೆ ಹಾಗೂ 3 ವರ್ಷ ಪೈರು ಆಗುವುಇದಿಲ್ಲಾ ಎನ್ನುತ್ತಿದ್ದಾರೆ ಏನು ತೋಚುತ್ತಿಲ್ಲಾ ನಿಮಗೇನಾದರು ಸಲಹೆ ನೀಡಬೇಕೆಂದರೆ ಪೋನ್ ಮಾಡಿ 9480008064
    ಶಶಿಕುಮಾರ್

    ReplyDelete